ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೀನಾಸಮ್ ರಂಗಶಿಕ್ಷಣ ಕೇಂದ್ರ

ವಿಕಿಸೋರ್ಸ್ದಿಂದ

ನೀನಾಸಮ್ ರಂಗಶಿಕ್ಷಣ ಕೇಂದ್ರ - ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಹೆಸರು ತಂದ ರಂಗತಂಡ. ನೀಲಕಂಠೇಶ್ವರ ನಾಟ್ಯಸೇವಾ ಸಂಘ ಇದರ ಪೂರ್ತಿ ಹೆಸರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡು ಇದರ ಕೇಂದ್ರ ಸ್ಥಾನ. ಇದು ಸ್ಥಳೀಯ ಯುವಕರ ಹವ್ಯಾಸೀ ನಾಟಕ ತಂಡವಾಗಿ ಸ್ಥಾಪನೆಗೊಂಡಿತ್ತು (1949). ಇಲ್ಲಿಯವರೆಗೆ 40ಕ್ಕೂ ಹೆಚ್ಚು ನಾಟಕಗಳನ್ನಾಡಿದೆ. ಅವುಗಳಲ್ಲಿ ಮುಖ್ಯವಾದವು; ಶಹಜಹಾನ್ (1953), ರಂಗಭಾರತ (1973), ಸಂಗ್ಯಾ ಬಾಳ್ಯಾ (1974), ಬಕ (1975), ಘಾಶಿರಾಂಕೊತ್ವಾಲ್ (1976), ಒಂದು ಲೋಕ ಕಥೆ (1977), ಸಾಹೇಬರು ಬರುತ್ತಾರೆ (1983), ಹ್ಯಾಮ್ಲೆಟ್ (1984), ಬೆಪ್ಪು ತಕಡಿ ಭೋಳೇ ಶಂಕರ (1987), ಜೋಕುಮಾರ ಸ್ವಾಮಿ (1989), ಈ ನಾಟಕಗಳನ್ನು ಕೆ.ವಿ. ಸುಬ್ಬಣ್ಣ, ಬಿ.ವಿ.ಕಾರಂತ, ಪ್ರಸನ್ನ, ಕೆ.ವಿ.ಅಕ್ಷರ, ಚಿದಂಬರರಾವ್ ಜಂಬೆ, ಚಂದ್ರಶೇಖರ ಕಂಬಾರ ಮೊದಲಾದವರು ನಿರ್ದೇಶಿಸಿದ್ದಾರೆ.

1970ರ ದಶಕದಲ್ಲಿ ನೀನಾಸಮ್ ತನ್ನ ಚಟುವಟಿಕೆಗಳನ್ನು ವಿಸ್ತರಿಸಿತು. ನೀನಾಸಮ್ ಚಿತ್ರ ಸಮಾಜದ ಸ್ಥಾಪನೆಯಾದದ್ದು 1973ರಲ್ಲಿ. ಇದು ಚಿತ್ರೋತ್ಸವ, ಚಿತ್ರವಿಮರ್ಶಾ ಕಾರ್ಯಾಗಾರ ಮತ್ತು ಚಲನಚಿತ್ರಕ್ಕೆ ಸಂಬಂದಿsಸಿದ ಕನ್ನಡ ಪುಸ್ತಕ ಪ್ರಕಟಣೆಯನ್ನು ಆರಂಬಿsಸಿತು. ಪ್ರಥಮ ಚಲನಚಿತ್ರೋತ್ಸವ ಸಂಘಟಿಸಿ ಗ್ರಾಮೀಣ ಜನರಿಗೆ ಜಾಗತಿಕ ಮಟ್ಟದ ನಿರ್ದೇಶಕರ ಚಿತ್ರಗಳನ್ನು ಪ್ರದರ್ಶಿಸಿತು (1977). ಇದಲ್ಲದೆ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಿತ್ತು (1983-85). ಈ ಕಾರ್ಯಕ್ರಮದ ಅಡಿಯಲ್ಲಿ ಹೆಗ್ಗೋಡಿನಲ್ಲಿ 16 ಚಿತ್ರೋತ್ಸವಗಳು, 10 ಚಿತ್ರ ಸಂವೇದನಾ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಇದೇ ವೇಳೆ ಹೆಗ್ಗೋಡಿನಿಂದ ಹೊರಗಡೆ 55 ಚಿತ್ರಸಹೃದಯತಾ ಶಿಬಿರಗಳನ್ನೂ 93 ಚಿತ್ರೋತ್ಸವಗಳನ್ನೂ ಸಂಸ್ಥೆ ಸಂಘಟಿಸಿತು. ಪ್ರತಿವರ್ಷ 10 ದಿನಗಳ ಕಾಲ ಚಲನಚಿತ್ರ ಸಹೃದಯತಾ ಶಿಬಿರಗಳನ್ನು 1979ರಿಂದ 88ರವರೆಗೆ ನಡೆಸಿಕೊಂಡು ಬರಲಾಯಿತು. ಅದೀಗ ನೀನಾಸಮ್ ಸಂಸ್ಕøತಿ ಶಿಬಿರವಾಗಿ ಮುಂದುವರಿದಿದೆ.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (ಎನ್.ಎಸ್.ಡಿ.) ಮಾದರಿಯಲ್ಲಿ ನೀನಾಸಮ್ ರಂಗ ಶಿಕ್ಷಣ ಕೇಂದ್ರ ಸ್ಥಾಪಗೊಂಡಿತು (1980). ಕನ್ನಡದ ಉತ್ಸಾಹೀ ಯುವಕರಿಗೆ ರಂಗಕಲೆಗಳಲ್ಲಿ ಶಾಸ್ತ್ರೀಯವಾದ ತರಬೇತಿ ಕೊಡುವ ಮುಖ್ಯ ಉದ್ದೇಶದಿಂದ ಆರಂಭವಾದ ಈ ಕೇಂದ್ರ ರಂಗಶಿಕ್ಷಣವನ್ನು ದೇಶೀಯ ಅಗತ್ಯಕ್ಕೆ ಅನುಗುಣವಾಗಿ ರೂಪಿಸಿಕೊಂಡಿದ್ದು ಮಹತ್ತ್ವದ ಸಾಧನೆ. ರಂಗಶಿಕ್ಷಣಕ್ಕೆ ಅಗತ್ಯವಾದ ಮಾಹಿತಿ ಹಾಗೂ ಪಠ್ಯಗಳನ್ನು ಕನ್ನಡದಲ್ಲಿ ತಯಾರಿಸಿರುವುದು ಹಾಗೂ ರಂಗಶಿಕ್ಷಣಕ್ಕೆ ಸಂಬಂದಿsಸಿದ ಸಮೃದ್ಧ ಗ್ರಂಥಭಂಡಾರ ಹೊಂದಿರುವುದು ಈ ಕೇಂದ್ರದ ವಿಶೇಷ. ರಂಗಶಿಕ್ಷಣ ಕೇಂದ್ರ 89 ನಾಟಕಗಳನ್ನೂ 155 ಅಭ್ಯಾಸಿ ಪ್ರಯೋಗಗಳನ್ನೂ ರಂಗದ ಮೇಲೆ ತಂದಿದೆ (2001).

ನೀನಾಸಮ್ ರಂಗಶಿಕ್ಷಣ ಕೇಂದ್ರ ರಂಗಕಲೆಯ ಒಂದು ವರ್ಷದ ಡಿಪ್ಲೋಮಾ ನಡೆಸುತ್ತಿದೆ. ಇದು ರಂಗಭೂಮಿಯ ತಾತ್ತ್ವಿಕ ಮತ್ತು ಪ್ರಾಯೋಗಿಕ ತರಬೇತಿಯನ್ನು ಒಳಗೊಂಡಿದೆ. ರಂಗಸಿದ್ಧಾಂತ, ನಾಟಕ ಇತಿಹಾಸ, ರಂಗಭೂಮಿ ಇತಿಹಾಸ, ರಂಗಾಬಿsನಯ, ರಂಗಸಿದ್ಧತೆ ಮತ್ತು ರಂಗಪ್ರಯೋಗಗಳು ಪಠ್ಯ ಕ್ರಮದ ಅವಿಭಾಜ್ಯ ಅಂಗಗಳು. ಪ್ರತಿವರ್ಷ ತರಬೇತಿಗಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ 20 ಜನರನ್ನು ಆಯ್ಕೆಮಾಡಲಾಗುತ್ತದೆ.

ತಿರುಗಾಟ ನೀನಾಸಮ್‍ನ ಒಂದು ವಿಶಿಷ್ಟ ಕಾರ್ಯಕ್ರಮ. ಇಲ್ಲಿನ ರಂಗತಂಡ ನಾಟಕವನ್ನು ರಾಜ್ಯದ ಮೂಲೆಮೂಲೆಗಳಿಗೆ ತಲಪಿಸುತ್ತದೆ. ಇಂಥ ಒಂದು ಕಾರ್ಯಕ್ರಮ ಆರಂಭಗೊಂಡಿದ್ದು 1985ರಲ್ಲಿ. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸುವ ಅವಕಾಶವನ್ನು ಇದು ಕಲ್ಪಿಸುತ್ತದೆ. ಜೊತೆಗೆ ಕನ್ನಡದಲ್ಲಿ ಕ್ಷೀಣಿಸಿದ್ದ ವೃತ್ತಿ ರಂಗ ಭೂಮಿಗೆ ಕಾಯಕಲ್ಪ ನೀಡುವ ಉದ್ದೇಶವನ್ನು ಒಳಗೊಂಡಿದೆ. ತಿರುಗಾಟದ ಉದ್ದೇಶಕ್ಕಾಗಿ ಪ್ರತಿವರ್ಷ ಮೂರು ನಾಟಕಗಳ ಜೊತೆಗೆ ಒಂದು ಮಕ್ಕಳ ನಾಟಕವನ್ನು ಆಯ್ದುಕೊಳ್ಳಲಾಗುತ್ತದೆ. ಮೂರು ತಿಂಗಳ ರಂಗತಾಲೀಮಿನ ಅನಂತರ ನಾಲ್ಕು ತಿಂಗಳು, ರಾಜ್ಯದ ಬಹುಪಾಲು ಹಳ್ಳಿ ಪಟ್ಟಣಗಳಿಗೆ ಭೇಟಿ ನೀಡಿ ನಾಟಕ ಪ್ರದರ್ಶಿಸಲಾಗುವುದು.

ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ನೆರವಿನೊಂದಿಗೆ ನೀನಾಸಮ್ ಶಾಲಾರಂಗ ಎಂಬ ಶಿಕ್ಷಣದಲ್ಲಿ ರಂಗಭೂಮಿ ಯೋಜನೆಯನ್ನು ನಡೆಸಿತು (1991-93). ರಂಗಶಿಕ್ಷಣ ಕೇಂದ್ರದಲ್ಲಿ ಕಲಿತ ಕಲಾವಿದರ ಗುಂಪೊಂದಕ್ಕೆ ವಿಶೇಷ ತರಬೇತಿ ನೀಡಿ ಶಾಲೆಗಳಲ್ಲಿ ರಂಗಭೂಮಿ ಅಥವಾ ಸಾಂಸ್ಕøತಿಕ ಕಾರ್ಯಾಗಾರಗಳನ್ನು ನಡೆಸಲಾಯಿತು. ಕಾರ್ಯಾಗಾರದ ಅಂತ್ಯದಲ್ಲಿ ರಂಗ ಪ್ರಯೋಗಗಳಿರುತ್ತಿದ್ದವು. ರಾಜ್ಯದಲ್ಲಿ ಇದುವರೆಗೆ ಇಂಥ 13 ಕಾರ್ಯಾಗಾರಗಳು ನಡೆದಿವೆ.

ಕೆ.ವಿ.ಸುಬ್ಬಣ್ಣನವರು ನೀನಾಸಮ್ ಚಟುವಟಿಕೆಗಳ ರೂವಾರಿ. ಇವರು ತಮಗೆ ಸಂದ ಮ್ಯಾಗ್‍ಸೆಸೆ ಪುರಸ್ಕಾರದೊಂದಿಗೆ ಬಂದ ಹಣವನ್ನು ಮೂಲಧನವನ್ನಾಗಿ ಇರಿಸಿ ನೀನಾಸಮ್ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ (1992). ಠೇವಣಿಯಿಂದ ಬರುವ ಆದಾಯದಿಂದ ನೀನಾಸಮ್ ಚಟುವಟಿಕೆಗಳನ್ನು ಹೆಗ್ಗೋಡಿನ ಹೊರಕ್ಕೂ ವಿಸ್ತರಿಸಲಾಗಿದೆ. ಒಂದರಿಂದ ಮೂರು ದಿನಗಳ ಅವದಿsಯ ಸಾಹಿತ್ಯ ಅಧ್ಯಯನ ಶಿಬಿರಗಳನ್ನು ರಾಜ್ಯದ ವಿವಿದೆಡೆ ಏರ್ಪಡಿಸಲಾಗಿದೆ. ಈವರೆಗೆ ಅಂಥ 40ಕ್ಕೂ ಹೆಚ್ಚು ಶಿಬಿರಗಳು ನಡೆದಿವೆ.

ಆಧುನಿಕ ರಂಗಭೂಮಿಯ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಶಿವರಾಮ ಕಾರಂತ ರಂಗಮಂದಿರ, ನೀನಾಸಮ್ ನಿರ್ಮಾಣಗಳಲ್ಲೊಂದು. ನೀನಾಸಮ್ ಮಾತುಕತೆ ಎಂಬುದು ಸಂಸ್ಥೆ ತನ್ನ ಚಟುವಟಿಕೆಗಳನ್ನು ದಾಖಲಿಸಲು ಹೊರತರುತ್ತಿರುವ ಖಾಸಗೀ ಪ್ರಸಾರದ ತ್ರೈಮಾಸಿಕ ಪತ್ರಿಕೆ, ಈ ಪತ್ರಿಕೆಯ ಸಂಪಾದಕರು ಯಶವಂತ ಜಾಧವ್. (ಎನ್.ಐ.ವಿ.)