ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂದಲಾಲ್

ವಿಕಿಸೋರ್ಸ್ದಿಂದ

ನಂದಲಾಲ್ ಹಿಂದೀ ಜೈನಕವಿ. 17ನೆಯ ಶತಮಾನದವ. ತಂದೆ ಶ್ರವಣದಾಸ. ಈತನ ಪೂರ್ವಜರ ವಾಸಸ್ಥಾನ ಬಯಾನಾ. ತಂದೆ ಆಗ್ರದ ಬಳಿಯಲ್ಲಿರುವ ಗೌಸುನಾ ಎಂಬಲ್ಲಿ ಬಂದು ನೆಲೆನಿಂತ. ಈತನ ಅಜ್ಜ ಪ್ರೇಮಚಂದನೆಂದೂ ಮುತ್ತಜ್ಜ ಆಮರಸೀ ಎಂದೂ ಈಚೆಗೆ ತಿಳಿದುಬಂದಿದೆ. ಈತನ ತಾಯಿ ಚಂದನೆ. ಅಗರ್‍ವಾಲ್ ವಂಶಜನಾದ ಈತ ಗೋಯಲ್ ಗೋತ್ರದವ. ಶ್ರುತಪಾರಂಗತನಾದ ಭಟ್ಟಾರಕ ತ್ರಿಭುವನಕೀರ್ತಿ ಈತನ ಗುರು. ಈತನ ವಿದ್ವತ್ತು ಮತ್ತು ಸೌಜನ್ಯಗಳನ್ನು ಕಂಡು ಪ್ರಭಾವಿತನಾದ ಪಂಡಿತ ಹೇಮರಾಜ ತನ್ನ ವಿದುಷಿ ಪುತ್ರಿ ಜೈನಿಯನ್ನು ಈತನಿಗೆ ಕೊಟ್ಟು ಮದುವೆ ಮಾಡಿದ. ಇವರ ಮಗ ಬುಲಾಕೀದಾಸನೂ ಒಬ್ಬ ಶ್ರೇಷ್ಠ ಸಾಹಿತಿ.

ಜಹಾಂಗೀರನ ಆಳ್ವಿಕೆಯ ಆ ಕಾಲದಲ್ಲಿ ನಂದಲಾಲನಂಥ ಪ್ರಜೆಗಳಿಗೆ ಯಾವುದೇ ಧಾರ್ಮಿಕ ಪ್ರತಿಬಂಧಕಗಳಿರಲಿಲ್ಲ ; ಭಯಭೀತಿಗಳಿಲ್ಲದೆ ಅವರು ಸಾಹಿತ್ಯನಿರ್ಮಾಣ ಮಾಡಬಹುದಿತ್ತು. ನಂದಲಾಲ್ ಯಶೋಧರಚರಿತ್ರ (1670) ಸುದರ್ಶನಚರಿತ್ರ (1663) ಮತ್ತು ಗೂಢವಿನೋದ ಎಂಬ ಮೂರು ಗ್ರಂಥಗಳನ್ನು ರಚಿಸಿದ್ದಾರೆ.

ಯಶೋಧರಚರಿತ್ರದ ಕಥಾನಕ ಹಳೆಯದಾದರೂ ಕಾವ್ಯತತ್ತ್ವದ ದೃಷ್ಟಿಯಿಂದ ಇದು ಹೊಸದು. ಇಡೀ ಕಾವ್ಯ ಚೌಪಾಯಿ ಛಂದಸ್ಸಿನಲ್ಲಿದೆ. ಭಾಷೆಯಲ್ಲಿ ಪ್ರಸಾದ ಗುಣವಿದೆ ; ಗತಿಶೀಲತೆ ಇದೆ.

ಚೌಪಾಯಿ ಛಂದಸ್ಸಿನಲ್ಲಿರುವ ಸುದರ್ಶನಚರಿತ್ರ ಭಕ್ತಿಪ್ರಧಾನವಾದ್ದು. ಇದರ ಕಥಾನಕದ ಮೇಲೆ ಅಪಭ್ರಂಶದ ಸುದಂಸಣ ಚರಿಉ ಕೃತಿಯ ಪೂರ್ಣ ಪ್ರಭಾವವಿದೆ. ಇದರ ಭಾಷೆ ಮತ್ತು ಭಾವಗಳೆರಡೂ ಸುಂದರವಾಗಿದೆ.

ಗೂಢವಿನೋದದಲ್ಲಿ ಅಧ್ಯಾತ್ಮ ಸಂಬಂಧವಾದ ಪದಗಳು ಮತ್ತು ಗೀತೆಗಳು ಇವೆ. (ಎಂ.ಜೆ.)