ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೀದರೋ, ದನೀ

ವಿಕಿಸೋರ್ಸ್ದಿಂದ

ದೀದರೋ, ದನೀ 1713-1784. ಖ್ಯಾತ ಫ್ರೆಂಚ್ ಸಾಹಿತಿ. ತತ್ತ್ವಚಿಂತಕ, ವಿಚಾರವಾದಿ. ಎನ್‍ಸೈಕ್ಲಪೀಡಿಸ್ಟರು ಎಂದು ಹೆಸರಾಗಿರುವ ಪ್ರತಿಭಾವಂತ ಫ್ರೆಂಚ್ ಸಾಹಿತಿಗಳ ಕೂಟಕ್ಕೆ ಸೇರಿದ ಇವನನ್ನು ಇಂಗ್ಲೆಂಡಿನ ಡಾ. ಜಾನ್‍ಸನ್ ಮುಂತಾದ ಬಹುಮುಖ ವಿದ್ವಾಂಸರ ಜೊತೆ ಹೋಲಿಸುವುದುಂಟು. ಈತ ಹುಟ್ಟಿದ್ದು ಲ್ಯಾಂಗ್ರೀಸ್‍ನ ಅನುಕೂಲಸ್ಥರ ಮನೆಯಲ್ಲಿ. ತಂದೆ ಕತ್ತರಿ ಚೂರಿ ವ್ಯಾಪಾರಿ. ಜೆಸ್ಯುಯಿಟ್ ಪಂಥದ ಶ್ರೇಷ್ಠ ಶಿಕ್ಷಕರ ಬಳಿ ಈತನ ವಿದ್ಯಾಭ್ಯಾಸ ನಡೆಯಿತು. ಚಿಕ್ಕಂದಿನಿಂದಲೂ ಈತನಿಗೆ ವಿe್ಞÁನ ವಿಚಾರ, ತತ್ತ್ವಚಿಂತನೆ, ಸಾಹಿತ್ಯಾಧ್ಯಯನಗಳಲ್ಲಿ ಅಭಿರುಚಿ ಬೆಳೆಯಿತು. ಯಾರ ಹಂಗಿಲ್ಲದೆ ಜೀವಿಸಬೇಕಾಗಿ ಬಂದಾಗ ಹತ್ತು ವರ್ಷ ಪ್ಯಾರಿಸ್‍ನಲ್ಲಿ ಜೀತದ ಲೇಖಕನಾಗಿ ದುಡಿದ. ನೀತಿನೇಮಗಳ ಕಟ್ಟಿಲ್ಲದ ಜೀವನ ನಡೆಸಿದ. ಬಟ್ಟೆ ಅಂಗಡಿಯವನ ಮಗಳನ್ನು ಮದುವೆಯಾದ. ವೈವಾಹಿಕ ಜೀವನ ಎಡವಟ್ಟಾಗಿ ಕಹಿ ಅನುಭವಗಳನ್ನು ಎದುರಿಸಿದ. ಮನುಷ್ಯನ ಇಂದ್ರಿಯಾನುಭವವೇ ನೀತಿ ಆಧ್ಯಾತ್ಮಗಳಿಗೆ ಆಧಾರ ಎಂದು ಮುಂತಾಗಿ ವಾದಿಸುವ ಲೆಟರ್ ಆನ್ ದಿ ಬ್ಲೈಂಡ್ ಎಂಬ ಗ್ರಂಥವನ್ನು ರಚಿಸಿದ (1749). ಅದರ ಫಲವಾಗಿ ಮೂರು ವರ್ಷ ಜೈಲುವಾಸ ಅನುಭವಿಸಿದ.

ಫ್ರೆಂಚ್ ವಿಶ್ವಕೋಶ : 1752ರಲ್ಲಿ ಜೈಲಿನಿಂದ ಹೊರಬಂದ ಮೇಲೆ ದೀದರೊ 20 ವರ್ಷ ಫ್ರೆಂಚ್ ವಿಶ್ವಕೋಶದ ರಚನೆಯಲ್ಲಿ ತೊಡಗಿದ. ಕೆಲವು ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲಿ ಪ್ರಕಟವಾಗಿದ್ದ ಚೇಂಬರ್ಸ್ ಯೂನಿವರ್ಸಲ್ ಡಿಕ್ಷನರಿ ಆಫ್ ಆಟ್ರ್ಸ್ ಆಂಡ್ ಸೈನ್ಸ್ ಎಂಬ ಬೃಹದ್ ಗ್ರಂಥದ ಫ್ರೆಂಚ್ ರೂಪವನ್ನು ಸಿದ್ಧಪಡಿಸುವಂತೆ ಲ ಬ್ರೆಟನ್ ಎಂಬ ಪ್ರಕಾಶಕ ಈತನನ್ನು ಕೋರಿದ. ವಿಶ್ವಕೋಶದ ಫ್ರೆಂಚ್ ಅನುವಾದ ಮುಂದುವರಿದಂತೆ ಅದೊಂದು ಸ್ವತಂತ್ರ ಕೃತಿಯೇ ಆಯಿತು. ಈ ಕೆಲಸಕ್ಕಾಗಿ ದಾಲಂಬರ್, ಕಾಂಡಿಲೆಕ್ ಹಾಲ್ವೆಷಿಯಸ್, ವಾಲ್ಟೇರ್ ಮುಂತಾದ ವಿದ್ವಾಂಸರೆಲ್ಲರೂ ಸೇರಿಕೊಂಡಿದ್ದರು. ಆದರೆ ವಿಶ್ವಕೋಶದ ಬಹುತೇಕ ಕೆಲಸವನ್ನು ದೀದರೊ ಒಬ್ಬನೇ ಮಾಡಿ ಮುಗಿಸಿದನೆನ್ನಬಹುದು. ಅದರಲ್ಲಿನ ಸುಮಾರು 1005 ಲೇಖನಗಳು ಅವನೇ ಬರೆದವು. ಧರ್ಮದ ವಿಷಯದಲ್ಲಿ ವ್ಯಕ್ತಿಗೆ ಸಂಪೂರ್ಣ ವಿಚಾರ ಸ್ವಾತಂತ್ರ್ಯವಿರಬೇಕು. ಮನುಷ್ಯನ ನೈಸರ್ಗಿಕ ಪ್ರವೃತ್ತಿಗಳೇ ಅವನ ಸಕಲ ಚಟುವಟಿಕೆಗಳನ್ನೂ ನಿರ್ದೇಶಿಸುತ್ತವೆ - ಈ ಮುಂತಾದ ಸಾಮಾನ್ಯ ಸಂಗತಿಗಳು ಆ ಕಾಲಕ್ಕೆ ತೀರ ಕ್ರಾಂತಿಕಾರಕವಾಗಿದ್ದವು. ಇಂಥ ಮಾತುಗಳು, ವಿಚಾರಗಳು, ಫ್ರೆಂಚ್ ವಿಶ್ವಕೋಶದಲ್ಲಿ ಪ್ರಕಟವಾದಾಗ ಮಡಿವಂತ ಅಧಿಕಾರಿಗಳು ಗಾಬರಿಗೊಂಡರು. ಧರ್ಮ ಪ್ರಭುಗಳ ಕಣ್ಣು ಕೆಂಪಗಾಯಿತು. ಆದರೂ 1751ರಲ್ಲಿ ಸುಮಾರು 4000 ಚಂದಾದಾರರನ್ನುಳ್ಳ ವಿಶ್ವಕೋಶದ ಮೊದಲ ಸಂಪುಟ ಹೊರಬಿದ್ದು ತುಂಬ ಜನಪ್ರಿಯವಾಯಿತು. ಎರಡನೆಯ ಸಂಪುಟ ಪ್ರಕಟವಾದಾಗ ಅಧಿಕಾರಿಗಳು ಅದರ ಪ್ರಕಟಣೆಯನ್ನು ನಿಷೇಧಿಸಿದರು. ಆದರೆ ಅವರೆಲ್ಲರ ಕಣ್ಣು ತಪ್ಪಿಸಿ ಗ್ರಂಥ ಪ್ರಕಟಣೆ ಮುಂದುವರಿಯುತ್ತ ಹೋಯಿತು. ಫ್ರೆಂಚ್ ಎನ್‍ಸೈಕ್ಲೊಪೀಡಿಯಾದ ಸಾವಿರಾರು ಪ್ರತಿಗಳೂ ಅದರ ನಕಲಿ ರೂಪಗಳೂ ಕಳ್ಳತನದಲ್ಲಿ ಮಾರಾಟವಾದುವು. 1759ರ ಹೊತ್ತಿಗೆ ಹದಿನೇಳು ಸಂಪುಟಗಳು, ಅನಂತರ ಐದು ಪುರವಣಿ ಸಂಪುಟಗಳು ಪ್ರಕಟವಾದವು. ವಿಶ್ವಕೋಶದ ಪ್ರಕಟಣೆಯಿಂದ ದೀದರೊಗೆ ದೊರೆತ ಆರ್ಥಿಕ ಪ್ರತಿಫಲ ಅತ್ಯಲ್ಪ. ಆದರೆ ಅದರಿಂದ ಅವನಿಗೆ ವ್ಯಾಪಕ ಕೀರ್ತಿ, ವಿದ್ವಜ್ಜನರ ಸ್ನೇಹ ಹೇರಳವಾಗಿ ದೊರೆತವು.

ವೈಚಾರಿಕ ಗ್ರಂಥಗಳು : ವಿಶ್ವಕೋಶದ ರಚನೆಗಾಗಿ ಅವಿಶ್ರಾಂತವಾಗಿ ದುಡಿಯುತ್ತಿದ್ದರೂ ದೀದರೊ ಬೇರೆ ಬೇರೆ ಕೃತಿಗಳನ್ನೂ ಬರೆದ. ಇವನ ವೈಚಾರಿಕತೆ ಮುಖ್ಯವಾಗಿ ಎಸ್ಸೇಸ್ ಸು ಲ ಮೇರಿತ (1745). ಪೆನ್ಸೇಸ್ ಫಿಲಾಸಫಿಕ್ಸ್, ಲೆತೃ ಸು ಲ ಅವ್ಸುಲ್ಸ್ (1749) ಮತ್ತು ಪೆನ್ಸೇಸ್ ಸು ಲಿಂತರ್ ಪ್ರಿತೇಸನ್ (1754) ಮುಂತಾದ ಹಲವು ಗ್ರಂಥಗಳಲ್ಲಿ ಹರಿದು ಬಂದಿದೆ. ಯಾವುದೇ ಒಂದು ತಾತ್ತ್ವಿಕ ಅಥವಾ ವೈe್ಞÁನಿಕ ವಿಚಾರವನ್ನೂ ದೀದರೊ ಖಚಿತವಾಗಿ ವಿಶ್ಲೇಷಿಸಿ, ತಾರ್ಕಿಕ ನೆಲಗಟ್ಟಿನ ಮೇಲೆ ನಿಲ್ಲಿಸಲು ಪ್ರಯತ್ನಿಸುವುದಿಲ್ಲ. ಅತ್ಯುತ್ಸಾಹದ ಭರದಲ್ಲಿ ಹೊಸ ಹೊಸ ವಿಚಾರಗಳ ಕಿಡಿಯನ್ನು ಹೊತ್ತಿಸುತ್ತಾನಾದರೂ ಯಾವೊಂದೂ ಉದ್ದೀಪನಗೊಳ್ಳುವುದಿಲ್ಲ. ಆದ್ದರಿಂದ ಈತ ದೇವಾಸ್ತಿಕತೆ (ಡೀಯಿಸಮ್), ದೇಹಾತ್ಮವಾದ (ಮೆಟೀರಿಯಲಿಸಮ್), ವಿಕಾಸವಾದ, ವೈe್ಞÁನಿಕ ಭೌತವಾದ (ಸೈಂಟಿಫಿಕ್ ನ್ಯಾಚುಲಿರಸಮ್) ಎಂದು ಮುಂತಾದ ನಾನಾ ತತ್ತ್ವಗಳಿಗೆ ಸಂಬಂಧಿಸಿದ ವಿಚಾರಗಳನ್ನು ಸೂಚಿಸುತ್ತಾನಾದರೂ ಅವುಗಳಿಗೆ ಸಿದ್ಧಾಂತದ ಬುನಾದಿ ಕಟ್ಟುವ ಗೋಜಿಗೆ ಹೋಗುವುದಿಲ್ಲ.

ಕಾದಂಬರಿಗಳು : ಈತ ರಚಿಸಿದ ಲ ನೆವ್ಯು ದ ರಮ್ಯೂ (1762) , ಜಾಕ್ವಿಸ್ ಲ ಫೇಟಲಿಸ್ಟ್ (1773) ಮತ್ತು ಲ ರಿಲಿಜಿಯೂಸ್ (1760) ಎಂಬ ಮೂರು ಕಾದಂಬರಿಗಳಲ್ಲಿಯೂ ಇವನ ನೈತಿಕ ಚಿಂತನೆ, ವೈಚಾರಿಕತೆ, ಸಿನಿಕ ಪ್ರವೃತ್ತಿಗಳನ್ನು ಕಾಣಬಹುದು. ಇವುಗಳಿಗೆ ಕಾದಂಬರಿಯ ನಿಶ್ಚಿತ ಸ್ವರೂಪವಿಲ್ಲ. ಇಲ್ಲಿ ಸ್ಪಷ್ಟವಾದ ಪಾತ್ರ ಕಲ್ಪನೆ, ಸುಸಂಬದ್ಧ ಘಟನೆಗಳಿಲ್ಲ. ನಿಸರ್ಗ, ಸಮಾಜ ನೀತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತನ್ನ ಕಾಲದ ಚಿಂತನೆಯನ್ನು ಪಡಿಮೂಡಿಸುವಂಥ ಹಲವು ಸಂಗತಿಗಳನ್ನು, ಸ್ವಾರಸ್ಯವಾದ ಕಥೆ ಮತ್ತು ಉಪಕಥೆಗಳೊಂದಿಗೆ ಬೆರೆಸಿ ಅವನ್ನು ಸಂಭಾಷಣೆಗಳೋಪಾದಿಯಲ್ಲಿ ಇಲ್ಲಿ ನಿರೂಪಿಸಲಾಗಿದೆ. ಲ ನೆವ್ಯುದ ರಮ್ಯೂ ಕಾದಂಬರಿಯನ್ನು ಗಯಟೆ, ಕಾರ್ಲ್ ಮಾಕ್ರ್ಸ್ ಮುಂತಾದವರು ಕೊಂಡಾಡಿದ್ದಾರೆ. ಮೊಟ್ಟಮೊದಲು ಆ ಕಾದಂಬರಿಯನ್ನು ಜರ್ಮನ್‍ಗೆ ಅನುವಾದಿಸಿ ಅದರ ಕೀರ್ತಿಯನ್ನು ಹಬ್ಬಿಸಿದವ ಮಹಾಕವಿ ಗಯಟೆ. ಜಾಕ್ವಿಸ್ ಲ ಫೇಟಲಿಸ್ಟ್ ಕಾದಂಬರಿಯಲ್ಲಿ ಇಂಗ್ಲಿಷ್ ಕಾದಂಬರಿಕಾರ ಸ್ಟರ್ನನ ಪ್ರಭಾವ ಒಡೆದು ಮೂಡಿದೆ. ಅದೊಂದು ಗೊತ್ತುಗುರಿಯಿಲ್ಲದ ಭಾವಾತಿರೇಕದ ಯಾತ್ರೆ ಎಂದು ಆ ಕಾದಂಬರಿಯನ್ನು ಬಣ್ಣಿಸಿದ್ದಾರೆ. ಇಲ್ಲಿನ ಅಲೆಮಾರಿ ಕಥಾನಾಯಕ ಸೇವಕ, ತನ್ನ ಯಜಮಾನನಿಗೆ ಪ್ರೇಮದ ಹಲವು ಅನುಭವಗಳನ್ನು ಹೇಳುತ್ತ ವೈವಿಧ್ಯಮಯವಾದ ಮಾತಿನ ಜಾಲ ಸೃಷ್ಟಿಸುತ್ತಾನೆ. ಲ ರಿಲಿಜಿಯೂಸ್‍ನಲ್ಲಿ ಕಾನ್ವೆಂಟಿನ ಸಂನ್ಯಾಸಿನಿಯೊಬ್ಬಳ ದಾರುಣ ಆತ್ಮ ಕಥನವಿದೆ. ಕಾನ್ವೆಂಟಿನ ಜೀವನ, ಬಲವಂತದ ಬ್ರಹ್ಮಚರ್ಯೆ ಮುಂತಾದವನ್ನು ಕುರಿತು ಕಟುಟೀಕೆ ಹಾಗೂ ವಾಸ್ತವಚಿತ್ರಗಳಲ್ಲಿವೆ. ಹೃದಯಸ್ಪರ್ಶಿಯಾದ ಪಾತ್ರಗಳಿರುವ ಈ ಕಾದಂಬರಿಗೆ ಮುಖ್ಯ ಪ್ರೇರಣೆ ರಿಚರ್ಡ್‍ಸನ್ನನ ಕಾದಂಬರಿಗಳು.

ದೀದರೊನ ವಿಮರ್ಶೆ : ದೀದರೊ ಕಥೆ ಕಾದಂಬರಿ, ನಾಟಕಗಳು, ತಾತ್ತ್ವಿಕ ಗ್ರಂಥಗಳಲ್ಲದೆ ಸಾಹಿತ್ಯ ವಿಮರ್ಶೆ ಹಾಗೂ ಕಲಾಜಿe್ಞÁಸೆಗೆ ಸಂಬಂಧಿಸಿದ ಗ್ರಂಥಗಳನ್ನೂ ಸಂಭಾಷಣೆಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ, ರಿಚರ್ಡ್‍ಸನ್ ಪ್ರಶಸ್ತಿ, ನಾಟಕ ಸಾಹಿತ್ಯ ವಿಚಾರ, ವಿನೋದ, ನಾಟಕವನ್ನು ಕುರಿತ ಸೂತ್ರಗಳು ಮತ್ತು ಚಿತ್ರಕಲೆಯನ್ನು ಕುರಿತ ಮಾತುಕತೆ - ಮುಂತಾದುವನ್ನು ಹೆಸರಿಸಬಹುದು. ಮುಖ್ಯವಾಗಿ ವಿಮರ್ಶಕನಾಗಿ ಈತನ ಹೆಸರು ನಿಂತಿರುವುದು ಈತ ರೂಪಿಸಿದ ನಾಟಕ ತತ್ತ್ವಗಳ ಮೇಲೆ. ಫ್ರಾನ್ಸಿನಲ್ಲಿ ಕಾರ್ನೀಲ್ ಮತ್ತು ರಾಸಿನ್ ಮುಂತಾದವರು ಬೆಳೆಸಿದ ಗಂಭೀರ ನಾಟಕ ಪರಂಪರೆ ಖಿಲವಾಗುತ್ತ ಬಂದಿದ್ದ ಕಾಲ ಅದು. ಮಧ್ಯಮವರ್ಗದ ಓದುಗರು, ಪ್ರೇಕ್ಷಕರು ಹೆಚ್ಚುತ್ತಿದ್ದ ಆ ಸಂದರ್ಭದಲ್ಲಿ ಇವನಿಗೆ ಮೆಚ್ಚುಗೆಯಾದ್ದು, ಆಗತಾನೆ ಇಂಗ್ಲೆಂಡ್, ಫ್ರಾನ್ಸ್‍ಗಳಲ್ಲಿ ಜನಪ್ರಿಯವಾಗುತ್ತಿದ್ದ ಅಳುಬುರುಕು ನಾಟಕಗಳು. ಕ್ಲಾಸಿಕಲ್ ಸಂಪ್ರದಾಯದವರು ನಾಟಕವನ್ನು ದುರಂತ, ವಿನೋದಗಳೆಂದು ವಿಭಜಿಸಿದ್ದರು. ಆ ಎರಡು ಸಾಮಾನ್ಯ ಪ್ರಕಾರಗಳನ್ನೂ ಬಿಟ್ಟು ಈತ ತನ್ನ ಹೊಸ ನಾಟಕವನ್ನು ಜನಪ್ರಿಯ ನಾಟಕದ ಬುನಾದಿಯ ಮೇಲೇಯೇ ಕಟ್ಟಲು ಹೊರಟ. ಮಧ್ಯಮ ವರ್ಗದ ಜೀವನವನ್ನು ಚಿತ್ರಿಸುವಂಥ ಅಂದರೆ, ಮಧ್ಯಮ ವರ್ಗಕ್ಕೆ ಸಂಬಂಧಿಸಿದ ವಸ್ತು, ಪಾತ್ರಗಳಿರುವ, ವರ್ಣಚಿತ್ರಗಳಲ್ಲಿ ಬರುವಂಥ ವಾಸ್ತವಿಕ ನಿರೂಪಣೆಯ ತಂತ್ರವನ್ನು ಅಳವಡಿಸಿಕೊಂಡ ನಾಟಕ ರೂಪವನ್ನು ಸಾಧಿಸಲು ಹೊರಟು ಲ ಫಿಲ್ಸ್ ನ್ಯಾಚುರಲ್ ಮತ್ತು ಲ ಪೇರ್ ಡ ಫ್ಯಾಮಿಲ್ ಎಂಬ ಎರಡು ನಾಟಕಗಳನ್ನು ಬರೆದ. ಸೂತ್ರಕ್ಕೆ ಕಟ್ಟುಬಿದ್ದು ಸ್ತಬ್ಧಚಿತ್ರಗಳಂತಿರುವ ಈ ನಾಟಕಗಳು ಯಶಸ್ವಿಯಾಗಲಿಲ್ಲವಾದರೂ ಅವು ಹತ್ತೊಂಭತ್ತನೆಯ ಶತಮಾನದಲ್ಲಿ ರೂಪ ತಳೆದ ಡೊಮೆಸ್ಟಿಕ್ ಟ್ರ್ಯಾಜಿಡೀ ಎನ್ನುವ ವಿಶಿಷ್ಟ ಪ್ರಕಾರದ ನಾಟಕಗಳಿಗೆ ನಾಂದಿಯಾದವು. ವಿನೋದ ನಾಟಕವನ್ನು ಕುರಿತ ಸೂತ್ರಗಳು ಎನ್ನುವ ಗ್ರಂಥದಲ್ಲಿ ರಂಗಭೂಮಿಯ ಮೇಲೆ ನಟ ಭಾವಾವಿಷ್ಟನಾಗಿರಬೇಕೇ ನಿರ್ಲಿಪ್ತನಾಗಿರಬೇಕೇ ಎಂಬ ವಿವೇಚನೆ ಇದೆ. ಭಾವುಕತೆ ಹೃದಯಕ್ಕೆ ಸಂಬಂಧಿಸಿದ್ದು. ನಟ ಅತಿಭಾವುಕನಾದರೆ ಅಭಿನಯಕಲೆ ಮಸುಕಾಗುತ್ತದೆ. ಭಾವನಾಶೀಲತೆ ಎನ್ನುವುದು ಕೇವಲ ಬುದ್ಧಿಗೆ ಸಂಬಂಧಿಸಿದ್ದು. ಅದು ಕಲ್ಪನಾಶಕ್ತಿಯನ್ನು ಪ್ರಚೋದಿಸಬಲ್ಲುದು. ಆದರೆ ನಟ ಕೇವಲ ಭಾವನಾಶೀಲನಾಗಿಬಿಟ್ಟರೆ ಹೃದಯವಂತಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಎಲ್ಲ ನಟರೂ ಈ ಉಭಯ ಸಂಕಟವನ್ನು ಎದುರಿಸಲೇ ಬೇಕು ಎನ್ನುತ್ತಾನೆ, ದೀದರೊ. ಆದರೆ ಭಾವನಾಶೀಲತೆ ಭಾವುಕತೆ ಎನ್ನುವ ಶಬ್ದಗಳ ವ್ಯತ್ಯಾಸವನ್ನು ಈತ ಖಚಿತವಾಗಿ ಗುರುತಿಸುವುದಿಲ್ಲ. ಈ ಲೇಖನದಲ್ಲಿ ಮೋಲ್ಯೇರ್, ಕಾರ್ನಿಲ್, ರಾಸೀನ್ ಮುಂತಾದ ಫ್ರೆಂಚ್ ಕ್ಲಾಸಿಕಲ್ ನಾಟಕಕಾರರನ್ನು ಕುರಿತ ಸೊಗಸಾದ ವಿವೇಚನೆಯಿದೆ. ಒಟ್ಟಿನಲ್ಲಿ, ಸಾಹಿತ್ಯದಲ್ಲಿ ವಿಚಾರಶಕ್ತಿ ಕುಂಠಿತವಾಗಿ ಅತಿಭಾವುಕತೆಗೆ ಎಡೆಗೊಡುತ್ತಿದ್ದ ಆ ಕಾಲದ ಪ್ರವೃತ್ತಿಗಳನ್ನು ದೀದರೊನ ಉತ್ಸಾಹಭರಿತ ಬರಹಗಳಲ್ಲಿ ನೋಡಬಹುದು. ಉದಾಹರಣೆಗೆ ಈತನ ವಿಮರ್ಶೆಯ ಹಲವು ಬಗೆಯ ಲೋಪದೋಷಗಳು ರಿಚರ್ಡ್‍ಸನ್ ಪ್ರಶಸ್ತಿಯಲ್ಲಿ ತುಂಬಿವೆ. ಪ್ಯೂರಿಟನ್ ನಿಷ್ಠೆಯಿಂದ ಪ್ರೇರಿತನಾದ ರಿಚರ್ಡ್‍ಸನ್ ಬರೆದ ಗೋಳುಕರೆಯ ಕಾದಂಬರಿಗಳಲ್ಲಿ ಅತಿಭಾವುಕತೆ ಮಡುಗಟ್ಟಿ ನಿಂತಿದೆ. ಆದರೂ ದೀದರೋವಿಗೆ ಅವನ್ನು ಕಂಡರೆ ಎಲ್ಲೂ ಇಲ್ಲದ ಉತ್ಸಾಹ; ರಿಚರ್ಡ್‍ಸನ್‍ನ ಪಾತ್ರಗಳು, ಘಟನೆಗಳು ಸಹಜವಾಗಿವೆ. ಯಥಾರ್ಥವಾಗಿವೆ. ಅವನ ಸಹಜತೆ ನಿಸರ್ಗದಷ್ಟೇ ವೈವಿಧ್ಯಮಯವೂ ಸಂಭವನೀಯವೂ ಸವಿವರವೂ ಆಗಿದೆ. ಅವನ ಕಾದಂಬರಿಗಳು ಹೃದಯವನ್ನು ಹಿಗ್ಗಿಸಿ ಸದ್ಗುಣಶೀಲತೆಯನ್ನು ಎತ್ತಿ ಹಿಡಿಯುತ್ತವೆ - ಎಂದು ಕೊಂಡಾಡುತ್ತಾನೆ. ಕವಿ ಅಸಹಜವಾದ ಬದುಕನ್ನು ತ್ಯಜಿಸಿ ನಿಸರ್ಗನಿಷ್ಠವಾದ ಜೀವನಕ್ಕೆ ಹಿಂತಿರುಗಬೇಕೆಂದು ವಾದಿಸುತ್ತ ಅವನು ಶ್ರೇಷ್ಠ ಕಾವ್ಯಕ್ಕೆ ಒರಟಾದ ಸರಳತೆಯೂ ನುಣುಪು ನಾಜೂಕುಗಳಿಲ್ಲದ ಭವ್ಯತೆಯೂ ಬೇಕು ಎನ್ನುತ್ತಾನೆ. ದೀದರೊ ತನ್ನ ಸಲೂನ್ಸ್ ಎಂಬ ಸರಸಸಂಭಾಷಣೆಗಳಲ್ಲಿ ಚಿತ್ರಕಲೆಯನ್ನು ಕುರಿತು ದೀರ್ಘವಾಗಿ ಚರ್ಚಿಸಿದ್ದಾನೆ. ಇವು ಪ್ಯಾರಿಸಿನಲ್ಲಿ ನಡೆಯುತ್ತಿದ್ದ ವಾರ್ಷಿಕ ಚಿತ್ರಕಲಾಪ್ರದರ್ಶನಗಳನ್ನು ಕುರಿತ ಸಮೀಕ್ಷೆಗಳು. ಇವು ಸಂಭಾಷಣೆಯ ರೂಪದಲ್ಲಿವೆ. ಈ ಸಂಭಾಷಣೆಗಳು ಮೊಟ್ಟಮೊದಲು ಕರೆಸ್‍ಫಾಂಡೆನ್ಸ್ ಲಿತೇರೈರ್ ಎಂಬ ಸಾಂಸ್ಕøತಿಕ ನಿಯತಕಾಲಿಕದಲ್ಲಿ ಧಾರಾವಾಹಿಯಾಗಿ ಪ್ರಕಟವಾದುವು. ಈ ಪತ್ರಿಕೆ ಯೂರೋಪಿನ ಹಲವು ಶ್ರೀಮಂತರಿಗೂ ರಾಜಮನೆತನದವರಿಗೂ ಸಾಹಿತ್ಯ, ಕಲೆ ಮುಂತಾದ ವಿಷಯಗಳಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಕಟವಾಗುತ್ತಿದ್ದು, ಆಗ ಅದನ್ನು ದೀದರೊನ ಸ್ನೇಹಿತ ಗ್ರಿಮ್ ಎಂಬಾತ ಸಂಪಾದಿಸುತ್ತಿದ್ದ. ಈ ಲೇಖನಗಳಿಂದ ದೀದರೊನ ಹೆಸರು ಯೂರೋಪಿನ ಮೂಲೆಮೂಲೆಗೂ ಹರಡಿ ಅಪಾರ ಖ್ಯಾತಿ ದೊರೆಯಿತು. ಇಲ್ಲಿ ಕಾಣುವ ಆತ್ಮೀಯವಾದ ಮಾತಿನ ಶೈಲಿ, ಪದಜೋಡಣೆಗಳು ಮನಸೆಳೆಯುವಂತಿವೆ. ಕೆಲವರು ಈ ಕಲಾವಿಮರ್ಶೆಯನ್ನು ಅತಿಸಾಹಿತ್ಯಿಕ ಎಂದು ಜರೆದಿದ್ದಾರೆ. ಚಿತ್ರಗಳನ್ನು ವಿಮರ್ಶಿಸಿದಾಗ ಚಿತ್ರರಚನಾತಂತ್ರದ ವಿಶ್ಲೇಷಣೆಗಿಂತ ಇವನಲ್ಲಿ ವಸ್ತುವಿನ ಹಿನ್ನೆಲೆ, ಪೂರ್ವಕಥೆ - ಮುಂತಾದ ಗೌಣ ಅಂಶಗಳ ಚರ್ಚೆಯೇ ಹೆಚ್ಚು ಎನ್ನುವುದು ಅವರ ಆಕ್ಷೇಪಣೆ. ಒಂದು ಚಿತ್ರ ಕಥೆಯ ಹಾಗೆ ಚರಿತ್ರೆಯ ಹಾಗೆ, ಏನನ್ನಾದರೂ ಹೇಳಬೇಕು, ಅದರಲ್ಲಿ ಪುಷ್ಕಳವಾದ ವಸ್ತುನಿರೂಪಣೆ ಇರಬೇಕು ಎಂಬುದು ಇವನ ದೃಷ್ಟಿ. ಸಲೂನ್ಸ್ ಸಂಭಾಷಣೆಗಳಲ್ಲಿ ಈತ ಹಲವಾರು ಕಲಾಕೃತಿಗಳನ್ನು ವಿಶ್ಲೇಷಿಸುತ್ತ ಅವನ್ನು ಕುರಿತ ತನ್ನ ಉತ್ಸಾಹಭರಿತ ಭಾವನೆಗಳನ್ನು ಸಂಬಂಧವಿಲ್ಲದ ಹತ್ತು ಹಲವು ಗೌಣ ವಿಚಾರಗಳನ್ನೂ ಲವಲವಿಕೆಯ ಮಾತುಗಳಲ್ಲಿ ಖುಷಿ ಬಂದಂತೆ ಜೋಡಿಸುತ್ತಾನೆ. ಚಿತ್ರದ ವರ್ಣ, ರೇಖೆ, ಹಾಗೂ ರಚನಾವಿನ್ಯಾಸಗಳನ್ನು ಕುರಿತು ಓದುಗರಿಗೆ ಬೇಸರವಾಗದಂತೆ ಸಂಕ್ಷೇಪವಾಗಿ ಹೇಳುತ್ತಾನೆ. ವಾಸ್ತವಿಕ ಸಂಪ್ರದಾಯವನ್ನು ಮೆಚ್ಚಿದ್ದ ಇವನಿಗೆ ಚಾರ್ಡಿನ್, ವೆರ್ನೆ ಮುಂತಾದ ವರ್ಣಚಿತ್ರಕಾರರ ಬಗೆಗೆ ವಿಶೇಷ ಆಸಕ್ತಿ. ಗ್ರ್ಯೂಸ್‍ನ ಚಿತ್ರಗಳಂತೂ ಇವನನ್ನು ಬಹುವಾಗಿ ಸೆಳೆದ ಆದರ್ಶ ಕೃತಿಗಳು. ಕಲಾವಿದರ ಜೀವನ ದೃಷ್ಟಿಯನ್ನು ಕುರಿತು ದೀದರೊ ಹೀಗೆನ್ನುತ್ತಾನೆ; ಚಿತ್ರಕಾರ ತನ್ನ ಸ್ಟುಡಿಯೋವಿನಲ್ಲೇ ಯಾವಾಗಲೂ ಕುಳಿತು ಕಾಲ ಕಳೆಯದೆ ಹೊರಗಿನ ಪ್ರಪಂಚವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕು. ಹಳಸಲಾದ ವಸ್ತುಶೈಲಿಗಳನ್ನು ಬಿಟ್ಟುಕೊಡುವುದು ಮೇಲು. ತಾನೊಬ್ಬ ಕಲಾಹವ್ಯಾಸಿ ಎಂದು ಹೇಳಿಕೊಳ್ಳುವ ದೀದರೊ ತನಗೆ ಕಣ್ಣು ಸೆಳೆಯುವಂಥ ವುಷ್ಕಳವಾದ ವರ್ಣವಿನ್ಯಾಸ ತುಂಬ ಇಷ್ಟ ಎನ್ನುತ್ತಾನೆ. ಕಲೆಯಲ್ಲಿ ನೈತಿಕ ಮೌಲ್ಯಗಳಿರಬೇಕು. ಕಲೆ ದುಃಸ್ಥಿಗೆ ಇಳಿದಾಗ ಆ ಮೌಲ್ಯಗಳಿಗೂ ಅದೇ ಗತಿಯುಂಟಾಗುತ್ತದೆ ಎಂಬುದು ಇವನ ಅಭಿಪ್ರಾಯ. ಕಲಾಭಿರುಚಿ ಎಂದರೇನು ಎಂದು ವಿವರಿಸುತ್ತ ಉತ್ತಮವಾದ್ದನ್ನು ಸತ್ಯವಾದ್ದನ್ನು ಗ್ರಹಿಸಿ ಅದನ್ನು ಸಂದರ್ಭೋಚಿತವಾಗಿ ರೂಪಿಸುವ ಶಕ್ತಿಯೇ ಕಲಾಭಿಜ್ಞತೆ ಎನ್ನುತ್ತಾನೆ.

ದೀದರೊನ ವಿಮರ್ಶೆಯಲ್ಲಿ ಅತ್ಯುತ್ಸಾಹದ, ತೂಕತಪ್ಪಿದ ಮಾತುಗಳೂ ವಿವೇಚನೆಯಿಲ್ಲದ ವಿಚಾರಗಳೂ ಅಲ್ಲಲ್ಲಿ ತಲೆಹಾಕುತ್ತವೆ. ಆದರೆ ಪ್ರಾಮಾಣಿಕತೆ, ಹೃದಯ ಸಂವೇದನೆ, ಮಿತಿ ಇಲ್ಲದ ಹುರುಪು - ಇವು ಇವನ ಶ್ರೇಷ್ಠ ಗುಣಗಳು.

ಉಪಸಂಹಾರ : 1763ರ ಸುಮಾರಿನಲ್ಲಿ ದೀದರೊಗೆ ದುಡಿಮೆಯಿಂದ ಸ್ವಲ್ಪ ಬಿಡುವು ಸಿಕ್ಕುವಂತಾಯಿತು. ಈ ಹೊತ್ತಿಗೆ ಈತ ರಷ್ಯದ ಚಕ್ರವರ್ತಿನಿ ಖ್ಯಾತ ರೀನ್ ದಿ ಗ್ರೆಂಟ್‍ಳೊಂದಿಗೆ ಗಾಢಸ್ನೇಹ ಗಳಿಸಿದ್ದ. ಆಕೆ ಇವನ ಗ್ರಂಥಭಂಡಾರವನ್ನು 15,000 ಫ್ರಾಂಕುಗಳಿಗೆ ಖರೀದಿಮಾಡಿ ಈತನನ್ನೇ ಗ್ರಂಥಪಾಲಕನನ್ನಾಗಿ ನೇಮಿಸಿದಳು. ಸಂಬಳದ ಮುಂಗಡವಾಗಿ 5,000 ಫ್ರಾಂಕುಗಳನ್ನು ಕೊಟ್ಟು ಗೌರವಿಸಿದಳು. ರಾಣಿಯನ್ನು ಸಂದರ್ಶಿಸಿ ಗೌರವ ಸೂಚಿಸಲು ರಷ್ಯಕ್ಕೆ ತೆರಳಿದ ದೀದರೊ ಅಲ್ಲಿ ಆರು ತಿಂಗಳು ಕಾಲ ಸುಖಸಂತೋಷಗಳಲ್ಲಿದ್ದ. ತನ್ನ ಸರಸ ವಾಚಾಳಿತನದಿಂದ ಆಸ್ಥಾನದ ಎಲ್ಲರನ್ನೂ ಸೆಳೆದು ಒಬ್ಬ ಅಪೂರ್ವವ್ಯಕ್ತಿ ಎನಿಸಿಕೊಂಡ.

ದೀದರೊನನ್ನು ಫ್ರೆಂಚ್ ವಿಚಾರಯುಗದ ವಿರೋಧಾಭಾಸಗಳನ್ನು ಪ್ರತಿನಿಧಿಸುವ ಒಬ್ಬ ಉತ್ಸಾಹಿ ಎಂದು ವಿಮರ್ಶಕರು ಹೊಗಳಿದ್ದಾರೆ. (ಎಚ್.ಕೆ.ಆರ್.)

ವಿಶ್ವಕೋಶದಲ್ಲಿ ದೀದರೋ, ಮಾನವ ಕುಲದ ಮುಖ್ಯ ಕರ್ತವ್ಯವೆಂದರೆ ಎಲ್ಲ ಚಟುವಟಿಕೆಗಳಲ್ಲಿ ನೈತಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸುವುದು ಎಂದು ಪ್ರತಿಪಾದಿಸಿದ, ಈ ಪ್ರಗತಿಗೆ ಮನುಷ್ಯನ ವಿಚಾರಶಕ್ತಿಯೂ ಸಾಧನ ಎಂದು ಸಾರಿದ. ಇವನ ಮತ್ತು ವಿಶ್ವಕೋಶದ ಇತರ ಬರಹಗಾರರ ಸಿದ್ಧಾಂತಗಳು ಫ್ರಾನ್ಸಿನ ಮಹಾಕ್ರಾಂತಿಗೆ ಪೋಷಕವಾದ ವಾತಾವರಣವನ್ನು ಸೃಷ್ಟಿಸಿದ ಶಕ್ತಿಗಳಲ್ಲಿ ಒಂದು. ಪರಿಷ್ಕರಣೆ ಎಲ್.ಎಸ್.ಶೇಷಗಿರಿರಾವ್