ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೀಲಕಂಠಾಚಾರ್ಯ, ಎನ್ ಜಿ

ವಿಕಿಸೋರ್ಸ್ದಿಂದ

ನೀಲಕಂಠಾಚಾರ್ಯ, ಎನ್ ಜಿ (1924-) ಶಿಲ್ಪದ ಚೆಲುವನ್ನು ಹೆಚ್ಚಿಸುವ ನಾಜೂಕಿನ ನಕಾಸೆ ಕೆಲಸದಲ್ಲಿ ಸಿದ್ಧ ಹಸ್ತರು. ಲೋಹಶಿಲ್ಪ ಕಲೆಗೆ ತೌರೆನಿಸಿ ಕೊಂಡಿದ್ದ ಕರ್ನಾಟಕದ ಮಂಡ್ಯ ಜಿಲ್ಲೆಯ ನಾಮಂಗಲದಲ್ಲಿ, ಶಿಲ್ಪ ಕಲೆಯನ್ನೇ ವಂಶಪಾರಂಪರ್ಯವಾಗಿ ರೂಢಿಸಿಕೊಂಡು ಬಂದಿದ್ದ ಉತ್ತಮ ಶಿಲ್ಪಿಗಳ ಕುಟುಂಬವೊಂರಲ್ಲಿ ಜನ್ಮ (1924). ತಂದೆ ಗಣೇಶಾಚಾರ್ ಮತ್ತು ಇವರ ಹಿರಿಯರು ಉತ್ತಮ ಶಿಲ್ಪಿಗಳೆಂದು ಖ್ಯಾತಿವಂತರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದವರು. ಅಂತಹ ಪ್ರಸಿದ್ಧ ಲೋಹಶಿಲ್ಪಿಗಳ ವಂಶದಲ್ಲಿ ಜನಿಸಿದ ನೀಲಕಂಠಾಚಾರ್ಯರು ಎಳೆಯ ವಯಸ್ಸಿನಿಂದಲೂ ಹಿತ್ತಾಳೆ, ಕಂಚು, ಪಂಚಲೋಹ ಕಲೆಗಳಿಗೆ ಮನಸೋತದ್ದು ಸ್ವಾಭಾವಿಕವೇ.

1942ರಲ್ಲಿ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಕಲಾಶಾಲೆಯನ್ನು ಸೇರಿ ಅಲ್ಲಿ ಶಿಕ್ಷಕರಾಗಿದ್ದ ಪ್ರಸಿದ್ಧ ಶಿಲ್ಪಿ ಎನ್. ವಿ. ಸೂರ್ಯನಾರಾಯಣಾಚಾರ್ಯರಲ್ಲಿ ಐದು ವರ್ಷ ಕಾಲ ಶಿಷ್ಯವೃತ್ತಿ. ಲೋಹ ಶಿಲ್ಪಕಲೆಯಲ್ಲಿ ನಕಾಸೆ ಕೆಲಸ ಅತ್ಯಂತ ನಾಜೂಕಿನ ಹಾಗೂ ಸೂಕ್ಷ್ಮರೀತಿಯದು. ದೊಡ್ಡಪ್ಪ ಶ್ರೀಕಂಠಾಚಾರ್ಯರು ನಕಾಸೆ ಕೆಲಸದಲ್ಲಿ ನಿಷ್ಣಾತರೆಂದು ಹೆಸರಾಗಿದ್ದವರು. ಅವರ ಪ್ರಭಾವ ಮತ್ತು ಪ್ರೇರಣೆ ಇವರ ಮೇಲೆ ಸಹಜವಾಗಿಯೇ ಅಗಾಧ ಪರಿಣಾಮ ಬೀರಿತು. ನಕಾಸೆ ಕೆಲಸದತ್ತ ಆಚಾರ್ಯರ ಮನಸ್ಸು ಸೆಳೆಯಿತು. ಶಿಕ್ಷಣದ ನಂತರ ನಾಗಮಂಗಲಕ್ಕೆ ಹಿಂದಿರುಗಿದ ಆಚಾರ್ಯರಿಗೆ ಅಂದಿನ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರು ಸ್ಥಾಪಿಸಿದ್ದ ಅಲ್ಲಿನ ಹಿತ್ತಾಳೆಯ ಕೇಂದ್ರದಲ್ಲಿ ಶಿಕ್ಷಕ ವೃತ್ತಿ. ಕೆಲಸಮಯದ ನಂತರ ಹಿತ್ತಾಳೆಯ ಕೇಂದ್ರವನ್ನು ಕೈಗಾರಿಕಾ ಶಾಲೆಯಾಗಿ ಪರಿವರ್ತಿಸಲಾಯಿತು. ಆಚಾರ್ಯರ ವೃತ್ತಿಗೂ ಕೊಡಲಿಯೇಟು ಬಿತ್ತು. ಎದುರಾದ ಬಿಕ್ಕಟ್ಟಿನಿಂದ ವಿಚಲಿತರಾಗದ ಆಚಾರ್ಯರು ತಮ್ಮ ಸಹೋದರರು ಮತ್ತು ಇನ್ನಿತರ ಶಿಲ್ಪಿಗಳ ಜೊತೆಗೂಡಿ ಶಿಲ್ಪಕಲಾ ಸಹೋದರರ ಸಂಘವನ್ನು ಸ್ಥಾಪಿಸಿ ತನ್ಮೂಲಕ ಕಲಾಸೇವೆಯನ್ನು ಮಾಡತೊಡಗಿದರು. ನಾಗಮಂಗಲಕ್ಕೆ ಒಮ್ಮೆ ಕಮಲಾದೇವಿ ಚಟ್ಟೋಪಾಧ್ಯಾಯರು ಬಂದಿದ್ದಾಗ ಆಚಾರ್ಯರ ಕಲಾ ಪ್ರೌಢಿಮೆ ನೋಡಿ ಸಂತೋಷಗೊಂಡರು. ಬೆಂಗಳೂರಿನ ಪ್ರಾಂತೀಯ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕೇಂದ್ರ (ಡಿಸೈನ್ ಸೆಂಟರ್) ಕ್ಕೆ ಆಯ್ಕೆಯಾದಾಗ ಆಚಾರ್ಯರು ರಾಜ್ಯದ ರಾಜಧಾನಿಗೆ ಬಂದು ನೆಲಸಿದರು. ಆಚಾರ್ಯರ ಶಿಲ್ಪಗಳಿಗೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದ ಕಾರಣ, ಕೇಂದ್ರ ಸರಕಾರದ ವಿನ್ಯಾಸಕೇಂದ್ರಕ್ಕೆ ರಾಜಿನಾಮೆ ನೀಡಿ, ಸ್ವತಂತ್ರವಾಗಿ ಶಿಲ್ಪ ರಚನೆಗೆ ತೊಡಗಿದರು.

ಲೋಹ ಶಿಲ್ಪದಲ್ಲಿ ಸೂಕ್ಷಾತಿಸೂಕ್ಷ್ಮರೀತಿಯ ನಕಾಸೆ ಕೆಲಸದಲ್ಲಿ ಪರಿಣತರೆಂದು ಹೆಸರು ಪಡೆದಿದ್ದ. ಆಚಾರ್ಯರು ನಿರ್ಮಿಸಿದ ಶಿವಶಂಕರ ಲೀಲಾ ನೃತ್ಯ, ಕಂಚಿನ ಮದನಿಕೆ, ಪಂಚಲೋಹದ ಚೆನ್ನಕೇಶವಮೂರ್ತಿ, ನಾಟ್ಯ ಸರಸ್ವತಿ, ವೇಣುಗೋಪಾಲ ಇವೆಲ್ಲವೂ ನೀಲಕಂಠಚಾರ್ಯರ ಕಲಾನೈಪುಣ್ಯವನ್ನು ಎತ್ತಿ ಸಾರುತ್ತವೆ.

ನೀಲಕಂಠಾಚಾರ್ಯರು ನಿರ್ಮಿಸಿದ ಲೋಹ ಕಲಾಮೂರ್ತಿಗಳು ದೇಶವಿದೇಶಗಳಲ್ಲಿಯೂ ಸಂಗ್ರಹಾಲಯಗಳಲ್ಲಿಯೂ ವಿಶೇಷ ಪ್ರದರ್ಶನಗಳಲ್ಲಿಯೂ ಪಾಲ್ಗೊಂಡು ಹಸ್ತಶಿಲ್ಪ ಕ್ಷೇತ್ರದಲ್ಲಿ ಅವರಿಗೊಂದು ವಿಶಿಷ್ಟ ಸ್ಥಾನ ಗಳಿಸಿಕೊಟ್ಟಿವೆ. ನ್ಯೂಯಾರ್ಕ್‍ನ ಪ್ರಸಿದ್ಧ ಸಂಸ್ಥೆಯೊಂದರ ಮುಖ್ಯಸ್ಥರಾದ ಡೇವಿಡ್ ಕಾಂಪ್ಟನ್ ಅವರು ಆಚಾರ್ಯರ ಲೋಹದ ಮೂರ್ತಿಗಳಿಗೆ ಮಾರುಹೋಗಿ. ದಕ್ಷಿಣ ಭಾರತದಲ್ಲಿ ನಾವು ನೋಡಿದ ಶಿಲ್ಪಗಳಲ್ಲಿ ನಿಮ್ಮ ಕಲಾಕೃತಿಗಳೇ ಅತ್ಯುತ್ತಮ ಎಂದು ವರ್ಣಿಸಿದ್ದಾರೆ.

ನೀಲಕಂಠಾಚಾರ್ ಅವರು ಸಹ ಏನಾದರೂ ವಿಶೇಷತೆಯನ್ನು ತಮ್ಮ ಶಿಲ್ಪದ ಮೂಲಕ ಬಿಂಬಿಸಿ ದಸರಾ ವಸ್ತು ಪ್ರದರ್ಶನಕ್ಕೆ ಕಳುಹಿಸುತ್ತಿದ್ದರು. ಕಂಚಿನ ಮದನಿಕೆ 1956ರಲ್ಲಿ ಪ್ರಥಮ ಬಹುಮಾನಗಳಿಸಿತು. 1960ರಲ್ಲಿ ಬುದ್ಧನ ವಿಗ್ರಹ ಮೈಸೂರು ಮಹಾರಾಜರ ಸ್ವರ್ಣ ಪದಕ ಗಳಿಸಿತು. 1974ರಲ್ಲಿ ರಚಿಸಿದ ಏಳು ಅಡಿ ಎತ್ತರದ ಪಂಚಲೋಹದ ಚೆನ್ನಕೇಶವನ ವಿಗ್ರಹ ಕರ್ನಾಟಕ ರಾಜ್ಯಪ್ರಶಸ್ತಿಗಳಿಸಿತು. 1985-86ರಲ್ಲಿ ಸುಮಾರು 20 ಅಂಗುಲ ಎತ್ತರದ ಶ್ರೀ ಕೃಷ್ಣನ ವಿಗ್ರಹ, ಸರಸ್ವತಿ ವಿಗ್ರಹ ಮತ್ತು ಅರ್ಧನಾರೀಶ್ವರ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿಯನ್ನು ಗಳಿಸಿದವು.

ನೀಲಕಂಠಾಚಾರ್‍ರರಿಗೆ ಅತ್ಯಂತ ಪ್ರಭಾವ ಬೀರಿದ ಹೊಯ್ಸಳ ಶಿಲ್ಪ ಶೈಲಿಯನ್ನೇ ಅನುಸರಿಸಿ ರಚಿಸಿದ ಪಂಚಲೋಹದ ವೇಣುಗೋಪಾಲ ಗಾತ್ರದಲ್ಲಿ ಕಿರಿದಾಗಿದ್ದರೂ ಪಾತ್ರದಲ್ಲಿ ಹಿರಿದಾಗಿದೆ. ಮೂವತ್ತಾರು ಅಂಗುಲದ ಈ ಲೋಹ ವಿಗ್ರಹ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರನ್ನಾಗಿಸಿತು. 1978ರಲ್ಲಿ ಅಖಿಲ ಭಾರತ ಹಸ್ತ ಶಿಲ್ಪ ಕಲಾ ಮಂಡಲಿ ಆಯೋಜಿಸಿದ್ದ ಪ್ರಶಸಿ ಪ್ರದಾನ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿಯವರು ಶ್ರೀಯುತರನ್ನು ಪುರಸ್ಕರಿಸಿದರು.

ಆನಂತರ ಒಂದಾದ ಮೇಲೆ ಒಂದರಂತೆ ಪ್ರಶಸ್ತಿ. ಗೌರವಗಳು ಸಂದವು. ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕದ ಅತ್ಯುನ್ನತ ಪ್ರಶಸ್ತಿಯಾದ ಜಕಣಾಚಾರಿ ಪ್ರಶಸ್ತಿ (1996) ಪಡೆದ ಆಚಾರ್ಯರಿಗೆ. ಆ ವರ್ಷದಲ್ಲಿಯೇ ಮೈಸೂರಿನ ರಾಮಸನ್ಸ್ ಕಲಾ ಪ್ರತಿಷ್ಟಾನ. ಕಲಾಸನ್ಮಾನ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತು. ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕ ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮ ಪ್ರಶಸ್ತಿ (1997) ನೀಡಿ ಬೆಂಗಳೂರಿನಲ್ಲಿ ಗೌರವಿಸಿತು. ಕರ್ನಾಟಕ ರಾಜ್ಯದ ಅತ್ಯುನ್ನತ ಶಿಲ್ಪಗೌರವವಾದ ಜಕಣಾಚಾರಿ ಪ್ರಶಸ್ತಿ ಪಡೆದವರಲ್ಲಿ ಮೊದಲನೆಯವರು ಪರಮೇಶ್ವರಾಚಾರ್ ಅವರಾದರೆ ಎರಡನೆಯವರಾಗಿ ನೀಲಕಂಠಾಚಾರ್ ಪಡೆದರು(1996). ಅಂತೆಯೇ ಕರಕುಶಲ ಅಭಿವೃದ್ಧಿ ಮಂಡಲಿಯ ಶಿಲ್ಪಗುರು ಉಪಾಧಿಯೂ 2001ರಲ್ಲಿ ನೀಲಕಂಠಾಚಾರ್ಯರಿಗೆ ಲಭ್ಯವಾಗಿದೆ. ಶಿಲ್ಪಗುರು ವಾಗಿ ಮನ್ನಣೆ ಪಡೆದವರಿಗೆ ಏಳುವರೆ ಲಕ್ಷ ರೂಪಾಯಿ ಪ್ರೋತ್ಸಾಹಧನ. ಐವರು ಸಿದ್ಧಹಸ್ತಶಿಲ್ಪಿಗಳ ನೆರವನ್ನು ಪಡೆದು ಒಂದು ವರ್ಷದಲ್ಲಿ 10 ಅತ್ಯುತ್ತಮ ಕಲಾಕೃತಿಗಳನ್ನು ನೀಡಬೇಕೆಂಬ ಷರತ್ತು.

ಶೃಂಗೇರಿಯ ಶಂಕರಮಠಕ್ಕಾಗಿ ರೂಪಿಸಿದ ಆದಿ ಶಂಕರಾಚಾರ್ಯರ ಪಂಚ ಲೋಹಶಿಲ್ಪ ಆಚಾರ್ಯರರ ಇತ್ತೀಚಿನ ಈ ಉತ್ತಮ ಕಲಾಕೃತಿಗಳಲ್ಲಿ ಒಂದು. ಆಚಾರ್ಯರು ಅತಿ ಭಕ್ತಿ ಶ್ರದ್ಧೆಯಿಂದ ನಿರ್ಮಿಸಿದ ಶಿಲ್ಪ, ಸಾತ್ವಿಕ ಕಳೆಯಿಂದ ಕೂಡಿದ ಪ್ರಬುದ್ಧ ಶಿಲ್ಪ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿ (2001-2004) ನೀಲಕಂಠಾಚಾರ್ಯರು ದಕ್ಷತೆಯಿಂದ ಕಾರ್ಯನಿರ್ವಹಿಸಿ ಉಪಯುಕ್ತವಾದ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಇವರ ಐವರು ಪುತ್ರರೂ ಸಾಂಪ್ರದಾಯಿಕ ಶಿಲ್ಪಕಲೆಯನ್ನು ಅನುಸರಿಸಿ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ. (ಆರ್.ಡಿ)