ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿವ್ಯಾವದಾನ

ವಿಕಿಸೋರ್ಸ್ದಿಂದ

ದಿವ್ಯಾವದಾನ ಧರ್ಮ, ನೀತಿ ಮತ್ತು ಸಂಯಮಗಳ ಹಿರಿಮೆಯನ್ನು ಪ್ರತಿಪಾದಿಸುವ ಬೌದ್ಧ ಅವದಾನ ವಾಙ್ಮಯದಲ್ಲಿ ಗಣ್ಯಕೃತಿ. ಬುದ್ಧನೇ ಹೇಳಿದ, ಅಥವಾ ಬುದ್ಧನ ಸಮಕಾಲೀನ ಘಟನೆಗಳಿಗೆ ಬುದ್ಧನೇ ನೀಡಿದ ವಿವರಣೆಗಳನ್ನೊಳಗೊಂಡ ಮೂವತ್ತೆಂಟು ಅವಧಾನಗಳು ಇಲ್ಲಿ ಸಂಕಲಿತವಾಗಿವೆ. ಈ ಅವದಾನಗಳ ಭಾಷೆ, ನಿರೂಪಣೆ ಮೊದಲಾದವುಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಗಮನಿಸಿದರೆ ಈ ಎಲ್ಲವೂ ಏಕಕರ್ತೃಕವಲ್ಲವೆಂಬುದು ಸ್ಫುಟವಾಗುತ್ತದೆ. ಮೂವತ್ಮೂರನೆಯ ಅವದಾನವೊಂದನ್ನು ಬಿಟ್ಟು ಉಳಿದ ಯಾವೆಡೆಯಲ್ಲಿಯೂ ಅವಲೋಕಿತೇಶ್ವರ, ಮಂಜುಶ್ರೀ, ಓಂಮಣಿ ಪದ್ಮೇಹಂ ಇವುಗಳ ಉಲೇಖವಿಲ್ಲದಿರುವ ಅಂಶ ಇವುಗಳ ಕಾಲದ ಬಗ್ಗೆ ಬೆಳಕು ಚೆಲ್ಲುವುದಾಗಿದೆ. ಪಿಟಕಗಳು ರೂಪುಗೊಂಡ ಸಮೀಪಕಾಲದಲ್ಲೇ ಇವು ರೂಪುಗೊಂಡಿರುವುದು ಸ್ಪಷ್ಟವಾಗುತ್ತದೆ.

ಇಲ್ಲಿನ ಅನೇಕ ಕಥೆಗಳು ಒಂದಲ್ಲ ಒಂದು ಬಗೆಯಲ್ಲಿ ನೀತಿಸಂಯಮಗಳನ್ನು ಪ್ರತಿಪಾದಿಸುವುದರಿಂದ ಇವು ವಿನಯಪಿಟಕಕ್ಕೆ ಸಂಬಂಧಿಸಿದವುಗಳಾಗಿವೆ. ಇಲ್ಲಿನ ಬಹುಪಾಲು ಕಥೆಗಳು ಮೂಲ ಸರ್ವಾಸ್ತಿವಾದಿಗಳ ವಿನಯಪಿಟಕದಿಂದ ಸಂಕಲಿತವಾದುವೆಂದು ಎಸ್. ಲೆವಿ ಸಮರ್ಥಿಸಿದ್ದಾನೆ. ಆದರೆ ಇಲ್ಲಿನ ಯಾವ ಕಥೆಯೂ ಪಾಲೀಮೂಲದಿಂದ ಅನುವಾದಿತವಲ್ಲವೆಂಬುದೂ ಗಮನಾರ್ಹವಾಗಿದೆ. ಸ್ವತಂತ್ರಮೂಲದಿಂದ ಬೆಳೆದುಬಂದಿರಬಹುದಾದ ಈ ಕಥೆಗಳು ಒಂದು ಕಾಲದಲ್ಲಿ ವಿಶಾಲಸಾಹಿತ್ಯವಾಗಿದ್ದು, ಅಜಾಗರೂಕತೆಯಿಂದ ವಿನಷ್ಟವಾದ ಆ ಸಾಹಿತ್ಯದ ತುಣುಕುಗಳಂತೆ ತೋರುತ್ತದೆ.

1) ಕೋಟಿಕರ್ಣಾವದಾನ 2) ಪೂರ್ಣಾವದಾನ 3) ಮೈತ್ರೇಯಾವ ದಾನ 4) ಬ್ರಾಹ್ಮಣದಾರಿಕಾವದಾನ 5) ಸ್ತುತಿಬ್ರಾಹ್ಮಣಾವದಾನ 6) ಇಂದ್ರಬ್ರಾಹ್ಮಣಾವದಾನ 7) ನಾಗರಲಂಬಿಕಾವದಾನ 8) ಸುಪ್ರಿಯಾವದಾನ 9) ಮೇಂಢಕಾವದಾನ 10) ಮೇಂಢಕಾವದಾನ 11) ಅಶೋಕವರ್ಣಾವದಾನ 12) ಪ್ರಾತಿಹಾರ್ಯಸೂತ್ರಾವದಾನ 13) ಸ್ವಾಗತಾವದಾನ 14) ಸೂಕರಿಕಾವದಾನ 15) ಅನ್ಯತಮಭಿಕ್ತ್ವವದಾನ 16) ಶುಕಪೋತಕಾವದಾನ 17) ಮಾಂಧಾತಾವದಾನ 18) ಧರ್ಮರುಚ್ಯವದಾನ 19) ಜ್ಯೋತಿಷ್ಕಾವದಾನ 20) ಕನಕವರ್ಣಾವದಾನ 21) ಸಹಸೋದ್ಗತಾವದಾನ 22) ಚಂದ್ರ ಪ್ರಭಾವದಾನ 23) ಸಂಘರಕ್ಷಿತಾವದಾನ 24) ಪಾಂಶುಪದರಧಾನಾವದಾನ 27) ಕುಣಾಲಾವದಾನ 28) ವೀತಶೋಕಾವದಾನ 29) ಅಶೋಕಾವದಾನ 30) ಸುಧನಕುಮಾರಾವದಾನ 31) ಸುಧನ ಕುಮಾರಾವದಾನ 32) ರೂಪಾವತ್ಯವದಾನ 33) ಶಾರ್ದೂಲಕರ್ಣಾವದಾನ 34) ದಾನಾಧಿಕಾರ ಮಹಾಯಾನ ಸೂತ್ರಾವದಾನ 35) ಚೂಡಾಪಕ್ಷಾವದಾನ 36) ಮಾಕಂದಿಕಾವದಾನ 37) ರುದ್ರಾಯಣಾವದಾನ 38) ಮೈತ್ರಕನ್ಯಕಾವದಾನ - ಇವು ಇಲ್ಲಿ ಅನುಕ್ರಮವಾಗಿ ಸಂಕಲಿತವಾಗಿರುವ ಅವದಾನಗಳು. ಓಂ ನಮಃ ಸರ್ವಬುದ್ಧ ಬೋಧಿಸತ್ತ್ವೇಭ್ಯಃ - ಎಂದು ಮೊದಲನೆಯ ಅವದಾನ ಆರಂಭಗೊಳ್ಳುತ್ತದೆ. ಬಹುಸಂಖ್ಯೆಯ ಅವದಾನಗಳು ಇದಮವೋಚದ್ ಭಗವಾನ್, ಆತ್ತಮನಸಸ್ತೇ ಭಿಕ್ಷವೋ ಭಗವತೋ ಭಾಷಿತಂ ಆಭ್ಯನಂದನ್ - ಎಂದು ಕೊನೆಗೊಳ್ಳುತ್ತದೆ.

ಸತ್ಕರ್ಮ ಮತ್ತು ದುಷ್ಕರ್ಮಗಳು ಯಾವರೀತಿಯಾಗಿ ಫಲನೀಡುತ್ತವೆ ಎಂಬ ಅಂಶಗಳನ್ನು ಘಟನೆಗಳು ಮತ್ತು ವ್ಯಕ್ತಿಗಳ ಜೀವಿತಗಳ ಉದಾಹರಣೆಗಳಿಂದ ಇಲ್ಲಿನ ಅವದಾನಗಳು ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ. ಇಂದು ನಡೆದ ಸತ್ಕರ್ಮಗಳಿಗೆ ಮುಂದೊದಗುವ ಫಲಗಳನ್ನು ಹೇಳುವ ವ್ಯಾಕರಣ ರೂಪವಾದ ಆರು ಅವದಾನಗಳು ಇಲ್ಲಿವೆ. ಬುದ್ಧ, ಬೋಧಿಸತ್ತ್ವ, ಭಿಕ್ಷುಗಳು, ಬೌದ್ಧಧರ್ಮ, ಸಂಘ ಇವನ್ನು ನಿಂದಿಸುವುದರಿಂದಾಗುವ ದುಷ್ಫಲಗಳನ್ನೂ ಮೆಚ್ಚಿ, ಆಶ್ರಯಿಸುವುದರಿಂದಾಗುವ ಸತ್ಫಲಗಳನ್ನೂ ಮನಮುಟ್ಟಿಸುವಂತೆ ಚಿತ್ರಿಸುವ ಅವದಾನಗಳೂ ಇಲ್ಲಿವೆ. ದಾನ, ಗುಣಜ್ಞತೆ, ಶ್ರದ್ಧೆ, ಮಾತೃಸೇವೆ ಮೊದಲಾದ ಗುಣಗಳ ಹಿರಿಮೆಯನ್ನು ವರ್ಣಿಸುವ ಅವದಾನಗಳೂ ಇಲ್ಲಿರುವುದು ಸಾಮಾನ್ಯದೃಷ್ಟಿಯಿಂದಲೂ ಈ ಕೃತಿಗೆ ನೈತಿಕಮೌಲ್ಯವನ್ನಿತ್ತಿದೆ.

ಸರಸವಾದ ಆಡುಮಾತಿನ ಸಂಸ್ಕøತ ಗದ್ಯಶೈಲಿಯಲ್ಲಿರುವ ಈ ಅವದಾನಗಳು ಮಧ್ಯೆ ಮಧ್ಯೆ ಗಾಥಾರೂಪವಾದ ಶ್ಲೋಕಗಳನ್ನೂ ಒಳಗೊಂಡಿವೆ. ಸರಳ ಹಾಗೂ ಪರಿಣಾಮಕಾರಿಯಾದ ಭಾಷೆಯ ಬಳಕೆ ಇಲ್ಲಿದೆ. ಇಪ್ಪತ್ತೆರಡು ಮತ್ತು ಮೂವತ್ತೇಳನೆಯ ಅವದಾನಗಳು ಅತ್ಯಕರ್ಷಕವಾದ ಅಲಂಕೃತ ಭಾಷೆಯಲ್ಲಿರುವವುದನ್ನು ಗಮನಿಸಬೇಕು. ಹಲವಾರು ವ್ಯಾಕರಣದೋಷಗಳು ಕಂಡುಬಂದರೂ ಆಡುಮಾತಿನ ಸರಣಿ ಆ ದೋಷಗಳನ್ನು ಮುಚ್ಚುತ್ತದೆ. ಬೌದ್ಧ ಸಂಸ್ಕøತ ಗದ್ಯ ಸಾಹಿತ್ಯದ ಶೈಲಿಯನ್ನು ಈ ಕೃತಿ ಚೆನ್ನಾಗಿ ಬಿಂಬಿಸುತ್ತದೆ.

ಪದಪ್ರಯೋಗಗಳ ದೃಷ್ಟಿಯಿಂದ ಇಲ್ಲಿನ ಕೌತುಕಾವಹವಾದ ಹಲವು ಅಂಶಗಳು ಗಮನಾರ್ಹವಾಗಿವೆ. ಸಂಸ್ಕøತ ಸಾಹಿತ್ಯದಲ್ಲಿ ಬೇರೆಡೆ ದೊರೆಯದೇ, ಅಮರ ಮತ್ತು ಹೇಮಚಂದ್ರರ ಕೋಶಗಳಲ್ಲಿ ಮಾತ್ರ ಕಂಡುಬರುವ ಹಲವಾರು ಪದಗಳು ಇಲ್ಲಿ ಪ್ರಯುಕ್ತವಾಗಿರುವುದನ್ನು ಕಾಣಬಹದು. ಉದಾ: ಯಾಚನಕ (ಬಿಕ್ಷುಕ), ಉದ್ದವ (ಸಂತೋಷ), ಆವರೀ (ಅಂಗಡಿ) - ಮೊದಲಾದವು. ಹಾಗೆಯೇ ಬಳಕೆಯಲ್ಲಿರುವ ಪದಗಳೂ ರೂಢಿಯಲ್ಲಿಲ್ಲದ ಹೊಸ ಅರ್ಥದಲ್ಲಿ ಬಳಸಲ್ಪಟ್ಟಿರುವುದೂ ಕಂಡುಬರುತ್ತದೆ. ಉದಾ: ಅಕಾಲ (ರಾತ್ರಿ), ಅಭ್ಯಂತರ (ಪ್ರೀತಿಸುವವ) - ಇತ್ಯಾದಿ.

ವಿಚಿತ್ರ ಘಟನಾಪೂರ್ಣವಾದ ಕಥೆಗಳು, ಅಪೂರ್ವಪದಪ್ರಯೋಗ, ಆಡು ಮಾತಿನ ಸರಸಗದ್ಯಶೈಲಿ, ಪರಿಣಾಮಕಾರಿಯಾದ ನೀತಿರೂಪಣೆ ಇವು - ಈ ಕೃತಿಗೆ ಮಹತ್ತ್ವವನ್ನು ನೀಡಿವೆ. (ನೋಡಿ- ಅವದಾನಗಳು)

(ಸಿ.ಎಚ್.ಪಿ.)