ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನುಗು

ವಿಕಿಸೋರ್ಸ್ದಿಂದ

ನುಗು - ಕಪಿಲಾ ನದಿಯ ಒಂದು ಉಪನದಿ. ಭೃಗು ಎಂದೂ ಇದಕ್ಕೆ ಹೆಸರಿದೆ. ಈ ನದಿ ಕೇರಳದ ವೈನಾಡಿನಲ್ಲಿ ನೆಲ್ಲಂಬೂರು ಬೆಟ್ಟದಲ್ಲಿ ಹುಟ್ಟಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನ ನೈಋತ್ಯದಲ್ಲಿ ಉತ್ತರಕ್ಕೆ ಹರಿದು ನಂಜನಗೂಡಿಗೆ ಸುಮಾರು 24 ಕಿಮೀ. ದೂರದಲ್ಲಿ ಹಂಪಾಪುರದ ಬಳಿಯಲ್ಲಿ ಕಪಿಲಾ ನದಿಯನ್ನು ಕೂಡುತ್ತದೆ. ಈ ನದಿ ಹರಿಯುವ ಬಹುಭಾಗ ಅರಣ್ಯಮಯ. ಇಲ್ಲಿ ಹೆಚ್ಚು ಮಳೆ ಬೀಳುತ್ತದೆ.

ಹೆಗ್ಗಡ ದೇವನ ಕೋಟೆಯ ಉತ್ತರಭಾಗ ಹಾಗೂ ನಂಜನಗೂಡಿನ ಬಯಲು ಪ್ರದೇಶಕ್ಕೆ ಈ ನದಿಯಿಂದ ಪ್ರಯೋಜನವಾಗುವಂತೆ 1946ರಲ್ಲಿ ನುಗು ಜಲಾಶಯದ ಕಾರ್ಯ ಕೈಗೊಳ್ಳಲಾಯಿತು. ಇದಲ್ಲದೆ ಲಕ್ಷ್ಮಣಾಪುರ ಎಂಬಲ್ಲಿ ಈ ನದಿಗೆ ಒಂದು ಅಣೆಕಟ್ಟು ಇದೆ. ಇದರ ನಾಲೆಯ ಉದ್ದ 8 ಕಿಮೀ. ಮುಳ್ಳೂರಿನ ಬಳಿಯಲ್ಲೂ ಒಂದು ಅಣೆಕಟ್ಟು ಇದೆ.

ಈ ನದಿಯ ಪಾತ್ರದಲ್ಲಿ ಬಂಗಾರದ ಹುಡಿ ಅಲ್ಪ ಪ್ರಮಾಣದಲ್ಲಿ ಕಂಡುಬಂದಿರುವುದುಂಟು. (ಸಿ.ಎಸ್.ಜೆ.)