ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸಿಂಹಮೂರ್ತಿ, ಎ ಸಿ

ವಿಕಿಸೋರ್ಸ್ದಿಂದ

ನರಸಿಂಹಮೂರ್ತಿ, ಎ ಸಿ - ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಹವ್ಯಾಸಿ ರಂಗಭೂಮಿಯ ನಂಟು ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್‍ನಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಗಳಲ್ಲಿನ ಜಾಹಿರಾತಿನ ಸ್ವಾಮ್ಯ ಪಡೆದ ಇವರು ನಡೆಸುತ್ತಿದ್ದ ಜಾಹಿರಾತು ಏಜೆನ್ಸಿಂ-ವಿಜಯ ಪಬ್ಲಿಸಿಟೀಸ್. 1956ರಲ್ಲಿ ಪ್ರಕಾಶ್ ಪಿಕ್ಚರ್ಸ್‍ನ ಎನ್.ಭಕ್ತವತ್ಸಲರೊಂದಿಗೆ ಕೂಡಿ ಉದಯ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ``ಭಾಗ್ಯೋದಯ ಚಿತ್ರವನ್ನು ತಯಾರಿಸಿದರು. ಇದು ಚಿತ್ರ ನಿರ್ಮಾಣದಲ್ಲಿ ಇವರ ಮೊದಲ ಹೆಜ್ಜೆ. ಈ ಚಿತ್ರದ ಮೂಲಕವೇ ಉದಯಕುಮಾರ್ ಚಿತ್ರರಂಗ ಪ್ರವೇಶಮಾಡಿದ್ದು.

ನಂತರ ಸ್ವಂತವಾಗಿ ``ಶೈಲಶ್ರೀ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಆರಂಭಿಸಿದರು ಆ ಸಂಸ್ಥೆಯ ಪ್ರಥಮ ಕೊಡುಗೆಯಾಗಿ, ಕೃಷ್ಣಮೂರ್ತಿ ಪುರಾಣಿಕರ ``ಧರ್ಮದೇವತೆ ಕಾದಂಬರಿಯನ್ನು ಕರುಣೆಯೇ ಕುಟುಂಬದ ಕಣ್ಣು (1982) ಎಂಬ ಹೆಸರಿನಲ್ಲಿ ಚಿತ್ರೀಕರಿಸಿ, ಕನ್ನಡ ಚಿತ್ರೋದ್ಯಮದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಸೃಷ್ಟಿಗೆ ನಾಂದಿಹಾಡಿದರು.

ಎ.ಡಿ.ಎ ತಂಡದಲ್ಲಿದ್ದ ತಮ್ಮ ಗೆಳೆಯ ಚಲನಚಿತ್ರ ತಾಂತ್ರಿಕ ತಜ್ಞ ಟಿ.ದ್ವಾರಕಾನಾಥ್‍ರೊಂದಿಗೆ ಕೃಷ್ಣೋದಯ ಚಿತ್ರ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ, ಚಿತ್ರ ನಿರ್ಮಾಣದೊಂದಿಗೆ ನಿರ್ದೇಶನಕ್ಕೂ ಇಳಿದರು. ``ಕುಲವಧು (1963) (ಕೃಷ್ಣ ಮೂರ್ತಿ ಪುರಾಣಿಕರ ಇನ್ನೊಂದು ಕಾದಂಬರಿ) ಚಿತ್ರದ ನಂತರ ದ್ವಾರಕಾನಾಥ್ ಹಾಗೂ ಎಸ್.ಕೆ.ಭಗವಾನ್‍ರೊಂದಿಗೆ ಚಿತ್ರಗಳನ್ನು ನಿರ್ದೇಶಿಸಿದರು.

ಕಾದಂಬರಿ ಸಾರ್ವಭೌಮ ಅ.ನ.ಕೃ ಅವರ ಹೆಸರಾಂತ ಕಾದಂಬರಿ ಸಂಧ್ಯಾರಾಗ ವನ್ನೂ ಚಿತ್ರರೂಪಕ್ಕಿಳಿಸಿದರು. ಈ ಚಿತ್ರ ತೃತೀಯ ಅತ್ಯುತ್ತಮ ಚಿತ್ರವಾಗಿ ರಾಜ್ಯ ಸರ್ಕಾರದಿಂದ 1966-67ನೇ ಸಾಲಿನಲ್ಲಿ ಪ್ರಶಸ್ತಿ ಪಡೆಯಿತು. ರಾಜ್‍ಕುಮಾರ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಚಿತ್ರ. ರಾಜದುರ್ಗದ ರಹಸ್ಯ (1963), ``ಆನಂದಕಂದ (1968) ಚಿತ್ರವನ್ನು ತೆರೆಗಿತ್ತರು. ಕಲಾವತಿ (1964), ಕವಲೆರಡು ಕುಲ ಒಂದು (1965) ಇವು ನರಸಿಂಹಮೂರ್ತಿ ಅವರ ನಿರ್ಮಾಣದ ಚಿತ್ರಗಳಲ್ಲಿ ಮುಖ್ಯವಾದವು.

ಇಂದು ನರಸಿಂಹಮೂರ್ತಿಗಳು ನಮ್ಮ ನಡುವೆ ಇಲ್ಲ. ಆದರೆ ಅವರು ನಿರ್ಮಿಸಿದ ನಿರ್ದೇಶಿಸಿದ ``ಸಂಧ್ಯಾರಾಗ ಸಂಗೀತ ಪ್ರಧಾನ ಚಿತ್ರ ಹಾಗೂ ನೃತ್ಯ ಪ್ರಧಾನ ``ಕಲಾವತಿ ಚಿತ್ರಗಳು ನಮ್ಮ ಮುಂದಿವೆ; ಅವರ ಹೆಸರನ್ನು ಚಿರಸ್ಮರಣೀಯವಾಗಿಸಿವೆ. (ಶ್ರೀಕೃಪಾ)