ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರವೇದನೆ

ವಿಕಿಸೋರ್ಸ್ದಿಂದ

ನರವೇದನೆ - ಒಂದು ಯಾ ಅಧಿಕ ನರಗಳ ನೇರ ಉದ್ರಿಕ್ತ ವೇದನೆಯ ಹರಿವು (ನ್ಯೂರಾಲ್ಜಿಯ). ನರಕ್ಕೆ ಸಂಬಂಧಿಸಿದ ವ್ಯತ್ಯಯಗಳ ಕಾರಣದ ಫಲವಾಗಿ ಇಲ್ಲವೆ ಅಕಾರಣವಾಗಿ ಪ್ರಕಟಗೊಳ್ಳುವ ಬಾಧೆ ಇದು. ಕಪಾಲನರಗಳಿಗೆ ಸಂಬಂಧಿಸಿ ಇಲ್ಲವೆ ಸರ್ಪಹುಣ್ಣಿನ ಮತ್ತು ಫರಂಗಿ ರೋಗಗಳ ಫಲವಾಗಿ ಉದ್ಭವಿಸಬಹುದು. ನರಪೂರೈಕೆ ಆಗುವ ಪ್ರದೇಶಗಳಲ್ಲೆಲ್ಲ ಚಳಕು ಹೊಡೆದಂತೆ ಅನುಭವವಾಗುವುದು ಈ ಬಾಧೆಯ ವೈಶಿಷ್ಟ್ಯ.

1. ಟ್ರೈಜೆಮೈನಲ್ (ಕಪಾಲದ ಐದನೆಯ) ನರದ ಹರಡಿಕೆಯ ಪ್ರದೇಶದಲ್ಲಿ ನರವೇದನೆ ಏಕಾಏಕಿಯಾಗಿ ಮಿಂಚಿನಂತೆ ಇಲ್ಲವೆ ಇರಿದಂತೆ ಅನುಭವವಾಗಬಹುದು. ಇದಕ್ಕೆ ಟಿಕ್ ಡೋಲೊರು ಎಂಬ ಹೆಸರಿದೆ. ತುಂಬ ತೀವ್ರತರವಾದ ಈ ನೋವು ಅಲ್ಪಕಾಲಾವಧಿಯದು-ಕೆಲವು ಸೆಕೆಂಡುಗಳಿಂದ ಒಂದೆರಡು ಮಿನಿಟು ತನಕ ಇರಬಹುದು. ಇದು ಮಧ್ಯವಯಸ್ಸಿಗಿಂತ ಮೊದಲು ಗೋಚರಿಸುವುದು ಅಪರೂಪ. ಪುರುಷರಿಗಿಂತ ಸ್ತ್ರೀಯರಲ್ಲಿ ಹೆಚ್ಚು ಸಾಮಾನ್ಯ. ಟೆಕ್ ಡೋಲೊರು ಮೇಲು ಮತ್ತು ಕೆಳದವಡೆಗೆ ಸಂಬಂಧಿಸಿದ ಟ್ರೈಜೆಮೈನಲ್ ನರದ ಕವಲುಗಳ ಪ್ರದೇಶಕ್ಕೆ ಸೀಮಿತವಾಗಿದ್ದು ಕೆನ್ನೆ, ವಸಡು, ತುಟಿ, ಗದ್ದ ಮತ್ತು ನಾಲಗೆಯಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಆ ಪ್ರದೇಶದಿಂದ ಬೇರೆಡೆಗೂ ಹರಡುವುದುಂಟು. ನೋವು ಬಂದ ಕಾಲದಲ್ಲಿ ವೇದನೆ ತಡೆಯಲು ಅಸಾಧ್ಯವಾಗಿರುವುದು. ಆ ಕಾಲದಲ್ಲಿ ಮುಖದ ಸ್ನಾಯುಗಳು ಸೆಳೆತ ಹೊಂದಿ ಮುಖ ಕಿವಿಚಲ್ಪಡಬಹುದು. ಕೆಲವು ಬಾರಿ ಮುಖ ಕೆಂಪಡರಿ ಕಣ್ಣೀರು, ಬಾಯ್ನೀರು ಸುರಿಯಬಹುದು. ದೇಹಕ್ಕೆ ಚಳಿ ಬಂದಾಗ, ಮುಖ ತೊಳೆಯುವಾಗ, ಹಲ್ಲುಜ್ಜುವಾಗ, ಮಾತಾಡುವಾಗ ಇಲ್ಲವೆ ಜಗಿದು ನುಂಗುವಾಗ ನೋವು ಉದ್ಭವಿಸಬಹುದು. ಅಂದರೆ ಮುಖದ ಬೇರೆ ಬೇರೆ ವಲಯಗಳು ಕಾರಣಾಂತರದಿಂದ ಪ್ರಚೋದನೆಗೊಂಡಾಗ ವೇದನೆ ತೋರಿಬರುವುದೆಂದಾಯಿತು. ಇವುಗಳಿಗೆ ಪ್ರಚೋದಕ ಪ್ರದೇಶಗಳೆಂದು (ಟ್ರಿಗ್ಗರ್ ಜೋನ್ಸ್)ಹೆಸರು. ಪ್ರಾರಂಭದಲ್ಲಿ ನೋವು ಬರುವ ಕಾಲಾವಧಿ ಹೆಚ್ಚು ಅಂತರದ್ದಾದರೂ ಕಾಲ ಕಳೆದಂತೆ ವೇದನೆ ಪದೇ ಪದೇ ಮರುಕೊಳಿಸುವುದು. ಕೆಲವು ಬಾರಿ ಅದು ತಂತಾನೆ ನಿಲ್ಲುವುದೂ ಉಂಟು. ರಾತ್ರಿವೇಳೆ ವೇದನೆ ಕಾಣಿಸಿಕೊಳ್ಳುವುದಿಲ್ಲ. ನೋವು ಪದೇ ಪದೇ ಬರಲಾರಂಭಿಸಿದಾಗ ಅದು ಆಹಾರ ಸೇವನೆಗೆ ಅಡ್ಡಿಯನ್ನು ಉಂಟುಮಾಡಿ ಪರೋಕ್ಷವಾಗಿ ತೂಕದ ಇಳುವರಿಗೂ ಮನಸ್ಸಿನ ಖಿನ್ನತೆಗೂ ಕಾರಣವಾಗಬಹುದು. ಈ ರೋಗದಿಂದ ಪೀಡಿತರಾದವರ ನರಮಂಡಲರಚನೆಯಲ್ಲಿ ಯಾವ ನಿರ್ದಿಷ್ಟ ಬದಲಾವಣೆಗಳೂ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ನರಮಂಡಲದ ಪರೀಕ್ಷೆ ಯಾವ ಅನ್ಯಗೋಚರ ಚಿಹ್ನೆಗಳನ್ನು ತೋರ್ಪಡಿಸುವುದೆಂದೂ ಇಲ್ಲ. ವೇದನೆರಹಿತ ಕಾಲದಲ್ಲಿ ಯಾವ ನ್ಯೂನತೆಗಳು ಕಂಡುಬರುವುದಿಲ್ಲ. ಇನ್ನು ಈ ವೇದನೆಗೆ ಯಾವ ನಿರ್ದಿಷ್ಟ ಕಾರಣವೂ ಇಲ್ಲ. ಅಪರೂಪವಾಗಿ ಇದು ಮಿದುಳಕಾಂಡದ ಅನುವಳಿಕೆ ಅಥವಾ ಗಂತಿಯ ಲಕ್ಷಣವಾಗಿರಬಹುದು. ದಿನಕ್ಕೆ 400-800 ಮಿಗ್ರಾಮ್ ಪ್ರಮಾಣದಲ್ಲಿ ಕಾರ್ಬಮೆಜಪಿನ್ ಔಷಧಿ ವೇದನೆಯ ಚಿಕಿತ್ಸೆಯಲ್ಲಿ ಉಪಯುಕ್ತ. ಔಷಧಕ್ಕೆ ಮಣಿಯದಿದ್ದಲ್ಲಿ ಮದ್ಯಸಾರವನ್ನು ನರದೊಳಕ್ಕೆ ಚುಚ್ಚಿ ಇಲ್ಲವೆ ನರವನ್ನು ಶಸ್ತ್ರಚಿಕಿತ್ಸೆಯಿಂದ ಕತ್ತರಿಸಿ ಅದರ ವಾಹಕತೆಯನ್ನು ಭಂಗಪಡಿಸಬಹುದು.

2. ಕಪಾಲದ ಒಂಬತ್ತು ಮತ್ತು ಹತ್ತನೆಯ ನರಕ್ಕೆ ಸಂಬಂಧಿಸಿದ ನಾಲಗೆ ಗಂಟಲ ನರವೇದನೆ ಟ್ರೆಜೆಮೈನಲ್ ನರವೇದನೆಯನ್ನು ಹೋಲುವುದು. ತೀವ್ರ ತೆರನಾದ ನೋವು ಆಗಾಗ್ಗೆ ಗಂಟಲಲ್ಲಿ ಉದ್ಭವಿಸುತ್ತದೆ. ನೋವು ಅಲ್ಪಾವಧಿಯದು. ವೇದನೆಯನ್ನು ಗಂಟಲ ಹಿಂಬದಿ ಅಥವಾ ಟಾನ್‍ಸಿಲ್ ಪ್ರದೇಶದ ಸ್ಪರ್ಶದಿಂದ ಪ್ರಚೋದಿಸಬಹುದು. ನೋವು ಗಂಟಲಿನ ಒಂದು ಕಡೆ ಪ್ರಾರಂಭವಾಗಿ ಕತ್ತಿನವರೆಗೆ, ದವಡೆಯ ತುದಿಗೆ ಮತ್ತು ಕಿವಿಯ ಮುಂದುಗಡೆಗೆ ಹರಿದು ಹೋಗುತ್ತದೆ. ನುಂಗುವಾಗ ಮತ್ತು ನಾಲಗೆಯನ್ನು ಮುಂಚಾಚಿದಾಗ ಇದು ಮತ್ತಷ್ಟು ಹೆಚ್ಚುವುದು. ವೇದನೆ ಗೋಚರಿಸಿದಾಗ ಕ್ವಚಿತ್ತಾಗಿ ಹೃದಯದ ವೇಗಗತಿ ಕುಗ್ಗುತ್ತದೆ. ಈ ವೇದನೆಯಲ್ಲಿ ಮತ್ತಾವ ಅನ್ಯಗೋಚರ ಚಿಹ್ನೆಗಳೂ ತೋರಿಬರುವುದಿಲ್ಲ. ಇದರ ಕಾರಣವೂ ತಿಳಿಯದು. ಅಪರೂಪವಾಗಿ ಗಂಟಲು ಮತ್ತು ಟಾನ್ಸಿಲಿನಲ್ಲಿ ಬೆಳೆದ ಗಂತಿಯ ಲಕ್ಷಣವಾಗಿ ವೇದನೆ ತೋರಿಬರಬಹುದು. ಚಿಕಿತ್ಸೆಯಲ್ಲಿ ಕಾರ್ಬಮೆಜಪಿನ್ ಉಪಯುಕ್ತ. ವೇದನೆ ಮೇಲಿಂದ ಮೇಲೆ ಬರತೊಡಗಿದಲ್ಲಿ ನಾಲಗೆಗಂಟಲ ನರಛೇದನೆ ಮಾಡಬೇಕಾಗುತ್ತದೆ.

3. ವೈರಸಿನಿಂದ ಉದ್ಭವಿಸುವ ರೋಗವಾದ ಸರ್ಪಹುಣ್ಣಿನಿಂದ (ಹರ್ಪಿಸ್ ಜಾಸ್ಪರ್) ಚೇತರಿಸಿ ಎದ್ದಮೇಲೆ ನರವೇದನೆ ಬಲುಮುಖ್ಯ ತೊಡಕಾಗಿ ಚಿಕಿತ್ಸೆಗೆ ಕಷ್ಟಕರ ಸಮಸ್ಯೆಯಾಗಿ ತೋರಿಬರಬಹುದು. ಈ ಸನ್ನಿವೇಶ ಸಾಮಾನ್ಯವಾಗಿ ಧಮನಿ ಪೆಡಸಣೆಹೊಂದಿದ ವಯಸ್ಕರಲ್ಲಿ ಹೆಚ್ಚು ಕಂಡುಬರುತ್ತದೆ. ಮುಂಡ ಮತ್ತು ಕಣ್ಣು ಸುತ್ತಲಿನ ಪ್ರದೇಶದಲ್ಲಿ ನೋವು ಗೋಚರಿಸಬಹುದು. ರೋಗದ ಆರಂಭಸ್ಥಿತಿಗೂ (ಅಕ್ಯೂಟ್ ಕಂಡಿಶನ್) ಅನಂತರ ಗೋಚರಿಸುವ ವೇದನೆಯ ತೊಡಕಿಗೂ ಮಧ್ಯೆ ಸಾಕಷ್ಟು ಕಾಲಾವಕಾಶವಿರುತ್ತದೆ. ವೇದನೆ ತುಂಬ ತೀವ್ರತರವಾಗಿರುವುದಲ್ಲದೆ ಹೆಚ್ಚು ಕಾಲಾವಧಿಯದೂ ಆಗಿರುವುದು. ಮಿಂಚು ಹೊಡೆದಂತೆ, ಹರಿತ ಆಯುಧದಿಂದ ಇರಿದಂತೆ ರೋಗಿ ವೇದನೆಯನ್ನು ಅನುಭವಿಸುತ್ತಾನೆ. ಹೀಗಾಗಿ ವ್ಯಕ್ತಿಗೆ ನಿದ್ರೆ, ವಿಶ್ರಾಂತಿ ಪಡೆಯುವುದೂ ಕಷ್ಟವಾಗುವುದು. ಈ ವೇದನೆ ಹಿಂದೆ ಸರ್ಪಹುಣ್ಣು ಗೋಚರಿಸಿದ ದೇಹದ ನಿರ್ದಿಷ್ಟ ಚರ್ಮಭಾಗಕ್ಕೆ ಸೀಮಿತವಾಗಿರುತ್ತದೆ. ಆ ಪ್ರದೇಶವನ್ನು ಸ್ಪರ್ಶಿಸಿದಾಗ ನೋವು ಹೆಚ್ಚುವರಿಗೊಳ್ಳುವುದು. ಸರ್ಪಹುಣ್ಣಿಗೆ ಚಿಕಿತ್ಸೆ ತೃಪ್ತಿಕರವಾಗಿದೆ. ನೋವಿನ ಕಾರಣ ಬಹುಶಃ ಕೇಂದ್ರ ನರಮಂಡಲದಲ್ಲಿನ ವ್ಯತ್ಯಯವಿರಬಹುದು. ನೋವಿನ ಭಾಗವನ್ನು ಅನೇಕ ಗಂಟೆಗಳ ಕಾಲ ತಿಕ್ಕಿ ಉಪಶಮನ ಪಡೆಯಬಹುದು. ನೋವನ್ನು ಶಮನಗೊಳಿಸುವ ಔಷಧಗಳೂ ಮನೋಲ್ಲಾಸಕಾರಿ ಔಷಧಗಳೂ ಕೆಲವು ಬಾರಿ ಉಪಯುಕ್ತ. ಈ ವೇದನೆ ಒಂದೆರಡು ವರ್ಷಗಳ ಅನಂತರ ತಂತಾನೆ ಕಡಿಮೆ ಆಗುವ ಸಂಭವವಿದೆ. ರೋಗದ ಪ್ರಾರಂಭದಲ್ಲಿ ಗುಳ್ಳೆಗಳು ತೋರಿಬರುವ ಸನ್ನಿವೇಶದಲ್ಲಿ ವೈರಸ್ ನಿರೋಧಕ ಮತ್ತು ಕಾರ್ಟಿಕೋಸ್ಟಿರಾಯ್ಡ್ ರಸದೂತದ ಬಳಕೆಯಿಂದ ಈ ತೊಡಕು ಉದ್ಭವಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

4. ಪರಂಗಿ ರೋಗ ನರಮಂಡಲಕ್ಕೆ ಹರಡಿದಾಗ ತೋರಿಬರುವ ಟೇಬಸ್ ರೋಗದಲ್ಲಿ ಮಿಂಚಿನ ನೋವು ರೋಗದ ಪ್ರಾರಂಭಿಕ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಹರಿತವಾದ ಆಯುಧದಿಂದ ಇರಿದಂತೆ ತೋರುವ ನೋವು ಅಲ್ಪಾವಧಿಯದಾದರೂ ಪದೇ ಪದೇ ತೋರಿಬರುತ್ತದೆ. ಈ ನೋವು ಮುಂಡದಲ್ಲಿ ಸೊಂಟ ಪಟ್ಟಿಯಂತೆ ತೋರಿ ಬೇರೆಡೆ ಹರಿದುಹೋಗಬಲ್ಲದು. ವೇದನೆಯನ್ನು ಕಾರ್ಬಮೆಜಪಿನ್ ಶಮನಗೊಳಿಸಬಲ್ಲದು. (ಪಿ.ಎಸ್.ಎಸ್.)