ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾರಾಯಣ ಹೆಚ್ ಕೆ

ವಿಕಿಸೋರ್ಸ್ದಿಂದ

ನಾರಾಯಣ ಹೆಚ್ ಕೆ - (1934) ಸುಗಮಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ಅಪೂರ್ವ ಸಂಗಮವೆನಿಸಿದ ಪ್ರತಿಭಾವಂತ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನ್ಮ, 1934 ಮಾರ್ಚ್ 14ರಂದು ತಾಯಿ ಸಣ್ಣಮ್ಮ, ತಂದೆ ಕೇಶವಯ್ಯ, ಕರ್ನಾಟಕ ಸಂಗೀತದ ವಿದ್ವಾಂಸರು, ಸಂಗೀತ ಪಾಠಶಾಲೆ ನಡೆಸುತ್ತಾ ಪಿಟೀಲು, ಹಾಡುಗಾರಿಕೆಯಲ್ಲಿ ಶಿಕ್ಷಣ ನೀಡುತ್ತಿದ್ದರು. ನಾರಾಯಣ ಅವರು ಆರಂಭದ ಶಿಕ್ಷಣ ಪಡೆದದ್ದು ತಂದೆಯ ಸಾನ್ನಿಧ್ಯದಲ್ಲಿ.

ಆರು ವರುಷದ ಬಾಲಕ ನಾರಾಯಣ ಪ್ರಾರಂಭಿಸಿದ್ದು ಪಿಟೀಲು ವಾದನ. ಮುರಿದ ಪಿಟೀಲನ್ನು ರಿಪೇರಿಗೆ ಕೊಟ್ಟಾಗ ಅದು ಮತ್ತೆ ದೊರೆಯಲೇ ಇಲ. ಹಾಡುಗಾರಿಕೆಯೇ ಮುಂದುವರೆಯಿತು. ಹಾಡುಗಾರಿಕೆಯಲ್ಲಿ ಸೀನಿಯರ್ ಪರೀಕ್ಷೆಗೆ ತೇರ್ಗಡೆ. ವಿದ್ವತ್ ಪಾಠಕ್ಕಾಗಿ ಹೊಳೆನರಸೀಪುರದಿಂದ ಮೈಸೂರಿಗೆ, ಆರ್.ಕೆ. ಶ್ರೀಕಂಠನ್ ಅವರಲ್ಲಿ ಶಿಷ್ಯವೃತ್ತಿ. ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪ್ರಾಪ್ತಿ. ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆಯಿತು. ನಾರಾಯಣ ಎಸ್.ಎಸ್.ಎಲ್.ಸಿ. ಮುಗಿಸಿ ಮೈಸೂರಿಗೆ ಬಂದದ್ದು 1953ರಲ್ಲಿ. ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯೇ ಅಲ್ಲದೆ ಸಂಗೀತ ಕಾರ್ಯಕ್ರಮಗಳಿಗೆ ಸ್ವರ ಪ್ರಸ್ತಾರ ಬರೆದುಕೊಡುವ ಹವ್ಯಾಸವೂ ಇದ್ದಿತು. ಇದು 1954ರಲ್ಲಿ ಅವರು ಆಕಾಶವಾಣಿಯ ನಿಲಯದ ಕಲಾವಿದರಾಗಲು ಸಹಕಾರಿಯಾಯಿತು. ಆಗ ಮೈಸೂರಿನ ಆಕಾಶವಾಣಿಯಲ್ಲಿ ನಿಲಯದ ಕಲಾವಿದರಾಗಿ ಹಿಂದೂಸ್ತಾನಿ ಗಾಯನ ಮತ್ತು ಹಾರ್ಮೋನಿಯಂ ನುಡಿಸುತ್ತಿದ್ದ ಎಂ.ಪಿ. ನಾಗಮುತ್ತು ಅವರ ಮನೆಯಲ್ಲೆ ನಾರಾಯಣ ಅವರ ವಾಸ್ತವ್ಯ. ಇದರಿಂದ ಹಿಂದೂಸ್ತಾನಿ ಸಂಗೀತದ ಪ್ರಭಾವವೂ ಇವರ ಮೇಲಾಯಿತು. ನಾಗಮುತ್ತು ಅವರ ಮಗಳೂ ಕಥಕ್ ನೃತ್ಯಗಾತಿಯೂ ಆದ ಕಾಂತಾ ಅವರೊಂದಿಗೆ 1962ರಲ್ಲಿ ಮದುವೆ ಆಕಾಶವಾಣಿ ಬೆಂಗಳೂರಿಗೆ ಬಂದು ನೆಲೆಸಿದಾಗ ನಾರಾಯಣರ ಸಂಗೀತದ ಬದುಕೂ ಅದನ್ನು ಹಿಂಬಾಲಿಸಿತು. ತಾವು ರಾಗಸಂಯೋಜನೆ ಮಾಡಿದ ಕುವೆಂಪು ವಿರಚಿತ ಗೀತೆ `ಜೀವನ ಸಂಜೀವನ ನನ್ನ ಹೃದಯಕೆ ನೀನೆ ಎಂಬ ಗೀತೆಯ ಮೂಲಕ ಕಂಪೋಸರಾಗಿ ಆಕಾಶವಾಣಿಯಲ್ಲಿ ನೇಮಕಗೊಂಡರು. ಇವರ ಈ ಗೀತೆಗೆ ದನಿಯಾದವರು ಇವರ ಸಂಗೀತ ಗುರುಗಳೇ ಆಗಿದ್ದ ಆರ್.ಕೆ. ಶ್ರೀಕಂಠನ್, ನೂರಾರು ಹಾಡುಗಳ ರಾಗ ಸಂಯೋಜಕರಾಗಿ ತಮ್ಮ ರಾಗಸಂಯೋಜನೆಯ ಸಿಂಚನವನ್ನು ಮಾಡಿಸಿದ ನಾರಾಯಣ್ 1976ರಲ್ಲಿ ಸೀನಿಯರ್ ಕಂಪೋಸರ್ ಸಹ ಆದರು. 1982ರಲ್ಲಿ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಬಡ್ತಿ ಪಡೆದದ್ದೇ ಅಲ್ಲದೆ `ಎ ಟಾಪ್ ಶ್ರೇಣಿಯ ಸಂಗೀತ ಸಂಯೋಜಕರಾದರು. ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಗಾಯನದಲ್ಲಿ `ಎ ಶ್ರೇಣಿಯ ಕಲಾವಿದರಾಗಿದ್ದ ನಾರಾಯಣ್, ಸುಮಾರು ಮೂವತ್ತಾರು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದರು. ಅನೇಕ ಸಂಗೀತ ರೂಪಕಗಳಿಗೆ ರಾಗಸಂಯೋಜನೆ ಮಾಡಿ ಪ್ರಶಂಸೆ ಮತ್ತು ಪ್ರಶಸ್ತಿಗಳನ್ನು ಪಡೆದರು. ಅವುಗಳಲ್ಲಿ ಜಯದೇವನ `ಶೃಂಗಾರ ನಾಯಕ ಕುವೆಂಪು ಅವರ `ಚಿತ್ರಾಂಗದ, ರವೀಂದ್ರನಾಥ ಠಾಗೋರ್‍ರ `ಗೀತಭಾರತಿ (ಬಂಗಾಳಿ ಸಾಹಿತ್ಯದಿಂದ ಕನ್ನಡಕ್ಕೆ ಅನುವಾದಿಸಿದ್ದ) ಮುಂತಾದವು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟವು. ರಜನಿಕಾಂತರಾವ್ ಅವರ ಸಹನಿರ್ದೇಶನದಲ್ಲಿ ಸಂಗೀತ ಸಂಯೋಜಿಸಿದ `ಮೇಘ ಸಂದೇಶ ರೂಪಕಕ್ಕೆ ರಾಷ್ಟ್ರೀಯ ಕಾರ್ಯಕ್ರಮ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತು.

ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ನಾರಾಯಣ್‍ರವರು ಒಬ್ಬ ನಿಪುಣ ಕಲಾವಿದ. ಸುಗಮಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಎರಡನ್ನೂ ಹೇಗೆ ನಿಭಾಯಿಸಬಲ್ಲ ಎಂಬುದಕ್ಕೆ ಮಾದರಿಯಾದರು. ಇವೆರಡೇ ಅಲ್ಲದೆ ಭರತನಾಟ್ಯಕ್ಕೆ ಹಿನ್ನೆಲೆ ಹಾಡುಗಾರರಾಗಿ ಪ್ರಖ್ಯಾತರಾಗಿದ್ದಾರೆ, ಅಮೆರಿಕಾ, ಇಂಗ್ಲೆಂಡ್, ಸಿಂಗಪೂರ್, ಹಾಂಗ್‍ಕಾಂಗ್, ಸಿಲೋನ್, ಮಂಗೋಲಿಯಾ, ರಷ್ಯ ಮನಿಲಾ ಮುಂತಾದ ದೇಶಗಳಿಗೆ ಹಲವಾರು ಬಾರಿ ಭೇಟಿಕೊಟ್ಟಿದ್ದಾರೆ. `ರಮಣಾಂಜಲಿ ಗೀತಗಾಯನದ ತಂಡದಲ್ಲಿ 25 ವರುಷಗಳಿಂದ ಪ್ರಮುಖ ಗಾಯಕರಾದರು.

ತಮ್ಮ ಸಂಗೀತ ಜೀವನದ ಪಯಣದಲ್ಲಿ ಸಾವಿರಾರು ಗೀತೆಗಳಿಗೆ ರಾಗಸಂಯೋಜನೆ ಮಾಡಿ ಸುಗಮ ಸಂಗೀತದ ಶಾಖೆಗಳನ್ನು ವಿಸ್ತರಿಸಿದ್ದಾರೆ. ನಾರಾಯಣ್ ಅವರು ಸಂಗೀತ ನೀಡಿದ ಧ್ವನಿಸುರುಳಿಗಳಲ್ಲಿ `ನೀಲಾಂಜನ, ಗೆಳತಿ, ಛಾಯಾ, ಅಗ್ನಿಹಂಸ ಜನಪ್ರಿಯವಾಗಿವೆ. ಇವೇ ಅಲ್ಲದೆ ನೂರಾರು, ವಚನ, ದಾಸರಪದ, ರಮಣಾಂಜಲಿ ಗೀತೆಗಳಿಗೂ ನಾರಾಯಣ್ ಅವರು ಸಂಗೀತ ನೀಡಿದ್ದಾರೆ. ಅವು ಹೆಸರಾಂತ ಧ್ವನಿಸುರುಳಿಗಳಾಗಿವೆ.

1984ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ `ಕಲಾತಿಲಕ ಪ್ರಶಸ್ತಿ, 1987ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2000ರಲ್ಲಿ ಪ್ರತಿಷ್ಠಿತ ಸಂತ ಶಿಶುನಾಳ ಷರೀಫ ಪ್ರಶಸ್ತಿ, ನಾರಾಯಣ ಅವರಿಗೆ ಸಂದ ಪ್ರಶಸ್ತಿಗಳ ಪೈಕಿ ಮುಖ್ಯವಾದವು.

ನಾರಾಯಣರ ಶಿಷ್ಯ ವೃಂದ ಅಪಾರ. ನಿವೃತ್ತರಾದ ಮೇಲೆ ತರಳಬಾಳು ಕೇಂದ್ರದಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಭಾರತೀಯ ವಿದ್ಯಾಭವನದಲ್ಲಿ ಸಂಗೀತ ಉಪಾಧ್ಯಾಯರಾಗಿ ಸುಗಮ ಹಾಗೂ ಶಾಸ್ತ್ರೀಯ ಸಂಗೀತ ಪ್ರಾಧ್ಯಾಪಕರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. (ಜಯಶ್ರೀ ಅರವಿಂದ್)