ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಗು

ವಿಕಿಸೋರ್ಸ್ದಿಂದ

ನಂಗು - ಚಪ್ಪಟೆ ಮೀನುಗಳ ಗುಂಪಿಗೆ (ಫ್ಲ್ಯಾಟ್ ಫಿಶಸ್) ಸೇರಿದ ಒಂದು ಬಗೆಯ ಮೀನು (ಸೋಲ್). ಹ್ಯಾಲಿಬಟ್, ಪ್ಲೇಸ್, ಫ್ಲೌಂಡರ್, ಟರ್ಬಟ್, ಡ್ಯಾಬ್ಸ್ ಮುಂತಾದ ಮೀನುಗಳಿಗೆ ಹತ್ತಿರ ಸಂಬಂಧಿ. ಆಸ್ಟಿಕ್ರಿಯೀಸ್ ವರ್ಗ, ಹೆಟೆರೋಸೊಮೇಟ (ಫ್ಲೂರೊನೆಕ್ಟಿ ಫಾರ್ಮೀಸ್) ಗಣ, ಸೋಲಿಯಿಡೀ ಮತ್ತು ಸೈನೆರೊಗ್ಲಾಸಿಡೀ ಕುಟುಂಬಗಳಿಗೆ ಸೇರಿದ, ಸೋಲಿಯ ಓಮೆಟ, ಸೋಲಿಯ ಸೋಲಿಯ, ಸೈನೊಗ್ಲಾಸಸ್ ಸೆಮಿಫ್ಯಾಸಿಯೇಟಸ್ ಮುಂತಾದ ಹಲವಾರು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಇವುಗಳಲ್ಲಿ ಸೋಲೆಯ ಓವೇಟ ಎಂಬುದು ಭಾರತದ ಕೇರಳ ಕರಾವಳಿ ಪ್ರದೇಶಗಳಲ್ಲೂ ಸೈನೊಗ್ಲಾಸಸ್ ಜಾತಿಯ ಕೆಲವು ಪ್ರಭೇದಗಳು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳ ಕರಾವಳಿಗಳಲ್ಲೂ ಕಾಣದೊರೆಯುವುವು. ಸೋಲಿಯ ಸೋಲಿಯ ಪ್ರಭೇದ ಯೂರೋಪಿನಲ್ಲಿ ಹೇರಳ. ಅಮೆರಿಕದ ಅಟ್ಲಾಂಟಿಕ ಕರಾವಳಿಯಲ್ಲೂ ಒಂದು ತೆರನ ನಂಗುಮೀನು ಉಂಟು. ಹ್ಯಾಲಿಬಟ್ ಮೀನಿನಂತೆಯೇ ನಂಗು ಕೂಡ ತಟ್ಟೆಯಂತೆ ಚಪ್ಪಟೆಯಾಗಿದ್ದು ಸಾಗರತಳದಲ್ಲಿ ವಾಸಿಸುತ್ತದೆ. ಹಗಲುಹೊತ್ತು ಹುದುಗಿಕೊಂಡಿರುವ ಇದು ರಾತ್ರಿ ವೇಳೆ ತನ್ನ ಆಹಾರವಾದ ಹುಳುಗಳು, ಶ್ರಿಂಪ್‍ಗಳು ಮುಂತಾದವನ್ನು ಅರಸಿಕೊಂಡು ತೆವಳುತ್ತಾ ಅಲೆದಾಡುತ್ತದೆ.

ನಂಗುವಿನ ದೇಹ ಚಪ್ಪಟೆಯಾಗಿರುವುದರಿಂದ ಇದರ ಬಾಹ್ಯರೂಪದಲ್ಲಿ ಹಲವಾರು ವಿಚಿತ್ರಗಳನ್ನು ಕಾಣಬಹುದು. ದೇಹದ ಒಂದು ಪಾಶ್ರ್ವದಲ್ಲಿ ಮಾತ್ರ ಕಡುಬಣ್ಣದ ವರ್ಣಕಗಳು ಇವೆ. ಸದಾ ಮರಳಿನ ಸಂಪರ್ಕದಲ್ಲಿರುವ ಇನ್ನೊಂದು ಪಾಶ್ರ್ವ ವರ್ಣರಹಿತ. ಕಣ್ಣುಗಳೆರಡೂ ದೇಹದ ಮೇಲು ಭಾಗದಲ್ಲೇ ಸ್ಥಿತವಾಗಿವೆ. ಬಾಯಿ ತಿರುಚಿಕೊಂಡಂತಿದೆ. ಬೆನ್ನು, ಗುದ ಹಾಗೂ ಉದರ ಭಾಗಗಳ ಈಜುರೆಕ್ಕೆಗಳೆಲ್ಲ ಪರಸ್ಪರ ಕೂಡಿಕೊಂಡು ದೇಹದ ಸುತ್ತ ಕುಚ್ಚಿನಂತೆ ಹರಡಿಕೊಂಡಿದೆ. ತಲೆಯ ಭಾಗದಲ್ಲಿ ಮಾತ್ರ ತಳದ ಈಜುರೆಕ್ಕೆಯ ಕೆಲವು ಕಡ್ಡಿಗಳು ತಂತುಗಳ ರೂಪದ ಸ್ಪರ್ಶೇಂದ್ರಿಯಗಳಾಗಿ ಮಾರ್ಪಾಟಾಗಿವೆ. ಹೀಗೆ ನಂಗುವಿನ ರೂಪ ವಿಚಿತ್ರ ತೆರನಾಗಿರುವುದು ವಯಸ್ಕ ಜೀವಿಯಲ್ಲಿ ಮಾತ್ರ. ಮೊಟ್ಟೆಯೊಡೆದು ಮರಿ ಮೀನು ಹೊರಬಂದಾಗ ಯಾವುದೇ ಇತರ ಜಾತಿಯ ಮೀನಿನ ಮರಿಯಂತೆಯೇ ದೇಹ ದ್ವಿಪಾಶ್ರ್ವ ಸಮಾಂಗತೆಯನ್ನು ತೋರುತ್ತದೆ. ಇವು ನೀರಿನ ಮೇಲ್ಮೈ ಬಳಿ ನೇರವಾಗಿ ಈಜಿಕೊಂಡು ಚಲಿಸುತ್ತದೆ. ಆದರೆ ಮರಿಯ ಮುಂದಿನ ಬೆಳವಣಿಗೆಯ ಕಾಲದಲ್ಲಿ ಒಂದು ಕಣ್ಣಿನ ಮೇಲಿರುವ ಮೃದ್ವಸ್ಥಿ ಇಂಗಿ ಹೋಗಿ ಆ ಕಣ್ಣು ಇನ್ನೊಂದು ಪಾಶ್ರ್ವದೆಡೆಗೆ ಚಲಿಸಲು ಆರಂಭಿಸುತ್ತದೆ. ತನ್ನ ಮೂಲಸ್ಥಾನದಿಂದ ತಲೆಯನ್ನು ಬಳಸಿಹೊರಟ ಈ ಕಣ್ಣು ಕ್ರಮೇಣ ಇನ್ನೊಂದು ಕಣ್ಣಿನ ಸನಿಹಕ್ಕೆ ಬಂದು ನೆಲೆಸುತ್ತದೆ. ನೀರಿನ ಪಾತಳಿಯಲ್ಲೇ ಈಜುತ್ತಿದ್ದ ಎಳೆಯ ಮೀನು ಈಗ ಕಡಲ ತಳಕ್ಕೆ ಮುಳುಗಿ ತನ್ನ ಒಂದು ಪಕ್ಕದ ಮೇಲೆ ವಿರಮಿಸಿ ಚಪ್ಪಟೆಯಾಗುವುದು. ನಂಗುವಿನ ದೇಹದ ಮೇಲ್ಬಾಗದಲ್ಲಿರುವ ಭುಜದ ಈಜುರೆಕ್ಕೆಯ ಮೇಲೆ ಕಡುನೀಲಿಯ ಕಲೆಯೊಂದಿದೆ. ಗಾಬರಿಗೊಂಡಾಗ ಮೀನು ಮರಳಿನಲ್ಲಿ ಹೋಗಿ ಹುದುಗಿಕೊಂಡು ತನ್ನ ಭುಜದ ಈಜುರೆಕ್ಕೆಯನ್ನು ಸಣ್ಣ ಬಾವುಟದಂತೆ ಎತ್ತಿಹಿಡಿಯುವುದು. ಆಹಾರಯೋಗ್ಯವಲ್ಲದ ವೀವರ್ ಮೀನಿನ ಬೆನ್ನುಭಾಗದ ಈಜುರೆಕ್ಕೆಯನ್ನು ಇದು ಹೋಲುವುದರಿಂದ ಶತ್ರುಗಳು ನಂಗುವನ್ನು ಆಕ್ರಮಿಸುವುದಿಲ್ಲ.

ನಂಗು ಬಹಳ ರುಚಿಕರವಾದ ಮೀನೆಂದು ಹೆಸರುವಾಸಿಯಾಗಿದೆ. ಸತ್ತ ಮೂರು ದಿನಗಳ ಬಳಿಕ ಇದಕ್ಕೆ ಒಂದು ಬಗೆಯ ರುಚಿ ಬರುತ್ತದೆ. ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ಒಂದು ರೀತಿಯ ರಾಸಾಯನಿಕ ಪದಾರ್ಥ ಈ ರುಚಿಗೆ ಕಾರಣ ಎನ್ನಲಾಗಿದೆ. ಹೀಗಾಗಿ ಇದೊಂದು ಅತ್ಯಮೂಲ್ಯವಾದ ಆಹಾರ ಮೀನು. ಇದು ಸುಮಾರು 60 ಸೆಂಮೀ ಉದ್ದ ಬೆಳೆಯುತ್ತದೆ. (ಎಚ್.ಎಚ್.ಎಸ್.)