ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾರ್ಬರ್ನೈಟ್

ವಿಕಿಸೋರ್ಸ್ದಿಂದ

ಟಾರ್ಬರ್ನೈಟ್ - ತಾಮ್ರ ಮತ್ತು ಯುರೇನಿಯಮುಗಳ ಜಲಾಂಶ ಸಹಿತ ಫಾಸ್ಫೇಟ್. ಇದೊಂದು ಖನಿಜ, ರಾಸಾಯನಿಕ ಸೂತ್ರ CuU2P2O12.12H2O ಯುರೇನಿಯಮಿನ ಗೌಣ ಅದುರುಗಳ ಪೈಕಿ ಟಾರ್ಬರ್ನೈಟ್ ಒಂದು. ಸ್ವೀಡಿಶ್ ರಸಾಯನ ಶಾಸ್ತ್ರಜ್ಞ ಟೋರ್ಬರ್ನ್ ಬರ್ಗ್‍ಮನನ (1735-84) ಗೌರವಾರ್ಥ ಈ ಹೆಸರು ಬಂದಿದೆ. ಈ ಖನಿಜ ಪಚ್ಚೆ ಅಥವಾ ಸೇಬಿನ ಹಸಿರು ಬಣ್ಣದ ಗಾಜಿನ ಅಥವಾ ಮುತ್ತಿನ ಹೊಳಪನ್ನು ಬೀರುತ್ತದೆ. ಚತುಷ್ಫಲಕೀಯ ವರ್ಗದ ಹರಳುಗಳಾಗಿ ಮೈದಳೆಯುತ್ತದೆ.

ಪದರುಪದರಗಳಿರುವುದರಿಂದ ಇದನ್ನು ಯುರೇನಿಯಮ್ ಅಭ್ರಕವೆಂದು ಕರೆಯುವುದುಂಟು. ಇದರ ಕಾಠಿನ್ಯಾಂಕ 2.5, ಸಾಪೇಕ್ಷ ಸಾಂದ್ರತೆ 3.2 ರಿಂದ 3.7. ಯುರೇನಿಯಮ್ ಮತ್ತು ತಾಮ್ರದ ಮೂಲ ಅದುರುಗಳ ಜಲಸಂಪರ್ಕದಿಂದ ರೂಪಾಂತರಗೊಂಡಾಗ ಟಾರ್ಬರ್ನೈಟ್ ಇತರ ಸಹವರ್ತಿ ಖನಿಜಗಳಾದ ಆಟುನೈಟ್, ಮೆಟಟಾರ್ಬರ್ನೈಟ್ ಮತ್ತು ಜೂನರೈಟುಗಳ ಜೊತೆಯಲ್ಲಿ ಪ್ರಪಂಚದ ನಾನಾಭಾಗಗಳಲ್ಲಿ ಉತ್ಪತ್ತಿಯಾಗಿದೆ. (ಸಿ.ಎಸ್.ಎನ್.ಆರ್.)