ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಸ್ವಾಲ್, ಕಾಶೀಪ್ರಸಾದ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಜಯಸ್ವಾಲ್, ಕಾಶೀಪ್ರಸಾದ 1871-1937, ಭಾರತದ ಇತಿಹಾಸಶಾಸ್ತ್ರಜ್ಞ. ವಿದ್ವಾಂಸ. ಪ್ರಾಚೀನ ಭಾರತದ ರಾಜತಾಂತ್ರಿಕ ವಿಚಾರಗಳನ್ನೂ ಸಂಸ್ಥೆಗಳನ್ನೂ ಶಾಸ್ತ್ರೀಯವಾಗಿ ಅಭ್ಯಸಿಸಿ, ಅವನ್ನು ಸುಸಂಯೋಜಿತ ರೀತಿಯಲ್ಲಿ ಬೆಳಕಿಗೆ ತರುವ ಪ್ರಥಮ ಪ್ರಯತ್ನಮಾಡಿಸಿದರು. ಜನನ 1871ರಲ್ಲಿ, ಈಗಿನ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ. ತಂದೆ ಸಾಹುಮಹಾದೇವ ಪ್ರಸಾದ್, ಮಿರ್ಜಾಪುರದ ಒಬ್ಬ ದೊಡ್ಡ ವ್ಯಾಪಾರಿ. ಜಯಸ್ಟಾಲ್ ವೈಶ್ಯ. ಇವರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಅಭಿಮಾನ, ಗೌರವ ಇದ್ದುವು.

ಜಯಸ್ಟಾಲ್ ಚಿಕ್ಕ ವಯಸ್ಸಿನಲ್ಲೇ ಸಂಸ್ಕøತವನ್ನು ಅಭ್ಯಾಸ ಮಾಡಿದರು. ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೇಲೆ ಇಂಗ್ಲೆಂಡಿಗೆ ತೆರಳಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದರು. ಮಿಡ್ಲ್‍ಟೆಂಪಲ್‍ನಲ್ಲಿ ನ್ಯಾಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಕ್ಸ್‍ಫರ್ಡಿನಲ್ಲಿ ಚೀನೀ ವಿಷಯದಲ್ಲಿ ಡೇವಿಸ್ ವಿದ್ಯಾರ್ಥಿಯೂ, ಅನಂತರ ಸಂಶೋಧನ ವಿದ್ಯಾರ್ಥಿಯೂ ಆಗಿ ಜಯಸ್ಟಾಲರು ಆಳವಾಗಿ ಅಧ್ಯಯನ ನಡೆಸಿದರು. ಸಂಸ್ಕøತ ಮತ್ತು ಭಾರತೀಯ ಸಂಸ್ಕøತಿಯಲ್ಲಿ ವಿಶೇಷವಾದ ಆಸಕ್ತಿ ಬೆಳೆಸಿಕೊಂಡರು.

ಇಂಗ್ಲೆಂಡಿನಲ್ಲಿದಾಗಲೂ ಅವರು ರಾಜಕೀಯ ಅಂದೋಲನದಿಂದ ದೂರ ಇರಲಿಲ್ಲ. ಹರದಯಾಳರ ಕ್ರಾಂತಿಕಾರಿ ಸಂಘಟನೆಗೆ ಸಂಬಂಧಿಸಿದವನೆಂದು ಸರ್ಕಾರ ಜಯಸ್ವಾಲರನ್ನು ಅಪಾಯಕಾರಿ ಕ್ರಾಂತಿಕಾರಿಯೆಂದು ಪರಿಗಣಿಸಿತ್ತು. ಅವರು ಭಾರತಕ್ಕೆ ಮರಳಿದ ಮೇಲೆಯೂ ಅವರ ಚಟುವಟಿಕೆಗಳನ್ನು ಸರ್ಕಾರ ತೀವ್ರವಾಗಿ ಗಮನಿಸುತ್ತಿತ್ತು. 1913ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಇವರಿಗೆ ನೀಡಲಾದ ಅಧ್ಯಾಪಕ ಹುದ್ದೆಯನ್ನು ಸರ್ಕಾರ ಮಂಜೂರು ಮಾಡಲಿಲ್ಲ. ಸರ್ಕಾರದ ಈ ಕ್ರಮದ ವಿರುದ್ಧ ತೀವ್ರ ಚಳವಳಿಯೂ ನಡೆಯಿತು. ಜಯಸ್ಟಾಲ್ ಆಗ ಕಲ್ಕತ್ತ ಉಚ್ಚನ್ಯಾಯಾಲಯದಲ್ಲಿ ವಕೀಲಿ ಪ್ರಾರಂಭಿಸಿದರು. ಅಮೇಲೆ ಅವರು ಪಟ್ನಾಕ್ಕೆ ಬಂದರು. ಅವರ ಚಲನವಲನಗಳನ್ನು ಗಮನಿಸಲು ಅಲ್ಲಿಯ ಪೋಲೀಸ್ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆಗಳು ಬಂದುವು. ಜಯಸ್ಟಾಲ್ ಬಹಿರಂಗವಾಗಿಯೇ ಕಾಂಗ್ರೆಸ್ ಸದಸ್ಯರಾದರು. ರಾಜೇಂದ್ರ ಪ್ರಸಾದರಂಥ ಮುಖಂಡರೊಂದಿಗೆ ಅವರ ಸ್ನೇಹ ಬೆಳೆಯಿತು. ಅವರು ಬಿಹಾರದ ಮೂಂಚೂಣಿ ನಾಯಕರಲ್ಲೊಬ್ಬರಾದರು. ಜಯಸ್ಟಾಲ್ ಉತ್ತಮ ನ್ಯಾಯವಾದಿಯೆಂದು ಖ್ಯಾತರಾದರು. ಅವರು ಇಂಗ್ಲೆಂಡ್ ಫ್ರಾನ್ಸ್‍ಗಳಿಗೆ ಅನೇಕ ಸಲ ಹೋಗಿ ಬಂದರು.

ಆದರೆ ಜಯಸ್ಟಾಲರ ಮುಖ್ಯ ಕಾರ್ಯಕ್ಷೇತ್ರ ಭಾರತೀಯ ಇತಿಹಾಸ ಮತ್ತು ಸಂಸ್ಕøತಿಗಳನ್ನು ಕುರಿತ ಸಂಶೋಧನೆಯೇ ಆಗಿತ್ತು. ಇಂಡಿಯನ್ ಪಾಲಿಟಿ (ಹಿಂದೂ ರಾಜನೀತಿ) ಎಂಬುದು ಅವರ ಪ್ರಖ್ಯಾತ ಗ್ರಂಥ. ಕ್ರಿ.ಶ. ಸು. 150-350ರ ಭಾರತ ಚರಿತ್ರೆಯನ್ನು ಕುರಿತದ್ದು ಇನ್ನೊಂದು ಗ್ರಂಥ. ಭಾರತದ ಇತಿಹಾಸದ ಅಂಧಕಾರಯುಗವೆಂದು ಹೆಸರಾದ ಅವಧಿಯ ಇತಿಹಾಸವನ್ನು ಜಯಸ್ಟಾಲರು ಇದರಲ್ಲಿ ಸುಸಂಬಂದ್ಧವಾಗಿ ಪುನರ್ರಚಿಸುವ ಪ್ರಯತ್ನ ಮಾಡಿದ್ದಾರೆ. ಇವರ ವಿಚಾರಗಳು ಅನೇಕ ಅಜ್ಞಾತ ವಿಷಯಗಳ ಮೇಲೆ ಬೆಳಕು ಬೀರಿದುವು. ಮನು, ಯಾಜ್ಞವಲ್ಕ್ಯ ಇವರನ್ನು ಕುರಿತು ಜಯಸ್ಟಾಲ್ ಮಾಡಿದ ಠಾಕೂರ್ ಸ್ಮಾರಕ ಉಪನ್ಯಾಸಗಳು ಹಿಂದೂ ಸಾಮಾಜಿಕ ಹಾಗೂ ನ್ಯಾಯಿಕ ಸಂಸ್ಥೆಗಳ ಅಧ್ಯಯನಕ್ಕೆ ತುಂಬ ಸಹಾಯಕ ಭಾರತದ ಬುದ್ಧ ಯುಗದ ಪ್ರಾರಂಭದ ಇತಿಹಾಸದಲ್ಲೂ ನೇಪಾಳದ ಪ್ರಾಚೀನ ಸಾಂಕೃತ್ಯಯನರೊಂದಿಗೆ ಸೇರಿ ಇವರು ಟಿಬೆಟನ್ ಭಾಷೆಯ ಮಂಜುಶ್ರೀ ಮೂಲಕಲ್ಪ ಎಂಬ ಗ್ರಂಥವನ್ನು ಸಂಪಾದಿಸಿದರು. ಇಂಪೀರಿಯಲ್ ಹಿಸ್ಟೊರಿ ಆಫ್ ಇಂಡಿಯದಲ್ಲಿ ಈ ಗ್ರಂಥದ ಬಗ್ಗೆ ಅಮೂಲ್ಯವಾದ ಹಾಗೂ ಉದ್ಬೋಧಕ ಲೇಖನವೊಂದನ್ನು ಬರೆದರು. ಒರಿಸ್ಸದ ಹಾಥಿಗುಂಫದ ಖಾರವೇಲ ಶಾಸನವನ್ನು ಓದುವುದರಲ್ಲೂ ಜಯಸ್ವಾಲ್ ಶ್ಲಾಘನೀಯ ಪ್ರಯತ್ನ ಮಾಡಿದರು. ನಾಣ್ಯಶಾಸ್ತ್ರ ಕ್ಷೇತ್ರದಲ್ಲೂ ಜಯಸ್ವಾಲರು ವಿಶೇಷವಾದ ಕೆಲಸ ಮಾಡಿದ್ದಾರೆ.

ಪಟ್ನಾ ವಸ್ತುಸಂಗ್ರಹಾಲಯವೂ ಬಿಹಾರ್ ಸಂಶೋಧನ ಸಂಘವೂ ಸ್ಥಾಪಿತವಾಗಲು ಜಯಸ್ವಾಲರ ಪ್ರಯತ್ನವೇ ಕಾರಣ. ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಜಯಸ್ವಾಲ್ ಮಾಡಿದ ಮಹತ್ ಸಾಧನೆಗಳನ್ನು ಮನ್ನಿಸಿ ಪಟ್ನಾ ವಿಶ್ವವಿದ್ಯಾಲಯ ಅವರಿಗೆ 1936ರಲ್ಲಿ ಡಾಕ್ಟೊರೇಟ್ ಪದವಿ ನೀಡಿತು. ಬರೋಡದಲ್ಲಿ ನಡೆದ ಭಾರತೀಯ ಪ್ರಾಚ್ಯ ಸಮ್ಮೇಳನದ ಅಧಿವೇಶನಕ್ಕೆ ಅವರು ಅಧ್ಯಕ್ಷರಾಗಿದ್ದರು. ಭಾರತದ ನಾಣ್ಯಶಾಸ್ತ್ರ ಸಂಘದವರು ನಾಣ್ಯಶಾಸ್ತ್ರಕ್ಕೆ ಅವರು ಸಲ್ಲಿಸಿದ ಕೊಡುಗೆಯನ್ನು ಮನ್ನಿಸಿ ಅವರಿಗೆ ಪದಕವೊಂದನ್ನು ಅರ್ಪಿಸಿದರು.

ಜಯಸ್ವಾಲ್ ನಿಷ್ಠುರ ರಾಷ್ಟ್ರವಾದಿಯಾಗಿದ್ದರು. ತಮ್ಮ ದೇಶದ ಆದರ್ಶ ಪರಂಪರೆಗಳಲ್ಲಿ ಅವರಿಗೆ ಅಚಲ ಶ್ರದ್ಧೆ ಇತ್ತು. ತಮ್ಮ ರಾಷ್ಟ್ರಕ್ಕೆ ಅಪಮಾನವಾಗುವುದನ್ನು ಅವರು ಎಂದೂ ಸಹಿಸುತ್ತಿರಲಿಲ್ಲ. ಒಮ್ಮೆಯಂತೂ ಅಪಮಾನಕ್ಕೆ ಪ್ರತೀಸ್ತ್ರೀಯರ ಹಕ್ಕುಬಾಧ್ಯತೆಗಳನ್ನೂ ರಕ್ಷಿಸಲು ಅವರು ಸದಾ ಪ್ರವೃತ್ತರಾಗಿದ್ದರು. ಸ್ವತಃ ತಮ್ಮ ಹೆಣ್ಣುಮಕ್ಕಳಿಗೆ ಉಚ್ಚಶಿಕ್ಷಣದ ಸೌಲಭ್ಯ ಒದಗಿಸಿದರು.

ಆಕಾರದಲ್ಲಿ ಎತ್ತರ, ಆರೋಗ್ಯವಂತ, ದೃಢಕಾಯ, ಪಾಶ್ಚಾತ್ಯ, ಪ್ರಾಚ್ಯ ಎರಡೂ ಬಗೆಯ ಉಡುಪು ಧರಿಸುತ್ತಿದ್ದರು. ಕೆ.ಪಿ. ಜಯಸ್ಟಾಲರದು ವರ್ಣಮಯ ವ್ಯಕ್ತಿತ್ವ. ಕ್ರಾಂತಿಕಾರಿ, ರಾಷ್ಟ್ರೀಯವಾದಿ, ಇತಿಹಾಸಶಾಸ್ತ್ರಜ್ಞ, ಸಂಶೋಧಕ. ಭಾರತಶಾಸ್ತ್ರ ಕ್ಷೇತ್ರದಲ್ಲಿ ಜಯಸ್ಟಾಲರ ಸಂಶೋಧನೆಗಳಿಗೆ ಮೌಲಿಕ ಮಹತ್ವವಿದೆ. ಅವರ ಎಲ್ಲ ಅಭಿಪ್ರಾಯಗಳನ್ನೂ ಈಚಿನ ಇತಿಹಾಸಕಾರರು ಒಪ್ಪದಿರಬಹುದಾದರೂ ಅವರು ಭಾರತಶಾಸ್ತ್ರದ ವಿವಿಧ ಕ್ಷೇತ್ರಗಳ ಆದ್ಯಪವರ್ತಕರು. ವೇದಕಾಲದಿಂದ ಆರಂಭವಾಗುವ ಭಾರತದ ಇತಿಹಾಸದಲ್ಲಿ ಅನೇಕ ಪ್ರಶ್ನೆಗಳನ್ನೆಬ್ಬಿಸಿ ಸಂಶೋಧನ ಸರಣಿಯನ್ನು ಪ್ರಾರಂಭಿಸಿದ ಕೀರ್ತಿ ಜಯಸ್ಟಾಲರಿಗೆ ಸಲ್ಲುತ್ತದೆ. (ಜೆ.ಆರ್.ಪಿ.)