ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀವ, ಜೀವತತ್ವ

ವಿಕಿಸೋರ್ಸ್ದಿಂದ

ಜೀವ, ಜೀವತತ್ವ - ತಾತ್ತ್ವಿಕವಾಗಿ, ವೈಜ್ಞಾನಿಕವಾಗಿ ಜೀವದ ಪ್ರಶ್ನೆ ಮಹತ್ವವಾದದ್ದು ಮತ್ತು ಉತ್ತರಿಸಲು ಕಠಿಣವಾದದ್ದು. ಈ ವಿಚಾರದ ಬಗ್ಗೆ ತಾತ್ತ್ವಿಕರಲ್ಲಿ ಹೇಗೋ ಹಾಗೆ ವ್ಶೆಜ್ಞಾನಿಕರಲ್ಲೂ ಅಭಿಪ್ರಾಯ ಭೇದ ಸಾಕಷ್ಟಿದೆ; ಸಾಮರಸ್ಯವೂ ಇದೆ. ಭಾರತೀಯ ತಾತ್ವಿಕರ ದೃಷ್ಟಿಯಲ್ಲಿ ಜೀವ ಎಂದರೆ ಆತ್ಮತತ್ವದ ಒಂದು ಸ್ಥಿತಿವಿಶೇಷ. ಜಿವ್ ಎನ್ನುವ ಪದದಿಂದ ಜೀವ ಎನ್ನುವುದು ಉತ್ಪನ್ನವಾಗಿದ್ದು ಉಸಿರಾಡು ಎನ್ನುವ ಅರ್ಥ ನೀಡುತ್ತದೆ. ಹೀಗೆಯೇ ಪ್ರಾಣಿ ಎನ್ನುವುದು ಪ್ರಾಣ (ಅನ್ ಎನ್ನುವ ಧಾತುವಿನಿಂದ ಬಂದದ್ದು) ಎಂದರೆ ಉಸಿರು ಎನ್ನುವ ಅರ್ಥ ಕೊಡುವುದರಿಂದ ಜೀವವೆಂಬುದೂ ಪ್ರಾಣಿ ಎಂಬುದೂ ಸಮಾನಾರ್ಥಕವುಳ್ಳ ವಸ್ತುವಿಶೇಷಗಳನ್ನು ಸೂಚಿಸುತ್ತವೆ. ಜೀವಿಯಾಗಿರುವುದು ನಿರ್ಜೀವವಾಗುವ ಪರಿಸ್ಥಿತಿ ಇರುವುದರಿಂದ ಜೀವ ಎನ್ನುವುದು ಭೌತಿಕ ಪ್ರಪಂಚದ ಒಂದು ಘಟಕ. ಭೌತಿಕ ಅಂಶಗಳ ಪರಿವೃತ್ತಿಯಲ್ಲಿ ಒದಗುವ ಚಲನೆಯುಳ್ಳ, ಪ್ರತಿಕ್ರಿಯೆಯನ್ನು ತೋರಿಸುವ ವಸ್ತು ವಿಶೇಷ ತಾತ್ವಿಕರ ದೃಷ್ಟಿಯಲ್ಲಿ ಜೀವ ಅಂತಿಮವಲ್ಲ; ಆತ್ಮದ ಒಂದು ಸ್ಥಿತಿ ಮಾತ್ರ. ಆತ್ಮ ಜನ್ಮಮರಣಗಳಿಗೆ ಸಿಗದ ಅಮರ ತತ್ವ. ಆದರೆ ಜೀವ ಕೇವಲ ಪ್ರಾಣಿ ಎಂದಾದರೆ ಒಂದು ಮನೋಭೌತಿಕ ಸಂಘಾತ. ಮರಣ ಸ್ಥಿತಿಯಲ್ಲದು ವ್ಯತ್ಯಾಸಗೊಳ್ಳುತ್ತದೆ. ಆದ್ದರಿಂದ ವ್ಯಾವಹಾರಿಕವಾಗಿ ಹೇಳುವುದಾದರೆ ಅದು ಸಾವನ್ನು ಹೊಂದುವಂಥದು. ಸಡಿಲವಾಗಿ ಆತ್ಮ ಜೀವಗಳನ್ನು ಪರ್ಯಾಯವಾಗಿ ಉಪಯೋಗಿಸುವುದೂ ಉಂಟು. ಆದರೆ ಇವೆರಡರಲ್ಲಿ ಆತ್ಮವೆನ್ನುವ ಪದ ಜೀವ (ಪ್ರಾಣಿ) ಎಂಬುದಕ್ಕಿಂತ ಉತ್ತಮ ತರದ ಸ್ಥಿತಿ. ಈ ತಾತ್ವಿಕ ಭೇದವನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳನ್ನು ಬಳಸುವುದು ಸರಿಯಾದ ಮಾರ್ಗ. ಇವೆರಡರ ಮಧ್ಯೆ ತಾತ್ವಿಕ ವ್ಯತ್ಯಾಸ ಮಾಡಿರುವುದು ಭಾರತೀಯ ಚಿಂತನೆಯ ದಾರಿ.

ನಮ್ಮ ಅನುಭವದಲ್ಲಿ ಜೀವ ಅಜೀವಗಳು ಎರಡೂ ಕಾಣಸಿಗುತ್ತವೆ. ಒಂದು ಚೇತನಾತ್ಮಕವಾದರೆ ಮತ್ತೊಂದು ಜಡಾತ್ಮಕ. ಎಲ್ಲ ಭೌತಿಕ ವಸ್ತುಗಳೂ ಎರಡನೆಯ ವರ್ಗಕ್ಕೆ ಸೇರಿದವು. ಆದರೆ ಜೀವ ಎಂಬ ಘಟಕದಲ್ಲಿ ಚೇತನ ಮತ್ತು ಜಡಾತ್ಮಕ ಅಂಶಗಳು ಒಂದೇ ಕಾಲದಲ್ಲಿ ಕಾಣಸಿಗುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅನೇಕ ವಿಚಾರವಂತರು ಜೀವ ಎನ್ನುವುದು ಯಾವತ್ತೂ ಭೌತಿಕ ಸಂಸರ್ಗವನ್ನು ಹೊಂದಿರುತ್ತದೆ ಎಂದು ಹೇಳುತ್ತಾರೆ. ಎಲ್ಲ ವೈಜ್ಞಾನಿಕ ಸಂಶೋಧನೆಗಳೂ ಈ ಪರಿಸ್ಥಿತಿಯನ್ನು ಒಪ್ಪಿಕೊಂಡೇ ಮುಂದುವರಿಯುತ್ತವೆ. ಭೌತ ಸಂಸರ್ಗವನ್ನು ಹೊಂದಿರುವ ಜೀವದ ಸ್ವಭಾವವೇನು, ಅದು ಭೌತದ ಒಂದು ರೂಪವೇ ಅಥವಾ ಭೌತ ಜೀವದ ಒಂದು ರೂಪವೇ, ಜೀವ ಎನ್ನುವುದು ಈ ಭೂಗೋಳಕ್ಕೆ ಮಾತ್ರ ಮೀಸಲಾದುದೇ ಅಥವಾ ಭೌತಲಕ್ಷಣವನ್ನು ವ್ಯಕ್ತಪಡಿಸುವ ಎಲ್ಲ ಖಗೋಳ ಲೋಕಗಳಲ್ಲೂ ಪ್ರಸರಿಸುದುದೇ ಇಲ್ಲವೆ ಜೀವ ಅನಾದಿಯೇ ಅಥವಾ ಯಾವುದೋ ಕಾಲದ ಪರಿಮಾಣದಲ್ಲಿ ಉದಿಸುದುದೇ ಭೌತದೊಡನೆ ಸಮಕಾಲಿಕವೇ ಅಜೀವದಿಂದ ಜೀವ ಬಂದಿತೇ ಮೂಲದಲ್ಲಿ ಜೀವಕ್ಕೆ ಭೂತಸಂಪರ್ಕವಿಲ್ಲವೆಂದವಾದರೆ ಅದು ಸ್ವಯಂಸೃಷ್ಟವೇ ಅಥವಾ ಈಶ್ವರಸೃಷ್ಟವೇ ಈ ಭೂಗೋಳಕ್ಕೆ ನೈಸರ್ಗಿಕವಲ್ಲದ ಜೀವವು ಆಗಂತುಕವೇ ಹಾಗಾದರೆ ಬೇರೆ ಕಡೆಗಳಿಂದ ಹೇಗೆ ಬಂತು ಜಗತ್ತಿನಲ್ಲಿ ಕಾಣಿಸಿಕೊಂಡ ಈ ಜೀವನ ವಿಕಾಸ ಹೇಗಾಯಿತು?-ಹೀಗೆ ಜೀವದ ವಿಚಾರವಾಗಿ ನಾನಾ ವಿಧವಿಧವಾದ ಪ್ರಶ್ನೆಗಳು ಉದ್ಭವವಾಗುತ್ತವೆ.

ಆಧುನಿಕ ವಿಚಾರ ಚಿಂತನೆ ಜೀವದ ಬಗ್ಗೆ ಮೂರು ವಿಧವಾದ ವಾದಗಳನ್ನು ಮುಂದಿಡುತ್ತದೆ. ಮೊದಲನೆಯದನ್ನು ವಿಶ್ವಜೀವವಾದ (ಹೈಲೋeóÉೂೀಯಿಸಂ) ಎನ್ನಬಹುದು. ಇದರ ಪ್ರಕಾರ ಜೀವಕ್ಕೂ ಅಜೀವಕ್ಕೂ ಯಾವ ಲಕ್ಷಣ ವ್ಯತ್ಯಾಸವೂ ಇಲ್ಲ. ವಿಶ್ವವೆಲ್ಲ ಜೀವಂತವಾಗಿಯೇ ಇದೆ. ಇಲ್ಲಿ ಯಾವುದೂ ಸತ್ತದ್ದು ಎಂದಿಲ್ಲ. ಅಜೀವ ಅಥವಾ ಜಡ ಎನ್ನುವ ವಸ್ತು ಜೀವದ ಕೆಳಮಟ್ಟದ ಸ್ಥಿತಿ ಮಾತ್ರ. ಜಡವೆಂದರೆ ಸುಪ್ತದೆಶೆಯಲ್ಲಿರುವ ಜೀವ. ವಿಶ್ವವೆಲ್ಲ ಜೀವಮಯವಾದದ್ದು ಎನ್ನುವ ಕಾರಣದಿಂದ ಈ ವಾದವನ್ನು ವಿಶ್ವಜೀವೈಕ್ಯವಾದ ಎನ್ನಲೂಬಹುದು.

ಎರಡನೆಯದು ಯಂತ್ರವಾದ. ವಿಶ್ವಜೀವವಾದದಂತೆಯೇ ಈ ವಾದವೂ ಜೀವ ಅಜೀವಗಳ ಭೇದವನ್ನು ಎಣಿಸುವುದಿಲ್ಲ. ಆದರೆ ಅವುಗಳ ಸ್ವಭಾವವನ್ನು ವಿವಿರಿಸುವ ರೀತಿಯಲ್ಲಿ ಮಾತ್ರ ಈ ವಾದ ಭಿನ್ನವಾಗುತ್ತದೆ. ಈ ದೃಷ್ಟಿಯ ಪ್ರಕಾರ ಎಲ್ಲ ಜೀವಿಗಳೂ ಯಂತ್ರಗಳೇ. ಅವುಗಳ ನಡೆವಳಿಕೆ ಅಥವಾ ಪ್ರವೃತ್ತಿಗಳೆಲ್ಲ ಯಾಂತ್ರಿಕ. ಜೀವವೆನ್ನುವುದು ಭೌತವಸ್ತುವಿನಿಂದ ಪ್ರತ್ಯೇಕವೇನಲ್ಲ. ಭೌತದ ಒಂದು ಪರಿಸ್ಥಿತಿ ಅಷ್ಟೆ. ಈ ವಿಚಾರದಲ್ಲಿ ಈ ವಾದ ವಿಶ್ವಜೀವವಾದದ ತಿರುಗುಮುರುಗು. ಎಲ್ಲ ಜೀವಸ್ಥಿತಿಯನ್ನೂ ರಾಸಾಯನಿಕ ಭೌತಿಕ ಮತ್ತು ದೈಹಿಕ ಲಕ್ಷಣಗಳಿಂದ ವಿವರಿಸಬಹುದು. ಜೀವಂತ ದೇಹ ಅಜೀವ ವಸ್ತುವಿನಂತೆಯೇ ಭೌತಿಕ ನಿಯಮಗಳನ್ನು ಪಾಲಿಸಬೇಕು. ಜೀವಧಾರಿಯ ಪ್ರವೃತ್ತಿಗಳಲ್ಲೆ ಅಂತಿಮವಾಗಿ ಭೌತಿಕ ಪ್ರತಿಕ್ರಿಯೆಗಳೇ. ಭೌತಿಕ ಕ್ಷೇತ್ರ, ಭೌತಿಕ ಅಂಶಗಳನ್ನು ಬಿಟ್ಟು ಜೀವ ಇದೆಯೆಂದು ಹೇಳಲೂ ಸಾಧ್ಯವಾಗದು. ಯಂತ್ರವಾದಿ ಶುದ್ಧ ಲೋಕಾಯತ ಭೌತವಾದಿ. ಆತ ಕೇಳುತ್ತಾನೆ-ಮುಖವಿಲ್ಲದೆ ನಸುನಗೆಯನ್ನು ತೋರಿಸು, ಮಿದುಳಿಲ್ಲದೆ ಆಲೋಚನೆಯನ್ನು ಮಾಡು-ಎಂದು. ಮೂರನೆಯದು ಜೀವಚೈತನ್ಯವಾದ (ವೈಟಲಿಸಮ್). ಇದರ ಪ್ರಕಾರ ಜೀವ ಎಂಬುದು ಜಡ, ಅಜೀವ, ಅಚೇತನಗಳಿಂದ ವಿಲಕ್ಷಣವಾದುದು. ಬದುಕಿರುವ ಮತ್ತು ಸತ್ತಿರುವ ವಸ್ತುಗಳ ಅಂತರವೇ ಈ ಜೀವದ ಲಕ್ಷಣವನ್ನು ಎತ್ತಿ ತೋರಿಸುತ್ತದೆ. ಈ ಜೀವ ಬದುಕಿರುವ ವಸ್ತುವಿನೊಡನೆ ಇದ್ದು, ಸತ್ತ ವಸ್ತುವಿನೊಡನೆ ಇಲ್ಲದೆ ಹೋಗುವುದು ಅಲ್ಲ. ಇವೆರಡಕ್ಕೂ ಆಧಾರವಾದ ಮೂಲಭೂತವಾದ ಶಕ್ತಿ ಅದು; ಎಲ್ಲ ಪ್ರಾಣದ ಹಿಂದಿರುವ ಪ್ರೇರಕ ಶಕ್ತಿ. ಅದರಿಂದ ಬದುಕು, ಬಾಳು, ಉಸಿರು, ಪ್ರತಿಕ್ರಿಯೆ, ಆನಂದ, ವ್ಯಸನ, ಇತ್ಯಾದಿ. ಯಂತ್ರವಾದಿ ಅಥವಾ ಭೌತವಾದಿ ಹೇಳುವಂತೆ ರಾಸಾಯನಿಕ, ಭೌತಿಕ, ದೈಹಿಕ ವಿಶ್ಲೇಷಣೆಯಿಂದ ಜೀವದ ಲಕ್ಷಣವನ್ನು ಅರಿಯಲು ಸಾಧ್ಯವಾಗಬಹುದು. ಆದರೆ ಜೀವ ಎನ್ನುವುದು ಈ ಅಂಶಗಳಿಗಿಂತ ಬೇರೆ; ಅದಕ್ಕೆ ಅತೀತವಾದದ್ದು. ಈ ವಾದದ ಅಧ್ವರ್ಯು ಹೆನ್ರಿ ಬರ್ಗ್‍ಸನ್, ಆತ ಹೇಳುವಂತೆ ಹೇಗೆ ಒಂದು ವಕ್ರರೇಖೆ ಅನೇಕ ಸಣ್ಣ ನೇರ ಅಥವಾ ಸರಳ ರೇಖೆಗಳಿಂದ ಮಾಡಲ್ಪಟ್ಟಿಲ್ಲವೋ ಹಾಗೆಯೇ ಜೀವವೆನ್ನುವುದೂ ಭೌತ-ರಾಸಾಯನಿಕ ಅಂಶಗಳಿಂದ ಆದುದಲ್ಲ. ಜೀವವೆನ್ನುವ ತತ್ವ ವಿಶ್ವಜೀವವಾದ ಹೇಳುವಂತೆ ಸುಪ್ತದೆಶೆಯಲ್ಲಿದ್ದರೆ ಜಡ ವಸ್ತುವಾಗುವುದೂ ಇಲ್ಲ. ಯಂತ್ರವಾದ ಹೇಳುವಂತೆ ಯಾಂತ್ರಿಕವಾದ ಜಡತತ್ವವೂ ಆಗುವುದಿಲ್ಲ. ಯಂತ್ರದ ನಿಯಮಗಳನ್ನು ಅನುಸರಿಸಿ ಜೀವದ ಭವಿಷ್ಯತ್ಪ್ರವೃತ್ತಿಯನ್ನು ನಿಶ್ಚಿತವಾಗಿ ಹೇಳಲು ಬರುವುದಿಲ್ಲ. ಅದೊಂದು ಪ್ರಚೋದಕ ಶಕ್ತಿ. ನವೀನ ಶಕ್ತಿ. ಅದರ ಸಂಪರ್ಕವಾದ ಮಾತ್ರಕ್ಕೇ ಜಡ ಚೇತನಗೊಳ್ಳುತ್ತದೆ. ವಿಶ್ವ ಉಸಿರಾಡುತ್ತದೆ. ಬರ್ಗ್‍ಸನ್ ಈ ಶಕ್ತಿಯನ್ನು ಇಲಾನ್ ವೈಟಲ್ ಎನ್ನುತ್ತಾನೆ. ಈ ತತ್ತ್ವದ ವಿವರಣೆ ಭಾರತೀಯರ ಆತ್ಮತತ್ವವನ್ನು ಅನೇಕ ಅಂಶಗಳಲ್ಲಿ ಹೋಲುತ್ತದೆ.

ಈ ಮೂರೂ ವಾದಗಳ ಅಂತಿಮ ನಿರ್ಣಯ ಪ್ರಕೃತ ಲೇಖನದ ಉದ್ದೇಶವಲ್ಲ. ಏಕೆಂದರೆ ಅದು ಕೇವಲ ಜೀವಕ್ಕೆ ಅಲ್ಲದೆ ಎಲ್ಲ ಅಸ್ತಿತ್ವದ ಆದಿಗೆ ಸಂಬಂಧಿಸಿದ್ದಾಗಿದೆ. ಅದು ವಾಸ್ತವಿಕ ಘನೀಭೂತ ವಸ್ತುಗಳ ಹಿನ್ನಲೆಯಲ್ಲಿನ ಸೂಕ್ಷ್ಮತತ್ವದ ಸಂಶೋಧನೆ. ನಮಗೆ ಅಧೀನವಾದ ಬುದ್ಧಿ, ತರ್ಕ ಮುಂತಾದ ಸಾಧನ ಸಲಕರಣೆಗಳಿಗೆ ಸಿಗದಂಥ ವಸ್ತುವನ್ನು ಕುರಿತದ್ದು. ಆದ್ದರಿಂದ ಈ ಪ್ರಮಾಣಗಳನ್ನು ಮೀರಿದ ಪ್ರಮಾಣ ಬೇರೊಂದಿದೆಯೇ ಎನ್ನುವುದನ್ನು ಹುಡುಕಬೇಕಾಗುತ್ತದೆ. ಭಾರತದ ದರ್ಶನಕಾರರು ಇದನ್ನು ಪ್ರತಿಬೋಧವೆನ್ನುತ್ತಾರೆ, ಶ್ರುತಿ ಎನ್ನುತ್ತಾರೆ. ತತ್ವಚಿಂತನೆ ಇದನ್ನು ಅವಲಂಬಿಸಿ ಜೀವತತ್ವದ ವಿಚಾರ ನಡೆಸುತ್ತದೆ. ಇದನ್ನು ಸ್ವಲ್ಪ ಮುಂದೆ ಪರಿಶೀಲಿಸಲಾಗಿದೆ. ಈಗ ನಮ್ಮ ಅನುಭವಕ್ಕೆ ಎಟುಕುವಂಥ ಪರಿಸ್ಥಿತಿಯಲ್ಲಿನ ಜೀವದ ಲಕ್ಷಣಗಳನ್ನು ನೋಡಬಹುದು.

ಎಲ್ಲ ಪರಿಶೀಲನೆಗೂ ಪ್ರಯೋಗಕ್ಕೂ ವಸ್ತುವಾಗಬಲ್ಲ ಜೀವ ಭೌತಪ್ರಪಂಚದ ಪರಿಸರದ ಒಂದು ವಿಶೇಷ. ಇದು ಭೂಮಿಯ ಬಹಳ ಒಳಗೂ ಇಲ್ಲ. ಭೂಮಿಯ ಹೊರಗೆ ಬಹಳ ಮೇಲೂ ಇಲ್ಲ. ಇದರ ಮೈಮೇಲೆ ಸೀಮಿತವಾದ ಅಳತೆಯ ಅಂತರದಲ್ಲಿ ಜೀವಸತ್ವದ ವ್ಯಕ್ತ ರೂಪ ಅನೇಕ ಜೀವಿಗಳ ರೂಪದಲ್ಲಿ ಸಿಗುತ್ತದೆ. ಜೀವಿಗಳ ಸಂಖ್ಯೆಯೆ ಅನೇಕ, ರೂಪ ಅನೇಕ. ಆದರೆ ಒಂದೇ ನೈಸರ್ಗಿಕ ನಿಯಮ ಎಲ್ಲ ಜೀವಿಗಳನ್ನೂ ಆಳುವುದು ಕಂಡು ಬರುತ್ತದೆ. ಜೀವಿಗೆ ಆಹಾರ ಬೇಕು, ಅದು ಬೆಳೆಯುತ್ತದೆ, ಸಂತಾನ ಪಡೆಯುತ್ತದೆ, ಒಂದರೊಡನೆ ಒಂದು ಜಗಳವಾಡುತ್ತದೆ, ಕೂಡಿಕೊಳ್ಳುತ್ತದೆ, ಬದುಕಲು ಇಚ್ಛಿಸುತ್ತದೆ, ಸಾವನ್ನು ಎದುರಿಸುತ್ತದೆ. ಕ್ರಿಯೆ-ಪ್ರತಿಕ್ರಿಯೆಗಳನ್ನು ತೋರುತ್ತದೆ. ರಚನೆಯಲ್ಲಿ ಎಲ್ಲ ಜೀವಿಗಳೂ ಸಮಾನವಾಗಿವೆ. ಎಂದರೆ ಎಲ್ಲ ವಿವಿಧ ರೂಪಗಳೂ ಜೀವಬಿಂದುಗಳಿಂದಲೇ ಆದುವು. ಆನುವಂಶಿಕ ಮತ್ತು ಸನ್ನಿವೇಶಗಳ ನಿಯಮಗಳು ಎಲ್ಲ ಜೀವಿಗಳಿಗೂ ಸಮಾನ.

ಇಂಥ ಜೀವ - ಈ ಭೌಗೋಳಿಕ ವೃತ್ತದಲ್ಲಿ ಇರುವಂತೆ- ಹುಟ್ಟಿದ ಬಗೆ ಹೇಗೆ? ಜೀವ ಜೀವದಿಂದಲೇ ಬಂದದ್ದೇ ಅಥವ ಅಜೀವದಿಂದ ಉದ್ಬವಿಸಿದ್ದೇ? ಇದುವರೆವುಗೂ ನಡೆದಿರುವ, ಈಗಲೂ ನಡೆಯುತ್ತಿರುವ ಸಂಶೋಧನೆಗಳ ವಿಶಾಲ ಸಮೀಕ್ಷೆ ನಡೆಸಿದಲ್ಲಿ ಅಜೀವದಿಂದ ಜೀವವನ್ನು ಸೃಷ್ಟಿಸುವ ಎಲ್ಲ ಪ್ರಯತ್ನಗಳೂ ವಿಫಲಗೊಂಡಿರುವುದು ಕಂಡುಬರುತ್ತದೆ. ಎಂದರೆ, ಜೀವಕ್ಕೆ ಮೂಲ ಜೀವವೇ ಎನ್ನುವ ಸಿದ್ಧಾಂತವನ್ನು ವಿಜ್ಞಾನ ಇದುವರೆವಿಗೂ ನಿರಾಕರಿಸಲು ಸಾಧ್ಯವಾಗದೆ ಹೋಗಿದೆ. ಈ ಭೌಗೋಳಿಕ ಜಗತ್ತು ಜೀವ ಲಕ್ಷಣಗಳುಳ್ಳ ವಸ್ತುಗಳನ್ನು ಹೊಂದಿರದ ಕಾಲವೂ ಇತ್ತು ಎಂದು ವಿಜ್ಞಾನಿ ನಿಶ್ಚಯ ಮಾಡಿದೆ. ಎಂದರೆ ಜೀವಕ್ಕೆ ಜೀವವೇ ಮೂಲವಾದರೆ ಈ ಭೌಗೋಳಿಕ ಜಗತ್ತಿಗೆ ಜೀವ ಹೇಗೆ ಬಂತು ಎನ್ನುವ ಸಮಸ್ಯೆ ಇದ್ದೇ ಇದೆ. ಇದರ ವಿವರಣವೆಂಬಂತೆ ಹಲವರು ಜೀವ ಈ ಗೋಳಕ್ಕೆ ಹೊರಗಿನಿಂದ-ಪ್ರಾಯಶಃ ಬೇರೆ ಖಗೋಳಗಳಿಂದ-ಆಗಂತುಕವಾಗಿ ಬಂದಿರಬಹುದು ಎಂದು ಹೇಳುತ್ತಾರೆ. ಇದರ ಸಾಧ್ಯ ಅಸಾಧ್ಯಗಳ ಸಂಶೋಧನೆ ಇನ್ನೂ ನಡೆದಿಲ್ಲ, ಅಥವಾ ನಡೆಯುತ್ತ ಇದೆ. ಆದರೆ ಇದರ ಸತ್ಯ ಇತ್ಯರ್ಥವಾಗಿಲ್ಲ.

ಈ ಭೌಗೋಳಿಕ ಕ್ಷೇತ್ರದಲ್ಲಿ ಕಾಣಸಿಗುವ ಜೀವದ ಆಗಮನ ಅಥವಾ ಸೃಷ್ಟಿಗಳ ವಿಚಾರವಾಗಿ ಹೀಗೆ ಸಂಶಯಗಳಿದ್ದರೂ ಜೀವ ವಿಕಾಸದ ಬಗ್ಗೆ ಮಹತ್ವದ ವಿವರಣೆಗಳನ್ನು ನೀಡಲಾಗಿದೆ. ಮುಖ್ಯವಾದುದು ಚಾರ್ಲ್‍ಸ್ ಡಾರ್ವಿನ್ ನೀಡಿರುವ ವಿಕಾಸವಾದ. ಈ ವಾದದ ಪ್ರಕಾರ ಪ್ರಚಲಿತ ಬದುಕಿರುವ ಪ್ರಾಣಿವರ್ಗ (ಸಸ್ಯಗಳೂ ಸೇರಿದಂತೆ) ಹಿಂದೆ ಜೀವಿಸಿದ ಸರಳ ರೀತಿಯ ಪ್ರಾಣಿಗಳಿಂದ ವಿಕಾಸ ಹೊಂದಿದವು. ಯಾವುದು ಮೊದಲು ಒಂದೇ ವರ್ಗವಾಗಿತ್ತೋ ಅದೇ ಕಾಲಕ್ರಮದಲ್ಲಿ ಅನೇಕ ವರ್ಗಗಳಾಯಿತು. ಹೀಗೆ ಆಗಲು ಕಾರಣ ಜೀವಿಗಳಲ್ಲಿ ಯಾವುದೋ ಕಾರಣಗಳಿಂದ ಆಗುವ ವ್ಯತ್ಯಾಸ. ಬಹುಶಃ ಆನುವಂಶಿಕವಾಗಿ ಬರುವ ಸಂತಾನಗಳಲ್ಲಿ ವಾತಾವರಣ ಅಥವಾ ಸನ್ನಿವೇಶಗಳ ದೆಶೆಯಿಂದ ಇಂಥ ವ್ಯತ್ಯಾಸಗಳು ಆಗಬಹುದು. ವ್ಯತ್ಯಾಸಗಳು ಬಹು ಸಣ್ಣವಾದರೂ ಜೀವಿಯ ಮೇಲೆ ಅವುಗಳ ಪರಿಣಾಮ ಬಹು ಮಹತ್ವದ್ದಾಗಬಹುದು. ಎಂದರೆ ಈ ವ್ಯತ್ಯಾಸ ಅಥವಾ ವ್ಯತ್ಯಾಸಗಳು ಜೀವಿಗೆ, ಸಹಾಯಕವಾಗಬಹುದು ಇಲ್ಲವೆ ಮಾರಕವಾಗಬಹುದು. ಜೀವನದ ಹೊಯ್ದಾಟದಲ್ಲಿ ಸಹಾಯಕವಾಗುವ ವ್ಯತ್ಯಾಸವನ್ನು ಹೊಂದಿರುವುವು ಗೆಲ್ಲುತ್ತವೆ, ಮುಂದುವರೆಯುತ್ತವೆ. ಮಾರಕವಾಗುವ ವ್ಯತ್ಯಾಸವನ್ನು ಹೊಂದಿರುವುವು ಸೋಲುತ್ತವೆ, ಸಾಯುತ್ತವೆ, ಅಳಿಸಿಹೋಗುತ್ತವೆ. ಹೀಗೆ ಯೋಗ್ಯವಾದವನ್ನು ಮಾತ್ರ ಜೀವ ಉಳಿಸಿಕೊಳ್ಳುತ್ತದಾಗಿ ಅವು ಸಂತಾನಗಳ ಮೂಲಕ ಮುಂದುವರೆಯುತ್ತವೆ. ಇದು ವಿಕಾಸವಾದದ ವಿವರಣೆ.

ಈ ವಾದದ ಬಗ್ಗೆ ಎಷ್ಟೇ ಟೀಕೆಗಳು ಇದ್ದರೂ ಇದು ವಾಸ್ತವಿಕ ಪ್ರಾಯೋಗಿಕ ಪ್ರಮಾಣಗಳನ್ನು ಉಪಯೋಗಿಸಿಕೊಂಡು ನಿರ್ಮಿಸಿದ್ದಾದ್ದರಿಂದ ವಿಚಾರವಂತರಲ್ಲಿ ಅನೇಕರು ಇದನ್ನು ಒಪ್ಪಿದ್ದಾರೆ. ಡಾರ್ವಿನ್ನನ ವಿಕಾಸವಾದದಲ್ಲಿ ಸ್ವಲ್ಪ ವ್ಯತ್ಯಾಸಗಳನ್ನು ಮಾಡಿದವರು ಇದ್ದಾರೆ. ಅವರಲ್ಲಿ ಲಮಾರ್ ಮತ್ತು ಮೆಂಡೆಲ್ ಎಂಬುವರು ಮುಖ್ಯರು. ಏನೇ ಆಗಲಿ ವಿಕಾಸವಾದದ ಮೂಲಭೂತ ವಿಚಾರವನ್ನು ಇವರು ಅಲ್ಲಗಳೆದಿಲ್ಲ. ಮೊದಲ ವಿಕಾಸವಾದವನ್ನು ಪ್ರಾಕೃತ ವಿಕಾಸವಾದ ಎಂದು ಕರೆಯಬಹುದಾದರೆ ನೂತನ ದೃಷ್ಟಿಯನ್ನು ಬೀರುವ ಇತರ ವಿಕಾಸವಾದಗಳನ್ನು ಧ್ಯೇಯಪೂರ್ಣವಿಕಾಸವಾದ, ಸೃಷ್ಟ್ಯಾತ್ಮಕ ವಿಕಾಸವಾದ, ಆವಿರ್ಭಾವ ವಿಕಾಸವಾದ ಎನ್ನಬಹುದು. ಇವು ಪ್ರಾಕೃತ ವಿಕಾಸದಲ್ಲಿ ಇರುವ ಸಂಧಿಗ್ಧಗಳನ್ನು ಅಪ್ರಾಕೃತ ಆದರೆ ಅನುಭವ ವೇದ್ಯ ಪ್ರಮೇಯಗಳಿಂದ ವಿವರಿಸಲು ಪ್ರಯತ್ನ ಪಡುತ್ತವೆ.

ಈ ಸಂದರ್ಭಗಳಲ್ಲೇ ಅಭೌತ ಮತ್ತು ಆಧ್ಯಾತ್ಮ ವಿವರಣೆಗಳ ಪ್ರಮಾಣತ್ವ ಅಥವಾ ಸಂವಾದಿತ್ವ ನಮಗೆ ಹೊಳೆಯಬೇಕಾದರೆ, ಸ್ಪಾಂಟೇನಿಯಸ್ ಥಿಯೊರಿ ಅಥವಾ ಜೀವ ತನ್ನಷ್ಟಕ್ಕೆ ತಾನೆ ಸೃಷ್ಟಿಗೊಂಡಿತು ಎನ್ನುವ ವಾದವಂತೂ ವಾಸ್ತುಸ್ಥಿತಿಯ ಬಗ್ಗೆ ನಮಗಿರುವ ಜ್ಞಾನ ಎಷ್ಟು ಅಲ್ಪ ಎಂಬುದನ್ನು ತೋರಿಸುತ್ತದೆ. ಇಂಥ ವಾದವನ್ನು ಮಾನ್ಯ ಮಾಡುವ ದೃಷ್ಟಿಗೆ ಜೀವ ಈಶ್ವರ ಸೃಷ್ಟವಾದುದು ಎನ್ನುವ ವಾದದಲ್ಲಿ ಒಪ್ಪಲಾರದ ತರ್ಕ ಯಾವುದಿದೆ? ಸ್ಪಾಂಟೇನಿಯಸ್ ಥಿಯೊರಿಯ ಯದೃಚ್ಛವಾದವಾಗುವುದಿಲ್ಲವೇ? ಜೀವದ ಆದಿ ತನಗೆ ತಾನೇ ಆದದ್ದಾದರೆ ಅಂತ್ಯವೂ ಹಾಗೆಯೇ ಆಗಬಹುದಲ್ಲವೇ? ಜೀವದ ಲಕ್ಷಣ ಹಲವು ನಿಯಮಗಳನ್ನು-ಭೌತಿಕ, ದೈಹಿಕ ಇತ್ಯಾದಿ-ಪಾಲಿಸುವುದಾದರೆ ಅವನ್ನು ಪಾಲಿಸದಿರುವುದೂ ಹಾಗೆಯೇ ಆಗಬಹುದಲ್ಲವೇ? ಜಗತ್ತಿನ ಹೃದಯದಲ್ಲಿ ಯದೃಚ್ಛೆ ಅಡಗಿದೆ ಎಂದರೆ ಅದು ಅವೈಜ್ಞಾನಿಕವಾಗುತ್ತದೆ. ತರ್ಕರಹಿತವಾದವಾಗುತ್ತದೆ. ಈಶ್ವರಸೃಷ್ಟಿವಾದ ನಂಬಿಕೆಯ ವಿಚಾರ ಎಂದು ತಳ್ಳಿಹಾಕಲು ಬರುವುದಿಲ್ಲ. ಅದು ಜೀವಕ್ಕೆ ಅಲೌಕಿಕ ಕಾರಣವನ್ನು ಒದಗಿಸುವ ತಾತ್ವಿಕ ಪ್ರಯತ್ನ. ಇದನ್ನು ಧರ್ಮ ಮತ್ತು ಮತಗಳು ಅವಲಂಬಿಸುತ್ತವೆ. ಇವುಗಳ ದೃಷ್ಟಿಯಲ್ಲಿ ಎಲ್ಲದಕ್ಕೂ ಕಾರಣನಾದವ ಈಶ್ವರ. ಈಶ್ವರ ಎಲ್ಲದರ ಆದಿ. ಆದರೆ ತಾನೇ ಅನಾದಿ. ಎಲ್ಲದಕ್ಕೂ ಕಾರಣ; ಆದರೆ ತಾನೇ ಅಕಾರಣ. ಎಲ್ಲ ತರ್ಕಬುದ್ಧಿಗಳಿಗೆ ಅತೀತವಾದವ, ಆದರೆ ಎಲ್ಲ ತರ್ಕ, ಬುದ್ಧಿ, ಅನುಭವಗಳಿಗೆ ಆಧಾರನಾದವ. ಇಂಥ ಈಶ್ವರ ತತ್ವ ಜೀವವನ್ನು ಸೃಷ್ಟಿಸಿದೆ, ಅಥವಾ ತಾನೇ ಜೀವದಂತೆ ಅಭಿವ್ಯಕ್ತವಾಗಿದೆ. ಜೀವದ ಉದ್ದೇಶ ಜೀವದ್ದಲ್ಲ ಈಶ್ವರನದು. ಜೀವ ಸಮಸ್ತವಲ್ಲ, ವಿಶ್ವರಚನೆಯಲ್ಲಿ ಒಂದು ಅಂಶ. ಜೀವವನ್ನು ಅರಿಯಬೇಕಾದರೆ ಜೀವದಿಂದಲೇ ಪ್ರಾರಂಭವಾಗಬಾರದು, ಅದರ ಹಿಂದೆ ಅದರ ಮುಂದೆ ಅಡಗಿರುವ ವ್ಯಾಪಕ, ವಿಶಾಲ, ಅಪರಿಮಿತ ಸೃಷ್ಟಿ, ಅದರ ಹಿಂದಿನ ಶಕ್ತಿ-ಇವನ್ನು ಅರಿಯಬೇಕಾಗುತ್ತದೆ. ಹೀಗೆನ್ನುವ ತತ್ವದ ದೃಷ್ಟಿಯಿಂದ ಜಗತ್ತಿನ ಒಂದು ಅಂಶವಾದ ಜೀವವನ್ನು ತಿಳಿಯಬೇಕು. ಅಸ್ತಿತ್ವದ ರಚನೆಯಲ್ಲಿ ಜೀವದ ಸ್ಥಾನವನ್ನು ಅರಿಯದ ಹೊರತು ಜೀವತತ್ವದ ಪರಿಜ್ಞಾನ ಪೂರ್ಣವಾಗದು. ಇದು ತಾತ್ವಿಕನ ವಿಚಾರ ಮಾರ್ಗ. (ಕೆ.ಬಿ.ಆರ್.)