ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ರಾಲಪ್, ಆ್ಯಂತೊನಿ

ವಿಕಿಸೋರ್ಸ್ದಿಂದ

ಟ್ರಾಲಪ್, ಆ್ಯಂತೊನಿ 1815-1882. ಇಂಗ್ಲಿಷ್ ಕಾದಂಬರಿಕಾರ. ಲಂಡನ್ನಿನಲ್ಲಿ ಹುಟ್ಟಿ ವಿಂಚೆಸ್ಟರ್, ಹ್ಯಾರೋಗಳಲ್ಲಿ ವಿದ್ಯಾಭ್ಯಾಸ ಮಾಡಿದ. ತಾಯಿ ಫ್ರ್ಯಾನ್ಸಿಸ್ ಟ್ರಾಲಪ್ ವಿಪುಲವಾಗಿ ಬರೆದಿದ್ದಾಳೆ. ತಂದೆ ವಕೀಲಿ ವೃತ್ತಿಯಲ್ಲಿ ಸೋತು ಸಾಲಗಳಿಗೊಳಗಾಗಲು, ಸಂಸಾರ ಬೆಲ್ಜಿಯಮ್ಮಿಗೆ ಹೋಗಬೇಕಾಯಿತು. ಆ್ಯಂತೋನಿ ಅಂಚೆ ಇಲಾಖೆಗೆ ಸೇರಿ ಐರ್ಲೆಂಡಿಗೆ ಹೋಗಿ ರೋಸ್ ಹೆ¸óÉಲ್ಟೈನ್ ಎಂಬಾಕೆಯನ್ನು ಮದುವೆಯಾಗಿ ಕತೆಗಳನ್ನು ಬರೆಯಲಾರಂಭಿಸಿ ಕ್ರಮೇಣ ಪ್ರಸಿದ್ಧನಾದ. ವಿಕ್ಟೋರಿಯ ಕಾಲದ ವಾಸ್ತವ ಜೀವನವನ್ನು ಈತ ಸ್ಪಷ್ಟವಾಗಿ ಚಿತ್ರಿಸಿದ್ದಾನೆ. ಈತನ ಪ್ರಕೃತಿವರ್ಣನೆ ಪಾತ್ರ ಚಿತ್ರಣಗಳಲ್ಲಿ ಅಸಾಧಾರಣವಾದ ಶಕ್ತಿಯಿದೆ ; ಪಾದ್ರಿಗಳ ಜೀವನದ ವರ್ಣನೆ ಬಹಳ ಸಹಜವಾಗಿದೆ. ಕಾದಂಬರಿಯಲ್ಲಿ ಕತೆ ಕಾಲ್ಪನಿಕವಾದರೂ ಅದರಲ್ಲಿ ಬರುವ ವ್ಯಕ್ತಿಗಳು ನಿಜಕ್ಕೂ ಜೀವಿಸಿದ್ದವರಾಗಿರಬೇಕು ಎಂಬ ಅಭಿಪ್ರಾಯ ಓದುಗರಲ್ಲಿ ಮೂಡುವಂತೆ ಬರೆಯುವವನೇ ನಿಜವಾದ ಕತೆಗಾರನೆಂದು ಆ್ಯಂತೋನಿಯ ಅಭಿಪ್ರಾಯ.

ಇಂಗ್ಲೆಂಡಿನ ಚರ್ಚಿನ ಪಾದ್ರಿಗಳೇ ಪ್ರಧಾನವಾಗಿರುವ ಬಾರ್ಚೆಸ್ಟರ್ ಕಥಾಮೂಲೆಯಿಂದ ಈತ ಪ್ರಸಿದ್ಧಿಗೆ ಬಂದ. ಈ ಸರಣಿಯಲ್ಲಿ ಮೂಖ್ಯವಾದ ಕಾದಂಬರಿಗಳು ಇವು : ದಿ ವಾರ್ಡನ್ (1855), ಬಾರ್ಚೆಸ್ಟರ್ ಟವರ್ಸ್ (1857), ಡಾಕ್ಟರ್ ತಾರನ್ (1858), ಫ್ರ್ಯಾಮ್ಲಿ ಪಾರ್ಸನೇಜ್ (1861), ದಿ ಸ್ಮಾಲ್‍ಹೌಸ್ ಎಟ್ ಆ್ಯಲಿಂಗ್‍ಟನ್ (1864), ದಿ ಲ್ಯಾಸ್ಟ್ ಕ್ರಾನಿಕಲ್ ಆಫ್ ಬಾರ್ಸೆಟ್ (1867).

ರಾಜಕೀಯ ಹಿನ್ನೆಲೆಯ ಕಾದಂಬರಿಗಳಿವು : ಫಿನೆಯಾಸ್ ಫಿನ್ (1869), ಫಿನೆಯಾಸ್ ರೀಡಕ್ಸ್ (1876), ದಿ ಯುಸ್ಟೇಸ್ ಡಯಮಂಡ್ಸ್ (1873).

ಈತ ಕೆಲವು ಪ್ರಬಂಧಗಳನ್ನೂ ಪ್ರವಾಸ ಕಥನಗಳನ್ನೂ ಬರೆದಿದ್ದಾನೆ. ಈತನ ಕಾದಂಬರಿಗಳ ಸಂಖ್ಯೆ 50ಕ್ಕೂ ಮೀರಿದೆ. ಪುಸ್ತಕ ಪ್ರಕಟನೆಯಿಂದಲೇ ಈತ 70000 ಪೌಂಡು ಗಳಿಸಿದನೆಂದು ಹೇಳಲಾಗಿದೆ. 1883ರಲ್ಲಿ ಈತನ ಆತ್ಮಕಥೆ ಹೊರಬಂತು. ಎರಡನೆಯ ಮಹಾಯುದ್ಧದ ಕಾಲದ ಈತನ ಕೃತಿಗಳ ಬಗ್ಗೆ ಹೊಸ ಆಸಕ್ತಿ ಮೂಡಿತೆಂದು ಸಾಹಿತ್ಯಚರಿತ್ರೆ ಹೇಳುತ್ತದೆ. (ಎಚ್.ವಿ.ಎಸ್.)