ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಲಿಂಗರ್, ಯೋಹಾನ್ ಯೋಸೆಫ್ ಇಗ್ನಾಟ್ಸ್ ಫಾನ್
ಡಲಿಂಗರ್, ಯೋಹಾನ್ ಯೋಸೆಫ್ ಇಗ್ನಾಟ್ಸ್ ಫಾನ್ 1799-1890, ಜರ್ಮನಿಯ ಇತಿಹಾಸಕಾರ ಹಾಗೂ ತತ್ತ್ವಜ್ಞಾನಿ. ಹುಟ್ಟಿದ್ದು ಜರ್ಮನಿಯ ಬ್ಯಾಂಬರ್ಗ್‍ನಲ್ಲಿ. ವೈದ್ಯಕುಟುಂಬದಲ್ಲಿ ಜನಿಸಿದ ಈತನಿಗೆ ಬಾಲ್ಯದಿಂದಲೂ ಪ್ರಕೃತಿವಿಜ್ಞಾನದಲ್ಲಿ ತುಂಬ ಆಸಕ್ತಿ. ವಟ್ರ್ಸ್‍ಬರ್ಗ್ ಜಿಮ್‍ನೇಸಿಯಮ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಈತ 1822ರಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದ. ಆಸ್ಚಫೆನ್ ಬರ್ಗ್‍ನಲ್ಲಿ ಸ್ವಲ್ಪಕಾಲ ಚರ್ಚ್ ಇತಿಹಾಸದ ಪ್ರಾಧ್ಯಾಪಕನಾಗಿದ್ದು ಅನಂತರ 1826ರಲ್ಲಿ ಕ್ರೈಸ್ತ ಧರ್ಮಶಾಸ್ತ್ರ ಇತಿಹಾಸ ಮತ್ತು ಕಾನೂನುಶಾಸ್ತ್ರಗಳ ಪ್ರಾಧ್ಯಾಪಕನಾಗಿ ಮ್ಯೂನಿಕ್‍ನಲ್ಲಿ ನೇಮಕಗೊಂಡ. 1835ರ ತರುವಾಯ ಬವೇರಿಯನ್ ರಾಯಲ್ ಅಕಾಡೆಮಿ ಆಫ್ ಸೈನ್ಸಸಿನ ಸದಸ್ಯನಾಗಿದ್ದು 1873ರ ಅನಂತರ ಅದರ ಅಧ್ಯಕ್ಷನೂ ಆದ. 1848ರಲ್ಲಿ ಫ್ರಾಂಕ್‍ಫರ್ಟಿನಲ್ಲಿ ನಡೆದ ಜರ್ಮನ್ ರಾಷ್ಟ್ರೀಯ ಸಭೆಯನ್ನು ಪ್ರತಿನಿಧಿಸಿದ. ಈತ ಜರ್ಮನಿಯ ಅನೇಕ ವಿದ್ವಾಂಸರ ಸ್ನೇಹವನ್ನಲ್ಲದೆ ಫ್ರೆಂಚ್ ಕ್ಯಾತೊಲಿಕ್ ಪಂಥದ ತತ್ತ್ವಜ್ಞಾನಿ ಫೆಲಿಸಿಟ್ ಡಿ ಲಮೆನ್ನಾಯಿಸ್ ಮತ್ತು ಇಂಗ್ಲೆಂಡಿನ ಟ್ರಾಕ್ಟೇರಿಯನ್ ಬೆಳವಣಿಗೆಯ ಮುಂದಾಳುಗಳಾಗಿದ್ದ ಗ್ಲಾಡ್‍ಸ್ಟೋನ್, ಪ್ಯೂಸೀ ಮತ್ತು ಹೋಪ್‍ಸ್ಕಾಟ್ ಇವರ ಸ್ನೇಹವನ್ನೂ ಸಂಪಾದಿಸಿದ್ದ. ಅಂತರರಾಷ್ಟ್ರೀಯ ಖ್ಯಾತಿವೆತ್ತ ಹಲವರೊಂದಿಗೆ ಪತ್ರವ್ಯವಹಾರವನ್ನು ಇಟ್ಟುಕೊಂಡಿದ್ದ.
ಈತ ಮೊದಮೊದಲು ಪೋಪ್‍ನ ಸರ್ವಾಧಿಕಾರವನ್ನು ಸಮರ್ಥಿಸಿದ. ಪ್ರಾಟೆಸ್ಟೆಂಟ್ ತತ್ತ್ವಗಳ ವಿರೋಧಿಯಾದ ಈತ ತನ್ನ ಡೀ ರಿಫಾರ್ಮೇಟ್ಸಿಯೋನ್ (1846), ಮತ್ತು ಲ್ಯೂದರ್ (1851) ಎಂಬ ಗ್ರಂಥಗಳಲ್ಲಿ ಪ್ರಾಟೆಸ್ಟಂಟ್ ತತ್ತ್ವಗಳನ್ನು ವಿರೋಧಿಸಿದ. ಬವೇರಿಯದ ಏಬೆಲ್ ಮಂತ್ರಿಮಂಡಳಕ್ಕೆ ಪ್ರಿಯನಾಗಿದ್ದ ಈತ ಅದು ಅಧಿಕಾರದಿಂದ ನಿವೃತ್ತಿಹೊಂದಿದ ಅನಂತರ ತನ್ನ ಪ್ರಾಧ್ಯಾಪಕವೃತ್ತಿಯನ್ನು ಕಳೆದುಕೊಂಡ (1847). ಆದರೆ ಮತ್ತೆ 1849ರಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ಡಲಿಂಗರ್ ರೋಮಿಗೆ ಭೇಟಿಯಿತ್ತ (1857) ಎರಡು ವರ್ಷಗಳಲ್ಲಿ ಇಟಲಿಯ ಯುದ್ಧ ಪ್ರಾರಂಭವಾಯಿತು. ಈ ಅವಧಿಯಲ್ಲಿ ಪೋಪ್ ಪರಮಾಧಿಕಾರದೊಡನೆ ಇದ್ದ ಸಂಬಂಧಗಳನ್ನು ಬದಲಿಸಿಕೊಂಡದ್ದಲ್ಲದೆ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಆಫ್ ದಿ ಬ್ಲೆಸೆಡ್ ವರ್ಜಿನ್ (ವರ್ಜಿನ್ನಳ ಪರಿಶುದ್ಧ ಕಲ್ಪನೆ) ಎಂಬ ತತ್ತ್ವವನ್ನು ಹೊರಡಿಸಿದ. ಪೋಪನ ಪರಮಾಧಿಕಾರದ ಶ್ರೇಷ್ಠತೆಯನ್ನು ಅಲ್ಲಗಳೆದದ್ದರಿಂದ ಅದರಲ್ಲಿ ನಂಬಿಕೆಯಿದ್ದ ಜನಗಳ ಆಕ್ಷೇಪಣೆಗೆ ಈತ ಗುರಿಯಾದ.
ವಿಜ್ಞಾನ ಮತ್ತು ಆಧುನಿಕ ಸಮಸ್ಯೆಗಳ ಬಗ್ಗೆ ರೋಮನ್ ಕ್ಯಾತೊಲಿಕ್ ಚರ್ಚುಗಳು ಹೊಂದಬೇಕಾದ ದೃಷ್ಟಿಯ ಬಗ್ಗೆ ಲಮೆನ್ನಾಯಿಸ್ ಮತ್ತು ಲಕೊರ್ಡೈರ್ ಎಂಬುವರು ಫ್ರಾನ್ಸಿನಲ್ಲಿ ಹೊರಡಿಸಿದ್ದ ಅಭಿಪ್ರಾಯವನ್ನು ಚರ್ಚಿಸಲು 1863ರಲ್ಲಿ ಡಲಿಂಗರ್ ನೂರು ಮಂದಿ ದೇವತಾಶಾಸ್ತ್ರಜ್ಞರನ್ನು ಆಹ್ವಾನಿಸಿ ಮಲಿನೆಸ್‍ನಲ್ಲಿ ಸಭೆ ಸೇರಿಸಿದ್ದ. ಈ ಸಭೆಯಲ್ಲಿ ಈತ ಪೋಪನ ಸರ್ವಾಧಿಕಾರವನ್ನು ಖಂಡಿಸಿ ಜೀಸಸ್ ಸಂಘಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದ. ಇದರಿಂದಾಗಿ ಪೋಪ್ ಸಭೆಯನ್ನು ಕೇವಲ ನಾಲ್ಕು ದಿನಗಳಲ್ಲಿಯೇ ಮುಕ್ತಾಯಗೊಳಿಸಿದ. 1864ರಲ್ಲಿ ಒಂಬತ್ತನೆಯ ಪೈಯಸ್ ಒಂದು ಪ್ರಕಟಣೆಯನ್ನು ಹೊರಡಿಸಿ ಅದರಲ್ಲಿ ಡಲಿಂಗರನ ಅಭಿಪ್ರಾಯಗಳನ್ನು ಖಂಡಿಸಿದ. ಇದಕ್ಕೆ ಪ್ರತಿಯಾಗಿ ಡಲಿಂಗರನು ಮಲಿನೆಸ್ ಸಮಾರಂಭದಲ್ಲಿ ಚರ್ಚೆಯಾದ ವಿಷಯಗಳನ್ನು ಪ್ರಸ್ತಾಪಿಸಿ ಪಾಸ್ಟ್ ಅಂಡ್ ಪ್ರೆಸೆಂಟ್ ಆಫ್ ಕ್ಯಾತೊಲಿಕ್ ತಿಯಾಲಜಿ (ಅಂದು ಮತ್ತು ಇಂದಿನ ಕ್ಯಾತೊಲಿಕ್ ದೇವಶಾಸ್ತ್ರ) ಮತ್ತು ಯೂನಿವರ್ಸಿಟೀಸ್ ಪಾಸ್ಟ್ ಅಂಡ್ ಪ್ರೆಸೆಂಟ್ (ವಿಶ್ವವಿದ್ಯಾನಿಲಯಗಳು ಅಂದು ಮತ್ತು ಇಂದು) ಎಂಬ ಗ್ರಂಥಗಳನ್ನು ಪ್ರಕಟಿಸಿದ. ಈತನ ಹೇಳಿಕೆಗಳು ಸಾಕಷ್ಟು ಮನ್ನಣೆಯನ್ನು ಪಡೆದವು. ಪೋಪನ ಸರ್ವಾಧಿಕಾರವಾದವನ್ನು ವಿರೋಧಿಸುವ ಚಟುವಟಿಕೆಗಳು ಜರ್ಮನಿಯ ಮೂಲೆಮೂಲೆಗಳಲ್ಲಿಯೂ ಹುಟ್ಟಿಕೊಂಡವು. ಇದೇ ಒಂದು ಹೊಸ ಬೆಳವಣಿಗೆಯಾಗಿ ಮಾರ್ಪಟ್ಟು ಡಲಿಂಗರ್ ಅದರ ನಾಯಕನಾದ. ಈತನ ಸ್ನೇಹಿತರಾದ ಯೋಹನ್ ಫ್ರೀಡರಿಕ್ ಮತ್ತು ಜೆ. ಎನ್. ಹ್ಯೂಬರ್ ಈ ಬೆಳೆವಣಿಗೆಯನ್ನು ಮತ್ತಷ್ಟು ಪ್ರೋತ್ಸಾಹಿಸಿದರು. ಅಲ್ಲದೆ ಬಾನ್‍ನ ಕ್ಯಾತೊಲಿಕ್ ವಿಭಾಗದ ಪ್ರಾಧ್ಯಾಪಕರು. ಸ್ವಿಟ್‍ಜóರ್‍ಲೆಂಡ್‍ನ ವಿದ್ವಾಂಸರು ಇದರ ಪ್ರಾಮುಖ್ಯವನ್ನು ಎತ್ತಿಹಿಡಿದರು.
1869ರಲ್ಲಿ ಸೇರಿದ ವ್ಯಾಟಿಕನ್ ಕೌನ್ಸಿನಲ್‍ನಲ್ಲಿ ಈತ ಪೋಪ್ ಸಂಬಂಧವಾದದ ಯಥಾರ್ಥತೆಯನ್ನು ಪ್ರಶಿಸಿ ಪ್ರಗತಿ ವಿರೋಧಿ ತತ್ತ್ವಗಳನ್ನು ಖಂಡಿಸಿದ. ಇದೇ ಸಂದರ್ಭದಲ್ಲಿ ಲೆಟರ್ಸ್ ಆಫ್ ಜೇನಸ್ ಎಂಬ ಪುಸ್ತಕವನ್ನು ಹ್ಯೂಬರ್ ಮತ್ತು ಫ್ರೀಡರಿಕ್‍ರೊಡಗೂಡಿ ಪ್ರಕಟಿಸಿದ ಡಲಿಂಗರನ ಅಭಿಪ್ರಾಯಗಳನ್ನು ವಿರೋಧಿಸಿದ ಬಿಷಪ್‍ಗಳನ್ನು ಇವನ ಮೇಲೆ ಕ್ರಮಕೈಗೊಳ್ಳಲು ನಿರ್ಧರಿಸಿದರು. ಮ್ಯೂನಿಕ್‍ನ ಕೆಲವು ಪ್ರಾಧ್ಯಾಪಕರೊಂದಿಗೆ ನ್ಯೂರಂಬರ್ಗ್‍ನಲ್ಲಿ ಸಭೆಸೇರಿ (1870) ವ್ಯಾಟಿಕನ್ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ಚರ್ಚಿಸಲಾದ ವಿಷಯಗಳು ಅಪ್ರಮುಖವೆಂದು ತೀರ್ಮಾನಿಸಿ ಇಂಥ ವಿರುದ್ಧವಾದ ಹೇಳಿಕೆಗಳನ್ನು ನಿರ್ಣಯಗಳನ್ನು ಕೈಗೊಂಡಿದ್ದಕ್ಕೆ ಡಲಿಂಗರ್ ಕ್ಷಮಾಪಣೆ ಕೇಳಬೇಕೆಂದು ಮ್ಯೂನಿಕ್‍ನ ಆರ್ಚ್‍ಬಿಷಪ್ ಹೇಳಿಕೆಗಳನ್ನು ಹೊರಡಿಸಿದ. ಡಲಿಂಗರ್ ಅವು ಯಾವುದಕ್ಕೂ ಸೊಪ್ಪುಹಾಕದೆ ತನ್ನ ವಾದ ಸರಿ ಎಂದ. ಇದರಿಂದ ಕುಪಿತನಾದ ಆರ್ಚ್‍ಬಿಷಪ್ ಈತನಿಗೆ ಬಹಿಷ್ಕಾರ ಹಾಕಿದ (1871). ಈ ಘಟನೆಯ ಅನಂತರ ಈತ ಮ್ಯೂನಿಕ್ ವಿಶ್ವ ವಿದ್ಯಾನಿಲಯದ ಮುಖ್ಯಸ್ಥನಾಗಿ ಅವಿರೋಧವಾಗಿ ಆಯ್ಕೆಗೊಂಡ. ವಿಯೆನ್ನ್, ಆಕ್ಸ್‍ಫರ್ಡ್, ಎಡಿನ್‍ಬರೋ ಮತ್ತು ಮಾರ್ಬರ್ಗ್ ವಿಶ್ವವಿದ್ಯಾನಿಲಯಗಳು ಈತನಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದವು.
ಚರ್ಚುಗಳ ಪುನರೈಕ್ಯತೆಯ ಬಗ್ಗೆ 1872-75ರ ವರೆಗೆ ಬಾನ್ ಸಮಾರಂಭದಲ್ಲಿ ಇಂಗ್ಲಿಷ್ ಮತ್ತು ಜರ್ಮನ್‍ನಲ್ಲಿ ಮಾಡಿದ ಈತನ ಅನೇಕ ಭಾಷಣಗಳು ದೇವತಾಶಾಸ್ತ್ರದ ಸ್ಥಿತಿ-ಗತಿ ಪುನರೈಕ್ಯತೆಯನ್ನು ಪ್ರಶ್ನೆ, ರೋಮನ್ ಕ್ಯಾತೊಲಿಕ್ ಚರ್ಚು ಆಡಳಿತಕ್ಕೊಳಪಟ್ಟಿರುವ ಯೂರೋಪ ದೇಶಗಳ ಧಾರ್ಮಿಕ ಪರಿಸ್ಥಿತಿ-ಇವಕ್ಕೆ ಸಂಬಂಧಿಸಿದವುಗಳಾಗಿವೆ. ತನ್ನ ಜೀವಿತದ ಕೊನೆಯ ವರ್ಷದಲ್ಲಿ ಸ್ನೇಹಿತ ರೊಯಿಷ್ ಎಂಬುವನೊಡಗೂಡಿ ಗೆಷಿಷ್ಟೆ ಡೆರ್ ಮೋರಲ್‍ಸ್ಟ್ರೈಟಿಕ್ ಕೈಟೆನ್ ಇನ್ ಡೆರ್‍ರ್ಯೋಮಿಷ್ ಕ್ಯಾತೋಲಿಷೆನ್ ಕಿರ್ಷೆ ಸೈóಟ್ ಡೆಮ್ 16. ಯಾರ್ ಉಂಡರ್ಟ್ (1889) (ದಿ ಹಿಸ್ಟರಿ ಆಫ್ ಮಾರಲ್ ಡಿಸ್ಪ್ಯೂಟ್ ಇನ್ ದಿ ರೋಮನ್ ಕ್ಯಾತೊಲಿಕ್ ಚರ್ಚ್ ಸಿನ್ಸ್ ಸಿಕ್ಸ್‍ಟೀನ್ತ್ ಸೆಂಚುರಿ ವಿತ್ ಕಾಂಟ್ರಿಬ್ಯೂಷನ್ ಟು ದಿ ಹಿಸ್ಟರಿ ಅಂಡ್ ದಿ ಕ್ಯಾರಕ್ಟರಿಸ್ಟಿಕ್ ಆಫ್ ಜೇಸೂಟ್ಸ್) ಎಂಬ ಗ್ರಂಥವನ್ನು ಪ್ರಕಟಿಸಿದ.
ದಿ ಯೂಕರಿಸ್ಟ್ ಇನ್ ದಿ ಫಸ್ಟ್ ತ್ರೀ ಸೆಂಚುರೀಸ್ (1826), ಎ ಚರ್ಚ್ ಹಿಸ್ಟರಿ (1836), ಹಿಪ್ಪೊಲೈಟಸ್ ಅಂಡ್ ಕ್ಯಾಲಿಸ್ಟಸ್ (1854), ಫಸ್ಟ್ ಏಜ್ ಆಫ್ ಕ್ರಿಶ್ಚಿಯಾನಿಟಿ (1860) ದಿ ಚರ್ಚ್ ಅಂಡ್ ದಿ ಚರ್ಚಸ್ (1861), ಲೆಕ್ಷರ್ಸ್ ಆನ್ ದಿ ರಿ ಯೂನಿಯನ್ ಆಫ್ ಚಿ ಚರ್ಚಸ್, ದಿ ವ್ಯಾಟಿಕನ್ ಡಿಕ್ರೀಸ್ ಅಂಡ್ ಸ್ಟಡೀಸ್ ಇನ್ ಯೂರೋಪಿಯನ್ ಹಿಸ್ಟರಿ (1890)-ಇವು ಈತನ ಇತರ ಮುಖ್ಯಕೃತಿಗಳು. ಡಲಿಂಗರ್ ತನ್ನ ತೊಂಬತ್ತೊಂದನೆಯ ವಯಸ್ಸಿನಲ್ಲಿ ಮ್ಯೂನಿಕ್‍ನಲ್ಲಿ ನಿಧನ ಹೊಂದಿದ. ಪ್ಯಾರಿಸ್ ಪಾದ್ರಿಗೆ ಶರಣಾಗಿ ಸಂಸ್ಕಾರ ಪಡೆಯಲು ನಿರಾಕರಿಸಿದ್ದ ಈತನಿಗೆ ಫ್ರೀಡರಿಕ್ ಎಂಬ ಸ್ನೇಹಿತರಿಂದ ಅಂತ್ಯಕ್ರಿಯೆಗಳು ನಡೆದವು. (ಎಸ್.ಎನ್.ಜಿ.)