ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾಮಸ್, ಫಿಲಿಪ್ ಎಡ್ವರ್ಡ್

ವಿಕಿಸೋರ್ಸ್ದಿಂದ

ತಾಮಸ್, ಫಿಲಿಪ್ ಎಡ್ವರ್ಡ್ 1878-1917. ಇಂಗ್ಲಿಷ್ ಕವಿ. ಪ್ರಬಂಧಕಾರ. ಹುಟ್ಟಿದ್ದು ಲಂಡನ್‍ನಲ್ಲಿ. ತಂದೆ ತಾಯಿ ಇಬ್ಬರೂ ವೆಲ್ಷ್ ಜನಾಂಗದವರು. ಆಕ್ಸ್ ಫರ್ಡಿನ ಸೇಂಟ್ ಪಾಲ್ ಮತ್ತು ಲಿಂಕನ್ ಕಾಲೇಜುಗಳಲ್ಲಿ ಓದಿ ಪದವೀಧರನಾದ. ಮಗನ ಸಾಹಿತ್ಯದ ಗೀಳನ್ನು ಕಂಡಿದ್ದ ತಂದೆ ಈತ ಲೇಖಕನಾಗುವುದನ್ನು ಪ್ರಬಲವಾಗಿ ವಿರೋಧಿಸಿದ. ಪರಿಣಾಮವಾಗಿ ಇನ್ನೂ ವಿದ್ಯಾರ್ಥಿಯಾಗಿದ್ದ ಎಡ್ವರ್ಡ್ ಮನೆಯನ್ನು ತೊರೆದ. ಪತ್ರಿಕೆಗಳಿಗೆ ಲೇಖನ, ವಾರ್ತಾವರದಿಗಳನ್ನು ಬರೆದು ಕೊಂಚ ಹಣ ಸಂಪಾದಿಸತೊಡಗಿದ. 1899 ರಲ್ಲಿ ಹೆಲೆನ್ ನೋಬಲ್ ಎಂಬಾಕೆಯನ್ನು ಪ್ರೇಮಿಸಿ ಮದುವೆಯಾದ. ಒಂದು ಗಂಡು ಮಗು ಆಯಿತು. ತನ್ನ ನಿರೀಕ್ಷೆಗೆ ವಿರುದ್ಧವಾಗಿ ಪದವಿ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ. ಕೆಲಸವಿಲ್ಲ, ಬಡನತ ಸಾಲದ್ದಕ್ಕೆ ಇನ್ನಿಬ್ಬರು ಹೆಣ್ಣು ಮಕ್ಕಳಾಗಿ ಸಂಸಾರದ ಭಾರ ಹೆಚ್ಚಾಯಿತು. ಈ ಘೋರ ದಿನಗಳ ಅನುಭವಗಳನ್ನೆಲ್ಲ ಈತನ ಹೆಂಡತಿ ಹೆಲನ್ ಎರಡು ಸಂಪುಟಗಳ ಪುಸ್ತಕ ರೂಪದಲ್ಲಿ ಹೃದಯಸ್ಪರ್ಶಿಯಾಗಿ ಬರೆದಿಟ್ಟಿದ್ದಾಳೆ.

ಮುಂದೆ ತಾಮಸ್ ಮ್ಯಾಂಚೆಸ್ಟರ್ ಗಾರ್ಡಿಯನ್ ಪತ್ರಿಕೆಯ ಕಾಯಂ ಲೇಖಕನಾದ. ಅದೊಂದು ಸಕಾಲಿಕ ಆರ್ಥಿಕ ಆಸರೆಯಾಯಿತು. ಆ ವೇಳೆಗೆ ಈತನ ಒಂದು ಕಾದಂಬರಿ ; ರೆಸ್ಟ್ ಅಂಡ್ ಅನ್‍ರೆಸ್ಟ್ ಮತ್ತು ಲೈಟ್ ಅಂಡ್ ಟ್ವೈಲೈಟ್ ಎಂಬೆರಡು ಸಂಕಲನಗಳು ಪ್ರಕಟವಾದುವು. ಆಕ್ಸ್‍ಫರ್ಡ್ (1903) ; ಬ್ಯೂಟಿಪಿಲ್ ವೇಲ್ಸ್ (1905) ; ದಿ ಹಾರ್ಟ್ ಆಫ್ ಇಂಗ್ಲೆಂಡ್ (1906); ದಿ ಸೌತ್ ಕಂಟ್ರಿ (1909) ; ದಿ ಐಲ್ ಆಫ್ ವೈಟ್ (1911) ; ದಿ ಇಕ್‍ನೀಲ್ಡ್ ವೇ (1913); ದಿ ಕಂಟ್ರಿ (1913); ದಿ ಲಿಟರರಿ ಪಿಲಿಗ್ರಿಮ್ ಇನ್ ಇಂಗ್ಲೆಂಡ್ (1917) — ಇವು ಈತನ ಕೃತಿಗಳು. ರಿಚರ್ಡ್ ಜೆಫ್ರೀಸ್ (1009), ಮೆಟರ್ ಲಿಂಕ್ (1911) ; ಸ್ವಿನ್‍ಬರ್ನ್ (1912) ; ಪೇಟರ್ (1913); ಕೀಟ್ಸ್ (1916) ಮುಂತಾದವರ ಜೀವನ ಮತ್ತು ಕೃತಿಗಳನ್ನು ಪರಿಚಯಿಸುವ ಪುಸ್ತಕಗಳನ್ನೂ ಈತ ಬರೆದಿದ್ದಾನೆ. ಮೊದಲ ಮಹಾಯುದ್ಧದ ಸಮಯದಲ್ಲಿ ಯೋಧನಾಗಿ ಸೇನೆಗೆ ಸೇರಿದ ಈತ ಅರ್ರಾಸ್‍ನಲ್ಲಿ ನಡೆದ ಕದನದಲ್ಲಿ ಸತ್ತ. ಈತನ ಕವನಗಳನ್ನು ಬಹುವಾಗಿ ಮೆಚ್ಚಿದ್ದು ಸುಪ್ರಸಿದ್ಧ ಇಂಗ್ಲಿಷ್ ಕವಿ ವಾಲ್ಟರ್ ಡಿ ಲಾ ಮೇರ್ ಈತನ ಮರಣ ವಾರ್ತೆಯನ್ನು ಕೇಳಿದಾಗ ಶೋಕತಪ್ತನಾಗಿ 'ಇಂಗ್ಲೆಂಡಿನ ರನ್ನಗನ್ನಡಿಯೊಂದು ಒಡೆದು ಚೂರಾಯಿತು ಎಂದನಂತೆ.

ಈತ ಸೊಗಸಾದ ಹಲವು ಪ್ರಬಂಧಗಳನ್ನು ಬರೆದು ಹೆಸರು ಗಳಿಸಿದ್ದರೂ ಈಗ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಮುಖವಾಗಿ ಕವಿಯಾಗಿ ಉಳಿದಿದ್ದಾನೆ. ಸೋಜಿಗದ ಸಂಗತಿಯೆಂದರೆ 1912 ರಲ್ಲಿ ಈತ ರಾಬರ್ಟ್ ಫ್ರಾಸ್ಟ್ ಎಂಬ ಇಂಗ್ಲಿಷ್ ಕವಿಯನ್ನು ಕಾಣುವವರೆಗೂ ಕವನಗಳನ್ನೇ ರಚಿಸಿರಲಿಲ್ಲ. ಬಹು ಸಂಕೋಚ ಸ್ವಭಾವದ ಈತ ಎಡ್ವರ್ಡ್ ಈಸ್ಟ್‍ವೇ ಎಂಬ ಕಾವ್ಯನಾಮವಿಟ್ಟುಕೊಂಡು ಕವನಗಳನ್ನು ಪ್ರಕಟಿಸಿದ. ಹಾಗೆ ಪ್ರಕಟಿಸಿದ ಮೊದಲ ಕವನ ಸಂಕಲನ 1920 ರಲ್ಲಿ ಹೊರಬಂತು.

ಈತನ ಕೃತಿಗಳಲ್ಲೆಲ್ಲ ಕವಿಯ ನಿಸರ್ಗಪ್ರೇಮ, ದೇಶಭಕ್ತಿ, ಸುಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಗದ್ಯ, ಪದ್ಯ ಎರಡರಲ್ಲೂ ಅವಸರ, ರಭಸಗಳಿಲ್ಲದ ಪ್ರಶಾಂತ ಗುಣವೂ ಎಲ್ಲಿಯೂ ಅತಿರೇಕಕ್ಕೆ ಹೋಗದೆ ಪ್ರಕೃತಿ ಚೇತನದೊಂದಿಗೆ ಸಹಜವಾಗಿ ತಾದಾತ್ಮ್ಯ ಹೊಂದುವ ಗುಣವೂ ಕಾಣುತ್ತವೆ. ಈತನ ಸೃಜನಶೀಲ ಪ್ರತಿಭೆ ಎರಡೂ ಮಾಧ್ಯಮದಲ್ಲಿ ಪ್ರಕಾಶಿಸುತ್ತದೆ. ಗದ್ಯದಲ್ಲಿ ಕಿಂಚಿತ್ ಕೃತಕತೆ ತೋರಬಹುದಾದರೂ ಕವನಗಳಲ್ಲಿ ಬದುಕಿನ ದಿಟ್ಟ ಹೋರಾಟ ಮತ್ತು ವೈಫಲ್ಯಗಳನ್ನು ಕುರಿತ ಗಂಭೀರ ಚಿಂತನ ಸಹಜವಾಗಿ ಮೂಡಿದೆ.

ಈತನ ಆಯ್ದ ಕವನಗಳ ಸಂಕಲನ ಮತ್ತು ದಿ ಲಾಸ್ಟ್ ಷೀಫ್ ಎಂಬ ಪ್ರಬಂಧ ಸಂಕಲನಗಳು 1928ರಲ್ಲಿ ಪ್ರಕಟವಾದವು. (ಕೆ.ಬಿ.ಪಿ.)