ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಠಾಕೂರ್, ರವೀಂದ್ರನಾಥ

ವಿಕಿಸೋರ್ಸ್ದಿಂದ

ಠಾಕೂರ್, ರವೀಂದ್ರನಾಥ 1861-1941. ಮಹಾನ್‍ಕವಿ, ಅಪ್ರತಿಮ ದೇಶಪ್ರೇಮಿ, ಸೋಪಜ್ಞ ವೇದಾಂತಿ, ಖ್ಯಾತ ಶಿಕ್ಷಣವೇತ್ತ, ನುರಿತ ಕಲೆಗಾರ, ಇವೆಲ್ಲಕ್ಕೂ ಮಿಗಿಲಾಗಿ ಭಾರತೀಯ ಆದರ್ಶಗಳ, ಜೀವನದ ಮೌಲ್ಯಗಳ ಸಂಕೇತ. ನಾಡಿನ ಸಾಂಸ್ಕøತಿಕ ಜೀವನವನ್ನು ರೂಢಿಸಿದ ಶ್ರೇಷ್ಠ ಶಿಲ್ಪಿ, ಕಲ್ಕತ್ತದ ದ್ವಾರಕಾನಾಥ ಠಾಕೂರ್ ಬೀದಿಯಲ್ಲಿರುವ ಜೊರ್‍ಸಂಕೊ ಎಂಬ ತಮ್ಮ ಪೂರ್ವಿಕರ ಮನೆಯಲ್ಲಿ ಮೇ 7. 1861ರಂದು ಶಾರದಾದೇವಿ ಹಾಗೂ ದೇವೇಂದ್ರನಾಥ ಠಾಕೂರರ ಹದಿನಾಲ್ಕನೆಯ ಮಗನಾಗಿ ಜನಿಸಿದರು. ಈಸ್ಟ್ ಇಂಡಿಯ ಕಂಪನಿಯವರು ಕಲ್ಕತ್ತ ನಗರವನ್ನು ಸ್ಥಾಪಿಸಿದಾಗ ಜೊಸೂರಿನಿಂದ ಪಿರಾಲಿ ಬ್ರಾಹ್ಮಣ ಕುಟುಂಬದವರಾದ ಠಾಕೂರರೂ ಅಲ್ಲಿ ಬಂದು ನೆಲೆಸಿದರು. ಹೊಸ ವಿಚಾರಧಾರೆಯ ಪ್ರವರ್ತಕರಾಗಿ, ವಿವಿಧ ವಿದೇಶಿ ಮೂಲಗಳಿಂದ ತಮಗೆ ಬೇಕೆನಿಸಿದ್ದನ್ನು ಹೀರಿ ಠಾಕೂರರ ದೊಡ್ಡ ಮನೆತನ ಬೆಳೆಯಿತು. ಪರ್ಷಿಯನ್ನರ ಕಲಾದೃಷ್ಟಿ, ಹಿಂದೂಗಳ ದಾರ್ಶನಿಕ ದೃಷ್ಟಿ ಹಾಗೂ ಐರೋಪ್ಯರ ವ್ಯವಹಾರ-ವಾಸ್ತವಿಕದೃಷ್ಟಿಗಳ ಸಂಗಮದಂತಿತ್ತು ಅವರ ಗೃಹ. ರವೀಂದ್ರರ ತಾತ ದ್ವಾರಕಾನಾಥ ಠಾಕೂರ್ ಕಳೆದ ಶತಮಾನದ ಆದಿಭಾಗದಲ್ಲಿ ಬಂಗಾಳದಲ್ಲೆ ಅತಿ ದೊಡ್ಡ ಶ್ರೀಮಂತರಾಗಿದ್ದರು. ಅವರ ಐಶ್ವರ್ಯ ಹಾಗೂ ವೈಭವಯುತ ಜೀವನದ ಫಲವಾಗಿ ಅವರನ್ನು ಪ್ರಿನ್ಸ್ (ರಾಜಕುಮಾರ) ಎಂದು ಕರೆಯುತ್ತಿದ್ದರು. ಅವರು ರಾಜಾರಾಮ ಮೋಹನರಾಯರ ಅನುಯಾಯಿಗಳಾಗಿದ್ದರು. ಅವರ ಮಗ ಮಹರ್ಷಿ ದೇವೇಂದ್ರನಾಥ ಠಾಕೂರ್ ಬ್ರಹ್ಮಸಮಾಜದ ಮುಂದಾಳು. ಸ್ವಪ್ರತಿಭೆ, ಜ್ಞಾನಸಂಪತ್ತು ಹಾಗೂ ನೀತಿನಿಷ್ಠೆಗಳಿಂದಾಗಿ ಮಹರ್ಷಿಗಳೆಂದು ಖ್ಯಾತರಾದವರು.

ರವೀಂದ್ರರ ಸಹೋದರ ಸಹೋದರಿಯರಲ್ಲೂ ಖ್ಯಾತರಾದವರಿದ್ದಾರೆ. ರವೀಂದ್ರರ ಅಗ್ರಜ ದ್ವಿಜೇಂದ್ರನಾಥರು ತತ್ತ್ವಜ್ಞಾನಿ ಹಾಗೂ ಉತ್ತಮ ಗದ್ಯಲೇಖಕ, ಇನ್ನೊಬ್ಬ ಅಣ್ಣ ಸತ್ಯೇಂದ್ರನಾಥರು ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧಿಕಾರ ಗಳಿಸಿದ ಮೊಟ್ಟ ಮೊದಲ ಭಾರತೀಯ ಜ್ಯೋತೀಂದ್ರನಾಥ ಠಾಕೂರ್ ಚಿತ್ರಕಲಾಪ್ರೇಮಿ ಹಾಗೂ ಚಿತ್ರವಿಮರ್ಶಕ. ರವೀಂದ್ರರ ಅಕ್ಕಂದಿರೊಬ್ಬರು ಗಣ್ಯ ಸಂಸ್ಕøತ ವಿದುಷಿ. ಸ್ವಭಾವತಃ ಕವಿಗಳೂ ಕಲೋಪಾಸಕರೂ ಸೌಂದರ್ಯಾರಾಧಕರೂ ಸತ್ಯಾನ್ವೇಷಕರೂ ಆಗಿದ್ದ ರವೀಂದ್ರನಾಥ ಠಾಕೂರ್ ಬೆಳದದು ಇಂಥ ಕೌಟುಂಬಿಕ ಪರಿಸರದಲ್ಲಿ, ಇವರ ಶೈಶವ ಹಾಗೂ ಬಾಲ್ಯದ ದಿನಗಳು ಮನೆಯ ಸೇವಕರ ಪೋಷಣೆಯಲ್ಲಿ, ಎಳೆಹರೆಯದ ಮೇಲೆ ಪರಿಣಾಮ ಬೀರುವಂಥ ವಾತಾವರಣದಲ್ಲಿ ಕಳೆದವು. ಬ್ರಜೇಶ್ವರನೆಂಬ ಸೇವಕ ಕೃತ್ತಿವಾಸ ರಾಮಾಣವನ್ನು ಓದುವುದು, ಮನೆಯ ಆಶ್ರಿತರಾದ ಕಿಶೋರಿ ಚಟರ್ಜಿಯವರು ಸುಶ್ರಾವ್ಯವಾಗಿ ಹಾಡುವುದು ರವೀಂದ್ರರ ಮೃದು ಮನಸ್ಸಿನ ಮೇಲೆ ತುಂಬ ಪರಿಣಾಮವನ್ನುಂಟುಮಾಡುತ್ತಿತ್ತು. ಪುಸ್ತಕಪ್ರೇಮಿ ಶಾರದಾದೇವಿಯವರೂ ರವೀಂದ್ರರ ತೊದಲ್ನುಡಿಗಳಿಗೆ ಆಗಾಗ ಗಮನ ನೀಡುತ್ತಿದ್ದುದುಂಟು. ಎಲ್ಲರಿಗಿಂತ ಹೆಚ್ಚಿನ ಪ್ರಭಾವ ಬೀರಿದವರೆಂದರೆ ಜ್ಯೋತಿರಿಂದ್ರನಾಥರು. ಕವಿ ರವೀಂದ್ರ ಸ್ಫೂರ್ತಿಯ ಸೆಲೆಯೊಡೆಯಲು ಅವರೇ ಕಾರಣರು. ತಮ್ಮ ಒಂಬತ್ತನೆಯ ವಯಸ್ಸಿನಲ್ಲೇ ರವೀಂದ್ರರು ಬಂಗಾಳಿ ಸಾಹಿತ್ಯದ ಸುಪ್ರಸಿದ್ಧ ಕಾವ್ಯವಾದ ಮೇಘನಾದವಧ ಓದತೊಡಗಿದ್ದರು. ಅವರಿಗೆ ಸುಮಧುರ ಕಂಠವಿತ್ತು, ಸಂಗೀತದ ಮೇಲೆ ಪ್ರೀತಿಯಿತ್ತು, ಇಂಥ ಹುಟ್ಟು ಪ್ರತಿಭಾವಂತ ಬಾಲಕನ ಶಾಲಾದಿನಗಳೆಲ್ಲ ಸಪ್ಪೆಯೆಂದರೂ ಸರಿ, ಶಾಲೆಯ ಸೆರೆಯಿಂದ ಬಿಡಿಸಿಕೊಂಡರೆ ಸಾಕೆನಿಸುತ್ತಿತ್ತು. 1868ರಿಂದ 1874ರ ವರೆಗೆ ಆರು ವರ್ಷಗಳಲ್ಲಿ ಕನಿಷ್ಠ ನಾಲ್ಕುಸಲ ಶಾಲೆಗಳನ್ನು ಬದಲಾಯಿಸಬೇಕಾಯಿತು. ಓರಿಯಂಟಲ್ ಸೆಮಿನರಿ, ನಾರ್ಮಲ್ ಸ್ಕೂಲ್, ಬೆಂಗಾಲ್ ಅಕಾಡಮಿ-ಹೀಗೆ ಯಾವ ಶಾಲೆಯ ವ್ಯಾಸಂಗಕ್ರಮವೂ ರವೀಂದ್ರರಿಗೆ ಹಿಡಿಸಲಿಲ್ಲ. ಅವರ ಗ್ರಹಣ ಶಕ್ತಿ ಅತಿಸೂಕ್ಷ್ಮವಾಗಿತ್ತು. ತಮ್ಮ ದೈನಂದಿನ ಅಭ್ಯಾಸದ ಜೊತೆಗೆ ಅದ್ಭುತ ಮಾಯಾ ಕಥೆಗಳನ್ನು ಓದುತ್ತಿದ್ದರು. ರಾಬಿನ್‍ಸನ್ ಕ್ರೂಸೊ ಅವರಿಗೆ ತುಂಬಾ ಮೆಚ್ಚಿಯಾಗಿತ್ತು. ಹೀಗೆ ಶಾಲೆಯ ಓದಿಗಿಂತ ಪರಂಪರಾಗತವಾಗಿ ಬಂದ ವಂಶದ ಸದ್ಗುಣಗಳಿಂದ ಹಾಗೂ ಹಿರಿಯರ ಮೇಲ್ಪಂಕ್ತಿಯಿಂದ ಅವರ ಬದುಕು ಪುಷ್ಟವಾಯಿತು. (ಎಚ್.ಆರ್.ಆರ್.ಬಿ.; ವಿ.ಕೆ.)

ಹನ್ನೆರಡು ವರ್ಷದ ಬಾಲಕನಾಗಿದ್ದಾಗ (1873) ರವೀಂದ್ರರಿಗೆ ಉಪನಯನವಾಯಿತು. ಅನಂತರ ತಂದೆಯವರೊಟ್ಟಿಗೆ ಬೋಲ್‍ಪುರ, ಅಮೃತಸರ, ಡಾಲ್‍ಹೌಸಿ ಮುಂತಾದೆಡೆಗಳಲ್ಲಿ ಪ್ರವಾಸಮಾಡಿದರು. ಆಗ ಮಹರ್ಷಿ ದೇವೇಂದ್ರರ ಸಂಪೂರ್ಣ ಪ್ರಭಾವಕ್ಕೊಳಗಾದರು. ರವೀಂದ್ರ ಸಂಗೀತ ಹಾಗೂ ಕಾವ್ಯ ಪ್ರತಿಭೆ ಮನೆಯವರಿಗೆ ತಿಳಿಯಿತು; ಎಲ್ಲ ರೀತಿಯ ಪ್ರೋತ್ಸಾಹ ದೊರಕಿತು. 1874ರಲ್ಲಿ ತತ್ತ್ವಬೋಧಿನಿ ಪತ್ರಿಕೆಯಲ್ಲಿ ಅವರ ಚೊಚ್ಚಲ ಕವನ ಅಭಿಲಾಷಾ ಪ್ರಕಟವಾಯಿತು. ಆಗ ಅವರ ವಯಸ್ಸು ಹನ್ನೆರಡು. ಅಷ್ಟು ಚಿಕ್ಕವಯಸ್ಸಿನಲ್ಲಿ ಕಾವ್ಯರಚನೆಗೆ ಕೈಹಾಕಿದವರು ವಿರಳ, ಹದಿನಾಲ್ಕು ವರ್ಷದ ಬಾಲಕರಾಗಿದ್ದಾಗಲೆ ಜನತೆಯೆದುರು ಕವಿಯಾಗಿ ಅವರು ತಮ್ಮ ಕವನಗಳನ್ನು ಹಾಡಿದರು. ಸ್ವದೇಶಿ ಪುನರುತ್ಥಾನದ ಅಂದಿನ ದಿನಗಳಲ್ಲಿ ದೇಶಭಕ್ತರ ಹಾಗೂ ಕವಿಗಳ ಕೂಟವಾದ ಒಂಬತ್ತನೆಯ ಹಿಂದೂ ಮೇಳದಲ್ಲಿ ಭಾರತದ ಜಯ ಎಂಬ ತಮ್ಮ ಪ್ರಸಿದ್ಧ ಗೀತೆಯೊಂದನ್ನು ಹಾಡಿದರು. ಅವರ ಬಾಲಬರೆವಣಿಗೆಗಳು ಜ್ಞಾನಾಂಕುರ, ಭಾರತಿ ಎಂಬ ಹೊಸ ಪತ್ರಿಕೆಗಳಲ್ಲೂ ಪ್ರಕಟವಾದುವು. ಕಾಡಿನ ಹೂವು (ಬನ್ ಫೂಲ್) ಅವರ ಮೊದಲ ಕಥನ ಕವನ-ಸಾವಿರದ ಐದುನೂರು ಸಾಲುಗಳಿಗೂ ಮೀರಿದ ಎಂಟು ಅಧ್ಯಾಯಗಳ ಸುದೀರ್ಘ ಕಥೆ. ಇವನ್ನೆಲ್ಲ ಠಾಕೂರರು ಭಾನುಸಿಂಹ ಠಾಕೂರನ ಪದಾವಳಿ ಎಂಬುದಾಗಿ ಅನಂತರ ಪ್ರಕಟಿಸಿದರು. ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾದ ರವೀಂದ್ರರ ಮೊದಲ ಪದ್ಯವೆಂದರೆ ಕವಿಯ ಕಥೆ (ಕವಿಕಾಹಿನಿ). ಮಾತೃವಿಯೋಗಾನಂತರ (1875) ರವೀಂದ್ರರು ಜ್ಯೋತಿರಿಂದ್ರನಾಥ ಹಾಗೂ ಕಾದಂಬರೀ ದೇವಿಯರ ಪೋಷಣೆಯಲ್ಲಿ ಬೆಳೆದರು. 1877ರಲ್ಲಿ ಜ್ಯೋತಿರಿಂದ್ರರು ರಚಿಸಿದ ಒಂದು ಪ್ರಹಸನದಲ್ಲಿ ರವೀಂದ್ರರೂ ಪಾತ್ರವಹಿಸಿದ್ದರು. ಮರುವರ್ಷ ಸತ್ಯೇಂದ್ರನಾಥರೊಟ್ಟಿಗೆ ಇಂಗ್ಲೆಂಡಿಗೆ ತೆರಳಿದರು. ಲಂಡನ್ ವಿಶ್ವವಿದ್ಯಾನಿಯದ ಕಾಲೇಜಿನಲ್ಲಿ ಹೆನ್ರಿ ಮಾರ್ಲೆಯವರ ಮಾರ್ಗದರ್ಶನದಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದರು. ಆಗ ಬರೆದ ಪತ್ರಗಳಲ್ಲಿ ಲಂಡನ್ನಿನ ಜೀವನದ ಬಗೆಗೆ ನಿರ್ದಾಕ್ಷಿಣ್ಯವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದರಿಂದ ಕಸಿವಿಸಿಗೊಂಡ ಹಿರಿಯರು 1880ರಲ್ಲಿ ಠಾಕೂರರನ್ನು ವಾಪಸ್ಸು ಕರೆಸಿಕೊಂಡರು. ಇಂಗ್ಲೆಂಡಿನಲ್ಲಿದ್ದಾಗ ಭಗ್ನ ಹೃದಯ ಎಂಬ ಗೀತನಾಟಕವನ್ನು ಬರೆಯಲು ಆರಂಭಿಸಿದ್ದನ್ನು ಇಲ್ಲಿ ನೆನೆಯಬಹುದು. 1881ರಲ್ಲಿ ತಾವು ಬರೆದ ಪತ್ರಗಳ ಸಂಕಲನವನ್ನು ಪ್ರಕಟಿಸಿದರು (ಯೂರೋಪ್ ಪ್ರವಾಸೀರ್ ಪತ್ರ). ಇದು ರವೀಂದ್ರರ ಮೊದಲ ಗದ್ಯಕೃತಿಯಷ್ಟೆ ಅಲ್ಲ ಆಡುಮಾತಿನಲ್ಲಿ ಬರೆದ ಚೊಚ್ಚಲ ಕೃತಿಯೂ ಹೌದು. ವಾಲ್ಮೀಕಿ ಪ್ರತಿಭಾ ಹಾಗೂ ಕಾಲಮೃಗಯಾ ಇದೇ ಕಾಲದಲ್ಲಿ ರಚಿತವಾದ ಗೀತನಾಟಕಗಳು. ಇವರ ಮೊದಲ ಕವನ ಸಂಕಲನವಾದ ಸಂಧ್ಯಾಗೀತದಲ್ಲಿ ಬಂಗಾಳಿ ಕಾವ್ಯ ಹೊಸಗತಿಯನ್ನು ಪಡೆದಿರುವುದನ್ನು ಗಮನಿಸಬಹುದು. ಇದೇ ವೇಳೆಗೆ ರುದ್ರಚಂದ್ರ ಎಂಬ ಹದಿನಾಲ್ಕು ದೃಶ್ಯಗಳ ನಾಟಕ ಬರೆದರು. ಅಲ್ಲದೆ ಕಲ್ಕತ್ತೆಯ ಮೆಡಿಕಲ್ ಕಾಲೇಜಿನ ಭಾಷಣಮಂದಿರದಲ್ಲಿ ಸಂಗೀತ ಮತ್ತು ಭಾವದ ಬಗೆಗೆ ಮೊತ್ತ ಮೊದಲ ಸಾರ್ವಜನಿಕ ಉಪನ್ಯಾಸ ನೀಡಿದರು. ಬ್ಯಾರಿಸ್ಟರ್ ಪದವಿ ಪಡೆಯಲೆಂದು ಹಿರಿಯರು ರವೀಂದ್ರರನ್ನು ಪುನಃ ಲಂಡನ್ನಿಗೆ ಕಳಿಸಿದರು. ಅಲ್ಲಿಂದ ಮರಳಿ ಬರುವಾಗ ರವೀಂದ್ರರು ಮದರಾಸಿನಲ್ಲಿಳಿದು ಜ್ಯೋತೀಂದ್ರನಾಥರ ಮನೆಯಲ್ಲಿ ಕೆಲಕಾಲ ತಂಗಿದ್ದರು (1882). ಆಗ ಅವರ ಜೀವನದಲ್ಲಿ ವಾಹತ್ತ್ವಪೂರ್ಣವೆನಿಸಿದ ಘಟನೆಯೊಂದು ನಡೆಯಿತು. ಅವರ ಕಾವ್ಯ ಜೀವನದ ನವೋದಯದ ಬಾಗಿಲು ತೆರೆಯಿತು. ದಿವ್ಯದರ್ಶನವುಂಟಾಯಿತು. ನಿರ್ಝರಿಯ ಸ್ವಪ್ನಭಂಗ ಎಂಬ ಪ್ರಖ್ಯಾತ ಗೀತೆಯನ್ನು ರವೀಂದ್ರರು ಬರೆದದ್ದು ಆ ದಿನಗಳಲ್ಲೆ. ಅಲ್ಲಿಂದ ನಿಸರ್ಗದ ನೆಲೆವೀಡಾದ ಕಾರವಾರದಲ್ಲಿ ಅಣ್ಣ ಸತ್ಯೇಂದ್ರನಾಥರ ಮನೆಯಲ್ಲಿ ಸ್ವಲ್ಪಕಾಲ ತಂಗಿದ್ದು ಕಾರವಾರದ ಸುಂದರ ಕಡಲತೀರದಲ್ಲಿ ಬೆಳುದಿಂಗಳ ರಾತ್ರಿಗಳನ್ನು ಕಳೆದರು. ಅಲ್ಲಿಯ ನಿಸರ್ಗ ರಮಣೀಯತೆ ಪ್ರಕೃತಿರ್ ಪರಿಶೋಧ್ ಎಂಬ ನಾಟಕ ಬರೆಯಲು ಪ್ರೇರಣೆ ನೀಡಿತು. 1883ರಲ್ಲಿ ಕಲ್ಕತ್ತಕ್ಕೆ ಮರಳಿ ಬಂದವರು ಡಿಸೆಂಬರ್ 9ರಂದು ಖುಲ್ನಾದ ವೇಣಿಮಾಧವ ರಾಯ್‍ಚೌಧುರಿಯ ಪುತ್ರಿ ಮೃಣಾಲಿನಿ ದೇವಿಯನ್ನು ವಿವಾಹವಾದರು. ಅನೇಕ ಚಿತ್ರಗಳು ಮತ್ತು ಹಾಡುಗಳು ಈ ಕಾಲದಲ್ಲಿ ರಚಿತವಾದುವು. 1884ರಲ್ಲಿ ತಮ್ಮ ಪ್ರೀತಿಯ ಚಿಕ್ಕ ಅತ್ತಿಗೆ ಕಾದಂಬರಿ ದೇವಿಯವರ ಮರಣ ರವೀಂದ್ರರ ಮನವನ್ನು ಕಲಕಿತು. ಅದೇ ವರ್ಷ ಆದಿ ಬ್ರಹ್ಮಸಮಾಜದ ಕಾರ್ಯದರ್ಶಿಗಳಾದರು; ಸಮಕಾಲೀನ ಬಂಗಾಳಿ ಸಾಹಿತ್ಯದ ನೇತಾರರಾಗಿದ್ದ ಬಂಕಿಮಚಂದ್ರ ಚಟರ್ಜಿಯವರೊಡನೆ ಹಿಂದೂ ಧರ್ಮದ ಆದರ್ಶಗಳ ಬಗೆಗೆ ಬಿರುಸಿನ ಚರ್ಚೆಮಾಡಿದ್ದುಂಟು. ಅತ್ತಿಗೆ ಆರಂಭಿಸಿದ ಸಚಿತ್ರ ಮಾಸಪತ್ರಿಕೆಯಾದ ಬಾಲಕಕ್ಕೆ (1885) ರವೀಂದ್ರರು ನೆರವು ನೀಡಿದರು, ಇದಕ್ಕಾಗಿ ಅನೇಕ ಪದ್ಯಗಳನ್ನೂ ಲೇಖನಗಳನ್ನೂ ಹಾಸ್ಯಚಿತ್ರಗಳನ್ನೂ ರಾಜರ್ಷಿ ಎಂಬ ಧಾರವಾಹಿ ಕಾದಂಬರಿಯನ್ನೂ ಬರೆದುಕೊಟ್ಟರು. ಆಗಿನ ಕಾಲದಲ್ಲಿ ರವೀಂದ್ರರನ್ನು ಬಂಗಾಳದ ಷೆರ್ಲೀ ಎಂದು ಕರೆಯುತ್ತಿದ್ದರು.

ರವೀಂದ್ರರ ಇಪ್ಪತ್ತೈದನೆಯ ವಯಸ್ಸಿನಲ್ಲಿ ಮೊದಲ ಮಗು ಮಾಧುರೀಲತಾ ಜನಿಸಿತು. ಅದೇ ವರ್ಷ ದಾದಾಭಾಯಿ ನವರೋಜಿಯವರ ಅಧ್ಯಕ್ಷತೆಯಲ್ಲಿ ಕೂಡಿದ ಅಖಿಲಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ದ್ವಿತೀಯ ಅಧಿವೇಶನದಲ್ಲಿ ರವೀಂದ್ರರು ಗೀತೆಯೊಂದನ್ನು ತಾವೇ ರಚಿಸಿ ಹಾಡಿದ್ದರು. ರವೀಂದ್ರರ ಕೃತಿಗಳ ಮೇಲೆ ಹಳ್ಳಿಯ ಹಾಡುಗಾರರ ಪ್ರಭಾವ ಗಣನೀಯ. ಅಂತೆಯೆ ಕ್ಲಿಷ್ಟತರವಾದ ಭಾವಗಳನ್ನೂ ಕವಿ ಅತಿ ಸರಳಭಾಷೆಯಲ್ಲೇ ವ್ಯಕ್ತಪಡಿಸುತ್ತಿದ್ದರು. 1887-90ರ ಸುಮಾರಿಗೆ ರವೀಂದ್ರರ ಸಾಹಿತ್ಯ ಪ್ರತಿಭೆ ವಿವಿಧ ಮುಖವಾಗಿ ಹರಡಿತು. `ಮಾನಸೀ (ಕವನಸಂಕಲನ), `ಮಯೂರ್ ಖೇಲಾ (ಚಿಕ್ಕಗೀತ ನಾಟಕ), `ಕಡಿ ಓ ಕೋಮಲ (ಕವನಸಂಕಲನ),- ಮುಂತಾದ ಸಮರ್ಥಕೃತಿಗಳನ್ನಿಲ್ಲಿ ಹೆಸರಿಸಬಹುದು. ಇವುಗಳಲ್ಲಿ ಸಮಕಾಲೀನ ಸಾಮಾಜಿಕ ಸ್ಥಿತಿಗಳಲ್ಲದೆ ವಿಡಂಬನೆಗೂ ಹಾಸ್ಯಕ್ಕೂ ಸ್ಥಾನವಿದೆ. 1888ರಲ್ಲಿ ರವೀಂದ್ರರ ಜ್ಯೇಷ್ಠಪುತ್ರ ರತೀಂದ್ರನಾಥ ಜನಿಸಿದ. ಎರಡು ವರ್ಷಗಳ ಅನಂತರ ರವೀಂದ್ರರು ಇಂಗ್ಲೆಂಡಿಗೆ ಪುನಃ ಭೇಟಿಕೊಟ್ಟರು. ಅಲ್ಲಿಂದ ಮರಳಿ ಬಂದವರು ವ್ಯವಹಾರದ ಅನುಕೂಲತೆಯ ದೃಷ್ಟಿಯಿಂದ ಶೆಲೈಡದಲ್ಲಿ ನೆಲೆಸಿದರು. ಅಲ್ಲಿರುವಾಗ ಚಿರಕುಮಾರ ಸಭಾ (ವಿಚಿತ್ರ ರೀತಿಯ ಹಾಸ್ಯನಾಟಕ), ವಿಸರ್ಜನ, ನೃತ್ಯನಾಟ್ಯ ಚಿತ್ರಾಂಗದ ಮುಂತಾದ ನಾಟಕಗಳನ್ನೂ ಚಿನ್ನದದೋಣಿ, ಚಿತ್ರಾ, ಚೈತಾಲಿ ಮುಂತಾದ ಕವನಸಂಕಲನಗಳನ್ನೂ ಊರ್ವಶಿ ಎಂಬ ಪ್ರಖ್ಯಾತ ಕವಿತೆಯನ್ನೂ ಬರೆದರು. ರವೀಂದ್ರರ ಸಾರ್ವಜನಿಕ ಜೀವನದ ಚಟುವಟಿಕೆಗಳು ಕಾವ್ಯಸ್ಫೂರ್ತಿಗೆ ಅಡ್ಡಿಬರಲಿಲ್ಲ. ಈ ಕಾಲದಲ್ಲಿ ರಚಿತವಾದ ಕಲ್ಪನಾ, ಕಥಾಕಾಯಿನಿ, ಕ್ಷಣಿಕಾ, ಕನಿಕಾ ಎಂಬ ಕ-ಪಂಚಕಗಳು ರವೀಂದ್ರರ ಕಾವ್ಯದ ಬೆಳವಣಿಗೆಯಲ್ಲಿ ಒಂದು ನಿರ್ದಿಷ್ಟ ಹಂತವನ್ನು ಸೂಚಿಸುತ್ತವೆ.

ರವೀಂದ್ರನಾಥರು ತಮ್ಮ ಕಾಲದ ಭಾರತದ ಸಾಮಾಜಿಕ ಮೂಲಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಮಗ್ನರಾದರು. ದೇಶದ ದೋಷಪೂರ್ಣ ಶಿಕ್ಷಣಪದ್ಧತಿಯನ್ನು ಆದಷ್ಟುಬೇಗ ಶುದ್ಧೀಕರಿಸಬೇಕೆಂದು ಯೋಚಿಸಿದರು. ಈ ರಚನಾತ್ಮಕ ಕಾರ್ಯವನ್ನು ಅವರು ತಮ್ಮ ಮನೆಯಿಂದಲೇ ಆರಂಭಿಸಿದರು. ತಮ್ಮ ಮಕ್ಕಳನ್ನು ಬೇರೆ ಯಾವುದೆ ಶಾಲೆಗಳಿಗೆ ಕಳಿಸದೆ ಅವರಿಗಾಗಿ ತಮ್ಮ ಮನೆಯಲ್ಲೇ ಶಾಲೆಯೊಂದನ್ನು ಆರಂಭಿಸಿದರು. ಇದೇ ಕಾಲಕ್ಕೆ ತಪೋವನ ಶಾಲೆಯ ಕಲ್ಪನೆ ಮೂಡಿತು. ಪ್ರಾಚೀನ ಗುರುಕುಲಪದ್ಧತಿಯಂತೆ ಪ್ರಕೃತಿಯ ಸುಂದರ ತಾಣದ ಮಧ್ಯೆ ಸ್ವಚ್ಛಂದ ವಾತಾವರಣದಲ್ಲಿ ಜೀವನ ಶಿಕ್ಷಣ ಪಡೆಯುವ ಸೌಲಭ್ಯವನ್ನು ಕುರಿತು ಯೋಚಿಸತೊಡಗಿದರು. ಡಿಸೆಂಬರ್ 22, 1901ರಲ್ಲಿ ಜೋಲ್ಟುರದ ಸಮೀಪದಲ್ಲಿರುವ ಶಾಂತಿನಿಕೇತನದಲ್ಲಿ ಬ್ರಹ್ಮಚರ್ಯಾಶ್ರಮವನ್ನು ಸ್ಥಾಪಿಸಿದರು. ಇದೇ ಮುಂದೆ ವಿಶ್ವಭಾರತಿ ಎಂಬ ವೃಕ್ಷವಾಗಿ ಲೋಕಪ್ರಸಿದ್ಧವಾಯಿತು. ಆ ಮೇಲೆ ಬಂಕಿಮಚಂದ್ರರ ವಂಗದರ್ಶನ ಎಂಬ ನಿಯತಕಾಲಿಕೆಯ ಸಂಪಾದಕರಾದರು. ಅದರಲ್ಲಿ ವಿನೋದಿನಿ ಕಾದಂಬರಿ ಕ್ರಮಶಃ ಪ್ರಕಟವಾಯಿತು. (ಇದೇ ವೇಳೆ ನೈವೇದ್ಯ ಎಂಬ ಭಕ್ತಿಗೀತಗಳ ಸಂಕಲನ ಪ್ರಕಟವಾಯಿತು). ಭಾರತೀಯ ಭಾಷೆಗಳಲ್ಲಿ ಅದುವರೆಗೆ ಪ್ರಕಟವಾದ ಮನೋವೈಜ್ಞಾನಿಕ ಕಾದಂಬರಿಗಳಲ್ಲಿ ಇದು ಮೊದಲನೆಯದು.

ಈ ಶತಮಾನದ ಆರಂಭದಲ್ಲಿ ರವೀಂದ್ರರ ಜೀವನದಲ್ಲಿ ಕಷ್ಟಗಳ ಸುರಿಮಳೆ ಆರಂಭವಾಯಿತು. ಆರ್ಥಿಕ ಮುಗ್ಗಟ್ಟಿನಿಂದಾಗಿ ತಾವು ಸ್ಥಾಪಿಸಿದ ಶಿಕ್ಷಣಸಂಸ್ಥೆಯನ್ನು ಕೆಲಕಾಲ ಮುಚ್ಚಬೇಕಾಯಿತು. ಧರ್ಮಪತ್ನಿ ಮೃಣಾಲಿನಿ ತೀರಿಕೊಂಡಳು (1902). ಮರುವರ್ಷ ಪುತ್ರಿ ರೇಣುಕ ಸಾವನ್ನಪ್ಪಿದಳು (1903). ಅಲ್ಲದೆ ನೆಚ್ಚಿನ ಶಿಷ್ಯ ಅಸಾಧಾರಣ ಪ್ರತಿಭೆಯ ಸತೀಶ್‍ಚಂದ್ರರಾಯ್ ಶಾಂತಿನಿಕೇತನದಲ್ಲಿ ತೀರಿಕೊಂಡರು (1904). ಮರುವರ್ಷವೇ ರವೀಂದ್ರರ ತೀರ್ಥರೂಪರೂ ಸ್ವರ್ಗಸ್ಥರಾದರು (1905). ಇಷ್ಟೆಲ್ಲ ಸಂಕಷ್ಟಗಳ ಸಂಧಿಯಲ್ಲೂ ರವೀಂದ್ರರ ಲೇಖನಿಗೆ ಬಿಡುವಿರಲಿಲ್ಲ. ಸ್ಮರಣ, ಶಿಶು, ನೌಕಾ ಡುಬಿ ಎಂಬ ಕೃತಿಗಳು ಪ್ರಕಟವಾದವು. ಆಗತಾನೆ ಆರಂಭವಾದ ಸ್ವದೇಶೀ ಚಳವಳಿಯನ್ನು ಬೆಂಬಲಿಸಿ 1904ರಲ್ಲಿ ಕಲ್ಕತ್ತದ ಮಿನರ್ವ ಥಿಯೇಟರಿನಲ್ಲಿ ಸ್ವದೇಶೀ ಸಮಾಜ ಎಂಬ ವಿಷಯವನ್ನು ಕುರಿತು ಮಾತನಾಡುತ್ತ ಲಾರ್ಡ್ ಕಜರ್ûನ್ನನ ವಿಭಜಿಸಿ ಆಳುವ ನೀತಿಯನ್ನು ತೀವ್ರವಾಗಿ ಖಂಡಿಸಿದರು.

1906ರಲ್ಲಿ ರವೀಂದ್ರರು ಕಾಸಿಂ ಬeóÁರಿನಲ್ಲಿ ನಡೆದ ಮೊದಲ ಬಂಗಾಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಆ ವೇಳೆಗೆ ಖೇಯಾ (ಪದ್ಯಸಂಕಲನ) ಬಿಡುಗಡೆಯಾಯಿತು. ಪ್ರಸಿದ್ಧ ಕಾದಂಬರಿ ಗೋರಾ ಪ್ರಕಟವಾಯಿತು. ಇದು ಇಡೀ ಬಂಗಾಳಿ ಕಾದಂಬರಿ ಸಾಹಿತ್ಯದಲ್ಲಿ ಅತಿ ಶ್ರೇಷ್ಠವಾದ್ದು. 1909ರಲ್ಲಿ ಪ್ರಾಯಶ್ಚಿತ್ತ ಎಂಬ ನಾಟಕ ರಚಿಸಿದರು. ಮರುವರ್ಷ ಖ್ಯಾತ ಗೀತಾಂಜಲಿಯ ಗೀತೆಗಳನ್ನು ರಚಿಸಿದರು. 1911ರಲ್ಲಿ ರವೀಂದ್ರರ ಐವತ್ತನೆಯ ಹುಟ್ಟುಹಬ್ಬ ಶಾಂತಿನಿಕೇತನದಲ್ಲಿ ವಿಜೃಂಭಣೆಯಿಂದ ಜರುಗಿತು. ಪ್ರವಾಸಿ ಎಂಬ ಪತ್ರಿಕೆಯಲ್ಲಿ ಅವರು ತಮ್ಮ ಬಾಲ್ಯದ ನೆನಪುಗಳನ್ನು ಪ್ರಕಟಿಸಿದರು. ಅವರ ಕೆಲವು ಕವಿತೆಗಳು ಇಂಗ್ಲಿಷಿಗೆ ಅನುವಾದವಾದವು. ಮರುವರ್ಷ ಪ್ರಖ್ಯಾತವಾದ ಜನಗಣಮನ ಎಂಬ ರಾಷ್ಟ್ರಗೀತೆಯನ್ನು ರಚಿಸಿ ಮಾಘೋತ್ಸವದಲ್ಲಿ ತಾವೇ ಹಾಡಿದರು.

1914ರಲ್ಲಿ ಪುನಃ ಇಂಗ್ಲೆಂಡಿಗೆ ಹೋದ ವೇಳೆಗಾಗಲೇ ರವೀಂದ್ರರ ಗೀತಾಂಜಲಿ ಇಂಗ್ಲಿಷ್ ಸಾಹಿತ್ಯಕ ವಲಯದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿತ್ತು. ಬಂಗಾಳಿ ಗೀತಾಂಜಲಿಯಿಂದ ಐವತ್ತೊಂದು ಗೀತೆಗಳನ್ನು ಉಳಿದ ಸಂಕಲನಗಳಿಂದ ಅನೇಕ ಗೀತೆಗಳನ್ನೂ ಆರಿಸಿಕೊಂಡು ಇಂಗ್ಲಿಷ್ ಗೀತಾಂಜಲಿ ರಚಿಸಿದ್ದು ಇಲ್ಲಿ ಗಮನಾರ್ಹ. 1912-13ರಲ್ಲಿ ಇಲಿನಾಯ್, ಷಿಕಾಗೋ, ಹಾರ್ವರ್ಡ್ ವಿಶ್ವವಿದ್ಯಾನಿಲಯಗಳ್ಲಿ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆಗೆ ಇಂಗ್ಲಿಷ್‍ನಲ್ಲಿ ಗೀತಾಂಜಲಿ (ನೋಡಿ- ಗೀತಾಂಜಲಿ), ಗಾರ್ಡನರ್, ಕ್ರೆಸೆóಂಟ್ ಮೂನ್, ಚಿತ್ರಾ ಎಂಬ ಕೃತಿಗಳು ಬಿಡುಗಡೆಯಾದವು. 1913, ನವೆಂಬರ್ 13ರಂದು ರವೀಂದ್ರರ ಗೀತಾಂಜಲಿಗೆ ಪ್ರಪಂಚದಲ್ಲೇ ಶ್ರೇಷ್ಠ ಪ್ರಶಸ್ತಿಯಾದ ನೊಬೆಲ್ ಬಹುಮಾನ ಬಂತು. ಕಲ್ಕತ್ತ ವಿಶ್ವದ್ಯಾನಿಲಯ ಅವರಿಗೆ ಡಿ.ಲಿಟ್. ಗೌರವ ಪ್ರಶಸ್ತಿ ನೀಡಿತು. 1915ರ ಜೂನ್ 3ರಂದು ಬ್ರಿಟಿಷ್ ಚಕ್ರವರ್ತಿ ನೈಟ್‍ಹುಡ್ ಪ್ರಶಸ್ತಿ ನೀಡಿದರು. ಅನಂತರ ಆಂಧ್ರದವರು ಭಾರತತೀರ್ಥ, ಕವಿಸಾಮ್ರಾಟ ಎಂಬ ಬಿರುದುಗಳನ್ನೂ ತ್ರಿಪುರಾದ ಮಹಾರಾಜರು ಭಾರತಭಾಸ್ಕರ ಎಂಬ ಬಿರುದನ್ನೂ ನೀಡಿದ್ದಲ್ಲದೆ, ಬನಾರಸ್, ಢಾಕಾ, ಉಸ್ಮಾನಿಯಾ ವಿಶ್ವಿವಿದ್ಯಾಲಯಗಳು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿದವು.

1917ರ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಗೆ ಅನಿಬೆಸೆಂಟರ ಹೆಸರನ್ನು ಸೂಚಿಸಿದವರು ರವೀಂದ್ರರು. ಈ ವೇಳೆಗೆ ಅವರ ಅಂಚೆ ಮನೆ ನಾಟಕ ಪ್ರದರ್ಶನವನ್ನು ಅನಿಬೆಸೆಂಟ್, ಗಾಂಧಿ, ತಿಲಕ್, ಮಾಳವೀಯ ಮುಂತಾದವರು ವೀಕ್ಷಿಸಿದ್ದರು. 1919ರ ಮೇ 30ರಂದು ನಡೆದ ಜಲಿಯನ್‍ವಾಲಾ ಬಾಗಿನ ಹತ್ಯಾಕಾಂಡದಿಂದ ಮನನೊಂದ ರವೀಂದ್ರರು ತಮಗೆ ಬ್ರಿಟಿಷರು ನೀಡಿದ್ದ ನೈಟ್‍ಹುಡ್ ಪದವಿಯನ್ನು ವಾಪಸು ಮಾಡಿದರು. ಒಂದನೆಯ ಮಹಾಯುದ್ಧದಿಂದ ವಿಹ್ವಲರಾದ ರವೀಂದ್ರರು ಶಾಂತಿದೂತರಾಗಿ ವಿದೇಶಗಳಲ್ಲಿ ತಿರುಗಾಡಿದರು. 1920-21ರಲ್ಲಿ ಪುನಃ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಅಮೆರಿಕ, ಚೀನ, ಜಪಾನ್ ಮುಂತಾದ ದೇಶಗಳಿಗೆ ಹೋಗಿ ಅಲ್ಲಿಯ ಬುದ್ಧಿ ಜೀವಿಗಳನ್ನು ಕುರಿತು ಮಾತನಾಡಿ ವಿಶ್ವಭಾರತಿಗೆ ಸಹಾಯ ಕೇಳಿದರು. ವಾಪಸು ಬಂದವರು ಬ್ರಜೇಂದ್ರನಾಥ ಸೀಲರ ಅಧ್ಯಕ್ಷತೆಯಲ್ಲಿ ಹಾಗೂ ಸಿಲ್ವನ್ ಲಿವಿಯಂಥ ಖ್ಯಾತ ವಿದಾಂಸರ ಸಮಕ್ಷಮದಲ್ಲಿ ವಿಶ್ವಭಾರತಿಯನ್ನು ಸಾರ್ವಜನಿಕ ಸೊತ್ತಾಗಿ ಪರಿವರ್ತನೆ ಮಾಡಿದರು. ಅಲ್ಲದೆ ಶ್ರೀನಿಕೇತನದಲ್ಲಿ ಗ್ರಾಮ ಪುನರುಜ್ಜೀವನಕೇಂದ್ರವನ್ನು ಆರಂಭಿಸಿದರು. ರಾಷ್ಟ್ರದ ತಳಪಾಯದಂತಿರುವ ಹಳ್ಳಿಗಳ ಪುನರ್ನಿರ್ಮಾಣ ಹಾಗೂ ಗ್ರಾಮಕೈಗಾರಿಕೆಗಳಿಗೆ ಜೀವತುಂಬುವುದು ಅವಶ್ಯವೆಂದರು. ಹೀಗೆ ಆದರ್ಶ ಮತ್ತು ವಾಸ್ತವಿಕತೆಗಳು ಮೇಳವಿಸಿದ ಶಾಂತಿನಿಕೇತನ ಹಳತು-ಹೊಸಕರ ಸಂಗಮವಾಗಿ ಪೂರ್ವ-ಪಶ್ಚಿಮಗಳ ಮಿಲನಕೇಂದ್ರವಾಗಿ ಜಗದ್ವಿಖ್ಯಾತವಾಯಿತು.

1932ರಲ್ಲಿ ಇರಾನಿನ ರಾಜನ ಆಹ್ವಾನದ ಮೇರೆಗೆ ಪರ್ಷಿಯ, ಇರಾಕ್, ಇರಾನ್‍ಗಳಲ್ಲಿ ಪ್ರವಾಸಮಾಡಿದರು. ಅದೇ ವರ್ಷ ಸ್ವದೇಶಕ್ಕೆ ಮರಳಿದವರು ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಬಂಗಾಳಿ ಭಾಷಾ ಪ್ರಾಧ್ಯಾಪಕರಾದರು. 1933ರಲ್ಲಿ ಸಿಂಹಳಕ್ಕೆ ಹೋದಾಗ ನಾಲ್ಕು ಅಧ್ಯಾಯಗಳು ಎಂಬ ಕಾದಂಬರಿ ಬರೆದು ಮುಗಿಸಿದರು. ಸ್ವಾಗತ, ಭಾಷಣ, ಸತ್ಕಾರಗಳ ಬಿಡುವಿಲ್ಲದ ಕಾರ್ಯಕ್ರಮಗಳಿಂದ ಬಳಲಿದರೂ ಅವರ ಲೇಖನಿಗೆ ಮಾತ್ರ ಬಳಲಿಕೆ ತಿಳಿಯದು, ಫಾಲ್ಗುಣಿ, ಬಲಾಕ, ಚತುರಂಗ, ಮನೆ ಮತ್ತು ಜಗತ್ತು, ಗಿಣಿಪಾಠ, ಪಲಾತಕಾ, ಲಿಪಿಕಾ, ಮುಕ್ತಧಾರಾ, ಪುನಶ್ಚ, ಪರಿಶೇಷ-ಮುಂತಾದ ಅಮೂಲ್ಯ ಕೃತಿಗಳು ಬಿಡುಗಡೆಯಾದವು. 1936ರ ಸುಮಾರಿಗೆ ನೃತ್ಯಗೀತರೂಪಕಗಳಲ್ಲೂ ಹೊಸ ಪ್ರಯೋಗಗಳನ್ನು ಮಾಡಿದ್ದುಂಟು. ತಾವು ರಚಿಸಿದ ಗೀತೆಗಳಿಗೆ ತಾವೇ ಸ್ವರಸಂಯೋಜನೆ ಹಾಕಿದರು. ಬಂಗಾಳಿ ಸಂಗೀತದಲ್ಲಿ ರವೀಂದ್ರಸಂಗೀತ ಎಂಬ ಹೊಸ ಪರಂಪರೆಯನ್ನು ಆರಂಭಿಸಿದ ರವೀಂದ್ರರು ಸುಮಾರು ಎರಡು ಸಾವಿರ ಕೀರ್ತನೆಗಳನ್ನು ರಚಿಸಿದ್ದಾರೆ. ಅವರು ಬಂಗಾಳಿ ಭಾಷೆಯಲ್ಲಿ ಬರೆದಿರುವ ಒಟ್ಟು ಗ್ರಂಥಗಳನ್ನೆಲ್ಲ ಒಂದೆಡೆ ಕಲೆಹಾಕಿದರೆ ರಾಯಲ್ ಅಷ್ಟಪತ್ರಾಕಾರದ ಹದಿನಾರುಸಾವಿರ ಪುಟಗಳಾಗುತ್ತವೆಯೆಂದು ಅಂದಾಜು ಮಾಡಲಾಗದೆ. ಇದಲ್ಲದೆ ವಿಜ್ಞಾನದ ಪರಿಚಯ ಮಾಡಿಕೊಡುವ ಸಲುವಾಗಿ ವಿಶ್ವಪರಿಚಯ ಎಂಬ ಗ್ರಂಥವನ್ನೂ ಬಂಗಾಳಿ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಕೆಲವು ಗ್ರಂಥಗಳನ್ನೂ ಬರೆದದ್ದುಂಟು.

1936ರಲ್ಲಿ ಪಟ್ನದ ನಾಗರಿಕರು ಬಾಬು ರಾಜೇಂದ್ರ ಪ್ರಸಾದರ ನೇತೃತ್ವದಲ್ಲಿ ರವೀಂದ್ರರನ್ನು ಗೌರವಿಸಿದರು. 1937ರಲ್ಲಿ ರವೀಂದ್ರರು ಕಲ್ಕತ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಿದರು. ಅಧಿಕಾರಿಗಳಲ್ಲದವರಿಗೆ ಇಂಥ ಒಂದು ಘನ ಭಾಷಣ ಮಾಡುವ ಗೌರವ ದೊರೆತದ್ದೂ ಬಂಗಾಳಿ ಭಾಷೆಯಲ್ಲಿ ಘಟಿಕೋತ್ಸವ ಭಾಷಣ ಮಾಡಿದ್ದೂ ಅದೇ ಮೊದಲು. ಅದೇ ವರ್ಷ ತೀವ್ರ ಅಸ್ವಸ್ಥೆಗೂ ಗುರಿಯಾಗಿದ್ದರು. ಈ ಮಧ್ಯೆ ಪ್ರಾಂತಿಕ ಎಂಬ ಕವನ ಸಂಕಲನದ ಪದ್ಯಗಳನ್ನು ರಚಿಸಿದರು. 1940ರ ಆಗಸ್ಟ್ 7ರಂದು ಶಾಂತಿನಿಕೇತನದ ವಿಶೇಷ ಘಟಿಕೋತ್ಸವದಲ್ಲಿ ಲೋಕಪ್ರಸಿದ್ಧವಾದ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಮಾರಿಸ್ ಗ್ವಯರ್ ಹಾಗೂ ರಾಧಾಕೃಷ್ಣರ ಸಮಕ್ಷಮದಲ್ಲಿ ಇವರಿಗೆ ಗೌರವ ಡಿ.ಲಿಟ್. ಪ್ರಶಸ್ತಿ ನೀಡಿತು. 1940ರಲ್ಲಿ ಎರಡನೆಯ ಮಹಾಯುದ್ಧದಿಂದ ತೀವ್ರವಾಗಿ ಮನನೊಂದರಲ್ಲದೆ ಕವಿಗಳ ದೈಹಿಕ ಅಸ್ವಸ್ಥತೆಯೂ ಹೆಚ್ಚಿತು. ಈ ಸ್ಥಿತಿಯಲ್ಲೂ ಸಾಹಿತ್ಯಸೃಷ್ಟಿ ನಿಲ್ಲಲಿಲ್ಲ. ನವಜಾತಕ, ನನ್ನ ಬಾಲ್ಯ, ರೋಗಶಯ್ಯೆಯಲ್ಲಿ, ಆರೋಗ್ಯ-ಮುಂತಾದ ಗ್ರಂಥಗಳನ್ನು ರಚಿಸಿದರು. 1941 ಏಪ್ರಿಲ್ 14ರಂದು ತಮ್ಮ 80ನೆಯ ಹುಟ್ಟುಹಬ್ಬದ ಸಮಾರಂಭದಲ್ಲಿ ನಾಗರಿಕತೆಯ ಸಂಧಿಕಾಲ ಎಂಬ ಲೇಖನ ಓದಿದರು. ಮಿಸ್ ರ್ಯಾತ್‍ಬೋನ್ ಎಂಬ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯೆ ಭಾರತವನ್ನು ಟೀಕಿಸಿ ಬರೆದಿದ್ದ ಬಹಿಸರಂಗ ಪತ್ರಕ್ಕೆ ಅಷ್ಟೆ ಕಟುವಾಗಿ ಖಂಡಿಸಿ ಉತ್ತರ ಬರೆದರು.

1941, ಆಗಸ್ಟ್ 7ರಂದು ರವೀಂದ್ರರು ಕಲ್ಕತ್ತದಲ್ಲಿ ವಿಧಿವಶರಾದರು

ಸಮಗ್ರ ಜೀವನದ ನವೀನಾಚಾರ್ಯರು ಅನುಗ್ರಹಪೂರ್ಣ ಗುರುಭಾವಜನಕ ವ್ಯಕ್ತಿತ್ವವುಳ್ಳವರು ಎಂದು ಖ್ಯಾತನಾಮರಾದ ವಿಶ್ವಮಾನವ ರವೀಂದ್ರರು, ರಾಧಾಕೃಷ್ಣನ್ ಹೇಳಿರುವಂತೆ, ಜೀವನದ ಮಾಧುರ್ಯವನ್ನು ಹೆಚ್ಚಿಸಿದ್ದಾರೆ. ನಾಗರಿಕತೆಯ ಸ್ವರೂಪವನ್ನು ವಿಸ್ತರಿಸಿದ್ದಾರೆ.

ರವೀಂದ್ರರ ಕೆಲವು ಮುಖ್ಯ ಕೃತಿಗಳು:

ಕಾವ್ಯ: 1. ಭಾನುಸಿಂಹ---ಪದಾವಳಿ (ಸಂಗೀತ:1884) 2. ಮಾನಸೀ (1890), 3. ಕಥಾ (1900), 4. ಕಾಹಿನಿ (1900), 5. ಕ್ಷಣಿಕಾ (1901), 6. ನೈವೇದ್ಯ (1901), 7. ಖೇಯಾ (1906), 8. ಶಿಶು (1909), 9. ಗೀತಾಂಜಲಿ (1910), 10. ಬಲಾಕ (1916), 11. ಪಲಾತಕಾ (1918), 12. ಲಿಪಿಕಾ (1921), 13. ಪೂರಬೀ (1925), 14. ಪುನಶ್ಚ (1932), 15. ಖಾಪ್‍ಛಾಡಾ (1937), 16. ಪ್ರಾಂತಿಕ (1938), 17. ನವಜಾತಕ (1940), 18. ಸನಾಯಿ (1940), 19. ರೋಗಶಯ್ಯಾಯ್ (1940), 20. ಜನ್ಮ ದಿನ (1941), 21. ಆರೋಗ್ಯ (1941).

ನಾಟಕ: 1. ವಾಲ್ಮೀಕಿ ಪ್ರತಿಭಾ (1881), 2. ಪ್ರಕೃತೀರ್ ಪರಶೋಧ್ (1884), 3. ರಾಜಾ ಓ ರಾಣಿ (1889), 4. ವಿಸರ್ಜನ (1890), 5. ಬೈಕುಂಠೇರ್ ಖಾತಾ (1897), 6. ಹಾಸ್ಯಕೌತುಕ (1907), 7. ಶರದೋತ್ಸವ (1908), 8. ರಾಜಾ (1910), 9. ಡಾಕ್‍ಫರ್ (1912), 10. ಅಚಲಾಯತನ್ (1912), 11. ಮುಕ್ತಧಾರ (1922), 12 ರಕ್ತಕರಬೀ (1924), 13 ನಟೀರ್ ಪೂಜಾ (1926), 14. ತಾಸೆರ್ ದೇಶ್ (1933), 15. ನೃತ್ಯ ನಾಟ್ಯ ಚಿತ್ರಾಂಗದಾ (1936).

ಕಥೆ-ಕಾದಂಬರಿ: 1. ಚೋಖೆರ್ ಬಾಲಿ (1903), 2. ನೌಕೌಡುಬಿ (1906), 3. ಗೋರಾ (1910), 4. ಚತುರಂಗ (1916), 5. ಘರೆಬೈರೆ (1916), 6. ಯೋಗಾಯೋಗ (1929). 7. ಶೇಷರ್ ಕವಿತಾ (1929), 8. (1900), 9. ಗಲ್ಪಸಲ್ಪ (1941).

ವಿಮರ್ಶೆ-ಪ್ರಬಂಧ: 1. ಪಂಚಭೂತ (1897), 2. ವಿಚಿತ್ರಪ್ರಬಂಧ (1907), 3. ಸಾಹಿತ್ಯ (1907), 4. ಸಮೂಹ (1908), 5. ಶಬ್ದತತ್ತ್ವ (1909), 6. ಧರ್ಮ (1909), 7. ಮಾನುಷೆರ್ ಧರ್ಮ (1933), 8. ಶಾಂತಿನಿಕೇತನ (1935), 9. ಛಂದ (1936), 10. ವಿಶ್ವಪರಿಚಯ (1937), 11. ಬಾಂಗ್ಲಾರ್ ಭಾಷಾ ಪರಿಚಯ (1938), 12. ಸಭ್ಯತಾರ್ ಸಂಕಟ (1941).

ನೆನಪು, ಪತ್ರ, ಪ್ರವಾಸ: 1. ಯೂರೋಪ್ ಪ್ರವಾಸೀರ್ ಪತ್ರ (1881), 2. ಜೀವನ್ ಸ್ಮøತಿ (1912), 3. ಭಿನ್ನಪತ್ರ (1912), 4. ಜಪಾನ್ ಯಾತ್ರೆ (1919), 5. ಭಾನುಸಿಂಘೆರ್ ಪತ್ರಾವಳಿ (1930), 6. ರಸ್ಸಿಯಾರ್ ಬೇಟಿ (1931), 7. ಛೆಲೆ ಬೆಲಾ (1910), 8. ಆತ್ಮ ಪರಿಚಯ (1943).

ಚಿತ್ರಕಲೆ, ಗೀತೆಗಳು: (1. ಗೀತಾವಿತಾನ (1931), 2. ಚಿತ್ರಲಿಪಿ-1 (1940), 3. ಚಿತ್ರಲಿಪಿ-2 (1941).

(ಎಚ್.ಆರ್.ಆರ್.ಬಿ.)

ರವೀಂದ್ರ ಸಾಹಿತ್ಯ: ರವೀಂದ್ರರು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಅಸಾಧಾರಣ ವಿಶ್ವಾಸದಿಂದ ಬಳೆಸಿಕೊಂಡರು. ಕಾವ್ಯ, ನಾಟಕ, ಕಾದಂಬರಿ, ಸಣ್ಣ ಕಥೆ, ಕಿರುಗತೆ-ಎಲ್ಲ ಪ್ರಕಾರಗಳಲ್ಲಿ ವಿಪುಲವಾಗಿ ಸಾಹಿತ್ಯ ರಚನೆ ಮಾಡಿದರು. ಜೀವನಸ್ಮøತಿಯನ್ನು ಬರೆದರು. ಸಾಹಿತ್ಯ ವಿಮರ್ಶೆಯನ್ನು ಬರೆದರು. ತಾತ್ತ್ವಿಕ ಪ್ರಬಂಧಗಳನ್ನು ಬರೆದರು. ಅವರ ಪತ್ರಗಳು ಪ್ರಕಟವಾಗಿವೆ. ಅವರ ಸಾಹಿತ್ಯ ರಚನೆ ಸುಮಾರು 65 ವರ್ಷಗಳಷ್ಟು ದೀರ್ಘಕಾಲ ನಡೆಯಿತು. ಅವರು ಬರೆದುದನ್ನೆಲ್ಲ ಅಚ್ಚು ಮಾಡಿದರೆ ರಾಯಲ್ ಅಷ್ಟಪತ್ರಾಕಾರದ ಹದಿನಾರು ಸಾವಿರ ಪುಟಗಳಷ್ಟು ಆಗುತ್ತದೆ ಎಂದು ಅಂದಾಜು ಮಾಡಿದ್ದಾರೆ. ಇದರಲ್ಲಿ ಸೃಜನ ಸಾಹಿತ್ಯವೇ ಸುಮಾರು ಹತ್ತುಸಾವಿರ ಪುಟಗಳಷ್ಟು ಆದೀತು.

ಅವರ ಸಾಹಿತ್ಯದ ಅಧ್ಯಯನದ ಪ್ರಾರಂಭದಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಮೊದಲನೆಯದು-ಆ ಸಾಹಿತ್ಯದಲ್ಲಿ ವಿಶೇಷ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲದೆ ಇತರರು ಓದದೆ ಬಿಡಬಹುದಾದ ಭಾಗ ತಕ್ಕಷ್ಟಿದೆ. ಅವರ ಸಾಹಿತ್ಯರಚನೆ ಅತಿ ಸಮೃದ್ಧವಾದ್ದು. 1899ರಲ್ಲಿಯೇ ಅವರ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿದ್ದವು. ಎರಡನೆಯದು-ಸುಮಾರು 1910ರ ಹೊತ್ತಿಗೆ ಬಂಗಾಳಿ ಭಾಷೆಯಲ್ಲಿ ಅವರ ಶ್ರೇಷ್ಠ ಸಾಹಿತ್ಯದ ರಚನೆ ಮುಗಿದಿತ್ತಾದರೂ ಕಡೆಯವರೆಗೆ ಆಗಾಗ ಹೊಸತೆನಿಸುವಂಥದನ್ನು ಬೆರಗುಗೊಳಿಸುವಂಥದನ್ನು ಬರೆಯುತ್ತಲೇ ಇದ್ದರು. ಅವರು ತೀರಿಕೊಂಡ ಮರುವರ್ಷ ಪ್ರಕಟವಾದ ಶೇಷಲೇಖಾದಲ್ಲಿ ಬಾಳಿನ ಅರ್ಥವನ್ನು ಕುರಿತ ಹೊಸ ದೃಷ್ಟಿಯೆ ಇದೆ. ಮೂರನೆಯದಾಗಿ, ರವೀಂದ್ರಸಾಹಿತ್ಯವನ್ನು ಬಂಗಾಳಿಯಲ್ಲಿ ಇಲ್ಲವೇ ನೇರವಾಗಿ ಬಂಗಾಳಿಯಿಂದ ಭಾರತೀಯ ಭಾಷೆಗೆ ಆದ ಸಮರ್ಥ ಅನುವಾದದಲ್ಲಿ ಓದುವುದು ಉತ್ತಮ. ಇಂಗ್ಲಿಷ್ ಅನುವಾದವನ್ನು ಬಹುಮಟ್ಟಿಗೆ ರವೀಂದ್ರರೆ ಮಾಡಿದರು. ಬಹುಮಟ್ಟಿಗೆ ಸಮರ್ಥವಾಗಿಯೇ ಮಾಡಿದರು. ಅವರ ಅನೇಕ ಮಾರ್ಪಾಡುಗಳನ್ನು ಮಾಡಿದರು. ಅನೇಕ ಬಾರಿ ಸಂಕ್ಷೇಪಿಸಿದರು. ನಾಟಕಗಳನ್ನು ಅನುವಾದಿಸುವಾಗ ಉಪಕಥಾವಸ್ತುಗಳನ್ನು ಕೈಬಿಟ್ಟರು. ಮಾರ್ಪಾಡುಗಳಿಂದ ಸಾಮಾನ್ಯವಾಗಿ ಇಂಗ್ಲಿಷ್ ರೂಪ ಮೂಲ ಬಂಗಾಳಿ ರೂಪಕ್ಕಿಂತ ಉತ್ತಮವಾಯಿತು, ಆದರೆ ಮೂಲದ ಕಲ್ಪನೆಯನ್ನು ಅನುವಾದ ಖಚಿತವಾಗಿ ನೀಡಲಾರದಾಯಿತು.

ಅವರ ಸಾಹಿತ್ಯ ರಚನೆ ಅರವತ್ತೈದು ವರ್ಷಗಳಷ್ಟು ದೀರ್ಘಕಾಲ ನಡೆದದ್ದರಿಂದ ಮನೋಧರ್ಮ, ದೃಷ್ಟಿ, ತಂತ್ರ ಇವುಗಳಲ್ಲಿ ವ್ಯತ್ಯಾಸಗಳು ಕಾಣುವುದು ಅನಿವಾರ್ಯ. ಒಟ್ಟಿನಲ್ಲಿ ಇಪ್ಪತ್ತೈದನೆಯ ವರ್ಷಕ್ಕೆ ಪರಿಪಕ್ವ ಸಾಹಿತ್ಯದ ಸೃಷ್ಟಿ ಪ್ರಾರಂಭವಾಯಿತು ಎನ್ನಬಹುದು. 1808ರ ಆಚೆ ಜೀವನದಲ್ಲಿ ಕಹಿಯಾದದ್ದು ಭಯಂಕರವಾದದ್ದು-ಇವುಗಳಲ್ಲಿ ಆಸಕ್ತಿ, ಬಾಳಿನ ಬಿರುಗಾಳಿ ಗುಡುಗು ಸಿಡಿಲುಗಳ ಚಿತ್ರಗಳು-ಇವು ಹೆಚ್ಚಾಗುತ್ತವೆ. ರಾಜ-ರಾಣಿಯೆಂಬ ಕೃತಿಯಿಂದ ಗಂಭೀರ ನಾಟಕಗಳು ಪ್ರಾರಂಭವಾದವು. 1908ರಿಂದ ಅವರ ಸಾಹಿತ್ಯದಲ್ಲಿ ಪ್ರತೀಕಗಳು ಬೆಳೆದವು. ಇದಿಷ್ಟನ್ನೂ ಮರೆಯದೆ ಅವರ ಇಡೀ ಸಾಹಿತ್ಯದಲ್ಲಿ ಒಂದು ಮನೋಧರ್ಮದಲ್ಲಿ ಏಕತ್ವವನ್ನು ಗುರುತಿಸಬಹುದು.

ಇದಕ್ಕೆ ಕಾರಣ ಬಹು ಚಿಕ್ಕ ವಯಸ್ಸಿನಲ್ಲೆ ಅವರು ಹಲವಾರು ಪ್ರಭಾವಗಳಿಗೆ ಸಿಕ್ಕಿ ಅವನ್ನು ಅರಗಿಸಿಕೊಂಡದ್ದು ಎಂದು ಕಾಣುತ್ತದೆ. ಜೀವನದಲ್ಲಿ ಶಾಂತಿಯನ್ನೂ ಸ್ಥಿತಪ್ರಜ್ಞೆಯನ್ನೂ ಸಾಧಿಸಿದ ತಂದೆಯೊಡನೆ ಪ್ರವಾಸ, ಗಂಗಾ ಹಿಮಾಲಯಗಳ ಸಾನ್ನಿಧ್ಯ, ಸ್ವತಃ ಸಾಹಿತಿಗಳೂ ಕಲಾವಿದರೂ ಆಗಿದ್ದ ಅಣ್ಣಂದಿರ ಮತ್ತು ಮನೆಗೆ ಬರುತ್ತಿದ್ದ ಕವಿ ಕಲಾವಿದರ ಸಂಪರ್ಕ, ಇಂಗ್ಲೆಂಡಿನ ಪ್ರವಾಸ, ಇದರ ಪರಿಣಾಮವಾಗಿ ಭಾರತ ಸಂಸ್ಕøತಿಯಲ್ಲಿ ಮಿಂದಿದ್ದ ಚೇತನ ಹೊಸ ಸಂಸ್ಕøತಿಯಲ್ಲಿ ನೆಲೆಯನ್ನು ಕಂಡುಕೊಳ್ಳಬಾಕಾಗಿ ಬಂದದ್ದು, ಪ್ರಾಚೀನ ಭಾರತದ ಹಿರಿಮೆ ಪಾಶ್ಚಾತ್ಯ ಜಗತ್ತಿನ ಹಿರಿಮೆ ಇವನ್ನು ಉಗ್ರವಾಗಿ ಪ್ರತಿಪಾದಿಸುವ ಪಂಗಡಗಳ ಘರ್ಷಣೆ-ಇವೆಲ್ಲವನ್ನೂ ಇಪ್ಪತ್ತು ವರ್ಷ ವಯಸ್ಸು ಕಳೆಯುವ ಹೊತ್ತಿಗೆ ರವೀಂದ್ರರು ಅನುಭವಿಸಿದ್ದರು. ರಾಜಾ ರಾಮಮೋಹನ ರಾಯ್, ರಾಮಕೃಷ್ಣ ಪರಮಹಂಸ, ಬ್ರಹ್ಮಸಮಾಜ-ಈ ಶಕ್ತಿಗಳ ಪ್ರಭಾವ ಬೆರೆತಿದ್ದ ಗಾಳಿಯಲ್ಲಿ ಅವರು ಉಸಿರಾಡಿದ್ದರು. ಹದಿನೆಂಟನೆಯ ವಯಸ್ಸಿಗಾಗಲೆ 7,000 ಪಂಕ್ತಿಗಳಷ್ಟು ಕಾವ್ಯರಚನೆ ಮಾಡಿದ್ದರು.

ರವೀಂದ್ರರು 50 ಕವನ ಸಂಕಲನಗಳನ್ನೂ 12 ಕಾದಂಬರಿಗಳನ್ನೂ 21 ನಾಟಕಗಳನ್ನೂ ಬರೆದರು. ಇವಲ್ಲದೆ ಸಾಹಿತ್ಯ ವಿಮರ್ಶೆ, ಸಣ್ಣಕತೆ, ಕಿರುಗತೆ, ತಾತ್ತ್ವಿಕ ಪ್ರಬಂಧ-ಈ ಪ್ರಕಾರಗಳಲ್ಲಿ ನೂರಾರು ಕೃತಿಗಳನ್ನು ರಚಿಸಿದರು. ಒಟ್ಟಿನಲ್ಲಿ, ರವೀಂದ್ರರ ಎಲ್ಲ ಕೃತಿಗಳ ಮುಖ್ಯ ವಸ್ತು ಬಂಧಮುಕ್ತಿ. ಅದರ ಕಲ್ಪನೆಯೊಡನೆ ಮಾನವ ಹೃದಯದ ಶ್ರೀಮಂತಿಕೆಯ ಕಲ್ಪನೆಯೂ ಸೇರಿದೆ. ಮಾನವ ಹೃದಯ ಸಹಜವಾಗಿ ಜೀವನವನ್ನು ಪ್ರಭಾವಿಸಲು ಬಿಟ್ಟರೆ ಜೀವನ ಆನಂದಮಯವಾದೀತು. ಜೀವಿ ತಾನು ಬೃಹದ್ವಿಶ್ವದ ಭಾಗವೆಂಬುದನ್ನು ಅರಿತುಕೊಂಡು ಆನಂದವನ್ನು ಕಂಡುಕೊಂಡೀತು. ಆದರೆ ಸ್ವಾರ್ಥ, ಅಹಂಕಾರ, ಅಧಿಕಾರಮೋಹ, ಹಣದ ಮೋಹ ಇವೆಲ್ಲ ಜೀವನದ ಆನಂದದ ಸಹಜ ಪ್ರವಾಹವನ್ನು ಮಂಜುಗಡ್ಡೆಯಾಗಿ ಮಾಡಿ ತಡೆದು ನಿಲ್ಲಿಸುವ ಕ್ರೂರ ಮಾರುತಗಳು, ನಿನಗೆ ನನ್ನ ಪ್ರಾರ್ಥನೆ ಇದೇ, ನನ್ನ ಪ್ರಭು-ನನ್ನ ಹೃದಯದ ಬಡತನದ ಬೇರಿಗೆ ಪೆಟ್ಟು ಹಾಕು ಎಂಬ ಗೀತಾಂಜಲಿಯ ಪ್ರಾರ್ಥನೆ, ಉಪಗುಪ್ತನನ್ನು ಕುರಿತ ಕಿರುಗತೆ ಇವುಗಳಿಂದ ಹಿಡಿದು ಕಾಬೂಲಿವಾಲನಂಥ ಸಣ್ಣಕತೆ, ಗೋರಾನಂಥ ಕಾದಂಬರಿ, ಪ್ರಕೃತಿಯ ಪರಿಶೋಧದಂಥ ನಾಟಕದವರೆಗೆ ಅವರ ಬಹು ಕೃತಿಗಳಲ್ಲಿ ಕಾಣುವುದು ಬಂಧಮುಕ್ತಿಯ ಯುಕ್ತ ಮಾರ್ಗದ ಶೋಧನೆ. ಕೆಲವರು-ಪ್ರಕೃತಿಯ ಪರಿಶೋಧದ ಕೇಂದ್ರವ್ಯಕ್ತಿ ಸಂನ್ಯಾಸಿ, ಗೋರಾ ಕಾದಂಬರಿಯ ಅದೇ ಹೆಸರಿನ ನಾಯಕ ಇಂಥವರು-ಬಿಡುಗಡೆಯ ಮಾರ್ಗವನ್ನು ಕಂಡುಕೊಳ್ಳುವವರು, ಕೆಲವರು-ಮನೆ-ಜಗತ್ತಿನ ಸಂದೀಪನಂತೆ-ಅದನ್ನು ತಿಳಿಯಲೂ ಅಸಮರ್ಥರಾದವರು. ಬಿಡುಗಡೆ ಇರುವುದು.

ಸಹಮಾನವರಿಂದ ಓಡಿಹೋಗಿ ವಿರಕ್ತ ಏಕಾಂತ ಜೀವನವನ್ನು ನಡೆಸುವುದರಲ್ಲಲ್ಲ, ತನ್ನ ಸೃಷ್ಟಿಯೊಂದಿಗೆ ಸಹಜವಾದ ಸಂಬಂಧವನ್ನು ರೂಪಿಸಿಕೊಳ್ಳಲು ಅಡ್ಡವಾಗುವ ತನ್ನ ವ್ಯಕ್ತಿತ್ವದಲ್ಲಿ ಅಡಗಿರುವ ಶೃಂಖಲೆಗಳನ್ನು ಕಿತ್ತೆಸೆಯುವದರಲ್ಲಿ. ಜಗತ್ತಿಗೆ ರವೀಂದ್ರರು ಮುಖ್ಯವಾಗಿ ಪರಿಚಿತರಾಗಿರುವುದು ಕವಿಯಾಗಿ, ಇದಕ್ಕೆ ಕಾರಣ ಗೀತಾಂಜಲಿಗೆ ನೊಬೆಲ್ ಬಹುಮಾನ ಬಂದದ್ದು. (ಇದರಿಂದ ರವೀಂದ್ರರಿಗೆ ಅನ್ಯಾಯವೂ ಆಗಿದೆ. ನಕ್ಷತ್ರ, ಕಮಲ, ವಧು, ಬಾಳನರ್ತನಗಳನ್ನು ಕುರಿತು ಸತ್ತ್ವವಿಲ್ಲದ ಕೇವಲ ಮುದ್ದು ಕವನಗಳನ್ನು ಬರೆಯುವ ಕವಿ ಈ ರವೀಂದ್ರರು ಎಂಬ ಭಾವನೆ ಪಾಶ್ಚಾತ್ಯ ದೇಶಗಳಲ್ಲಿ, ಸ್ವಲ್ಪಮಟ್ಟಿಗೆ ಭಾರತದಲ್ಲೂ, ಬೆಳೆಯಲು ಅವಕಾಶವಾಗಿದೆ.)

ಹದಿನೆಂಟನೆಯ ಶತಮಾನದಲ್ಲಿ ರಾಮಪ್ರಸಾದ್ ಸೇನ್ ತೀರಿಕೊಂಡ ಅನಂತರ ಬಂಗಾಳಿಯಲ್ಲಿ ಹಿರಿಯ ಕವಿ ಕಾಣಿಸಿಕೊಂಡಿರಲಿಲ್ಲ. ರವೀಂದ್ರರ ಕಾವ್ಯದ ಮೇಲೆ ಮೊದಲ ಪ್ರಭಾವ ಬೀರಿದ್ದು ಈತನ ಮತ್ತು ವೈಷ್ಣವ ಗಾಯಕರ ಹಾಡುಗಳು. ಇವುಗಳಲ್ಲಿ ಭಾವಗೀತೆಯ ಆತ್ಮವಿತ್ತು. ಸಂಗೀತವಿತ್ತು, ಚಿತ್ರಗಳಲ್ಲಿ ನಾವೀನ್ಯತೆ ಇತ್ತು. ರವೀಂದ್ರರ ಭಾನುಸಿಂಹ ಠಾಕೂರನ ಪದಾವಳಿಯಲ್ಲಿ (1877) ರಾಧೆಯ ವಿರಹ, ಕೃಷ್ಣನ ಕೊಳಲು, ಮಳೆಯಲ್ಲಿ ಪ್ರಿಯನನ್ನು ಕಾಣಲು ಹೊರಟ ಯುವತಿಯ ಕಾತರ-ಇಂಥ ವಸ್ತುಗಳುಂಟು. ರವೀಂದ್ರರು ಸುಮಾರು ಎರಡು ಸಾವಿರ ಹಾಡುಗಳನ್ನು ಬರೆದರು, ಎರಡು ಮೂರು ಪಂಕ್ತಿಗಳ ಹಾಡುಗಳು ಕೆಲವು, ಐವತ್ತು ಅರವತ್ತು ಪಂಕ್ತಿಗಳವು ಕೆಲವು. (ಅರವತ್ತು ವರ್ಷ ದಾಟಿದ ಅನಂತರ 1922ರ ಮೇ ಜೂನ್ ತಿಂಗಳುಗಳಲ್ಲಿ ಐವತ್ತಿಕ್ಕಿಂತ ಹೆಚ್ಚು ಹಾಡುಗಳನ್ನು ಬರೆದರು). ಪಟ್ಟಣಗಳ ಯುವಕ ಯುವತಿಯರಿಂದ ಹಿಡಿದು ಮೀನು ಹಿಡಿಯಲು ಹೊರಟ ಬೆಸ್ತರವರೆಗೆ ಎಲ್ಲರ ನಾಲಗೆಗಳ ಮೇಲೆ ರವೀಂದ್ರರ ಹಾಡುಗಳು ನಲಿದವು. ಇಂಗ್ಲಿಷ್ ಕವಿಗಳಲ್ಲಿ ಷೆರ್ಲೀಯ ಪ್ರಭಾವ (ಮುಖ್ಯವಾಗಿ ಅವನ ಹಿಮ್ ಟು ಇಂಟಲೆಕ್‍ಚ್ಚುಅಲ್ ಬ್ಯೂಟಿ ಕವನದ ಪ್ರಭಾವ) ಅವರ ಕಾವ್ಯಗಳಲ್ಲುಂಟು. ಆದರೆ ಅವರ ಚಿತ್ರಗಳೆಲ್ಲ ಬಂಗಾಳದ ನಿಸರ್ಗ ಮತ್ತು ಜನಜೀವನಗಳಿಂದ ಬಂದವು. ಅವರ ಕಾವ್ಯಸೃಷ್ಟಿಯನ್ನು ಅವರೇ ಸಂಗ್ರಹವಾಗಿ ಹೀಗೆ ಹೇಳಿದ್ದಾರೆ. `ಕ್ಷಣಿಕಾದಲ್ಲಿ ಮೊದಲು ನನ್ನ ಭಾಷೆಯನ್ನು ಕಂಡುಕೊಂಡೆ. ಸಂಧ್ಯಾ ಸಂಗೀತದಲ್ಲಿ ಮೊದಲು ನನ್ನ ಪ್ರತಿಭೆಯನ್ನು ಕಂಡುಕೊಂಡೆ; ಅದಕ್ಕೆ ಮುನ್ನ ಇತರರ ಗೀತೆಗಳನ್ನು ಪ್ರತಿಧ್ವನಿಸುತ್ತಿದ್ದೆ...' ಕ್ಷಣಿಕಾದಲ್ಲಿ ಆಡುಭಾಷೆಯ ಸೌಂದರ್ಯವನ್ನೂ ಸಂಗೀತವನ್ನೂ ಮೊಟ್ಟಮೊದಲ ಬಾರಿಗೆ ಅರ್ಥಮಾಡಿಕೊಂಡೆ. ಮಾನಸೀ ಸಂಕಲನ ಹಾಗೂ ಅದರ ಮುಂದಿನ ರಚನೆಗಳಲ್ಲಿ ಸಾಮಾಜಿಕ ಸಮಸ್ಯೆಗಳಲ್ಲಿ ಕವಿಗಿದ್ದ ಆಸಕ್ತಿಯೂ ನಿರ್ದಯ ಕಟಕಿಯ ಬಳಕೆಯೂ ಕಾಣುತ್ತವೆ. ಚೈತಾಲಿಯಲ್ಲಿ ಭಾರತೀಯ ನಿಸರ್ಗ ಕಾವ್ಯದಲ್ಲೆ ಹೊಸತಾದ ವಿವರಗಳ ಸಂಪತ್ತನ್ನು ಕಾಣಬಹುದು. ಕಲ್ಪನಾದಿಂದ ರವೀಂದ್ರರ ಕಾವ್ಯ ಜೀವನದಲ್ಲಿನ ಭೀಕರತೆ, ನೋವು, ಹೋರಾಟಗಳಲ್ಲಿ ಹೆಚ್ಚು ಮಗ್ನವಾಗುತ್ತದೆ. ಸಿಕ್ಖರು, ಮರಾಠರು, ರಾಜಪುತ್ರರು ಇವರ ಧೀರ ಹೋರಾಟವನ್ನು ಕಥನ ಕವನಗಳ ವಸ್ತುವಾಗಿ ರವೀಂದ್ರರು ಆರಿಸಿಕೊಳ್ಳುತ್ತಾರೆ. ನೈವೇದ್ಯವೆಂಬ ಕೃತಿ ಸೃಷ್ಟಿಯ ಪ್ರಭುವಿಗೆ ಸಮರ್ಪಣ ಮಾಡಿಕೊಳ್ಳುವ ಮನೋಧರ್ಮದ ಅಭಿವ್ಯಕ್ತಿ. ಇದರ ಶಿಖರ ಗೀತಾಂಜಲಿ. ಅನಂತರದ ಕವನಗಳು ಅಂತರ್ಮುಖಿ. ರವೀಂದ್ರರ ಕಾವ್ಯದರ್ಶನವನ್ನು ಕುರಿತು ಬರೆಯುತ್ತ, ವಾಲ್ಮೀಕಿ, ವ್ಯಾಸ, ಕಾಳಿದಾಸರಂತೆ ಅವರು ನಮ್ಮ ಇಡೀ ನಾಗರಿಕತೆಯನ್ನೆ ತಮ್ಮ ಸಾಹಿತ್ಯದಲ್ಲಿ ಸಂಗ್ರಹಿಸಿದ್ದಾರೆ ಎಂದಿದ್ದಾರೆ. ಶ್ರೇಷ್ಠ ಕವಿ ಉಮಾಶಂಕರ ಜೋಶಿ. ಅವರ ಮಾತುಗಳಲ್ಲಿಯೆ ಹೇಳುವುದಾದರೆ, `ಉಪನಿಷತ್ತುಗಳ ಅನ್ವೇಷಣೆ, ಕಾಳಿದಾಸನ ಕೃತಿಗಳಲ್ಲಿ ಕಾಣುವ ಸೌಂದರ್ಯದಲ್ಲಿನ ತನ್ಮಯತೆ, ಇಂದ್ರಿಯಗಾಹು ಪ್ರತಿಮೆಗಳ ಮೂಲಕ ವೈಷ್ಣವ ಕವಿಗಳಲ್ಲಿ ಅಭಿವ್ಯಕ್ತಿಗೊಳ್ಳುವ ಇಂದ್ರಿಯಾನುಭವತೀತವಾದುದರೊಂದಿಗೆ ಸಂವಹನ ಸಾಧಿಸುವ ಹಂಬಲ, ಬಂಗುಳದ ಜಾಲದ ಮಿತಭಾಷೆಯ ನಿಶ್ಚಿಂತ ಆಪ್ತತೆ, ಮೊಘಲರ ಆಸ್ಥಾನದ ವೈಭವೋಪೇತ ಶ್ರೀಮಂತಿಕೆ ಮತ್ತು ಸಾಮಾನ್ಯ ಮನುಷ್ಯನ ಬದುಕನ್ನು ಪ್ರತಿಬಿಂಬಿಸುವ ಜನಪದ ಹಾಡುಗಳ ತೆರೆದ ಮನಸ್ಸು ಎಲ್ಲವನ್ನೂ ನಾವು ಕಾಣುವುದು ಕಾಳಿದಾಸನ ಕೃತಿಗಳಲ್ಲಿ ತೆರೆದ ಮನಸ್ಸು-ಎಲ್ಲವನ್ನೂ ನಾವು ಕಾಣುವುದು ಕಾಳಿದಾಸನ ಕೃತಿಗಳಲ್ಲಿ ತಾವೇ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪಡೆದ ಪರ್ಲ್ ಬಕ್, ರವೀಂದ್ರರು ವಿಶ್ವಕವಿ, ಅವರ ದೃಷ್ಟಿಯಲ್ಲಿ ಸೌಂದರ್ಯವು ಅಮತ, ಅಜೇಯ, ಅದು ಮಾನವಕುಲದ ಆತ್ಮ, ಮನಸ್ಸು ಮತ್ತು ಹೃದಯ ಎಂದಿದ್ದಾರೆ.

ರವೀಂದ್ರರು ಮಹಾಕಾವ್ಯದಿಂದ ಹಿಡಿದು ಸುನೀತದವರೆಗೆ-ಕಥನ ಕವನ, ಭಾವಗೀತೆ, ಪ್ರಗಾಥ ಮೊದಲಾದ-ಎಲ್ಲ ಕಾವ್ಯಪ್ರಕಾರಗಳನ್ನೂ ಬಳಸಿಕೊಂಡರು. ಸುನೀತರೂಪ ಅವರ ಕಲ್ಪನೆಗೆ ಅಗತ್ಯವಾಗಿದ್ದ ಶಿಸ್ತನ್ನು ತಂದುಕೊಟ್ಟಿತು. ಅವರ ಕಲ್ಪನೆಯ ಶಕ್ತಿ ಅಸಾಧಾರಣವಾದದ್ದು. ಊರ್ವಶಿಯಂಥ ಕವನದಲ್ಲಿ ಕವಿಕಲ್ಪನೆ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತದೆ. ಪರಿಪೂರ್ಣ, ಅಲೌಕಿಕ ಸೌಂದರ್ಯದ ದರ್ಶನ, ಭಾಷೆಯ ವೈಭವ, ಛಂದಸ್ಸಿನ ಬಳುಕು ಎಲ್ಲ ಅತಿ ವಿರಳವಾದ ಸೊಬಗು ವೈಭವಗಳಿಂದ ಬೆರೆತ ಸೃಷ್ಟಿ ಇದು. ರವೀಂದ್ರರ ಗಮನ ಮುಖ್ಯವಾಗಿ ಮನುಷ್ಯನ ಮೇಲೆ. ನಿಸರ್ಗವನ್ನು ಅವರು ಬಹು ಸುಂದರವಾಗಿ ವರ್ಣಿಸಿದ್ದರೂ ಮನುಷ್ಯರ ಸುಳಿವಿಲ್ಲದ ನಿಸರ್ಗದ ದೃಶ್ಯಗಳು ಅವರಲ್ಲಿ ವಿರಳ. ಆದರೆ ನಿಸರ್ಗ ಹಾಗೂ ಮಾನವರ ಮನಸ್ಸಿನ ಪದರಗಳನ್ನು (ಅವರ ಕಾವ್ಯಸೃಷ್ಟಿಯ ಪ್ರಾರಂಭದ ಅವಧಿ ಕಳೆದ ಅನಂತರದ ಕವನಗಳಲ್ಲಿ) ಬಿಡಿಸಿ ಬೆಳಗುವಾಗಲೇ ಅವನನ್ನು ವಿಶಾಲವಾದ, ಜೀವಂತವಾದ, ಭಾವದಿಂದ ಸ್ಪಂದಿಸುವ ಆವರಣದ ಭಾಗವಾಗಿ ಕಂಡದ್ದು ಅವರ ಕಾವ್ಯದ ವೈಶಿಷ್ಟ್ಯ. ರವೀಂದ್ರರು ಬರೆದ ಮೊದಲ ನಾಟಕ ರುದ್ರಚಂದ್ರ (1881) ಎಂದು ಕಾಣುತ್ತದೆ. ವಾಲ್ಮೀಕಿ ಪ್ರತಿಭಾ ಎಂಬುದು ಗೀತ ನಾಟಕ. ಇದರಲ್ಲಿ ಕೆಲವು ಐರಿಷ್ ರಾಗಗಳ ಹಾಡುಗಳೂ ಇವೆ. ಪ್ರಕೃತಿರ್ ಪರಿಶೋಧ್ ಅವರ ಮೊದಲ ಮುಖ್ಯ ನಾಟಕ. ಇದು ಬಯಲು ಪ್ರದರ್ಶನಕ್ಕೆ ಹೊಂದಿಕೊಂಡ ನಾಟಕ. ಈ ಕೃತಿಯಲ್ಲಿ ಸಂನ್ಯಾಸಿಯೊಬ್ಬ ಸತ್ಯಾನ್ವೇಷಣೆಗಾಗಿ ಎಲ್ಲ ಬಂಧನಗಳನ್ನೂ ಕಿತ್ತೊಗೆಯಲು ಪ್ರಯತ್ನಿಸುತ್ತಾನೆ. ಬಾಲಕಿಯೊಬ್ಬಳು ಅವನನ್ನು ಮತ್ತೆ ಸಹಮಾನವರ ಜಗತ್ತಿಗೆ ಕರೆತರುತ್ತಾಳೆ. ಸಾಂತ ಅನಂತಗಳನ್ನು ಪ್ರೇಮ ಒಂದುಗೂಡಿಸುತ್ತದೆ. ಇದರಲ್ಲಿನ ಪಾತ್ರಗಳು ಸಾಕಷ್ಟು ಜೀವಂತವಾಗಿಲ್ಲ. ದೀರ್ಘ ಭಾಷಣಗಳೂ ಉದ್ವೇಗದ ಘೋಷಣೆಗಳೂ ಉಂಟು. ಆದರೆ ಬಡಜನರ ಸಂಭಾಷಣೆ ಸಹಜವಾಗಿದೆ. ಲವಲವಿಕೆಯಿಂದ ಕೂಡಿದೆ. ರಾಜ ಓ ರಾಣಿ ಎಂಬುದು ರವೀಂದ್ರರ ಮೊದಲ ಗಂಭೀರ ನಾಟಕ. ಆತ್ಮವಂಚನೆ ಇದರ ವಸ್ತು. ಅವರ ಮೊದಲಿನ ನಾಟಕಗಳಲ್ಲಿ ಬಹಳ ಯಶಸ್ವಿಯಾದದ್ದು ಬಲಿ. ಕಾಳಿಯ ಭಕ್ತನಾಗಿ ಅವಳ ಬಲಿಗೆ ಎಂದು ಎಳೆಯ ಹುಡುಗಿಯೊಬ್ಬಳಿಗೆ ಸೇರಿದ ಮೇಕೆಯನ್ನು ತಂದ ರಘುಪತಿಯ ಜೀವನ ಮರುಭೂಮಿಯಾಗುತ್ತದೆ. ಅದಕ್ಕೆ ಮತ್ತೆ ಮಾನವೀಯ ಭಾವನೆಗಳ ನೀರನ್ನು ಹರಿಸುವವಳು ಆ ಬಾಲಕಿಯೇ. ಮಾನವೀಯ ಸಂದರ್ಭದಲ್ಲಿ ಬಲಿಯ ಪರಿಕಲ್ಪನೆಯ ನಾಟಕೀಯ ಅಭಿವ್ಯಕ್ತಿಯೇ ಈ ಕೃತಿ. ರವೀಂದ್ರರ ನಾಟಕಗಳಲ್ಲೆಲ್ಲ ಒಂದು ನಿರ್ದಿಷ್ಟ ವಿಚಾರ ಮುಖ್ಯವಾಗುತ್ತದೆ; ಅಲ್ಲಿ ಪಾತ್ರಗಳಿಗೆ ಎರಡನೆಯ ಸ್ಥಾನ. ರಘುಪತಿಯ ಕವಿ ಸೃಷ್ಟಿಸಿರುವ ಶಕ್ತಿವಂತ. ಜೀವಂತ ಪಾತ್ರಗಳಲ್ಲಿ ಒಂದು. ಕಾಹಿನಿ ಸಂಕಲನದ ಐದು ಕಿರುನಾಟಕಗಳಲ್ಲಿ ಕ್ರಿಯೆ ಬಹು ಕಡಿಮೆ ಇಲ್ಲಿ ಪಾತ್ರಗಳು ಒಂದು ವಿಶಿಷ್ಟ ಸನ್ನಿವೇಶದಲ್ಲಿ ಸಿಲುಕಿದಾಗ ತೋರುವ ಪ್ರತಿಕ್ರಿಯೆಯನ್ನು ಕವಿ ಸೂಕ್ಷ್ಮವಾಗಿ ಭಾಷೆಯಲ್ಲಿ ಹಿಡಿದಿಡುತ್ತಿದ್ದಾನೆ. ರಾಜ ಎಂಬ ನಾಟಕ (ಇಂಗ್ಲಿಷಿನ ಅನುವಾದವನ್ನು ರವೀಂದ್ರರು ದಿ ಕಿಂಗ್ ಆಫ್ ದಿ ಡಾರ್ಕ್ ಚೇಂಬರ್ ಎಂದು ಕರೆದರು) ಭಗವಂತನ ಸೇವೆಗೆ ಭಕ್ತನ ಸರ್ವಾರ್ಪಣೆಗಿಂತ ಕಡಿಮೆ ಸಲ್ಲುವುದಿಲ್ಲ ಎನ್ನುವ ಭಾವದ ಅಭಿವ್ಯಕ್ತಿ. ಈ ನಾಟಕದಲ್ಲಿ ಮತ್ತು ಅಂಚೆಯ ಮನೆ ಎಂಬ ನಾಟಕದಲ್ಲಿ ರವೀಂದ್ರರು ಸಂಕೇತ ವಿಧಾನವನ್ನು ಬಳಸುತ್ತಾರೆ. ಮುಕ್ತಧಾರಾಕೃತಿಯ ಬಗ್ಗೆ ವಿಮರ್ಶಕರಲ್ಲಿ ತೀರ ಭಿನ್ನಾಭಿಪ್ರಾಯವಿದೆ, ಕೆಲವರು ಇದು ಅವರ ಸಂಕೇತ ವಿಧಾನದ ನಾಟಕಗಳಲ್ಲಿ ಪರಿಪೂರ್ಣವಾದದ್ದು ಎನ್ನುತ್ತಾರೆ; ಇನ್ನು ಕೆಲವರು ನಾಟಕವಾಗಿ ಇದು ಅತೃಪ್ತಿಕರ ಎನ್ನುತ್ತಾರೆ. (ರವೀಂದ್ರರೇ 'ಇದು ಸಂಕೇತ ನಾಟಕ ಎಂದು ಗಣಿಸುವುದು ತಪ್ಪಲ್ಲ. ಆದರೆ ನಾಟಕದ ಉದ್ದೇಶ ಮನಸ್ಸಿನ ಒಂದು ಸ್ಥಿತಿಯ ಚಿತ್ರಣ' ಎಂದರು). ಚಿತ್ರಾಂಗದ ಮತ್ತು ನಟೀರ್ ಪೂಜಾ ಅವರ ಅತ್ಯುತ್ತಮ ನಾಟಕಗಳು. ಇಲ್ಲಿ ಪಾತ್ರಗಳು ಜೀವಂತವಾಗುತ್ತವೆ; ಚಿತ್ರಾಂಗದೆಯಂತೂ ರಾಗಭಾವಗಳು ಉಕ್ಕುವ ಜೀವಚೇತನವಾಗುತ್ತಾಳೆ. ಕ್ರಿಯೆಯ ಬೆಳವಣಿಗೆಯಲ್ಲಿ ಯಾವ ಅನಗತ್ಯ ಗೊಂದಲವಿಲ್ಲದೆ ಅದ್ಭುತವಾದ ಶಿಖರವನ್ನು ಮುಟ್ಟುತ್ತದೆ. ಸಂಪ್ರದಾಯದ ಧರ್ಮ ಹಾಗೂ ಬೌದ್ಧ ಧರ್ಮಗಳ ಘರ್ಷಣೆ ಸರಳವಾದ, ಭವ್ಯವಾದ ನಿರೂಪಣೆ ಪಡೆಯುತ್ತದೆ-ನಟೀರ್ ಪೂಜಾದಲ್ಲಿ.

ರವೀಂದ್ರರ ನಾಟಕಗಳಲ್ಲಿ ಹಲವು ಓದಿದಾಗ ಮಾಡುವ ಪರಿಣಾಮವನ್ನು ರಂಗ ಭೂಮಿಯ ಮೇಲೆ ಮಾಡುವುದಿಲ್ಲ ಎಂಬುದನ್ನು ಒಪ್ಪಬೇಕು. ಉಪಕಥಾವಸ್ತುಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಲಾರರು, ಹಲವು ನಾಟಕಗಳಲ್ಲಿ ಮಾನವ ಸ್ವಭಾವದಲ್ಲಿನ ಆಸಕ್ತಿಗಿಂತ ಒಂದು ವಿಚಾರರೀತಿ ಪ್ರಧಾನವಾಗುತ್ತದೆ. ಆದರೆ ಚಿತ್ರಾಂಗದಾ, ನಟೀರ್ ಪೂಜಾ, ಮುಕ್ತಧಾರಾ ಮೊದಲಾದ ನಾಟಕಗಳು ಗಹನವಾದ ಅನುಭವಕ್ಕೆ ರೂಪ ನೀಡಿವೆ.

ನಾಟಕಗಳಿಗಿಂತ ಕಾದಂಬರಿಗಳಲ್ಲಿ ರವೀಂದ್ರರ ವೈಚಾರಿಕತೆ ಗಟ್ಟಿಯಾಗಿದೆ, ಕೃತಿಯಲ್ಲಿ ಕರಗಿ ಹೋಗಿದೆ, ಕುತೂಹಲಕರವಾದ ಅಂಶವೆಂದರೆ ಅವರ ಯಶಸ್ವೀ ಕಾದಂಬರಿಗಳಲ್ಲಿ ಜೀವಂತ ಪಾತ್ರಗಳು ಸೃಷ್ಟಿಯಾಗಿದೆ. ವಿಚಾರಗಳ ಘರ್ಷಣೆ ಪಾತ್ರಗಳ ಮುಂದೆ ನಿರ್ಣಾಯಕ ಆಯ್ಕೆಗಳ ಸವಾಲನ್ನು ಒಡ್ಡಿ ಮಾನವ ಜೀವನದಲ್ಲಿನ ಸಹಜ ಶಕ್ತಿಯಾಗಿ ನಿಲ್ಲುತ್ತದೆ.

ಚಾ ಠಾಕುರಾಣೀರ್ ಹಾಟ್ ಎಂಬುದು ರವೀಂದ್ರರ ಮೊದಲನೆಯ ಕಾದಂಬರಿ, ಎರಡನೆಯ ಕಾದಂಬರಿ ಚೋಖೇರ್ ಬಲಿಯಲ್ಲಿ (ಕನ್ನಡದಲ್ಲಿ ವಿನೋದಿನಿ ಎಂದು ಪರಿಚಿತ) ಬಂಗಾಳದ ಪ್ರಥಮ ಕಾದಂಬರಿಕಾರ ಬಂಕಿಂಚಂದ್ರರ ಪ್ರಭಾವದಿಂದ ರವೀಂದ್ರರು ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ಪಾಶ್ಚಾತ್ಯ ಪ್ರಭಾವದಿಂದ ಸ್ವತಂತ್ರ ವಿಚಾರ ಪ್ರವೃತ್ತರಾದ ತರುಣ ಪೀಳಿಗೆಯ ಜಗತ್ತು ಈ ಕಾದಂಬರಿಯದು. ವಿನೋದಿನಿ ಬಂಗಾಳದ ಕಾದಂಬರಿಯ (ಪ್ರಾಯಶಃ ಭಾರತೀಯ ಕಾದಂಬರಿಯ) ಮೊಟ್ಟಮೊದಲ ಆಧುನಿಕ ಯುವತಿ. ಈ ಕಾದಂಬರಿಯಲ್ಲಿ ರವೀಂದ್ರರು ಮನಸ್ಸಿನ ವ್ಯಾಪಾರದತ್ತ ಬೆಳಕು ಹರಿಸಿದರು. ಕಥಾವಸ್ತು ಹಾಗೂ ಘಟನೆಗಳಿಗಿದ್ದ ಪ್ರಾಧಾನ್ಯ ಹೋಗಿ ಅಂತರಂಗದ ಜಗತ್ತಿಗೆ ಅಲ್ಲಿ ಪ್ರಾಧಾನ್ಯ ದೊರೆಯಿತು. ಪಾತ್ರ ಸನ್ನಿವೇಶಗಳ ಪ್ರತಿಕ್ರಿಯೆಗಳಿಂದ ಕ್ರಿಯೆ ಮುಂದುವರೆಯುವ ಮೊದಲ ಕಾದಂಬರಿ ಇದು. ಚೋಖೇರ್ ಬಲಿಯಿಂದ ಬಂಗಾಳಿ ಕಾದಂಬರಿ ಬಾಲ್ಯ ಕಳೆದು ಪ್ರೌಢಾವಸ್ಥೆಯನ್ನು ಮುಟ್ಟಿತು. ನೌಕೌಡುಬಿ (ನೌಕಾಘಾತ) ಪ್ರಸಿದ್ಧ ಕಾದಂಬರಿಯಾದರೂ ಚೋಖೇರ್ ಬಲಿಯ ಮಟ್ಟಕ್ಕೆ ಬರಲಾರದು. ಆದರೆ ಸಮಕಾಲೀನ ಸಮಾಜದ ಸಮಸ್ಯೆಗಳ ಸೂಕ್ಷ್ಮ ನಿರೂಪಣೆ ಇಲ್ಲಿದೆ. ಹಲವು ದೋಷಗಳನ್ನು ಒಳಗೊಂಡಿದ್ದರೂ ಗೋರಾ ರವೀಂದ್ರರ ಅತ್ಯುತ್ತಮ ಕಾದಂಬರಿ. ಎರಡು ಸಂಸ್ಕøತಿಗಳ ಘರ್ಷಣೆಯ ಸಂದರ್ಭದಲ್ಲಿ ಜೀವಂತ ಸ್ತ್ರೀಪುರುಷರ ಬಾಳ ಹೊಯ್ದಾಟ, ಗತಿಗಳನ್ನು ಚಿತ್ರಿಸುವ ಕೃತಿ ಇದು. ಅಂದಿನ ಜೀವನದ ಅವೆಷ್ಟು ಮುಖಗಳನ್ನು ಕೃತಿ ಪತ್ರಿಬಿಂಬಿಸಿದೆ ಎಂಬುದು ಬೆರಗುಗೊಳಿಸುವ ಅಂಶ. ಒಂದು ರೀತಿಯಲ್ಲಿ ಐತಿಹಾಸಿಕವೇ ಆದರೂ ಕಾದಂಬರಿ ಐತಿಹಾಸಿಕ ಸಂದರ್ಭದಲ್ಲಿ ಬಂಧನ ಬಿಡುಗಡೆಗಳ ಕಾಲಾತೀತ ಅನುಭವಕ್ಕೆ ಶರೀರ ನೀಡಿದೆ. ಬಂಗಾಳಿ ಕಾದಂಬರಿಯ ಮೊದಲ ಪೌರುಷವಂತ ನಾಯಕ ಗೋರಾ. ಗೋರಾ ಕಾದಂಬರಿಯು ಹಿಂದಿನ ವ್ಯವಸ್ಥೆಯ ಮಿತಿಗಳನ್ನು ಮಾತ್ರವಲ್ಲದೆ ಹೊಸ ವ್ಯವಸ್ಥೆಯ ಮಿತಿಗಳನ್ನು ತೆರೆದಿಡುತ್ತದೆ. ಮನುಷ್ಯನ ಚೇತನ ಅರಳುವುದಕ್ಕೆ ಅಡ್ಡಿಯಾದ ಎಲ್ಲಾ ಸಂಕುಚಿತ ಸಿದ್ಧಾಂತಗಳನ್ನು ಇದು ವಿರೋಧಿಸುತ್ತದೆ. ಎಲ್ಲ ಪಾತ್ರಗಳಿಗಿಂತ ಎತ್ತರವಾಗಿ ನಿಲ್ಲುವ ಕೇಂದ್ರ ಪಾತ್ರ ಈ ಕಾದಂಬರಿಯಲ್ಲಿಲ್ಲ. ನಮ್ಮ ಮನಸ್ಸಿನಲ್ಲಿ ಬಹುಕಾಲ ನಿಲ್ಲುವ ಹಲವು ಪಾತ್ರಗಳು ಇಲ್ಲಿವೆ. ಚತುರಂಗ, ಘರೆ ಬಾೈರೆ (ಮನೆ ಮತ್ತು ಜಗತ್ತು) ಇಂಥ ಎರಡು ಕಾದಂಬರಿಗಳನ್ನು ಒಂದೇ ಅವಧಿಯಲ್ಲಿ ರವೀಂದ್ರರು ಬರೆದರೆಂಬುದು ಅವರ ಪ್ರತಿಭೆಗೆ ಸಾಕ್ಷಿ. ವಿನೋದಿನಿಯಲ್ಲಿ ರವೀಂದ್ರರು ನಿರೂಪಿಸಿದ ಗಂಡು ಹೆಣ್ಣಿನ ಆಕರ್ಷಣೆಯ ಸಮಸ್ಯೆ ಮುಂದಿನ ಹಲವು ಕಾದಂಬರಿಗಳ ವಸ್ತುವಾಯಿತು (ಚತುರಂಗ, ಮಾಲಾಂಛ, ಇಬ್ಬರು ಸಹೋದರಿಯರು, ಯೋಗಾಯೋಗ). ಬರಬರುತ್ತ ರವೀಂದ್ರರಿಗೆ ಮಾನಸಿಕ ವ್ಯಾಪಾರ, ವ್ಯಕ್ತಿತ್ವಗಳ ಘರ್ಷಣೆಯಲ್ಲಿ ಎಷ್ಟು ಆಸಕ್ತಿ ಉಂಟಾಯಿತು ಎಂದರೆ ಇಬ್ಬರು ಸಹೋದರಿಯರು, ಮಾಲಾಂಛ, ಮನೆ-ಜಗತ್ತು-ಈ ಮೂರರಲ್ಲಿಯೂ ಮುಖ್ಯ ಪಾತ್ರಗಳು ಮೂರೇ. ಚಾರ್ ಅಧ್ಯಾಯದಲ್ಲಿ ಕತೆ ಬಹು ತೆಳು; ಪ್ರಣಯಿಗಳ ಮನಸ್ಸಿನ ಹೊಯ್ದಾಟವೇ ಕಾದಂಬರಿಯ ತಿರುಳು.

`ಜೋಖೇರ್ ಬಾಲಿ ಯಿಂದ ಬಂಗಾಳಿಯಲ್ಲಿ ವಾಸ್ತವಿಕ ಕಾದಂಬರಿ ಪ್ರಾರಂಭವಾಯಿತು. ಪಾತ್ರನಿರೂಪಣೆ, ಮಾನಸಿಕ ವಿಶ್ಲೇಷಣೆ ಇವು ಪ್ರಾಮುಖ್ಯತೆ ಪಡೆಯುತ್ತವೆ. ರವೀಂದ್ರರ ಹಲವು ಕಾದಂಬರಿಗಳಲ್ಲಿ ಬರುವ ದೀರ್ಘವಾದ ಭಾಷಣಗಳೂ ಚರ್ಚೆಗಳೂ ಕಥೆಯ ಸಹಜವಾದ ಓಟಕ್ಕೆ ಅಡ್ಡಿಯಾಗುತ್ತವೆ. ಕ್ರಿಯೆಯಲ್ಲಿ ಅಂತರ್ಗತವಾಗದೆ ಬೇರೆಯಾಗಿ ನಿಲ್ಲುತ್ತವೆ ಎನ್ನುವುದು ನಿಜ. ಈ ಕಾದಂಬರಿಗಳು ಮಧ್ಯಮ ವರ್ಗದ ವಿದ್ಯಾವಂತ ಪೀಳಿಗೆಯ ಜೀವನಕ್ಕೆ ಸೀಮಿತವಾದವು ಎನ್ನುವುದೂ ನಿಜ. ಆದರೆ ರವೀಂದ್ರರ ಸಾಹಿತ್ಯ ಸಾಧನೆಯನ್ನು ಮಾತ್ರವಲ್ಲ, ಅವರ ಸಾಹಿತ್ಯದ ಮನೋಧರ್ಮವನ್ನು ತಿಳಿಯಲೂ ಕಾದಂಬರಿಗಳು ಬಹುಮುಖ್ಯ. ದೂರವಿರುವ ದೇವಪ್ರಭು, ನಕ್ಷತ್ರ, ಕಮಲ, ಸಂಧ್ಯೆ, ಕೊಳಲು, ವಧು-ಇವುಗಳ ಕನಸಿನ ಜಗತ್ತಿನ ನಿವಾಸಿ ರವೀಂದ್ರರು ಎಂಬ ಭಾವನೆ ಎಷ್ಟು ತಪ್ಪಾದದ್ದು ಎಂಬುದನ್ನು ಕಾದಂಬರಿಗಳು ಎತ್ತಿ ತೋರಿಸುತ್ತವೆ. ಸಮಕಾಲೀನತೆ, ಆಧುನಿಕತೆ ಎರಡೂ ಸ್ಪಂದಿಸುವ ಕೃತಿಗಳು ಇವು. ಕಾದಂಬರಿಯಲ್ಲಿ ಮೂರ್ತಿಭವಿಸುವ ಸಮಾಜ, ರಕ್ತಮಾಂಸಗಳಿರುವ ಪಾತ್ರಗಳ ಜೀವನಗಳು-ಇವೆರಡೂ ಕೂಡಿದ ಸಂದರ್ಭದಲ್ಲಿ ಸಮಸ್ಯೆಗಳು ಜರೂರನ್ನೂ ಮಾನವೀಯ ಅರ್ಥವನ್ನೂ ನಡೆಯುತ್ತವೆ. 1981ರಲ್ಲಿ ರವೀಂದ್ರರು ಸಣ್ಣ ಕಥೆಗಳ ರಚನೆಗೆ ಕೈಹಾಕಿದರು. ಕಾಬೂಲಿವಾಲಾ, ಪೋಸ್ಟ್‍ಮಾಸ್ಟರ, ಮನೆಗೆ ಬಂದದ್ದು, ನಾಯಂಚೋರಿನ ಬಾಬುಗಳು-ಮೊದಲಾದವು ಇವರ ಪ್ರಸಿದ್ಧ ಕಥೆಗಳು. ರವೀಂದ್ರರ ಸಾಹಿತ್ಯ ಜಗತ್ತಿನ ನಿವಾಸಿಗಳು ಮಧ್ಯಮವರ್ಗದ ನಗರಜೀವಿಗಳು ಎಂಬ ಮಾತನ್ನು ಕಥೆಗಳು ಬಹುಮಟ್ಟಿಗೆ ಮಾರ್ಪಡಿಸುತ್ತವೆ. ಪ್ರಸಿದ್ಧ ಕಥೆಗಳಾದ ಕಾಬೂಲಿವಾಲಾ, ಪೋಸ್ಟ್‍ಮಾಸ್ಟರ್‍ಗಳಲ್ಲಿ ಸಹ ಭಾವಾತಿರೇಕದ ಛಾಯೆಯುಂಟು. ಆದರೆ ಒಟ್ಟಿನಲ್ಲಿ ಪಾತ್ರದ ಒಂದು ಮುಖವನ್ನು ರವೀಂದ್ರರು ಯಶಸ್ವಿಯಾಗಿ ಬಳಸಿದ್ದಾರೆ. ಉಪನಿಷತ್ತಿನ ಕಥೆಗಳು, ಯೇಸುವಿನ ಕಥೆಗಳು-ಇವನ್ನು ಹೋಲುವ ಅವರ ಹನಿಗತೆಗಳಲ್ಲಿನ ಕೇಂದ್ರೀಕರಣ ಅಸಾಧಾರಣವಾದುದು. ರವೀಂದ್ರರ ಕಥೆಗಳಲ್ಲಿ ಕಥಾವಸ್ತು ಮುಖ್ಯವಲ್ಲ. ರಹಸ್ಯದ ಅಂಶ, ಚಕಿತಗೊಳಿಸುವ ಮುಕ್ತಾಯ ಇವನ್ನು ಸಾಮಾನ್ಯವಾಗಿ ಅವರು ಬಳಸುವುದಿಲ್ಲ. ಆದರೆ ಕಾಲ-ದೇಶಗಳ ಮಿತಿಯಿಂದ ದೂರವಾದ ಮಾನವ ಸ್ವಭಾವದ ಮೂಲ ಅಂಶಗಳನ್ನು ಅವರ ಯಶಸ್ವೀ ಕಥೆಗಳು ಬೆಳಗಿಸುತ್ತವೆ.

ಜೀವನ್‍ಸ್ಮøತಿ ಎಂಬುದು ಅವರ ಶೀರ್ಷಿಕೆಯೇ ಹೇಳುವಂತೆ, ಆತ್ಮವೃತ್ತವಲ್ಲ. ಕವಿಗೆ ತಮ್ಮ ಗತಜೀವನದಲ್ಲಿ ಮುಖ್ಯವಾಗಿ ಕಂಡುಬಂದ ಸ್ಮøತಿಗಳು ಈ ಕೃತಿಯಲ್ಲಿ ನಿರೂಪಿತವಾಗಿವೆ. ಇದು ಕಾಲಾನುಕ್ರಮವಾದ ವೃತ್ತಾಂತವಲ್ಲ. ಇದನ್ನು ಬರೆದಾಗ ಕವಿಗೆ ಐವತ್ತು ವರ್ಷ ವಯಸ್ಸು. ಅವರ ಬಾಳಿನ ಮೊದಲ ಇಪ್ಪತ್ತನಾಲ್ಕು ವರ್ಷಗಳಿಗೆ ಮಾತ್ರ ಈ ಗ್ರಂಥ ಸೀಮಿತವಾಗಿದೆ. ಇದೊಂದು ವಿಶಿಷ್ಟ ರೀತಿಯ ಸೃಷ್ಟಿ. ಓದುವಾಗ ಕಣ್ಣಮುಂದೆ ದೃಶ್ಯಗಳು ಹಾದು ಹೋದಂತೆ ಭಾಸವಾಗುತ್ತದೆ. ಹುಟ್ಟು ಕವಿ-ಕಥೆಗಾರನ ನಿರೂಪಣೆ ಇದು. ಸೂಕ್ಷ್ಮವಾದ ಮನಸ್ಸೊಂದು ಅರಳುವ ಪ್ರಕ್ರಿಯೆ ವಿವರವಿವರವಾಗಿ ಚಿತ್ರಿತವಾಗಿದೆ. ಇದರೊಂದಿಗೇ, ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದ ಬಂಗಾಳ ಕಣ್ಣಮುಂದೆ ರೂಪುಗೊಳ್ಳುತ್ತದೆ. ಇಲ್ಲೆಲ್ಲ ರವೀಂದ್ರರ ಹಾಸ್ಯ ಅತಿ ತನ್ಮಯತೆಯ ಅಪಾಯವನ್ನು ನಿವಾರಿಸುತ್ತದೆ.

ಶಿಶುಸಾಹಿತ್ಯವೇ ಇಲ್ಲದಿದ್ದ ಭಾಷೆಯಲ್ಲಿ ರವೀಂದ್ರರು ಉತ್ತಮ ಶಿಶುಸಾಹಿತ್ಯವನ್ನು ಸೃಷ್ಟಿಸಿದರು. ಈ ಮಾತನ್ನು ಹೇಳುವಾಗ ಮತ್ತೊಂದು ಮಾತನ್ನೂ ಹೇಳಬೇಕು. ಮಕ್ಕಳ ಮನಸ್ಸು ಹೇಗೆ ಓಡುತ್ತದೆ, ದೊಡ್ಡವರು ಸುತ್ತಲಿನ ಜಗತ್ತನ್ನು ಕಾಣುವ ದೃಷ್ಟಿಗಿಂತ ಅವರ ದೃಷ್ಟಿ ಎಷ್ಟು ಭಿನ್ನ ಎಂದು ತೋರಿಸುವ ಸಾಹಿತ್ಯವನ್ನು ಮಕ್ಕಳ ಭಾಷೆಯಲ್ಲಿ ಅವರು ಬರೆದರು. ಆದರೆ ಮಕ್ಕಳೇ ಓದಿ ನಲಿಯಬಹುದಾದಂಥದನ್ನು ಅವರು ಬರೆದದ್ದು ಕಡಿಮೆ.

ಸಾಹಿತ್ಯವನ್ನೂ ಕಲೆಯನ್ನೂ ಕುರಿತು ರವೀಂದ್ರರು ಸಮೃದ್ಧವಾಗಿ ಬರೆದಿದ್ದಾರೆ. ಸಾಹಿತ್ಯವನ್ನು ಕುರಿತ ಅವರ ದೃಷ್ಟಿಯನ್ನು ಅವರ ಮಾತುಗಳಲ್ಲೆ ತಿಳಿಯಬಹುದು: "ಈ ಪ್ರಪಂಚವೇ ಒಂದು ನಿತ್ಯನೂತನವಾದ ಚಮತ್ಕಾರ; ಪರಿಮಿತದಲ್ಲಿ ಅನಂತದ ಅಭಿವ್ಯಕ್ತಿ. ಉಷೆ ಪ್ರಬುದ್ಧ ಜೀವನಕ್ಕೆ ಗಾನ ಮಾಡುವಂತೆ, ಬಳಲಿದ ದಾರಿಕಾರನಿಗೆ ಸಂಧ್ಯೆಯೂ ಪುನರ್ಭವದಲ್ಲಿ ಜೀವನದ ಸಾರ್ಥಕ್ಯದ ಪಲ್ಲವಿಯನ್ನು ಹಾಡುತ್ತಾಳೆ. ಈ ಕರೆ ಮಾನವನಲ್ಲಿ ಪ್ರತಿಧ್ವನಿತವಾದಾಗ, ಸತ್ಯವನ್ನು ಅಭಿವ್ಯಕ್ತಿ ಮಾಡಲು, ತನ್ನಲ್ಲಿರುವ ಅನಂತವನ್ನು ಪ್ರಕಟಿಸಲು, ಆತ ಕವಿಯಾಗುತ್ತಾನೆ, ಸೃಷ್ಟಿ ಮಾಡುತ್ತಾನೆ. ಅದು ನಮ್ಮ ಆತ್ಮದ ಅಮರತ್ವವನ್ನು ಸೂಚಿಸುತ್ತ ಪರಮಾತ್ಮನೊಡನೆ ಸಹಕಾರವನ್ನು ತಂದೊದಗಿಸುತ್ತದೆ. ಸಾಹಿತ್ಯವು ಸತ್ಯವೇ ಆನಂದ, ಸತ್ಯವೇ ಅಮೃತ ಎಂದು ತಿಳಿಸುತ್ತದೆ," ಉದ್ಧರಿಸಿರುವ ಈ ಭಾಗಗಳಿಂದ ಸ್ಪಷ್ಟವಾಗುವಂತೆ ಸಾಹಿತ್ಯದ ಅವರ ಕಲ್ಪನೆ ರೊಮ್ಯಾಂಟಿಕ್ ಕಲ್ಪನೆಗೆ ಸಮೀಪವಾದದ್ದು. ಸೃಷ್ಟಿಕರ್ತನೊಬ್ಬನಿದ್ದಾನೆ ಎಂಬ ನಂಬಿಕೆಯ ತಳಹದಿಯ ಮೇಲೆ ನಿಂತದ್ದು. ಅವರ ದೃಷ್ಟಿಯಲ್ಲಿ ಸಾಹಿತ್ಯಸೃಷ್ಟಿ ಮಾನವಕುಲ ನಿರ್ಮಿಸುತ್ತಿರುವ ಒಂದು ವಸ್ತುವಿನ ಒಂದು ಅಂಶ. ಎಲ್ಲ ಕಾವ್ಯದ ಮೂಲ ಸೃಷ್ಟಿಕರ್ತ, ಆದರೆ ಅವರು ತಮ್ಮ ವಿಮರ್ಶೆಯ ಬರೆಹಗಳಲ್ಲಿ ಸಾಹಿತಿಯ ಅನುಭವವನ್ನು, ಸಾಹಿತ್ಯ ನಿರೂಪಿಸುತ್ತದೆ ಎಂದು ಒತ್ತಿ ಹೇಳಿದರು ಎಂಬುದು ಮುಖ್ಯ. ಒಂದು ಹೊಸ ಯುಗವನ್ನೇ ಸಾಹಿತ್ಯ ಚರಿತ್ರೆಯಲ್ಲಿ ನಿರ್ಮಿಸಬಲ್ಲ, ಒಂದು ಪರಂಪರೆಯನ್ನು ಸೃಷ್ಟಿಸಬಲ್ಲ ಪ್ರತಿಭೆ ರವೀಂದ್ರರದು. ಜೀವನದಲ್ಲಿ ಅಗಾಧ ಶ್ರದ್ಧೆ, ಜೀವನದ ಸಂರ್ಕೀತೆಯ ಪ್ರಜ್ಞೆ, ಹಿಂದಿನ ಪರಂಪರೆಯ ಅರಿವು, ಸಮಕಾಲೀನ ಪ್ರಜ್ಞೆ, ಜೀವನದ ಅಪರಿಪೂರ್ಣತೆ, ನೋವು, ಅನ್ಯಾಯಗಳನ್ನು ಗುರುತಿಸುವ ಸ್ವತಂತ್ರ ಜೀವನ ದರ್ಶನ, ಸಾಹಿತ್ಯವನ್ನು ಗಂಭೀರ ಚಟುವಟಿಕೆಯಾಗಿ ಕಾಣುವ ಮನೋಧರ್ಮ ಆ ಮಾಧ್ಯಮದ ವೈಶಿಷ್ಟ್ಯವನ್ನು ಗುರುತಿಸಿದ ಸೃಜನಪ್ರಕ್ರಿಯೆ-ಇವೆಲ್ಲ ಸಾಹಿತಿ ರವೀಂದ್ರರಲ್ಲಿ ಮೇಳೈಸಿದುದರಿಂದ ಅವರು ಶ್ರೇಷ್ಠ ಕವಿಗಳ ಪಂಕ್ತಿಗೆ ಸೇರಿದರು. ವಿಶ್ವಕವಿಗಳಲ್ಲಿ ಅವರೂ ಒಬ್ಬರೇ ಎನ್ನುವುದು ಪ್ರಾಯಶಃ ಇನ್ನೂ ನಿರ್ಣಯವಾಗಬೇಕಾದ ಪ್ರಶ್ನೆ. ರಾಜಾ ರಾಮಮೋನ ರಾಯ್, ವಿದ್ಯಾಸಾಗರ, ಬಂಕಿಂಚಂದ್ರರಿಂದ ಪ್ರಾರಂಭವಾದ ಸಾಹಿತ್ಯ ಸೃಷ್ಟಿಗೆ ವೈಶಾಲ್ಯವನ್ನೂ ವಿಶಿಷ್ಟ ಜೀವನದರ್ಶನವನ್ನೂ ಮಾನವನ ಒಳಜಗತ್ತಿನಲ್ಲಿ ಆಸಕ್ತಿಯನ್ನೂ ತಂದುಕೊಟ್ಟು ರವೀಂದ್ರರು ಯುಗಪುರುಷರಾದರು. ಸಾಹಿತ್ಯದ ಪ್ರತಿ ಪ್ರಕಾರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಕಡೆಯವರೆಗೆ ಮಾಡುತ್ತ್ತಿದ್ದು ಮಾಧ್ಯಮದ ಮತ್ತು ಬಂಗಾಳಿ ಭಾಷೆಯ ಹೊಸ ಸಾಧ್ಯತೆಗಳನ್ನು ಸೂಚಿಸಿದರು. (ಉದಾಹರಣೆಗೆ, ರಕ್ತಕರಬೀ ನಾಟಕದಲ್ಲಿ ಪ್ರೇಕ್ಷಕರ ಎದುರಿಗೆ ಯಾವ ಘಟನೆಯೂ ನಡೆಯುವುದಿಲ್ಲ.) ಕಡೆಯ ಎರಡು ವರ್ಷಗಳಲ್ಲಿ ಕಾಯಿಲೆ, ಸಾವಿನ ಸಾಮೀಪ್ಯ, ನೋವುಗಳಿಂದ ಅವರ ಕಾವ್ಯ ಹೊಸ ಅನುಭವಗಳ ಜಗತ್ತಿಗೆ ಚಿಮ್ಮುತ್ತದೆ; ಬರಬರುತ್ತ ಭಾಷೆ ಉಪನಿಷತ್ತಿನ ಭಾಷೆಯಂತೆ ಅಡಕವಾಗುತ್ತದೆ. ರವೀಂದ್ರರ ಶೈಲಿಯಲ್ಲಿ ಹೊಸದಾದ ನಿರಾಭರಣತೆ ಕಾಣುತ್ತದೆ. ಕಡೆಯವರೆಗೆ ಓದುಗರನ್ನು ಚಕಿತಗೊಳಿಸಬಲ್ಲ ಕವಿ ರವೀಂದ್ರರು.

ಪಾಶ್ಚಾತ್ಯ ಜಗತ್ತಿನಲ್ಲಿ ರವೀಂದ್ರರ ಖ್ಯಾತಿ ಎಂದೂ ಅಷ್ಟು ಸ್ಥಿರವಾಗಿರಲಿಲ್ಲ ಈಚೆಗೆ ಅದು ಕುಂದಿದೆ. ಎನ್ಸೈಕ್ಲೋಪೀಡಿಯ ಬ್ರಿಟಾನಿಕವಾಗಲಿ ಎನ್ಸೈಕ್ಲೋಪೀಡಿಯ ಅಮೆರಿಕಾನವಾಗಲಿ ಅವರ ಮೇಲಿನ ಲೇಖನಕ್ಕೆ ಒಂದು ನೂರಕ್ಕಿಂತ ಹೆಚ್ಚು ಪಂಕ್ತಿಗಳನ್ನು ಕೊಟ್ಟಿಲ್ಲ. ಅಲ್ಲದೆ ಅವರ ಸಾಹಿತ್ಯದ ಸ್ವರೂಪದ ಬಗೆಗೂ ಅಲ್ಲಿ ಏನೂ ಹೇಳಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ರವೀಂದ್ರರು ಗಳಿಸಿದ್ದ ಖ್ಯಾತಿಯ ವಿವರವಾದ, ಕುತೂಹಲಕರವಾದ ವಿಶ್ಲೇಷಣೆ ಎ. ಆ್ಯರನ್‍ಸರ್‍ನ ರಬೀಂದ್ರನಾಥ್ ಥ್ರೂ ವೆಸ್ಟರ್ನ್ ಐಸ್ ಎಂಬ ಪುಸ್ತಕದಲ್ಲಿ ದೊರೆಯುತ್ತದೆ. ಭಾರತದಲ್ಲಿಯೂ ಅವರ ವಿರುದ್ಧ ಪ್ರತಿಕ್ರಿಯೆ ಅವರು ತೀರಿಕೊಂಡ ಸ್ವಲ್ಪ ಕಾಲದಲ್ಲಿಯೆ ಪ್ರಾರಂಭವಾಯಿತು. 1961ರಲ್ಲಿ ಅವರ ಜನ್ಮಶತಾಬ್ದಿಯನ್ನು ಆಚರಿಸಿದರೂ ಪ್ರತಿಕ್ರಿಯೆ ಮುಗಿದಿಲ್ಲ. ಇದಕ್ಕೆ ಬಹುಮಟ್ಟಿಗೆ ಕಾರಣ ರವೀಂದ್ರರ ಜೀವಿತ ಕಾಲದಲ್ಲಿ ಭಾರತೀಯ ಭಾಷೆಗಳಲ್ಲಿ, ಮುಖ್ಯವಾಗಿ ಬಂಗಾಳಿಯಲ್ಲಿ ಅವರ ಸಾಹಿತ್ಯವನ್ನು ಕುರಿತ ವಸ್ತುನಿಷ್ಠ ವಿಮರ್ಶೆಯ ಅಭಾವ. ಅವರು ಬದುಕಿದ್ದ ಕಾಲದಲ್ಲಿ ಅವರು ಬರೆದುದನ್ನೆಲ್ಲ ವಿಮರ್ಶಕರು ಪ್ರಶಂಸಿಸಿದ್ದು, ಜೊತೆಗೆ ಹಲವು ಗೊಂದಲಗಳಿಗೆ ಮತ್ತು ವೈಜ್ಞಾನಿಕ-ತಾಂತ್ರಿಕ ಯುಗ ಪ್ರಭಾವಕ್ಕೆ ಭಾರತ ಒಳಗಾದದು. ಅವರು ಕೋಮಲ ಕಲ್ಪನೆಗಳ, ಅನುಭವದ ಕನಸಿನ ಜಗತ್ತಿನ ಕವಿ ಎಂದು ಭಾವಿಸುವವರು ಅವರು ಕಠೋರ ಸತ್ಯವನ್ನು ಎದುರಿಸಬಲ್ಲವರಾಗಿದ್ದರು ಎಂಬುದನ್ನು ಮರೆಯುತ್ತಾರೆ. (`ನರಕವಾಸದಲ್ಲಿ ಒಂದು ಚಿತ್ರ: ಅಹಂಕಾರಿ ಸಾಧು ಮಗುವನ್ನು ಬೆಂಕಿಯಲ್ಲಿ ಎಸೆಯಲು ಎತ್ತಿಕೊಂಡಿರುವಾಗ, ಜ್ವಾಲೆಯ ವೈಭವನ್ನು ಕಂಡು ಮಗು ಸಾಧುವಿನ ತೋಳಿನಲ್ಲಿ ಕೇಕೆ ಹಾಕಿ ಕುಣಿಯುವುದು.) ರವೀಂದ್ರರ ಸಾಹಿತ್ಯ ಸೃಷ್ಟಿಯಲ್ಲಿ ಕಳೆಯನ್ನು ಕಿತ್ತು ಹಾಕಿ ಮತ್ತೆ ಅದಕ್ಕೆ ಬೆಲೆ ಕಟ್ಟಬೇಕಾಗಿದೆ. (ಎಲ್.ಎಸ್.ಎಸ್.) ಠಾಕೂರರ ಶಿಕ್ಷಣತತ್ತ್ವದೃಷ್ಟಿ: ರವೀಂದ್ರನಾಥ ಠಾಕೂರರು ಆಧುನಿಕ ಭಾರತದ ಶ್ರೇಷ್ಠ ಸಾಹಿತಿಗಳೂ ಕಲಾವಿದರೂ ಆಗಿದ್ದಂತೆ ಪ್ರಗತಿಪರ ಶಿಕ್ಷಣತತ್ತ್ವ ದೃಷ್ಟಿಯುಳ್ಳವರೂ ಆಗಿದ್ದರು. ಅಲ್ಲದೆ ತಮ್ಮ ಆ ಧೋರಣೆಗಳನ್ನು ಅವರು ಕಾರ್ಯರೂಪಕ್ಕಿಳಿಸಿದರು. ನಿಜವಾಗಿ ಹೇಳುವುದಾದರೆ ಶಿಕ್ಷಣ ವಿಷಯದಲ್ಲಿ ತಮಗಿದ್ದ ಅಭಿಪ್ರಾಯಗಳನ್ನು ಅವರು ಪ್ರತ್ಯೇಕವಾಗಿ ಬರೆದಿಡಲಿಲ್ಲ. ತಮ್ಮ ಕೃತಿಗಳಲ್ಲೂ ಲೇಖನ ಉಪನ್ಯಾಸಾದಿಗಳಲ್ಲೂ ಪ್ರಾಸಂಗಿಕವಾಗಿ ಅವನ್ನು ವ್ಯಕ್ತಪಡಿಸಿದರು, ಅಷ್ಟೆ. ಹಾಗೂ ಅವರು ಆರಂಭಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಅದಕ್ಕೆ ವಾಸ್ತವಿಕ ಸ್ವರೂಪವನ್ನು ನೀಡಿ ಅನುಷ್ಠಾನಕ್ಕೆ ತಂದರು. ಆದ್ದರಿಂದ ಅವರು ತಳೆದಿದ್ದ ಶಿಕ್ಷಣತತ್ತ್ವದೃಷ್ಟಿಯನ್ನು ಪರಿಚಯ ಮಾಡಿಕೊಳ್ಳಲು ಬಯಸುವವರು. ಅವರು ಆರಂಭಿಸಿದ ಶಾಂತಿನಿಕೇತನ, ವಿಶ್ವಭಾರತ, ಶ್ರೀನಿಕೇತನ-ಈ ಮೂರು ಸಂಸ್ಥೆಗಳನ್ನು ಮೊದಲು ಪರಿಚಯ ಮಾಡಿಕೊಳ್ಳುವುದು ಅಗತ್ಯವೆನಿಸುತ್ತದೆ.

ಶಾಂತಿನಕೇತನ: ರವೀಂದ್ರರು ಕಾಳಿದಾಸನ ನಾಟಕಗಳಲ್ಲಿ ಬರುವ ಆಶ್ರಮಗಳ ವರ್ಣನೆಗಳನ್ನು ಓದಿ ಅಂಥ ಸನ್ನಿವೇಶ ಶಿಕ್ಷಣಕ್ಕೆ ಬಹು ಸೂಕ್ತವಾದ್ದೆಂದು ಭಾವಿಸಿದ್ದರು. ಜೊತೆಗೆ ತಮ್ಮ ಬಾಲ್ಯದಲ್ಲಿ ಕಲ್ಕತ್ತ ನಗರದ ಜಂಜಡದಲ್ಲಿ ಮಕ್ಕಳು ಶಾಲೆಗಳ ಕೃತಕ ಸನ್ನಿವೇಶದಲ್ಲಿ ಪಂಜರದ ಗಿಳಿಗಳಂತೆ ಓದು ಕಲಿಯುವುದನ್ನು ನೆನಸಿಕೊಂಡು ವ್ಯಾಕುಲಪಟ್ಟುಕೊಳ್ಳುತ್ತಿದ್ದುದಲ್ಲದೆ ವನಾಂತರದ ಪ್ರಶಾಂತ ಆವರಣದಲ್ಲಿ ನೂತನ ರೀತಿಯ ಶಾಲೆಯನ್ನು ಏರ್ಪಡಿಸುವ ಆಲೋಚನೆ ಮಾಡುತ್ತಿದ್ದರು. ಕಡೆಗೆ 1901ರಲ್ಲಿ ಪಶ್ಚಿಮ ಬಂಗಾಳದ ಬೋಲ್ಟುರ ರೈಲ್ವೆ ನಿಲ್ದಾಣಕ್ಕೆ ಎರಡು ಮೈಲಿ ದೂರದಲ್ಲಿ ಶಾಂತ ವಾತಾವರಣದಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಆಗ ಶಾಲೆಯಲ್ಲಿ ಐದಾರು ಮಕ್ಕಳಿದ್ದರು, ಅಷ್ಟೇ. ಮಕ್ಕಳಿಗೆ ಉಚಿತವಾಗಿ ಅಲ್ಲೆ ಊಟವಸತಿಗಳನ್ನು ಏರ್ಪಡಿಸಿದರು. ಕ್ರಮಕ್ರಮವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತು. ಅಷ್ಟಾಗಿ ಆರ್ಥಿಕ ಸೌಲಭ್ಯವಿಲ್ಲದ್ದರಿಂದ ಹಾಗೂ ಸರ್ಕಾರದ ಸಹಾಯಕ್ಕೆ ಆಶಿಸದೆ ಸ್ವತಂತ್ರವಾಗಿ ನಡೆಸುವ ಆಲೋಚನೆಯಿಂದಿದ್ದುದರಿಂದ ಅವರು ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಬೇಕಾಯಿತು. ಮರಗಿಡಗಳಿಂದ ಆವೃತವಾಗಿ ನಗರದಿಂದ ದೂರವಿದ್ದು ಆಶ್ರಮಗಳನ್ನು ನೆನಪಿಗೆ ತರುತ್ತಿದ್ದ ಆ ಶಾಲೆಯೆ ಶಾಂತಿನಿಕೇತನ. ಅಲ್ಲಿನದು ಪ್ರಾಚೀನ ಭಾರತದ ಋಷ್ಯಾಶ್ರಮ ಗುರುಕುಲಗಳ ಸನ್ನಿವೇಶ. ರವೀಂದ್ರರೇ ಗುರುಗಳು. ಇದರಿಂದಾಗಿ ಠಾಕೂರರಿಗೆ ಮುಂದೆ ಗುರುದೇವ ಎಂಬ ಹೆಸರೇ ರೂಢಿಗೆ ಬಂತು. ಅವರ ಪತ್ನಿ ಮೃಣಾಲಿನೀ ದೇವಿಯವರ ಮಕ್ಕಳಿಗೆ ಗುರುಮಾತೆ; ನಿಸರ್ಗದ ಮುಕ್ತ ಮಡಿಲಲ್ಲಿ ಶಿಕ್ಷಣ. ಬೆಳಗ್ಗೆ ಹೊತ್ತಿಗೆ ಮುಂಚೆ ವಿದ್ಯಾರ್ಥಿಗಳು ಏಳಬೇಕು; ನಿತ್ಯಕರ್ಮಗಳನ್ನು ಮುಗಿಸಿಕೊಂಡ ಮೇಲೆ ಹತ್ತು ನಿಮಿಷಗಳ ಕಾಲ ಪ್ರಾರ್ಥನೆ; ತರಗತಿಗಳು ಮರದ ನೆಳಲಿನಲ್ಲಿ ನಡೆಯುತ್ತಿದ್ದವು. ನಿಯಮಬದ್ಧ ಜೀವನ ನಡೆಸಬೇಕಾಗಿದ್ದರೂ ಮಕ್ಕಳು ಪೂರ್ಣ ಸ್ವಾತಂತ್ರ್ಯ ಅನುಭವಿಸುತ್ತಿದ್ದರು. ಆದರೂ ಅವರಾರೂ ಶಿಸ್ತನ್ನು ಮುರಿಯುತ್ತಿರಲಿಲ್ಲ. ಗುರುದೇವ ಮತ್ತು ಅವರ ಪತ್ನಿ ಮಕ್ಕಳಲ್ಲಿ ತಳೆದಿದ ಮಮತೆ, ಅದರ ಜೊತೆಯಲ್ಲೆ ಅವರು ಮಕ್ಕಳಿಗೆ ನೀಡಿದ್ದ ಸ್ವಾತಂತ್ರ್ಯ-ಇವು ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದುವು. ಅಲ್ಲಿನ ತರಗತಿಯ ಕಾರ್ಯಕ್ರಮದಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯವಿತ್ತು. ಬೆಳಗ್ಗೆ ಸಂಗೀತದೊಡನೆ ಕಾರ್ಯಕ್ರಮದ ಆರಂಭ. ಸಾಯಂಕಾಲ ಸಂಗೀತದೊಡನೆ ಮುಕ್ತಾಯ. ಈ ನಡುವೆ ಕ್ರಮವಾಗಿ ತರಗತಿಗಳು ನಡೆಯುತ್ತಿದ್ದರೂ ವ್ಯಾಸಂಗ ವಿಷಯದಲ್ಲಿ ಮಕ್ಕಳಿಗೆ ಸ್ವಾತಂತ್ರ್ಯವಿತ್ತು. ಸೂರ್ಯಾಸ್ತದ ಮುನ್ನ ಮತ್ತೆ ಹತ್ತು ನಿಮಿಷ ಪ್ರಾರ್ಥನೆ, ರಾತ್ರಿ ಕಥೆ ಹೇಳುವುದು, ನಾಟಕ, ನೃತ್ಯ, ಸಂಗೀತ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು, ಪ್ರಾಚೀನ ಗುರುಕುಲಗಳಲ್ಲಿ ಹೇಗೋ ಹಾಗೆ ವಿದ್ಯಾರ್ಥಿಗಳು ಕೊಡೆ ಉಪಯೋಗಿಸುತ್ತಿರಲಿಲ್ಲ; ಮೆಟ್ಟು ತೊಡುತ್ತಿರಲಿಲ್ಲ. ಮಕ್ಕಳಲ್ಲಿ ರವೀಂದ್ರರು ಪ್ರೀತ್ಯಾಸಕ್ತಿಗಳನ್ನು ಹೊಂದಿದ್ದು, ಅವರಲ್ಲಿ ಅಡಗಿರುವ ಮಹತ್ವ ಹೊರಹೊಮ್ಮಲು ತಕ್ಕ ಸನ್ನಿವೇಶಗಳನ್ನು ಒದಗಿಸಿದ್ದರು. ಆಶ್ರಮದ ಕೆಲಸಗಳನ್ನೆಲ್ಲ ಮಕ್ಕಳೇ ಮಾಡಬೇಕಾಗಿದ್ದರೂ ಅದೆಲ್ಲ ತಮ್ಮ ಕೆಲಸವೆಂದು ಅವರು ಸಂತೋಷದಿಂದ ನಿರ್ವಹಿಸುತ್ತಿದ್ದರು. ಒಟ್ಟಿನಲ್ಲಿ ಶಾಂತಿನಿಕೇತನ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯನ್ನು ಬಹುಮಟ್ಟಿಗೆ ಅನುಸರಿಸಿ ವ್ಯವಸ್ಥೆಗೊಂಡಿತ್ತು.

ವಿಶ್ವಭಾರತಿ: ಭಾರತದ ಶಿಕ್ಷಣ ಭಾರತ ಸಂಸ್ಕøತಿ ಸಂಪ್ರದಾಯಗಳ ಬುನಾದಿಯ ಮೇಲೆ ಏರ್ಪಡಬೇಕಾದ್ದು ಸರಿಯಾದರೂ ಅದು ವಿಶ್ವದ ಇತರ ಸಂಸ್ಕøತಿಗಳ ಉತ್ತಮಾಂಶಗಳನ್ನು ಅರಿತು ಸ್ವೀಕರಿಸಬೇಕು. ಈ ಉದ್ದೇಶ ಸಾಧನೆಗಾಗಿ ರವೀಂದ್ರರು ವಿಶ್ವಭಾರತಿ ಎಂಬ ಉನ್ನತ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಭಾರತದ ಎಲ್ಲ ಕಡೆಯಿಂದ ಹಾಗೂ ವಿಶ್ವದ ಇತರ ದೇಶಗಳಿಂದ ವಿದ್ಯಾರ್ಥಿಗಳು ಬಂದು ಅಲ್ಲಿ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಿದರು. ವಿದ್ಯಾರ್ಥಿಗಳಂತೆ ವಿದ್ವಾಂಸರು ಸಹ ಭಾರತದ ವಿವಿಧ ಭಾಗಗಳಿಂದಲೂ ಪ್ರಪಂಚದ ಇತರ ದೇಶಗಳಿಂದಲೂ ಬಂದು ಅಲ್ಲಿ ಸಂಶೋಧನೆ ನಡೆಸಲು ಏರ್ಪಾಡು ಮಾಡಿದರು. ಆ ಮೂಲಕ ಭಾರತೀಯ ಸಂಸ್ಕøತಿ, ಸಾಹಿತ್ಯ, ಕಲೆ ಮುಂತಾದವನ್ನು ಪಾಶ್ಚಾತ್ಯರು ಅರಿಯುವುದಕ್ಕೂ ಪಾಶ್ಚಾತ್ಯರ ಜೀವನದಲ್ಲಿನ ಉತ್ತಮಾಂಶಗಳನ್ನು ಭಾರತೀಯರು ಅರಿಯುವುದಕ್ಕೂ ಅವಕಾಶವಾಗುವುದೆಂದೂ ಅವರು ಪ್ರತಿಪಾದಿಸಿದರು. ಪಾಶ್ಚಾತ್ಯ ಮತ್ತು ಪೌರಸ್ತ್ಯ ಸಂಸ್ಕøತಿಗಳ ಸಂಗಮವಾಗಬೇಕೆಂಬ ಘನವಾದ ಉದ್ದೇಶದಿಂದ ಸ್ಥಾಪನೆಯಾದ ಈ ಸಂಸ್ಥೆಗೆ ವಿಶ್ವಭಾರತಿ ಎಂಬ ಬಹು ಸೂಕ್ತವಾದ ಹೆಸರನ್ನಿಟ್ಟರು, ಅಂಥದೇ ಉದಾತ್ತ ಧ್ಯೇಯದಿಂದ ಪ್ರೇರಿತರಾದ ಪ್ರಾಜ್ಞರು ಅಲ್ಲಿಗೆ ಅಧ್ಯಾಪಕರಾಗಿ ಬಂದರು. ರವೀಂದ್ರರು ತಮ್ಮ ಆಸ್ತಿಪಾಸ್ತಿಯನ್ನೆಲ್ಲ ಸಂಸ್ಥೆಯ ಮುನ್ನಡೆಗಾಗಿ ಧಾರೆಯೆರೆದರು; ನೊಬೆಲ್ ಬಹುಮಾನದಿಂದ ಬಂದ ಅಪಾರ ಹಣವನ್ನೂ ಅದಕ್ಕಾಗಿಯೇ ವಿನಿಯೋಗಿಸಿದರು.

ಒಂದನೆಯ ಮಹಾಯುದ್ಧದಲ್ಲಿ ಸಾವುನೋವಿಗೀಡಾದವರ ಬಗ್ಗೆ ರವೀಂದ್ರರ ಮನಸ್ಸು ಮರ್ಮರ ಮರುಗಿತ್ತು. ಮಾನವ ಸಹಸ್ರಾರು ವರ್ಷಗಳ ಫಲವಾಗಿ ರೂಪಿಸಿದ ಕಲೆ, ಸಂಸ್ಕøತಿ ನಾಗರಿಕತೆಗಳೆಲ್ಲ ಯುದ್ಧದಿಂದ ನಾಶವಾಗುವುದನ್ನು ತೆಡೆಯುವುದು ಅವರಿಗೆ ಅಗತ್ಯವೆನಿಸಿತು. ಅದಕ್ಕಾಗಿ, ಜನಾಂಗಗಳಲ್ಲಿ ವೈರ ಅಳಿದು ಜನರಲ್ಲಿ ಪ್ರೀತಿ, ಐಕಮತ್ಯ, ಸಹಕಾರ ಇವುಗಳ ಮಧುರ ಬಾಂಧವ್ಯ ಮೂಡಿಸುವ ಅಗತ್ಯವನ್ನು ಕಂಡುಕೊಂಡರು. 1918ರಲ್ಲಿ ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯ ಆ ಉದ್ದೇಶವನ್ನು ಸಾಧಿಸುವುದೆಂದು ಹಾರೈಸಿದರು. ಭಾರತೀಯ ಹಾಗೂ ಪ್ರಪಂಚದ ಇತರ ಭಾಷೆಗಳು, ಸಾಹಿತ್ಯಗಳು, ಕಲೆಗಳು ಮುಂತಾದವಕ್ಕೆ ಅಲ್ಲಿ ಪ್ರೋತ್ಸಾಹ ಕೊಟ್ಟುದಲ್ಲದೆ ವಿಜ್ಞಾನ ಸಂಶೋಧನೆಗೂ ಅವಕಾಶ ಕಲ್ಪಿಸಿದರು. ಪಾಶ್ಚಾತ್ಯರಿಂದ ಭಾರತದೇಶ ವಿಜ್ಞಾನ ಸಂಸ್ಕøತಿಯನ್ನು ಬರಮಾಡಿಕೊಳ್ಳುವಂತೆ ಭಾರತೀಯರು ಅವರಿಗೆ ಧಾರ್ಮಿಕ ಸಂಸ್ಕøತಿಯನ್ನು ನೀಡಬೇಕು. ಇತರರಿಂದ ಸ್ವೀಕರಿಸುವುದರ ಜೊತೆಗೆ ನಾವೂ ಅವರಿಗೆ ನಮ್ಮದನ್ನು ಕೊಡಬೇಕು ಎಂದು ಬೋಧಿಸಿ ಆ ವಿಶ್ವವಿದ್ಯಾಲಯದ ನೂತನ ಉದ್ದೇಶಗಳನ್ನು ಸ್ಪಷ್ಟಪಡಿಸಿದರು.

ಶ್ರೀನಿಕೇತನ: ವಿಶ್ವಭಾರತಿ ಏಷ್ಯದ ದೇಶಗಳಿಂದಲೂ ಯೂರೋಪು ಅಮೆರಿಕಗಳಿಂದಲೂ ವಿದ್ವಾಂಸರನ್ನು ಆಕರ್ಷಿಸಿ ವಿಶ್ವಖ್ಯಾತಿ ಪಡೆದಿದ್ದರಿಂದಲೇ ರವೀಂದ್ರರಿಗೆ ತೃಪ್ತಿಯಾಗಲಿಲ್ಲ. ಅದು ಸುತ್ತಣ ಜನತೆಯ ಜೀವನದ ಪರಿಸ್ಥಿತಿಯನ್ನು ಉತ್ತಮಪಡಿಸಬೇಕೆಂಬ ಆದರ್ಶವೂ ಅವರ ಮುಂದೆ ಇತ್ತು. ಹಿಂದೆ ಸ್ವಾವಲಂಬಿಗಳಾಗಿದ್ದ ಭಾರತದ ಹಳ್ಳಿಗಳು ಈಗ ಅಜ್ಞಾನ, ದಾರಿದ್ರ್ಯ, ರೋಗ ರುಜಿನಗಳ ಬೀಡಾಗಿ ಪರಿಸ್ಥಿತಿ ನಿರಾಶಾದಾಯಕವಾಗಿತ್ತು. ಅಲ್ಲಿನ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಉದ್ದೇಶದಿಂದ ಶ್ರೀನಿಕೇತನ ಎಂಬ ಸಂಸ್ಥೆಯನ್ನವರು ಸ್ಥಾಪಿಸಿದರು. ಸುರುಲ ಎಂಬ ಕುಗ್ರಾಮವನ್ನು ಅದಕ್ಕಾಗಿ ಆರಿಸಿಕೊಂಡರು. ಇಂಗ್ಲೆಂಡಿನ ಪ್ರಸಿದ್ಧ ಸಮಾಜಸುಧಾರಕ ಎಲ್ಮ್‍ಹಸ್ರ್ಟ್‍ರು ಅಲ್ಲಿ ಕಾರ್ಯಭಾರವನ್ನು ವಹಿಸಿಕೊಂಡು ಬಹುದಕ್ಷತೆಯಿಂದ ನಿರ್ವಹಿಸುತ್ತಿದ್ದರು. ಅವರ ಪತ್ನಿ ಅದಕ್ಕಾಗಿ ಬೇಕಾದ ಹಾಗೆ ಹಣ ಒದಗಿಸುತ್ತಿದ್ದರು. ಅವರ ಯತ್ನದ ಫಲವಾಗಿ ಅಲ್ಲಿನ ಜನತೆ ವಿದ್ಯಾವಂತರಾಗಿ ಕ್ರಮ ಕ್ರಮವಾಗಿ ಆರೋಗ್ಯವಂತರೂ ಸ್ವಾವಲಂಬಿಗಳೂ ಆಗಿ ಜೀವನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಲಾರಂಭಿಸಿದರು. ರವೀಂದ್ರರ ಪ್ರತಿಭೆ, ಎಲ್ಮ್‍ಹಸ್ರ್ಟರ ನಿಷ್ಠೆ ಮತ್ತು ಅವರ ಪತ್ನಿಯ ಧನಸಹಾಯ-ಇವುಗಳ ಫಲವಾಗಿ ಆ ಊರು ಬಹುಬೇಗ ಮಾದರಿ ಗ್ರಾಮವಾಯಿತು.

ರವೀಂದ್ರರ ಶೈಕ್ಷಣಿಕ ದೃಷ್ಟಿ: ಶಿಕ್ಷಣ ಮಾನವನ ಪರಿಪೂರ್ಣ ವ್ಯಕ್ತಿತ್ವವನ್ನು ಪೋಷಿಸಿ ಬೆಳೆಸಬೇಕೆಂಬುದು ರವೀಂದ್ರರ ಭಾವನೆಯಾಗಿತ್ತು. ವ್ಯಕ್ತಿ ಕೇವಲ ಜ್ಞಾನವೊಂದನ್ನು ಸಾಧಿಸಿದರೆ ಸಾಲದು; ಅವನ ಶೀಲಸಂಪನ್ನತೆಯೂ ವೃದ್ಧಿಯಾಗಬೇಕು; ವ್ಯಕ್ತಿ ತನ್ನ ದೇಶಕ್ಕೂ ಪ್ರಪಂಚಕ್ಕೂ ತನ್ನ ವಿಶಿಷ್ಟ ಕಾಣಿಕೆಯನ್ನು ಸಲ್ಲಿಸುವ ಶಕ್ತಿಯನ್ನೂ ಪಡೆಯಬೇಕು. ಅಂದು ಮಾತ್ರ ಶಿಕ್ಷಣ ತನ್ನ ನಿಜವಾದ ಗುರಿಯನ್ನು ಸಾಧಿಸಿದಂತಾಗುತ್ತದೆ. ಇಂಥ ಶಿಕ್ಷಣ ವ್ಯವಸ್ಥೆಗೆ ಅವರಿಗೆ ಪ್ರಾಚೀನ ಭಾರತದ ಗುರುಕುಲ ಪದ್ಧತಿ ಆದರ್ಶವಾಯಿತು. ಆದ್ದರಿಂದಲೇ ಅವರು ಶಾಂತಿನಿಕೇತನದಂಥ ಸುಂದರವೂ ರಮ್ಯವೂ ನೀರವವೂ ಆದ ಸ್ಥಳದಲ್ಲಿ ತಮ್ಮ ವಿದ್ಯಾಲಯವನ್ನು ಆರಂಭಿಸಿದ್ದು, ಅವರಿಗೆ ಸಾಹಿತ್ಯ, ಸಂಸ್ಕøತಿ, ಕಲೆ, ಧರ್ಮ-ಇವುಗಳಲ್ಲಿ ಅನುಪಮವಾದ ಪ್ರೇಮ. ಅವಕ್ಕೆಲ್ಲ ತಮ್ಮ ವಿದ್ಯಾಲಯದಲ್ಲಿ ಪ್ರಧಾನ ಸ್ಥಾನ ಕಲ್ಪಿಸಿದರು. ಅವರಿಗೆ ವಿಜ್ಞಾನದ ಬಗ್ಗೆ ದ್ವೇಷವಾಗಲಿ ತಿರಸ್ಕಾರವಾಗಲಿ ಇರಲಿಲ್ಲ. ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ವಿರುದ್ಧ ಪಂಥಗಳಲ್ಲವೆಂದೂ ಅವು ಜೀವನದ ಎರಡು ಕಣ್ಣುಗಳೆಂದೂ ಅವರು ಭಾವಿಸಿದ್ದರು. ಪಾಶ್ಚಾತ್ಯರಿಂದ ನಾವು ವಿಜ್ಞಾನವನ್ನು ಕಲಿಯುವಂತೆ ಅವರು ನಮ್ಮಿಂದ ಆಧ್ಯಾತ್ಮವನ್ನು ಅರಿಯಬೇಕೆಂಬುದು ಠಾಕೂರರು ಆರಂಭಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯದ ಮೂಲಮಂತ್ರವಾಗಿತ್ತು. ಆ ಆಶಯವನ್ನು ಈಡೇರಿಸುವಂತೆ ಅದನ್ನು ವ್ಯವಸ್ಥೆಗೊಳಿಸಿದ್ದರು. ಅವರು ಸರ್ವಾಧಿಕಾರ ಪ್ರವೃತ್ತಿಯನ್ನು ಸಹಿಸುತ್ತಿರಲಿಲ್ಲ. ರಾಷ್ಟ್ರದಲ್ಲಿ ವ್ಯಕ್ತಿಗೆ ತಕ್ಕಷ್ಟು ಸ್ವಾತಂತ್ರ್ಯವಿರುವುದು ಅಗತ್ಯವೆಂದು ಭಾವಿಸಿದ್ದ ಅವರು ಶಿಕ್ಷಣ ಸಂಸ್ಥೆ ಮಕ್ಕಳಿಗೆ ಸ್ವಾತಂತ್ರ್ಯವೀಯುವಂತೆ ಅಧ್ಯಾಪಕರಿಗೂ ಜ್ಞಾನಸ್ವಾತಂತ್ರ್ಯವನ್ನು ನೀಡಬೇಕೆಂದು ವಾದಿಸಿ ತಮ್ಮ ಸಂಸ್ಥೆಗಳಲ್ಲಿ ಅದನ್ನು ಅನುಷ್ಠಾನಕ್ಕೆ ತಂದರು. ಅವರು ಒಂದು ರೀತಿಯ ಸಮತಾವಾದವನ್ನು ಒಪ್ಪಿದ್ದರೆನ್ನಬಹುದು. ಶ್ರೀಮಂತರು ಬಡವರ ಕಷ್ಟಕಾರ್ಪಣ್ಯಗಳನ್ನು ನಿವಾರಿಸಲು ಯತ್ನಿಸಬೇಕು. ವಿದ್ಯಾವಂತರು ಇತರರ ಜೀವನದ ಉನ್ನತಿಗಾಗಿ ಕೈಲಾದ ಸಹಾಯ ಮಾಡಬೇಕು. ಇದು ಅವರ ಅಭಿಪ್ರಾಯ. ಅದನ್ನು ಸಾಧಿಸಲೆಂದೇ ಶ್ರೀನಿಕೇತನವನ್ನು ಆರಂಭಿಸಿದ್ದು.

ವಿದ್ಯಾಸಂಸ್ಥೆಗಳಿಗೆ ಮಹಾಸೌಧಗಳು ಅಗತ್ಯವೆಂದು ಅವರು ಎಂದೂ ಭಾವಿಸಲಿಲ್ಲ. ನಿಸರ್ಗದ ಮಡಿಲಲ್ಲಿ ಮರದ ನೆರಳೊ ಗುಡಿಸಲೊ ಆದರೂ ಸಾಕು. ಪ್ರಯೋಗಾಲಯ, ಮಳೆಬಿಸಿಲುಗಳಿಂದ ರಕ್ಷಣೆ-ಇವುಗಳಿಗೋಸ್ಕರ ಸರಳ ಕಟ್ಟಡಗಳ ಅಗತ್ಯವನ್ನು ಮಾತ್ರ ಅವರು ಪುರಸ್ಕರಿಸುತ್ತಿದ್ದರು. ಅಷ್ಟೇ ಸರಳ ಭಾವನೆ ಅಲ್ಲಿನ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಜೀವನದ ಬಗ್ಗೆಯೂ ಅವರಿಗಿತ್ತು. ವಿದ್ಯಾರ್ಥಿಗಳು ಬ್ರಹ್ಮಚರ್ಯದ ನಿಷ್ಠಾವಂತ ಜೀವನವನ್ನು ನಡೆಸಬೇಕು. ಅಧ್ಯಾಪಕರು ಮಕ್ಕಳನ್ನು ಗುರುಕುಲದ ಗುರುಗಳಂತೆ ಮಮತೆಯಿಂದ ನೋಡಬೇಕು. ಈ ಮಧುರ ಬಾಂಧವ್ಯ ಶಿಕ್ಷಣಕ್ಕೆ ತೀರಾ ಅಗತ್ಯವೂ ಉಚಿತವೂ ಆದುದೆಂದು ಭಾವಿಸಿಯೇ ಅವರು ಗುರುಕುಲ ಪದ್ಧತಿಯನ್ನು ತಮ್ಮ ಸಂಸ್ಥೆಗಳಿಗೆ ಆಧಾರ ಮಾಡಿಕೊಂಡರು.

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಮೇಲೆ ಶಿಸ್ತಿನ ಹೆಸರಿನಲ್ಲಿ ಯಾವುದೇ ರೀತಿಯ ಕಟು ಒಲುಮೆಯನ್ನಾಗಲಿ ಒತ್ತಾಯವನ್ನಾಗಲಿ ಹೇರಲು ಅವರು ಬಯಸಲಿಲ್ಲ. ನಿಷ್ಠೆಯ ಜೀವನವನ್ನು ಅನುಷ್ಠಾನಕ್ಕೆ ತಂದಿದ್ದರೂ ನಿಜವಾದ ಮಾನಸಿಕ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಿದ್ದರು. ಅಂಥ ಸ್ವಪ್ರೇರಣೆ ಮತ್ತು ಸ್ವಾತಂತ್ರ್ಯಗಳಿಂದಲೇ ನಿಜವಾದ ಮತ್ತು ಫಲದಾಯಕವಾದ ಶಿಸ್ತು ನೆಲಸಬಲ್ಲದೆಂದು ಅವರು ಭಾವಿಸಿದ್ದರು. ಆದ್ದರಿಂದಲೆ ಶಾಂತಿನಿಕೇತನದಲ್ಲಿ ಅಧ್ಯಯನದ ಬಗ್ಗೆ ಮಕ್ಕಳಿಗೆ ಅಂಥ ಸ್ವಾತಂತ್ರ್ಯಕ್ಕೂ ಸ್ವಪ್ರೇರಣೆಯಿಂದ ಚಟುವಟಿಕೆಗಳಲ್ಲಿ ತೊಡಗುವುದಕ್ಕೂ ಅವರು ಪ್ರೋತ್ಸಾಹ ಕೊಡುತ್ತಿದ್ದರು.

ಬೋಧನ ಕ್ರಮದ ಬಗ್ಗೆಯೂ ಅವರು ತಮ್ಮದೇ ಆದ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದರು. ತೀರ ಎಳೆಯ ಮಕ್ಕಳಿಗೆ ಅಧ್ಯಾಪಕರು ಸಿದ್ಧಪಡಿಸಿಕೊಂಡು ಬಂದ ಪಾಠವನ್ನು ಕಲಿಸಲು ಯತ್ನಿಸುವುದು ಉಚಿತವಲ್ಲವೆಂದೂ ಅದರಿಂದ ಮಕ್ಕಳಿಗೆ ಬೇಸರವಾಗುವುದೆಂದೂ ಭಾವಿಸಿ ಅವರ ಆಸಕ್ತಿ ಕುತೂಹಲ ಉತ್ಸಾಹಗಳನ್ನು ಅನುಸರಿಸಿ ಕಲಿಯಲು ಅವಕಾಶವೀಯಬೇಕೆಂದು ತಿಳಿಯ ಹೇಳುತ್ತಿದ್ದರು. ಅಲ್ಲಿನ ಪಾಠಪ್ರವಚನಗಳಲ್ಲಿ ಕಲಿಯುವ ವಿಷಯದ ಬಗ್ಗೆ ತಕ್ಕಷ್ಟು ಸ್ವಾತಂತ್ರ್ಯ ಏರ್ಪಡಿಸಿದ್ದರು. ಅನಮ್ಯವೇಳಾಟ್ಟಿಯಿದ್ದರೂ ಮಕ್ಕಳು ಬೇಸರ ಜಿಗುಪ್ಸೆಗಳಿಂದ ಆಸಕ್ತಿ ಕಳೆದುಕೊಳ್ಳುವರೆಂದು ವೇಳಾಪಟ್ಟಿಯನ್ನು ಕಡ್ಡಾಯ ಮಾಡುತ್ತಿರಲಿಲ್ಲ. ಕಲಿಯುವುದರ ಮುಂದೆ ಕೃತಕ ಉದ್ದೇಶಗಳನ್ನು ಮೂಡಿಸಬೇಕಾಗಿಲ್ಲ. ಮಕ್ಕಳು ಸ್ವಾಭಾವಿಕ ಆಸಕ್ತಿಗಳಿಂದ ಪ್ರೇರಿತರಾಗಿ ಕಲಿಯುವರು. ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಮಾಡಿ, ನೋಡಿ, ಆಡಿ, ಹಾಡಿ ಕಲಿಯುವುದು ಹೆಚ್ಚು ಪರಿಣಾಮಕಾರಿಯಾದುದು. ಪಠ್ಯಪುಸ್ತಕಗಳನ್ನು ಬರೆಯುವಾಗ, ಅದನ್ನು ಬಳಸುವಾಗ ವಿದ್ಯಾರ್ಥಿಗಳ ಮುಂದೆ ದ್ವೇಷಾಸೂಯೆಗಳ ಕ್ಷುಲ್ಲಕ ವಿಷಯಗಳನ್ನು ಬಿತ್ತಲು ಅವಕಾಶವೀಯುವುದರಿಂದ ವಿಶ್ವಬಾಂಧವ್ಯ ಬೆಳಸಲು ಅಡ್ಡಿಯಾಗುವುದೆಂದೂ ಅಂಥ ಮಕ್ಕಳ ಮನಸ್ಸು ಮುಂದೆ ಮಹಾಯುದ್ಧಗಳ ದಾರುಣ ಹೋಮಕ್ಕೆ ನಾಂದಿಯಾಗುವುದೆಂದೂ ಅವರು ಭಾವಿಸಿದ್ದರು. ರವೀಂದ್ರರು ಭಾವಜೀವಿಗಳಾದರೂ ಆಧ್ಯಾತ್ಮಿಕಕ್ಕೆ ಮಹತ್ತ್ವ ಕೊಟ್ಟಿದ್ದರು. ಆದರೆ ಅವರು ಎಂದೂ ಪಲಾಯನಸೂತ್ರ ಹಿಡಿದವರಲ್ಲ. ಅವರು ನಿಜವಾದ ಅರ್ಥದಲ್ಲಿ ಕರ್ಮವಾದಿಗಳು. ಪ್ರತಿಯೊಬ್ಬರೂ ಕಾರ್ಯತತ್ಪರರಾಗಿರಬೇಕೆಂಬ ದೃಷ್ಟಿ ಅವರದು. ಈ ತತ್ತ್ವವನ್ನು ಬೋಧನಕ್ರಮಕ್ಕೂ ಅವರು ಅನ್ವಯಿಸಿದರು.

ಬೋಧನೆಯ ವಿಧಾನದಲ್ಲಿ ನಿಸರ್ಗವಾದಿಗಳಾಗಿದ್ದ ರವೀಂದ್ರರು ಶಿಕ್ಷಣದ ಗುರಿ ಸಾಮಾಜಿಕವಾದುದೆಂದು ಭಾವಿಸಿದ್ದರು. ಸಮಾಜ ಶಿಕ್ಷಣದಿಂದ ವ್ಯಕ್ತಿಯ ಪರಿಪೂರ್ಣ ಬೆಳೆವಣಿಗೆಗೆ ಅವಕಾಶ ಕಲ್ಪಿಸಬೇಕೆಂಬುದು ಅವರ ವಾದವಾಗಿದ್ದರೂ ಅದೇ ಅಂತಿಮ ಉದ್ದೇಶವಾಗಿರಲಿಲ್ಲ. ತನ್ನ ಸಿದ್ಧಿ ಸಂಸ್ಕಾರಗಳೆಲ್ಲ ಸಮಾಜದ ಪುರೋಭಿವೃದ್ಧಿಗಾಗಿ ಎಂದು ಭಾವಿಸಿ ಕೈಲಾದ ಕಾಣಿಕೆಯನ್ನು ಸಲ್ಲಿಸುವ ಋಷಿಋಣ ತನ್ನ ಭಾಗಕ್ಕಿರುವುದನ್ನು ಅರಿತುಕೊಳ್ಳಬಹುದೆಂದು ಭಾವಿಸಿದ್ದರು.

ಬೋಧನ ಮಾಧ್ಯಮದ ಬಗ್ಗೆ ದೇಶದಲ್ಲಿ ವಾವಿವಾದಗಳು ನಡೆಯುತ್ತಿದ್ದರೂ ರವೀಂದ್ರರು ಅದರ ಬಗ್ಗೆ ಖಚಿತವಾದ ಅಭಿಪ್ರಾಯ ತಳೆದಿದ್ದರು. ಮಕ್ಕಳು ಮೊದಲಿನಿಂದಲೂ ಮಾತೃಭಾಷೆಯಲ್ಲಿ ಕಲಿಯಬೇಕು; ವಿಶ್ವವಿದ್ಯಾಲಯದಲ್ಲೂ ಅದು ಭೋದನ ಮಾಧ್ಯಮವಾಗಬೇಕು; ಮಾತೃಭಾಷೆಯಲ್ಲಿ ತಕ್ಕ ಪಠ್ಯಪುಸ್ತಕಗಳಿಲ್ಲವೆಂಬುದೊಂದೇ ಕಾರಣಕ್ಕಾಗಿ ಅದನ್ನು ವಿರೋಧಿಸಬೇಕಾಗಿಲ್ಲವೆಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು. ಅನ್ಯಭಾಷೆಯ ಮೂಲಕ ಬೋಧಿಸುವುದಾಗಲಿ, ಕಲಿಯುವುದಾಗಲಿ ಸತ್ತ್ವಹೀನವೂ ಪರಿಣಾಮರಹಿತವೂ ಆಗುವುದೆಂದು ಅವರು ಅರಿತಿದ್ದರು. ಜೊತೆಗೆ ಅಂಥ ಶಿಕ್ಷಣ ಜನತೆಯಲ್ಲಿ ಪ್ರಸಾರವಾಗಲಾರದೆ ಅವರ ಉದ್ದೇಶ ಸಂಕುಚಿತವಾಗುತ್ತದೆ ಎಂಬುದನ್ನು ಅವರು ತಿಳಿದಿದ್ದರು. ಬಾಲ್ಯದಲ್ಲಿ, ಅನಂತರ ತಾರುಣ್ಯದಲ್ಲಿ ಅದಷ್ಟು ಹೆಚ್ಚಿನ ಪುಸ್ತಕಗಳನ್ನು ಓದಲು ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಭಾಷಾಬೋಧನೆಗೆ ತೊಡಗುವಾಗ ಭಾಷೆಯನ್ನು ಮೊದಲು ಕಲಿಸಿ ಅದರ ವ್ಯಾಕರಣ, ಭಾಷಾಶಾಸ್ತ್ರಗಳನ್ನು ಆಮೇಲೆ ಕಲಿಸುವಂತೆ ಸೂಚಿಸುತ್ತಿದ್ದರು. ಮಾತೃಭಾಷೆಯಲ್ಲಿರುವ ರಾಮಾಯಣ ಮಹಾಭಾರತಾದಿ ಗ್ರಂಥಗಳ ಅಧ್ಯಯನದಿಂದ ವಿದ್ಯಾರ್ಥಿಗಳ ಧರ್ಮ, ಸಂಸ್ಕøತಿ, ತತ್ತ್ವದೃಷ್ಟಿಗಳಲ್ಲಿ ಮಕ್ಕಳು ಅಭಿಮಾನ ತಾಳುವರೆಂದು ಹೇಳುತ್ತಿದ್ದರು. ಭಾರತದಲ್ಲಿ ಅನೇಕ ವಿಭಿನ್ನ ಭಾಷೆಗಳಿದ್ದರೂ ಅದು ರಾಷ್ಟ್ರೀಯ ಐಕ್ಯಕ್ಕಾಗಲಿ ಭಾವೈಕ್ಯಕ್ಕಾಗಲಿ ಅಡ್ಡಿ ಬರಬಾರದೆಂದು ಅವರು ಒತ್ತಿಹೇಳಿದರು.

ಒಟ್ಟಿನಲ್ಲಿ ರವೀಂದ್ರರ ಶಿಕ್ಷಣ ದೃಷ್ಟಿ ಆಧುನಿಕ ಭಾರತದಲ್ಲಿ ರಾಷ್ಟ್ರೀಯತೆಯ ಹೊಸ ತಿರುವನ್ನು ಮೂಡಿಸಿತು. ಭಾರತೀಯ ಧರ್ಮ ಸಂಸ್ಕøತಿ ಸಾಹಿತ್ಯಗಳ ಬುನಾದಿಯ ಮೇಲೆ ಶಿಕ್ಷಣವನ್ನು ವ್ಯವಸ್ಥೆಗೊಳಿಸುವ ನೂತನ ಪ್ರವೃತ್ತಿ ಬೆಳೆಯಿತಲ್ಲದೆ ಭಾರತೀಯ ಶಿಕ್ಷಣ ರಂಗದಲ್ಲಿ ಪರಿವರ್ತನೆಗಳಿಗೆ ಅವಕಾಶವುಂಟಾಯಿತು. ಸಂಕುಚಿತ ಉದ್ದೇಶಗಳ ಬದಲು ವಿಶಾಲ ಉದ್ದೇಶದ ಆಧಾರದ ಮೇಲೆ ವಿಶ್ವಬಾಂಧವ್ಯವನ್ನು ಶಿಕ್ಷಣ ಬೆಳೆಸಬೇಕೆಂಬ ನೂತನ ಉದ್ದೇಶ ಭಾರತೀಯ ಶಿಕ್ಷಣದಲ್ಲಿ ಅಂತರ್ಗತವಾಗುತ್ತ ಬಂತು. ಅವರು ಆರಂಭಿಸಿದ ವಿಶ್ವಭಾರತಿ 1956ರಿಂದ ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾಗಿ ಅದರ ಜನ್ಮದಾತರ ಆಶಯವನ್ನು ಈಡೇರಿಸುವಂತೆ ವ್ಯವಸ್ಥೆಗೊಂಡಿದೆ. (ಎಸ್.ಎಸ್.ವಿ.)

ರವೀಂದ್ರರ ಚಿತ್ರಕಲೆ: ರವೀಂದ್ರನಾಥ ಠಾಕೂರರದು ಸರ್ವತೋಮುಖವಾದ ಪ್ರತಿಭೆ. ಎಳೆಯ ವಯಸ್ಸಿನಲ್ಲಿಯೇ ಸಾಹಿತ್ಯಸೃಷ್ಟಿಯಲ್ಲಿ ತೊಡಗಿದರು. ಎಲ್ಲ ಪ್ರಕಾರದ ಸಾಹಿತ್ಯವನ್ನೂ ರಚಿಸಿ ಯಶಸ್ಸು ಗಳಿಸಿದರು. ಕವಿತೆ, ಪ್ರಬಂಧ, ನಾಟಕ, ಭಾವಗೀತೆ, ಸಣ್ಣ ಕಥೆ, ಕಾದಂಬರಿ, ಪಠ್ಯಪುಸ್ತಕಗಳು ಇತ್ಯಾದಿ. ಅನೇಕ ಗೀತೆಗಳನ್ನು ಸ್ವತಂತ್ರ ಧಾಟಿಗಳಲ್ಲಿ ರಚಿಸಿ ವಾಗ್ಗೇಯಕಾರರಾದರು. ತಮ್ಮ ನಾಟಕಗಳ ಪ್ರದರ್ಶನದಲ್ಲಿ ಭಾಗವಹಿಸಿ ನಟರಾದರು. ಚಿತ್ರಕಲೆಯ ಸತತ ಅಭ್ಯಾಸವನ್ನು ಪೂರ್ವವಯಸ್ಸಿನಲ್ಲಿ ಮಾಡದಿದ್ದರೂ ತಮ್ಮ ಇಳಿವಯಸ್ಸಿನಲ್ಲಿ, ಅರವತ್ತೇಳು ವಯಸ್ಸು ದಾಟಿದ ಮೇಲೆ ಚಿತ್ರಗಳನ್ನು ಬರೆಯಲಾರಂಭಿಸಿ, ಸುಮಾರು ಮೂರು ವರ್ಷಗಳ ಪರ್ಯಂತ ತಮ್ಮ ಸಾಹಿತ್ಯ ರಚನೆ ಮತ್ತು ಪ್ರಕಟಣೆಗಳ ಜೊತೆಗೆ ಚಿತ್ರ ಕರ್ಮದಲ್ಲಿ ನಿರತರಾದರು. ಸುಮಾರು 2500 ಚಿತ್ರಗಳನ್ನು ತಮ್ಮ ಆಯುಷ್ಯದ ಕೊನೆಯ ಹತ್ತು ಹನ್ನೊಂದು ವರ್ಷಗಳಲ್ಲಿ ರಚಿಸಿದರೆಂದು ಹೇಳಲಾಗಿದೆ.

ಬಾಲ್ಯದಿಂದಲೂ ಇವರಿಗೇಕೋ ಚಿತ್ರಕಲೆಯಲ್ಲಿ ಅಭಿರುಚಿ ಇತ್ತು. ಇವರ ಅಣ್ಣನಾದ ಜ್ಯೋತೀಂದ್ರನಾಥ್ ಪ್ರತಿಭಾಸಂಪನ್ನ ಚಿತ್ರಕಾರ, ಅವರು ಚಿತ್ರಗಳನ್ನು ಬರೆಯುತ್ತಿದ್ದಾಗ ಬಾಲಕ ರವೀಂದ್ರ ಅವನ್ನು ಗಮನಿಸುತ್ತಿದ್ದನಂತೆ. ಅನಂತರ ಇವರ ಕುಟುಂಬದವರಾದ ಅಬನೀಂದ್ರನಾಥ್ ಮತ್ತು ಗಗನೇಂದ್ರನಾಥರು ಶಾಸ್ತ್ರೀಯವಾಗಿ ಚಿತ್ರಕಲೆಯನ್ನು ಅಭ್ಯಾಸ ಮಾಡಿ ಇಪ್ಪತ್ತನೆಯ ಶತಮಾನದ ಮೊದಲನೆಯ ದಶಕದಲ್ಲಿ ಉಂಟಾದ ರಾಷ್ಟ್ರೀಯ ಜಾಗೃತಿಯ ಪ್ರಭಾವಕ್ಕೆ ಒಳಗಾಗಿ ಭಾರತೀಯ ಚಿತ್ರಕಲೆಯ ಪುನರುಜ್ಜೀವನದ ಕುರುಹಾಗಿ ಒಂದು ನೂತನ ಶೈಲಿಯನ್ನು ರೂಢಿಸಿಕೊಂಡಾಗ ಈ ಉದ್ಯಮಕ್ಕೆ ರವೀಂದ್ರನಾಥರು ಸಾಕಷ್ಟು ಬೆಂಬಲವನ್ನೂ ಸ್ಫೂರ್ತಿಯನ್ನೂ ಒದಗಿಸಿದರು. ನೊಬೆಲ್ ಬಹುಮಾನ ಪಡೆದು (1913) ಜಗದ್ವಿಖ್ಯಾತರಾದ ಮೇಲೆ ಅನೇಕ ದೇಶಗಳನ್ನು ಸಂದರ್ಶಿಸುವ ಸಂದರ್ಭಗಳು ಉಂಟಾದಾಗ, ಅಲ್ಲಿನ ಸಾಹಿತಿಗಳನ್ನು ಕಂಡರು. ಮಾತ್ರವಲ್ಲದೆ ಚಿತ್ರಕಲೆಯಲ್ಲಿ ನೂತನ ಮಾರ್ಗಗಳಲ್ಲಿ ಚಿತ್ರಸೃಷ್ಟಿಯನ್ನು ಮಾಡುತ್ತಿದ್ದ ಅನೇಕ ಕಲಾವಿದರ ಪರಿಚಯ ಇವರಿಗೆ ಉಂಟಾಯಿತು. ಕೆಲವು ವೇಳೆ ರವೀಂದ್ರರು ಭಾರತೀಯ ಕಲಾವಿದರನ್ನು ತಮ್ಮ ಜೊತೆಗೆ ಕರೆದೊಯ್ಯುತ್ತಿದ್ದರು. ಚಿತ್ರಗಳ ಸ್ಥೂಲವಾದ ಕರಡುಗಳನ್ನು ಬರೆಯುವ ಒಂದು ಪುಸ್ತಕವೂ ಇವರ ಬಳಿ ಇರುತ್ತಿತ್ತು. ಇದರಲ್ಲಿ ಅನೇಕ ರೇಖಾ ಚಿತ್ರಗಳನ್ನು ಬರೆದಿದ್ದರಂತೆ. 1920ರಲ್ಲಿ ಶಾಂತಿನಿಕೇತನದಲ್ಲಿಯೇ ಒಂದು ಕಲಾಭವನವೂ ಸ್ಥಾಪನೆಯಾಗಿ ಕ್ರಮವಾಗಿ ಚಿತ್ರಕಲೆಯ ಶಿಕ್ಷಣಕ್ಕೂ ಏರ್ಪಾಡಾಯಿತು. ಇದರಲ್ಲಿ ರವೀಂದ್ರರೂ ಬಹಳ ಆಸಕ್ತಿ ವಹಿಸಿದರು. ಇವೆಲ್ಲ ಚಿತ್ರಕಲೆಯಲ್ಲಿ ರವೀಂದ್ರರಿಗಿದ್ದ ಅಭಿರುಚಿಗೆ ನಿದರ್ಶನಗಳು. ಆದರೆ ಚಿತ್ರಕಲೆಯಲ್ಲಿ ಪ್ರಾಯೋಗಿಕವಾಗಿ ಪ್ರಯತ್ನಶೀಲರಾಗಿ ಸ್ವತಃ ತೊಡಗಿದ್ದು 1928ರಲ್ಲಿ. ಆದರೆ ಅದಕ್ಕೂ ಹಿಂದೆ ತಮ್ಮ ಕವಿತೆಗಳ ಕರಡು ಪ್ರತಿಯನ್ನು ಬರೆಯುವ ಕಾಲದಲ್ಲಿ ಪ್ರಥಮ ಸ್ಫೂರ್ತಿಯಿಂದ ಹೊರಬಂದ ಸಾಲುಗಳನ್ನೂ ಪದಗುಚ್ಛಗಳನ್ನೂ ಪದಗಳನ್ನೂ ಬದಲಾಯಿಸಿ ಕವಿತೆಯನ್ನು ಪರಿಷ್ಕರಿಸುವ ಅಭ್ಯಾಸ, ಅನೇಕ ಕವಿಗಳಿಗಿರುವಂತೆ, ಇವರಿಗೂ ಇತ್ತು. ಆದರೆ ಈ ತಿದ್ದುವ ಹೊಡೆದು ಹಾಕುವ ಕೆಲಸವನ್ನು ರವೀಂದ್ರನಾಥರು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಿದ್ದರು. ಸರಿಯಿಲ್ಲದ ಪದಗಳ ಮೇಲೆ ಗರೆಗಳನ್ನು ಎಳೆಯುತ್ತ ಅವನ್ನು ಕೂಡಿಸುತ್ತಾ ಇದ್ದಾಗ ಈ ರೀತಿಯ ಅಡ್ಡಾದಿಡ್ಡಿ ಗೆರೆಗಳು ತಿದ್ದುಪಾಟುಗಳು ಬಹಳ ಅಲಂಕಾರಪ್ರಾಯವಾಗಿ ರೂಪುಗೊಳ್ಳುತ್ತಿದ್ದುವು. ಬಳ್ಳಿಗಳು, ಪಕ್ಷಿಗಳು ಜೀವ ಜಂತುಗಳು ಅಥವಾ ಅವುಗಳ ನಿಕಟ ಸ್ವರೂಪಗಳು ಮೂಡಿಬರುತ್ತಿದ್ದವು. ಈ ಚಿತ್ರಮಯ, ವಿಚಿತ್ರಮಯ ತಿದ್ದುಪಾಟುಗಳೇ ರವೀಂದ್ರರು ಅನಂತರ ಪ್ರಯತ್ನ ಪೂರ್ವಕವಾಗಿ ಕೈಕೊಂಡ ಚಿತ್ರಕರ್ಮಕ್ಕೆ ಹಿನ್ನೆಲೆಯಾದವು. ಅಂಕುರಾರ್ಪಣಮಾಡಿತು.

ಕೇವಲ ಆತ್ಮೋಲ್ಲಾಸದಿಂದ ಚಿತ್ರಕರ್ಮದಲ್ಲಿ ತೊಡಗಿದ ರವೀಂದ್ರರು ಇದರಿಂದ ಯಾವ ಪ್ರಯೋಜನವನ್ನಾಗಲಿ ಯಶಸ್ಸನ್ನಾಗಲಿ ಅಪೇಕ್ಷಿಸಿದವರಲ್ಲ. ವೃತ್ತಿನಿರತರೂ ಈ ಕಲೆಯನ್ನು ಶಾಸ್ತ್ರೀಯವಾಗಿ ಅನುಷ್ಠಾನಮಾಡುವವರೂ ಬಳಸುವ ಉಪಕರಣಗಳು, ಸಿದ್ಧತೆಗಳು ರವೀಂದ್ರರಲ್ಲಿರಲಿಲ್ಲ. ಅದಕ್ಕೆ ಇವರು ಗಮನವನ್ನೂ ಕೊಡಲಿಲ್ಲ. ಕೈಗೆ ಸಿಕ್ಕಿದ ಕಾಗದವೇ ಚಿತ್ರ ಬರೆಯಲು ಇವರಿಗೆ ಸಾಕಾಗುತ್ತಿತ್ತು. ಬಹುಮಟ್ಟಿಗೆ ಇವರ ಲೇಖನಿಯೇ (ಫೌಂಟನ್ ಪೆನ್) ಚಿತ್ರ ಬರೆಯಲೂ ಉಪಯೋಗವಾಗುತ್ತಿತ್ತು. ಸಾಮಾನ್ಯ ಮಸಿ, ಒಮ್ಮೊಮ್ಮೆ ಕೆಂಪು ಮಸಿ-ಇವೇ ಇವರಿಗೆ ಬಣ್ಣದ ಸಾಮಗ್ರಿ. ಇವರು ಕುಂಚವನ್ನು ಉಪಯೋಗಿಸುವ ಗೋಜಿಗೆ ಹೆಚ್ಚಾಗಿ ಹೋಗಲಿಲ್ಲ. ಚಿತ್ರಕಾರರು ಬಳಸುವ ಬಣ್ಣದ ಪೆಟ್ಟಿಗೆಯನ್ನೂ ಉಪಯೋಗಿಸಿದುದೂ ಬಹಳ ಅಪರೂಪ. ಚಿತ್ರದಲ್ಲಿನ ಬಣ್ಣವನ್ನು ಹದವಾಗಿ ಹರಡಲು ತಮ್ಮ ವಸ್ತ್ರದ ಅಂಚನ್ನೇ ಉಪಯೋಗಿಸುತ್ತಿದ್ದರು.

ರವೀಂದ್ರರ ಚಿತ್ರಗಳ ಮತ್ತೊಂದು ವೈಶಿಷ್ಟ್ಯವೆಂದರೆ ಅವರು ಯಾವ ನಿರ್ದಿಷ್ಟ ವಿಷಯವನ್ನಾಗಲಿ ಪೂರ್ವಭಾವಿಯಾಗಿಟ್ಟುಕೊಳ್ಳದೆ-ಕಲ್ಪನೆಗಳು ಬಂದಂತೆ ರೇಖೆಗಳನ್ನೂ ಆಕೃತಿಗಳನ್ನೂ ಬರೆಯುತ್ತ ಹೋದದ್ದು. ಅಂದರೆ ಇವುಗಳಿಗೆ ಮೊದಲೇ ಗೊತ್ತುಮಾಡಿದ್ದ ಯೋಜನೆ ಇರಲಿಲ್ಲ. ಲೇಖಣಿಯನ್ನು ಹಿಡಿದು ವಿರಾಮವಿದ್ದಾಗ ಕೈಗೆ ಬಂದದ್ದನ್ನು ಬಿಳಿ ಹಾಳೆಯ ಮೇಲೆ ಗೀಚುತ್ತ ಹೋಗುವ ಚಟ ಅವರದು. ಆದ್ದರಿಂದ ಅವಕ್ಕೆ ಒಂದು ಹೆಸರನ್ನು ಕೊಡುವುದಕ್ಕಾಗುವುದಿಲ್ಲ. ಪ್ರಕೃತಿಯಲ್ಲಿರುವ ಯಾವ ವಸ್ತುವಿನ ವಾಸ್ತವಿಕ ಪ್ರತಿರೂಪವನ್ನೂ ಆ ಚಿತ್ರಗಳಲ್ಲಿ ತರಲು ಅವರು ಯತ್ನಿಸಲಿಲ್ಲ. ಆದರೆ ಮುಂದುವರಿದು ಒಂದು ಬಗೆಯ ಸಾಮರಸ್ಯವನ್ನು ಅಳವಡಿಸುವ ಪ್ರಯತ್ನಮಾಡಿದರು. ಯಾವುದೋ ನಿಗೂಢ ಪ್ರಜ್ಞೆಯಲ್ಲಿ ಅಥವಾ ಅರ್ಧಮರ್ಧದ ಜಾಗ್ರದವಸ್ಥೆಯಲ್ಲಿ ಪ್ರಚೋದನಗೊಂಡಂತೆ ಅವು ರೂಪುಗೊಂಡುವು. ಕೆಲವು ವೇಳೆ ರವೀಂದ್ರರೇ ಅವುಗಳ ನಾಮನಿರ್ದೇಶನವನ್ನು ಮಾಡುವುದಕ್ಕೆ ಬದಲಾಗಿ ಅವುಗಳ ಬಗೆಗೆ ಕೆಲವು ಪದ್ಯದ ಸಾಲುಗಳನ್ನು ವ್ಯಾಖ್ಯಾನ ರೂಪದಲ್ಲಿ ಬರೆದಿಟ್ಟರು. ಚಿತ್ರವನ್ನು ಬರೆಯಲು ಆರಂಭಿಸಿ, ಒಂದೇ ಸಮನೆ ಅದರಲ್ಲಿ ಮಗ್ನರಾಗಿ ಅದನ್ನು ಮುಗಿಸಿಬಿಡುವುದು ರವೀಂದ್ರರ ರೂಢಿ. ಚಿತ್ರಕಲೆಯನ್ನು ಸಾಂಗವಾಗಿ ಅಭ್ಯಾಸ ಮಾಡಿದವರೂ ಇಷ್ಟು ವೇಗವಾಗಿ ಆರಂಭಿಸಿ ಮುಗಿಸುವುದು ಬಹಳ ಅಪರೂಪ. ಆದುದರಿಂದಲೆ ಇಷ್ಟು ಅಪಾರವಾದ ಸಂಖ್ಯೆಯಲ್ಲಿ ರವೀಂದ್ರರು ಚಿತ್ರ ರಚಿಸಲು ಸಾಧ್ಯವಾಯಿತು.

ಲಯ ಪ್ರಾಸಗಳಿಂದ ಬದ್ಧವಾದ ರವೀಂದ್ರರ ಸುಂದರಕವಿತಾಸೃಷ್ಟಿಗೂ ಅವರ ಚಿತ್ರಗಳ ವೈಖರಿಗೂ ಬಹಳ ಅಂತರ ಉಂಟೆಂದು ಅವರ ಜೀವನವೃತ್ತಾಂತವನ್ನು ಬರೆದ ಕೆ. ಆರ್. ಕೃಪಲಾನಿಯವರು ಸೂಚಿಸಿದ್ದಾರೆ. ಕವಿತೆಗಳ ನಿರ್ಮಾಣದಲ್ಲಿ ಅವನ ಸೌಂದರ್ಯೋಪಾಸನೆಯ ನಿಷ್ಠೆ ಎದ್ದುಕಾಣುತ್ತಿತ್ತು. ಆದರೆ ಚಿತ್ರಗಳಲ್ಲಿ ನಿದ್ದೆಯಲ್ಲಿ ನಡೆಯುವವನಂತೆ ಮುಂದಿನ ಹೆಜ್ಜೆಯ ಪರಿವಿಲ್ಲದೆ ತಮ್ಮ ವಶದಲ್ಲಿಲ್ಲದ ಶಕ್ತಿಯ ಪ್ರೇರಣಾನುಸಾರ ಆಕೃತಿಗಳನ್ನು ಅವರು ನಿರ್ಮಿಸಿದರು. ತಮ್ಮ ಬರೆಹಗಳಲ್ಲಿ ಅವರು ಎಡೆಕೊಡದ ಬೀಭತ್ಸ, ವಿಕಾರ, ವಿಕಟ, ಕ್ರೌರ್ಯ, ವಿಡಂಬನಾಮಯ ಮೊದಲಾದ ಭಾಗಗಳು ಅವರ ಚಿತ್ರಗಳಲ್ಲಿ ನುಸುಳಿಕೊಂಡಿವೆ. ರವೀಂದ್ರರ ಸುಪ್ತಚೇತನದಲ್ಲಿ ಹುದುಗಿ ಕುಳಿತಿದ್ದ ಭಾವಗಳು ಅವರ ಕೆಲವು ಕಲಾಕೃತಿಗಳಲ್ಲಿ ಹೊರಹೊಮ್ಮಿವೆಯೆಂದು ಕಲಾವಿಮರ್ಶಕರು ಹೇಳಿರುವರು.

ರವೀಂದ್ರರ ಚಿತ್ರಗಳಲ್ಲಿ ಅನೇಕ ಮನುಷ್ಯರ ಚಹರೆಗಳೂ ವಿಚಿತ್ರ ಪಕ್ಷಿಗಳೂ ಭೂಶಿರಗಳೂ ಪ್ರಕೃತಿಯ ವಿಕಟ ಸ್ವರೂಪಗಳೂ ಚಿತ್ರಿಸಲ್ಪಟ್ಟಿವೆ. ಇವರ ಚಿತ್ರಗಳ ಪ್ರದರ್ಶನ ಪ್ಯಾರಿಸ್‍ನಲ್ಲಿ 1930ರಲ್ಲಿ ನಡೆದಾಗ ಅಲ್ಲಿನ ಚಿತ್ರಕಾರರೂ ಕಲಾವಿಮರ್ಶಕರೂ ಇವರ ಅನೌಪಚಾರಿಕ ಧಾಟಿಯನ್ನೂ ಅನೇಕ ಚಿತ್ರಗಳ ಓಜಸ್ಸನ್ನೂ ಬಹಳವಾಗಿ ಮೆಚ್ಚಿದರು. ಇವರ ಚಿತ್ರಪ್ರದರ್ಶನಗಳು ಅನಂತರ ಲಂಡನ್, ಬರ್ಲಿನ್, ಹ್ಯಾಂಬರ್ಗ್, ಮಾಸ್ಕೊ ಮತ್ತು ನ್ಯೂ ಯಾರ್ಕ್ ಪಟ್ಟಣಗಳಲ್ಲಿಯೂ ಏರ್ಪಟ್ಟವು. ಇದರಿಂದ ರವೀಂದ್ರರು ಆಧುನಿಕ ಚಿತ್ರಕಾರರೆಂದು ಪರಿಗಣಿಸಲ್ಪಟ್ಟರು. ಚಿತ್ರಕಲಾಚಾರ್ಯರಾದ ಅಬನೀಂದ್ರನಾಥರೂ ನಂದಲಾಲ್‍ಬಸು ಅವರೂ ರವೀಂದ್ರರ ಕಲೆಯ ಬಗ್ಗೆ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ನೈಸರ್ಗಿಕ ವಾತಾವರಣದಲ್ಲಿ ಬೆಳೆಯುವ ನಿಷ್ಕಪಟಿ ಜನ ಯಾವ ತರಪೇತೂ ಇಲ್ಲದೆ ಶಿಶುಸಹಜವಾದ ಉತ್ಸಾಹದಿಂದ ಚಿತ್ರಗಳನ್ನು ಬರೆಯುವುದುಂಟು. ಅವಕ್ಕೆ ಆದಿಮಕಲೆ (ಪ್ರಿಮಿಟಿವ್ ಆರ್ಟ್) ಎಂದು ಹೆಸರು. ಸುಸಂಸ್ಕøತ ನಾಗರಿಕರೂ ಈ ಶೈಲಿಯ ಅನುಕರಣ ಮಾಡಿ ಈ ಬಗೆಯ ಚಿತ್ರಗಳನ್ನು ರಚಿಸುವುದೂ ಉಂಟು. ಆದರೆ ರವೀಂದ್ರರು ಇವನ್ನು ಸಹಜವಾಗಿಯೇ ನಿರ್ಮಿಸಿದ್ದಾರೆಂದು ಪ್ರಸಿದ್ಧ ಕಲಾವಿಮರ್ಶಕರಾದ ಆನಂದಕುಮಾರಸ್ವಾಮಿಯವರು ಅಭಿಪ್ರಾಯಪಟ್ಟಿದ್ದಾರೆ.

ಮೂರು ವರ್ಷಗಳ ಕಾಲ ರವೀಂದ್ರರಲ್ಲಿ ಈ ಹವ್ಯಾಸದ ಆವೇಶ ಒಂದೇ ಸಮನೆ ಸಾಗಿ 1930ರಲ್ಲಿ ಇದ್ದಕ್ಕಿದ್ದಂತೆ ಮಾಯವಾಯಿತು. ಪ್ರಾಯಶಃ ಅವರಿಗೆ ಚಿತ್ರಗಾರರೆಂಬ ಯಶಸ್ಸು ದೊರೆತು ಆ ಖ್ಯಾತಿಯಿಂದ ಅವರಿಗುಂಟಾದ ಸಂಕೋಚ ಇದಕ್ಕೆ ಕಾರಣವಿರಬಹುದು. ಏಕೆಂದರೆ ಇದನ್ನು ಅವರು ಅಪೇಕ್ಷಿಸಿದವರಲ್ಲ. ಬೇಸರ ಕಳೆಯುವುದಕ್ಕೂ ಇದನ್ನು ಮಾಡಿದವರಲ್ಲ. ಒಂದು ಬಗೆಯ ಬಾಲ್ಯ ಸಹಜ ಮನೋಧರ್ಮ ಮತ್ತೆ ಉಂಟಾಗಿ ಕೇವಲ ಒಂದು ಲೀಲೆಯಾಗಿ ಈ ಬಗೆಯ ಚಿತ್ರ ನಿರ್ಮಾಣಕ್ಕೆ ಅವರು ತೊಡಗಿದ್ದರು.

ಚಿತ್ರಕಲೆಯಲ್ಲಿ ಆಧುನಿಕ ಶೈಲಿಯನ್ನು ಅನುಸರಿಸಬೇಕೆಂಬುವವರಿಗೆ ಇವರ ಚಿತ್ರಗಳಲ್ಲಿ ಮಾರ್ಗದರ್ಶನ ಬಹುಮಟ್ಟಿಗೆ ದೊರೆಯುತ್ತದೆಂದು ವಿಮರ್ಶಕರ ಅಭಿಪ್ರಾಯ. (ಕೆ.ಎಸ್.ಜಿ.ಆರ್.)

ರವೀಂದ್ರ ಸಂಗೀತ: ಕವಿ ರವೀಂದ್ರರು ಪಾಶ್ಚಾತ್ಯ, ಭಾರತೀಯ ಹಾಗೂ ಬಂಗಾಳೀ ಜನಪದ ಸಂಗೀತ ಸಂಪ್ರದಾಯಗಳನ್ನು ಸಮನ್ವಯಗೊಳಿಸಿ ಸೃಷ್ಟಿಸಿದ ಒಂದು ವಿಶಿಷ್ಟ ಸಂಗೀತ ಪದ್ಧತಿ. ಬಹುಮುಖ ಪ್ರತಿಭೆಯ ಠಾಕೂರರು ಸಂಗೀತ ಕ್ಷೇತ್ರದಲ್ಲಿ ಗಳಿಸಿದ ಸಾಧನೆಯ ಅಭಿವ್ಯಕ್ತಿಯನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.

ನೃತ್ಯ, ಸಂಗೀತ, ಸಾಹಿತ್ಯ ಪರಂಪರೆಗಳಿಗೂ ಆಧ್ಯಾತ್ಮಿಕ ಚಿಂತನೆಗೂ ಹೆಸರುವಾಸಿಯಾಗಿದ್ದ ಸುಸಂಸ್ಕøತ ಕುಟುಂಬದಲ್ಲಿ ಹುಟ್ಟಿದ ಠಾಕೂರರು ತಮ್ಮ ಬದುಕಿನ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಂಗೀತಕ್ಕೆ ಮಹತ್ತರವಾದ ಸ್ಥಾನವನ್ನು ಕೊಟ್ಟಿದ್ದರು. ಸಹಜ ಕಾವ್ಯಪ್ರತಿಭೆಯ ಜೊತೆಗೆ ಅವರಿಗೆ ಪ್ರಕೃತಿದತ್ತ ಸುಮಧುರ ಕಂಠ ಸಂಪತ್ತೂ ಇತ್ತು. ಮನೆಯಲ್ಲಿ ಯಾವುದಾದರೂ ಸಮಾರಂಭಗಳು ನಡೆದಾಗ ತಂದೆ ಮಹರ್ಷಿ ದೇವೇಂದ್ರನಾಥರಾದಿಯಾಗಿ ಎಲ್ಲರೂ ಬಾಲಕ ರವೀಂದ್ರನಿಂದ ಗೀತೆಗಳನ್ನು ಹಾಡಿಸಿ ಕೇಳಿ ಸಂತೋಷಪಡುತ್ತಿದ್ದರು. ರವೀಂದ್ರರು ಪ್ರಪ್ರಥಮವಾಗಿ ಕಾವ್ಯಸೃಷ್ಟಿಗೆ ತೊಡಗಿದಾಗಿನಿಂದಲೂ ಗಾಯನಕ್ಕೆ ಅಳವಡಿಸುವ ಉದ್ದೇಶದಿಂದಲೇ ಕವನಗಳನ್ನು ರಚಿಸುತ್ತಿದ್ದುದುಂಟು. ಬಹುಕಾಲದ ಅನಂತರ, ಶಾಂತಿನಿಕೇತನದ ಸ್ಥಾಪನೆಯಾದ ಮೇಲೆ ಅವರು ಅಲ್ಲಿನ ಸಾವಿರಾರು ಮಂದಿ ಬಾಲಕ ಬಾಲಕಿಯರಿಗೆ ತಮ್ಮ ಗೀತೆಗಳನ್ನು ಕಲಿಸಿ ಅವರಿಂದ ಹಾಡಿಸಿ ವೃಂದಗಾನದ ಒಂದು ಅಪೂರ್ವ ಸಂಗೀತ ಶೈಲಿಯನ್ನೇ ಸೃಷ್ಟಿಸಿದರು. ಆ ಕಾಲದಲ್ಲಿ ರಚಿತವಾದ ಪ್ರಸಿದ್ಧ ಕೃತಿಗಳಲ್ಲಿ ಜನಗಣಮನ, ದೇವಿ ಭುವನಮನಮೋಹಿನಿ-ಎಂಬುವು ಲೋಕ ವಿಖ್ಯಾತವಾದುವು. ರವೀಂದ್ರ ಸಂಗೀತವೆನ್ನುವ ಸಂಗೀತ ಪ್ರಕಾರದ ಆವಿಷ್ಕಾರವಾದದ್ದು ಹೀಗೆ.

ರವೀಂದ್ರರ ಸಂಗೀತ ಸೃಷ್ಟಿಗೆ ಮೂರು ವಿಭಿನ್ನ ಸಂಪ್ರದಾಯಗಳಿಂದ ಪ್ರೇರಣೆಗಳು ಬಂದೊದಗಿದವು. ಅವರು ತಮ್ಮ ಬಾಲ್ಯದಲ್ಲಿ ಅಣ್ಣನೊಂದಿಗೆ ಇಂಗ್ಲೆಂಡಿನ ಬ್ರೈಟನ್‍ನಲ್ಲಿ ಕೆಲಕಾಲ ವಾಸಿಸುತ್ತಿದ್ದರಷ್ಟೆ. ಆ ಸುಮಾರಿನಲ್ಲಿ ಅವರು ಸ್ಕಾಟ್, ಐರಿಷ್ ಮತ್ತು ಪ್ರಾಚೀನ ಇಂಗ್ಲಿಷ್ ಜನಪದ ಮಟ್ಟುಗಳನ್ನು ಕೇಳಿ ಪುಳಕಿತರಾಗಿದ್ದರು. ಆ ಮೇಲೆ ಅವರು ಕ್ಲಾಸಿಕಲ್ ಪಾಶ್ಚಾತ್ಯ ಸಂಗೀತ ಪದ್ಧತಿಯನ್ನು ಚೆನ್ನಾಗಿ ಅಭ್ಯಾಸಮಾಡಿದರು. ತಮ್ಮ ಮನಸ್ಸಿನ ಮೇಲೆ ಹೆಚ್ಚು ಪರಿಣಾಮವನ್ನುಂಟುಮಾಡಿದ ಹಲವು ರಾಗಗಳನ್ನು ತಮ್ಮ ಮೊಟ್ಟಮೊದಲಿನ ಗೀತರೂಪಕವಾದ ವಾಲ್ಮೀಕಿ ಪ್ರತಿಭಾ ಎಂಬ ಕೃತಿಯಲ್ಲಿ ಪ್ರಯೋಗ ಮಾಡಿ ನೋಡಿದರು. ಭಾರತಕ್ಕೆ ಹಿಂದಿರುಗಿದ ಸ್ವಲ್ಪಕಾಲದಲ್ಲಿ ಅವರಿಗೆ ಭಾರತೀಯ ಸಂಗೀತದಲ್ಲಿ ಪ್ರಬಲವಾದ ಒಲವು ಮೂಡಿತು. ಚಂಡೀದಾಸ, ರಮಾನಂದ, ವಿದ್ಯಾಪತಿ, ಕಬೀರ್, ತುಳಸೀದಾಸ, ಚೈತನ್ಯಾದಿ ಕವಿಗಾಯಕರ ಪರಂಪರೆಯನ್ನು ಕುರಿತು ಆಳವಾಗಿ ಅಧ್ಯಯನಮಾಡಿದರು. ಜೊತೆಗೆ ಬಂಗಾಳದ ಸಂಗೀತ ಪರಂಪರೆಯನ್ನೂ ಮೈಗೂಡಿಸಿಕೊಂಡರು. ಆದರೆ ಈ ಎರಡು ಸಾಂಪ್ರದಾಯಿಕ ಶೈಲಿಗಳು ಅವರ ಮೇಲೆ ಹೆಚ್ಚುಕಾಲ ಪ್ರಭಾವ ಬೀರಲಿಲ್ಲ. ಜನ್ಮತಃ ಜನತಾಕವಿ ಎನಿಸಿಕೊಂಡ ಠಾಕೂರರನ್ನು ಬಂಗಾಳದ ಜನಪದ ಸಂಪ್ರದಾಯ ಬಹುವಾಗಿ ಸೆಳೆಯಿತು. ಅದರಲ್ಲೂ ಮುಖ್ಯವಾಗಿ ಪೂರ್ವಬಂಗಾಳದ ದೋಣಿಗಾರರ ಹಾಡುಗಳು. ಹಳೆಯ ಕೀರ್ತನಕಾರರ ಹಾಡುಗಬ್ಬಗಳು. ಹಳ್ಳಿಗರ ಹಾಡು ಪದಗಳು ಅವರ ಮೇಲೆ ವಿಶೇಷ ಪ್ರಭಾವ ಬೀರಿದವು. ಉತ್ತರಾದಿ (ಶಾಸ್ತ್ರೀಯ) ಸಂಗೀತದ ರೂಪ, ಶೈಲಿಗಳನ್ನು ಅವರು ಮೆಚ್ಚಿಕೊಂಡರೂ ಅವರ ಅಂತರಂಗ ಯಾವಾಗಲೂ ಜನಪದ ಕಾವ್ಯದ ಮೋಡಿಗೆ ಸಿಕ್ಕಿ ಪಡಿಮಿಡಿಯುತ್ತಿತ್ತು. ಆ ಮೇಲೆ ಅವರು ರಚಿಸಿದ ನೂರಾರು ಗೀತೆಗಳು ಬಂಗಾಳದ ಮೂಲೆಯಲ್ಲಿನ ಜನಸಾಮಾನ್ಯರ ನಾಲಿಗೆಯ ಮೇಲೆ ನಲಿಯುವಂತಾದುದು ಈ ಕಾರಣದಿಂದಲೇ.

ಸಾಮಾನ್ಯವಾಗಿ ಠಾಕೂರರ ಯಾವುದೇ ಒಂದು ಸಂಗೀತಕೃತಿಯನ್ನು ತೆಗೆದುಕೊಂಡರೂ ಅದರ ರಚನೆ ತೀರ ಸರಳವಾಗಿದ್ದು ಸುಲಭವಾದ ನಾದಲಯಗಳಿಂದ ಕೂಡಿರುತ್ತದೆ. ಒಂದೊಂದು ಹಾಡಿನಲ್ಲೂ ಅಂತ್ಯಪ್ರಾಸಗಳಿರುವ ನಾಲ್ಕು ಸಾಲಿನ ಮೂರು ಘಟಕಗಳಿರುತ್ತವೆ. ಮೊದಲ ಘಟಕದ ನಾಲ್ಕು ಸಾಲುಗಳು, ಆ ಗೀತೆಯ ಸ್ಥಾಯಿಯಾಗಿದ್ದು ಎರಡನೆಯ ಮೂರನೆಯ ಘಟಕಗಳು ಅನುಕ್ರಮವಾಗಿ ಗೀತೆಯ ಅಂತರ ಹಾಗೂ ಆಭೋಗಗಳೆನಿಸಿಕೊಳ್ಳುತ್ತವೆ. ಕೆಲವೊಮ್ಮೆ ಇನ್ನೊಂದು ಸಂಚಾರಿ ಘಟಕವೂ ಸೇರಿಕೊಳ್ಳುವುದುಂಟು. ಒಟ್ಟಾರೆ ಕೃತಿಯಲ್ಲಿನ ನಾದಲಯಗಳನ್ನು ಸೃಷ್ಟಿಸಲು ಅಂತ್ಯಪ್ರಾಸ ಒಂದು ಸೊಗಸಾದ ಸಾಧನವಾಗಿಬಿಡುತ್ತದೆ. ಇದು ತುಂಬ ಸರಳವೂ ಮೃದು ಮಧುರವೂ ಆಗಿದ್ದು ಸಂಗೀತಕ್ಕೆ ಸುಲಭವಾಗಿ ಒಗ್ಗುವಂತಿರುತ್ತದೆ. ಉದಾಹರಣೆಗೆ

ಕಟ್‍ಬಾರ್ ಭೆಬೆಚಿನ್ ಅಪನಾ ಭೋಲಿಯಾ

ತುಮ್ಹಾರ್ ಕರನೆ ದಿವ ಹೃದಯ ಖುಲಿಯಾ

ಎನ್ನುವ ಸಾಲುಗಳು ಬರುವ ಅವರ ಗೀತೆಯೊಂದರಲ್ಲಿ ಪ್ರಕಾಶಿ-ಭೋಲಾಭಾಷಿ, ಢಾಕಿ-ಏಕಾಕಿ ಎಂದು ಮುಂತಾದ ಪ್ರಾಸದ ಜೋಡಿಗಳು ಒಂದಾದಮೇಲೊಂದರಂತೆ ಅಲೆಅಲೆಯಾಗಿ ಪ್ರವಹಿಸುತ್ತವೆ. ಗೀತೆಯ ಮೊದಲ ಸ್ಥಾಯಿ ಚರಣವನ್ನು ಪುನಃಪುನಃ ಹಾಡುವಾಗ ಶಬ್ದ ಪ್ರಾಸಗಳ ಜೋಡಣೆಯಿಂದಾಗಿ ಅಪೂರ್ವನಾದ ಸಾಂಗತ್ಯವುಂಟಾಗುತ್ತದೆ. ಭಾರತೀಯ (ಉತ್ತರಾದಿ) ಸಂಗೀತದ ಇತಿಹಾಸದಲ್ಲಿ ಠಾಕೂರರಿಗೆ ಅನನ್ಯ ಸ್ಥಾನ ಸಲ್ಲುತ್ತದೆ ಎನ್ನುವುದುಂಟು. ಮೊಗಲ ಸಾಮ್ರಾಜ್ಯದ ಕಾಲದಿಂದಲೂ ಉತ್ತರ ಭಾರತದಲ್ಲಿ ಪಾರಸಿ ಹಾಗೂ ಅರಬ್ಬೀ ಸಂಗೀತ ಸಂಪ್ರದಾಯಗಳು ಪ್ರಬಲವಾಗಿ ಬೇರೂರಿದ್ದವು. ಆ ಪ್ರಭಾವದ ಹಿನ್ನೆಲೆಯಲ್ಲಿ ರಚಿತವಾದ ಕೃತಿಗಳಲ್ಲಿ ಸಾಹಿತ್ಯದ ಅಂಶಕ್ಕಿಂತಲೂ ಸಂಗೀತದ ಅಂಶಗಳೇ ಪ್ರಧಾನವಾಗಿರುತ್ತಿದ್ದುವು. ಹಾಡುಗಾರಿಕೆಯಲ್ಲಿ ಮಾತಿನ ಅರ್ಥಕ್ಕಿಂತ ಮಿಗಿಲಾಗಿ ನಾದಾತ್ಮಕತೆಗೆ, ಹೊಸ ಹೊಸ ಸ್ವರಲಯ ಮೇಳಗಳ ಪ್ರಯೋಗಕ್ಕೆ ಅಂದಿನ ಸಂಗೀತಗಾರರು ಹೆಚ್ಚು ಗಮನವೀಯುತ್ತಿದ್ದರು. (17 ಮತ್ತು 18ನೆಯ ಶತಮಾನಗಳ ಯೂರೋಪಿನ ಸಂಗೀತ ಕ್ಷೇತ್ರದಲ್ಲಿಯೂ ಇಂಥ ಮಾರ್ಪಾಡುಗಳುಂಟಾಗಿ ವಾದ್ಯಸಂಗೀತಕ್ಕೆ ಹೆಚ್ಚು ಪ್ರಾಮುಖ್ಯ ಸಿಕ್ಕುವಂತಾಯಿತೆಂಬುದು ಗಮನಾರ್ಹ). ಹೀಗೆ ಭಾರತೀಯ ಸಂಗೀತದಲ್ಲಿ ಮಾತು-ಧಾತುಗಳ (ಸ್ವರ-ಲಯ) ನಡುವಣ ಸಾಂಗತ್ಯ ತಪ್ಪಿಹೋದ ಸಂದರ್ಭದಲ್ಲಿ ಠಾಕೂರರು ಈ ಅಸಂಬದ್ಧತೆಯನ್ನು ಹೋಗಲಾಡಿಸಿ ಹೊಸ ಸಂಗೀತ ಪದ್ಧತಿ ರಚಿಸಿದವರೆನ್ನಬಹುದು. ಇದೊಂದು ಸಾಧನೆಯಲ್ಲಿಯೇ ನಾವು ಠಾಕೂರರ ಸ್ವಂತಿಕೆಯನ್ನು ಗುರುತಿಸಲು ಸಾಧ್ಯವಾಗಬಹುದು. ಪಂಕಜಕುಮಾರ ಮಲ್ಲಿಕರಂಥ ಪ್ರಸಿದ್ಧ ಗಾಯಕರು ರವೀಂದ್ರರ ಕೃತಿಗಳನ್ನು ಎತ್ತಿಕೊಂಡು, ಉಚಿತ ರಾಗ ತಾಳಗಳನ್ನು ಅಳವಡಿಸಿಕೊಂಡು ಹಾಡಿ ರವೀಂದ್ರ ಸಂಗಿತಕ್ಕೆ ಅಖಿಲ ಭಾರತೀಯ ಪ್ರಾಮುಖ್ಯ ಬರುವಂತೆ ಮಾಡಿದರು. ಆಲ್ ಇಂಡಿಯಾ ರೇಡಿಯೊ ಸಂಸ್ಥೆಯ ಕಲ್ಕತ್ತ ವಿಭಾಗದವರು ಸಹ ಪ್ರತಿವಾರ ರವೀಂದ್ರ ಸಂಗೀತವನ್ನು ಬಿತ್ತರಿಸಿ ಅವರ ಸ್ವಾರಸ್ಯ ಮತ್ತೆ ಮತ್ತೆ ಜನತೆಗೆ ಎಟುಕುವಂತೆ ಮಾಡುವಲ್ಲಿ ಯಶಸ್ವಿಗಳಾಗಿದ್ದಾರೆ. (ಎಚ್.ಕೆ.ಆರ್.)

ರವೀಂದ್ರರದು ಭವ್ಯ ವ್ಯಕ್ತಿತ್ವ. ಬಹುಮುಖ ಪ್ರತಿಭೆ ಎನ್ನುವ ತರಾಸು ಅವರಿಗೆ ಅಕ್ಷರಶಃ ಸಲ್ಲುತ್ತದೆ. ಅವರ ಆಸಕ್ತಿಗಳ ವ್ಯಾಪ್ತಿ ಬೆರಗುಗೊಳಿಸುವಂಥದು. ಅವರು ಕನಸುಗಾರರಷ್ಟೇ ಅಲ್ಲ, ಕಾರ್ಯಪಟುಗಳೂ ಹೌದು. ಮೂರು ವಿದ್ಯಾಸಂಸ್ಥೆಗಳ ಕನಸುಗಳಿಗೆ ಸಾಕಾರ ರೂಪವನ್ನು ನೀಡಿದರು. ಅವರು ವಿಶ್ವಮಾನವ ಅಸಾಧಾರಣ ದೇಶಭಕ್ತರಾಗಿದ್ದರು. ಬಂಗಾಳದ ವಿಭಜನೆಯ ವಿರುದ್ಧ ಪ್ರತಿಭಟನೆ ಮಾಡಿ ಮೆರವಣಿಗೆಗಳು ನಡೆದಾಗ ಅವರ ಹಾಡುಗಳನ್ನು ಜನ ಹಾಡುತ್ತಿದ್ದರು. ಜಲಿಯನ್‍ವಾಲಾಬಾಗಿನಲ್ಲಿ ಬ್ರಿಟಿಷರ ಕ್ರೌರ್ಯ ವಿಜೃಂಭಿಸಿದಾಗ ಅವರು ಬಹು ಘನತೆಯ ಪತ್ರವನ್ನು ಬರೆದು ತಮಗೆ ಬ್ರಿಟಿಷ್ ಸರ್ಕಾರವು ನೀಡಿದ್ದ `ನೈಟ್‍ಹುಡ್ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಆದರೆ ದೇಶಭಕ್ತಿಗೆ ಎಲ್ಲಿ ಗೆರೆ ಎಳೆಯಬೇಕೆಂಬುದು ಅವರಿಗೆ ಸ್ಪಷ್ಟವಾಗಿತ್ತು. ದೇಶಪ್ರೇಮದ ಅತಿರೇಕವು ಮೊದಲನೆಯ ಮಹಾಯುದ್ಧಕ್ಕೆ ದಾರಿಮಾಡಿದುದನ್ನು ಅವರು ಕಂಡರು. ಅವರು ಜಪಾನಿಗೆ ಭೇಟಿಕೊಟ್ಟಾಗ ಸಾರಿದ ವಿಶ್ವಮಾನವ ಸಂದೇಶವನ್ನು, ಅತೀವ ದೇಶಾಭಿಮಾನದ ಉತ್ಸಾಹದಲ್ಲಿದ್ದ ಜಪಾನಿಯರ ಮನಸ್ಸಿಗೆ ಹಿಡಿಸಲಿಲ್ಲ. ಆದರೂ ರವೀಂದ್ರರು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳಿದರು. ಎಲ್ಲಿ ನಿರ್ಬಂಧಗಳಿಂದ ಮುಕ್ತವಾದ ವಾತಾವರಣದಲ್ಲಿ ಮಾತ್ರ ಮಾನವನ ಜೀವನ ಅರಳುತ್ತದೆ, ಸಮುದಾಯದ ಜೀವನ ಅರಳುತ್ತದೆ ಎನ್ನುವುದು ಅವರ ನಂಬಿಕೆ. ರವೀಂದ್ರರು ವಿಶ್ವಕವಿ, ಸ್ವಾತಂತ್ರ್ಯದ ಕವಿ.

(ಎಲ್.ಎಸ್.ಎಸ್.)