ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಮ್ಮದಿಕಾರಿ

ವಿಕಿಸೋರ್ಸ್ದಿಂದ

ನೆಮ್ಮದಿಕಾರಿ - ರೋಗಿಗಳ ಮನಸ್ಸಿನ ಉದ್ವೇಗವನ್ನು ಶಾಂತಗೊಳಿಸಿ ನೆಮ್ಮದಿಯನ್ನು ಉಂಟುಮಾಡುವ ಮದ್ದು (ಟ್ರಾನ್‍ಕ್ವಿಲೈಸರ್). ಸುಲಭವಾಗಿ ಎಚ್ಚರಗೊಳಿಸಬಹುದಾದ ಮಬ್ಬನ್ನಾಗಲಿ ಮಂಪರನ್ನಾಗಲಿ ಇದು ಉಂಟುಮಾಡದು. ಮಿದುಳಿನ ಕ್ರಿಯೆಯ ಮೇಲೆ ಪ್ರಭಾವಿಗಳಾದ ಬೇರೆ ಮದ್ದುಗಳಲ್ಲಿ ಕಂಡುಬರುವ ಅಡ್ಡ ಪರಿಣಾಮಗಳು ಇದರಲ್ಲಿ ಅಷ್ಟಾಗಿ ತೋರವು. ಮರೆವು, ಗಲಿಬಿಲಿ, ಮನಸ್ಸಿನ ಮಾಂದ್ಯ ಆಗುವುದಿಲ್ಲ. ಎಂಥವರಿಗೂ ಚಟವಾಗದು, ಸೆಳವನ್ನೂ ಬರಿಸದು. ಮನೋರೋಗದ ಚಿಕಿತ್ಸೆಯಲ್ಲಿ ನೆಮ್ಮದಿಕಾರಿ ಅತ್ಯಂತ ಪ್ರಭಾವಯುತವಾದ ನಿರಪಾಯಕಾರಿ ಮದ್ದು ಎನಿಸಿಕೊಂಡಿದೆ. ಮನಸ್ಸನ್ನು ಕಲಕುವ ಕಾರಣಗಳಿಗೆ ತಕ್ಕಂತೆ ಹಲವಾರು ಮದ್ದುಗಳಿಗೆ ನೆಮ್ಮದಿಕಾರಿ ಗುಣವಿರುವುದನ್ನು ಕಾಣಬಹುದು. ಕಡಿಮೆ ಪ್ರಮಾಣದಲ್ಲಿ (ಡೋಸ್) ನಿದ್ರಾಕಾರಕ ಹಾಗೂ ಮನಶ್ಶಾಮಕ ಮದ್ದುಗಳೆಲ್ಲವೂ ನೆಮ್ಮದಿಕಾರಿಗಳಾಗಿ ವರ್ತಿಸುವುವು. ನಿಜ. ಆದರೆ ನಿದ್ರೆ ಬರಿಸದೆಯೇ ಮನಸ್ಸನ್ನು ಶಾಂತಗೊಳಿಸುವ ಮದ್ದುಗಳಿಗೆ ಟ್ರಾಂಕ್ವಿಲೈಸರ್ (ನೆಮ್ಮದಿಕಾರಿ) ಎಂಬ ಪದವನ್ನು ಕ್ಲೋರ್‍ಫ್ರೊಮಜೀನಿಗೆ (ಇದೊಂದು ಫೀನೊತಯಜೀನ್ ಉತ್ಪನ್ನ ಸಂಯುಕ್ತ) ಲ್ಯಾಬೊರಿಟ್ ಎಂಬಾತ ಮೊತ್ತಮೊದಲಿಗೆ ಬಳಸಿದ (1951). ಕಳವಳದಿಂದ ಕಲಕಿದ ಮನಸ್ಸನ್ನು ಸ್ತಿಮಿತಕ್ಕೆ ತರುವುದೇ ಈ ತೆರನ ಮದ್ದುಗಳ ಹಿರಿ ಗುಣ.

ಮಿದುಳಿನ ಮಿತಿಮೀರಿದ ಚಟುವಟಿಕೆಯನ್ನು ಅಣಗಿಸುವುದಕ್ಕಾಗಿ ಬ್ರೋಮೈಟ್ ಲವಣ, ಪ್ಯಾರಾಲ್ಡಿಹೈಡ್ ಮತ್ತು ಬಾರ್ಬಿಚುರೇಟುಗಳು ಮೊದಲು ಬಳಕೆಗೆ ಬಂದವು (1857-1903). ಇವಲ್ಲದೆ ಕೇಂದ್ರ ನರಮಂಡಲದ ಮೇಲೆ ಇತರ ರೀತಿ ವರ್ತಿಸುವ ಮದ್ದುಗಳು ಅಂದರೆ ಅರಿವಳಿಕೆಗಳು (ಅನೀಸ್ತೆಟಿಕ್ಸ್), ಶಾಮಕಗಳು (ಸೆಡೆಟಿವ್ಸ್), ನಿದ್ರಾಜನಕಗಳು (ಹಿಪ್ನೋಟಿಕ್ಸ್) ಮತ್ತು ಚೇತಕಗಳು (ಸ್ಟಿಮ್ಯುಲೆಂಟ್ಸ್) ಇವು ಬಲು ಕಾಲದಿಂದಲೂ ಗೊತ್ತಿರುವಂಥವು. ಹಾಗೆಯೇ ಮನೋಭಾವ ವರ್ತನೆಗಳ ಮೇಲೆ ಒಂದಿಷ್ಟು ಪರಿಣಾಮ ತೋರುವ ಮಧ್ಯಸಾರ, ಕೆಫೀನುಗಳ ಗುಣ ತಿಳಿದು ಬಂದಿರುವುದೂ ಹೊಸದಲ್ಲ. ಇಷ್ಟಾದರೂ ಭ್ರಮೆ, ಕಳವಳ ಮತ್ತಿತರ ಮನೋವ್ಯಾಪಾರಗಳನ್ನು ಹೆಚ್ಚಿಸುವ ಇಲ್ಲವೇ ತಗ್ಗಿಸುವ ಮದ್ದುಗಳನ್ನು ಕುರಿತ ಇತ್ತೀಚಿನ ಸಂಶೋಧನೆಗಳ ಫಲವಾಗಿ ಬದುಕಿನ ಹಲವು ಮುಖಗಳ ಮೇಲೆ ಅಪಾರ ಪ್ರಭಾವ ಬೀರಿದಂತಾಗಿದೆ.

ಒಗ್ಗದಿಕೆಯ (ಅಲರ್ಜಿ) ಚಿಕಿತ್ಸೆಯಲ್ಲಿ ಶಾಮಕಗಳಾದ ಹಿಸ್ಟಮೀನ್‍ರೋಧಕ ಮದ್ದುಗಳನ್ನು ಸೇವಿಸಿದರು ತಮಗೆ ತೂಕಡಿಕೆ ಬಂದಂತಾಗಿ ಒಂದು ತೆರನ ಅಲಸಿಕೆ ಆಗುತ್ತದೆಂದರು. ಇಂಥ ಮದ್ದುಗಳ ಮೇಲೆ ವಿಶೇಷ ಪರಿಶೋಧನೆಗಳನ್ನು ನಡೆಸಿ ಮೊದಲು ಕ್ಲೋರ್‍ಪ್ರೋಮಜೀನನ್ನು ಶೋಧಿಸಲಾಯಿತು. ಈ ರಾಸಾಯನಿಕ ಸಂಯುಕ್ತ ಫಿನೋತಯಜೀನ್ ಉತ್ಪನ್ನ. ಲ್ಯಾಬೊರಿಟ್ ಮತ್ತು ಹ್ಯೂಗೆನಾರ್ಡ್ ಎಂಬವರು 1951ರಲ್ಲಿ ಕೋರ್‍ಪ್ರೊಮಜೀನಿನೊಂದಿಗೆ ಪ್ರೊಮೆತಜೀನ್ ಮತ್ತು ಪೆತಿಡೀನ್‍ಗಳನ್ನು ಬೆರೆಸಿ ಲಿಟಿಕ್ ಕಾಕ್‍ಟೆಯ್ಲ್‍ನ್ನು ತಯಾರಿಸಿ ಶಸ್ತ್ರಕ್ರಿಯೆಗೆ ಒಳಗಾಗುವ ರೋಗಿಗಳಿಗೆ ಅರಿವಳಿಕೆಯ ವೇಳೆಗೆ ಮುನ್ನ ಅದನ್ನು ಮತ್ತಷ್ಟು ತೀವ್ರಗೊಳಿಸಲೆಂದು ಕೊಟ್ಟು ನೋಡಿದರು. ಇದರಿಂದ ಅರಿವಳಿಕೆಗಳನ್ನು ಕೊಡುವ ಗುಟ್ಟು ಇಳಿಯಿತು. ರೋಗಿಯ ಮೈಕಾವು ಎಂದಿನ ಸಹಜ ಮಟ್ಟಕ್ಕಿಂತಲೂ ಕೆಳಕ್ಕೆ ಇಳಿದಿತ್ತು. ಮರುವರ್ಷವೇ ಕ್ಲೋರ್‍ಪ್ರೊಮಜೀನನ್ನು (ವ್ಯಾಪಾರಿನಾಮ : ಲಾರ್ಜಾಕ್ಟಿಲ್, ದೊಡ್ಡ ಮೊತ್ತದಲ್ಲಿ ಕ್ರಿಯೆ ಎಂಬರ್ಥ) ಕೊಟ್ಟು ಅದು ರೋಗಿಯ ಮನಸ್ಸನ್ನು ಸ್ತಿಮಿತಗೊಳಿಸುವುದೆಂದು ತೋರಿಸಿದಾಗ ಮನೋರೋಗಿಗಳ ಔಷಧೀಯ ಚಿಕಿತ್ಸೆಯಲ್ಲಿ ಮಹಾಕ್ರಾಂತಿಯೊಂದಕ್ಕೆ ನಾಂದಿಯಾಯಿತು. ವ್ಯಕ್ತಿಯ ವರ್ತನೆಯ ಮೇಲೆ ಇದರ ಪರಿಣಾಮ ಹಲವು ರೀತಿಗಳಲ್ಲಿ ತೋರಿತು. ಈ ಪರಿಣಾಮಗಳೇ ಈಗ ನೆಮ್ಮದಿಕಾರಿಗಳ ವಿಶಿಷ್ಟ ಮಾದರಿಯ ಗುಣಗಳು ಎನ್ನಿಸಿವೆ. ಬಲು ಬೇಗನೆ ಎಲ್ಲೆಲ್ಲೂ ಮನೋರೋಗಿಗಳ ಚಿಕಿತ್ಸೆಗೆ ಬಳಸುವ ಈ ಮದ್ದು ಬಹುಜನಪ್ರಿಯವಾಯಿತು. ಭಾರತದಲ್ಲಿ ಸುಮಾರು 4,000 ವರ್ಷಗಳಿಗಿಂತಲೂ ಹಿಂದಿನಿಂದ ಹುಚ್ಚು ಹಾವುಕಡಿತ ಮುಂತಾದವಕ್ಕೆ ಮದ್ದಾಗಿ ಬಳಕೆಯಲ್ಲಿದ್ದ ಸರ್ಪಗಂಧಿ (ರಾವುಲ್ಫಿಯ ಸರ್ಪೆಂಟೈನ) ಗಿಡದ ಬೇರುಗಳಿಂದ ಶುದ್ಧ ರಾಸಾಯನಿಕವಾಗಿ ಬೇರ್ಪಡಿಸಿ ತೆಗೆದ ರಿಸರ್ಪೀನ್ ಎಂಬುದು. ಇದೇ ಹಂಗಾಮಿಗೆ (1952) ರಕ್ತದ ಏರಿದೊತ್ತಡದ ಚಿಕಿತ್ಸೆಗಾಗಿ ವೈದ್ಯಶಾಸ್ತ್ರದಲ್ಲಿ ಬಳಕೆಗೆ ಬಂದಿತು. ರಿಸರ್ಪೀನ್ ಮತ್ತು ಕ್ಲೋರ್‍ಪ್ರೊಮಜೀನ್ ಎರಡೂ ಬೇರೆ ರಾಸಾಯನಿಕಗಳಾಗಿದ್ದರೂ ವ್ಯಕ್ತಿಯ ವರ್ತನೆಯ ಮೇಲೆ ಅವುಗಳ ಪ್ರಭಾವಗಳಲ್ಲಿ ಮಾತ್ರ ಹೋಲಿಕೆ ಉಂಟು.

   ಎರಡನೆಯ ಮಹಾಯುದ್ಧ ನಿಂತ ಕೆಲವೇ ವರ್ಷಗಳಲ್ಲಿ ಶಸ್ತ್ರಕ್ರಿಯೆಗಳಿಗಾಗಿ ಅಂಗಾಂಗಗಳ ಸ್ನಾಯುಗಳನ್ನು ಸಡಿಲಗೊಳಿಸಿ ಶಸ್ತ್ರವೈದ್ಯನಿಗೆ ಅನುವಾಗಲು ಔಷಧ ಶಾಸ್ತ್ರಜ್ಞರು ಕ್ಯುರೇರ್ ಮದ್ದನ್ನು ಕೊಡುತ್ತ ಬಂದರು. ಮುಂದೆ ಈ ದಿಸೆಯಲ್ಲಿನ ಮತ್ತಷ್ಟು ಶೋಧನೆಯಿಂದ ಕೇಂದ್ರ ನರಮಂಡಲದ ಮೇಲೆ ವರ್ತಿಸುವ ಮತ್ತು ಅದೇ ಗುಣವಿರುವ ಮೆಫೆಸೆನಿನ್ ಎಂಬ ಮದ್ದನ್ನು ಆವಿಷ್ಕರಿಸಿದರು. ಮೆಫೆನೆಸಿನನ್ನು ಪ್ರಾಣಿಗಳಿಗೆ ಕೊಟ್ಟಾಗ ಅವುಗಳಲ್ಲೂ ಅದು ಕ್ಯುರೇರಿನಂತೆಯೇ ವರ್ತಿಸುವುದು ಖಚಿತವಾಯಿತು. ಇಂಥದೇ ಇನ್ನೊಂದು ಮದ್ದು ಮೆಪ್ರೊಬಮೇಟನ್ನೂ (ಮಿಲ್ಚಾನ್) ಆವಿಷ್ಕರಿಸಿದರು. ಇದೂ ಒಂದು ನೆಮ್ಮದಿಕಾರಿಯೇ. ರಾಸಾಯನಿಕವಾಗಿ ಇದಕ್ಕೂ ಈ ಮೇಲಿನವೆರಡಕ್ಕೂ ಯಾವ ಸಂಬಂಧವೂ ಇಲ್ಲ. ಈಗ ಬಲುಮಟ್ಟಿಗೆ ಕಳವಳದಿಂದ ಮೈಯೆಲ್ಲ ಬಿಗಿದುಕೊಂಡಿರುವ ರೋಗಿಗಳಲ್ಲಿ ಶಿಥಿಲಕಾರಿ ಹಾಗೂ ನೆಮ್ಮದಿಕಾರಿಯಾಗಿ ಇದರ ಬಳಕೆ ಉಂಟು.
   ರಾಸಾಯನಿಕ ರಚನೆಯ ಪ್ರಕಾರ ನೆಮ್ಮದಿಕಾರಿಗಳನ್ನು ಐದು ಗುಂಪುಗಳಾಗಿ ವಿಂಗಡಿಸಬಹುದು: 1. ಮುಖ್ಯವಾದ ಹಿರಿಯ ನೆಮ್ಮದಿಕಾರಿಗಳೆಂದೆನಿಸುವ ಫೀನೋತಯಜೀನುಗಳು (ಕ್ಲೋರ್‍ಪ್ರೊಮಜೀನಿನಂಥವು), ರಿಸರ್ಪೀನಿನಂಥ ಸರ್ಪಗಂಧಿಯಿಂದ ತೆಗೆದ ಕ್ಷಾರರೂಪಿ (ಆಲ್ಕಲಾಯ್ಡ್) ಮದ್ದುಗಳು; 2. ಮೆಪ್ರೊಬಮೇಟಿನಂಥ ಪ್ರೋಪೇನ್ ಡಯೋಲುಗಳು; 3. ಬೆನಾಕ್ಟಿಜೀನಿನಂಥ ಡೈಫೀನೈಲ್ ಮೀಥೇನುಗಳು. 4. ಲಿಬ್ರಿಯಮ್, ಕಾಂಪೋಸುಗಳಂಥ ಕ್ಲೋರ್‍ಡಯಾಜಿಪಾಕ್ಸೈಡುಗಳು; 5. ರಾತ್ರಿ ಹೊತ್ತಿನ ಅಲ್ಪಶಾಮಕಗಳಾದ ಎಕ್ಸೈಲೂರಿಯ, ಗ್ಲೂಟೆತಿಮೈಡ್, ಮೀಥೈಲ್ ಪ್ಯಾರಫಿನಾಲ್ ಮುಂತಾದ ಮಿಶ್ರಗುಂಪಿನವು. ಇವಲ್ಲೆಲ್ಲ ವ್ಯಾಪಕ ಬಳಕೆಯಲ್ಲಿರುವುವು ಫೀನೊತಯಜೀನ್ ಸಂಯುಕ್ತಗಳು.
   ಬಳಕೆಗೆ ತಕ್ಕಂತೆ ನೆಮ್ಮದಿಕಾರಿಗಳನ್ನು ಪ್ರಧಾನ (ಮೇಜರ್) ಮತ್ತು ಗೌಣ (ಮೈನರ್) ಎಂಬ ಎರಡು ಗುಂಪುಗಳಾಗಿಯೂ ವಿಂಗಡಿಸಿದೆ. ಕೂರಾದ ಇಲ್ಲವೇ ಬೇರೂರಿದ ಮತಿವಿಕಲತೆಗಳಲ್ಲೂ ತಳಮಳಿಸುವ ರೋಗಿಗಳಲ್ಲೂ ಬಳಸುವ ಕ್ಲೋರ್ ಪ್ರೋಮಜೀನ್, ರಿಸರ್ಪಿನ್, ಹ್ಯಾಲೋಪೆರಿಡಾಲ್ ಮುಂತಾದುವು ಮೊದಲ ಗುಂಪಿಗೆ ಸೇರಿದವು. ಇವು ಮೈಮೇಲಿನ ಪರಿವೆಯನ್ನು ಮಸುಕುಗೊಳಿಸುತ್ತವೆ. ಮಪ್ರೋಬಮೇಟ್, ಡೈಯಜಿಪಾಮ್, (ಕಾಂಪೋಸ್) ಮತ್ತು ಪ್ರೋಪೆನ್‍ಡಯಾಲ್ ಸಂಯುಕ್ತಗಳು ಎರಡನೆಯ ಗುಂಪಿಗೆ ಸೇರಿದುವು. ಉದ್ವೇಗ ವ್ಯಾಕುಲತೆಗಳನ್ನು ಶಮನಗೊಳಿಸಲು ಇವನ್ನು ಸಾಮಾನ್ಯವಾಗಿ ಬಳಸುವುದುಂಟು. ನೆಮ್ಮದಿಕಾರಿಗಳ ಪ್ರಭಾವ ಮುಖ್ಯವಾಗಿ ಮೆದುಳಿನ ಮೇಲೆ ಆಗುವುದಾದರೂ ಮೈಯಲ್ಲಿ ಬೇರೆ ಅಂಗಗಳ ಮೇಲೂ ಅವು ಉಪ ಪರಿಣಾಮವನ್ನು ಬೀರುವುದಿದೆ. ತತ್ತರಿಸುವ ಮನೋರೋಗಿಗಳಿಗೆ ಪ್ರಧಾನ ನೆಮ್ಮದಿಕಾರಿಗಳು ಉಪಯುಕ್ತವಾದರೆ ಪುಕ್ಕಲ ನರಬೇನೆಯಂಥ ತೀವ್ರ ವರ್ತನೆಯ ಸ್ಥಿತಿಗಳಲ್ಲಿ ಗೌಣ ನೆಮ್ಮದಿಕಾರಿಗಳು ಉಪಯುಕ್ತವಾಗುವುವು. ರೇಗಿಬೀಳುವ ಮುಂಗೋಪಿ ರೋಗಿಗಳು ನೆಮ್ಮದಿಕಾರಿ ಮದ್ದಿನಿಂದ ತೆಪ್ಪಗಾಗುವರು. ಬಾರ್ಬಿಟೋನುಗಳು ಮತ್ತು ಮದ್ಯಸಾರಗಳಿಂದಲೂ ಕೆಲವು ವೇಳೆ ಇದೇ ಪರಿಣಾಮ ಕಾಣಬಹುದಾದರೂ ಇವು ಕೇವಲ ಕೇಂದ್ರ ನರಮಂಡಲದ ರಗಟೆಯ (ಕಾರ್ಟೆಕ್ಸ್) ಮೇಲೆ ವರ್ತಿಸುವ ಮಾಂದ್ಯಜನಕಗಳು. ಒಬ್ಬ ರೋಗಿಗೆ ನೆಮ್ಮದಿಕಾರಿಯನ್ನು ನೀಡಿದಾಗ ಅಪರೂಪವಾಗಿ ಅವನು ಇನ್ನಷ್ಟು ಕೆರಳಿ ಅವನನ್ನು ನಿಭಾಯಿಸುವುದು ಕಷ್ಟವಾಗಲೂಬಹುದು. ರೋಗಿಯ ವರ್ತನೆಯ ಮೇಲಿನ ಪರಿಣಾಮ ರೋಗಿಗೆ ಹಿಂದೆ ಆದುದನ್ನೂ ಈಗ ಆಗುತ್ತಿರುವುದನ್ನು ಅನುಸರಿಸುವುದು. ಅಂದರೆ ನೆಮ್ಮದಿಗೊಳಿಸುವುದು ಒಂದು ವಿಶೇಷ ಫಲವೇ ಹೊರತು ಯಾವಾಗಲೂ ಹೀಗಾಗಲೇಬೇಕೆಂದಿಲ್ಲ.
   ಪರಿಣಾಮಗಳು : ಸಾಮಾನ್ಯ ಬಳಕೆಯಲ್ಲಿರುವ ನಿದ್ರಾಜನಕಗಳಾದ ಬಾರ್ಬಿಟು ರೇಟುಗಳು ಮಿದುಳಿನ ರಗಟೆಯ ಮೇಲೆ ಪ್ರಭಾವ ಬೀರುತ್ತವೆ. ನೆಮ್ಮದಿಕಾರಿಗಳಾದರೂ ರಗಟೆಯ ಅಡಿಯಲ್ಲಿಯೇ ವರ್ತಿಸುವುವು. ಅಲ್ಲದೆ ನೆಮ್ಮದಿಕಾರಿಗಳನ್ನು ಸೇವಿಸಿದವರು ಕಳವಳ ಉದ್ವೇಗಗಳಿಲ್ಲದೆ ತೆಪ್ಪಗೆ ಇರುವರಾದರೂ ಪರಿಸರದಲ್ಲಿನ ಆಗುಹೋಗುಗಳಿಗೆ ಸಾಕಷ್ಟು ಎಚ್ಚರವಾಗಿದೆಯೇ ಇರುವರು. ಈ ಮದ್ದುಗಳ ವರ್ತನೆಯ ಬಗ್ಗೆ ಪೂರ್ತಿ ಗೊತ್ತಿಲ್ಲ. ಮೆಪ್ರೊಬಮೇಟ್ ಒಂದರ ಹೊರತಾಗಿ ಉಳಿದವೆಲ್ಲಾ ಒಳಾಂಗಗಳ ನರಮಂಡಲದ ಮೇಲೆ ವರ್ತಿಸಿ ಗುಂಡಿಗೆಯ ಕೆಲಸ ರಕ್ತದೊತ್ತಡ ಕರುಳು ಚಲನೆ, ಚರ್ಮದ ಬಣ್ಣ, ಕಣ್ಣು ಪಾಪೆಯ ಗಾತ್ರ ಇಂಥವನ್ನೆಲ್ಲಾ, ಹೆಚ್ಚು ಕಡಿಮೆ ಮಾಡುತ್ತವೆ. ಆದರೆ ಮನಸ್ಸಿನ ಮೇಲೆ ಈ ಮದ್ದುಗಳು ಬೀರುವ ಪ್ರಭಾವಕ್ಕೂ ಈ ಪ್ರಭಾವಗಳಿಗೂ ಏನೂ ಸಂಬಂಧವಿಲ್ಲ. ನರಗಳ ಮತ್ತು ಸ್ನಾಯುಗಳ ಜೀವ ಕ್ಷಣಗಳ ಕ್ರಿಯೆಗಳ ಮೇಲೆ ಹೆಚ್ಚಿನ ಪ್ರಭಾವ ತೋರುವ ಸಿರೋಟೋನಿನ್ನನ್ನು (5-ಹೈಡ್ರಾಕ್ಸಿ ಟ್ರಿಪ್ಟಮೀನ್) ರಿಸರ್ಪಿನ್ ಮಿದುಳಿನಲ್ಲಿನ ಶೇಖರಣೆಯಿಂದ ಹೊರಬಿಡಿಸುತ್ತದೆ. ರಿಸರ್ಪೀನಿನಂತೆ ವರ್ತಿಸುವ ಕ್ಲೋರ್‍ಪ್ರೊಮಜೀನ್ ಈ ಕೆಲಸ ಮಾಡದಿದ್ದರೂ ಸಿರೋಟೊನ್ನಿನಿನ ಸಂಬಂಧಿ ರಾಸಾಯನಿಕವಾದ ನಾರಡ್ರಿನಲೀನಿನ ಪ್ರಭಾವವನ್ನು ತಗ್ಗಿಸುತ್ತದೆ.ಆದರೆ ಬ್ರೋಂಲೈಸರ್ಗಿಕಾಮ್ಲಕ್ಕೂ ಇದೇ  ಪ್ರಭಾವವಿದ್ದರೂ ಅದು ನೆಮ್ಮದಿಕಾರಿಯಲ್ಲ.ರಿಸರ್ಪೀನ್, ಕ್ಲೋರ್‍ಪ್ರೊಮಜೀನ್ ಎರಡು ನೆಮ್ಮದಿಕಾರಿಗಳಾಗಿದ್ದರೂ ಕಾಸರ್ಕವಿಷ (ಸ್ಟಿಕ್ನೀನ್), ವಿದ್ಯುತ್ತಿನ ಧಕ್ಕೆಗಳಿಂದ(ಷಾಕ್ಸ)ಸೆಳವು ಬರಿಸಲೂ  ಇವುಗಳಿಂದ ಅನುವಾಗುತ್ತದೆ.
  ಮನೋಭಾವ ವರ್ತನೆಗಳ ಮೇಲೆ ನೆಮ್ಮದಿಕಾರಿಗಳ ಪ್ರಭಾವ ಬೇರೆ ಬೇರೆ. ರಿಸರ್ಪೀನನ್ನೋ ಕ್ಲೋರ್‍ಪ್ರೊಮಜೀನನ್ನೋ ಪ್ರಯೋಗಾಲಯದ ಕ್ರೂರ ಸ್ವಭಾವದ ಕೋತಿಗಳಿಗೆ ಕೊಟ್ಟರೆ ಅವನ್ನು ಯಾರೇ ಮುಟ್ಟಿದರೂ ಕಚ್ಚದೇ ಸಾಧುವಾಗಿ ಜಡವಾಗಿರುವುವು. ವಿದ್ಯುತ್ತಿನ ದಕ್ಕೆ ತಾಕುವ ಸೂಚನೆ ಕಂಡರೂ ಗಾಬರಿ ಬೀಳದೆ ಕುಳಿತಿರುತ್ತವೆ. ಮೆಪ್ರೋಬಮೇಟ್ ನಿರ್ಬಂದಿತ ಮಾರುವರ್ತನೆಗಳನ್ನು (ಕಂಡೀಷನ್ಡ್ ರೆಸ್‍ಪಾನ್ಸಸ್) ಹೋಗಲಾಡಿಸುವುದಿಲ್ಲ.  ಅಥವಾ ತಗ್ಗಿಸುವುದಿಲ್ಲ. ಆದರೂ ಕೊಂಚ ಮಟ್ಟಿಗೆ ತಾಮಸ ಗೊಳಿಸುತ್ತದೆ.  ಮನೋರೋಗಿಗಳ ಕಲಕಿದ ಮನಸ್ಸನ್ನು ಕ್ಲೋರ್‍ಪ್ರೊಮಜೀನ್ ಶಾಂತಗೊಳಿಸುವುವು. ಮೆಪ್ರೋಬಮೇಟಿಗೆ ಅಂಥ ಪ್ರಭಾವವಿಲ್ಲ. ಆದರೆ ಅದು ಪುಕ್ಕಲಿನ ತಳಮಳ ಕಳವಳ ಸ್ನಾಯು ಸೆಳೆತಗಳನ್ನು ಚೆನ್ನಾಗಿ ಇಳಿಸುವುದು.

ಮನೋದ್ರೇಕಿತ ರೋಗಿಗಳನ್ನು ಈ ಔಷಧ ಶಾಂತಗೊಳಿಸುವುದರಿಂದಲೇ ಮನೊರೋಗಿಗಳ ಆಸ್ಪತ್ರೆಗಳು ಈಗ ಎಷ್ಟೋ ನಿಶ್ಯಬ್ದವಾಗಿರುತ್ತವೆ. ಹಾಗೂ ರೋಗಿಗಳು ಬೇಗ ಗುಣಮುಖರಾಗಿ ಮನೆಗೆ ಹೋಗುತ್ತಾರೆ. ಔಷಧಗಳನ್ನು ಅನೇಕ ವೇಳೆ ಮನೆಯಲ್ಲಿ ಸೇವಿಸಬಹುದಾದ್ದರಿಂದ ಆಸ್ಪತ್ರೆಗೆ ರೋಗಿಗಳು ಹೆಚ್ಚಾಗಿ ಬಂದು ಸೇರುವುದು ತಗ್ಗಿಸಿವೆ. ಈ ಪ್ರಧಾನ ನೆಮ್ಮದಿಕಾರಿಗಲು ಬಳಕೆಗೆ ಬಂದಾಗಿನಿಂದಲೂ ಮನೋರೋಗಗಳ ಆಸ್ಪತ್ರೆಯ ಪರಿಸ್ಥಿತಿಯಲ್ಲಿ ದೊಡ್ಡ ಕ್ರಾಂತಿಯೇ ಆಗಿದೆ. ಗಲಭೆಯೆಬ್ಬಿಸಿ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ ರೋಗಿಗಳು ಇಗ ಶಾಂತಚಿತ್ತರಾಗಿರುವರು. ಅವರನ್ನು ಈಗ ಕೋಣೆಗಳಲ್ಲಿ ಕೂಡ ಹಾಕಿ ಹೊರಕ್ಕೆ ಬರುವಂತೆ ಬೀಗ ಹಾಕಬೇಕಿಲ್ಲ. ಕಟ್ಟಿಹಾಕುವ ಅಗತ್ಯವಿಲ್ಲ. ಇದರಿಂದಾಗಿ ರೋಗಿಗಳನ್ನು ಹೊರರೋಗಿವಿಭಾಗದಲ್ಲೇ ನೋಡಿ, ಅವರ ಊರುಗಳಲ್ಲೇ ಇರುವಂತೆ ಮಾಡಿ ಅವರು ಉಪಯುಕ್ತರಾಗಿ ಬದುಕಲು ಅವಕಾಶವಾಗಿದೆ.

  ಫಿನೋತಯಜೀನ್ ಸರಣಿಯ ಹಲವು ಮದ್ದುಗಳಲ್ಲಿ ಕ್ಲೋರ್‍ಪ್ರೊಮಜೀನ್ ಮುಖ್ಯ ಮಾದರಿ ಎನ್ನಿಸಿದೆ. ಈ ಮದ್ದುಗಳನ್ನು ಎಷ್ಟು ಕಾಲ ಸೇವಿಸಿದರೂ ಚಟ ಹತ್ತುವುದಿಲ್ಲ. ಇವು ಮಾನಸಿಕಗೊಂದಲ ಮತ್ತು ಭ್ರಮೆಗಳನ್ನು ಅಣಗಿಸುತ್ತವೆ. ಕ್ಲೋರೋಪ್ರೊಮಜೀನನ್ನು ಎಷ್ಟೇ ಹೆಚ್ಚಿನ ಗುಟ್ಟಿಗಳಲ್ಲಿ ಕೊಟ್ಟರೂ ಅರಿವು ತಪ್ಪುವುದಿಲ್ಲ. ಹಾಗೆಯೇ ಕ್ಲೋರ್‍ಪ್ರೊಮಜೀನ್ ಸ್ವತಃ ವೇದನಹಾರಿಯಲ್ಲದಿದ್ದರೂ ಮಾರ್ಫೀನ್ ಪ್ರಭಾವಕ್ಕೆ ಒತ್ತಾಸೆಗೊಡುತ್ತದೆ. ಅನೇಕ ಕಾರಣಗಳಿಂದ ತಲೆದೋರುವ ಓಕರಿಕೆ, ವಾಂತಿಗಳನ್ನು ಕ್ಲೋರ್‍ಪ್ರೊಮಜೀನ್ ಚೆನ್ನಾಗಿ ತಡೆಯುವುದಾದರೂ ಚಲನೆಯ ನರಳಿಕೆಯನ್ನು (ಮೋಷನ್ ಸಿಕ್ನೆಸ್) ಮಾತ್ರ ತಪ್ಪಿಸಲಾರದು. ಬಲುಕಾಲ ಕ್ಲೋರ್‍ಪ್ರೊಮಜೀನನ್ನು ಬಳಸುತ್ತಿದ್ದ ರೋಗಿಗಳಲ್ಲಿ ಬೇರೊಂದು ಬೇನೆ ಕಾಣಿಸಿಕೊಳ್ಳಬಹುದು. ಮೈಕೈಕಾಲುಗಳ ಸ್ನಾಯುಗಳೆಲ್ಲ ಬಿಗಿತುಕೊಂಡು ನಡುಕ ಬರುವ ಮತ್ತು ಕಾರಣ ಗೊತ್ತಿಲ್ಲದ ಕಾಯಿಲೆ. ಇದಕ್ಕೆ ಪಾರ್ಕಿನ್‍ಸನ್ ಬೇನೆ (ಪಾರ್ಕಿನ್‍ಸೋನಿಸಮ್) ಎಂದು ಹೆಸರು. ಇದರಿಂದ ರೋಗಿಯ ಓಡಾಟ ಸಲೀಸಾಗಿರದು. ಇದನ್ನು ನಿವಾರಿಸಲು ಟ್ರೈ ಹೆಕ್ಸಿಫೆನಿಡಿಲ್ ಮಾತ್ರೆಯನ್ನು ನೀಡಲಾಗುತ್ತದೆ. ಮದ್ದನ್ನು ನಿಲ್ಲಿಸಿಬಿಟ್ಟರೆ ಈ ಅಡ್ಡ ಪರಿಣಾಮಗಳೆಲ್ಲ ಹೋಗಿಬಿಡುತ್ತವೆ. ಕ್ಲೋರ್‍ಪ್ರೊಮಜೀನನ್ನು ಹೋಲುವ ಹತ್ತಾರು ಮದ್ದುಗಳು ನೆಮ್ಮದಿಕಾರಿಗಳಾಗಿ ತಯಾರಾಗಿ ಬಳಕೆಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಎಟಿಪಿಕಲ್ ಆಂಟಿಸೈಕಾಟಿಕ್ಸ್ ಹೆಚ್ಚು ಜನಪ್ರಿಯವಾಗಿವೆ. (ಉದಾ. ರಿಸ್ಪಿರಿಡಾನ್, ಓಲಾಂಜೆಪಿನ್) ಅವುಗಳಲ್ಲಿನ ವ್ಯತ್ಯಾಸಗಳಲ್ಲಿ ಅವುಗಳ ಗುಟ್ಟಿ, ಪರಿಣಾಮದ ಅವಧಿ, ತೂಕಡಿಕೆ, ಈಲಿ ವಿಷತೆ, ಮೈ ಬಿಗುಪು ಕಳೆತ ಇವೂ ಸೇರಿವೆ.
   ರಿಸರ್ಪೀನ್ ಈಗ ನೆಮ್ಮದಿಕಾರಿಯಾಗಿ ಬಳಕೆಯಾಗದೆ. ಬಲುಮಟ್ಟಿಗೆ ಏರಿದ ರಕ್ತದೊತ್ತಡವನ್ನು ಇಳಿಸಿಡುವ ಮದ್ದಾಗಿಯೇ ಬಳಕೆಯಲ್ಲಿದೆ. ಮಿದುಳಿನ ವ್ಯಾಪಾರಗಳ ಮೇಲೆ ಅದರ ಪ್ರಭಾವ ಈಗ ಗೌಣ ಹೊಸ ಹೊಸ ನೆಮ್ಮದಿಕಾರಕಗಳು, ಕಡಿಮೆ ಅಡ್ಡ ಪರಿಣಾಮ ಇರುವುವು. ಈಗ ಮಾರುಕಟ್ಟೆಗೆ ಬರುತ್ತಿವೆ.
    ಚಿಕಿತ್ಸೆಗೆ ಒಳಪಟ್ಟ ಮತಿವಿಕಲ ರೋಗಿ ಈ ಮದ್ದುಗಳ ಚಿಕಿತ್ಸೆಯಿಂದ ಶಾಂತಿಚಿತ್ತನಾಗುತ್ತಾನೆ. ರೋಗಲಕ್ಷಣಗಳು, ತಗ್ಗುತ್ತವೆ. ರೋಗಿಯ ವರ್ತನೆ ಸುಧಾರಿಸುತ್ತದೆ. ಆಸ್ಪತ್ರೆ ನೌಕರರೊಂದಿಗೆ ಸಹಕರಿಸುವನು. ನೆಮ್ಮದಿಯಿರುವ ಶಾಂತನಾದ ರೋಗಿಯನ್ನು ಅವನ ಮನೆಯವರೂ ಬರಮಾಡಿಕೊಳ್ಳುವುದರಿಂದ ರೋಗಿ ತನ್ನ ಎಂದಿನ ಪರಿಸರಕ್ಕೆ ಇನ್ನೂ ಚೆನ್ನಾಗಿ ಹೊಂದಿಕೊಳ್ಳುವಂತಾಗುವನು. ಮನೋರೋಗಿಗಳು ಆಸ್ಪತ್ರೆಗೆ ಪುನಃ ಪುನಃ ಬರುವುದೂ ಅಲ್ಲಿಯೇ ಉಳಿಯುವುದೂ ಸಫಲಚಿಕಿತ್ಸೆಯಿಂದ ಬಲುಮಟ್ಟಿಗೆ ಕಡಿಮೆಯಾಗಿದೆ. ನೆಮ್ಮದಿಕಾರಿ ಮದ್ದುಗಳು ಬಂದ ಮೇಲೆ ವಿದ್ಯುತ್‍ಕಂಪನ  ಚಿಕಿತ್ಸೆಯನ್ನು (ಇ.ಸಿ.ಟಿ: ಎಲೆಕ್ಟ್ರೊಕನ್‍ವಲ್ಸಿವ್ ತೆರಪಿ) ಕೆಲವೇ ಆಯ್ದ ರೋಗಿಗಳಿಗೆ ಕೊಡಲಾಗುತ್ತದೆ. ಅದರ ಬಳಕೆ ತಗ್ಗಿದೆ.

(ಡಿ.ಎಸ್.ಎಸ್.)