ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡೆಲವೇರ್

ವಿಕಿಸೋರ್ಸ್ದಿಂದ

ಡೆಲವೇರ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ. ಉತ್ತರ ಮತ್ತು ವಾಯುವ್ಯಗಳಲ್ಲಿ ಪೆನ್ಸಿಲ್ವೇನಿಯ; ಪೂರ್ವದಲ್ಲಿ ಡೆಲವೇರ್ ನದಿ, ಡೆಲವೇರ್ ಕೊಲ್ಲಿ ಮತ್ತು ಅಟ್ಲಾಂಟಿಕ್ ಸಾಗರ; ದಕ್ಷಿಣ ಪಶ್ಚಿಮಗಳಲ್ಲಿ ಮೇರಿಲ್ಯಾಂಡ್- ಇವು ಇದರ ಮೇರೆಗಳು. ರೋಡ್ ಐಲೆಂಡನ್ನು ಬಿಟ್ಟರೆ ಇದೇ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅತ್ಯಂತ ಸಣ್ಣ ರಾಜ್ಯ. ವಿಸ್ತೀರ್ಣ 2,057 ಚ.ಮೈ. ಅದರಲ್ಲಿ 79 ಚ.ಮೈ. ಜಲಭಾಗ. ಜನಸಂಖ್ಯೆ 5,48,104 (1970). ರಾಜಧಾನಿ ಡೋವರ್.

ಭೌತಲಕ್ಷಣ : ಡೆಲವೇರ್ ರಾಜ್ಯ ಅಟ್ಲಾಂಟಿಕ್ ಕರಾವಳಿಯಲ್ಲಿದೆ. ಇದು ಬಹುತೇಕ ಮೈದಾನ. ಸಮುದ್ರಮಟ್ಟದಿಂದ ಸರಾಸರಿ 60' ಎತ್ತರದಲ್ಲಿದೆ. ಹ್ವೈಟ್ ಕ್ಲೇ ಮತ್ತು ಕ್ರಿಸ್ಟಿನ ಕೊರಕಲುಗಳ ಉತ್ತರ ಭಾಗದಲ್ಲಿ ನೆಲ ಏರಿಳಿಯುತ್ತದೆ. ಅಲ್ಲಲ್ಲಿ ಖಚಿತವಾಗಿ ಮೇಲೆದ್ದ ಬೆಟ್ಟಗಳೂ ತಕ್ಕಮಟ್ಟಿಗೆ ಆಳವಾದ ಕಣಿವೆಗಳೂ ಉಂಟು; ದಕ್ಷಿಣದಲ್ಲಿ ನೆಲ ಸಾಮಾನ್ಯವಾಗಿ ಸಮತಟ್ಟಾಗಿದೆ. ಕೆಂಟ್ ಕೌಂಟಿಯಲ್ಲಿ ಸಮುದ್ರಭರತದಿಂದಾದ 60,000 ಎಕರೆ ಜೌಗು ನೆಲವಿದೆ. ದಿಂಡು ಕಟ್ಟಿ ಇದರಲ್ಲಿ ಸ್ವಲ್ಪಭಾಗವನ್ನು ಉದ್ಧರಣ (ರೆಕ್ಲಮೇಷನ್) ಮಾಡಲಾಗಿದೆ. ಉತ್ತರದ ನೆಲ ಜೇಡಿಮಣ್ಣಿನಿಂದ ಕೂಡಿದ್ದು. ದಕ್ಷಿಣದ ಮಣ್ಣು ಜೇಡಿಮರಳು ಮಿಶ್ರಿತ.

ರಾಜ್ಯದ ಪ್ರಮುಖನದಿಗಳು ನ್ಯಾಂಟಿಕೋಕ್ ಮತ್ತು ಕ್ರಿಸ್ಟಿನ. ಇವಲ್ಲದೆ ಸ್ಮರ್ನ, ಲೀಪ್ಸಿಕ್, ಸೇಂಟ್ ಜೋನ್ಸ್, ಮರ್ಡರ್ ಕಿಲ್, ಮಿಸ್ಟಿಲನ್, ಇಂಡಿಯನ್ ಮುಂತಾದ ಹೊಳೆಗಳಿವೆ. ರಾಜ್ಯದಲ್ಲಿ 50ಕ್ಕೂ ಹೆಚ್ಚಿನ ಸರೋವರಗಳುಂಟು. ಡೆಲವೇರ್‍ನ ಮುಖ್ಯ ಬಂದರುಗಳು ವಿಲ್ಮಿಂಗ್ಟನ್, ನ್ಯೂ ಕ್ಯಾಸಲ್ ಮತ್ತು ಲೂಯಿಸ್.

ವಾಯುಗುಣ : ರಾಜ್ಯದ್ದು ಸಮಶೀತೋಷ್ಣ ಆದ್ರ್ರ ವಾಯುಗುಣ. ಬೇಸಗೆ ಬೆಚ್ಚಗೂ ಚಳಿಗಾಲ ಸೌಮ್ಯವಾಗಿಯೂ ಇರುತ್ತವೆ. ವಾರ್ಷಿಕ ಸರಾಸರಿ ಉಷ್ಣತೆ ನ್ಯೂ ಕ್ಯಾಸಲ್ ಕೌಂಟಿಯಲ್ಲಿ 55ಲಿಈ ಈ, ಕೆಂಟಿಯಲ್ಲೂ ಸಸೆಕ್ಸಿನಲ್ಲೂ 56ಲಿ ಈ. ಒಳನಾಡಿನಲ್ಲಿ ವರ್ಷದಲ್ಲಿ 25-30 ದಿನಗಳಲ್ಲಿ 90ಲಿಗಿಂತ ಹೆಚ್ಚಿನ ಉಷ್ಣತೆ ಇರುತ್ತದೆ. ಕರಾವಳಿಯಲ್ಲಿ ಇಂಥ ದಿನಗಳ ಸಂಖ್ಯೆ 15-20. ವಾರ್ಷಿಕ ಮಳೆ ಉತ್ತರದಲ್ಲಿ 44" ಇಂದ ದಕ್ಷಿಣದಲ್ಲಿ 47" ವರೆಗೆ ವ್ಯತ್ಯಾಸವಾಗುತ್ತದೆ. ಸಸ್ಯ, ಪ್ರಾಣಿವರ್ಗ : ಯೂರೋಪಿನ ಜನ ನೆಲೆಸುವುದಕ್ಕೆ ಹಿಂದೆ ಡೆಲವೇರ್ ಪ್ರದೇಶದಲ್ಲಿ ಪೈನ್, ಓಕ್, ವಾಲ್‍ನಟ್, ಹಿಕರಿ ಮುಂತಾದ ಮರಗಳ ದಟ್ಟ ಅರಣ್ಯಗಳಿದ್ದುವು. ವಸತಿ ಬೆಳೆದಂತೆ ಕಾಡುಗಳನ್ನು ಕಡಿಯಲಾಯಿತು. ಬಿಳಿ ಓಕ್ ಮರಗಳನ್ನು ಈಗಲೂ ರಕ್ಷಿಸಲಾಗಿದೆ. ಇತರ ಮರಗಳು ಬೀಚ್, ಕೆಂಪು ಓಕ್, ಆಷ್, ಸೈಕಮೋರ್, ಮೇಪಲ್. ಅಲ್ಲಲ್ಲಿ ಚೆರಿ ಹಾಗೂ ಸಿಡಾರ್ ಮರಗಳಿವೆ.

ಮಿಂಕ್, ಕಸ್ತೂರಿ ಇಲಿ, ಮಖಮಲ್ ಹೆಗ್ಗಣ, ಅಳಿಲು, ನರಿ, ಮೊಲ, ಜಿಂಕೆಗಳಿವೆ. ಕರಡಿ, ತೋಳ, ಬೀವರ್ ಇವು ಹಿಂದೆ ವಿಪುಲವಾಗಿದ್ದುವು. ಇವನ್ನು ಹೊರದೂಡಲಾಗಿದೆ. ಕಾಡುಪಾರಿವಾಳ, ಕಾಡುಕೋಳಿ, ಜೀವಂಜೀವ, ಕವುಜುಗ, ರಾಬಿನ್, ಉರುಳಿಗ, ನೀಲಿ ಕೊಕ್ಕರೆ-ಇವು ಹಕ್ಕಿಗಳು. ಕೆಂದಲೆ ಹಾವು ಮೊದಲಾದ ಉರಗಗಳಿವೆ. ಕಡಲಂಚಿನ 12,000 ಎಕರೆ ಭೂಮಿಯನ್ನು ವಲಸೆ ಬರುವ ಜಲಚರ ಪಕ್ಷಿಗಳ ಧಾಮವಾಗಿ ಪರಿವರ್ತಿಸಲಾಗಿದೆ. (ಸಿ.ಎಂ.; ವಿ.ಜಿ.ಕೆ.)

ಜನ, ಜೀವನ : ಇಲ್ಲಿಯ ಜನರು ವಸಾಹತುಕಾಲದಿಂದ ನೆಲೆಸಿರುವ ವಿವಿಧ ಯೂರೋಪಿಯನ್ನರ ಸಂಮಿಶ್ರಣ. ಇಡೀ ರಾಜ್ಯದಲ್ಲಿ ಚದುರಿದಂತೆ ನೀಗ್ರೋಗಳು ವಾಸಿಸುತ್ತಾರೆ ಅವರ ಸಂಖ್ಯೆ ರಾಜ್ಯದ ಜನಸಂಖ್ಯೆಯ 1/5 ಭಾಗ. ಕ್ರೈಸ್ತಮತ ಪ್ರಮುಖವಾದ್ದು. ಗ್ರಾಮಪ್ರದೇಶದಲ್ಲಿ ಮೆತಾಡಿಸ್ಟ್ ಪಂಥದವರೂ ನಗರಗಳಲ್ಲಿ ಕ್ಯಾತೊಲಿಕರೂ ಹೆಚ್ಚಾಗಿದ್ದಾರೆ. ಇವರಲ್ಲದೆ ಎಪಿಸ್ಕೋಪಿಯನರೂ ಪ್ರೆಸ್ಬಿಟೇರಿಯನರೂ ಉಂಟು. ಹೆಚ್ಚು ಜನರ ಕಸಬು ಕೈಗಾರಿಕೆ; ಉಳಿದವರದು ವ್ಯವಸಾಯ, ಮೀನುಗಾರಿಕೆ, ಪಶುಪಾಲನ ಹಾಗೂ ಕೋಳಿಸಾಕಣೆ.

ಇತಿಹಾಸ : ಬಿಳಿಯರ ಆಗಮನಕ್ಕೆ ಹಿಂದೆ ಡೆಲವೇರ್ ಪ್ರದೇಶದಲ್ಲಿ ಲೆನಿಲೆನಾಪೆ ಬುಡಕಟ್ಟಿನವರು ವಾಸವಾಗಿದ್ದರು. ಅನಂತರ ಇವರಿಗೆ ಡೆಲವೇರ್ ಇಂಡಿಯನರೆಂಬ ಹೆಸರು ಬಂತು. ಡೆಲವೇರ್ ಕೊಲ್ಲಿ ಮತ್ತು ಡೆಲವೇರ್ ನದಿಯನ್ನು ಡಚ್ಚರ ಪರವಾಗಿ ಹೆನ್ರಿ ಹಡ್ಸನ್ ಕಂಡ (1609). ವರ್ಜಿನಿಯದ ಸಾಮ್ಯುಯೆಲ್ ಆರ್ಗಾಲ್ ಮರುವರ್ಷ ಈ ಕೊಲ್ಲಿಗೆ ವರ್ಜಿನಿಯದ ಗವನ್ನರ್ ಡೆಲವೇರನ ಹೆಸರನ್ನಿಟ್ಟ. ಕಾರ್ನೆಲಿಸ್ ಹೆಂಡ್ರಿಕ್‍ಸನ್ 1615-16ರಲ್ಲಿ ಈ ಪ್ರದೇಶವನ್ನು ದೀರ್ಘವಾಗಿ ಪರಿಶೋಧಿಸಿದ. 1621ರಲ್ಲಿ ಡಚ್ ವೆಸ್ಟ್ ಇಂಡಿಯ ಕಂಪೆನಿ ಕೆಲವು ಡಚ್ ಕುಟುಂಬಗಳನ್ನು ಇಲ್ಲಿ ನೆಲಸಲು ಕಳುಹಿಸಿತು. ಈ ಮಧ್ಯೆ ಬ್ರಿಟಿಷರು ಡೆಲವೇರ್ ಪ್ರದೇಶ ತಮಗೆ ಸೇರಿದ ವರ್ಜಿನಿಯದ ಭಾಗವೆಂದು ಸಾಧಿಸಿದರು. ಇದನ್ನು ತಮ್ಮ ನಾವಿಕ ಹಡ್ಸನ್ ಕಂಡುಹಿಡಿದನೆಂದು ಡಚ್ಚರು ವಾದಿಸಿ 1631ರಲ್ಲಿ ಈಗಿನ ಲೂಯಿಸ್ ನಗರದ ಬಳಿ ತುಪ್ಪುಳು ವ್ಯಾಪಾರ ಕೋಠಿಯೊಂದನ್ನು ಸ್ಥಾಪಿಸಿದರು. ಆದರೆ, ಅವರ ಕಿರುಕುಳವನ್ನು ಸಹಿಸದ ಸ್ಥಳೀಯ ಅಂಗೋನ್‍ಕ್ವಿನ್ ಇಂಡಿಯನರು ಇದನ್ನು ನಾಶಪಡಿಸಿದರು.

ಡಚ್ಚರ ತರುವಾಯ ಡೆಲವೇರ್ ಪ್ರದೇಶಕ್ಕೆ ಯೂರೋಪಿನಿಂದ ಬಂದವರು ಸ್ವೀಡನಿನವರು. ಸ್ವೀಡನಿನ ಪರವಾಗಿ ಪೀಟರ್ ಮಿನ್ಯೂಯೆಟ್ ಈಗಿನ ವಾಷಿಂಗ್ಟನ್ ಬಳಿ ಕ್ರಿಸ್ಟಿನ ಕೋಟೆಯನ್ನು ಕಟ್ಟಿದ (1638). ಈ ನೆಲೆಯಲ್ಲಿ ಫಿನ್ಲೆಂಡಿನವರೂ ಇದ್ದರು. ಸುತ್ತಮುತ್ತಣ ಪ್ರದೇಶಕ್ಕೆ ನ್ಯೂ ಸ್ವೀಡನ್ ಎಂಬ ಹೆಸರಾಯಿತು. ಈ ಪ್ರದೇಶಕ್ಕಾಗಿ ಡಚ್ಚರಿಗೂ ಸ್ವೀಡಿಷ್ ಜನರಿಗೂ ನಡುವೆ ವಿರಸ ಉದ್ಭವಿಸಿತು. ಈಗಿನ ನ್ಯೂ ಕ್ಯಾಸಲ್ ಬಳಿ ಡಚ್ಚರು 1651ರಲ್ಲಿ ಕಸಿಮೀರ್ ಕೋಟೆ ಸ್ಥಾಪಿಸಿದರು. 1654ರಲ್ಲಿ ಈ ಕೋಟೆ ಸ್ವೀಡನಿನವರ ವಶವಾಯಿತು. ಮರುವರ್ಷ ಈ ಕೋಟೆಯನ್ನೂ ಕ್ರಿಸ್ಟಿನ ಕೋಟೆಯನ್ನೂ ಡಚ್ಚರು ಹಿಡಿದುಕೊಂಡರು.

ಈ ಮಧ್ಯೆ ಬ್ರಿಟಿಷರ ಪ್ರಾಬಲ್ಯ ಹೆಚ್ಚಿತು. ಅಮೆರಿಕದಲ್ಲಿ ಡಚ್ಚರು ಸ್ಥಾಪಿಸಿದ ವಸಾಹತುಗಳೆಲ್ಲ ಅವರ ವಶವಾದುವು (1664). ಡೆಲವೇರ್ ಕೂಡ ಅಮೆರಿಕನ್ ಕ್ರಾಂತಿಯುದ್ಧದ ವರೆಗೆ ಇಂಗ್ಲಿಷರ ವಶದಲ್ಲಿತ್ತು. 1673-74ರ ಅವಧಿಯಲ್ಲಿ ಮಾತ್ರ ಡಚ್ಚರು ಅದನ್ನು ಪುನಃ ವಶಪಡಿಸಿಕೊಂಡಿದ್ದರು. 1674ರಲ್ಲಿ ಇದು ಮತ್ತೆ ಇಂಗ್ಲೆಂಡಿಗೆ ವರ್ಗವಾಯಿತು.

ಡೆಲವೇರ್ ರಾಜ್ಯಸ್ಥಾಪನೆಯಾದದ್ದು 1776ರಲ್ಲಿ. ಆ ವರ್ಷ ಅದರ ಮೊದಲ ಸಂವಿಧಾನ ರಚನೆಯಾಯಿತು. ಅದಕ್ಕೆ ಹಿಂದಿನ ವರ್ಷ ಅಮೆರಿಕನ್ ಕ್ರಾಂತಿಯುದ್ಧ ಪ್ರಾರಂಭವಾಗಿತ್ತು. ಕ್ರಾಂತಿಯುದ್ಧ ಕಾಲದಲ್ಲಿ ನ್ಯೂಯಾರ್ಕ್ ಭಾಗದ ಕೂಚ್ಸ್ ಬ್ರಿಜ್ ಬಳಿಯಲ್ಲಿ ಸಮರವೊಂದು ನಡೆದಿತ್ತು (1777). ಅಮೆರಿಕ ಒಕ್ಕೂಟದ ಸಂವಿಧಾನವನ್ನು ಒಪ್ಪಿದ ರಾಷ್ಟ್ರಗಳಲ್ಲಿ ಡೆಲವೇರ್ ಮೊದಲನೆಯದು (1787). ಇಂಗ್ಲೆಂಡಿನ ವಿರುದ್ಧ ಅಮೆರಿಕ ನಡೆಸಿದ ಯುದ್ಧದಲ್ಲಿ (1812-14) ಇಂಗ್ಲಿಷರು ಲೂಯಿಸ್ ರೇವಿನ ಮೇಲೆ ಫಿರಂಗಿ ಹಾರಿಸಿದರು (1812). ಯುದ್ಧದ ತರುವಾಯದ ವರ್ಷಗಳಲ್ಲಿ ರಾಜ್ಯ ಪ್ರಗತಿ ಹೊಂದಿತು. ನ್ಯೂ ಕ್ಯಾಸಲ್-ಫ್ರೆಂಚ್ ಟೌನ್ ರೈಲುರಸ್ತೆ ಏರ್ಪಟ್ಟಿತು (1832). ಈ ರೈಲುಮಾರ್ಗದಿಂದ ಚೆಸಪೀಕ ಕೊಲ್ಲಿಗೆ ಸಾರಿಗೆ ಸಂಪರ್ಕ ಏರ್ಪಟ್ಟಿತು.

ಡೆಲವೇರ್ ಪ್ರಮುಖವಾಗಿ ನೀಗ್ರೋ ಗುಲಾಮಗಿರಿಯ ರಾಜ್ಯವಾಗಿತ್ತು. ಅಮೆರಿಕ ಅಂತರ್ಯುದ್ಧದ ಕಾಲದಲ್ಲಿ (1861-65) ಅದು ಗುಲಾಮಗಿರಿಯ ಪರವಾಗಿತ್ತು. ವಿಶೇಷವಾಗಿ ದಕ್ಷಿಣದ ಜರನಲ್ಲಿ ಈ ಧೋರಣೆ ಪ್ರಬಲವಾಗಿತ್ತು. ಇದು ಒಕ್ಕೂಟಕ್ಕೆ ನಿಷ್ಠೆಯಿಂದಿದ್ದರೂ ಇದರ ಪ್ರಜೆಗಳು ತಂತಮ್ಮ ಒಲವುಗಳಿಗೆ ಅನುಗುಣವಾಗಿ ಕೇಂದ್ರದ ಪರವಾಗಿಯೋ ಕೇಂದ್ರವನ್ನು ಪ್ರತಿಭಟಿಸಿದ ರಾಜ್ಯಗಳ ಪರವಾಗಿಯೋ ಯುದ್ಧ ಮಾಡಿದರು.

ಅಂತರ್ಯುದ್ಧದ ತರುವಾಯ ಶಾಸಕಾಂಗ ಕಾಲು ಶತಮಾನ ಡೆಮೊಕ್ರಾಟಿಕ್ ಪಕ್ಷದ ನಿಯಂತ್ರಣದಲ್ಲಿತ್ತು. ನೀಗ್ರೋ ಮತ್ತು ಬಿಳಿಯರ ನಡುವೆ ಸಮಾನತೆಯನ್ನು ತರಲು ರಚಿಸಿದ ಎಲ್ಲ ಮಸೂದೆಗಳೂ ಭಂಗ ಹೊಂದಿದುವು. ಸಂವಿಧಾನಕ್ಕೆ ತಂದ 15ನೆಯ ತಿದ್ದುಪಡಿ ಅಂಗೀಕೃತವಾದ ಮೇಲೆ ಮೊದಲಬಾರಿಗೆ 1870ರ ಚುನಾವಣೆಯಲ್ಲಿ ನೀಗ್ರೋ ಜನರು ಮತದಾನ ಮಾಡಿದರು. ಆದರೆ ಡೆಮೊಕ್ರಾಟಿಕ್ ಪಕ್ಷದ ಬಹುಮತ ಉಳಿದುಕೊಂಡೇ ಬರುತ್ತಿತ್ತು. ಫ್ರಾಂಕ್ಲಿನ್ ರೂಸ್‍ವೆಲ್ಟರ ಕಾಲದವರೆಗೂ ನೀಗ್ರೋ ಪ್ರಜೆಗಳು ರಿಪಬ್ಲಿಕನ್ ಪಕ್ಷಕ್ಕೆ ಬೆಂಬಲ ನೀಡಿದರು. 20ನೆಯ ಶತಮಾನದ ಉತ್ತರಾರ್ಧದಿಂದ ಅವರನ್ನು ಸ್ವಲ್ಪಮಟ್ಟಿಗೆ ಡೆಮೊಕ್ರಾಟಿಕ್ ಪಕ್ಷ ಒಲಿಸಿಕೊಂಡಿದೆ.

ಡೆಲವೇರ್ ರಾಜಕೀಯದಲ್ಲಿ ರಿಪಬ್ಲಿಕನ್ ಹಾಗೂ ಡೆಮೊಕ್ರಾಟಿಕ್ ಪಕ್ಷಗಳ ನಡುವಣ ಹೋರಾಟ ಅವಿಚ್ಛಿನ್ನವಾಗಿ ನಡೆದಿದೆ. ಅಂತರ್ಯುದ್ಧದ ತರುವಾಯ ಡೆಲವೇರ್‍ನಲ್ಲಿ ಪ್ರಥಮ ಬಾರಿಗೆ ರಿಪಬ್ಲಿಕನರು 1889ರಲ್ಲಿ ಬಹುಮತ ಪಡೆದರು. ಅನಂತರದ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷ ಅಧಿಕಾರಕ್ಕೆ ಬಂತು. ಆ ತರುವಾಯ ಡೆಲವೇರ್ ಶಾಸಕಾಂಗದ ಬಿಕ್ಕಟ್ಟಿನಿಂದ 1901ರಿಂದ 1906ರವರೆಗೆ ಅಮೆರಿಕದ ಸೆನೆಟ್ ಸಭೆಯಲ್ಲಿ ಡೆಲವೇರ್ ರಾಜ್ಯಕ್ಕೆ ಪೂರ್ಣ ಪ್ರಾತಿನಿಧ್ಯವಿರಲಿಲ್ಲ.

ಡೆಲವೇರ್ ಮತ್ತು ನ್ಯೂ ಜರ್ಸಿ ರಾಜ್ಯಗಳ ನಡುವೆ ಇದ್ದ ನದೀವಿವಾದ ಅಮೆರಿಕದ ಸುಪ್ರೀಂ ಕೋರ್ಟಿನಿಂದ 1934ರಲ್ಲಿ ಅಂತಿಮವಾಗಿ ತೀರ್ಮಾನವಾಯಿತು. ನೀಗ್ರೋ ಮತ್ತು ಬಿಳಿಯರ ನಡುವೆ ವಿವಾಹ ನಿಷೇಧಿಸಿದ್ದ 1829ರ ಕಾನೂನು 1960ರಲ್ಲಿ ರದ್ದಾಯಿತು.

ಸಂವಿಧಾನ ಮತ್ತು ಸರ್ಕಾರ : ಡೆಲವೇರ್ ರಾಜ್ಯದ ಈಗಿನ ಸಂವಿಧಾನ 1897ರಲ್ಲಿ ಅಂಗೀಕೃತವಾಯಿತು. ಸಂವಿಧಾನದ ಆ ನಿಯಮಗಳ ಪ್ರಕಾರ ಸರ್ಕಾರ ರಚಿತವಾಗಿದೆ. ಆಡಳಿತದ ಪ್ರಮುಖ ಅಧಿಕಾರಿಗಳು ಗವರ್ನರ್, ಲೆಫ್ಟೆನಂಟ್ ಗವರ್ನರ್, ಅಟಾರ್ನಿ ಜನರಲ್ ಹಾಗೂ ರಾಜ್ಯದ ಕಾರ್ಯದರ್ಶಿ ಇವರ ಅಧಿಕಾರವಧಿ 4 ವರ್ಷ. ಗವರ್ನರ್ ಆದವನು ಎರಡು ಅವಧಿಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರುವಂತಿಲ್ಲ. ರಾಜ್ಯದಲ್ಲಿ ದ್ವಿಸದನಗಳ (ಪ್ರತಿನಿಧಿ ಸಭೆ ಮತ್ತು ಸೆನೆಟ್) ವಿಧಾನಮಂಡಲವಿದೆ. ಮೇಲ್ಮನೆಯಾದ ಸೆನೆಟ್‍ನ 21 ಸದಸ್ಯರು 4 ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ಪ್ರತಿನಿಧಿ ಸಭೆಯ ಸದಸ್ಯರು 41. ಅವರ ಅಧಿಕಾರವಧಿ 2 ವರ್ಷ.

ಡೆಲವೇರಿನಿಂದ ಅಮೆರಿಕದ ಕಾಂಗ್ರೆಸಿನ ಪ್ರತಿನಿಧಿಸಭೆಗೆ ಒಬ್ಬ ಸದಸ್ಯನೂ ಸೆನೆಟಿಗೆ ಇಬ್ಬರು ಸದಸ್ಯರೂ ಆಯ್ಕೆಯಾಗಿರುತ್ತಾರೆ.

ರಾಜ್ಯದಲ್ಲಿ ಉಚ್ಚನ್ಯಾಯಾಲಯ, ಸುಪೀರಿಯರ್ ನ್ಯಾಯಾಲಯಗಳು, ಧರ್ಮ ಸೂಕ್ಷ್ಮ (ಚಾನ್ಸರಿ) ನ್ಯಾಯಾಲಯ, ಸಾಮಾನ್ಯ ಮೊಕದ್ದಮೆಗಳ ವಿಚಾರಣೆಯ ನ್ಯಾಯಾಲಯಗಳು, ಬಾಲಾಪರಾಧ ವಿಚಾರಣೆ ನ್ಯಾಯಾಲಯ ಇವೆ. ಶಿಕ್ಷಣ : ನ್ಯೂ ಅರ್ಕಿನ ಡೆಲವೇರ್ ಕಾಲೇಜಿನ ಸ್ಥಾಪನೆಯಾದ್ದು 1743ರಲ್ಲಿ. ಡೆಲವೇರ್ ವಿಶ್ವವಿದ್ಯಾಲಯ 1834ರಲ್ಲಿ ಆರಂಭವಾಯಿತು. ನೀಗ್ರೋಗಳಿಗಾಗಿ ಡೆಲವೇರ್ ಬಳಿ ಡೆಲವೇರ್ ರಾಜ್ಯ ಕಾಲೇಜು 1892ರಲ್ಲಿ ಸ್ಥಾಪನೆಯಾಯಿತು. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ.

ಆರ್ಥಿಕತೆ : ವ್ಯವಸಾಯ: ಡೆಲವೇರ್ ಪ್ರಧಾನವಾಗಿ ಕೈಗಾರಿಕಾ ರಾಜ್ಯ, ವ್ಯವಸಾಯಕ್ಕೆ ದ್ವಿತೀಯ ಸ್ಥಾನವಿದೆ. ಸಾಗುವಳಿಯ ಜೊತೆಗೆ ಪಶುಪಾಲನೆ, ಕೋಳಿ ಸಾಕಣೆ ಮತ್ತು ಹೈನುಗಾರಿಕೆಗಳೂ ನಡೆಯುತ್ತವೆ. ಮೆಕ್ಕೆಜೋಳ, ಗೋದಿ, ಸೋಯಾಬೀನ್ಸ್, ಹಣ್ಣು, ತರಕಾರಿ, ಆಲೂಗಡ್ಡೆ ಮುಖ್ಯ ಬೆಳೆಗಳು.

ಡೆಲವೇರ್ ಕೊಲ್ಲಿ ಹಾಗೂ ಅಟ್ಲಾಂಟಿಕ್ ಸಾಗರ ತೀರದಲ್ಲಿ ಮೀನುಗಾರಿಕೆ ಅಭಿವೃದ್ಧಿ ಹೊಂದಿದೆ. ಕೈಗಾರಿಕೆ : ವಿಲ್ಮಿಂಗ್ಟನ್‍ನಲ್ಲಿ ರಾಸಾಯನಿಕ, ಮೋಟಾರು, ವಿಮಾನ ಹಾಗೂ ನೌಕಾನಿರ್ಮಾಣ ಕೈಗಾರಿಕೆಗಳಿವೆ. ಜವಳಿ, ಆಹಾರ ಪದಾರ್ಥ ಹಾಗೂ ಕೋಳಿಮಾಂಸದ ಡಬ್ಬೀಕರಣದ ಕಾರ್ಖಾನೆಗಳು ಅನೇಕ ನಗರಗಳಲ್ಲಿವೆ. ಲೂಯಿಸ್ ನಗರದಲ್ಲಿ ಮೀನೆಣ್ಣೆ ಹಾಗೂ ಮೀನಿನ ಗೊಬ್ಬರ ತಯಾರಾಗುತ್ತವೆ. ರಾಜ್ಯದ ಮುಖ್ಯ ಕೈಗಾರಿಕೆ ಪಟ್ಟಣಗಳು ವಿಲ್ಮಿಂಗ್ಟನ್ (80,386), ನ್ಯೂಆರ್ಕ್ (21,078), ಡೋವರ್ (17,488) ಎಲ್ಸ್‍ಮಿಯರ್ (8,415), ಮಿಲ್‍ಫರ್ಡ್ (5,314) ಮತ್ತು ನ್ಯೂ ಕ್ಯಾಸಲ್ (4,814).

ಸಾರಿಗೆ ಸಂಪರ್ಕ : ಉತ್ತರದಲ್ಲಿ ಬಾಲ್ಟಿಮೋರ್, ಬಹೈಯೊ ಮತ್ತು ರೀಡಿಂಗ್ ರೈಲುಮಾರ್ಗಗಳು ಹಾದುಹೋಗುತ್ತವೆ. ಒಟ್ಟು 300 ಮೈ. ರೈಲುಮಾರ್ಗಗಳಿವೆ; 4,440 ಮೈ. ರಸ್ತೆಗಳಿವೆ. 1951ರಲ್ಲಿ ಆರಂಭವಾದ ಡೆಲವೇರ್ ತೂಗುಸೇತುವೆ 10,765' ಉದ್ದವಾಗಿದೆ. ಪ್ರಪಂಚದ ಅತ್ಯಂತ ದೊಡ್ಡ ಸೇತುವೆಗಳಲ್ಲಿ ಇದೊಂದು. ಇದನ್ನು ನ್ಯೂ ಕ್ಯಾಸಲ್ ನಗರದ ಉತ್ತರದಲ್ಲಿ ಡೆಲವೇರ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ರಾಜ್ಯದಲ್ಲಿ ಒಟ್ಟು 20 ವಿಮಾನ ನಿಲ್ದಾಣಗಳಿವೆ. ವಿಲ್ಮಿಂಗ್ಟನ್ ಪ್ರಮುಖ ವಿಮಾನ ನಿಲ್ದಾಣ.

ಪ್ರವಾಸೋದ್ಯಮ : ಈಜು, ಬೇಟೆ ಹಾಗೂ ಮತ್ಸ್ಯವಿನೋದ ಸ್ಥಳಗಳು, ಸುಂದರ ಹಾಗೂ ಮನೋಹರವಾದ ಕಡಲತೀರ ಇವುಗಳಿಂದ ಡೆಲವೇರ್ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ವಿಲ್ಮಿಂಗ್ಟನ್ನಿನ ವಸ್ತುಸಂಗ್ರಹಾಲಯ ಅಲ್ಲಿಯ ಹಳೆಯ ಸ್ವೀಡ್ ಚರ್ಚ್, ಕ್ರಿಸ್ಟಿನ ಕೋಟೆ, ರಾಷ್ಟ್ರೋದ್ಯಾನ ಇವು ಮುಖ್ಯ ಪ್ರೇಕ್ಷಣೀಯ ಸ್ಥಳಗಳು.