ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರವರೂಪದ ಗೊಬ್ಬರ

ವಿಕಿಸೋರ್ಸ್ದಿಂದ

ದ್ರವರೂಪದ ಗೊಬ್ಬರ -

	ಸಸ್ಯಗಳಿಗೆ ಶೀಘ್ರವಾಗಿ ಸ್ವೀಕರಿಸಲು ಅನುಕೂಲವಾಗುವಂತೆ ನೀರಿನಲ್ಲಿ ಕರಗಿಸಿ ಪೂರೈಸುವ ರಾಸಾಯನಿಕ ಗೊಬ್ಬರ. ಅಮೆರಿಕದಲ್ಲಿ ಇದರ ಉಪಯೋಗ 1923 ರಲ್ಲೇ ಬಳಕೆಗೆ ಬಂದಿತು. ಅಲ್ಲಿಂದೀಚೆಗೆ ವಿವಿಧ ಬಗೆಯ ದ್ರವರೂಪದ ಗೊಬ್ಬರಗಳ ಉತ್ಪನ್ನ ಅಧಿಕವಾಗುತ್ತ ಬಂದಿವೆ. ಇಲ್ಲಿನ ಮುಖ್ಯ ಅಡಚಣೆ ಎಂದರೆ ಶೀಘ್ರವಾಗಿ ಹಾಳಾಗದ ಉಪಕರಣಗಳು ಇಲ್ಲದಿರುವುದು. ಸರಿಯಾದ ಉಪಕರಣಗಳನ್ನು ತಯಾರಿಸುವುದರಲ್ಲಿ ಈಚೆಗೆ ಸಾಕಷ್ಟು ಸುಧಾರಣೆಗಳಾಗಿವೆ. ಸಾಮಾನ್ಯವಾಗಿ, ದ್ರವರೂಪದ ಗೊಬ್ಬರದಲ್ಲಿ ಅಮೋನಿಯ ಮತ್ತು ರಂಜಕಾಮ್ಲವನ್ನು ಬಳಸಲಾಗುತ್ತದೆ. ಒಂದು ಭಾಗ ಸಾರಜನಕಕ್ಕೆ ಮೂರುಭಾಗ ರಂಜಕಾಮ್ಲವನ್ನು ಮಿಶ್ರಣ ಮಾಡುತ್ತಾರೆ. ಅಮೋನಿಯಾ ಬಳಕೆಯಿಂದ ಪೂರ್ಣ ಗೊಬ್ಬರಕ್ಕಾಗಿ ಪೊಟಾಸಿಯಮ್ ಕ್ಲೋರೈಡನ್ನು ಸೇರಿಸುತ್ತಾರೆ.

ದ್ರವರೂಪ ಗೊಬ್ಬರಗಳನ್ನು ಬಿತ್ತನೆಗೆ ಮೊದಲು ಯಾ ಬಿತ್ತನೆ ಮಾಡುವಾಗ ಯಾ ನಾಟಿಯ ಸಮಯದಲ್ಲಿ ಮೇಲುಗೊಬ್ಬರವಾಗಿ ಅಥವಾ ನೇರವಾಗಿ ಎಲೆಗಳ ಮೇಲೆ ಸಿಂಪಡಿಸಬಹುದು. ಕೆಲವು ವೇಳೆ ಯೂರಿಯಾವನ್ನು ನೀರಿನಲ್ಲಿ ಕರಗಿಸಿ, ಉಪಯೋಗಿಸುವುದುಂಟು. ಹೀಗೆ ಬಳಸುವಾಗ 1 ಕೆಜಿ ಯೂರಿಯಾವನ್ನು 50 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುತ್ತಾರೆ. ಸೀಬೆ ಮತ್ತು ಟೊಮ್ಯಾಟೋವನ್ನು 50 ಲೀಟರ್ ನೀರಿನಲ್ಲಿ 1 ಕೆಜಿ ಯೂರಿಯಾ ಜಾತಿಗೆ 5 - 6 ಕೆಜಿ ಯೂರಿಯಾ ಮತ್ತು ಅಲೋಗಡ್ಡೆಗೆ 2 ಕೆಜಿ ಯೂರಿಯಾ ಮಿಶ್ರಮಾಡಿ ಬಳಸಬಹುದು. ದ್ರವರೂಪದ ಗೊಬ್ಬರಗಳನ್ನು ಬಳಸುವುದರಿಂದ ಬಹಳ ಬೇಗ ಅದರ ಗುಣ ಸಸ್ಯಗಳ ಮೇಲೆ ಕಂಡುಬರುತ್ತದೆ. ತರಕಾರಿ ಎಲೆಗಳಲ್ಲಿ ಬಣ್ಣದ ಬದಲಾವಣೆಯನ್ನು ಅಲ್ಪ ಕಾಲದಲ್ಲಿ ಕಾಣಬಹುದು. ಪೋಷಕಾಂಶಗಳನ್ನು ಎಲೆಗಳು ನೇರವಾಗಿ ಬಳಸಿಕೊಳ್ಳುವುದರಿಂದ ಅಲ್ಪಕಾಲದಲ್ಲಿ ಅದರ ಪರಿಣಾಮ ಕಂಡುಬರುತ್ತದೆ. ಹಣ್ಣಿನ ಮರಗಳಿಗೆ ಹೆಚ್ಚಾಗಿ ಪೋಷಕಾಂಶಗಳನ್ನು ನೇರವಾಗಿ ಮಣ್ಣಿಗೆ ಕೊಟ್ಟರೆ ಸ್ಥಿರೀಕರಣ ಸಮಸ್ಯೆ ಇರುವುದರಿಂದ ಅವುಗಳಿಗೆ ದ್ರವಗೊಬ್ಬರವನ್ನು ಎಲೆಗಳ ಮೇಲೆ ಸಿಂಪಡಿಕೆ ಮಾಡುವುದು ಬಹಳ ಒಳ್ಳೆಯದು. ಸಸ್ಯಸಂರಕ್ಷಾಣಾ ಕ್ರಮದ ಜೊತೆಯಲ್ಲೇ ದ್ರವರೂಪದ ಗೊಬ್ಬರಗಳ ಸಿಂಪಡಿಕೆ ಮಾಡುವುದರಿಂದ ಕೆಲಸದ ವೇಳೆ ಉಳಿಯುವುದಲ್ಲದೆ ಖರ್ಚೂ ಕಡಿಮೆ ಆಗುತ್ತದೆ.

ರಾಸಾಯನಿಕ ಗೊಬ್ಬರಗಳ ಪೈಕಿ ಯೂರಿಯಾವನ್ನು ಎಲ್ಲ ಬೆಳೆಗಳಿಗೂ ಮಣ್ಣಿಗೂ ಸಿಂಪಡಿಸಿದಾಗ ಅದು ಬೇಗನೆ ಸಾರಜನಕದ ಕೊರತೆಯನ್ನು ನೀಗುವುದು. ಎಲೆಗಳು ಸಾರಜನಕಾಂಶವನ್ನು ಹೀರುವುದು ಉಷ್ಣತೆ, ಶೈತ್ಯ, ಸಸ್ಯದ ವಯಸ್ಸು ಮುಂತಾದವುಗಳ ಮೇಲೆ ಅವಲಂಬಿಸಿದೆ. ಉಳಿದ ಸಾರಜನಕ, ರಂಜಕ, ಮತ್ತು ಪೊಟ್ಯಾಷ್ ಗೊಬ್ಬರಗಳು ಅಷ್ಟು ಪರಿಣಾಮಕಾರಿಗಳೇನಲ್ಲ. 5 ಕೆಜಿ ಯೂರಿಯಾವನ್ನು 250 ಲೀಟರ್ ನೀರಿನಲ್ಲಿ ಕರಗಿಸಿ ಎಲೆಗಳ ಮೇಲೆ ಸಿಂಪಡಿಸಲು ಒಂದು ಎಕರೆಗೆ 650 ಲೀಟರ್ ಮಿಶ್ರಣ ಬೇಕಾಗುತ್ತದೆ. ಸಾರಜನಕದ ಕೊರತೆಯನ್ನು ಅನುಸರಿಸಿ ಸಿಂಪಡಿಕೆಯನ್ನು ವಾರಕ್ಕೊಂದಾವರ್ತಿ 2 - 3 ಸಾರಿ ಮಾಡಬೇಕು. ಸಸ್ಯಗಳಲ್ಲಿ ಸೂಕ್ಷ್ಮ ಪೋಷಕಾಂಶಗಳಾದ ಸತು, ಮ್ಯಾಂಗನೀಸ್, ಕಬ್ಬಿಣ ಮತ್ತು ತಾಮ್ರದ ಕೊರತೆ ಕಂಡುಬಂದರೆ, ಆಯಾ ಲೋಹದ ಸಲ್ಫೇಟನ್ನು 100 ಲೀಟರ್ ನೀರಿನಲ್ಲಿ 2 ಕೆಜಿ ಸಲ್ಫೇಟಿನಂತೆ ಬೆರೆಸಿ ಸಿಂಪಡಿಸಬೇಕು.

ದ್ರವರೂಪದ ಅಮೊನಿಯಾವನ್ನೂ ಗೊಬ್ಬರವಾಗಿ ಬಳಸಲಾಗುತ್ತದೆ. ಇದರಲ್ಲಿ 84.2% ಸಾರಜನಕಾಂಶ ಉಂಟು. ಇದನ್ನು ನೇರವಾಗಿ ಜಮೀನಲ್ಲಿ ಬೆರೆಸಬಹುದು. ಇದರಿಂದ ಸಾರಜನಕದ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ. ಅಮೋನಿಯಾ ಸಾಮಾನ್ಯವಾಗಿ ಅನಿಲ ರೂಪದಲ್ಲಿರುತ್ತದೆ. ಅದನ್ನು ವಾತಾವರಣದ ಹತ್ತರಷ್ಟು ಒತ್ತಡದಲ್ಲಿ ಲೋಹದ ಪೀಪಾಯಿಯಲ್ಲಿ ತುಂಬಿದಾಗ ದ್ರವರೂಪ ತಾಳುತ್ತದೆ. ಇದನ್ನು ಬಳಸಲು ವಿಶೇಷ ಸಲಕರಣೆಗಳು ಬೇಕು. (ಕೆ.ಆರ್‍ಜಿ.ಎ.)