ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಡ್ಡಾ

ವಿಕಿಸೋರ್ಸ್ ಇಂದ
Jump to navigation Jump to search

ದಿಡ್ಡಾ ಕಾಶ್ಮೀರದ ರಾಣಿ. ದೊರೆ ಕ್ಷೇಮಗುಪ್ತನ ಪತ್ನಿ. ಲೋಹಾರದ ದೊರೆ ಸಿಂಹರಾಜನ ಮಗಳು. ತನ್ನ ತಂದೆಯಿಂದ ರಾಜಕೀಯದಲ್ಲಿ ಒಳ್ಳೆ ಕೌಶಲ ಪಡೆದಿದ್ದಳು. ಸೂಕ್ಷ್ಮಮತಿಯಾಗಿದ್ದ ದಿಡ್ಡಾ 10ನೆಯ ಶತಮಾನದ ಉತ್ತರಾರ್ಧದ ಕಾಶ್ಮೀರದ ರಾಜಕೀಯದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದಳು. ಪತಿಯಾದ ಕ್ಷೇಮಗುಪ್ತನ ಮೇಲೆ ಅವಳ ಪ್ರಭಾವ ಎಷ್ಟು ಮಟ್ಟಿಗೆ ಇತ್ತೆಂದರೆ ಜನರು ಅವನನ್ನು ದಿಡ್ಡಾಕ್ಷೇಮ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.

ಕ್ಷೇಮಗುಪ್ತ ಎಂಟು ವರ್ಷಗಳ ಕಾಲ ರಾಜ್ಯವಾಳಿ ಕಾಲವಾದ. ಅವನ ಮಗ ಅಭಿಮನ್ಯು ಪ್ರಾಪ್ತವಯಸ್ಕನಾಗಿರಲಿಲ್ಲ. ರಾಣಿಯೇ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಲಾರಂಭಿಸಿದಳು. ಅಲ್ಲದೆ ರಾಜನ ಅಧಿಕಾರವನ್ನೆಲ್ಲ ತಾನೇ ವಹಿಸಿಕೊಂಡು ಅದಕ್ಕೆ ವಿರೋಧಿಗಳೆಂದು ಕಂಡಬಂದವರನ್ನೆಲ್ಲ ನಿರ್ದಯೆಯಿಂದ ಕೊನೆಗೊಳಿಸಿದ್ದಳು. ಪ್ರಧಾನಮಂತ್ರಿ ಫಲ್ಗುಣನೊಂದಿಗೆ ಜಗಳವಾಡಿ ಅವನನ್ನು ಅಧಿಕಾರದಿಂದ ತೆಗೆದುಹಾಕಿದಳು. ಯಶೋಧರನ ನೇತೃತ್ವದಲ್ಲಿ ಎದ್ದಿದ್ದ ದಂಗೆಯನ್ನು ಅಡಗಿಸಿ ಅದರಲ್ಲಿ ಪಾಲ್ಗೊಂಡಿದ್ದ ಕೆಲವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಕೊಟ್ಟು ಅವರನ್ನು ತನ್ನ ಕಡೆಗೆ ಒಲಿಸಿಕೊಂಡಳು. ಯಶೋಧರನನ್ನು ತನ್ನ ದಂಡನಾಯಕನನ್ನಾಗಿ ಮಾಡಿಕೊಂಡಲೂ. ಆದರೆ ಅವನು ಸ್ವಲ್ಪ ಕಾಲದಲ್ಲೇ ಅವಳ ಅವಿಶ್ವಾಸಕ್ಕೇ ಪಾತ್ರನಾದ. ರಾಣಿ ಅವನನ್ನು ಅಧಿಕಾರದಿಂದ ತೆಗೆದುಹಾಕಿದಳು. ಯಶೋಧರನ ಅನುಯಾಯಿಗಳು ಪುನಃ ದಂಗೆಯೆದ್ದು ಅರಮನೆಗೆ ಮುತ್ತಿಗೆ ಹಾಕಿದರು. ರಾಣಿ ದಿಡ್ಡಾ ತನ್ನ ನಿಷ್ಠಾವಂತ ಸಚಿವ ನರವಾಹನ ಮತ್ತು ಇತರ ಅಧಿಕಾರಿಗಳ ಸಹಾಯದಿಂದ ಪರಿಸ್ಥಿತಿಯನ್ನು ಹತೋಟಿಗೆ ಒಳಪಡಿಸಿದಳು. ಸ್ವಲ್ಪ ದಿವಸಗಳಲ್ಲೇ ಇತರರ ಮಾತಿಗೆ ಕಿವಿಕೊಟ್ಟು ನರವಾಹನನ್ನು ನಿವೃತ್ತಿಗೊಳಿಸಿದಳು. ಅವನು ಈ ಅವಮಾನ ಸಹಿಸಲಾರದೆ ಪ್ರಾಣಹತ್ಯೆ ಮಾಡಿಕೊಂಡ. ದಂಡನಾಯಕ ರಖ್ಖ ಎಂಬುವನ ಸಾವಿನಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ರಾಣಿ ದಿಡ್ಡಾ ಫಲ್ಗುಣನನ್ನು ಹಿಂದಕ್ಕೆ ಕರೆಸಿಕೊಂಡು ಅವನನ್ನು ಸೈನ್ಯದ ದಂಡನಾಯಕನನ್ನಾಗಿ ನೇಮಿಸಿದಳು.

ರಾಜ ಅಭಿಮನ್ಯು ಹದಿನಾಲ್ಕು ವರ್ಷಗಳ ಕಾಲ ಸಿಂಹಾಸನದಲ್ಲಿ ಕುಳಿತಿದ್ದ. 972ರಲ್ಲಿ ಆತ ಕಾಲವಾದ. ಅಭಿಮನ್ಯುವಿನ ಮರಣದಿಂದ ದುಖಃತಪ್ತಳಾದ ರಾಣಿ ಪ್ರಾರ್ಥನೆಯಲ್ಲೂ ಧರ್ಮಕಾರ್ಯದಲ್ಲೂ ನಿರತಳಾದಳು. ಅವಳು ಅಭಿಮನ್ಯು ಸ್ವಾಮಿ ಮತ್ತು ವಿಷ್ಣು ದೇವಾಲಯಗಳನ್ನು ಕಟ್ಟಿಸಿದಳು. ಹೊಸ ಪಟ್ಟಣವನ್ನು ನಿರ್ಮಿಸಿದಳು. ಶ್ರೀನಗರದ ವಿಸ್ತøತ ಮೊಹಲ್ಲಕ್ಕೆ ಅವಳ ಹೆಸರನ್ನು ಇಡಲಾಗಿದೆ. ದಿಡ್ಡಿ ಮಾರ್ ಎಂದು ಅದನ್ನು ಕರೆಯಲಾಗುತ್ತಿದೆ.

ಆದರೆ ಆಕೆಯ ಮಾನಸಿಕ ಪರಿವರ್ತನೆ ಅಲ್ಪಕಾಲಿಕವಾದ್ದಾಗಿತ್ತು. 980ರಲ್ಲಿ ಅವಳೇ ಸಿಂಹಾಸನವನ್ನೇರಿ ನಿರಂಕುಶಳಾಗಿ ಆಡಳಿತ ಮಾಡಲಾರಂಭಿಸಿದಳು. ಸುಮಾರು ಇಪ್ಪತೈದು ವರ್ಷಗಳ ಕಾಲದ ಅವಳ ಆಳ್ವಿಕೆ, ರಾಜಕೀಯ ಒಳಸಂಚು, ಕೊಲೆ, ಗಡಿಪಾರು ಮುಂತಾದವುಗಳಿಂದ ಕೂಡಿತ್ತು. ಅವಳು ತುಂಗ ಎಂಬುವನಿಗೆ ಅನುಗ್ರಹ ತೋರಿಸಿ ಅವನನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿಕೊಂಡಳು. ಇದರಿಂದ ಜನರಲ್ಲಿ ತೀವ್ರ ಅಸಮಾಧಾನ ಉಂಟಾಯಿತು. ಆಸ್ಥಾನಿಕರೂ ಪ್ರಜೆಗಳೂ ದಂಗೆಯೆದ್ದರು. ಆಕೆ ನಾನಾ ಉಪಾಯಗಳಿಂದ ತನ್ನ ವಿರೋಧಗಳನ್ನೆಲ್ಲ ಅಡಗಿಸಿದಳು. ರಾಣಿ ದಿಡ್ಡಾ 1003ರಲ್ಲಿ ಕಾಲವಾದಳು. ಅನಂತರ ಸಿಂಹಾಸನ ಲಾಹೋರಿನ ಉದಯರಾಜನ ಮಗ ಸಂಗ್ರಾಮ ರಾಜನ ಕೈಗೆ ಹೋಯಿತು.

ರಾಣಿ ದಿಡ್ಡಾಳ ಸ್ವಭಾವದಲ್ಲಿ ಎಷ್ಟೇ ಲೋಪದೋಚಗಳಿದ್ದರೂ ಕಾಶ್ಮೀರವನ್ನಾಳಿದ ಸಮರ್ಥ ದೊರೆಗಳ ಸಾಲಿನಲ್ಲಿ ಅವಳಿಗೂ ಸ್ಥಾನವಿದೆ. ಲಂಚ, ಅನುಗ್ರಹ, ದಮನ ಮುಂತಾದ ಉಪಾಯಗಳಿಂದ ವಿರೋಧವನ್ನು ಅಡಗಿಸಿ ಅಧಿಕಾರವನ್ನು ಭದ್ರಪಡಿಸಿಕೊಂಡಿದ್ದ ಅವಳು ಉತ್ಕಟ ಸನ್ನಿವೇಶದಲ್ಲಿ ಆಡಳಿತ ಸೂತ್ರವನ್ನು ಹಿಡಿದು ರಾಜ್ಯವನ್ನು ರಕ್ಷಿಸಿದಳು. (ಆರ್.ಜಿ.ಎಸ್.)