ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಂಡಿಗ

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಿಂಡಿಗ ಕಾಂಬ್ರಿಟೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಅನೋಜೀಸಸ್ ಲ್ಯಾಟಿಪೋಲಿಯ ಇದರ ಶಾಸ್ತ್ರೀಯ ನಾಮ. ಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ಆಕ್ಸ್‍ಲ್‍ವುಡ್ ಎಂಬ ಹೆಸರುಂಟು.

ಆಸ್ಸಾಮ್ ಉಳಿದು ಭಾರತಾದ್ಯಂತ ಕಾಣಬರುವ ಈ ಮರ ಭಾರತದ ಒಣಪರ್ಣಪಾತಿ ಕಾಡುಗಳಲ್ಲಿನ ಮುಖ್ಯಬಗೆಯ ಮರಗಳಲ್ಲಿ ಒಂದೆನಿಸಿದೆ. ಭಾರತದ ದಕ್ಷಿಣ ತುದಿಯಿಂದ ಹಿಡಿದು ಹಿಮಾಲಯದ ತಪ್ಪಲಿನ ಪ್ರದೇಶಗಳ ವರೆಗೆ ಸುಮಾರು 1400 ಮೀ. ಎತ್ತರದ ವರೆಗಿನ ನೆಲೆಗಳಲ್ಲಿ ಇದು ಬೆಳೆಯುತ್ತದೆ. ಮೆಕ್ಕಲು ಮಣ್ಣಿನ ಭೂಮಿಯಲ್ಲಿ ಇದು ಹುಲುಸಾಗಿ ಬೆಳೆಯುವುದು. ದಿಂಡಿಗ ಸುಮಾರು 20ಮೀ. ಎತ್ತರಕ್ಕೆ ಬೆಳೆಯುತ್ತದೆ. ಮುಖ್ಯ ಕಾಂಡ ನೇರವಾಗಿದೆ. ಮರದ ಆಕಾರ ಗುಂಡಗೆ. ಕಿರುರೆಂಬೆಗಳು ನೇತುಬಿದ್ದಂತೆ ಇವೆ. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಬಿಳಿ ಮಿಶ್ರಿತ ಬೂದುಬಣ್ಣದ್ದಾಗಿಯೂ ಇವೆ. ಫೆಬ್ರುವರಿ ವೇಳೆಗೆ ಎಲೆಗಳೆಲ್ಲ ಕೆಂಪಡರಿ ಉದುರಿ ಹೋಗುವುವು. ಮತ್ತೆ ಚಿಗುರೊಡೆಯುವುದು ಏಪ್ರಿಲ್-ಮೇ ಕಾಲ್ಕಕೆ. ಸೆಪ್ಟೆಂಬರ್ - ಜನವರಿ ತಿಂಗಳುಗಳ ಅವಧಿಯಲ್ಲಿ ಹೂಗಳು ಅರಳುವುವು.

ದಿಂಡಿಗವನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಆದರೆ ಬೀಜಗಳು ಸಾಮಾನ್ಯವಾಗಿ ಬರಡು ಬಗೆಯವಾದ್ದರಿಂದ ಮೊಳಕೆಯೊಡೆಯುವುದೇ ಇಲ್ಲ. ಹಲವಾರು ವರ್ಷಗಳ ಕಾಲ ಶುಷ್ಕ ಹವೆಗೆ ತುತ್ತಾದ ಮರಗಳಲ್ಲಿ ಮಾತ್ರ ಫಲವಂತಿ ಬೀಜಗಳು ಹುಟ್ಟುವುವು. ದಿಂಡಿಗವನ್ನು ಕತ್ತರಿಸಿದರೆ ಬಲುಬೇಗ ಚಿಗುರುತ್ತದೆ. ಅಲ್ಲದೆ ಇದರಲ್ಲಿ ಬೇರುಸಸಿಗಳು ಹುಟ್ಟುವುದೂ ಅಧಿಕ. ದಿಂಡಿಗದ ಎಲೆ ಹಾಗೂ ಎಳೆರೆಂಬೆಗಳಲ್ಲಿ ಗಣನೀಯ ಮೊತ್ತದಲ್ಲಿ ಟ್ಯಾನಿನ್ ಉಂಟು. ಇದರಿಂದ ಚರ್ಮ ಹದಗಾರಿಕೆಯಲ್ಲಿ ಇದನ್ನು ಬಳಸಬಹುದು. ಆದರೆ ಎಲೆಗಳನ್ನು ನೆರಳಿನಲ್ಲಿ ಒಣಗಿಸಿದರೆ ಬಲುಬೇಗ ಹುದುಗುವಿಕೆಗೆ ಬಳಗಾಗುವುದರಿಂದಲೂ ಬಿಸಿಲಿನಲ್ಲಿ ಒಣಗಿಸಿದರೆ ಟ್ಯಾನಿನ್ ಅಂಶ ಕಡಿಮೆಯಾಗುವುದರಿಂದಲೂ ಅಷ್ಟಾಗಿ ಬಳಕೆಯಲ್ಲಿಲ್ಲ. ದಿಂಡಿಗದ ಮರದಿಂದ ಗೊಬ್ಬಳಿ ಅಂಟಿನಂಥ ಗೋಂದನ್ನು ಪಡೆಯಲಾಗುತ್ತದೆ. ಈ ಗೋಂದು ನೀರಿನಲ್ಲಿ ಭಾಗಶ: ಲೀನವಾಗುತ್ತದೆ. ಕ್ಯಾಲಿಕೊಮುದ್ರಣ ಮತ್ತು ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ದಿಂಡಿಗದ ಚೌಬೀನೆ ಭಾರವಾದ್ದೂ ನಯರಚನೆಯುಳ್ಳದ್ದೂ ಆಗಿದೆ. ಇದರ ಬಣ್ಣ ಬೂದು ಇಲ್ಲವೇ ಹಳದಿಮಿಶ್ರಿತ ಬೂದು. ಇದನ್ನು ವ್ಯವಸಾಯದ ಉಪಕರಣಗಳು, ಕೈಹಿಡಿಗಳು, ಪೀಠೋಪಕರಣಗಳು, ದೋಣಿ ಮುಂತಾದ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ. ಇದು ಒಳ್ಳೆಯ ಉರುವಲೂ ಹೌದು. ಅಲ್ಲದೆ ಇದರಿಂದ ಒಳ್ಳೆಯ ಬಗೆಯ ಇದ್ದಲನ್ನು ಪಡೆಯಬಹುದು. (ಎ.ಕೆ.ಎಸ್.; ಎ.ಕೆ.ಕೆ.)