ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೆಲುಗೇಶ ಮಸಣಯ್ಯ

ವಿಕಿಸೋರ್ಸ್ದಿಂದ

ತೆಲುಗೇಶ ಮಸಣಯ್ಯ - ಸು. 1160. ಬಸವಣ್ಣನವರ ಸಮಕಾಲೀನನಾದ ಒಬ್ಬ ವಚನಕಾರ. ತೆಲುಗೇಶ್ವರ ಅಥವಾ ಶಂಭು ತೆಲುಗೇಶ್ವರ ಎಂಬುದು ಈತನ ವಚನಾಂಕಿತ. ಸದ್ಯಕ್ಕೆ ನಾಲ್ಕು ವಚನಗಳು ಮಾತ್ರ ದೊರೆತಿವೆ. ಇವನು ಆಂಧ್ರದೇಶ ಲಿಂಗಪಲ್ಲಿಯವನೆಂದೂ ಗೋವನ್ನು ಕಾಯುವ ಕಾಯಕದವನೆಂದೂ ಹೇಳಲಾಗಿದೆ. ಎಸೆವ ಸರ್ವಾಂಗದೊಳ್ ಮಿಸುಪ ಲಿಂಗಗಳ ವಶಮಾಡಿದನು ತೆಲುಗೇಶಾ ಮಸಣಯ್ಯ ಎಂದು ನಂಜುಂಡದೇವ ಕವಿಯ ಭೈರವೇಶ್ವರ ಕಾವ್ಯದಲ್ಲಿ ವರ್ಣಿಸಲಾಗಿದೆ.

ಈತ ಮೊದಲು ಬೇಟೆಯಾಡುವ ಕಾಯಕದಿಂದಿದ್ದು. ಮೊದಲು ಸಿಕ್ಕ ಮೃಗವನ್ನು ಶಿವನಿಗರ್ಪಿಸುವ ನೇಮದಿಂದಿದ್ದನೆಂದೂ ಒಂದು ಸಲ ಚಿನ್ನದ ಮೃಗ ಸಿಕ್ಕಿ ಅದನ್ನು ಬಿಡಲು, ಮತ್ತೆ ಮತ್ತೆ ಅದೇ ದೊರೆಯಲು ಕೋಪದಿಂದ ತನ್ನ ಕಾಯಕಕ್ಕೆ ಬೇಸರಪಟ್ಟನೆಂದೂ ಆಗ ಹರಕರುಣವಾಯಿತೆಂದೂ ಹೇಳಲಾಗಿದೆ. ವೀರ ಶೈವವನ್ನು ಸ್ವೀಕರಿಸಿದ ತೆಲುಗೇಶ ಅಂದಿನಿಂದ ಶಿವಭಕ್ತರ ದನಗಳನ್ನು ಕಾಯುವ ಕಾಯಕವನ್ನು ಕೈಕೊಂಡ.

ಪಾಲ್ಕುರಿಕೆ ಸೋಮನಾಥ ಈತನನ್ನು ತನ್ನ ಸಹಸ್ರಗಣನಾಮದಲ್ಲಿ ಸೇರಿಸಿದ್ದಾನೆ. ಹಳದಿಯ ಸೀರೆಯನ್ನುಟ್ಟು, ಬಳಹದೋಲೆ ಕಿವಿಯಲ್ಲಿ, ಮೊಳೆಯ ಡಂಗೆಯ ಪಿಡಿದು, ಗುರುಗಂಜಿ ಕಟ್ಟಿ, ತುತ್ತು¾ು ತು¾ು ಎಂದು ಬಾರಿಸುತ್ತ, ಅಪಳ ಚಪಳನೆಂಬ ಉಲಿವ ಘಂಟೆಯ ಕಟ್ಟಿ ತುತ್ತು¾ು ಜಂಗುಳಿ ದೈವಗಳನೆಲ್ಲವ ಹಿಂಡುಮಾಡಿ ಕಾವ ನಮ್ಮ ಶುಂಭು ತೆಲುಗೇಶ್ವರನ ಮನೆಯ ಗೋವಳನೀತ - ಎಂಬುದು ಈತನ ವಚನಗಳಲ್ಲೊಂದಾಗಿದೆ.

ಸು. 1160 ರಲ್ಲಿದ್ದ ತೆಲುಗು ಜೊಮ್ಮಯ್ಯನ ಅಂಕಿತ ತೆಲುಗೇಶ್ವರ ಎಂದು ಕವಿಚರಿತೆಕಾರರು ಹೇಳಿದ್ದಾರೆ. ಆದರೆ ತೆಲುಗು ಚೊಮ್ಮಯ್ಯ ಮತ್ತು ತೆಲುಗೇಶ ಮಸಣಯ್ಯ ಬೇರೆ ಬೇರೆಯವರಾಗಿದ್ದಾರೆ. (ಎಸ್.ಬಿ.ಎಸ್)