ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಗ್ವಾರ್

ವಿಕಿಸೋರ್ಸ್ದಿಂದ
Jump to navigation Jump to search

ಜಾಗ್ವಾರ್ ದಕ್ಷಿಣ ಮತ್ತು ಉತ್ತರ ಅಮೆರಿಕಗಳ ಉಷ್ಣವಲಯಗಳಲ್ಲಿ ಮಾತ್ರ ಕಾಣಸಿಗುವ ಒಂದು ಹಿಂಸ್ರಪ್ರಾಣಿ. ಹುಲಿ, ಚಿರತೆಗಳಿಗೆ ಬಲು ಹತ್ತಿರ ಸಂಬಂಧಿ. ಕಾರ್ನಿವೊರ ಗಣದ ಫೇಲಿಡೀ ಕುಟುಂಬಕ್ಕೆ ಸೇರಿದೆ. ಪ್ಯಾಂತರ ಆಂಕ ಇದರ ಶಾಸ್ತ್ರೀಯ ಹೆಸರು. ದಕ್ಷಿಣ ಅಮೆರಿಕದ ಪಟಗೋನಿಯದಿಂದ ಹಿಡಿದು ಮಧ್ಯ ಅಮೆರಿಕವೂ ಸೇರಿಕೊಂಡು ಅಮೆರಿಕ ಸಂಯುಕ್ತ ಸಂಸ್ಥಾನದ ಟೆಕ್ಸಸ್, ನ್ಯೂ ಮೆಕ್ಸಿಕೊ ಹಾಗೂ ಆರಿಜೋನ ರಾಜ್ಯಗಳವರೆಗಿನ ಕ್ಷೇತ್ರದಲ್ಲಿ ಇದರ ವಾಸ. ಅಲ್ಲಿನ ತಗ್ಗುಪ್ರದೇಶಗಳ ದಟ್ಟಕಾಡು, ಪರ್ವತ ಸೀಮೆ ಹಾಗೂ ಬಂಜರು ಪ್ರದೇಶಗಳ ಕುರುಚಲು ಪೊದೆಗಳಲ್ಲೂ ವಾಸಿಸುವುವು.

ಅಮೆರಿಕ ಖಂಡದಲ್ಲಿ ವಾಸಿಸುವ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲೆಲ್ಲಾ ಇದೇ ಅತ್ಯಂತ ದೊಡ್ಡ ಗಾತ್ರದ್ದು. ಪೂರ್ಣ ಬೆಳೆದ ಗಂಡು ಜಾಗ್ವಾರಿನ ಉದ್ದ 1.5-1.8ಮೀ. ತೂಕ 70-140ಕೆ.ಜಿ. ಜೊತೆಗೆ 70-90 ಸೆ.ಮೀ. ಉದ್ದದ ಬಾಲವಿದೆ. ಜಾಗ್ವಾರಿನ ಮೈಬಣ್ಣ ಕಿತ್ತಳೆ ಮಿಶ್ರಿತ ಹಳದಿ. ಜೊತೆಗೆ ಚಿರತೆಯಲ್ಲಿರುವಂತೆಯೆ ಗುಲಾಬಿದಳದ ರೀತಿ ಜೋಡಣೆಗೊಂಡಿರುವ ಕಪ್ಪು ಬಣ್ಣದ ಮಚ್ಚೆಗಳಿವೆ. ಆದರೆ ಜಾಗ್ವಾರಿನಲ್ಲಿ ಮಚ್ಚೆಗಳ ಮಧ್ಯೆಯೂ ಒಂದು ಕಪ್ಪು ಚುಕ್ಕಿಯುಂಟು. ಬಾಲದ ಮೇಲಿನ ಮಚ್ಚೆಗಳು ಉಂಗುರದ ರೀತಿ ಇವೆ. ಸಂಪೂರ್ಣ ಕಪ್ಪು ಬಣ್ಣದ ಜಾಗ್ವಾರ್ ಬಗೆಯೂ ಇದೆ. ಜಾಗ್ವಾರ್ ಚಿರತೆಗಿಂತ ಸ್ಥೂಲಕಾಯದ ಹಾಗೂ ಗಿಡ್ಡಾದ ಪ್ರಾಣಿ. ಇದರ ಬಾಲವೂ ಚಿರತೆಯದರಷ್ಟು ಉದ್ದವಲ್ಲ. ಆದರೆ ಚಿರತೆಯಷ್ಟೇ ಚುರುಕಾದ ಪ್ರಾಣಿ ಇದು. ಅಲ್ಲದೆ ಮರ ಹತ್ತುವುದರಲ್ಲಿ, ಈಜುವುದರಲ್ಲಿ ಬಲು ಕುಶಲಿ. ಜಾಗ್ವಾರ್, ಸಾಮಾನ್ಯವಾಗಿ ಒಂಟೊಂಟಿಯಾಗಿಯೇ ಅಲೆಯುತ್ತದೆ. ಚಿರತೆಯಂತೆಯೇ ಇದೂ ನಿಶಾಚರಿ. ಹಗಲೆಲ್ಲ ಯಾವುದಾದರೂ ದಟ್ಟಪೊದೆಯಲ್ಲಿ ಮಲಗಿದ್ದು ಸಂಜೆಯಾದ ಮೇಲೆ ತನ್ನ ಮೆಚ್ಚಿನ ಎರೆಗಳಾದ ಕ್ಯಾಪಿಬಾರ, ಪೆಕರಿ, ಟೇಪರ್ ಮುಂತಾದ ಪ್ರಾಣಿಗಳನ್ನು ಬೇಟೆಯಾಡಲು ಹೊರಡುತ್ತದೆ. ಮೊಸಳೆ, ನೀರಾಮೆ, ಮೀನು ಇತ್ಯಾದಿಗಳನ್ನೂ ಇದು ಬೇಟೆಯಾಡುತ್ತದೆ. ಕೆಲವು ಸಲ ಹಳ್ಳಿಗಳಿಗೆ ನುಗ್ಗಿ ನಾಯಿ, ಕೋಳಿ, ದನಗಳನ್ನೂ ಕೊಂಡಯ್ಯುವುದುಂಟು. ನರಭಕ್ಷಕ ಜಾಗ್ವಾರುಗಳೂ ಇಲ್ಲದಿಲ್ಲ.

ಇವುಗಳಲ್ಲಿ ಗಂಡುಹೆಣ್ಣುಗಳ ಕೂಡುವಿಕೆಗೆ ನಿರ್ದಿಷ್ಟ ಶ್ರಾಯವಿಲ್ಲ. ಸಂಭೋಗಾನಂತರ 100-110 ದಿನಗಳ ಗರ್ಭಾವಸ್ಥೆಯಾಗಿ ಹೆಣ್ಣು 2-4 ಮರಿಗಳನ್ನು ಈಯುತ್ತದೆ. ಹುಟ್ಟಿದಾಗ ಬಹಳ ಅಸಹಾಯ ಸ್ಥಿತಿಯಲ್ಲಿರುವ ಮರಿಗಳಿಗೆ 35 ದಿನಗಳ ನಂತರ ತಾಯನ್ನು ಹಿಂಬಾಲಿಸಿ ಓಡಾಡುವ ಶಕ್ತಿ ಬರುತ್ತದೆ. ಸುಮಾರು 1 ವರ್ಷ ಕಾಲ ತಾಯಿಯೊಂದಿಗೆ ಇದ್ದು ಆಮೇಲೆ ಸ್ವತಂತ್ರ ಜೀವನ ನಡೆಸತೊಡಗುತ್ತವೆ. 3 ವರ್ಷ ಪ್ರೌಢಾವಸ್ಥೆ ತಲುಪುತ್ತದೆ. ಜಾಗ್ವಾರಿನ ಆಯಸ್ಸು ಸುಮಾರು 20 ವರ್ಷಗಳು. ನ್ಯೂ ಮೆಕ್ಸಿಕೊ ಮುಂತಾದೆಡೆ ಜಾಗ್ವಾರನ್ನು ನಾಯಿಗಳ ಸಹಾಯದಿಂದ ಬೇಟೆಯಾಡುವುದಿದೆ. ತುಂಬ ವೇಗವಾಗಿ ಓಡಬಹುದಾದರೂ ಬಹುಬೇಗ ಸುಸ್ತಾಗಿ ನಾಯಿಗಳ ಕೈಗೆ ಸಿಕ್ಕಿಬೀಳುತ್ತದೆ. ಜೊತೆಗೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮರವನ್ನು ಹತ್ತಿ ತುದಿರೆಂಬೆಗಳಿಗೇರಿಬಿಡುವುದರಿಂದ ಬಂದೂಕಿಗೆ ಸುಲಭವಾಗಿ ಬಲಿಯಾಗುತ್ತದೆ. ಆದರೂ ಪಾರಾಗುವ ದಾರಿ ಕಾಣದಾದಾಗ ತನ್ನನ್ನು ಬೆನ್ನಟ್ಟಿಬರುವ ನಾಯಿಗಳನ್ನೂ ಮನುಷ್ಯರನ್ನೂ ಎದುರಿಸಿ ಉಗ್ರವಾಗಿ ಹೋರಾಡಬಲ್ಲುದು. (ಎ.)