ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಿರುಮಲಾರ್ಯ

ವಿಕಿಸೋರ್ಸ್ದಿಂದ

ತಿರುಮಲಾರ್ಯ : - 1645-1706. ಮೈಸೂರು ಅರಸು ಚಿಕ್ಕದೇವರಾಜನ (1672-1704) ಆಸ್ಥಾನದಲ್ಲಿದ್ದ ಕವಿ; ಅವನ ಮಂತ್ರಿ. ಅಪ್ರತಿಮ ವೀರಚರಿತ. ಚಿಕ್ಕದೇವರಾಜವಿಜಯ, ಚಿಕ್ಕದೇವರಾಜ ವಂಶಾವಳಿ ಮತ್ತು ಚಿಕ್ಕದೇವರಾಜ ಶತಕ ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ಚಿಕ್ಕದೇವರಾಜನ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಗೀತಗೋಪಾಲ, ಚಿಕ್ಕದೇವರಾಜ ಬಿನ್ನಪ ಮೊದಲಾದ ಗ್ರಂಥಗಳೂ ಈತನಿಂದಲೇ ರಚಿತವಾದುವೆಂಬ ಪ್ರತೀತಿಯಿದೆ. ಚಿಕ್ಕದೇವರಾಜ ಶತಕ ಈವರೆಗೂ ದೊರೆತಿಲ್ಲ. ಈತ ಶ್ರೀವೈಷ್ಣವ ಮತದ ಕೌಶಿಕಗೋತ್ರದವ. ತಂದೆ ದೊಡ್ಡ ದೇವರಾಜನ ಪುರಾಣಿಕನಾಗಿದ್ದ ಅಳಸಿಂಗರಾರ್ಯ. ತಾಯಿ ಸಿಂಗಮ್ಮ. ಚಿಕ್ಕದೇವರಾಜನ ಜೊತೆಯಲ್ಲೇ ಬೆಳೆದ ಈತ, ಆತನ ಮಿತ್ರನಾಗಿ, ಆಸ್ಥಾನಪಂಡಿತನಾಗಿ, ಕೊನೆಗೆ ಮಂತ್ರಿಯಾದ. ಕೆಲಕಾಲ ಮಧುರೆಯ ನಾಯಕನ ಹೆಂಡತಿ ಮಂಗಮ್ಮನ ಬಳಿಯಲ್ಲಿಯೂ ಮಂತ್ರಿಯಾಗಿದ್ದಂತೆ ತಿಳಿದುಬರುತ್ತದೆ.

ತಿರುಮಲಾರ್ಯ ತಮ್ಮ ಸಿಂಗರಾರ್ಯ ಪಿರಿದುಂ ಪ್ರೌಢತ್ವಮಂ ಪೆರ್ಕಳಿಕೆ ಕವಿವರರ್ ಕಬ್ಬದೊಳ್ ಶಾಸ್ತ್ರದೊಳ್ ಮೇಣ್ ಕರಮೀಸಾಹಿತ್ಯದೊಳ್ ಬಿತ್ತರಿ ಪೊಡೆ ರಸಮಂ ತಿರ್ಮಲಾರ್ಯರ್ಗೆ ಸಲ್ಗುಂ ಎಂದು ಈತನನ್ನು ಹೊಗಳಿದ್ದಾನೆ. ದೇವಚಂದ್ರನ ರಾಜಾವಳಿ ಕಥೆಯಲ್ಲಿ (1838) ತಿರುಮಲಾರ್ಯ ವಿದ್ಯಾವಿಶಾರದ ನೆನಿಸಿದಂ ಎಂದು ಹೇಳಲಾಗಿದೆ.

ಕವಿ ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸ, ಶುಕರನ್ನು ಸ್ತುತಿಸಿದ್ದಾನೆ. ಈತ ರಚಿಸಿರುವ ಚಿಕ್ಕದೇವರಾಜ ವಿಜಯ 6 ಆಶ್ವಾಸಗಳನ್ನೊಳಗೊಂಡ ಪ್ರೌಢ ಚಂಪೂ ಕಾವ್. ಸಕ್ಕದಗನ್ನಡವೆರಡಯೊಳೆಕ್ಕಸರಂಗೊಳ್ವುದೋಜೆಗಬ್ಬಂ ಆಗಿರುವ ಇದು ಎಡೆಯೆಡೆಯೊಳ್ ತಕ್ಕ ತಕ್ಕ ಬಣ್ಣಿಗೆ ಬವಣಿಂ ಸೊಗಸನ್ನು ಪಡೆದಿದೆ; ಅಲ್ಲಲ್ಲಿ ಕೆಲವು ತ್ರಿಪದಿ, ಸಾಂಗತ್ಯ ಮತ್ತು ಹಾಡುಗಳೂ ಇವೆ. ಇದರಲ್ಲಿ ಮೈಸೂರು ಅರಸುಗಳ ಚರಿತ್ರೆಯನ್ನು ಚಿಕ್ಕದೇವರಾಜನವರೆಗೆ ನಿರೂಪಿಸಲಾಗಿದೆ. ಬಂಧ ಪ್ರೌಢವಾಗಿದ್ದು ಕವಿಯ ಪಾಂಡಿತ್ಯವನ್ನು ಸೂಚಿಸುತ್ತದೆ. ಈಗ ದೊರೆತಿರುವ ಗ್ರಂಥ ಅಸಮಗ್ರ ಎನಿಸುತ್ತದೆ.

ಮೈಸೂರು ಅರಸರ ಚರಿತ್ರೆಯನ್ನು ಹೇಳುವ ಚಿಕ್ಕದೇವರಾಜ ವಂಶಾವಳಿ ಗದ್ಯರೂಪವಾಗಿದ್ದು ಒಂದೆಡೆ ಮಾತ್ರ ಕಂದಪದ್ಯಗಳನ್ನೊಳಗೊಂಡಿದೆ. ಇಲ್ಲಿನ ಗದ್ಯಶೈಲಿ ಪ್ರೌಢವಾಗಿದ್ದು ಅಂದಿನ ಪಂಡಿತರ ಒಲವನ್ನು ಎತ್ತಿ ತೋರುವಂತಿದೆ. ಅಪ್ರತಿಮವೀರಚರಿಗೆ ಅಲಂಕಾರ ಗ್ರಂಥವಾದರೂ ಕವಿ ಅದನ್ನು ಚರಿತ್ರೆ ಎಂದು ಕರೆದಿದ್ದಾನೆ. ಇದಕ್ಕೆ ಮುಖ್ಯಕಾರಣ ಲಕ್ಷ್ಯಪದ್ಯಗಳೆಲ್ಲ ಅಪ್ರತಿಮವೀರನೆಂಬ ಬಿರುದುಳ್ಳ ಚಿಕ್ಕದೇವರಾಯನ ಚರಿತ್ರೆಯನ್ನು ತಿಳಿಸುತ್ತವೆ. ಇದರಲ್ಲಿ ನಾಲ್ಕು ಪ್ರಕರಣಗಳಿವೆ. 1ನೆಯದರಲ್ಲಿ ಕಾವ್ಯಲಕ್ಷಣ, ಶಬ್ದಗುಣ, ಅರ್ಥಗುಣಗಳನ್ನೂ 2ನೆಯದರಲ್ಲಿ ರೀತಿ, ಶಯ್ಯೆ, ಪಾಕ ವೃತ್ತಿ ಅನುಪಾಸವೇ ಮೊದಲಾದುವನ್ನೂ 3ನೆಯದರಲ್ಲಿ ಉಪಮೆ ಮೊದಲಾದ ನೂರು ಅರ್ಥಾಲಂಕಾರಗಳನ್ನೂ 4ನೆಯದರಲ್ಲಿ ರಸಾಲಂಕಾರಗಳನ್ನೂ ನಿರೂಪಿಸಲಾಗಿದೆ. ಚಂದ್ರಾಲೋಕ, ವಾಮನವೃತ್ತಿ, ಕಾವ್ಯಪ್ರಕಾಶ ಮೊಲಾದ ಸಂಸ್ಕøತ ಗ್ರಂಥಗಳಿಂದ ಲಕ್ಷಣಗಳನ್ನು ತೆಗೆದುಕೊಂಡು ಅವುಗಳಿಗೆ ಕನ್ನಡ ವೃತ್ತಿಯನ್ನು ಇಲ್ಲಿ ರಚಿಸಲಾಗಿದೆ. (ಎಸ್.ಬಿ.ಎಸ್.)