ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧರ್ಮಸ್ಥಳ

ವಿಕಿಸೋರ್ಸ್ದಿಂದ

ಧರ್ಮಸ್ಥಳ ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಒಂದು ಪ್ರಮುಖ ಯಾತ್ರಾಸ್ಥಳ. ಪಶ್ಚಿಮ ಘಟ್ಟಗಳ ಪಶ್ಚಿಮ ಇಳಿಜಾರಿನ ಅಂಚಿನಲ್ಲಿ ಮಂಗಳೂರು ಚಾರ್ಮಾಡಿ ರಸ್ತೆಯಲ್ಲಿ ಮಂಗಳೂರಿನಿಂದ ಪೂರ್ವಕ್ಕೆ 75 ಕಿ.ಮೀ. ಬೆಳ್ತಂಗಡಿಯಿಂದ ಆಗ್ನೇಯಕ್ಕೆ ಸುಮಾರು 16 ಕಿಮೀ. ದೂರದಲ್ಲಿ ಇರುವ ಈ ಪುಣ್ಯಸ್ಥಳ. ಸಮುದ್ರದಿಂದ ಸ್ವಲ್ಪ ದೂರದಲ್ಲಿ ಸಮುದ್ರಮಟ್ಟದಿಂದ ಸ್ವಲ್ಪ ಎತ್ತರದಲ್ಲಿದ್ದು ಬೇಸಗೆಯಲ್ಲಿ ಸೆಕೆ ಹೆಚ್ಚು ಮಳೆಗಾಲದಲ್ಲಿ ತಂಪಾಗಿರುತ್ತದೆ. ಜನಸಂಖ್ಯೆ 9,258 (2001)

ಧರ್ಮಸ್ಥಳ ಮುಂಚಿನ ಹೆಸರು ಕುಡುಮ (ಕೊಡುಮ) ಎಂದು. ಮಲ್ಲರಮಡಿ ಗ್ರಾಮಕ್ಕೆ ಇದು ತುಂಬ ಹತ್ತಿರ. ಸ್ಥಳೀಯ ಐತಿಹ್ಯದಂತೆ ಇದರ ಬಳಿಯಲ್ಲಿನ ನೆಲ್ಯದಿ ಬೀಡಿನಲ್ಲಿ ಬಿರಮಣ್ಣ ಪೆರ್ಗಡೆ (ಹೆಗ್ಗಡೆ) ಮತ್ತು ಅಮ್ಮು ದೇವಿ ಬಲ್ಲಾಳ್ತಿ ಎಂಬ ಜೈನದಂಪತಿಗಳು ವಾಸಿಸುತ್ತಿದ್ದರು. ಇವರು ಈ ಪ್ರದೇಶದ ನಾಯಕರೂ ದಾನಿಗಳೂ ಆಗಿದ್ದರು. ಒಮ್ಮೆ ಧರ್ಮ ದೇವತೆಗಳು (ಕಲರಹು, ಕಲರಕೈ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ) ಕುದುರೆ ಮತ್ತು ಆನೆಯ ಮೇಲೆ ಬಂದು, ಅವರನ್ನು ಹರಸಿ, ದಾನಧರ್ಮಗಳನ್ನು ನಿರಂತರವಾಗಿ ಮಾಡುತ್ತಿರುವಂತೆ ತಿಳಿಸಿ, ದೇವಾಲಯವೊಂದರಲ್ಲಿ ತಮ್ಮನ್ನು ಸ್ಥಾಪಿಸಲು ಆಜ್ಞಾಪಿಸಿದುವಂತೆ. (ಈ ಕ್ಷೇತ್ರದ ಲಾಂಛನದಲ್ಲಿ ಆನೆ ಮತ್ತು ಕುದುರೆ ಲಿಂಗವೊಂದನ್ನು ಪೂಜೆ ಮಾಡುತ್ತಿರುವಂತಿದೆ. ಇಂದಿಗೂ ಇಲ್ಲಿನ ದೇವಾಲಯದಲ್ಲಿ ಆನೆಯೊಂದನ್ನು ಸಾಕಿದ್ದಾರೆ). ಅದರಂತೆ ಅವರಿಗೆ ದೇವಾಲಯವನ್ನು ಕಟ್ಟಿಸಿ, ಉತ್ಸವ, ಪರ್ವ, ನಡಾವಳಿಗಳನ್ನು ನಡೆಸಲಾಯಿತು. ಬ್ರಾಹ್ಮಣರನ್ನು ಕರೆಸಿ, ದೈವಗಳಿಗೆ ಪೂಜೆ ಮಾಡಲು ತಿಳಿಸಿದಾಗ, ದೇವರಿಲ್ಲದೆ ಅಲ್ಲಿ ಪೂಜೆ ಕೈಗೊಳ್ಳಲು ಸಾಧ್ಯವಿಲ್ಲ ಎಂದರಂತೆ. ಅದರಂತೆ ಕದ್ರಿಯಲ್ಲಿರುವ ಲಿಂಗವನ್ನು ದೇವತೆಗಳ ಆಜ್ಞೆಯಂತೆ ಅವರ ದಾಸನಾದ ಅಣ್ಣಪ್ಪ ತಂದನಂತೆ. ಕ್ರಿ.ಶ. ಸುಮಾರು 1513ರಲ್ಲಿ ದೇವಾರಾಜ ಹೆಗ್ಗಡೆಯವರ ಕಾಲದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ವಾದಿರಾಜ ಸ್ವಾಮಿಗಳು ಈ ಸ್ಥಳವನ್ನು ಸಂದರ್ಶಿಸಿ, ಲಿಂಗದ ಪುನರ್‍ಪ್ರತಿಷ್ಠಾಪನೆ ಮಾಡಿ, ಈ ಸ್ಥಳಕ್ಕೆ ಧರ್ಮಸ್ಥಳ ಎಂಬ ಹೆಸರನ್ನು ನೀಡಿದರು. ಅಂದಿನಿಂದ ಈ ಹೆಸರೇ ಇದೆ. ಹೆಗ್ಗಡೆ ವಂಶಜರು ದೇವಾಲಯದ ಧರ್ಮದರ್ಶಿಗಳಾಗಿ ನಡೆದುಕೊಳ್ಳುತ್ತಿದ್ದಾರೆ. 1903ರಲ್ಲಿ ಈ ಸ್ಥಳದಲ್ಲಿ ಹಿಂದಿನ ಕುಡುಮ, ಮಲ್ಲರಮಡಿ ಮತ್ತು ನೆಲ್ಯದ ಬೀಡುಗಳನ್ನು ಸೇರಿಸಿ ಗ್ರಾಮಪಂಚಾಯಿತಿಯೊಂದನ್ನು ಸರ್ಕಾರ ಸ್ಥಾಪಿಸಿತು. ಈಗಲೂ ಇಲ್ಲಿ ಗ್ರಾಮ ಪಂಚಾಯತಿ ಇದೆ.

ಇಲ್ಲಿನ ಹೆಗ್ಗಡೆ ವಂಶಜರಲ್ಲಿ ಪ್ರಸಿದ್ಧರಾದವರೆಂದರೆ ಕುಮಾರಯ್ಯ ಹೆಗ್ಗಡೆ (1790-1830). ಮಂಜಯ್ಯ ಹೆಗ್ಗಡೆ (1849-1895). ಮಂಜಯ್ಯ ಹೆಗ್ಗಡೆ (1918-1955) ಮತ್ತು ರತ್ನವರ್ಮ ಹೆಗ್ಗಡೆ (1955-1968) ಇವರುಗಳು. ಈಗಿನ ವೀರೇಂದ್ರ ಹೆಗ್ಗಡೆಯವರು 1968ರಲ್ಲಿ ಧರ್ಮದರ್ಶಿಗಳಾದರು. ಈ ಹೆಗ್ಗಡೆಗಳಲ್ಲಿ ಕುಮಾರಯ್ಯ ಹೆಗ್ಗಡೆಯವರು ಅಂದಿನ ಮದ್ರಾಸು ಪ್ರಾಂತ್ಯದ ಇತಿಹಾಸದಲ್ಲಿ ಪ್ರಸಿದ್ಧರಾದವರು. ಇಲ್ಲಿಗೆ ಸಮೀಪದಲ್ಲಿರುವ ಉಜರೆ ಬಳಿಯ ಜಮಾಲಾಬದ್ ಶಿಲಾಕೋಟೆಯನ್ನು ಟೀಪೂಸುಲ್ತಾನನಿಂದ ವಶಪಡಿಸಿಕೊಳ್ಳಲು ಇವರು ಆಂಗ್ಲರಿಗೆ ಸಹಾಯಮಾಡಿದರು. ಕಾರಣವೊಂದರಿಂದ ಇದೇ ಹೆಗ್ಗಡೆಯವರು ಆಂಗ್ಲರ ದೃಷ್ಟಿಯಲ್ಲಿ ಅಪರಾಧಿಗಳಾದರು. ಆದರೆ ಮುಂದೊಂದು ದಿನ ಆಂಗ್ಲರಿಗೆ ತಮ್ಮ ತಪ್ಪಿನ ಅರಿವಾಗಿ ಕುಮಾರಯ್ಯ ಹೆಗ್ಗಡೆಯವರಿಗೆ ಅವರ ಹಿಂದಿನ ಸ್ಥಾನಮಾನಗಳನ್ನು ನೀಡಿದರು. ಎಲ್ಲ ಹೆಗ್ಗಡೆಯವರುಗಳೂ ಧರ್ಮಾಭಿಮಾನಿಗಳೂ ದಾನಿಗಳೂ ಆಗಿದ್ದು ತಮ್ಮ ಪರಂಪರೆಯನ್ನು ಉಳಿಸಿಕೊಂಡು ಬಂದರು. ಇಲ್ಲಿನ ದೇವಾಲಯವನ್ನು ಅಭಿವೃದ್ಧಿ ಪಡಿಸಿ, ಅನೇಕ ಛತ್ರಗಳನ್ನು ನಿರ್ಮಿಸಿದರು. ಸಾಹಿತ್ಯ, ಕಲೆಗಳಲ್ಲೂ ಇವರು ಆಸಕ್ತರಾಗಿದ್ದರು.

ಪ್ರೇಕ್ಷಣೀಯ ಬೆಟ್ಟಗಳು, ಬತ್ತದ ಗದ್ದೆಗಳು, ಅಡಕೆ ಮತ್ತು ತೆಂಗಿನ ತೋಟಗಳು ಅಲಂಕಾರಿಕವಾಗಿ ಈ ಊರನ್ನು ಸುತ್ತುವರಿದಿದೆ. ಈ ಊರನ್ನು ಪ್ರವೇಶಿಸುವಾಗಲೇ 150' ಎತ್ತರದ, ಸುಂದರವಾದ ಪ್ರವೇಶದ್ವಾರ ಹಾಗೂ ಎರಡು ಕಡೆಗಳಲ್ಲಿನ ಸಾಲುಸಾಲಾದ ನಾಲ್ಕಾರು ಅಂತಸ್ತುಗಳ ಛತ್ರಗಳು ಕಾಣುವುವು. ಮುಂದೆ ನಡೆದಂತೆ ಶ್ರೀ ಮಂಜುನಾಥಸ್ವಾಮಿ ಆಲಯ ಕಾಣುವುದು. ಸುಮಾರು 20'ಎತ್ತರದ ಪೌಳಿಯ ಮೇಲೆ ನಿರ್ಮಾಣವಾಗಿರುವ ಈ ದೇವಾಲಯ ಕಡಲ ತೀರದ ಅನೇಕ ದೇವಾಲಯಗಳಂತೆ ಮಣ್ಣು, ಜಂಬಿಟ್ಟಿಗೆ ಮತ್ತು ಮರಗಳಿಂದ ನಿರ್ಮಿತವಾದುದು. ದಕ್ಷಿಣ ಭಾರತದ ಶಿಲ್ಪಕಲಾ ವೈಭವ ಇಲ್ಲಿ ಇಲ್ಲದಿದ್ದರೂ ಈ ದೇವರಲ್ಲಿನ ಜನರ ನಂಬಿಕೆ, ಶ್ರದ್ಧೆಗಳು ಅಪಾರ. ಎರಡು ಪ್ರಾಕಾರಗಳ ಒಳಭಾಗದಲ್ಲೂ ಮಂಜುನಾಥ ಸ್ವಾಮಿಯ ಮೂಲ ಆಲಯವಿದೆ. ಇದರ ಪಕ್ಕದಲ್ಲಿ ಅಮ್ಮನವರು. ಎದುರಿಗೆ ಅಣ್ಣಪ್ಪ, ಹಿಂದೆ ಗಣಪತಿ ಆಲಯಗಳಿವೆ. ಮಂಜುನಾಥ ಮತ್ತು ಅಮ್ಮನವರ ಆಲಯಗಳು ಪುಟ್ಟ ಮಂಟಪದಂತಿದೆ. ಇವುಗಳ ಎದುರಿಗೆ ಪುಟ್ಟ ಮಂಟಪಗಳನ್ನು ಆಧುನಿಕ ರೀತಿಯಲ್ಲಿ ನಿರ್ಮಿಸಿದ್ದಾರೆ. ಆಲಯದ ಬಾಗಿಲುಗಳಿಗೆ, ಪ್ರವೇಶ ದ್ವಾರಗಳಿಗೆ ಬೆಳ್ಳಿ ತಗಡನ್ನು ಹೊದಿಸಿದ್ದಾರೆ. ಒಳ ಪ್ರಾಕಾರದ ಮುಖಮಂಟಪ ಮರದ ಕಂಬಗಳಿಂದ ಕೂಡಿದೆ. ಇವು ಮತ್ತು ಮೇಲುಚಾವಣಿಗಳಲ್ಲಿ ಸುಂದರ ಕೆತ್ತನೆ ಕೆಲಸವಿದೆ. ಈ ಮುಖಮಂಟಪದ ಬಲಗಡೆ ಪ್ರವೇಶದ್ವಾರದ ಎರಡೂ ಕಡೆಗಳಲ್ಲಿ ಮಾನವಾಕೃತಿಗಿಂತಲೂ ಎತ್ತರದ ದ್ವಾರಪಾಲಕ ವಿಗ್ರಹಗಳಿವೆ. ಗಾಜಿನ ಹೊದ್ದಿಕೆಯ ಮರದ ಚೌಕಟ್ಟಿನಲ್ಲಿ ಈಗ ಇವನ್ನು ಇರಿಸಲಾಗಿದೆ. ಹೊರ ಪ್ರಾಕಾರದ ಗೋಪುರ ಮೂರು ಅಂತಸ್ತಿನ ಕಟ್ಟಡವಾಗಿದೆ. ಮುಂಭಾಗದಲ್ಲಿ ದೇವಾಲಯದ ಕಾರ್ಯಾಲಯವಿದೆ. ಇದರ ಕಂಬಗಳಿಗೂ ಬೆಳ್ಳಿ ಹೊದ್ದಿಕೆಯನ್ನು ಹೊದಿಸಿದ್ದಾರೆ. ಇಲ್ಲಿನ ಮೊದಲ ಅಂತಸ್ತಿನಲ್ಲಿ ಭಿತ್ತಿಚಿತ್ರಗಳಿವೆ. ಹೊರ ಪ್ರಾಕಾರದ ಉಳಿದ ಕಡೆಗಳಲ್ಲಿನ ಕೊಠಡಿಗಳು ಉಗ್ರಾಣಗಳಾಗಿವೆ. ನಾಲ್ಕು ಮೂಲೆಗಳಲ್ಲೂ ನಾಲ್ಕು ಗೋಪುರಗಳಿವೆ. ಇವೆಲ್ಲವುಗಳ ಮೇಲೂ ಕಳಶಗಳು ಕಂಗೊಳಿಸುತ್ತಿವೆ. ಈ ದೇವಾಲಯದ ಬಲಗಡೆಯಲ್ಲೆ ಮೂರಂತಸ್ತಿನ ವಿಶಾಲ ಊಟದ ಮನೆಗಳಿವೆ. ಹಗಲುರಾತ್ರಿ, ಎಲ್ಲ ಜಾತಿಯವರಿಗೂ ಇಲ್ಲಿ ಅನ್ನಸಂತರ್ಪಣೆಯಾಗುತ್ತದೆ. ಮೂಲ ದೇವಾಲಯದಲ್ಲಿ ಇಂದಿಗೂ ಹಿಂದಿನ ರೀತಿಯ ದೀಪಗಳೇ ಇವೆ.

ದೇವಾಲಯದ ಎದುರುಗಡೆ ಹೆಗ್ಗಡೆಯವರ ನಿವಾಸವಿದೆ. ಇಲ್ಲಿನ ಮೂರನೆಯ ಮಹಡಿಯಲ್ಲಿನ ದರ್ಪಣ ಮಂದಿರ ಪ್ರವಾಸಿಗಳ ಆಕರ್ಷಕ ಕೇಂದ್ರವಾಗಿದೆ. ಈ ನಿವಾಸದ ಹಿಂದೆಯೇ ಒಂದು ಕೊಳ ಹಾಗೂ ಪುಷ್ಪೋದ್ಯಾನಗಳಿವೆ. ದೇವಾಲಯದ ಎದುರಿನ ರಸ್ತೆಯಲ್ಲಿ ಸ್ವಲ್ಪ ದೂರ ಹೋದರೆ ಎಡಗಡೆ ಲಲಿತೋದ್ಯಾನ ಎನ್ನುವ ಉದ್ಯಾನವನವಿದೆ. ಹೂಗಿಡಗಳ ತೋಟದ ನಡುವೆ ಮಾನವಾಕೃತಿಯ ಬೊಂಬೆಗಳು ಆಕರ್ಷಕವಾಗಿವೆ. ಇದರ ಒಂದು ಬದಿಯಲ್ಲಿ ಪುಟ್ಟ ಪ್ರಾಣಿ ಸಂಗ್ರಹಾಲಯವೂ ಇದೆ. ದೇವಾಲಯದ ಎದುರಿನ ರಸ್ತೆಯಲ್ಲೆ ನೇರ ಹೋದರೆ ಎದುರಿಗೆ ವಸಂತಮಹಲ್ ಇರುವುದನ್ನು ಕಾಣಬಹುದು. ಇದೊಂದು ಪುಟ್ಟ ಕಲಾವಸ್ತು ಪ್ರದರ್ಶನ ಮಂದಿರವಾಗಿದೆ. ಇದರಲ್ಲಿ ಒಂದು ರಂಗಮಂದಿರವೂ ಇದೆ. ಆಗಾಗ್ಗೆ ಇಲ್ಲಿ ನಾಟಕಗಳು ಪ್ರದರ್ಶಿತವಾಗುತ್ತವೆ.

ಈ ಪ್ರದೇಶದಲ್ಲಿ ಧರ್ಮ ಹಾಗೂ ಮತಗಳ ನಡುವೆ ಸಹಾನುಭೂತಿ, ಸಹಕಾರ ಮತ್ತು ಹೊಂದಾಣಿಕೆ ಇರುವುದನ್ನು ಕಾಣಬಹುದು. ಇಲ್ಲಿನ ದೇವಾಲಯ ಶೈವ ದೇವಾಲಯ, ಮಾಧ್ವ ಬ್ರಾಹ್ಮಣರು ಇಲ್ಲಿನ ಅರ್ಚಕರು, ಜೈನ ಸಂಪ್ರದಾಯದ ಹೆಗ್ಗಡೆಯವರು ಇಲ್ಲಿನ ಧರ್ಮಾಧಿಕಾರಿಗಳು, ಬುದ್ಧ ಬೋಧಿಸತ್ತ್ವ ಮಂಜುಶ್ರೀ ಎಂಬುದು ಮಂಜುನಾಥನ ಮೂಲ ನಾಮವೆಂದು ಹೇಳಲಾಗುತ್ತದೆ. ಈ ದೇವಾಲಯದ ಭಕ್ತರುಗಳಲ್ಲಿ ಹಿಂದೂ ಮುಸಲ್ಮಾನ, ಕ್ರೈಸ್ತ-ಎಲ್ಲ ಮತಸ್ಥರೂ ಇದ್ದಾರೆ. ಎಲ್ಲರಿಗೂ ಈ ದೇವಾಲಯದಲ್ಲಿ ಪ್ರವೇಶವುಂಟು. ಪ್ರತಿ ವರ್ಷ 200ಕ್ಕಿಂತಲೂ ಹೆಚ್ಚು ವಿವಿಧ ಮತಗಳ ಬಡವರ ಮದುವೆಗಳು ಇಲ್ಲಿ ನಡೆಯುತ್ತವೆ. ಈ ದೇವಾಲಯದಲ್ಲಿ ನಾಗರಿಕರ ಜಗಳಗಳು ತೀರ್ಮಾನಿಸಲ್ಪಡುತ್ತವೆ. ಇದು ಕರ್ನಾಟಕದ ಒಂದು ವಿಶೇಷತೆಯೆಂದೇ ಹೇಳಬೇಕು. ವಿವಾದಗಳನ್ನು ಹೊಂದಿರುವವರು ಯಾವುದೇ ಜಾತಿ, ಮತ, ಪಂಥಕ್ಕೆ ಒಳಗಾಗಿರಲಿ, ಈ ದೇವಾಲಯಕ್ಕೆ ತಮ್ಮ ಜಗಳಗಳನ್ನು ತೀರ್ಪಿಗೆ ಒಳಪಡಿಸಿ ದೇವಾಲಯ ಕೊಡುವ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ. ಇಲ್ಲಿನ ಧರ್ಮಾಧಿಕಾರಿಗಳು ಪಂಕಜೆಯಲ್ಲಿರುವ ಜುಮ್ಮಾ ಮಸೀದಿಯಿಂದ ನಡೆಸಲ್ಪಡುತ್ತಿರುವ ತದ್ರಿಸುಲ್ ಕೊರಾನ್ ಅರ್ಯಾಬಿಕ್ ಶಾಲೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಅಲ್ಲದೆ ಸುತ್ತಮುತ್ತ ಜೈನ ಉಸ್ತುವಾರಿಯಲ್ಲಿರುವ ಅನೇಕ ಹಿಂದೂ ದೇವಾಲಯಗಳಿವೆ.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮಂಜುನಾಥ ದೇವಾಲಯದಲ್ಲಿ ಲಕ್ಷದೀಪೋತ್ಸವ ನಡೆಯುತ್ತದೆ. 12 ವರ್ಷಗಳಿಗೊಮ್ಮೆ ನಡಾವಳಿ ಎನ್ನುವ ಉತ್ಸವವೂ ವಿಶೇಷ ಸಂದರ್ಭಗಳಲ್ಲಿ ಮಹಾ ನಡಾವಳಿ ಎನ್ನುವ ಉತ್ಸವಗಳೂ ಸುಮಾರು 13 ದಿನಗಳ ವರೆಗೆ ನಡೆಯುತ್ತವೆ. ವರ್ಷ ವರ್ಷವೂ ಮೇಷ ಸಂಕ್ರಾಂತಿಯಂದು ಜಾತ್ರೆ, ರಥೋತ್ಸವಗಳು ನಡೆಯುತ್ತವೆ. ಇವಲ್ಲದೆ ನವರಾತ್ರಿ ಹಾಗೂ ಶಿವರಾತ್ರಿ ಉತ್ಸವಗಳು ಮತ್ತು ಪತಂಜೆ ಉತ್ಸವಗಳೂ ನಡೆಯುತ್ತವೆ.

ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಬೃಹದಾಕಾರದ ಏಕಶಿಲಾ ಗೋಮಟೇಶ್ವರನ ವಿಗ್ರಹ. ಇದರ ನಿರ್ಮಾಣ ಕಾರ್ಯ ರಂಜಾಳ ಗೋಪಾಲಕೃಷ್ಣ ಶೆಣೈರವರ ನೇತೃತ್ವದಲ್ಲಿ 1968ರಲ್ಲಿ ಪ್ರಾರಂಭವಾಗಿ 1973ರಲ್ಲಿ ಮುಗಿಯಿತು. ಕಾರ್ಕಳದಿಂದ 75 ಕಿಮೀ ದೂರದ ಇಲ್ಲಿಗೆ ವಿಶೇಷ ವಾಹನ ವ್ಯವಸ್ಥೆಯಲ್ಲಿ ಈ ವಿಗ್ರಹವನ್ನು ತರಿಸಲಾಗಿದೆ. 39' ಎತ್ತರ 14' ದಪ್ಪನಾದ ಈ ವಿಗ್ರಹ ಗ್ರ್ಯಾನೈಟ್ ಶಿಲೆಯಿಂದ ನಿರ್ಮಾಣವಾದುದು. ಇದರ ತೂಕ 175 ಟನ್ನುಗಳು. ಇದು ಭಾರತದ ಮೂರನೆಯ ಅತ್ಯಂತ ದೊಡ್ಡ ವಿಗ್ರಹ. ಧರ್ಮಸ್ಥಳದ ಪ್ರವೇಶದ್ವಾರದ ಬಳಿಯ ಗುಡ್ಡದ ಮೇಲೆ ಇದನ್ನು ನಿಲ್ಲಿಸಲಾಗಿದೆ.

ಇತ್ತೀಚೆಗೆ ಪ್ರವಾಸೋದ್ಯಮ ಕೇಂದ್ರವನ್ನಾಗಿ, ಇದನ್ನು ಪರಿವರ್ತಿಸಲು ಕೆಲವು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ನೇತ್ರಾವತಿ ಮತ್ತು ವೈಶಾಲಿ ಎಂಬ ನಿವಾಸ ಕೇಂದ್ರಗಳು ಅನೇಕರನ್ನು ಆಕರ್ಷಿಸುತ್ತವೆ.

ದೇವಾಲಯ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಹುಬ್ಬಳ್ಳಿ, ಧಾರವಾಡ, ಹೊನ್ನಾವರ ಕಾಲೇಜುಗಳೂ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳೂ ಇದರ ವತಿಯಿಂದಲೇ ನಡೆಯುತ್ತಿವೆ. (ಕೆ.ಆರ್.ಆರ್.)