ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ಯಾಸಿಟಸ್, ಕಾರ್ನೀಲಿಯಸ್
ಟ್ಯಾಸಿಟಸ್, ಕಾರ್ನೀಲಿಯಸ್ ಸು. 56-ಸು. 120. ರೋಮನ್ ವಾಗ್ಮಿ, ರಾಜಕಾರಣಿ, ಇತಿಹಾಸಕಾರ. ಈತ ಬಹುಶಃ ಕಾರ್ನೀಲಿಯನ್ ಶ್ರೀಮಂತ ಮನೆತನದವನಲ್ಲ. ಸಿಸ್‍ಆಲ್ಪೈನ್ ಗಾಲ್ ಮನೆತನಕ್ಕೋ ಗಾಲಿಯ ನಾರ್ಬೊನೆನ್ಸಿಸ್ ಮೆನೆತನಕ್ಕೋ ಸೇರಿದವನಾಗಿದ್ದಿರಬೇಕು. ರೋಮನ್ ಪೌರತ್ವ ಪಡೆದಮೇಲೆ ಕಾರ್ನೀಲಿಯಸ್ ಎಂಬ ಹೆಸರು ತಳೆದಿರಬೇಕು. ಇವನು ಸು. 56ರಲ್ಲಿ ಹುಟ್ಟಿದ. ಈತನ ಮೊದಲ ಹೆಸರು ಪಬ್ಲಿಯಸ್ ಅಥವಾ ಗೈಯಸ್ ಆಗಿದ್ದಿರಬೇಕು. ಈತನ ಮನೆತನದ ವಾತಾವರಣ, ಸಾಮಥ್ರ್ಯ ಇವುಗಳಿಂದಾಗಿ ಈತ ಒಳ್ಳೆಯ ಶಿಕ್ಷಣ ಪಡೆದು, ಒಳ್ಳೆಯ ವಿವಾಹಸಂಬಂಧ ಬೆಳಸಿ, ಅಧಿಕಾರ ಸಂಪಾದಿಸುವುದು ಸುಲಭವಾಯಿತು. ಟ್ಯಾಸಿಟನ್ ವಾಗ್ಮಿಕಲೆಯನ್ನು ಅಭ್ಯಾಸಮಾಡಿ ಇಬ್ಬರು ಪ್ರಮುಖ ವಾಗ್ಮಿಗಳ ಅಡಿಯಲ್ಲಿ ವಾದವೃತ್ತಿಯನ್ನಾರಂಭಿಸಿದ. ಅಗ್ರಿಕೋಲನ ಮಗಳನ್ನು ವಿವಾಹವಾದ. ಈ ಸಂಬಂಧದಿಂದಾಗಿ ಇವನಿಗೆ ಪ್ರಭಾವಶಾಲಿಗಳ ಬೆಂಬಲ ಸಿಕ್ಕಿತು. ಈತ ಸರ್ಕಾರಿ ಹುದ್ದೆ ಗಳಿಸಿದ. ನ್ಯಾಯಾಧಿಕಾರಿಯಾಗಿ, ದಂಡಾಧಿಕಾರಿಯಾಗಿ, 81ರಲ್ಲಿ ಕ್ವೆಸ್ಟರ್ ಆದ. 88ರಲ್ಲಿ ನ್ಯಾಯಾಧೀಶನಾಗಿ (ಪ್ರೆಟರ್) ಪುರೋಹಿತ ವರ್ಗದ ಸದಸ್ಯನಾದ. ಮಾವನಾದ ಅಗ್ರಿಕೋಲ ಮರಣಹೊಂದಿದಾಗ (93) ಇವನು ರೋಮಿನಿಂದ ಹೊರಗೆ ಇದ್ದ. ಅನಂತರ ರೋಮಿಗೆ ಹಿಂದಿರುಗಿದ. ವಾಗ್ಮಿಯಾಗಿ ಹೆಸರು ಗಳಿಸಿದ. ಆದರೆ ಕ್ರಮೇಣ ಇವನ ಮನಸ್ಸು ಸಾಹಿತ್ಯದ ಕಡೆಗೆ ತಿರುಗಿತು. ಇವನು ಅನೇಕ ಗ್ರಂಥಗಳನ್ನು ರಚಿಸಿದ. ವಿಷಯಕ್ಕೆ ತಕ್ಕ ಶೈಲಿಯನ್ನು ಬಳಸುವ ಸಾಮಥ್ರ್ಯ ಇವನಿಗೆ ಇತ್ತು. ಇವನ ರಾಜಕೀಯ ಅನುಭವದ ಹಿನ್ನಲೆಯಲ್ಲಿ ಇತಿಹಾಸಪ್ರಜ್ಞೆ ಎಲ್ಲ ಕೃತಿಗಳಲ್ಲೂ ಅಭಿವ್ಯಕ್ತಿ ಪಡೆಯಿತು. ಇವನ ಮುಖ್ಯ ಕೃತಿಗಳು ಇವು : 1 ಅಗ್ರಿಕೋಲ-ಮಾವ ಅಗ್ರಿಕೋಲನ ಜೀವನ ಚರಿತ್ರೆ (98); 2 ಜರ್ಮೇನಿಯ-ಜರ್ಮನಿಯ ಭೂವಿವರಣೆ ಮತ್ತು ವಿವಿಧ ಪಂಗಡಗಳ ಪದ್ಧತಿ (98); 3 ಡೈಯಲೋಗಸ್ ಡಿ ಆರೆಟೋರಿಬಸ್-ಕವಿಜೀವನದ ಆನಂದ, ಶ್ರೇಷ್ಠತೆ ಮತ್ತು ವಾಗ್ಮಿತೆಗಳ ತೌಲನಿಕ ವಿವೇಚನೆ; ಭಾಷಣಕಲೆ ಇಳಿಮುಖವಾದ್ದರ ಕಾರಣಗಳ ಪರಿಶೀಲನೆ ಸು. (102); 4 ಹಿಸ್ಟೊರೀಸ್-69 ರಿಂದ 96ರ ವರೆಗಿನ ಇತಿಹಾಸ (ಇದರ ರಚನೆ ಸು.109ರಲ್ಲಿ ಮುಗಿಯಿತು); 5 ಅನಾಲ್ಸ್-ಹಿಸ್ಟೊರೀಸ್‍ನ ಹಿಂದಿನ ಅವಧಿಯ (14-68) ಇತಿಹಾಸ.
ಟ್ಯಾಪಿಟಸ್ ತನ್ನ ಕೃತಿಗಳನ್ನು ರಚಿಸಲು ಅನೇಕ ಆಕರಗಳನ್ನು ಉಪಯೋಗಿಸಿಕೊಂಡಿದ್ದಾನೆ. ಹಿಂದೆಯೋ ರಚಿತವಾಗಿದ್ದ ಕೆಲವು ಗ್ರಂಥಗಳನ್ನು ಉಪಯೋಗಿಸಿ ಕೊಂಡಿರುವುದಲ್ಲದೆ ಸೆನೇಟಿನ ಮತ್ತು ಸರ್ಕಾರಿ ದಾಖಲೆಗಳೇ ಮುಂತಾದವನ್ನು ಅವಲೋಕಿಸಿದ್ದಾನೆ. ತನ್ನ ಸ್ವಂತ ಮತ್ತು ಸ್ನೇಹಿತರ ಅನುಭವಗಳನ್ನೂ ಆಧಾರವಾಗಿಟ್ಟುಕೊಂಡಿದ್ದಾನೆ.
ಟ್ಯಾಸಿಟಸನ ಇತಿಹಾಸದೃಷ್ಟಿ ನಿಷ್ಪಕ್ಷಪಾತವಾದ್ದು. ಇವನು ರೋಮನ್ ಸಾಂಪ್ರದಾಯಿಕ ವರ್ತನೆಯನ್ನೇ ಆಧಾರವಾಗಿಟ್ಟುಕೊಂಡಿದ್ದ; ಇತಿಹಾಸವು ವ್ಯಕ್ತಿ ಪ್ರಧಾನವಾದ್ದೆಂದೇ ಇವನ ಭಾವನೆಯಾಗಿತ್ತು. ಟ್ಯಾಸಿಟಸನಿಗೆ ಇತಿಹಾಸಕಾರನಿಗಿರಬೇಕಾದ ಎಲ್ಲ ಗುಣಗಳೂ ಇದ್ದುವು. ಇವನ ಕಲ್ಪನಾಶಕ್ತಿ ಅಗಾಧವಾದ್ದು. ಇವನ ಗ್ರಂಥಗಳಲ್ಲಿ ವಿಷಯವೈವಿಧ್ಯವನ್ನೂ ವಿಮರ್ಶಾತ್ಮಕವಾದ ಮತ್ತು ವೈಜ್ಞಾನಿಕವಾದ ದೃಷ್ಟಿಯನ್ನೂ ಕಾಣಬಹುದು. ಒಂದು ಸಾವಿರ ವರ್ಷಗಳ ಅನಂತರ, ಪುನರುಜ್ಜೀವನ ಕಾಲದಲ್ಲಿ, ಇವನ ಶೈಲಿಯನ್ನು ಸಾಹಿತಿಗಳು ಸ್ಪಷ್ಟವಾಗಿ ಅಭ್ಯಸಿಸಿದರು. ಫ್ರಾನ್ಸಿನ ಕ್ರಾಂತಿಗಿಂತಲೂ ಹಿಂದೆಯೇ ಇವನ ಇತಿಹಾಸ ಗ್ರಂಥಗಳು ಫ್ರೆಂಚರ ಸಾಹಿತ್ಯದ ಮೇಲೆ ಪ್ರಭಾವ ಬೀರಿದ್ದುವು. ಆಧುನಿಕ ವಿದ್ವಾಂಸರು ಇವನ ಕೃತಿಗಳನ್ನು, ಶೈಲಿಯನ್ನು ಮತ್ತು ಐತಿಹಾಸಿಕ ದೃಷ್ಟಿಯನ್ನು ವಿವರವಾಗಿ ಪರೀಕ್ಷಿಸಿ, ಇವನು ರೋಮಿನ ವಿಮಾರ್ಶಾತ್ಮಕ ದೃಷ್ಟಿಯ ಇತಿಹಾಸಕಾರನೆಂದು ಪರಿಗಣಿಸಿದ್ದಾರೆ. ರೋಮನ್ ಇತಿಹಾಸಕಾರರಲ್ಲಿ ಟ್ಯಾಸಿಟಸ್ ಅಮರನಾಗುತ್ತಾನೆ. (ಎಸ್.ಎಚ್.ಐ.)