ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಿರುಮಲೆ ತಾತಾಚರ್ಯ ಶರ್ಮ

ವಿಕಿಸೋರ್ಸ್ದಿಂದ

ತಿರುಮಲೆ ತಾತಾಚರ್ಯ ಶರ್ಮ (1895-1973) 1924 ಬೆಳಗಾವಿ ಕಾಂಗ್ರೆಸ್ ಅಧಿವೇಶನ. ಮಹಾತ್ಮ ಗಾಂಧೀ ಸಮ್ಮೇಳಾನಧ್ಯಕ್ಷರು. ಇಪ್ಪತ್ತರ ಪ್ರಾಯದ ಯುವಕನೊಬ್ಬ ಬಾಪೂ ಬಳಿ ಸಾರಿ ತಾನು ಆರಂಭಿಸಬೇಕೆಂದಿದ್ದ ಕನ್ನಡ ಸಾಪ್ತಾಹಿಕಕ್ಕೆ ಸಂದೇಶ-ಆರ್ಶೀವಾದ ಬಯಸಿದರು. ಗಾಂಧೀಜಿ ಬರೆದುಕೊಟ್ಟದ್ದು ಎರಡೇ ಎರಡು ಮಾತಿನ ಸಂದೇಶ-ದೀಕ್ಷೆ-ಬೀಜಮಂತ್ರ; ಕರೇಜ್ ಅಂಡ್ ಕ್ಯಾರೆಕ್ಟರ್ -ಧೈರ್ಯ ಮತ್ತು ಚಾರಿತ್ರ್ಯ.

ಸಂದೇಶ ಬೇಡಿದ ತರುಣ ಮತ್ತಾರೂ ಅಲ್ಲ, ಕನ್ನಡ ಗದ್ಯದ ಪದ ಗಾರುಡಿಗ, ತಿರುಮಲೆ ತಾತಾಚರ್ಯ ಶರ್ಮ. ಪತ್ರಿಕೆಯ ಹೆಸರು ವಿಶ್ವ ಕರ್ನಾಟಕ, ಕನ್ನಡ ಪತ್ರಿಕಾ ಇತಿಹಾಸದಲ್ಲಿ, ವಿಶ್ವ ಕರ್ನಾಟಕದ್ದು ಜ್ವಲಂತ ಅಧ್ಯಾಯ; ಮೊದಲು ಅದು ವಾರಪತ್ರಿಕೆಯಾಗಿತ್ತು. ನಿರ್ಭೀತ ಟೀಕೆ, ಅತೀವ ರಾಷ್ಟ್ರ ನಿಷ್ಠೆ, ಉಗ್ರ ಅಗ್ರ ಲೇಖನಗಳು. ಇದರಿಂದಾಗಿ ವಾರ್ (ಯುದ್ಧ) ಪತ್ರಿಕೆಯೆಂದೇ ಅಂದು ಜನಜನಿತ. ಕ್ರಮೇಣ ದಿನಪತ್ರಿಕೆಯಾಗಿ ಮಾರ್ಪಾಡು. ಪತ್ರಿಕೆ ಒಂದು ವೀರವ್ರತ, ಯಜ್ಞವಾಯಿತು. ಸಂಪಾದಕರಿಗೆ ದೊರೆತ ಪ್ರತಿಫಲ ಸಾಲ, ಆಸ್ತಿಪಾಸ್ತಿ ವಿಕ್ರಯ, ಬಡತನ, ಕಾಯಿಲೆ, ಜೈಲುವಾಸ. ಆದರೆ ಸತ್ಯ ನಿಷ್ಠೆ, ರಾಷ್ಟ್ರ ನಿಷ್ಠೆ ಕಾಯ್ದುಕೊಂಡ ಕೃತಾರ್ಥಭಾವ; ಲೋಕಕ್ಕೆ ಸ್ಫೂರ್ತಿ.

ವಿಶ್ವಕರ್ನಾಟಕದ ಲೇಖನಗಳನ್ನು ಮಹಾಜನರಿಗೆ ಮೆಚ್ಚೆನಿಸಲು ಯಾರ ಶಿಫಾರಸೂ ಬೇಕಾಗಿಲ್ಲ. ಉನ್ನತ ಧ್ಯೇಯದಿಂದಲೂ ಸ್ವತಂತ್ರ ದೃಷ್ಟಿಯಿಂದಲೂ ತನ್ನೊಂದು ವಿಶೇಷವಾದ ಸಜೀವ ಶೈಲಿಯಿಂದಲೂ ಆ ಪತ್ರಿಕೆ ನಮ್ಮ ಸಾರ್ವಜನಿಕ ರಂಗದಲ್ಲಿ ಒಂದು ಪ್ರಶಸ್ತ ಸ್ಥಾನವನ್ನು ಸಂಪಾದಿಸಿಕೊಂಡಿದೆ”, ತಿರುಮಲೆ ತಾತಾಚರ್ಯ ಶರ್ಮರ ಬರವಣಿಗೆಯನ್ನು ಮೆಚ್ಚಿಕೊಂಡು ಡಿ.ವಿ.ಜಿ. ಆಡಿದ ಮಾತುಗಳಿವು.

ಸಂಶೋಧಕ, ಸಾಹಿತಿ, ಪತ್ರಕರ್ತ ತಿರುಮಲೆ ತಾತಾಶರ್ಮ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅವರ ಪೂರ್ವಿಕರು ವಿಜಯನಗರದ ರಾಜಗುರುಗಳು. ವಿಜಯನಗರ ಸಾಮ್ರಾಜ್ಯದ ಕತೆ ಮುಗಿದ ಮೇಲೆ ಅವರ ವಂಶಜರು ಕೋಲಾರ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಬಂದು ನೆಲೆಸಿದರು. ತೆಲುಗು ಮಾತನಾಡುವ ಶ್ರೀ ವೈಷ್ಣವರು. ತಂದೆ ಶ್ರೀನಿವಾಸ ತಾತಾಚಾರ್ಯ, ತಾಯಿ ಜಾನಕಿಯಮ್ಮ. ತಿರುಮಲೆ ತಾತಾಚರ್ಯ ಶರ್ಮರ ಜನನ 27 ಏಪ್ರಿಲ್ 1895. ತಂದೆ ತಾಯಿಗಳಿಟ್ಟ ಹೆಸರು ಲಕ್ಷ್ಮೀಕುಮಾರ ತಾತಾಚಾರ್ಯ.

ಶರ್ಮರ ಪ್ರಾರಂಭದ ವಿದ್ಯಾಭ್ಯಾಸ ಮನೆಯಲ್ಲೇ ಕನ್ನಡ, ಸಂಸ್ಕøತ ಮತ್ತು ತೆಲುಗಿನಲ್ಲಿ ವಿದ್ಯಾಭ್ಯಾಸ. ಬೆಂಗಳೂರು, ಹಾಸನಗಳಲ್ಲಿ ವಿದ್ಯಾಭ್ಯಾಸ ಮುಂದುವರಿಕೆ. ಹಾಸನದಲ್ಲಿದ್ದಾಗಲೇ ಚಿಕ್ಕತಾತನ ಮೊಮ್ಮಗಳು ರಾಜಮ್ಮನೊಡನೆ ವಿವಾಹ. ಆಮೇಲೆ ಅಲ್ಲೇ ಹೈಸ್ಕೂಲು ವಿದ್ಯಾಭ್ಯಾಸ, ಮೈಸೂರಿನಲ್ಲಿ ಕಾಲೇಜು ವ್ಯಾಸಂಗ. ಆಗಲೇ ತಾತಯ್ಯನವರ ಸಂಪರ್ಕ.

ಇಂಟರ್‍ಮೀಡಿಯಟ್ ನಂತರ ಅನಾರೋಗ್ಯದಿಂದ ವಿದ್ಯಾಭ್ಯಾಸ ಮುಂದುವರೆಯಲಿಲ್ಲ. ಲೋಕಾನುಭವ ಗಳಿಕೆಗೆ ನಾಂದಿ. ಬೆಳೆಯುವ ಪೈರು ಮೊಳಕೆಯಲ್ಲೇ-ಎಂಬ ನಾಣ್ಣುಡಿಯಂತೆ 8-9 ವರ್ಷದ ಎಳೆಯರಾಗಿದ್ದಾಗಲೇ ರಾಷ್ಟ್ರ ಪ್ರೇಮದ ಬೀಜಾಂಕುರ. 1906-1907 ಸಮಯದಲ್ಲಿ ದೇಶದೆಲ್ಲೆಡೆ ವಂದೇ ಮಾತರಂ ಗೀತೆ ಹತ್ತಿಕ್ಕಲು ಬ್ರಿಟಿಷ್ ಸರಕಾರದ ಸರ್ವಸಾಹಸ. ಎಳೆಯ ಶರ್ಮ ಇದನ್ನು ಧಿಕ್ಕರಿಸಿ ಎದುರಿಸಿದ ಬಗೆ ಶರ್ಮರ ಮುಂದಿನ ಸುದೀರ್ಘ ಹೋರಾಟಕ್ಕೆ ಅಂಕುರಾರ್ಪಣವಾಯಿತು.

ಮಡದಿ ರಾಜಮ್ಮ ಸ್ವಯಂ ಪ್ರತಿಭಾಶಾಲಿ, ಭಾರತಿ ಹೆಸರಿನಿಂದ ಲೇಖಕಿ ಹಾಗೂ ಖ್ಯಾತಾ ವೀಣಾ ವಿದುಷಿ. ಮಹಾತ್ಮ ಗಾಂಧಿ ಮುಂತಾದವರ ಮುಂದೆ ತಮ್ಮ ಸಂಗೀತ ಪ್ರತಿಭೆ ತೋರಿ, ಹೊಗಳಿಕೆಗೆ ಪಾತ್ರರು. ಗಂಡನ ಹೆಗಲಿಗೆ ಹೆಗಲು ಕೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ದಿಟ್ಟ ಮಹಿಳೆ.

1919ರಲ್ಲಿ ತಿರುಮಲೆ ತಾತಾಚರ್ಯ ಶರ್ಮ ತೆಲುಗು-ಕನ್ನಡ ಸಹಾಯಕರಾಗಿ ಪುರಾತತ್ವಶಾಸ್ತ್ರ ಇಲಾಖೆಯಲ್ಲಿ ನೌಕರಿ ಸೇರಿದರು. ಮದ್ರಾಸಿನಲ್ಲಿ ಕೆಲಸ, ಹೊಸಕೋಟೆ ಕೃಷ್ಣಶಾಸ್ತ್ರಿ ಶರ್ಮರ ಮೇಲಧಿಕಾರಿ. ಬೆನಗಲ್ ರಾಮರಾಯರ ಮೂಲಕ ಪಂಜೆ ಮಂಗೇಶರಾವ್, ಪಾನ್ಯಂ ಸುಂದರಶಾಸ್ತ್ರಿಗಳ ಪರಿಚಯ. ಈ ಸ್ನೇಹ ಕೂಟದಲ್ಲೇ ಸಾಹಿತ್ಯ, ರಾಜಕೀಯ, ಇತಿಹಾಸ ವಿಷಯಗಳ ಚರ್ಚೆ. ಶರ್ಮರ ಬುದ್ಧಿಗೆ ಪ್ರಚೋದನೆ 12 ಆಗಸ್ಟ್ 1920. ಮದ್ರಾಸಿನಲ್ಲಿ (ಇಂದಿನ ಚೆನ್ನೈ) ಮಹಾತ್ಮ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದರು. ದೇಶಕ್ಕಾಗಿ ತಮ್ಮ ಸಮಯ ಶಕ್ತಿಯನ್ನು ನೀಡುವಂತೆ ಜನರನ್ನು ಕೇಳಿಕೊಳ್ಳಲು ತಾವು ಬಂದಿರುವುದಾಗಿ ಅವರು ಹೇಳಿದಾಗ, ಶರ್ಮರ ಶರೀರದಲ್ಲಿ ಮಿಂಚಿನ ಸಂಚಾರ. ಮಡದಿಗೆ ಪತ್ರ ಬರೆದು, `ಸೇವೆಗೆ ಅನುವಾಗೆಂದು ಅಂತರಾತ್ಮನ ಬೋಧನೆಯಾಗುತ್ತಿದೆ, ನಾನೇನು ಮಾಡಲಿ?” ಎಂದು ಕೇಳಿದರು.

ಈ ನಡುವೆ ಅಹಮದಾಬಾದ್ ಕಾಂಗ್ರೆಸ್ ಅಧಿವೇಶನದ ಅಂಗವಾಗಿ ನಡೆಯಲಿರುವ ಸಂಗೀತ ಸಮ್ಮೇಳನಕ್ಕೆ ರಾಜಮ್ಮನವರಿಗೆ ಆಮಂತ್ರಣ. ನೌಕರಿ ಹೋಗುವ ಪರಿವೆಯೂ ಮಾಡದೆ, ಮಡದಿಯ ಧೈರ್ಯದ ಮಾತುಗಳಿಂದ ದಂಪತಿಗಳಿಬ್ಬರೂ ಅಹಮದಾಬಾದಿಗೆ, ರಾಜಾಜಿ ಮೂಲಕ ಗಾಂಧೀಜಿಯವರ ಸಮೀಪ ಪರಿಚಯ.

ರಾಜಮ್ಮನವರ ಆರೋಗ್ಯ ದೃಷ್ಟಿಯಿಂದ ಉದಕಮಂಡಲ-ನೀಲಗಿರಿಗೆ ಶರ್ಮರು ವರ್ಗಮಾಡಿಸಿಕೊಂಡರು. ಅದು ಅವರ ಜೀವನದ ದಿಕ್ಕನ್ನು ಬದಲಿಸಿತು. ವಿಶ್ರಾಂತಿಗಾಗಿ ಅಲ್ಲಿಗೆ ಬಂದ ಆಂಧ್ರಕೇಸರಿ ಟಂಗಟೂರಿ ಪ್ರಕಾಶಂ ಅವರ ಜತೆ ಶರ್ಮರ ಆಕಸ್ಮಿಕ ಭೇಟಿ. “ಕಣ್ಣಿನ ಮುಂದೆಯೇ ನವ ಇತಿಹಾಸ ನಿರ್ಮಾಣವಾಗುತ್ತಿದೆ. ಅದರಲ್ಲಿ ಭಾಗಿಯಾಗುವುದನ್ನು ಬಿಟ್ಟು ಗತಕಾಲದ ಗುರುತುಗಳನ್ನು ಕೆದಕುತ್ತಾ ಕಾಲ ಕಳೆಯುತ್ತಿದ್ದೀಯಲ್ಲ” ಎಂದು ಪ್ರಕಾಶಂ, ಶರ್ಮರಿಗೆ ಹೇಳಿದ್ದೇ ತಡ ಅದು ತರುಣ ಶರ್ಮರ ಮನಹೊಕ್ಕು, ಆಂದೋಲನಕ್ಕೆ ಅದು ವೀಳ್ಯ, ನೀಡಿದಂತಾಯಿತು. 1923ರಲ್ಲಿ ಸರಕಾರಿ ನೌಕರಿ ಬಿಟ್ಟು ಬೆಂಗಳೂರಿಗೆ ಬಂದರು. ದೇಶೀಯ ವಿದ್ಯಾಶಾಲೆಯಲ್ಲಿ ಕನ್ನಡ ಪಾಠ ಹೇಳುವ ಅವಕಾಶ. ರಾಷ್ಟ್ರ ಪ್ರೇಮದಿಂದ ತುಂಬಿ ತುಳುಕುತ್ತಿದ್ದ ಸಿಡಿಲಿನ ಮರಿ ಎಂಬ ಅಡ್ಡ ಹೆಸರು ಶಿಷ್ಯರಿಂದ ದೊರಕಿದ ಪ್ರಶಸ್ತಿ. ಅವರ ನುಡಿ ಭೀಮ ಗರ್ಜನೆಯೇ ಎಂದು ಶರ್ಮರ ಶಿಷ್ಯರಲ್ಲಿ ಒಬ್ಬರಾದ ತ.ಸು. ಶಾಮರಾಯರು ಬಣ್ಣಿಸಿದ್ದಾರೆ.

ಆವೇಳೆಗೆ, ತುಮಕೂರಿನಲ್ಲಿ ವಕೀಲ ಕೆ.ರಂಗಯ್ಯಂಗಾರ್ಯರು, ಮೈಸೂರು ಕ್ರಾನಿಕಲ್ ಎಂಬ ಇಂಗ್ಲೀಷ್ ವಾರಪತ್ರಿಕೆ ನಡೆಸುತ್ತಿದ್ದರು. ಇದೇ ಹೆಸರಿನಲ್ಲಿ ಕನ್ನಡದಲ್ಲಿ ನವೆಂಬರ್ 1922ರಲ್ಲಿ ಇನ್ನೊಂದು ಪತ್ರಿಕೆ ಆರಂಭಿಸಿದರು. ಎರಡೂ ಪತ್ರಿಕೆಗಳನ್ನು ನಡೆಸಲು ರಂಗಯ್ಯಂಗಾರ್ಯರು, ಶರ್ಮರ ಸಹಾಯ ಪಡೆದರು. 1925ರ ಆರಂಭದಲ್ಲಿ ಸಂಪಾದಕತ್ವ ಮೊದಲಾದ ಜವಾಬ್ದಾರಿಯನ್ನು ಶರ್ಮರೇ ವಹಿಸಿಕೊಂಡರು. ಶರ್ಮರ ಲೇಖನಿಯಿಂದ ಮೂಡಿದ ಲೇಖನ, ಬರವಣಿಗೆ ಅಂದಿನ ಮೈಸೂರು ಸಂಸ್ಥಾನದಲ್ಲಿ ಮಾತ್ರವೇ ಅಲ್ಲದೆ, ಕರ್ನಾಟಕದಲ್ಲೆಲ್ಲ ಪತ್ರಿಕೆ ಹೆಸರು ಮಾಡಿತು. ಕನ್ನಡ ಪತ್ರಿಕೆಗೆ ಇಂಗ್ಲೀಷ್ ಹೆಸರು ಒಪ್ಪುವುದಿಲ್ಲ ಎಂಬ ವಾಚಕರ ಅಭಿಪ್ರಾಯವನ್ನು ಗೌರವಿಸಿ, ಪತ್ರಿಕೆಯನ್ನು, ವಿಶ್ವಕರ್ನಾಟಕ ವೆಂದು ಹೆಸರು ಬದಲಾಯಿಸಿದರು. 2.8.1925ರಿಂದ ವಿಶ್ವ ಕರ್ನಾಟಕವಾಯ್ತು. ಮೈಸೂರು ಚರಿತ್ರೆಯಲ್ಲಿ, ಕನ್ನಡ ಪತ್ರಿಕಾ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭವಾಯಿತು. 400 ರೂಪಾಯಿ ಸಾಲದ ಹೊರೆ ಹೊತ್ತು ಶರ್ಮರು ಪತ್ರಿಕೆಯನ್ನು ವಹಿಸಿಕೊಂಡರು. ಪ್ರತಿಭಾನುವಾರ ಪ್ರಕಟವಾಗುತಿತ್ತು. ವಿಶ್ವಕರ್ನಾಟಕದ ಜತೆಗೆ ಎರಡು ವರ್ಷ ಇಂಗ್ಲೀಷ್ ಮೈಸೂರು ಕ್ರಾನಿಕಲ್ ಅನ್ನೂ ನಡೆಸಿದರು. ವಿಶ್ವ ಕರ್ನಾಟಕ ದೊಡನೆ ಶರ್ಮರ ಬದುಕು ಹೆಣೆದುಕೊಂಡು ಬಿಟ್ಟಿತು. ನಂತರದ ವರ್ಷಗಳಲ್ಲಿ ಹಣಕಾಸು ಮುಗ್ಗಟ್ಟು ಎದುರಾದಾಗ ಪತ್ರಿಕೆಗಾಗಿ ಮಡದಿ ರಾಜಮ್ಮನವರ ಒಡವೆಗಳೂ ಒತ್ತೆಯಾಗಬೇಕಾಯಿತು.

“ವಿಶ್ವವೇ ನನ್ನ ಕರ್ನಾಟಕ: ಎಲ್ಲೇ ಹೋಗಲಿ ನನ್ನ ಕರ್ನಾಟಕವನ್ನೇ ಕಾಣುತ್ತೇನೆ. ಕರ್ನಾಟಕದ ವಾತಾವರಣವನ್ನೇ ಸೃಷ್ಟಿಸುತ್ತೇನೆ”. ಎಂಬ ಧೀರ, ವೀರ ನಿಲುವು; ಆರಂಭದಲ್ಲೇ ಶರ್ಮರಿಂದ ಪ್ರತಿಪಾದನೆ. ಭಾರತದ ಸ್ವಾತಂತ್ರ್ಯ, ಕನ್ನಡ ನಾಡಿನ ಏಕೀಕರಣ, ಕನ್ನಡ ಸಂಸ್ಕøತಿಪ್ರಸಾರ-ಶರ್ಮರ ಪತ್ರಿಕೆಯ ಆದರ್ಶ ಅಷ್ಟೇ ಅಲ್ಲ, ಜೀವನದ ಉದ್ದೇಶ ಕೂಡ. ಅನ್ಯಾಯ, ಅಸತ್ಯಗಳ ವಿರುದ್ಧ ವಿಶ್ವ ಕರ್ನಾಟಕ ಶರ್ಮರ “ಶಸ್ತ್ರ ಮರ್ಯಾದೆ”ಯಾಯಿತು.

ಏಳು ವರ್ಷಕಾಲ ವಿಶ್ವ ಕರ್ನಾಟಕ ವಾರಪತ್ರಿಕೆಯಾಗಿ ಪ್ರಕಟಗೊಂಡು ಆನಂತರ ದಿನಪತ್ರಿಕೆಯಾಗಿ ಮಾರ್ಪಾಡು. ಪತ್ರಿಕೆಯ ಬಲ, ವರ್ಚಸ್ಸು ಮೇಲಾಗಿ ಸ್ಥಾನಮಾನ ಗಳಿಸಿ ಕೊಟ್ಟವರು ಅಸಂಖ್ಯಜನ. ಕೆ.ಸಂಪದ್ಗಿರಿರಾಯರಿಂದ ಈ ನಾಮಾವಳಿ ಆರಂಭವಾಗುತ್ತದೆ. ನಿಟ್ಟೂರು ಶ್ರೀನಿವಾಸರಾವ್ ದಂಪತಿಗಳು ಗಾಂಧೀಜಿಯವರ ಆತ್ಮ ಚರಿತ್ರೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು. ಶರ್ಮರು ಪತ್ರಿಕೆಯಲ್ಲಿ ಪತ್ರಕಟಿಸಿದರು; ತಮ್ಮ ಮಾರ್ಗದರ್ಶಕನಿಗೆ ಶರ್ಮರು ಗೌರವ ತೋರಿದ ಬಗೆ ಇದು.

ವಿಶ್ವ ಕರ್ನಾಟಕದ ಹುಟ್ಟಿನ ಹೊತ್ತಿಗೆ ಸರಕಾರಕ್ಕೆ ಅನುಕೂಲವಾದ ಒಂದೆರಡು ಪತ್ರಿಕೆಗಳನ್ನು ಬಿಟ್ಟರೆ ಬೇರೆ ಯಾವುವು ಇರಲಿಲ್ಲ. ದಿವಾನ್ ಮಾಧವರಾಯರ ವೃತ್ತಪತ್ರಿಕಾ ಕಾನೂನು ಹಳೇ ಮೈಸೂರು ಸಂಸ್ಥಾನದ ಪತ್ರಿಕೆಗಳನ್ನೆಲ್ಲ ನುಂಗಿಬಿಟ್ಟಿತ್ತು. ಉಳಿದ ಒಂದೆರಡಂತೂ ಸರಕಾರದ ತುತ್ತೂರಿಗಳು. ವಿಶ್ವಕರ್ನಾಟಕ ಒಂದು ಕಡೆ ಸ್ವಾತಂತ್ರ್ಯ ಹೋರಾಟದ ಕಹಳೆ; ಮತ್ತೊಂದೆಡೆ ಮೈಸೂರಿನ ದಿವಾನರ ಆಡಳಿತದ ಲೋಪ-ದೋಷಗಳನ್ನು ಬಯಲುಮಾಡಿ ಗಮನ ಸೆಳೆಯುವ ಕರೆಗಂಟೆ ಪಾತ್ರವಹಿಸಿತು.

ದಿವಾನ್ ಮಿರ್ಜಾ ಇಸ್ಮಾಯಿಲ್ ಆಡಳಿತೆಯಲ್ಲಿ ಬೆಂಗಳೂರು ಸುಲ್ತಾನ್ ಪೇಟೆ ಗಣೇಶನ ಇತಿಹಾಸ ಪ್ರಸಿದ್ಧ ಗಲಭೆ; ಹತ್ತಿ ಗಿರಣಿ ಮುಷ್ಕರ; ಪತ್ರಿಕೆ ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡಿತು. ಸರ್ಕಾರದ ಮೇಲೆ ಪ್ರಹಾರದ ಮೇಲೆ ಪ್ರಹಾರ ನಡೆಸಿತು. ವಿಶ್ವೇಶ್ವರಯ್ಯ ವಿಚಾರಣಾ ಸಮಿತಿ ವರದಿಯನ್ನು ಹೇಗೊ ಸಂಪಾದಿಸಿ, ವಿಶ್ವ ಕರ್ನಾಟಕದಲ್ಲಿ ಪ್ರಕಟಿಸಿತು. ಪತ್ರಿಕಾ ಶಾಸನದಡಿ ಪತ್ರಿಕೆಗೆ ಶಿಕ್ಷೆ. ಸಿಡಿದೆದ್ದರು ಶರ್ಮಾಜಿ. ಪ್ರಧಾನ ಲೇಖನ ಬರೆಯುತ್ತಿದ್ದ ಜಾಗೆಯಲ್ಲಿ, ಮೈಸೂರು ವೃತ್ತ ಪತ್ರಿಕಾ ಶಾಸನ ಕಡತದಿಂದ ತೊಡೆದು ಹಾಕುವವರೆಗೆ ನಾವು ಪ್ರಧಾನ ಲೇಖನವನ್ನೇ ಬರೆಯುವುದೇ ಇಲ್ಲವೆಂಬುದು ನಮ್ಮ ಸತ್ಯ ಸಂಕಲ್ಪ ವೆಂದು ಗುಡುಗಿದರು. ಕನ್ನಡ ಪತ್ರಿಕಾ ರಂಗದ ಭೀಷ್ಮರೆಂದು ಅನ್ವರ್ಥರಾದರು.

ಮೈಸೂರು ಸಂಸ್ಥಾನ, ವಿಶ್ವ ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಸಿದ್ದಕ್ಕೆ ಲೆಕ್ಕವೇ ಇಲ್ಲ. ಗಣೇಶನ ಗಲಾಟೆಕಾಲದಲ್ಲಿ 20 ದಿನ ನಿರ್ಬಂಧ; ವಿದುರಾಶ್ವತ್ಥ ಗಲಭೆ ಸಂಬಂಧದಲ್ಲಿ 1938ರಲ್ಲಿ ಮಾರ್ಚಿ-ಏಪ್ರಿಲ್ ತಿಂಗಳಲ್ಲಿ 12-13 ದಿನ ಪತ್ರಿಕೆ ಬಂದ್, ಅಲ್ಪ ಸ್ವಲ್ಪ ಜಾಹೀರಾತೂ ಖೋತಾ. 1942ರಲ್ಲಿ ಶರ್ಮಾಜಿ ಬಂಧನ. 1943ರಲ್ಲಿ ವೈಸ್ರಾಯರ ಹೆಸರಿಗೆ ಬರೆದ ಪತ್ರ ಪ್ರಕಟಣೆಯಿಂದಾಗಿ ಒಂದು ತಿಂಗಳ ನಿರ್ಬಂಧ. ಸರಕಾರಿ ವಲಯಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದ ಕಾರಣಕ್ಕೆ ಸರಕಾರ ಒಂದು ವರ್ಷಕಾಲ ಪತ್ರಿಕೆ ನಿಲ್ಲಿಸಿತು. 1946ರಲ್ಲಿ ದಿವಾನ್ ಎನ್. ಮಾಧವರಾಯರ ಗದಾ ಪ್ರಹಾರಕ್ಕೆ ವಿಶ್ವ ಕರ್ನಾಟಕ ಈಡಾಯಿತು. ಪತ್ರಿಕೆ ಪ್ರಕಟಣೆಗೆ ನಿರ್ಬಂಧ. ಒಂದು ಸಂಜೆ ಪೊಲೀಸರಿಂದ ಪತ್ರಿಕೆ ಕಾರ್ಯಾಲಯ ಮುಟ್ಟುಗೋಲು. ಮೈಸೂರು ಪತ್ರಿಕಾ ಇತಿಹಾಸದ ಮೊಟ್ಟ ಮೊದಲ ಕರಾಳಕೃತ್ಯ. 1946 ಆಗಸ್ಟ್ 21 ರಂದು ಇದನ್ನು ಪ್ರತಿಭಟಿಸಿ ಬೆಂಗಳೂರಿನ ಎಲ್ಲ ಪತ್ರಿಕೆಗಳೂ ಹರತಾಳ ಆಚರಿಸಿದವು. ಅಂದು ಸಾರ್ವಜನಿಕ ಸಭೆಯಲ್ಲಿ ಶರ್ಮರ ಸಿಂಹವಾಣಿ ಮೊಳಗಿತು-“ಮಿರ್ಜಾರವರ ದಿನವಾನಗಿರಿಯ 15 ವರ್ಷಗಳ ಅವಧಿಯಲ್ಲಿ ವಿಶ್ವಕರ್ನಾಟಕದ ಮೇಲೆ ಆಪಾದನೆಗಳು ಹೂಡಲ್ಪಟ್ಟವು. ಏನೇನು ನಡೆಯಬೇಕೋ ಅದೆಲ್ಲವೂ ನಡೆದುಹೋಯಿತು. ಆದರೆ ಒಮ್ಮೆಯೂ ಅವರು ಪತ್ರಿಕೆಯನ್ನು ನಿಲ್ಲಿಸಲಿಲ್ಲ. ಸೆಕ್ಯೂರಿಟಿ ಬೇಡಲಿಲ್ಲ. ಶ್ರೀ ಮಾಧವರಾಯರ 5 ವರ್ಷಗಳ ದಿನವಾನಗಿರಿಯಲ್ಲಿ ಪತ್ರಿಕೆ ಮೂರು ಬಾರಿ ನಿಂತಿತು. ಎರಡು ಬಾರಿ ಸೆಕ್ಯೂರಿಟಿ ಕೊಡುವ ಭಾಗ್ಯ ಪಡೆಯಿತು. ಒಮ್ಮೆ ನನ್ನ ಬಂಧನವೂ ಆಯಿತು. ಸತ್ಯವನ್ನು ನುಡಿದವರಿಗೆ ಇಲ್ಲಿ ಸ್ಥಾನವಿಲ್ಲ. ಅದನ್ನು ಕೇಳುವ ಎದೆ ಸರಕಾರಕ್ಕಿಲ್ಲ. ಸತ್ಯದ ಮಾತು ಅದಕ್ಕೆ ಬೇಕಿಲ”್ಲ. ಇದಾದ ಮೇಲೆ ಶರ್ಮರ ಪತ್ರಿಕಾ ವ್ಯವಸಾಯ ಅಂತ್ಯ ಕಂಡಿತು. ಆಮೇಲೆ, ಮಹಾಕರ್ನಾಟಕ ಎಂಬ ಪತ್ರಿಕೆ ತರುವ ಸಾಹಸ ಮಾಡಿದರು. ಶರ್ಮರ ಕಾರ್ಯಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಮಿಥಿಕ್ ಸೊಸೈಟಿಗಳಿಗೆ ಸೀಮಿತಗೊಂಡಿತು. ಶಾಸನಗಳ ಪರಿಶೋಧನೆ ಮತ್ತು ಅವುಗಳನ್ನು ಕುರಿತ ಲೇಖನಗಳು ಅವಿರತ ಅವರ ಲೇಖನಿಯಿಂದ ಮೂಡಿ ಬಂದವು. 9-12-1947ರಿಂದ 6-3-1949ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. 1943ರಲ್ಲಿ ಮೈಸೂರು ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರು. 19-9-1943ರಲ್ಲಿ ಬೆಂಗಳೂರಿನಲ್ಲಿ ನಡೆದ ಮೈಸೂರು ಸಂಸ್ಥಾನದ ಪತ್ರಿಕೋದ್ಯೋಗಿಗಳ ಎರಡನೆಯ ಸಮ್ಮೇಳನದ ಅಧ್ಯಕ್ಷರಾಗಿ ಶರ್ಮರ ಭಾಷಣ. ಪತ್ರಕರ್ತರ ಆಚಾರ ಸಂಹಿತೆ ಎಲ್ಲ ಕಾಲಕ್ಕೂ ಅನ್ವಯವಾಗುವಂಥದ್ದು “ಯಾರು ಯಾವ ಅಭಿಮಾನವನ್ನೇ ತೋರಿಸಲಿ ಪತ್ರಿಕಾಕರ್ತರು ಮಾತ್ರ ನೀತಿ ನಿರ್ಮಲರಾಗಿ ವರ್ತಿಸಬೇಕು. ಪತ್ರಿಕಾಕರ್ತರಿಗೆ ಯಾರ ಪ್ರಶಂಸೆ ಅಥವಾ ಅಪ್ರಶಂಸೆ ಪ್ರಸನ್ನತೆ ಅಥವಾ ಅಪ್ರಸನ್ನತೆ ಬೇಕಿಲ್ಲ. ಅವರು ಮಣಿಯ ಬೇಕಾದುದು ಸಾರ್ವಜನಿಕಾಭಿಪ್ರಾಯಕ್ಕೆ ಮತ್ತು ಸತ್ಯಕ್ಕೆ. ಸತ್ಯವೇ ಪತ್ರಿಕೆಗಳ ಪರಮಧರ್ಮ......”.

“ಪತ್ರಿಕಾಕರ್ತನಿಗೆ ಭಾಷಾಜ್ಞಾನ ಮಾತ್ರ ಸಾಲದು, ತಕ್ಕ ಮಟ್ಟಿಗೆ ಸಾಹಿತ್ಯ ಜ್ಞಾನವೂ ಇರಬೇಕು. ಆಗಲ್ಲವೆ ಕನ್ನಡ ರಚನೆಯ ಓದಲಿಕ್ಕೆ ಅಮೋದಕವಾಗಿರುವುದು, ಭಾವಭೂಯಿಷ್ಠವಾಗಿರುವುದು”!

ತಿರುಮಲೆತಾತಾಚರ್ಯ ಶರ್ಮರ ಗರಡಿಯಲ್ಲಿ ಕನ್ನಡದ ಉದ್ದಾಮ ಪತ್ರಕರ್ತರು ತಯಾರಾದರು. ಅರ್ಜಕವೆಂಕಟೇಶ್, ಖಾದ್ರಿಶಾಮಣ್ಣ, ಕುಮಾರ ವೆಂಕಣ್ಣ, ಮುಂತಾದವರು ಆಪೈಕಿ ಸೇರಿದ್ದಾರೆ.

ಶರ್ಮರು ಲೇಖನಗಳಿಗೆ ಕೊಡುತ್ತಿದ್ದ ಶೀರ್ಷಿಕೆಗಳೇ ಆಕರ್ಷಕ. ಮನ ಸೆಳೆಯುವ ಮನಮುಟ್ಟುವ ಶೈಲಿ. ಶರ್ಮರ ಅಗಾಧ ಪಾಂಡಿತ್ಯ ಇದಕ್ಕೆ ನೆರವಾಯಿತು. ಆದ್ದರಿಂದಲೇ ಅವರ ಬುದ್ಧಿಯ ಟಂಕಸಾಲೆಯಲ್ಲಿ ಹೊಸ ಹೊಸ ಮಾತುಗಳು, ಹೊಸ ಹೊಸ ಪ್ರಯೋಗಗಳು ದಿನದಿನವೂ ಸಿದ್ಧವಾಗುತ್ತಿದ್ದವು. ರಾಜಕೀಯಕ್ಕೆ ತಕ್ಕಂತೆ ಅವರು ಪತ್ರಿಕೆಯಲ್ಲಿ ಒಂದು ನಿಘಂಟನ್ನೂ ಪ್ರಕಟಿಸುತ್ತಿದ್ದರು. ಅವರ ಟಿಪ್ಪಣಿಗಳಲ್ಲಿ ಬರಹಗಳಲ್ಲಿ ಕಾಣುವ ಚಾರಿತ್ರಿಕ ಪರಿಜ್ಞಾನ, ಎಲ್ಲ ಪ್ರಶ್ನೆಗಳನ್ನೂ ಸಮಕಾಲೀನ ದೃಷ್ಟಿಯಿಂದ ಮಾತ್ರವಲ್ಲದೆ ಚಾರಿತ್ರಿಕ ದೃಷ್ಟಿಯಿಂದ ವಿಶ್ಲೇಷಿಸುವುದು, ಆಗುತ್ತಿರುವ ಅನ್ಯಾಯದ ಕ್ರೌರ್ಯವನ್ನು ಎತ್ತಿತೋರಿಸುವ ಕಲೆ ಕರಗತವಾಗಿತ್ತು. ಪುರಾಣೇತಿಹಾಸಗಳಲ್ಲಿ ಬರುವ ಪಾತ್ರಗಳನ್ನು ಪ್ರಕರಣಗಳನ್ನು ಇಂದಿನ ಘಟನೆಗಳಿಗೆ ಅನ್ವಯಿಸಿ ಹೇಳುತ್ತಿದ್ದ ಸೊಗಸು ಅವರ ಬರವಣಿಗೆಯ ಮೊನಚನ್ನು ಹೆಚ್ಚಿಸಿತು.

ಡಿ.ವಿ.ಜಿ. ನಿಲ್ಲಿಸಿದ ಸ್ಥಳದಿಂದ ಶರ್ಮಾಜಿ ಪತ್ರಿಕಾ ವೃತ್ತಿ ಮುಂದುವರೆಸಿ, ಒಬ್ಬ ಧೀರ ಮಾಡಬಹುದಾದ ಅತಿ ದೊಡ್ಡ ಕೆಲಸವನ್ನು ದೇಶಹಿತದೃಷ್ಟಿಯಿಂದ ಮಾಡಿದರು. ಕನ್ನಡ ಪತ್ರಿಕಾ ರಂಗದಲ್ಲಿ ಶಾಶ್ವತ ಸ್ಥಾನ ಪಡೆದರು. 1973ರ ಅಕ್ಟೋಬರ್ 20 ರಂದು ನಮ್ಮನಗಲಿದರು.

ತಿರುಮಲೆ ತಾತಾಚರ್ಯ ಶರ್ಮ ಪತ್ರಿಕಾ ವ್ಯವಸಾಯದ ಜತೆಗೆ ಅಮೂಲ್ಯ ಕೃತಿ ರಚನಾಕಾರರೂ ಹೌದು. ಆದುದರಿಂದಲೇ 1948ರಲ್ಲಿ ಅವರಿಗೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪದವಿ.

ಅವರ ಕೃತಿಗಳು: ರಾಮರಾಯನ ಬಖೈರು, ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಹೈದರ್‍ನಾಮೆ, ವಿಶ್ರಾಂತ ಭಾರತ, ವಿಚಾರ ಕರ್ನಾಟಕ, ಮೋಕ್ಷ ಗುಂಡಂ ವಿಶ್ವೇಶ್ವರಯ್ಯ, ಮಾಸ್ತಿಯವರ ಮನೋಧರ್ಮ, ಜ್ಯೂಲಿಯಸ್ ಸೀಸರ್, ಕರ್ಮಫಲ, ರಾಷ್ಟ್ರೀಯ ಕರ್ಮ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯ, ಅಶೋಕಚಕ್ರವರ್ತಿ, ಸುಭಾಸ್ ಚಂದ್ರಬೋಸ್, ನೋಡುವ ಬೀಡುಗಳು, ಗಲಿವರನ ದೇಶ ಸಂಚಾರ, ಅಕ್ಬರ್, ಶಾಸನಗಳಲ್ಲಿ ಕಂಡು ಬರುವ ಕನ್ನಡ ಕವಿಗಳು, ಕರ್ನಾಟಕ ಕೈಪಿಡಿ, ಕರ್ನಾಟಕ ಸ್ವಾತಂತ್ರ್ಯೇತಿಹಾಸ.

1941ರ ಸಮಯ ವಿಶ್ವಯುದ್ಧದ ದಳ್ಳುರಿ ಭಾರತದಲ್ಲಿ ಉದ್ವೇಗ, ಬೇಗೆ. ಅಂತಹ ಪರ್ವಕಾಲದಲ್ಲಿ ತಿರುಮಲೆ ತಾತಾಚರ್ಯ ಶರ್ಮ ಕಾಯಿಲೆಯಾಗಿ ಮಲಗಿದರು. ಸಾಲ ಏರಿತು. ವಿಶ್ವಕರ್ನಾಟಕ ನಿಲ್ಲುವ ಸ್ಥಿತಿಬಂತು. ಆಗ ನೆರವಿಗೆ ಒದಗಿ ಬಂದವರು ಸಿದ್ದವನ ಹಳ್ಳಿ ಕೃಷ್ಣಶರ್ಮ. ಹೈದರಾಬಾದಿನಿಂದ ಅಲ್ಲಿ ಹೋರಾಟದ ಕಿಚ್ಚು ಹಚ್ಚಿಸಿ, ಗಡೀಪಾರಾಗಿ ಬಂದ ವಾಮನ ವ್ಯಕ್ತಿ. ಇಬ್ಬರು ಶರ್ಮರೂ ಬಂಧುಗಳು ಮಾತ್ರವಲ್ಲ, ಸಹಭಾವನೆಯವರು, ನುಡಿಜಾಣರು; ಇಬ್ಬರೂ ಮಾತಿನ ಮಲ್ಲರು. ಗಾಂಧೀಜಿಯವರನ್ನು ತಮ್ಮಲ್ಲಿ ತುಂಬಿಕೊಂಡವರು. ಸಾಮ್ಯದ ಜತೆಗೆ ಭಿನ್ನತೆಯೂ ಕೂಡ. ತಿರುಮಲೆ ತಾತಾಚಾರ್ಯ ಶರ್ಮ ಹೊರಗೆ, ವಿಪ್ಲವ ಮೂರ್ತಿ, ಒಳಗೆ, ಶಾಂತಮೂರ್ತಿ, ಕೃಷ್ಣಶರ್ಮ ಹೊರಗೆ, ಸೌಮ್ಯ ಮೂರ್ತಿ, ಒಳಗೆ ಕ್ರಾಂತಿ ಮೂರ್ತಿ, ಹಿರಿಯ ಶರ್ಮರ ಮಾತು ಜೋರು, ಕೆಲವೊಮ್ಮೆ ಕಟು. ಕೃಷ್ಣಶರ್ಮರದು ನಯ. ಒಬ್ಬರು ಸಿಡಿಲು, ಇನ್ನೊಬ್ಬರು ಮಿಂಚು. ವಿಶ್ವ ಕರ್ನಾಟಕದ ಜೀವ ತಿರುಮಲೆ ತಾತಾಚರ್ಯ ಶರ್ಮ, ಅದರ ಜೀವಾಳ ಕೃಷ್ಣ ಶರ್ಮ. ಇಬ್ಬರೂ ಸೇರಿ ನೆಹರೂ ಅವರ ಗ್ಲಿಂಪ್ಸಸ್ ಆಫ್ ವಲ್ರ್ಡ್ ಹಿಸ್ಟರಿಯನ್ನು ಕನ್ನಡಕ್ಕೆ ಜಗತ್ಕಾಥವಲ್ಲರಿಯಾಗಿಕೊಟ್ಟರು. ಇವರಿಬ್ಬರ ಜೋಡಿ ಕನ್ನಡ ಪತ್ರಿಕೋದ್ಯಮಕ್ಕೆ ಅನುಪಮ ಕೊಡುಗೆ. (ಕೆ.ಎಸ್.ಅಚ್ಯುತನ್)