ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಶಾವತಾರಗಳು

ವಿಕಿಸೋರ್ಸ್ದಿಂದ

ದಶಾವತಾರಗಳು- ಅವತಾರ ಎಂದರೆ ಇಳಿದುಬರುವುದು ಎಂದರ್ಥ. ಇದು ಭಗವಂತ ಜೀವಕೋಟಿಯ ಉದ್ಧಾರಕ್ಕೆ ಕೈಕೊಳ್ಳುವ ಒಂದು ಕ್ರಿಯೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಯಾವುದೋ ಒಂದು ರೂಪದಲ್ಲಿ ಧರೆಗೆ ಇಳಿದುಬರುತ್ತಾನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶವನ್ನು ಸೂಚಿಸುತ್ತದೆ. ಈ ಅವತಾರಗಳ ಸಂಖ್ಯೆಯ ವಿಚಾರದಲ್ಲಿ ಒಮ್ಮತವಿಲ್ಲ. ಅಲ್ಲದೆ ಅವತಾರಗಳು ವಿಷ್ಣುವಿಗೇ ಮೀಸಲಾದವಲ್ಲ. ಶಿವನೂ ಅವತಾರ ಮಾಡಿದ್ದಾನೆ ಎಂಬುದನ್ನೂ ಮರೆಯುವಂತಿಲ್ಲ. ಮಹೇಶ್ವರ ಇಪ್ಪತ್ತೆಂಟು ಅವತಾರಗಳನ್ನು ಎತ್ತಿದ್ದಾನೆ ಎಂದು ವಾಯುಪುರಾಣ ಹೇಳುತ್ತದೆ.

ಹಿಂದೂ ಸಂಪ್ರದಾಯ ವಿಷ್ಣುವಿನ ಅವತಾರಗಳ ಸಂಖ್ಯೆ ಹತ್ತು ಎಂದು ನಂಬಿದೆ. ಹಿಂದೆ ಸಹಸ್ರಾರು ಆಗಿದ್ದವೆಂದೂ ಭವಿಷ್ಯದಲ್ಲಿ ಅನೇಕ ಸಹಸ್ರ ಅವತಾರಗಳು ಆಗುತ್ತವೆ ಎಂದೂ ಹರಿವಂಶದಲ್ಲಿ ಹೇಳಿದೆ. ಪೂರ್ವಮೀಮಾಂಸಾಚಾರ್ಯರಾದ ಕುಮಾರಿಲಭಟ್ಟರು ದಶಾವತಾರಗಳಲ್ಲೊಂದಾದ ಬುದ್ಧಾವತಾರವನ್ನು ವಿಷ್ಣುವಿನದೆಂಬುದನ್ನು ಒಪ್ಪುವುದಿಲ್ಲ. ವಿಷ್ಣುವಿನ ಪ್ರಸಿದ್ಧ ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ-ಇವುಗಳ ವಿವರಗಳು ಆಯಾ ಶೀರ್ಷಿಕೆಗಳಡಿ ಬಂದಿವೆ. (ಕೆ.ಬಿ.ಆರ್.)