ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾಯಿಮಕ್ಕಳ ಆರೋಗ್ಯ

ವಿಕಿಸೋರ್ಸ್ದಿಂದ

ತಾಯಿಮಕ್ಕಳ ಆರೋಗ್ಯ

ಪ್ರಸವಪೂರ್ವಕಾಲ, ಪ್ರಸವಕಾಲ ಮತ್ತು ಪ್ರಸವೋತ್ತರಕಾಲ ಇವುಗಳಲ್ಲಿ ತಾಯಿ ಹಾಗೂ ಶಿಶುವಿಗೆ ಸಂಬಂಧ ಪಟ್ಟಂತೆ ಇರುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ (ಇವೋಷನಲ್) ಆರೋಗ್ಯವಿಚಾರ (ಮೆಟರ್ನಿಟಿ ಅಂಡ್ ಚೈಲ್ಡ್ ಹೆಲ್ತ್). ಈ ಕಾಲಗಳಲ್ಲಿ ಉಂಟಾಗಬಲ್ಲ ಅನಾರೋಗ್ಯ ಸ್ಥಿತಿಗಳ ತಡೆಗಟ್ಟುವಿಕೆ ಮತ್ತು ಅದು ಸಾಧ್ಯವಾಗದಿದ್ದರೆ ಆ ರೋಗಗಳ ಚಿಕಿತ್ಸೆಗಳಿಗೆ ಈ ವಿಷಯ ಸೀಮಿತ. ತಾಯಿಮಕ್ಕಳ ಆರೋಗ್ಯ ರಕ್ಷಣೆಯನ್ನು ಮುಖ್ಯವಾಗಿ ಸರ್ಕಾರದ ಆರೋಗ್ಯ ಇಲಾಖೆಯೇ ನೋಡಿಕೊಳ್ಳುತ್ತದೆ. ಸ್ವಯಂಸೇವಕ ಸಂಸ್ಥಗಳೂ ಖಾಸಗಿ ವೈದ್ಯರೂ ತಾಯಿ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ನಿರತರಾಗಿರುವುದೂ ಉಂಟು. ತಾಯಿ ಮಕ್ಕಳ ಆರೋಗ್ಯ ರಕ್ಷಣೆಯ ವ್ಯಾಪ್ತಿ ಕಾಲಕಾಲಕ್ಕೆ ತಕ್ಕಂತೆ ಬದಲಾಯಿಸುತ್ತ ಬಂದಿದೆ. ಉದಾಹರಣೆಗೆ ಈಚಿನ ದಶಕಗಳಲ್ಲಿ ಹೆಂಗಸು ತಕ್ಕಷ್ಟು ವಯಸ್ಸಾದ ಮೇಲೆ- ಸಾಮಾನ್ಯವಾಗಿ 20 ವರ್ಷಗಳ ಅನಂತರ - ವಿವಾಹವಾಗುವುದೂ ಮಕ್ಕಳನ್ನು ಪಡೆಯುವುದೂ ರೂಢಿ. ಅಲ್ಲದೆ ಕುಟುಂಬಯೋಜನೆಯ ಪ್ರಚಾರದ ಫಲವಾಗಿ 2-3 ಕ್ಕಿಂತ ಮಿಗಿಲಾಗಿ ಪ್ರಸವಗಳಾಗುವುದು ಕಮ್ಮಿ. ಆದ್ದರಿಂದ ಹಿಂದಿನಂತÉ 15-16 ವಯಸ್ಸಿನ ಅಥವಾ 40-45ವಯಸ್ಸಿನ ತಾಯಿಯರ ಆರೋಗ್ಯ ರಕ್ಷಣೆ ಇಂದು (1977) ಪ್ರಮುಖ ವಿಷಯವಾಗಿಲ್ಲ. ಅಲ್ಲದೆ ಮಕ್ಕಳ ರೋಗಗಳ ತಡೆ ಮತ್ತು ಚಿಕಿತ್ಸೆಯ ವಿಷಯವಾಗಿ ಈಚಿನ ದಶಕಗಳಲ್ಲಿ ಸಾಕಷ್ಟು ಪ್ರಗತಿ ಆಗಿರುವುದರ ಫಲವಾಗಿ ಶಿಶುಮರಣ ಸಂಖ್ಯೆ ಬಹಳ ತಗ್ಗಿದೆ. ಆದ್ದರಿಂದ ಹಿಂದಿನಂತೆ ಶಿಶುಗಳ ಆರೋಗ್ಯದ ವಿಷಯವೂ ಇಂದು ಪ್ರಮುಖವಾಗಿರುವುದು ತಪ್ಪಿದೆ. ಆದರೆ ಪ್ರಗತಿ ಎಷ್ಟಾಗಿದ್ದರೂ ನವಜಾತ ಶಿಶುಗಳು ಒಂದು ತಿಂಗಳು ತುಂಬುವಷ್ಟರೊಳಗೆ ಅದರಲ್ಲೂ ಮೊದಲ ವಾರದಲ್ಲೇ ಮೃತಿಹೊಂದುವುದು ಈ ದಿನಗಳಲ್ಲೂ ಅಧಿಕವಾಗಿಯೇ ಇದೆ. ಆದ್ದರಿಂದ ನವಜಾತ ಶಿಶುಗಳ ಆರೋಗ್ಯರಕ್ಷಣೆ ಪ್ರಮುಖ ವಿಷಯವಾಗಿದೆ. ಕಾರಣ ಅಕಾಲಜನನ, ಕಷ್ಟಪ್ರಸವ ಪ್ರಸಂಗಗಳಿಗೆ ಇಂದು ಹೆಚ್ಚು ಲಕ್ಷ್ಯವೀಯಲಾಗುತ್ತಿದೆ. ಅಲ್ಲವೆ ತಾಯಿ ಗರ್ಭಿಣಿಯಾಗಿರುವಾಗ, ಹೆರಿಗೆ ಕಾಲದಲ್ಲಿ ಮತ್ತು ಹೆರಿಗೆಯಾದ ಮಾರನೆಯ ದಿನ ಪೂರ್ತಿ ನಿರಂತರವಾಗಿ ಆಕೆಯ ಮತ್ತು ಮಗುವಿನ ಆರೋಗ್ಯ ರಕ್ಷಣೆ ಅತಿಮುಖ್ಯವೆನ್ನಿಸಿದೆ ಪರಿಸರ, ಸಾಮಾಜಿಕ ಮತ್ತು ರಾಗಾತ್ಮಕ ಸನ್ನಿವೇಶಗಳು ಇವು ನವಜಾತಶಿಶುವಿನ ಮೇಲೆ ಗಮನೀಯ ಪರಿಣಾಮವನ್ನು ಉಂಟುಮಾಡುವುದು ಈಚೆಗೆ ವ್ಯಕ್ತವಾಗಿರುವುದರಿಂದ ಇದನ್ನು ಸಹ ತಾಯಿಮಕ್ಕಳ ಆರೋಗ್ಯರಕ್ಷಣೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಹೆಂಗಸು ಗರ್ಭಿಣಿಯಾಗಿರುವಾಗ ಆಕೆಯ ದೈಹಿಕ ಕ್ರಿಯೆ ನಿರೀಕ್ಷಿತ ನೈಸರ್ಗಿಕ ಸ್ಥಿತಿಯಲ್ಲಿ ಇರುವುದೋ ಇಲ್ಲವೋ ಗರ್ಭ ಸಹಜವಾಗಿ ಬೆಳೆಯುತ್ತಿದೆಯೋ ಇಲ್ಲವೋ ಎನ್ನುವುದು ಸ್ಥೂಲವಾಗಿಯಾದರೂ ಆಕೆಗೆ ತಿಳಿದಿರಬೇಕಾದದ್ದು ಒಳ್ಳೆಯದು. ಗರ್ಭಿಣಿಗೆ ಸಹಜವಾದ ವ್ಯತ್ಯಾಸಗಳನ್ನು ಮನವರಿಕೆ ಮಾಡಿಕೊಂಡು ವೃಥಾ ಗಾಬರಿಪಟ್ಟುಕೊಳ್ಳದೆ ಇರಬೇಕು. ತಾನು ಗರ್ಭಿಣಿ ಆಗಿರಬಹುದು ಎಂಬ ಸಂದೇಹ ಬಂದ ಕೂಡಲೆ ಆಕೆ ಆರೋಗ್ಯ ಇಲಾಖೆಯ ದಾದಿಯ ಇಲ್ಲವೇ ಸೂಲಗಿತ್ತಿಯ ಇಲ್ಲವೇ ವೈದ್ಯರ ಸಲಹೆ ಪಡೆಯಬೇಕು. ವೈದ್ಯರಿಂದ ನಿಯತ ಕಾಲಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುತ್ತ ಅವರ ಮಾರ್ಗದರ್ಶನದಂತೆ ನಡೆದು ಕೊಳ್ಳಬೇಕು. ತನ್ನ ಹಾಗೂ ಗರ್ಭಸ್ಥ ಶಿಶುವಿನ ಪೌಷ್ಟಿಕ ಸ್ಥಿತಿ ಸರಿಯಾಗಿರುವಂತೆ ತಕ್ಕ ಆಹಾರವನ್ನು ಸೇವಿಸಬೇಕು. ಇವುಗಳಿಂದ ಪ್ರಸವಪೂರ್ವ ಅನಾರೋಗ್ಯ ಸ್ಥಿತಿಗಳ ತಡೆಯೂ ಚಿಕಿತ್ಸೆಗೆ ಅನುಕೂಲವಾಗುವುದಲ್ಲದೆ ಸುಖ ಪ್ರಸವಕ್ಕೆ ದಾರಿಯಾಗುವಂತೆ ಇರಬೇಕು.

ಗರ್ಭಾವಸ್ಥೆಯ ಮೊದಲ 6-8ವಾರಗಳಲ್ಲಿ ಮುಂಜಾನೆ ವಮನ ಸಹಜ. ಹಾಸೊಗೆಯಿಂದ ಏಳುವುದಕ್ಕೆ ಮೊದಲೇ ಎರಡು ಬಿಸ್ಕತ್ತುಗಳನ್ನು/ರಸ್ಕುಗಳನ್ನು ತಿಂದು ಸ್ವಲ್ಪ ಕಾಲಾನಂತರ ಎದ್ದರೆ ವಾಕರಿಗೆ ಇರುವುದಿಲ್ಲ. ಹೆಚ್ಚು ಹೆಚ್ಚು ತಿಂದು ವಾಕರಿಕೆಗಳಿಂದ ಬಾಧಿತರಾಗÀುವ ಬದಲು ಎರಡು ಗಂಟೆಗೊಮ್ಮೆ ಕೊಂಚ ಕೊಂಚ ತಿನ್ನುತ್ತಿದ್ದರೆ ವಾಸಿ. ಮನಸ್ಸನ್ನು ಆದಷ್ಟು ಬೇರೆ ಕಡೆ ತೊಡಗಿಸಿ ಯಾವ ಆಹಾರವನ್ನು ತಿನ್ನಬೇಕೆನ್ನಿಸುತ್ತದೆಯೋ ಅದನ್ನೇ ತಿನ್ನುವುದು ಒಳ್ಳೆಯದು. ಕೆಲವು ವೇಳÉ ಯಾವುದೋ ವಿಶಿಷ್ಟ ಪದಾರ್ಥವನ್ನು ತಿನ್ನಬೇಕು ಎಂದು ಅತೀವ ಆಸೆ ಆಗುವುದುಂಟು. ಇದನ್ನೇ ಬಯಕೆ ಎನ್ನುವುದು. ದೇಹದಲ್ಲಿ ಯಾವುದೇ ಪೌಷ್ಟಿಕಾಂಶ ಕಡಿಮೆ ಆಗಿ ಅದು ತನ್ನ ಹಾಗೂ ಗರ್ಭಸ್ಥ ಶಿಶುವಿನ ಪೂರೈಕೆಗೆ ಸಾಕಾಗದಿದ್ದ ಸ್ಥಿತಿಯಲ್ಲಿ ಇಂಥ ಬಯಕೆ ಆಗುತ್ತದೆಂದು ತೋರುತ್ತದೆ. ಕ್ಯಾಲ್ಸಿಯಮ್ ಲವಣಗಳು ಕಡಿಮೆ ಆದಾಗ ಸುಣ್ಣ, ಇದ್ದಲು, ಮಣ್ಣು ಮುಂತಾದವನ್ನು ತಿನ್ನಬೇಕೆಂಬ ಆಸೆ ಆಗುವುದು ತಿಳಿದ ವಿಷಯ. ಇಂಥ ವಿಚಿತ್ರ ಬಯಕೆ, ಅತಿಯಾಗಿ ವಮನ. ಮುಂತಾದುವುಗಳಾದರೆ ವೈದ್ಯರ ಸಲಹೆ ತೆಗೆದುಕೊಳ್ಳಬೇಕು. ಬಾಯಲ್ಲಿ ನೀರೂರುವುದು, ಮುಂಜಾನೆ ತಲೆಸುತ್ತುವುದು ಇವು ಅತ್ಯಧಿಕವಾಗಿದ್ದರೂ ಅಷ್ಟೆ. ಈ ಕಾಲದಲ್ಲಿ ಸೊಂಟನೋವು ಅನೇಕ ಗರ್ಭಿಣಿಯರಲ್ಲಿ ಸಾಮಾನ್ಯ ಗರ್ಭಾವಸ್ಥೆಯ ಪ್ರಾರಂಭ ಕಾಲದಲ್ಲಿ ಬೆನ್ನಿನ ಸ್ನಾಯುಗಳು ಹಾಗೂ ತಂತುಗಟ್ಟುಗಳು ಹಲವು ದಿಸೆಗಳಲ್ಲಿ ಹಿಗ್ಗುವುದರಿಂದ ಹೀಗಾಗುತ್ತದೆ. ಮಲಗಿ ಕೊಂಚ ವಿಶ್ರಾಂತಿ ತೆಗೆದುಕೊಂಡು ನೋವು ಕಡಿಮೆ ಆಗುವಂತೆ ಮಾಡಿಕೊಳ್ಳಬಹುದು. ಕೂರುವಾಗ ನಿಲ್ಲುವಾಗ ಸರಿಯಾದ ನಿಲುವು ಅಗತ್ಯ ಈ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯುವುದು ಒಳ್ಳೆಯದು.

ಗರ್ಭಾವಸ್ಥೆ ಮುಂದುವರಿದಂತೆ ಮಲಬದ್ಧತೆ ಕಾಣಿಸಿಕೊಳ್ಳಬಹುದು. ದೊಡ್ಡ ಕರುಳಿನ ಸಂಕೋಚನ ಸಾಮಥ್ರ್ಯ ಅವ್ಯಕ್ತ ಕಾರಣಗಳ ದೆಸೆಯಿಂದ ಕುಗ್ಗಿರುವುದರಿಂದ ಹೀಗೆ ಆಗುತ್ತದೆ. ಹಣ್ಣು, ತರಕಾರಿ, ಮೊಸರು, ನೀರು ಇವನ್ನು ಹೇರಳವಾಗಿ ಸೇವಿಸಿ ಕರುಳಿನ ಸಂಕೋಚನ ಸಾಮಥ್ರ್ಯವನ್ನು ಉದ್ರೇಕಿಸಿ ಮಲವಿಸರ್ಜನೆ ಸರಿಯಾಗುವಂತೆ ಮಾಡಿಕೊಳ್ಳಬೇಕು. ಆಲಕ್ಷ್ಯ ಮಾಡಿದರೆ ಹೊಟ್ಟೆನೋವು, ಗುದದ್ವಾರದಲ್ಲಿ ಹುಣ್ಣು, ಮೂಲವ್ಯಾಧಿ ಇವುಗಳಿಗೆ ದಾರಿಮಾಡಿಕೊಟ್ಟಂತಾಗುತ್ತದೆ. ಅನೇಕ ಗರ್ಭಿಣಿಯರಲ್ಲಿ ಕಾಲುಗಳು ಊದಿಕೊಳ್ಳುವುದು ಸಾಮಾನ್ಯ. ಗರ್ಭಕೋಶದ ಗಾತ್ರವೃದ್ಧಿಯಿಂದ ನೆರೆಯ ಅಭಿಧಮನಿಗಳು ಒತ್ತಲ್ಪಟ್ಟಂತಾಗಿ ರಕ್ತದ ವಾಪಸಾತಿಗೆ ಭಾಗಶಃ ತಡೆ ಉಂಟಾಗುತ್ತದೆ. ಇದರಿಂದ ಕಾಲೂತ ಅಷ್ಟೇ ಅಲ್ಲದೆ ಕಾಲು ನೀಲಿಗಟ್ಟಿಕೊಳ್ಳುವುದೂ ಬಿಗಿತ ನೋವುಗಳಾಗುವುದೂ ಉಂಟು. ವಿಶ್ರಾಂತಿ ಕಾಲದಲ್ಲೇ ಇವು ಹೆಚ್ಚಾಗಿ ಕಾಣಬರುವುದರಿಂದ ಕಾಲನ್ನು ಕೊಂಚ ಎತ್ತರವಾಗಿ ಇಟ್ಟುಕೊಂಡು ಮಲಗಿ ತಕ್ಕಷ್ಟು ಪರಿಹಾರ ಪಡೆಯಬಹುದು. ಗರ್ಭಕೋಶ ಮೂತ್ರಕೋಶದ ಮೇಲೆ ಒತ್ತುವುದರಿಂದ ಮೂತ್ರ ವಿಸರ್ಜನೆಯನ್ನು ಆಗಿಂದಾಗ್ಯೆ ಮಾಡÀಬೇಕೆನಿಸುತ್ತದೆ. ಉರಿ ಮೂತ್ರವೂ ಉಂಟಾಗಬಹುದು. ಕೆಲಕಾಲಾನಂತರ ಇದು ತಾನಾಗಿಯೇ ಶಮನಗೊಳ್ಳುತ್ತದೆ. ಹಾಗಾಗದೆ ಉರಿಮೂತ್ರ ಬಹುಮೂತ್ರಗಳು ಮುಂದುವರಿದರೆ ಮೂತ್ರ ಪರೀಕ್ಷೆ ಹಾಗೂ ತಕ್ಕ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮೂತ್ರಕೋಶ ವಿಷಾಣುಸೋಂಕಿನಿಂದ ಅವೃತವಾಗಿರಬಹುದಾದ್ದರಿಂದ ಈ ಸ್ಥಿತಿಯನ್ನು ನಿರ್ಲಕ್ಷಿಸಬಾರದು. ಹಾಗೆ ಮಾಡಿದ್ದೇ ಆದರೆ ಸೋಂಕÀು ಮೂತ್ರನಾಳಕ್ಕೆ ಹರಡಿ ಅಲ್ಲಿಂದ ಮೇಲಕ್ಕೆ ಹಬ್ಬುತ್ತ್ತಾ ಮೂತ್ರಪಿಂಡಗಳನ್ನು ಆವರಿಸಬಹುದು. ಈ ಅನಾಹುತವನ್ನು ತಡೆಯುವುದು ಅಗತ್ಯ.

ಆರನೆಯ ತಿಂಗಳಿಂದ ಎಂಟನೆಯ ತಿಂಗಳ ವರೆಗೆ 3-4 ವಾರಗಳಿಗಾದರೂ ಒಮ್ಮೆ ವೈದ್ಯಪರೀಕ್ಷ ಮಾಡಿಸಿಕೊಳ್ಳುತ್ತಿರಬೇಕು. ಮೂತ್ರದಲ್ಲಿ ಅಲ್ಬ್ಯುಮಿನ್ ಇದ್ದರೂ ರಕ್ತದ ಒತ್ತಡ ನಿರೀಕ್ಷೆಗಿಂತ ಏರಿದ ಮಟ್ಟದಲ್ಲಿದ್ದರೂ ದೈಹಿಕತೂಕ ನೈಸರ್ಗಿಕ ಏರಿಕೆಗಿಂತ (ವಾರಕ್ಕೆ ಸುಮಾರು 300-350 ಗ್ರಾಮ್‍ಗಳಷ್ಟು) ಹೆಚ್ಚಾಗಿ ಏರುತ್ತಿದ್ದು ಕಾಲುಗಳು ಊದಿಕೊಂಡಿದ್ದರೂ ಕೂಡಲೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ದೃಷ್ಟಿ ಪಟಲದಲ್ಲಿ ರಕ್ತಸ್ರಾವವಾಗಿ ದೃಷ್ಟಿನಾಶÀವಾಗಬಹುದು ; ಮಿದುಳಿನಲ್ಲಿ ರಕ್ತಸ್ರಾವವಾಗಿ ಪಕ್ಷಾಘಾತವೋ ಮೂರ್ಛೆರೋಗವೋ ಉಂಟಾಗಬಹುದು ; ಮೂತ್ರಪಿಂಡದಲ್ಲಿ ರಕ್ತಸ್ರಾವದಿಂದ ಇಲ್ಲವೇ ವಿಷಮತೆಯಿಂದ ಅದರ ಕ್ರಿಯಾನಾಶÀವಾಗಬಹುದು; ಸೂತಿಕಾವಾಯು (ಎಕ್ಲಾಂಪ್ಸಿಯ) ಕಂಡುಬರಬಹುದು. ಇಂಥ ದುಷ್ಟರಿಣಾಮಗಳು ಅನೇಕ ವೇಳೆ ತಾಯಿ ಅಥವಾ ಮಗು ಅಥವಾ ಇಬ್ಬರಿಗೂ ಮಾರಕವೇ ಆಗಬಹುದು. ಆದ್ದರಿಂದ ವೈದ್ಯರ ಸಲಹೆ ಪಡೆದು ಊಟದಲ್ಲಿ ಉಪ್ಪು ಕಡಿಮೆಯಾಗಿ ಉಪಯೋಗಿಸುವುದು, ನೀರನ್ನು ಆದಷ್ಟು ಕಡಿಮೆ ಕುಡಿಯುವುದು ಇತ್ಯಾದಿಯಾಗಿ ಕಟ್ಟುನಿಟ್ಟಾಗಿದ್ದು ಸೂಚಿತ ಚಿಕಿತ್ಸೆ ಪಡೆಯುವುದು ಅಗತ್ಯ.

ಗರ್ಭಾವಸ್ಥೆಯ ಮೂರು ತಿಂಗಳ ತರುವಾಯ ಅಂದರೆ ನಾಲ್ಕನೆಯ ತಿಂಗಳಲ್ಲಿ ಗರ್ಭಕೋಶದ ಗಾತ್ರವೃದ್ಧಿ ಗಮನಕ್ಕೆ ಬರುವಂತಾಗುತ್ತದೆ. ಆ ಕಾಲದಲ್ಲಿ ಗರ್ಭವತಿಯನ್ನು ಬೆನ್ನ ಮೇಲೆ ಮಲಗಿಸಿ ಕೆಳಹೊಟ್ಟೆಯನ್ನು ಅಮುಕಿದರೆ ಗರ್ಭಕೋಶ ಕೈಗೆ ಸಿಕ್ಕುತ್ತದೆ. ಆರನೇ ತಿಂಗಳಲ್ಲಿ ಗರ್ಭಕೋಶ ಹೊಕ್ಕಳಿನ ನೇರಕ್ಕೆ ಬೆಳೆದಿರುತ್ತದೆ. ಹೀಗೆಯೇ ಕ್ರಮೇಣ ಗಾತ್ರವೃದ್ಧಿ ಆಗುತ್ತ ಒಂಬತ್ತನೆಯ ತಿಂಗಳಲ್ಲಿ ಎದೆಗೂಡಿನ ತನಕ ಬೆಳೆದು ಪ್ರಸವಪೂರ್ವ ದಿನಗಳಲ್ಲಿ ಸುಮಾರು 4-5 ಇಂಚುಗಳಷ್ಟು ಕೆಳಗೆ ಕುಸಿಯುತ್ತದೆ; ಅಂದರೆ 8ನೆಯ ತಿಂಗಳಲ್ಲಿ ಇದ್ದಮಟ್ಟಕ್ಕೆ ಬರುತ್ತದೆ. ನಿರೀಕ್ಷೆಯಂತೆ ಗರ್ಭಕೋಶದ ಗಾತ್ರವೃದ್ಧಿ ಆಗದೇ ಇದ್ದರೂ ನಿರೀಕ್ಷೆಗೆ ಮೀರಿ ಆದರೂ ಅದನ್ನು ವೈದ್ಯರ ಗಮನಕ್ಕೆ ಸಲಹೆ ಪಡೆಯಬೇಕು. ವೈದ್ಯ ಪರೀಕ್ಷೆ 8 ತಿಂಗಳಾದ ಬಳಿಕ ಕಡೆಪಕ್ಷ ತಿಂಗಳಿಗೆ ಎರಡುಬಾರಿ, 9 ತಿಂಗಳಾದ ಮೇಲೆ ವಾರಕ್ಕೆ ಒಂದು ಬಾರಿ ಅಗತ್ಯ. ಈ ವೇಳೆಯಲ್ಲಿ ವೈದ್ಯ ಪರೀಕ್ಷೆಯಿಂದ ಗರ್ಭಕೋಶದಲ್ಲಿ ಮಗು ನೆಲೆಸಿರುವ ರೀತಿ, ಮಗುವಿನ ತಲೆಯ ಗಾತ್ರ, ಜನನ ಮಾರ್ಗದಲ್ಲಿ ತಲೆ-- ಹಿಡಿಯುವುದೇ ಇಲ್ಲವೇ ಪ್ರಸವಕ್ಕೆ ಅನನುಕೂಲವೇ ಅನಾನುಕೂಲವೇ ಯಾವ ರೀತಿ ವೈದ್ಯಸಲಹೆ ಉಂಟÉೂೀ ಸ್ಥಿತಿಯೋ ಹಾಗೆ ವೈದ್ಯರು ಸಲಹೆ ಕೊಡುತ್ತಾರೆ. ಆ ರೀತಿ ನಡೆದುಕೊಳ್ಳತಕ್ಕದ್ದು. ಆ ಕಾಲದಲ್ಲಿ ಯೋನಿಯಿಂದ ವಿನಾಕಾರಣ ಹಾಗೂ ನೋವು ರಹಿತ ರಕ್ತಸ್ರಾವ ಕಂಡುಬಂದರೂ ಒಡನೆ ವೈದ್ಯರ ಸಲಹೆ ಪಡೆದು ಅದರಂತೆ ನಡೆದುಕೊಳ್ಳುವುದು ಅತ್ಯವಶ್ಯ.

ಇಂಥ ತೊಂದರೆಗಳೆಲ್ಲ ಪ್ರಥಮ ಗರ್ಭದಲ್ಲಿ ಕಂಡುಬರುವುದೇ ಹೆಚ್ಚು. ತಾಯಿ ಆರೋಗ್ಯವಾಗಿದ್ದರೆ ಸಾಮಾನ್ಯವಾಗಿ ಸುಖಪ್ರಸವವಾಗುವುದೆಂದು ನಿರೀಕ್ಷಿಸಬಹುದಲ್ಲದೆ ಹುಟ್ಟಿದ ಮಗುವೂ ಆರೋಗ್ಯವಾಗಿರುತ್ತದೆ. ಪ್ರಥಮ ಪ್ರಸವ ಸುಖಪ್ರಸವವಾಗಿದ್ದರೆ ಎರಡನೆಯ ಮತ್ತು ಮೂರನೆಯ ಪ್ರಸವಗಳೂ ಅದೇ ರೀತಿ ಆಗುತ್ತವೆ ಎಂದುಕೊಳ್ಳಬಹುದು. ಮೊದಲ ಹೆರಿಗೆಯಲ್ಲಿ ಏನಾದರೂ ತೊಂದರೆ ಆಗಿದ್ದಲ್ಲಿ ಮರುಗರ್ಭಕಾಲದಲ್ಲಿ ವೈದ್ಯರಿಗೆ ಈ ವಿಷಯವನ್ನು ತಿಳಿಸಿ ಮೊದಲ ಪ್ರಸವದಲ್ಲಿ ಆದ ಹಾಗೆ ಆಗದಂತೆ ನೋಡಿಕೊಳ್ಳಬೇಕು.

ಗರ್ಭಿಣಿಗೆ ವಾಂತಿ ಆಗುವುದು, ಓಕರಿಕೆ ಬರುವುದು, ಬಾಯಲ್ಲಿ ನೀರೂರುವುದು ಇತ್ಯಾದಿಗಳು ಕಡಿಮೆ ಆದ ಬಳಿಕ ಅಂದರೆ ಸಾಮಾನ್ಯವಾಗಿ ಗರ್ಭಾವಸ್ಥೆಯ ಮೂರನೇ ತಿಂಗಳಿಂದ ಅಗತ್ಯ ರಕ್ತವೃದ್ಧಿಗಾಗಿ ಮತ್ತು ರಕ್ತ ಕಣಹೀನತೆಯನ್ನು ತಪ್ಪಿಸುವುದಕ್ಕಾಗಿ ಕಬ್ಬಿಣ, ಪೋಲಿಕ್ ಆಮ್ಲ ಮತ್ತು ವೈಟಮಿನ್ ಸಂಕೀರ್ಣವಿರುವ ಔಷಧಗಳನ್ನು ಕೊಡಬೇಕು. ಅಂತೆಯೇ ಪ್ರೋಟೀನ್ಯುಕ್ತ ವಸ್ತುಗಳೂ ಕ್ಯಾಲ್ಸಿಯಮ್ ಲವಣಗಳೂ ಅಗತ್ಯ. ಇವೆಲ್ಲ ತಾಯಿಯ ಆರೋಗ್ಯಕ್ಕೆ ಅಲ್ಲದೆ ಮಗುವಿನ ಬೆಳೆವಣಿಗೆಗೂ ಅವಶ್ಯಕ. ಎಲ್ಲ ಪೌಷ್ಟಿಕಾಂಶಗಳು ಸಾಕಷ್ಟು ಪೂರೈಕೆ ಆಗದಿದ್ದರೆ ತಾಯಿ ನಿಶ್ಯಕ್ತಳಾಗುವುದೇ ಅಲ್ಲದೆ ಮಗು ಕೂಡ ಸಹಜ ರೀತಿಯಲ್ಲಿ ಸಶಕ್ತವಾಗಿ ಬೆಳೆಯದೆ ಹೋಗುತ್ತದೆ. ಆದ್ದರಿಂದ ತಕ್ಕಷ್ಟು ಹಾಲು, ಮೊಸರು, ಮೊಟ್ಟೆ, ತುಪ್ಪ, ಹಸಿರು ತರಕಾರಿ, ದ್ರಾಕ್ಷಿ, ಬಾಳೆ, ಕಿತ್ತಳೆ ಇತ್ಯಾದಿ ಹಣ್ಣುಗಳನ್ನು ಸೇವಿಸಬೇಕು. ಕಡಿಮೆ ಆಹಾರ ತೆಗೆದುಕೊಂಡಷ್ಟು ತಾಯಿಗೆ ಅಶಕ್ತತೆ ಉಂಟಾಗುವುದಲ್ಲದೆ, ರಕ್ತಹೀನತೆ ವೈಟಮಿನ್ ಕೊರತೆಯ ಪರಿಣಾಮಗಳು, ಕಾಲ್ಸಿಯಮ್ ಕೊರತೆಯ ಪರಿಣಾಮವಾಗಿ ಮೆದುಮೂಳೆ ರೋಗ (ಆಸ್ಟಯೋ ಮಲೇಶಿಯ) ಮುಂಥಾದವು ಕಂಡು ಬಂದು ಪ್ರಸವಕ್ಕೆ ತೊಂದರೆ ಆಗಿ ಜೀವಕ್ಕೆ ಅಪಾಯ ಒದಗಬಹುದು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಪೌಷ್ಟಿಕಗಳು ಒದಗದೆ ಮಗುವಿನ ಬೆಳೆವಣಿಗೆ ಕುಗ್ಗಿ ಅಕಾಲಪ್ರಸವ, ಗರ್ಭಸ್ರಾವ ಮುಂತಾದವು ಉಂಟಾಗಬಹುದು. ಸಕಾಲ ಪ್ರಸವವಾದರೂ ಮಗು ರಕ್ತಹೀನತೆ, ರಿಕೆಟ್ಸ್ ಮುಂತಾದ ರೋಗಗಳಿಗೆ ಬಲಿ ಆಗಬಹುದು.

ವಿಶ್ರಾಂತಿ ಮತ್ತು ನಿದ್ರೆ ಗರ್ಭಿಣಿಯರಿಗೆ ಮುಖ್ಯ. ರಾತ್ರಿ 8 ಗಂಟೆ, ಹಗಲು 1-2ಗಂಟೆ ಮಲಗಿರುವುದು ಒಳ್ಳೆಯದು. ಹೆಚ್ಚು ಆಯಾಸವೆನಿಸದಂತೆ ದಿನನಿತ್ಯದ ಕೆಲಸಗಳನ್ನು ಮಾಡುತ್ತಿರಬೇಕು. ಶ್ರಮಸಾಧ್ಯಕೆಲಸಗಳು, ಭಾರದ ಸಾಮಾನುಗಳನ್ನು ಎತ್ತುವುದು, ಈಜುವುದು, ಸೈಕಲ್, ಸ್ಕೂಟರ್-ಆಟೋರಿಕ್ಷಗಳ ಸವಾರಿ, ಹೊಲಿಗೆ ಯಂತ್ರದ ಚಾಲನೆ, ಪದೇ ಪದೇ ಮಹಡಿ ಹತ್ತುವುದು-ಇವೆಲ್ಲವನ್ನೂ ವರ್ಜಿಸತಕ್ಕದ್ದು. ಶುದ್ಧವಾಯುಸೇವನೆಗಾಗಿ ಹೊರಗಿನ ಸಂಚಾರ ಒಳ್ಳೆಯದಾದರೂ ಮೊದಲ ಮೂರು ತಿಂಗಳು ಮತ್ತು ಕೊನೆಯ ಒಂದು ಒಂದೂವರೆ ತಿಂಗಳು ಪ್ರವಾಸ ಕಾರ್ಯಕ್ರಮ ಇಟ್ಟುಕೊಳ್ಳದೆ ಜಾಗ್ರತೆಯಾಗಿರಬೇಕು. ವಜ್ರ್ಯ ವಸ್ತುಗಳು ಬೆವರಿನ ಮೂಲಕ ಹೊರದೂಡಲ್ಪಡುತ್ತಿರುವುದರಿಂದ ದೈಹಿಕ ಸ್ವಚ್ಛತೆಗಾಗಿ ಪ್ರತಿದಿನ ಸ್ನಾನ ಅವಶ್ಯಕ. ಸ್ತನಗಳನ್ನು ತೊಳೆದು ಸ್ವಚ್ಛವಾಗಿ ಇಟ್ಟುಕೊಂಡಿರಬೇಕು. ಮೊಲೆ ತೊಟ್ಟುಗಳು ಒಳಗೆ ಹುದುಗಿ ಕೊಂಡಿದ್ದರೆ ಆಗಾಗ ಎಳೆದು ಸರಿಮಾಡಿಕೊಳ್ಳುತ್ತಿರಬೇಕು. ಮೊಲೆ ಹುಣ್ಣಾಗದ ಹಾಗೆ, ತೊಟ್ಟಿನಲ್ಲಿ ಬಿರುಕು ಉಂಟಾಗದ ಹಾಗೆ ನೋಡಿಕೊಳ್ಳಬೇಕು. ತೊಟ್ಟುಗಳಿಗೆ ಕೆನೆ ಹಚ್ಚುತ್ತ ಇದ್ದರೆ ಇವು ಮೃದುವಾಗಿರುತ್ತವೆ. ಹೆರಿಗೆ ಆದ ಮೇಲೆ ಇವು ಬಿರುಕು ಬಿಡುವುದಿಲ್ಲ. ಸಡಿಲವಾದ ಉಡುಪುಗಳÀನ್ನು ಧರಿಸುತ್ತ ಸ್ತನಗಳ ಸಹಜಗಾತ್ರವೃದ್ಧಿಗೆ ಅವಕಾಶ ಮಾಡಿಕೊಡಬೇಕು. ಗರ್ಭವತಿ ಮೊದಲ ಮೂರು ತಿಂಗಳಲ್ಲೂ ಪ್ರಸವಕ್ಕೆ ಮುಂಚೆ 4-6 ವಾರಗಳೂ ಸಂಭೋಗ ತ್ಯಜಿಸಬೇಕು. ಪ್ರಸವಾನಂತರ ಆರು ವಾರಗಳೂ ಸಂಭೋಗ ತ್ಯಾಜ್ಯಕಾಲ. ಇವು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಕ್ಷೇಮ.

ಪ್ರಸವವಾದ ಬಳಿಕ 6-12 ಗಂಟೆಗಳ ಕಾಲ ಮಗುವಿಗೆ ಏನೂ ಬೇಕಾಗುವುದಿಲ್ಲ 1/2 ಗಂಟೆಯೊಳಗೇ ಮೊಲೆಯೂಡುವ್ಯದರಿಂದ ಸ್ತನ್ಯಪಾನದ ಆರಂಭ ಹಂತ ಸುಗುಮವಾಗುತ್ತದೆ. ಅದಕ್ಕೆ ಸ್ನಾನಮಾಡಿಸಿ ಮಲಗಿಸಿದರೆ ಸುಮ್ಮನ್ನೇ ಮಲಗಿರುತ್ತದೆ. ಅದು ಎದ್ದ ಮೇಲೆ ಅತ್ತರೆ ಮೊಲೆಹಾಲನ್ನು ಕುಡಿಸುವುದು ಒಳ್ಳೆಯದು. ಗ್ಲೂಕೋಸ್ ಸೇರಿಸಿದಲ್ಲಿ ಕರುಳಿನಲ್ಲಿ ವಾಯು ಉತ್ಪತ್ತಿಯಾಗುವುದರಿಂದ ಮತ್ತು ತತ್ಪಲವಾಗಿ ಹೊಟ್ಟೆನೋವು ಉಬ್ಬರಗಳಿಂದ ನೋವು ಉಂಟಾಗಿ ಮಗು ಅಳುವುದರಿಂದ ಗ್ಲೂಕೋಸ್ ಉಪಯೋಗ ಸರಿಯಲ್ಲ. ಪ್ರಾರಂಭದಲ್ಲಿ ಮೊಲೆ ಹಾಲು ಮಂದವಾಗಿ ಹಳದಿಯಾಗಿ ಇರುತ್ತದೆ. ಅದರಲ್ಲಿ ರೋಗರೋಧಕ ವಸ್ತುಗಳು ಇರುವುದರಿಂದ ಅದು ಮಗುವನ್ನು ಅಂಟುಜಾಡ್ಯಗಳಿಂದ ರಕ್ಷಿಸುತ್ತದೆ. ಅದು ವಿರೇಚನಕಾರಿಯೂ ಆದ್ದರಿಂದ ಮಗುವಿಗೆ ಬಹು ಉಪಯುಕ್ತ ಮತ್ತು ಆರೋಗ್ಯಕಾರಿ. ಇಂಥ ಎದೆ ಹಾಲೂಡಿಸುವುದರಿಂದ ಆಗುವ ಲಾಭವನ್ನು ಕಳೆದುಕೊಳ್ಳುವುದು ಬುದ್ಧಿವಂತಿಕೆಯಲ್ಲ. ಮಗು ಸಶಕ್ತವಾಗಿದ್ದರೆ ಅದಕ್ಕೆ ಮೂರು ಗಂಟೆಗಳಿಗೊಂದಾವರ್ತಿ ಹಾಲು ಕುಡಿಸಬೇಕು. ರಾತ್ರಿ ಮಗು ಎದ್ದು ಅತ್ತರೂ ಹಾಲು ಕುಡಿಸುವುದು ಒಳ್ಳೆಯದು. ಮಗು ಮೂರು ತಿಂಗಳಾಗುವ ತನಕ ಹೀಗೆ ಮೂರು ಗಂಟೆಗೊಮ್ಮೆ ಹಾಲೂಡಿಸುತ್ತಿದ್ದು ನಾಲ್ಕನೆಯ ತಿಂಗಳಿಂದ 4 ಗಂಟೆಗೆ ಒಮ್ಮೆ ಕುಡಿಸಲು ಶುರು ಮಾಡಬೇಕು. ಮಗುವಿಗೆ ಹಾಲು ಕೊಡುವಾಗ ಅನ್ಯಯೋಚನೆಗಳನ್ನು ಮಾಡದೆ ಮಗುವಿನ ಬಗ್ಗೆ ಧ್ಯಾನಿಸಬೇಕು. ಮೊದ ಮೊದಲು ಸ್ತನಗಳಲ್ಲಿ ಮಗುವಿನ ಅಗತ್ಯಕ್ಕಿಂತಲೂ ಹೆಚ್ಚು ಹಾಲಿರುವುದು ಸಾಮಾನ್ಯವಾದ್ದರಿಂದ, ಮಗು ಹಾಲೂಡಿ ತೃಪ್ತಿಯಿಂದ ಕುಡಿಯುವುದನ್ನು ಬಿಟ್ಟ ಬಳಿಕ, ಉಳಿದ ಹಾಲನ್ನು ಕರೆದು ಚೆಲ್ಲಿ ಬಿಡಬೇಕು. ಇದರಿಂದ ಹಾಲು ಮೊಲೆಯಲ್ಲಿ ಉಳಿದು ಬಾಧೆ ಉಂಟಾಗುವುದು ತಪ್ಪುವುದಲ್ಲದೆ ಹಾಲೂ ಚೆನ್ನಾಗಿ ಬರುತ್ತದೆ. ದಿನಾ ಮಗುವಿಗೆ ಸ್ನಾನಮಾಡಿಸಬೇಕು. ಸ್ನಾನಕ್ಕೆ ಮುಂಚೆ ಮಗುವಿನ ಮೈಗೆಲ್ಲ ಎಣ್ಣೆ ಹಚ್ಚುವ ನಮ್ಮ ಹಳೆಯ ಪದ್ಧತಿ ಒಳ್ಳೆಯದು. ಏಕೆಂದರೆ ಮಗುವಿನ ಮೈಮೇಲೆ ತಲೆಮೇಲೆ ಇರುವ ವಿಶಿಷ್ಟವಾದ ಜಿಡ್ಡು ಇದರಿಂದ ಚೆನ್ನಾಗಿ ನಿರ್ಮೂಲವಾಗುತ್ತದೆ. ಸ್ನಾನಕ್ಕೆ ಬಹುಬಿಸಿಯಾದ ನೀರನ್ನು ಉಪಯೋಗಿಸಬಾರದು. ಸ್ನಾನದ ಅನಂತರ ಮೈ ತಲೆ ಎಲ್ಲವನ್ನೂ ಶುದ್ಧ ಒಣ ಬಟ್ಟೆಯಿಂದ ಒರೆಸಿ ಬೇಕು ಮೆದುವಾದ ಪೌಡರನ್ನು ಲೇಪಿಸಬೇಕು. ಹೊಕ್ಕಳಬಳ್ಳಿಯ ಒಣಗಿ ಬಿದ್ದು ಹೋಗುತ್ತದೆ. ಏನೂ ತೊಂದರೆ ಆಗುವುದಿಲ್ಲ. ಹಾಗಾಗದೆ ರಕ್ತಸ್ರಾವವಾಗುವುದು, ಊತಗೊಳ್ಳುವುದು, ಕೀತುಗೊಳ್ಳವುದು ಕಂಡುಬಂದರೆ ವೈದ್ಯರ ಸಲಹೆ ಪಡೆದು ತಕ್ಕ ಚಿಕಿತ್ಸೆ ಮಾಡಬೇಕು. ಇಲ್ಲದಿದ್ದರೆ ವಿಷಾಣು ಸೊಂಕು ಇದರ ಮೂಲಕ ದೇಹದ ಒಳಗೆ ವ್ಯಾಪಿಸಿ ಬಹು ನಂಜಾಗಬಹುದು. ಹುಟ್ಟಿದ ಮೂರನೆಯ ದಿನ ಕೆಲವು ಮಕ್ಕಳಲ್ಲಿ ಕಾಮಾಲೆಯಂತೆ ಮೈ ಹಳದಿ ಬಣ್ಣಕ್ಕೆ ತಿರುಗುವುದುಂಟು. ಇಂಥ ಕಾಮಾಲೆ ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ತಾನಾಗಿಯೇ ಹೋಗುತ್ತದೆ. ಹಾಗಾಗದಿದ್ದರೆ ಇಲ್ಲವೇ ಕಾಮಾಲೆ ತೀವ್ರವಾಗುತ್ತಿದ್ದರೆ ವೈದ್ಯರಿಗೆ ತೋರಿಸಿ ಅವರ ಸಲಹೆಯಂತೆ ನಡೆದುಕೊಳ್ಳಬೇಕು. ಮಗುವಿಗೆ ಆರು ತಿಂಗಳು ತುಂಬುವ ತನಕ ತಾಯಿಯ ಎದೆಹಾಲೇ ಬಹುಶಃ ಸರ್ವೋತ್ಕøಷ್ಟ ಆಹಾರ, ಅನಂತರವೂ ಬರಿಯ ಎದೆಹಾಲು ಹಾಲೂಡಿಸುವುದು ಒಳ್ಳೆಯದಲ್ಲ. ಮಗುವಿಗೆ ಬೇರೆ ಆಹಾರ ಕೊಡಲು ಪ್ರಾರಂಭಿಸಿದಾಗ ಸುಲಭವಾಗಿ ಜೀರ್ಣಿಸಬಲ್ಲ ಪಿಷ್ಟಯುಕ್ತ ಆಹಾರವನ್ನು ಸ್ವಲ್ಪಸ್ವಲ್ಪವಾಗಿ ಕೊಡಬೇಕು. ಆಕಳ ಹಾಲೂ ಮೊಸರು ಇವುಗಳ ಅಭ್ಯಾಸವನ್ನು ಮುಂದುವರಿಸಬೇಕು. ಅವಿವೇಕದಿಂದ ಮಾರುಕಟ್ಟೆಯ ಜಾಹೀರಾತುಗಳನ್ನು ನಂಬಿಕೊಂಡು ಮಗುವಿಗೆ ಒಗ್ಗದ ಡಬ್ಬದ ಆಹಾರವನ್ನು ಗಿಡಿದು ತಿನ್ನಿಸುವುದು ಕುಡಿಸುವುದು ಸುತರಾಂ ಸಲ್ಲದು. ಹೀಗೆ ಮಾಡಿದಲ್ಲಿ ಮಗುವಿಗೆ ಭೇದಿ ಶುರುವಾಗುತ್ತದೆ. ಇದರಿಂದ ಮಗುವಿನ ಪೌಷ್ಟಿಕಸ್ಥಿಗೆ ಇನ್ನೂ ಢಕ್ಕೆಯಾಗಿ ಮಲೇರಿಯಾ, ಕಾಲರಾ, ಅತಿಸಾರ ಮುಂತಾದ ರೋಗಗಳಿಗೆ ಮಗು ತುತ್ತಾಗುವಂಥಾಗುತ್ತದೆ. ಹೇಗಾದರೂ ಮಗುವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವುದು ಅಗತ್ಯ. ಆದ್ದರಿಂದ ಮಗುವಿಗೆ ಮೂರು ತಿಂಗಳಾದ ಬಳಿಕ ವರ್ಷತುಂಬುವುದರ ಒಳಗೆ ಒಂದೊಂದಾಗಿ ರೋಗ ನಿರೋಧಕ ಚುಚ್ಚುಮದ್ದು, ಡಿಫ್ತೀರಿಯ, ನಾಯಿಕೆಮ್ಮು, ಧನುರ್ವಾಯಗಳ ವಿರುದ್ಧ ಲಸಿಕೆ ಹಾಕಿಸುವುದು ಪೋಲಿಯೊ ವಿರುದ್ಧ ರಕ್ಷಣೆ ಒದಗಿಸುವುದು ಇತ್ಯಾದಿಗಳತ್ತ ಲಕ್ಷ್ಯಹರಿಸಬೇಕು. ಮಗು ಶೈಶವವನ್ನು ಕಳೆದು ಬಾಲ್ಯದಲ್ಲಿ ಕಾಲಿಟ್ಟಂತೆ ಹಾಲು, ಹಾಲಿನ ಉತ್ಪನ್ನಗಳು, ಅಗಿದು ತನ್ನುವಂಥ ಗಡಸು ಆಹಾರಗಳು, ತಾಜಾ ಹಣ್ಣುಗಳು ಇತ್ಯಾದಿಗಳನ್ನು ಸಮೃದ್ಧಿಯಾಗಿ ಒದಗಿಸಿ ದೇಹದ ಬೆಳೆವಣಿಗೆ, ಹಲ್ಲು ಮೂಳೆಗಳ ದಾಢ್ರ್ಯ ಇವು ಸಮರ್ಪಕವಾಗಿರುವಂಥೆ ನೋಡಿಕೊಳ್ಳಬೇಕು. ಶಾಲೆಗೆ ಕಳುಹಿಸುವ ವಯಸ್ಸಿನಲ್ಲಿ ಮೆದುಳಜ್ವರ ಉರಿಯೂತದ ವಿರುದ್ಧ/ಟೈಫಾಯಿಡ್ (ವಿಶಮಶೀತ ಜ್ವರ) ರೋಗದ ವಿರುದ್ಧ ಲಸಿಕೆ ಹಾಕಿಸುವುದಲ್ಲದೆ ವರ್ಷೇ ವರ್ಷೇ ಶಾಲಾ ವೈದ್ಯರಿಂದ ಪರೀಕ್ಷೆ ಮಾಡಿಸಿ ಅವರ ಸಲಹೆಯಂತೆ ನಡೆದುಕೊಳ್ಳಬೇಕು.

ಹೆರಿಗೆಯ ಅನಂತರ ವ್ಯಾಯಮ ಬಹುಮುಖ್ಯ. ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಿದರೆ ಅಂಗಸೌಷ್ಟವ ಉಂಟಾಗುವುದಲ್ಲದೆ ಡೊಳ್ಳು ಹೊಟ್ಟೆಯಾಗಲಿ ಸ್ಥೂಲಕಾಯವಾಗಲಿ ಪ್ರಾಪ್ತವಾಗುವುದಿಲ್ಲ. ಮಗುವಿಗೆ ಯಾವ ಟಾನಿಕ್ಕೂ ಅಗತ್ಯವಿಲ್ಲ. ಅಂದರೆ ಸಾಕಷ್ಟು ವೈಟಮಿನ್ ಹಾಗೂ ಕ್ಯಾಲ್ಸಿಯಮ್ ಲವಣಗಳು ಪೂರೈಕೆ ಆಗಬೇಕು. ಕಿತ್ತಳೆ ಟೊಮೇಟೋ ಹಣ್ಣಿನ ರಸಗಳನ್ನು ಮಗುವಿಗೆ ಅದು ಒಂದು ತಿಂಗಳಾದಗಿನಿಂದ ಪ್ರಾರಂಭಿಸಿ ಎದೆಹಾಲು ತಪ್ಪಿಸುವ ವೇಳೆಗೆ ಅರ್ಧಬಟ್ಟಲು ರಸವನ್ನು ಸಕ್ಕರೆ ಬೆರೆಸಿ ಹಾಕಬೇಕು ಮಗುವಿಗೆ ಹೊರಗಿನ ಸ್ವಚ್ಛ ಗಾಳಿ ಅವಶ್ಯಕ. ಮಗು 5 ಕೆಜಿ. ತೂಗಿದೊಡನೆ ಅದನ್ನು ಹೊರಗೆ ಅಡ್ಡಾಡಿಸಬೇಕು. ಎಳೆ ಬಿಸಿಲಿನಲ್ಲಿ ಮಗುವನ್ನು ಅಡ್ಡಾಡಿಸುವುದರಿಂದ ಆ ಕಾಲದ ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳ ಉಪಯುಕ್ತತೆಯೂ ಅದಕ್ಕೆ ದೊರಕಿದಂತಾಗುತ್ತದೆ. ಈ ಕಿರಣಗಳು ಮಗುವಿನ ಚರ್ಮದೊಳ ಹಾಯ್ದು ಅದರ ದೇಹದಲ್ಲಿ ವೈಟಮಿನ್ ಆ ಉತ್ಪಾದನೆ ಆಗುವಂತೆ ಮಾಡಿ ಹಲ್ಲು ಮೂಳೆಗಳ ಬೆಳೆವಣಿಗೆ ಸಹಾಯ ಮಾಡುತ್ತವೆ.

ಪ್ರಸವವಾದ ಮೊದಲ ದಿನ ಹಡಿಬಾಣಂತಿ ದ್ರವ ಆಹಾರವನ್ನು ಅಂದರೆ ನೀರು ಕಾಫಿ ಕೋಕೋ ಇಂಥವನ್ನು ಸೇವಿಸುವುದು ಒಳ್ಳೆಯದು, ಸಂಪೂರ್ಣ ವಿಶ್ರಾಂತಿ ಅಗತ್ಯ. ಸಾಕಷ್ಟು ದ್ರವಾಹಾರ ತೆಗೆದುಕೊಳ್ಳಬೇಕು. ಎರಡನೆಯ ದಿನ ಇಡ್ಲಿ, ಬ್ರೆಡ್ ಬಿಸ್ಕತ್ತುಗಳನ್ನು ತಿನ್ನಬಹುದು. ಅನಂತರ ಚೆನ್ನಾಗಿ ಬೇಯಿಸಿದ ತರಕಾರಿ, ಅನ್ನ ಸಾರು ಹಣ್ಣಗಳನ್ನು ಸೇವಿಸುತ್ತ ಬೇರೆ ಎಲ್ಲರಂತೆ ತಿಂದುಂಡು ಮಾಡಬಹುದು. ಹಾಲು ಹಾಲಿನ ಉತ್ಪನ್ನಗಳು ಇವನ್ನು ಹೇರಳವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ಊಟವಾದ ಮೇಲೆ ನಮ್ಮಲ್ಲಿ ವಾಡಿಕೆಯಾದ ತಂಬೂಲಸೇವನೆ ಒಳ್ಳೆಯದೇ. ಇದರಿಂದ ತಾಯಿ ಎದೆಹಾಲಿನ ಮೂಲಕ ಕಳೆದುಕೊಳ್ಳುತ್ತಿರುವ ಕ್ಯಾಲ್ಸಿಯಮ್ಮನ್ನು ಭರ್ತಿಮಾಡಿಕೊಂಡಂತಾಗುತ್ತದೆ. (ಬಿ.ಬಿ.ಎ.)