ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಲ್ಲೂರು

ವಿಕಿಸೋರ್ಸ್ದಿಂದ

ನೆಲ್ಲೂರು - ಆಂಧ್ರ ಪ್ರದೇಶ ರಾಜ್ಯದ ಪೂರ್ವಭಾಗದಲ್ಲಿರುವ ಒಂದು ಜಿಲ್ಲೆ; ಆ ಜಿಲ್ಲೆಯ ಮುಖ್ಯ ಪಟ್ಟಣ. ಜಿಲ್ಲೆಯ ಉತ್ತರದಲ್ಲಿ ಗುಂಟೂರು ಜಿಲ್ಲೆ, ಪಶ್ಚಿಮದಲ್ಲಿ ಕರ್ನೂಲು ಮತ್ತು ಕಡಪ ಜಿಲ್ಲೆಗಳು, ವಾಯುವ್ಯದಲ್ಲಿ ಚಿತ್ತೂರು ಜಿಲ್ಲೆ, ದಕ್ಷಿಣದಲ್ಲಿ ತಮಿಳುನಾಡಿನ ಚಿಂಗಲ್‍ಪಟ್ ಜಿಲ್ಲೆ ಮತ್ತು ಪೂರ್ವದಲ್ಲಿ ಬಂಗಾಳಕೊಲ್ಲಿ ಇವೆ. ವಿಸ್ತೀರ್ಣ 13 058 ಚ. ಕಿಮೀ. (ಜನಸಂಖ್ಯೆ 16,09,617 (1971). ಈ ಜಿಲ್ಲೆಯಲ್ಲಿರುವ ತಾಲ್ಲೂಕುಗಳು ಇವು; ನೆಲ್ಲೂರು (ಜನಸಂಖ್ಯೆ 3,63,166), ಗೂಡೂರ್ (1,73,465), ಸೂಲೂರ್‍ಪೇಟೆ (1,34,694), ವೆಂಕಟಗಿರಿ (1,12,871) ರಾಪುರ್ (1,12,192) ಆತ್ಮಕೂರ್ (1,59,567), ಉದಯಗಿರಿ (1,36,781), ಕಾವಲಿ (1,79,416) ಮತ್ತು ಕೋವೂರ್ (2,37,485).

ಪೂರ್ವಘಟ್ಟಗಳಿಂದ ಸಮುದ್ರದ ವರೆಗೆ ಹಬ್ಬಿರುವ ಮೈದಾನನ್ನೊಳಗೊಂಡಿರುವ ಈ ಜಿಲ್ಲೆಯ ಕಡಲ ತೀರ ಮರಳಿನಿಂದ ಕೂಡಿದೆ. ಇಲ್ಲಿ ಆಗಾಗ ಸಮುದ್ರದ ಆಲೆಗಳ ನೀರು ನುಗ್ಗುತ್ತದೆ. ಪಶ್ಚಿಮಕ್ಕೆ ಸಾಗಿದಂತೆ ನೆಲ ಎತ್ತರವಾಗುತ್ತದೆ. ಅದರೆ ಅದು ಅಷ್ಟು ಫಲವತ್ತಾಗಿಲ್ಲ. ಜಿಲ್ಲೆಯಲ್ಲಿ ಹರಿಯುವ ನದಿಗಳು ಪೆನ್ನಾರ್, ಕಂಡಲೇರು, ಸ್ವರ್ಣಮುಖಿ, ಮೂಸಿ ಮತ್ತು ಮೊನ್ನೇರು. ಜಿಲ್ಲೆಯಲ್ಲಿ ಸುಮಾರು ಅರ್ಧದಷ್ಟು ನೆಲ ಸಾಗುವಳಿಗೆ ಒಳಪಟ್ಟಿದೆ. ಇದರಲ್ಲಿ ಅರ್ಧಕ್ಕೆ ನೀರಾವರಿ ಸೌಲಭ್ಯವುಂಟು. ಮುಖ್ಯ ಬೆಳೆಗಳು ರಾಗಿ, ಸಾವೆ, ಬತ್ತ, ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳು. ನೆಲ್ಲೂರು ಜಿಲ್ಲೆಯ ದನಗಳು ಪ್ರಸಿದ್ಧವಾಗಿವೆ. ಜಿಲ್ಲೆಯಲ್ಲಿ ಆಭ್ರಕದ ಗಣಿಗಳಿವೆ. ಮಣ್ಣಿನ ತಯಾರಿಕೆಗೆ ಜಿಲ್ಲೆ ಹೆಸರಾಗಿದೆ.

ನೆಲ್ಲೂರು ಜಿಲ್ಲೆಯಿರುವ ಪ್ರದೇಶ ಹಿಂದೆ ಚೋಳ ಮತ್ತು ಪಾಂಡ್ಯ ರಾಜ್ಯಗಳಿಗೆ ಸೇರಿತ್ತು. ಅನಂತರ ಇದು ವಿಜಯನಗರದ ಭಾಗವಾಯಿತು. ಕರ್ಣಾಟಕದ ನವಾಬರ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶ 1781ರಲ್ಲಿ ಬ್ರಿಟಿಷರ ವಶವಾಯಿತು. ಉದಯಗಿರಿಯಲ್ಲಿ ಒಂದು ಕೋಟೆ ಇದೆ. ನೆಲ್ಲೂರು ಅಲ್ಲದೆ ಇತರ ಪ್ರಮುಖ ಪಟ್ಟಣಗಳು ಗೂಡೂರ್ (33,778), ಕಾವಲಿ (29,616), ವೆಂಕಟಗಿರಿ (17,546), ಕೋವೂರ್ (16,846), ಸೂಲೂರ್‍ಪೇಟೆ (12,757), ಮತ್ತು ನಾಯಿಡುಪೇಟೆ (9,664).

ನೆಲ್ಲೂರು ಪಟ್ಟಣ ಜಿಲ್ಲೆಯ ಪೂರ್ವಭಾಗದಲ್ಲಿ ಪೆನ್ನಾರ್ ನದಿಯ ಬಲದಂಡೆಯ ಮೇಲೆ ಮದರಾಸಿಗೆ ಉತ್ತರದಲ್ಲಿ ಸುಮಾರು 152 ಕಿಮೀ. ದೂರದಲ್ಲಿದೆ. ಜನಸಂಖ್ಯೆ 1,33,590 (1971). 1866ರಲ್ಲಿ ಇಲ್ಲಿ ಪುರಸಭೆ ಸ್ಥಾಪಿತವಾಯಿತು. ವೆಂಕಟಗಿರಿಯ ರಾಜರು ಇಲ್ಲಿ 1876ರಲ್ಲಿ ಆಟ್ರ್ಸ್ ಮತ್ತು ವಿಜ್ಞಾನ ಕಾಲೇಜನ್ನೂ ಸಂಸ್ಕøತ ಮಹಾವಿದ್ಯಾಲಯವನ್ನೂ ಸ್ಥಾಪಿಸಿದರು. ಇವು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯಕ್ಕೆ ಸೇರಿವೆ. ಇಲ್ಲಿ ಹಲವು ಪ್ರೌಢಶಾಲೆಗಳು ಮತ್ತು ಪ್ರಶಿಕ್ಷಣ ಶಾಲೆಗಳು ಮತ್ತು ರೋಮನ್ ಕ್ಯಾತೊಲಿಕ್ ಮಿಷನ್ನಿನ ಶಿಕ್ಷಣ ಸಂಸ್ಥೆಗಳು ಇವೆ. ಇದು ಮಣ್ಣಿನ ಪಾತ್ರೆಗಳ ತಯಾರಿಕೆಯ ಕೇಂದ್ರ. ಮದರಾಸ್-ವಿಜಯವಾಡ ಹೆದ್ದಾರಿ ಇದರ ಮೂಲಕ ಸಾಗುತ್ತದೆ. ಮದರಾಸ್ ದೆಹಲಿಗಳಿಗೆ ರೈಲ್ವೆ ಸಂಪರ್ಕವಿದೆ. (ಬಿ.ಬಿ.ಒ.)