ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಕಾನ್, ಅಲೆಕ್ಸಾಂಡರ್ ಗೇಬ್ರಿಯಲ್

ವಿಕಿಸೋರ್ಸ್ದಿಂದ

ಡಕಾನ್, ಅಲೆಕ್ಸಾಂಡರ್ ಗೇಬ್ರಿಯಲ್ 1803-1860. ಫ್ರಾನ್ಸಿನ ರೊಮ್ಯಾಂಟಿಕ್ ಯುಗದ ಒಬ್ಬ ಚಿತ್ರಕಾರ. ನಿಯೋಕ್ಲಾಸಿಕಲ್ ಪಂಥವನ್ನು ಬಿಟ್ಟು ರಮ್ಯಶೈಲಿಗೆ ತಿರುಗಿದ ಮೊದಲಿಗರಲ್ಲಿ ಇವನೂ ಸೇರಿದ್ದ. ಹುಟ್ಟಿದ್ದು ಪ್ಯಾರಿಸ್‍ನಲ್ಲಿ, ಅಲ್ಲೇ ಕಲಾಶಿಕ್ಷಣವನ್ನು ಪಡೆದನಾದರೂ ಪೌರಸ್ತ್ಯ ದೇಶಗಳ ಕಲೆ, ಸಂಸ್ಕøತಿಗಳಲ್ಲಿ ವಿಶೇಷ ಒಲವು ಮೂಡಿತು. ಈತ 1827ರಲ್ಲಿ ಏಷ್ಯಮೈನರ್ ಪ್ರದೇಶಗಳಲ್ಲಿ ಪ್ರವಾಸ ನಡೆಸಿ ಅಲ್ಲಿನ ನಾನಾ ಜನಾಂಗಗಳ ಜೀವನಕ್ಕೆ ಸಂಬಂಧಿಸಿದಂತೆ ಹಲವು ಚಿತ್ರಗಳನ್ನು ರಚಿಸಿದ. ಕಲೆ ನಿಸರ್ಗವನ್ನು ವಸ್ತುನಿಷ್ಠೆಯಿಂದ ಪಡಿಮೂಡಿಸಬೇಕು ಎಂದು ನಂಬಿದ್ದನಾದ್ದರಿಂದ ತಾನು ಕಂಡ ಹೊಸ ನೋಟಗಳನ್ನು ಹೊಸ ಶೈಲಿಯಲ್ಲಿ ನಿರೂಪಿಸಲು ಹೊರಟ. ನೆಳಲು ಬೆಳಕಿನ ಹೊಂದಾಣಿಕೆಯನ್ನು ತುಂಬ ಪರಿಣಾಮಕಾರಿಯಾಗಿ ಸಾಧಿಸಿದ. ಈತನ ಚಿತ್ರ ಶೈಲಿ ತೀರಾ ಕ್ರಾಂತಿಕಾರ ಎನಿಸಿಕೊಂಡು ಆ ಕಾಲದ ರಸಿಕರಿಗೆ ರುಚಿಸಲಿಲ್ಲ. ಬೈಬಲ್ ಚರಿತ್ರೆಗೆ ಸಂಬಂಧಿಸಿದ ಘಟನೆಗಳನ್ನು ಆಯಾಕಾಲಗಳ ಸಹಜ ಐತಿಹಾಸಿಕ ಹಿನ್ನೆಲೆಯಲ್ಲಿ ಯಥಾರ್ಥ, ಆದರೆ ನವ್ಯ ಶೈಲಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ ಯೂರೋಪಿನ ಚಿತ್ರಕಾರರಲ್ಲಿ ಈತ ಮೊದಲಿಗ. ಈತನ ಸೋದರರಿಂದ ಮಾರಲ್ಪಟ್ಟ ಜೋಸೆಫ್, ನೈಲ್ ನದಿಯಿಂದಾಚೆ ಒಯ್ಯಲಾದ ಮೋಸಸ್, ಸ್ಯಾಮ್ಸನ್‍ನ ಜೀವನ ಚಿತ್ರಗಳು ಮುಂತಾದ ಕಪ್ಪು-ಬಿಳಿಪು ಚಿತ್ರಗಳು ಅತ್ಯದ್ಭುತ ನಾಟಕೀಯತೆಯಿಂದ ತುಂಬಿ ಹೊಸ ಆಯಾಮ ಸಾಧಿಸಿವೆ. ಇವಲ್ಲದೆ ಡಕಾನ್ ಕೆಲವು ನಿತ್ಯ ಜೀವನದ ಸಾಮಾನ್ಯ ದೃಶ್ಯಗಳನ್ನೂ ತುಂಬ ಸೊಗಸಾಗಿ ಚಿತ್ರಿಸಿದ್ದಾನೆ. ಈತ ಬರೆದಿರುವ ಫ್ರಾನ್ಸ್ ಮತ್ತು ಆಲ್ಜೀರಿಯಗಳ ಸಾಂಸಾರಿಕ ಚಿತ್ರಗಳಂತೂ ಲೋಕಪ್ರಸಿದ್ಧವಾಗಿವೆ. ತನಗೆ ಬಹುಮಾನ ಕೊಡಲು ನಿರಾಕರಿಸಿದ ಫ್ರೆಂಚ್ ಅಕಾಡೆಮಿ ಆಫ್ ಆರ್ಟ್ ಸಂಸ್ಥೆಯ ತೀರ್ಪುಗಾರರನ್ನು ಲೇವಡಿ ಮಾಡುವ ದಿ ಮಂಕೀ ಕೊನೆಸಾರ್ಸ್ ಎಂಬ ಚಿತ್ರ ಮನೋಜ್ಞವಾಗಿದೆ. ಇವನು ಬಾರ್ಬಿಸಾನ್ ಎಂಬಲ್ಲಿ ಬೇಟೆಯಾಡುತ್ತಿದ್ದಾಗ ಕುದುರೆಯಿಂದ ಕೆಳಕ್ಕೆ ಜಾರಿ ಬಿದ್ದು ಮೃತನಾದ. (ಎಚ್.ಕೆ.ಆರ್.)