ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿದಳ ಸಸ್ಯಗಳು

ವಿಕಿಸೋರ್ಸ್ದಿಂದ

ದ್ವಿದಳ ಸಸ್ಯಗಳು - ಹೂ ಬಿಡುವ ಸಸ್ಯಗಳಲ್ಲಿ 2,85,000 ಕ್ಕೂ ಮೇಲ್ಪಟ್ಟು ವಿವಿಧ ಪ್ರಭೇದಗಳುಂಟು. ಇವನ್ನು ಮುಖ್ಯವಾಗಿ ಮಾಗ್ನೊಲಿಯಾಪ್ಸಿಡ ಅಥವಾ ದ್ವಿದಳ ಸಸ್ಯಗಳು ಮತ್ತು ಅಲಿಯಾಪ್ಸಿಡ ಅಥವಾ ಏಕದಳ ಸಸ್ಯಗಳೆಂದು ವಿಂಗಡಿಸಲಾಗಿದೆ. ಭ್ರೂಣದಲ್ಲಿ ಎರಡು ಬೀಜದಳಗಳನ್ನು ಪಡೆದಿರುವ ಸಸ್ಯಗಳನ್ನು ದ್ವಿದಳ ಸಸ್ಯಗಳೆಂದು ಕರೆಯಲಾಗಿದೆ. ದ್ವಿದಳ ಸಸ್ಯಗಳು ಏಕದಳ ಸಸ್ಯಗಳಿಗಿಂತ ಸಂಖ್ಯೆಯಲ್ಲಿ ಹೆಚ್ಚಿದ್ದು, ಸುಮಾರು 250-300 ಕುಟುಂಬಗಳು, 10,000 ಪ್ರಧಾನ ಜಾತಿಗಳು ಮತ್ತು 1,12,000 ಕ್ಕೂ ಹೆಚ್ಚು ಪ್ರಭೇದಗಳನ್ನು ಒಳಗೊಂಡಿದೆ. ದ್ವಿದಳ ಸಸ್ಯಗಳನ್ನು ಮುಖ್ಯವಾಗಿ ಈ ಕೆಳಗಿನ ಗುಣಲಕ್ಷಣಗಳಿಂದ ಗುರುತಿಸಬಹುದು.

1. ಭ್ರೂಣದಲ್ಲಿ ಎರಡು ಬೀಜಗಳು ಅಭಿಮುಖವಾಗಿದ್ದು ಜೋಡಣೆಗೊಂಡಿದ್ದು ಬೆಳೆಯುವ ಕುಡಿ ಬೀಜದಳಗಳ ನಡುವಿನ ತುದಿಯಲ್ಲಿ ಸ್ಥಿತವಾಗಿದೆ. 2. ತಾಯಿಬೇರು ಪ್ರಮುಖವಾಗಿದೆ. 3. ಕವಲೊಡೆದ ಕಾಂಡ, ತೊಟ್ಟಿರುವ ಎಲೆ ಮತ್ತು ಬಲೆಬಲೆಯಾಗಿರುವ ಪರ್ಣ ನರಗಳು ದ್ವಿದಳ ಸಸ್ಯಗಳಿಗೆ ವಿಶಿಷ್ಟವಾಗಿವೆ. 4. ಪುಷ್ಪಾಂಗಗಳು ಪ್ರತಿ ಸುತ್ತಿನಲ್ಲಿ ನಾಲ್ಕು ಅಥವಾ ಐದು ಸಂಖ್ಯೆಯಲ್ಲಿವೆ. 5. ಕಾಂಡದ ಅಡ್ಡಛೇದದಲ್ಲಿ ಕೇಂಬಿಯಮ್ ಕೂಡಿದ ವಾಹಕ ಅಂಗಾಂಶಗಳ ಮತ್ತು ಕಾಂಡದ ಕೇಂದ್ರಭಾಗದಲ್ಲಿ ಬೆಂಡು (ಪಿತ್) ಕಂಡುಬರುತ್ತದೆ.

ದ್ವಿದಳ ಸಸ್ಯಗಳು ಎಲ್ಲ ತೆರನ ಹವಾಗುಣ ಪ್ರದೇಶಗಳಲ್ಲೂ ಕಂಡುಬರುತ್ತವೆ. ಇವು ನೀರಿನಲ್ಲಿ ಮರಳುಗಾಡಿನಲ್ಲಿ ಬೆಳೆಯುವುದಲ್ಲದೆ ಅಪ್ಪುಗಿಡಗಳು. ಪರಾವಲಂಬಿಗಳು, ಕೊಳೆತಿನಿ ಸಸ್ಯಗಳಾಗಿ ಬೆಳೆಯುವುದು ಉಂಟು. ನಿಂಫಿಯೇಸೀ, ಸಿರಾಟೋಫಿಲ್ಲೇಸಿ, ಹಾಲೊರಾಗಿಡೇಸೀ, ಟ್ರಾಪೇಸೀ, ಪೋಡೋಸ್ಟೆಮೇಸೀ ಮುಂತಾದ ಕುಟುಂಬಗಳು ಹೆಚ್ಚಾಗಿ ಜಲಸಸ್ಯಗಳನ್ನೊಳಗೊಂಡಿವೆ. ಒಣ ಪ್ರದೇಶದಲ್ಲಿ ಬೆಳೆಯುವ ಕಳ್ಳಿಗಿಡಗಳು ಕ್ಯಾಕ್ಟೇಸೀ ಕುಟುಂಬದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬಲಾನೋಫೊರೇಸೀ, ಕಸ್ಕುಟೇಸೀ, ರಫ್ಲೀಷಿಯೇಸೀ; ಓರಬಾಂಕೇಸಿ ಕುಟುಂಬಗಳ ಸದಸ್ಯಗಳು ಪೂರ್ಣ ಪರಾವಲಂಬಿಗಳು. ಲೊರ್ಯಾಂತೇಸಿ, ಸ್ಯಾಂಟಲೇಸೀ ಕುಟುಂಬಗಳಿಗೆ ಸೇರಿರುವ ದ್ವಿದಳ ಸಸ್ಯಗಳು ಅಪೂರ್ಣ ಪರಾವಲಂಬಿಗಳು. ಪೋಡೋಸ್ಟೆಮೇಸೀ ಕುಟುಂಬದವು ನದಿಗಳಲ್ಲಿ ಕಲ್ಲುಬಂಡೆಗಳ ಮೇಲೆ ಬೆಳೆಯುವ ಸಸ್ಯಗಳು. ಕಡಲಕಿನಾರೆಯ ಉಪ್ಪುನೀರಿನಲ್ಲಿ ಅವಿಸೀನಿಯ, ರೈeóÉೂೀಫೊರ, ಸ್ಯಾಲಿಕಾರ್ನಿಯ, ಬ್ರಗ್ವೀರ ಮುಂತಾದವು ಬೆಳೆಯುವುವು. ಪೆಪರೋಮಿಯ, ಈಸ್ಕಿನಾಂತಸ್, ಕೆಲವು ಬಗೆಯ ಕರ್ಣಕುಂಡಲಗಳು ಅಪ್ಪುಗಿಡಗಳಾಗಿ ಬೆಳೆಯುವವು. ವಿಶೇಷ ಸಸ್ಯಗಳೆನಿಸಿದ ಕೀಟಾಹಾರಿ ಸಸ್ಯಗಳು ದ್ವಿದಳ ಸಸ್ಯ ಕುಟುಂಬಗಳಾದ ಡ್ರಾಸರೇಸೀ, ಲೆಂಟಿಬ್ಯುಲೇರಿಯೇಸೀ, ಸರಸೀನಿಯೇಸೀ, ನಿಪಾಂತೇಸೀಗಳಿಗೆ ಸೇರಿವೆ. ಮಾನೊಟ್ರೊಪ ಸಾಲ್ಮೋನಿಯ ಗಿಡಗಳು ಕೊಳೆತಿನಿ ಸಸ್ಯಗಳಲ್ಲಿ ಕೆಲವು. ಆರ್ಸಿಥೋಬಿಯಮ್ ಮೈನ್ಯೂಟಿಸೆಸಮ್ ಎಂಬುದು ದ್ವಿದಳ ಸಸ್ಯಗಳಲ್ಲೆಲ್ಲ ಅತ್ಯಂತ ಚಿಕ್ಕಗಾತ್ರದ ಮತ್ತು ಯೂಕಲಿಪ್ಟಸ್ (ನೀಲಗಿರಿಮರ) ಅತ್ಯಂತ ದೊಡ್ಡಗಾತ್ರದ ಸಸ್ಯಗಳೆನಿಸಿವೆ. ಲೆಗ್ಯೂಮಿನೇಸೀ, ರೂಬಿಯೇಸಿ, ಯೂಫೋರ್ಬಿಯೇಸೀ, ಅಕ್ಯಾಂತೇಸೀ, ಆಸ್ಟರೇಸೀ. ಲೇಮಿಯೇಸೀ, ಆರ್ಟಿಕೇಸೀ ಮತ್ತು ಆಸ್ಕ್ಲಿಪಿಯಡೇಸೀ ಮುಂತಾದ ಕುಟುಂಬಗಳು ಕ್ರಮವಾಗಿ ಭಾರತದಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ. ಸುಮಾರು 120 ಜಾತಿಯ ದ್ವಿದಳ ಸಸ್ಯಗಳು ಭಾರತಕ್ಕೆ ಸೀಮಿತಗೊಂಡಿವೆ. ದಕ್ಷಿಣ ಭಾರತದಲ್ಲಿ ಇದುವರೆಗೆ 3456 ಪ್ರಬೇಧಗಳಿಗೆ ಸೇರಿದ ದ್ವಿದಳ ಸಸ್ಯಗಳನ್ನು ಕಂಡುಹಿಡಿಯಲಾಗಿದ್ದು ಅವುಗಳಲ್ಲಿ 650 ಪ್ರಬೇಧಗಳು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತಗೊಂಡಿವೆ. ಜಾರ್ಜ್ ಬೆಂತೆಮ್ ಮತ್ತು ಜೋಸೆಫ್ ಡಾಲ್ಟನ್ ಹುಕರ್‍ರವರು ತಮ್ಮ ಸಸ್ಯ ವರ್ಗೀಕರಣ ವ್ಯವಸ್ಥೆಯಲ್ಲಿ ದ್ವಿದಳ ಸಸ್ಯಗಳನ್ನು ನಗ್ನಬಿಜ ಸಸ್ಯಗಳು ಮತ್ತು ಏಕದಳ ಸಸ್ಯಗಳಿಗಿಂತಲೂ ಮುಂಚೆ ಬರುವಂತೆ ಇಟ್ಟಿದ್ದಾರೆ. ಅವರ ಪ್ರಕಾರ ದ್ವಿದಳ ಸಸ್ಯಗಳಲ್ಲಿ ಮೂರು ಪಂಗಡಗಳುಂಟು : ಪಾಲಿಪೆಟಲೀ, ಗ್ಯಾಮೋಫೆಟಲೀ ಮತ್ತು ಮಾನೋಕ್ಲಾಮಿಡಿ, ಪಾಲಿಪೆಟಲೀಗೆ ಸೇರಿದ ದ್ವಿದಳ ಸಸ್ಯಗಳ ಪುಷ್ಪದಳಗಳು ಬಿಡಿಯಾಗಿದ್ದರೆ, ಗ್ಯಾಮೊಪೆಟಲೀಯಲ್ಲಿ ಪುಷ್ಪದಳಗಳು ಒಂದಕ್ಕೊಂದು ಕೂಡಿಕೊಂಡಿವೆ. ಮೂರನೆಯ ಪಂಗಡದಲ್ಲಿ ಪುಷ್ಪಪಾತ್ರೆ ಮತ್ತು ಪುಷ್ಪದಳಗಳು ಸ್ಪಷ್ಟವಾಗಿಲ್ಲ.

ಎಂಗ್ಲರ್ ಮತ್ತು ಪ್ರಾಂಟಲ್ ರವರ ಪ್ರಕಾರ ದ್ವಿದಳ ಸಸ್ಯಗಳು ಏಕದಳ ಸಸ್ಯಗಳಿಗಿಂತ ಮುಂದುವರೆದಿವೆ. ಇವರು ದ್ವಿದಳ ಸಸ್ಯಗಳನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ: ಆರ್ಕಿಕ್ಲೆಮೈಡೆಯಲ್ಲಿ ಮತ್ತು ಸಿಂಪೆಟಲೀ. ಆರ್ಕಿಕ್ಲಾಮಿಡಿಯಲ್ಲಿ ಪುಷ್ಪಪಾತ್ರೆ ಮತ್ತು ಪುಷ್ಪದಳಗಳು ಸಾಮಾನ್ಯವಾಗಿ ಇಲ್ಲ. ಒಂದು ವೇಳೆ ಇದ್ದರೆ ಅವು ಬಿಡಿಬಿಡಿಯಾಗಿರುತ್ತವೆ. ಸಿಂಪೆಟಲೀಯು ಬೆಂತಮ್ ಮತ್ತು ಹುಕರ್ ರವರ ಗ್ಯಾಮೋಪೆಟಲೀಯಂತೆಯೇ ಇದೆ. ಜಾನ್ ಹಚಿನ್‍ಸನ್ ಎಂಬಾತ ದ್ವಿದಳ ಸಸ್ಯಗಳನ್ನು ಆಗ್ನೋಸೀ (ಮರ ಸಸ್ಯಗಳು) ಮತ್ತು ಹರ್ಬೇಸಿಗಳೆಂದು (ಮೆತು ಸಸ್ಯಗಳು) ಎರಡು ಭಾಗ ಮಾಡಿದ್ದಾನೆ. ಇವನ ಕ್ರಮದಲ್ಲಿ ಆಗ್ನೊಸೀ ವಿಕಾಸದ ದೃಷ್ಟಿಯಿಂದ ಹಿಂದುಳಿದವೂ ಹರ್ಬೇಸೀ ಮುಂದುವರಿದವೂ ಆಗಿವೆ. ಆದರೆ, ಈತನ ಕ್ರಮದಲ್ಲಿ ಅಸಂಖ್ಯಾತ ಲಘು ಕುಟುಂಬಗಳು ಇದ್ದು, ಅನೇಕ ಹತ್ತಿರ ಸಂಬಂಧಿ ಕುಟುಂಬಗಳು ಪರಸ್ಪರ ದೂರವಾಗಿವೆ. ಇನ್ನೊಬ್ಬ ಸಸ್ಯವರ್ಗೀಕರಣ ವಿe್ಞÁನಿ ಕ್ರಾನ್‍ಕ್ವಿಸ್ಟ್ ದ್ವಿದಳ ಸಸ್ಯಗಳನ್ನು ಮ್ಯಾಗ್ನೋಲಿಯೇಟೀ ಎಂಬುದಾಗಿ ಕರೆದು ಪರಾಗ, ಮರದ ಅಂಗಾಂಶ ರಚನೆ ಇತ್ಯಾದಿ ಗುಣ ಲಕ್ಷಣಗಳ ಮೇಲೆ ಇವನ್ನು ಅನೇಕ ಗುಂಪುಗಳಾಗಿ ವಿಂಗಡಿಸಿದ್ದಾನೆ.

ದ್ವಿದಳ ಸಸ್ಯಗಳಲ್ಲಿ ಸಂಪಿಗೆ ಜಾತಿಗೆ ಸೇರಿದ ಸಸ್ಯಗಳೆಲ್ಲವೂ ಹಿಂದುಳಿದ ವರ್ಗಕ್ಕೆ ಸೇರಿದವೆಂಬುದನ್ನು ಇತ್ತೀಚಿನ ಸಂಶೋಧನಕಾರರೂ ಬೆಂಬಲಿಸಿದ್ದಾರೆ. ಸಾವಿರಕ್ಕೂ ಮಿಗಿಲಾಗಿ ಸಿಕ್ಕಿರುವ ದ್ವಿದಳ ಸಸ್ಯ ಪಳೆಯುಳಿಕೆಗಳಲ್ಲಿ ಸಂಪಿಗೆ ಜಾತಿಯವೇ ಹೆಚ್ಚು. ದ್ವಿದಳ ಸಸ್ಯಗಳು ಜುರಾಸಿಕ್ ಕಾಲದಲ್ಲಿಯೇ ಇದ್ದುವೆಂದು ನಂಬಲಾಗಿದ್ದು ಕ್ರಿಟೇಷಸ್ ಮತ್ತು ಟರ್ಷಿಯರಿ ಕಾಲಗಳಲ್ಲಿ ಪರಮಾವಧಿಯನ್ನು ಮುಟ್ಟಿದ್ದವೆಂದು ನಂಬಲಾಗಿದೆ. ದ್ವಿದಳ ಸಸ್ಯಗಳು ಪೇಲಿಯೊeóÉೂೀಯಿಕ್ ಕಾಲದಲ್ಲಿಯೇ ಉಗಮಿಸಿದವೆಂದು ಹೇಳಲಾಗಿದೆ.

ದ್ವಿದಳ ಸಸ್ಯಗಳು ಮಾನವನ ಆಹಾರಸಸ್ಯಗಳಲ್ಲಿ ಮುಖ್ಯವೆನಿಸಿವೆ. ಇವುಗಳಲ್ಲೆಲ್ಲ ಲೆಗ್ಯೂಮೊನೋಸೀ ಮುಖ್ಯವಾದ್ದು. ಈ ಕುಟುಂಬದ ಸಸ್ಯಗಳ ಬೇರಿನ ಗಂಟುಗಳು ಬ್ಯಾಕ್ಟೀರಿಯಗಳ ನೆರವಿನೊಂದಿಗೆ ವಾತಾವರಣ ನೈಟ್ರೋಜನ್ನನ್ನು ಸ್ಥಿರೀಕರಿಸುವುದರಲ್ಲಿ ಸಹಕಾರಿಯಾಗಿವೆ. ಹಾಗೆಯೇ ಈ ಗುಣವನ್ನು ಇನ್ನೂ ಅನೇಕ ದ್ವಿದಳ ಸಸ್ಯ ಕುಟುಂಬದಲ್ಲಿ ಪತ್ತೆ ಹಚ್ಚಲಾಗಿದೆ. ಗೆಡ್ಡೆ ಗೆಣಸುಗಳನ್ನು ನೀಡುವಲ್ಲಿ ಮೂಲಂಗಿ ಬೀಟ್‍ರೋಟ್, ಕ್ಯಾರೇಟ್, ಗೆಣಸು, ಆಲೂಗೆಡ್ಡೆ ಇತ್ಯಾದಿ ಮುಖ್ಯವಾದವು. ತರಕಾರಿ ಸೊಪ್ಪು, ಒದಗಿಸುವಲ್ಲಿ ಲೆಟಸ್, ದಂಟು, ಕೊತ್ತಂಬರಿ, ಎಲೆಕೋಸು ಮುಂತಾದುವಿದೆ. ಸಂಬಾರಪದಾರ್ಥಗಳೆನಿಸಿರುವ ಧನಿಯ, ಮೆಣಸು, ಜೀರಿಗೆ, ಲವಂಗ, ದಾಲ್ಚಿನ್ನಿ, ಮರಾಟಮೊಗ್ಗು ಮುಂತಾದವುಗಳೆಲ್ಲವೂ ದ್ವಿದಳ ಸಸ್ಯಗಳೇ. ಔಷಧಿಯ ಸಸ್ಯಗಳಲ್ಲಿ ಸರ್ಪಗಂಧಿ, ಅಶ್ವಗಂಧಿ ಒಂದೆಲಗ, ಆಡುಮುಟ್ಟದ ಸೊಪ್ಪು ಮುಂತಾದವು ವಿಶ್ವಪ್ರಖ್ಯಾತಗೊಂಡಿರುವುವುಗಳಲ್ಲಿ ಕೆಲವು. (ಬಿ.ಎ.ಆರ್.)