ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೊರೈರಾಜ್, ಬಿ

ವಿಕಿಸೋರ್ಸ್ದಿಂದ

ದೊರೈರಾಜ್, ಬಿ (1929-2000). ದೊರೆ-ಭಗವಾನ್ ಛಾಯಾಗ್ರಾಹಕ ಬಿ.ದೊರೈರಾಜ್ ಹಾಗೂ ನಿರ್ದೇಶಕ ಎಸ್.ಕೆ.ಭಗವಾನ್ ಇವರ ಜೋಡಿಯೇ ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ-ನಿರ್ದೇಶಕ `ದೊರೆ-ಭಗವಾನ್ ಜೋಡಿ. ಬಿ.ದೊರೈರಾಜ್ ಅವರು ಅರಮನೆಯಲ್ಲಿ ಪ್ರಸಿದ್ಧ ಕಲಾವಿದರಾಗಿದ್ದ ಸಿ.ಬಾಬು ನಾಯುಡು ಅವರ ಪುತ್ರರಾಗಿ ಮೈಸೂರಿನಲ್ಲಿ 1929 ಮೇ 8ರಂದು ಜನಿಸಿದರು. ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ. ತಮ್ಮ ಎಂಟನೇ ವಯಸ್ಸಿನಲ್ಲೇ ಮೈಸೂರಿನ ಪ್ರೇಮಾನಂದರ ವಾದ್ಯತಂಡದ ಸದಸ್ಯರಾಗಿ ದೊರೈ ತಬಲ ಹಾಗೂ ಸಿತಾರ್ ವಾದ್ಯಗಳನ್ನು ಕಲಿತರು. ಜೊತೆಗೆ ವ್ಯಂಗ್ಯ ಚಿತ್ರ ರಚನೆಯ ಹವ್ಯಾಸ. ಫುಟ್ಬಾಲ್ ಆಟದಲ್ಲಿ ನಿಷ್ಣಾತ. ಇವುಗಳ ನಡುವೆ ಛಾಯಾಗ್ರಹಣದತ್ತಲೂ ಆಸಕ್ತಿ. ``ಕೃಷ್ಣಲೀಲಾ ಚಿತ್ರದ ಛಾಯಾಗ್ರಾಹಕರಾದ ಎಂ.ಎಸ್.ಮಣಿ(ಡಬ್ರಿಮಣಿ) ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಕೆಲಕಾಲಾನಂತರ ಮುಂಬೈಗೆ ತೆರಳಿ ಅಲ್ಲಿದ್ದ ಕನ್ನಡಿಗ ಎನ್.ಜಿ.ರಾವ್ ಅವರ ಸಹಾಯಕರಾಗಿ ಸೇರಿ ಐದು ವರ್ಷಗಳಕಾಲ ದುಡಿದರು. ಮಲೆಯಾಳಂನ ಖ್ಯಾತ ನಟ ಪ್ರೇಮ್ ನಜೀರ್ ಅಭಿನಯದ ಮೊದಲ ಚಿತ್ರ `ಶಶಿಧರನ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರು. ಇದು ದೊರೈ ಅವರು ಸ್ವತಂತ್ರವಾಗಿ ಛಾಯಾಗ್ರಾಹಕರಾಗಿ ಚಿತ್ರಿಸಿದ ಮೊದಲ ಚಿತ್ರ. ಮದರಾಸಿನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಮಲೆಯಾಳಿ ಚಿತ್ರವೊಂದಕ್ಕೆ ಛಾಯಾಗ್ರಹಣ ಮಾಡಲು ದೊರೈ ಮದರಾಸಿಗೆ ಬಂದಿದ್ದಾಗ, ಅಲ್ಲೇ ರಾಜಕುಮಾರ್ ಅಭಿನಯದ ಸೋದರಿ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಕನ್ನಡಿಗರೇ ಆದ ದೊರೈರಾಜ್ ಅವರನ್ನು ಕಂಡ ಜಿ.ವಿ.ಅಯ್ಯರ್, ನಿರ್ಮಾಪಕ ವಿಶ್ವನಾಥ ಶೆಟ್ಟಿ, ನಿರ್ದೇಶಕ ಟಿ.ವಿ.ಸಿಂಗ್ ಠಾಕೂರ್ ಅವರು ತಮ್ಮ ತಂಡದ ಚಿತ್ರಕ್ಕೆ ದೊರೈರಾಜರನ್ನು ಛಾಯಾಗ್ರಾಹಕರಾಗಿ ನೇಮಿಸಿಕೊಂಡರು. ರಾಯರ ಮಗಳು, ಜಗಜ್ಯೋತಿ ಬಸವೇಶ್ವರ, ಬಂಗಾರಿ. ತಾಯಿಕರುಳು, ಕವಲೆರಡು ಕುಲವೊಂದು ಚಿತ್ರಗಳಿಗೆ ಛಾಯಾಗ್ರಹಣ ನೀಡಿದರು. ಬಸವೇಶ್ವರ ಚಿತ್ರಣ ನಡೆದಾಗ ದೊರೈರಾಜ್ ಅವರಿಗೆ ಭಗವಾನರ ಪರಿಚಯವಾಯಿತು. ಭಗವಾನ್ ಸಹಾಯಕ ನಿರ್ದೇಶಕರಾಗಿ ನೇಮಕವಾದರು.

ಆ ದಿನಗಳಲ್ಲಿ ಬಾಂಡ್ ಶೈಲಿಯ ಇಂಗ್ಲಿಷ್ ಚಿತ್ರಗಳು ಜನರನ್ನು ಆಕರ್ಷಿಸಿದ್ದವು. ದೊರೈರಾಜ್ ಮತ್ತು ಭಗವಾನ್ ಬಾಂಡ್ ಶೈಲಿಯ ಚಿತ್ರಗಳನ್ನು ನಿರ್ಮಿಸಲು ನಿದರ್üರಿಸಿದರು. 1968ರಲ್ಲಿ ಈ ಜೋಡಿ ನಿರ್ಮಿಸಿದ, ರಾಜಕುಮಾರ್ ಜಯಂತಿ ಅಭಿನಯಿಸಿದ ಜೇಡರ ಬಲೆ ಚಿತ್ರಕ್ಕೆ ಅಪೂರ್ವ ಯಶಸ್ಸು ಲಭಿಸಿತು.

ದೊರೈರಾಜ್-ಭಗವಾನ್ ಜೋಡಿ ನಿರ್ದೇಶಿಸಿದ ಚಿತ್ರಗಳ ಯುಗಾರಂಭ. ಗೋವಾದಲ್ಲಿ ಸಿ.ಐ.ಡಿ 999, `ಆಪರೇಷನ್ ಜಾಕ್ ಪಾಟ್, ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸಬೆಳಕು, ಬೆಂಕಿಯ ಬಲೆ, ಸಮಯದ ಗೊಂಬೆ, ಯಾರಿವನು, ಗಗನ, ನೀನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ, ಒಡಹುಟ್ಟಿದವರು, ಬಾಳೊಂದು ಚದುರಂಗ ಮುಂತಾದ ಮನೆಮಂದಿ ಕುಳಿತು ನೋಡಿ ಆನಂದಿಸಬಹುದಾದ ಚಿತ್ರಗಳನ್ನು ಇವರಿಬ್ಬರೂ ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಮುನಿಯನ ಮಾದರಿ (1981-82), ಜೀವನ ಚೈತ್ರಕ್ಕೆ (1992-93) ರಾಜ್ಯಸರಕಾರದ ಪ್ರಶಸ್ತಿ ಲಭಿಸಿದೆ.

ಚಲನಚಿತ್ರ ನಿರ್ದೇಶನದ ಕ್ಷೇತ್ರಕ್ಕೆ ದೊರ-ಭಗವಾನ್ ಜೋಡಿ ನೀಡಿದ ಅಮೂಲ್ಯ ಕೊಡುಗೆಗಾಗಿ ರಾಜ್ಯ ಸರಕಾರ ಈ ಜೋಡಿಗೆ 1995-96ನೇ ಸಾಲಿನ ಒಂದು ಲಕ್ಷ ರೂಪಾಯಿ ಮೌಲ್ಯದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತು. ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿ ಲಕ್ಷ್ಮಿ, ರೇಖಾರನ್ನು ಚಿತ್ರರಂಗಕ್ಕೆಪರಿಚಯಿಸಿತು. ಬಾಂಡ್ ಶೈಲಿಯ ಚಿತ್ರಗಳಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಕಾದಂಬರಿಗಳನ್ನು ಚಿತ್ರಿಸಿದ ಹೆಗ್ಗಳಿಕೆ ಈ ಜೋಡಿಯದು. ತಮ್ಮ 71ನೇ ವಯಸ್ಸಿನಲ್ಲಿ ಬಿ.ದೊರೈರಾಜ್‍ರು ನಿಧನರಾದರು. (ನೋಡಿ- ಭಗವಾನ್,-ಎಸ್-ಕೆ)

(ಶ್ರಿಕೃಪಾ; ಎಂ.ಬಿ.ಎಸ್)