ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಪಾಲ

ವಿಕಿಸೋರ್ಸ್ದಿಂದ

ನೇಪಾಲ- ಹಿಮಾಲಯ ಪರ್ವತಗಳ ದಕ್ಷಿಣ ಇಳಿಜಾರು ಪ್ರದೇಶದಲ್ಲಿರುವ ಒಂದು ರಾಜಪ್ರಭುತ್ವ. ಇದು ನೆಲದಿಂದ ಸುತ್ತುವರಿಯಲ್ಪಟ್ಟಿರುವ ದೇಶ, ಪೂರ್ವ ದಕ್ಷಿಣ ಪಶ್ಚಿಮಗಳಲ್ಲಿ ಭಾರತ, ಉತ್ತರದಲ್ಲಿ ಚೀನದ ಸ್ವಯಮಾಡಳಿತ ಪ್ರದೇಶವಾದ ಟಿಬೆಟ್ ಇವೆ. ಉ.ಅ. 260 20-300 10 ಮತ್ತು ಪೂ.ರೇ. 800 15-880 15 ನಡುವೆ, ಪೂರ್ವಪಶ್ಚಿಮವಾಗಿ 805 ಕಿಮೀ. ಮತ್ತು ದಕ್ಷಿಣೋತ್ತರವಾಗಿ 241 ಕಿಮೀ. ಹಬ್ಬಿರುವ ನೇಪಾಲದ ವಿಸ್ತೀರ್ಣ 147,181 ಚ.ಕಿಮೀ; ಜನಸಂಖ್ಯೆ 2,48,42,000 (2000). ಇದರಲ್ಲಿ ಸೇ 90 ನಗರವಾಸಿಗಳು ಚ.ಕಿ.ಮೀ.ಗೆ ಜನಸಾಂದ್ರತೆ 169 ಸೇ 10 ಗ್ರಾಮ ವಾಸಿಗಳು. ರಾಜಧಾನಿ ಕಾಠಮಾಂಡೂ. ಭೌತಿಕ ಭೂವಿವರಣೆ

ಭೂವಿಜ್ಞಾನ: ನೇಪಾಲದ ಭೂವಿಜ್ಞಾನಾಧ್ಯಯನ ಹತ್ತೊಂಬತ್ತನೆಯ ಶತಮಾನದಲ್ಲೇ ಹೂಕರ್ ಎಂಬಾತನಿಂದ ಪ್ರಾರಂಭವಾಗಿ (1854) ಅನೇಕ ಖ್ಯಾತ ಭೂವಿಜ್ಞಾನಿಗಳು ವಿವಿಧ ಭಾಗಗಳಲ್ಲಿ ವಿವಿಧ ಅಂಶಗಳನ್ನು ಪರಿಶೀಲಿಸಿದ್ದಾರೆ.

ನೇಪಾಲ ದೇಶವೊಂದು ಭೂದ್ವೀಪ. ಅಂದರೆ ಎಲ್ಲ ಕಡೆಗಳಲ್ಲಿಯೂ ಇದನ್ನು ಭೂಪ್ರದೇಶ ಆವರಿಸಿದೆ. ಉತ್ತರದ ಸುಮಾರು ಮೂರನೆಯ ಎರಡು ಭಾಗ ಪರ್ವತಮಯವಾಗಿದೆ. ಇದು ಪೂರ್ವಪಶ್ಚಿಮವಾಗಿ ಹಬ್ಬಿರುವ ಹಿಮಾಲಯ ಪರ್ವತ ಪ್ರದೇಶದ ಮಧ್ಯಭಾಗ. ಇದರ ವಿಸ್ತಿರ್ಣ 1,41,000 ಚ.ಕಿಮೀ, ಉದ್ದ 870 ಕಿಮೀ, ಅಗಲ ಸುಮಾರು 130 ಕಿಮೀ. ಈ ಪ್ರದೇಶವನ್ನು ಆರು ಭಾಗಗಳಾಗಿ ವಿಂಗಡಿಸಬಹುದು.

1 ಟೆರೈ ಬಯಲು ಎತ್ತರ ಸಮುದ್ರಮಟ್ಟದಿಂದ 100-200 ಮೀ ಅಗಲ 10-30 ಕಿಮೀ, ಉದ್ದ ಸುಮಾರು 800 ಕಿಮೀ. ನೇಪಾಲದ ಉದ್ದಕ್ಕೂ ಹರಡಿದೆ. ಮೆಕ್ಕಲು ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ.

2 ಚುರಿಯ ಗುಡ್ಡಪ್ರದೇಶ : ಟೆರೈ ಮಟ್ಟಪ್ರದೇಶ ಉತ್ತರ ಭಾಗದಲ್ಲಿ ಸಮುದ್ರ ಮಟ್ಟದಿಂದ ತಟ್ಟನೆ 1,300 ಕಿಮೀ ಎತ್ತರಕ್ಕೆ ಏರಿದೆ. ಈ ಭಾಗದಲ್ಲಿ ಹಲವಾರು ಕಣಿವೆಗಳೂ ಇವೆ. ಅಲ್ಲಲ್ಲಿ ಮಹಾಭಾರತ ಗುಡ್ಡಗಳೊಂದಿಗೆ ಸೇರಿಹೋಗುತ್ತವೆ.

3 ಮಹಾಭಾರತ ಗುಡ್ಡಪ್ರದೇಶ : ಭಾರತೀಯರ ಅಭಿಜಾತ ಕಾವ್ಯ ಮಹಾ ಭಾರತದ ಜ್ಞಾಪಕಾರ್ಥ ಈ ಹೆಸರು ಬಂದಿದೆ. ಈ ಪ್ರದೇಶ ಚುರಿಯ ಗುಡ್ಡಗಾಡಿನ ದಕ್ಷಿಣಕ್ಕೂ ತಗ್ಗಾದ ಮಧ್ಯಭಾಗದ ಉತ್ತರಕ್ಕೂ ಇದೆ. ಸಮುದ್ರ ಮಟ್ಟದಿಂದ 3,000 ಮೀ ಎತ್ತರವಾಗಿದೆ. ನೇಪಾಲದ ಉದ್ದಕ್ಕೂ ಹಬ್ಬಿದೆ. ಇದರಲ್ಲಿ ಉತ್ತರ-ದಕ್ಷಿಣವಾಗಿ ಕೋಶಿ, ಗಂಡಕಿ ಮತ್ತು ಕರ್ನಾಲಿ ನದಿಗಳು ಅಳ ಕಣಿವೆಗಳನ್ನು ಕೊರೆದಿವೆ. ಪೋಡ್ಸಲ್ (ಪರ್ವತಪ್ರದೇಶದ ಮಣ್ಣು-ಫಲವಂತಿಕೆ ಕಡಿಮೆ, ಆಮ್ಲೀಯತೆ ಹೆಚ್ಚು) ಹರಡಿಕೊಂಡಿದೆ. ಜನಸಂಖ್ಯೆ ಅತಿವಿರಳ.

4 ಮಧ್ಯಪ್ರದೇಶ : ಇದು ಮಹಾಭಾರತ ಪರ್ವತ ಸಾಲಿನ ಉತ್ತರದಲ್ಲಿ ಎತ್ತರವಾದ ಹಿಮಾಲಯ ಪರ್ವತಸಾಲಿನ ದಕ್ಷಿಣಕ್ಕಿರುವ ಮಟ್ಟಸ ಬೆಟ್ಟಗಳ ಪ್ರದೇಶ ಸುಮಾರು 30 ಕಿಮೀ ಅಗಲವಾಗಿ ಪೂರ್ವದಿಂದ ಪಶ್ಚಿಮದುದ್ದಕ್ಕೂ ಹಬ್ಬಿದೆ. ನದಿ ಮತ್ತು ಕಣಿವೆಗಳಿಂದ ಕೂಡಿದೆ. ಪೊಡ್ಸಲ್ ಹರಡಿಕೊಂಡಿದೆ.

5 ಉನ್ನತ ಹಿಮಾಲಯ ವಲಯ : ಉತ್ತರದಲ್ಲಿರುವ ಮಟ್ಟಸ ಬೆಟ್ಟ ಪ್ರದೇಶ ನಿಧಾನವಾಗಿ ಏರುತ್ತ ಹೋಗಿ ಹಲವಾರು ಬೆಟ್ಟಸಾಲುಗಳಾಗಿದೆ. ಇಲ್ಲಿ ಅನೇಕ ಹಿಮಾಚ್ಛಾದಿತ ಶಿಖರಗಳೂ ಇವೆ. ಹಿಮರಹಿತ ಭಾಗಗಳಲ್ಲಿ ಪೋಡ್ಸಲ್ ಹರಡಿಕೊಂಡಿದೆ.

6 ಒಳಭಾಗದ ಹಿಮಾಲಯ ಕಣಿವೆ ಪ್ರದೇಶ : ಉನ್ನತಹಿಮಾಲಯ ವಲಯ ದಿಂದಾಚೆ ಇರುವ ಕಣಿವೆ ಭಾಗ. ಇದು ಟೆತಿಸ್ ಮಹಾಸಾಗರದ ಜಲಜ ಶಿಲೆಗಳಿಂದ ಕೂಡಿದ್ದು ಸಮತಲವಾಗಿದೆ. ಇದರಲ್ಲಿರುವ ನಯವಾದ ಮಣ್ಣು ವ್ಯವಸಾಯಕ್ಕೆ ಅನುಕೂಲವಾಗಿದೆ.

ನದಿಗಳು: ನೇಪಾಲದ ನದಿಗಳನ್ನು ಅವುಗಳ ಉಗಮವನ್ನು ಆಧರಿಸಿ ಎರಡು ಗುಂಪುಗಳಾಗಿ ವಿಂಗಡಿಸಬಹುದು:

(1) ಪುರಾತನ ನದಿಗಳು : ಇವು ಹಿಮಾಲಯ ಪರ್ವತದ ಉದಯಕ್ಕೆ ಮೊದಲೇ ಇದ್ದವು. ಉದಾಹರಣೆಗೆ ಕೋಶಿ, ಗಂಡಕಿ, ಕರ್ನಾಲಿ ಮತ್ತು ಮಹಾಕಾಳಿ. ಇವು ರಭಸವಾಗಿ ಅತಿ ಎತ್ತರದಿಂದ ಹರಿದು ಬರುತ್ತವೆ.

(2) ಅನುಗಾಮಿ ನದಿಗಳು : ಇವು ಹಿಮಾಲಯ ಪರ್ವತದಲ್ಲಿ ಉದಯದ ತರುವಾಯ ಹುಟ್ಟಿದಂಥವು. ಉದಾಹರಣೆ, ಕೊಹಿಲಾ ಮತ್ತು ಅದರ ಉಪನದಿಗಳು.

ನೇಪಾಲದಲ್ಲಿ ಮುಖ್ಯವಾಗಿ ನಾಲ್ಕು ನದಿಮಂಡಲಗಳಿವೆ : (1) ಪೂರ್ವಭಾಗದಲ್ಲಿ ಕೋಶಿ ನದಿಮಂಡಲ : ಸನ್‍ಕೋಶಿ, ಅರುಣ ತಮೂರ್, ಕಾಂಬ ಕೋಶಿ. (2) ಮಧ್ಯದಲ್ಲಿ ಗಂಡಕಿ ನದಿಮಂಡಲ : ಕಾಳಿ, ತ್ರಿಶೂಲಿ, ಸೇಟಿ, ಮಸ್ರ್ಯಾಂಗ್ದಿ, ಅಂಬು, ಬುರಿ. (3) ಪಶ್ಚಿಮಭಾಗದಲ್ಲಿ ಕರ್ನಾಲಿ ನದಿಮಂಡಲ : ಕರ್ನಾಲ್, ಸೇಟಿ(ಕಾಲಿಗಡ್), ಬುರಿ (4) ಅತ್ಯಂತ ಪಶ್ಚಿಮಭಾಗದಲ್ಲಿ ಮಹಾಕಾಳಿ ನದಿಮಂಡಲ : ಮಹಾಕಾಳಿ ಮತ್ತು ಅದರ ಉಪನದಿಗಳು.

ಇವೂ ಅಲ್ಲದೆ ಅನೇಕ ಸಣ್ಣನದಿಗಳೂ ಇವೆ. ಟಿಸಾ, ಅರುಂಗ್ ಮತ್ತು ಮಾರಿಖೋಲ, ಬಾಣ್‍ಮತಿ, ಕಮಲ, ಕಂಕೈ, ತ್ರಿಜುಗ ಮತ್ತು ಮೆಚಿ.

ಹಿಮಾಲಯ ಪರ್ವತಭಾಗಗಳಲ್ಲಿ ಅನೇಕ ಹಿಮನದಿಗಳೂ ಇವೆ. ಇವು ಹೆಚ್ಚಾಗಿ ಉತ್ತರ ನೇಪಾಳದಲ್ಲಿವೆ. ಮುಖ್ಯವಾದವು ನಿಪುಚು, ಬರುಣ, ಚಾಂಗೊ ಮತ್ತು ಹುಂಕ್ಹು.

ಸರೋವರಗಳು : ಇವನ್ನು ಹಿಮನದಿಗಳಿಂದಾದ ಸರೋವರಗಳು, ನದಿ ಕಣಿವೆಗಳಿಂದಾದ ಸರೋವರಗಳು ಮತ್ತು ಅಕ್ಸ್‍ಬೊ ಸರೋವರಗಳು ಎಂಬುದಾಗಿ ವಿಂಗಡಿಸಬಹುದು. ನೇಪಾಲಿ ಭಾಷೆಯಲ್ಲಿ ಈ ಸರೋವರಗಳನ್ನು ದಾಹ್, ರಾಹ್, ಟಾಲ್ಸ್ ಅಥವಾ ಕುಂದ್ ಎಂದು ಕರೆಯುವರು. ಅತ್ಯಂತ ದೊಡ್ಡ ಸರೋವರ ರಾರ 3,300 ಮೀ ಎತ್ತರದಲ್ಲಿದೆ. ಪ್ರಖ್ಯಾತವಾದ ಸರೋವರವೆಂದರೆ ಪೊಖ್ಹರ್ ಕಣಿವೆಯಲ್ಲಿರುವ ಫೇವ.

ನೇಪಾಲದ ಸ್ಥೂಲ ಭೂ ಇತಿಹಾಸ ಪಟ್ಟಿ

ಶಿಲಾಗುಂಪು

ಕಾಲ

ಪ್ರಮುಖ ಸ್ಥಳಗಳು

ಭಾರತದಲ್ಲಿ ಸರಿಸಮಾನ ಶಿಲಾಗುಂಪುಗಳು

ಮಟ್ಟವಾದ ದಂಡೆ (ಗ್ರಾವಿಲ್)ಗರಜು ಪ್ಲೀಸ್ಟೊಸೀನಿನಿಂದ ಇತ್ತೀಚಿನ ಕಾಲದ ತನಕ ಪಶ್ಚಿಮ ಸೇಪಾಲದ ಡಾಂಗ್, ರಾಪ್ತಿ, ಸುರ್‍ಪೆಟ್ ಕಣಿವೆಗಳು _

ಮೇಲಣ ಚುರಿಯ ಪ್ಲಿಯೊಸೀನಿನಿಂದ ಪ್ಲೀಸ್ಟೊಸೀನ್ ತನಕ ಕಾಠಮಾಂಡೂ ಕಣಿವೆ, ಧರನ್‍ನ ಪೂರ್ವ ಭಾಗ ಕಾಂಕಿಗೆ ಪಶ್ಚಿಮಕ್ಕೆ ಇತ್ಯಾದಿ ಮಧ್ಯ ಮತ್ತು ಮೇಲಣ ಶಿವಾಲಿಕ್ ಶಿಲೆಗಳು

ಕೆಳಗಿನ ಚುರಿಯ ಮಯೊಸೀನ್ ಪ್ರಮುಖ ಸ್ತರಭಂಗದ ದಕ್ಷಿಣಕ್ಕೆ ಕೆಳಗಿನ ಶಿವಾಲಿಕ್ ಶಿಲೆಗಳು

ನೆಟ ಶಿಲಾಗುಂಪು ಮಯೊಸೀನಿನಿಂದ ಅಲಿಗೊಸಿನ್ ಸುಖೆಟ್‍ನ ಜಾರ್‍ಬುಟ್ಟ ZsÀರ್ಮಶಾಲ ಶಿಲೆಗಳು

ಇಯೊಸೀನ್ ಇಯೊಸೀನ್ ಭೈನ್ಸಿಕಟ್ಟಖೊಲ, ಟಾರ್ ಜಾರ್‍ಬುಟ್ಟ ಸುಬಾರು ಶಿಲೆಗಳು

ಕ್ರಿಟೇಷಸ್ ಕ್ರಿಟೇಷನ್ ಮಾಸೆಮ್, ಟಾಶ್ ಜಾರ್‍ಬುಟ್ಟ ಮತ್ತು ತಕ್‍ಖೊಲ _

ಜುರಾಸಿಕ್ ಜುರಾಸಿಕ್ ಮುಕ್ತಿನಾಥನ್ ಸಾಲಿಗ್ರಾಮ ಜೇಡುಶಿಲೆ ಟಿಂಕಾರ್‍ಲಿಪು ಸ್ಪಿಟಿ ಶಿಲೆಗಳು


ಜುರಾಸಿಕ್ ಮುಕ್ತಿನಾಥನ್ ಸುಣ್ಣಶಿಲೆ


ಪರ್ಮೊಕಾರ್ಬಾನಿಫೆರಸ್ ಪರ್ಮೊಕಾರ್ಬಾನಿಫೆರಸ್ ಪೂರ್ವನೆ ಪಾಲದ ಗೊಂಡವಾನ ಲಾಂಗು ಕಣಿವೆ ಮತ್ತು ಮೌಂಟ್ ಎವರೆಸ್ಟಿನ ಸುಣ್ಣಶಿಲೆ -

ಸೈಲೂರಿಯನ್ ಸೈಲೂರಿಯನ್ ಫೂಲ್ ಚೌಕಿ ಮತ್ತು ಮುಕ್ತಿನಾಥ್ -

ಮಹಾಭಾರತ



ಸುಣ್ಣ ಶಿಲಾಗುಂಪು :



(iii) ಹೆಚ್ಚು ಮರಳಿನಿಂದ ಕೂಡಿದ ಶಿಲಾಸ್ತರಗಳು ಕೇಂಬ್ರಿಯನ್ ತನಕ (iii) ಉತ್ತರ ಮತ್ತು ದಕ್ಷಿಣ ನೇಪಾಲ ಡಾರ್ಜಿಲಿಂಗ್ ನೈಸ್‍ಶಿಲೆಗಳು

(ii) ಸುಣ್ಣ ಶಿಲಾಸ್ತರಗಳು ಪ್ರೀಕೇಂಬ್ರಿಯನ್ನಿನಿಂದ (ii) ಮಧ್ಯ ಮತ್ತು ಪಶ್ಚಿಮ ನೇಪಾಲ ಚಾಂದ್‍ಪುರ ಮತ್ತು ಚೈಲ್ ಶಿಲೆಗಳು

(i) ಜೇಡು ಶಿಲಾಸ್ತರಗಳು

(i) ಉತ್ತರ ಮತ್ತು ದಕ್ಷಿಣ ನೇಪಾಲ ಡಾಲಿಂಣ್ ಶಿಸ್ಟ್ ಮತ್ತು ಸಲ್ಕಾಲ ಶಿಲೆಗಳು


ಭೂಕಂಪನಗಳು: ನೇಪಾಲ ದೇಶ ಹಿಮಾಲಯ ಪರ್ವತಪ್ರದೇಶದ ಅಸ್ಥಿರ ವಲಯದಲ್ಲಿರುವುದರಿಂದ ಅಲ್ಲಿ ಭೂಕಂಪನಗಳು ಸರ್ವಸಾಮಾನ್ಯ. ಅದರೆ ಅಲ್ಲಿ ಒಂದಾದರೂ ಭೂಕಂಪನಮಾಪಕಕೇಂದ್ರ ಇಲ್ಲಿದಿರುವುದು ಆಶ್ಚರ್ಯ. ಹೀಗಾಗಿ ಅಲ್ಲಿ ಜರಗುವ ಸಮಸ್ತ ಭೂಕಂಪನಗಳ ಬಗ್ಗೆ ಮಾಹಿತಿ ಇಡಲು ಸಾಧ್ಯವಾಗಿಲ್ಲ. ಅದರೆ 1897ರ ಭೂಕಂಪನ, ರಿಕ್ಟರ್ ಮಾನಕದಲ್ಲಿ 8.2. ಇದರಿಂದ ಕಾಠಮಾಮಡೂ ನಗರ ತೀವ್ರ ಹಾನಿಗೊಳಗಾಯಿತು. ಅಲ್ಲಿಯ ಬಚಾಂಗ್ ಪ್ರದೇಶದಲ್ಲಿ ಸತ್ತವರ ಸಂಖ್ಯೆ ಸುಮಾರು 3,400. ಇದೇ ತೀವ್ರತೆಯ ಭೂಕಂಪನಗಳು 1803 ಮತ್ತು 1833ರಲ್ಲಿಯೂ ಘಟಿಸಿದ್ದುವು. 1968ರ ಭೂಕಂಪನ ಇನ್ನೂ ತೀವ್ರ ತರವಾದ್ದಾಗಿ ಅಪಾರ ಆಸ್ತಿ ನಷ್ಟವಾಯಿತು. ಈ ಎಲ್ಲ ಭೂಕಂಪನಗಳ ಕೇಂದ್ರವೂ ಪ್ರಮುಖ ಸ್ತರಭಂಗದ ವಲಯದಲ್ಲಿಯೇ ಕಂಡುಬಂದಿದೆ.

ಭೂಕುಸಿತಗಳು : ಪ್ರತಿವರ್ಷ ಮಳೆಗಾಲದಲ್ಲಿ ನೂರಾರು ಭೂಕುಸಿತಗಳು ಅಗುತ್ತಿರುವುವು. ಪ್ರಾಣ, ಆಸ್ತಿ ನಷ್ಟ ಸಾಮಾನ್ಯ-ಪ್ರತಿಬಾರಿಯೂ ಹಲವು ಕೋಟಿ ರೂಪಾಯಿಗಳಷ್ಟು ನಷ್ಟವಾಗುವುದೆಂದು ಅಂದಾಜು. ತಗ್ಗು ಪ್ರದೇಶಗಳಲ್ಲಿರುವ ಹಲವಾರು ಹಳ್ಳಿಗಳೇ ನಾಶವಾಗಿಹೋಗುತ್ತವೆ. ಈ ರೀತಿಯ ಭೂಕುಸಿತಗಳಿಗೆ ಮುಖ್ಯವಾಗಿ ಮೇಲ್ಮೈಲಕ್ಷಣಗಳು, ಮಳೆ ಮತ್ತು ಶಿಲಾಗುಣಗಳು ಕಾರಣ. ಆದರೂ ಭೂಕುಸಿತಗಳು ಹೆಚ್ಚು ಸಂಭವಿಸದಂತೆ ಹಲವಾರು ರೀತಿಯ ತಡೆ ಕಾರ್ಯಗಳನ್ನು ಅಲ್ಲಲ್ಲಿ ಕೈಗೊಳ್ಳಲಾಗಿದೆ.

ಬಿಸಿನೀರು ಚಿಲುಮೆಗಳು : ಇವು ಉತ್ತರ ಭಾಗದ ಎತ್ತರವಾದ ಹಿಮಾಲಯ ವಲಯದಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ. ಡುನ್ ಪ್ರದೇಶದ ಕಣಿವೆ ವಲಯದಲ್ಲಿ ಕಡಿಮೆ.

ಭೂವಿಜ್ಞಾನ ವಿವರಣೆ ದೃಷ್ಟಿಯಿಂದ ನೇಪಾಲವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು : ಪೂರ್ವಪ್ರದೇಶ, ಮಧ್ಯಭಾಗ, ಪಶ್ಚಿಮ ಪ್ರದೇಶ ಮತ್ತು ತೀರ ಪಶ್ಚಿಮಭಾಗ. ಇವು ಸಾಮಾನ್ಯವಾಗಿ ಒಂದೇ ರೀತಿಯ ಶಿಲೆಗಳನ್ನೊಳಗೊಂಡಿವೆ.

ಖನಿಜ ಸಂಪತ್ತು: ನೇಪಾಲದ ಖನಿಜ ಸಂಪತ್ತಿನ ಬಗ್ಗೆ ನಿಖರವಾಗಿ ಹೇಳಲ ಈಗಿರುವ ಭೂವಿಜ್ಞಾನ ಆಧಾರಗಳು ಅತಿ ಕಡಿಮೆ. ಗಾನ್‍ಸ್ಸರ್ (1964) ತಮ್ಮ ಆಳವಾದ ಮತ್ತು ದೀರ್ಘವಾದ ಅಧ್ಯಯನದ ಬಳಿಕ ಇತರ ಉನ್ನತ ಪರ್ವತಶ್ರೇಣಿಗಳಂತೆ ಹಿಮಾಲಯ ಪರ್ವತ ಶ್ರೇಣಿ ಕೂಡ ಆರ್ಥಿಕವಾಗಿ ಗಣನೀಯವಾಗಲಾರದು ಎಂಬ ಅಭಿಪ್ರಾಯಪಟ್ಟಿರುವರು. ಆದರೂ ಇತ್ತೀಚಿಗೆ ಹಿಮಾಲಯದ ಖನಿಜಗಳ ಬಗ್ಗೆ ಹೊಸ ವಿಷಯಗಳು ಸದಾ ಬೆಳಕಿಗೆ ಬರುತ್ತಿರುವುದರಿಂದ ಈ ಅಭಿಪ್ರಾಯ ಬದಲಾಗುತ್ತಿದೆ. ಈ ದೇಶದಲ್ಲಿರುವ ಹಳ್ಳಿಗಳಲ್ಲಿಯ ಗಣಿಗಾರಿಕೆಯನ್ನು ಗಮನಿಸಿದರೆ ನಿಜಕ್ಕೂ ಖನಿಜಸಂಪತ್ತಿನ ಬಗ್ಗೆ ನೇಪಾಲಿಗಳಲ್ಲಿ ಲಕ್ಷ್ಯವಿದೆ ಎಂದು ತಿಳಿಯುತ್ತದೆ. ಸೀಸ, ಸತುವು ತಾಮ್ರ ಮತ್ತು ಕೋಬಾಲ್ಟ್ ಇತ್ಯಾದಿ ಹಳೆಯ ಗಣಿಗಳು ಸಾವಿರಾರು ಸಂಖ್ಯೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹರಡಿವೆ. ನೇಪಾಳದ ಮುಖ್ಯ ಖನಿಜಗಳೆಂದರೆ ತಾಮ್ರ, ಕೋಬಾಲ್ಟ್, ಚಿನ್ನ, ಕೆಳದರ್ಜೆ ಗ್ರ್ಯಾಫೈಟ್, ಕಬ್ಬಿಣ, ಸೀಸ ಮತ್ತು ಸತುವು, ಮ್ಯಾಗ್ನಟೈಟ್, ಮೈಕ (ಅಭ್ರಕ), ಟಾಲ್ಕ್ ಪೆಟ್ರೋಲಿಯಮ್ ಮತ್ತು ಅನಿಲ, ಸುಣ್ಣಶಿಲೆ, ಶಿಲಾಫಾಸ್ಛೇಟ್, ಅಮೃತಶಿಲೆ, ಅಲಂಕಾರ ಶಿಲೆಗಳು ಮತ್ತು ಕಟ್ಟಡ ಶಿಲೆಗಳು ಕಲ್ಲಿದ್ದಲು ಆರ್ಥಿಕವಾಗಿ ಲಾಭದಾಯಕವಲ್ಲ, ಅದರೆ ಸಸ್ಯಾಂಗಾರ ಹೆಚ್ಚಾಗಿದೆ.

ಭೌತಲಕ್ಷಣ: ನೇಪಾಲ ಪರ್ವತಮಯ ಪ್ರದೇಶ. ಇದರ ಶೇಕಡ 75ರಷ್ಟು ನೆಲ ಪರ್ವತಗಳಿಂದ ಕೂಡಿದೆ. ಮಟ್ಟಸವಾದ ವಿಸ್ತಾರ ಭೂಪ್ರದೇಶವೆಂದರೆ ದಕ್ಷಿಣದ ಅಂಚಿನ ನೆಲ. ದಕ್ಷಿಣೋತ್ತರವಾಗಿ ನೇಪಾಲವನ್ನು ನಾಲ್ಕು ಭೌತಿಕ ವಿಭಾಗಗಳಾಗಿ ವಿಂಗಡಿಸಬಹುದು. ಭಾರತದ ಗಡಿಗೆ ಹೊಂದಿಕೊಂಡಿರುವ ತಗ್ಗಿನ ಫಲವತ್ ಪ್ರದೇಶ ತರಾಯ್. ತರಾಯ್ ಮೈದಾನದಿಂದ ಉತ್ತರಕ್ಕೆ ಮಹಾಭಾರತ್ ಲೇಖ್ ಶ್ರೇಣಿಯ ವರೆಗಿನದು ಎರಡನೆಯ ವಿಭಾಗ. ಒಳ ತರಾಯ್ ವಲಯ, ಚುರಿಯಾ ತಪ್ಪಲು ಬೆಟ್ಟಗಳು-ಇವನ್ನು ಒಳಗೊಂಡ ಈ ವಿಭಾಗ ಅರಣ್ಯದಿಂದ ಕೂಡಿದೆ. ಮಹಾಭಾರತ್ ಲೇಖ್ ಶ್ರೇಣಿಗೂ ಮಹಾ ಹಿಮಾಲಯಗಳಿಗೂ ನಡುವೆ ಇರುವ ಮಧ್ಯ ಪರ್ವತ ಪ್ರದೇಶ ಮೂರನೆಯ ವಿಭಾಗ. ಅತ್ಯಂತ ಉತ್ತರದಲ್ಲಿರುವ ವಿಭಾಗ ಮಹಾ ಹಿಮಾಲಯ ಶ್ರೇಣಿ. ಇದು ಸುಮಾರು 8,840 ಮೀ. ಗಿಂತ ಉನ್ನತವಾದ ಪ್ರದೇಶ.

ತರಾಯ್ ಪ್ರದೇಶ ಗಂಗಾ ನದಿ ಬಯಲಿನ ಉತ್ತರದ ತುದಿಯೆನ್ನಬಹುದು. ಇದು ಸುಮಾರು 25-30 ಕಿಮೀ. ಅಗಲವಾಗಿದೆ. ರಾಪ್ತಿ ಮತ್ತು ನಾರಾಯಣಿ ಅಡಳಿತ ವಲಯಗಳಲ್ಲಿ ಇದರ ಅಗಲ ಕಿರಿದಾಗುತ್ತದೆ. ತರಾಯ್‍ನ ದಕ್ಷಿಣದ ಸುಮಾರು 16 ಕಿಮೀ. ಅಗಲದ ಪಟ್ಟೆ ಫಲವತ್ತಾಗಿರುವುದರಿಂದ ಇಲ್ಲಿ ಬೇಸಾಯ ವ್ಯಾಪಕವಾಗಿದೆ. ತಪ್ಪಲು ಬೆಟ್ಟಗಳ ಸನಿಯದಲ್ಲಿರುವ ಉತ್ತರದ ಪಟ್ಟೆ ಜವುಗು ನೆಲ.


ಚುರಿಯಾ ಬೆಟ್ಟಗಳ ಪ್ರದೇಶ ಕಡಿದಾಗಿ ಮೇಲೇರುತ್ತದೆ. ಇದಕ್ಕೆ ಉತ್ತರದಲ್ಲಿ ಮಹಾಭಾರತ್ ಲೇಖ್ ಶ್ರೇಣಿಯ ವರೆಗಿನ ಪ್ರದೇಶದಲ್ಲಿ 600-900 ಮೀ. ಎತ್ತರವಾಗಿಯೂ ಸುಮಾರು 16 ಕಿಮೀ. ಅಗಲವಾಗಿಯೂ 32-64 ಕಿಮೀ. ಉದ್ದವಾಗಿಯೂ ಇರುವ ವಿಶಾಲ ಕಣಿವೆಗಳಿವೆ. ಈ ಪ್ರದೇಶವನ್ನು ಒಳ ತರಾಯ್ ಎಂದು ಕರೆಯುವುದುಂಟು. ಇಲ್ಲಿ ಅನೇಕ ಕಡೆಗಳಲ್ಲಿ ಕಾಡು ಕಡಿದು ಹುಲ್ಲು ಸವರಿ ನೆಲವನ್ನು ಕೃಷಿಗೆ ಬಳಸಲಾಗುತ್ತಿದೆ.

ಮಹಾಭಾರತ್ ಲೇಖ್ ಮತ್ತು ಮಹಾ ಹಿಮಾಲಯ ಶ್ರೇಣಿಗಳ ನಡುವೆ ಇರುವ ಮಧ್ಯ ಪರ್ವತ ಪ್ರದೇಶ ಸುಮಾರು 80 ಕಿಮೀ. ಅಗಲವಾಗಿದೆ. ಇದರ ಎತ್ತರ 2,438-4,267 ಮೀ. ಇದು ದಕ್ಷಿಣದ ಕಡೆ ಹೆಚ್ಚು ಕಡಿದಾಗಿದೆ. ಕಾಠವೂಂಡೂ ಕಣಿವೆಯನ್ನೊಳಗೊಂಡ ಮಹಾಭಾರತ್ ಲೇಖ್ ಶ್ರೇಣಿಯ ಉತ್ತರಕ್ಕೆ ಒಳ ಹಿಮಾಲಯದ ಉನ್ನತ ಶ್ರೇಣಿಗಳಿವೆ. ಇವುಗಳ ಶಿಖರಗಳನ್ನು ಹಿಮ ಅವರಿಸಿದೆ. ಕಾಠಮಾಂಡೂ ಮತ್ತು ಪೋಖಾರ ಕಣಿವೆಗಳು ಹಿಂದೆ ಹಿಮನದೀ ಸರೋವರಗಳಾಗಿದ್ದುವು. ಕಾಠಮೊಂಡೂ ಕಣಿವೆ ನೇಪಾಲದ ಹೃದಯಸ್ಥಾನವೆನ್ನಬಹುದು. ಇಲ್ಲಿ ದಕ್ಷಿಣಾಭಿಮುಖವಾಗಿ ಹರಿಯುವ ಭಾಗಮತಿ ನದಿ ಛೋಬರ್ ಕಂದರದಲ್ಲಿ ವೇಗವಾಗಿ ಕಣಿವೆಯನ್ನು ದಾಟುತ್ತದೆ. ಈ ಕಣಿವೆಯಲ್ಲಿ ಅಲ್ಲಲ್ಲಿ ಬುಗ್ಗೆಗಳುಂಟು. ಪೋಖಾರ ಕಣಿವೆಯಲ್ಲಿ ಸೇಟಿ ನದಿ ಹರಿಯುತ್ತದೆ. ಈ ಕಣಿವೆಯಲ್ಲಿ ಕೆಲವು ಸರೋವರಗಳು ಉಳಿದಿದೆ. ಇವುಗಳಲ್ಲಿ ಅತ್ಯಂತ ದೊಡ್ಡದು ಫೇವಾ ತಾಲ್. ಈ ಕಣಿವೆಗೆ ಉತ್ತರದಲ್ಲಿ ಹಿಮಾಲಯದ ಅನ್ನಪೂರ್ಣ ಶಿಖರವಿದೆ.

ಮಹಾ ಹಿಮಾಲಯ ಶ್ರೇಣಿ 4,267-8,840 ಮೀ. ಎತ್ತರವಾಗಿದೆ. ಪ್ರಪಂಚದ 13 ಅತ್ಯುನ್ನತ ಶಿಖರಗಳ ಪೈಕಿ ಐದು ಇಲ್ಲಿವೆ. ಇವು ಎವರೆಸ್ಟ್, ಕಾಂಚನಗಂಗಾ, ಮಕಲೂ, ಧವಳಗಿರಿ ಮತ್ತು ಅನ್ನಪೂರ್ಣ ಶಿಖರಗಳು. ಉನ್ನತ ಕಣಿವೆಗಳ ವಿನಾ ಉಳಿದಲ್ಲೆಲ್ಲ ಈ ಪ್ರದೇಶ ನಿರ್ಜನವಾದ್ದು. 4,877 ಮೀ. ಗಿಂತ ಎತ್ತರವಾದ ಭಾಗವನ್ನು ಹಿಮ ಮುಸುಕಿರುತ್ತದೆ.

ನೇಪಾಲದ ಪ್ರಮುಖ ನದಿಗಳು ಕೋಸಿ, ಗಂಡಕ್ ಮತ್ತು ಕಾರ್ನಾಲೀ (ಘಾಘ್ರ). ಇವು ಉನ್ನತ ಶಿಖರಗಳಾಚಿ, ಸಾಮಾನ್ಯವಾಗಿ ಟಿಬೆಟ್ಟಿನಲ್ಲಿ ಹುಟ್ಟುತ್ತವೆ. ನೇಪಾಲದ ನದಿಗಳು ತಗ್ಗಾದ ತರಾಯ್ ಮೈದಾನದಲ್ಲಿ ಪ್ರವಾಹದಿಂದ ದಡ ಮೀರಿ ಹರಿದು ಅನಾಹುತ ಮಾಡುತ್ತಿರುತ್ತವೆ. ನೇಪಾಲದ ಹಳ್ಳಿ ಪಟ್ಟಣಗಳ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿರುವುದರಿಂದ ತರಾಯ್ ಪ್ರದೇಶದ ಸಣ್ಣ ನದಿಗಳು ಮಲಿನಗೊಂಡು ಇವುಗಳ ನೀರು ಕುಡಿಯಲು ಅಯೋಗ್ಯವಾಗಿರುತ್ತದೆ.

ವಾಯುಗುಣ: ನೇಪಾಲ ರಾಜ್ಯ ಉಪೋಷ್ಣವಲಯ ಪ್ರದೇಶದಲ್ಲಿದೆ. ಇದರ ವಾಯುಗುಣ ನೆಲದ ಎತ್ತರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ತರಾಯ್ ಪ್ರದೇಶದಲ್ಲಿ ಉಪೋಷ್ಣ ಮಾನ್ಸೂನ್ ವಾಯುಗುಣವಿದೆ. 1,220-2.135 ಮೀ. ಎತ್ತರದ ಮಧ್ಯ ಪರ್ವತ ಪ್ರದೇಶ ಬೆಚ್ಚಗಿರುತ್ತದೆ. 2.135 ಮೀ. ಗಳಿಂದ 3.355 ಮೀ. ವರೆಗಿನ ಪ್ರದೇಶದ್ದು ತಂಪಾದ ವಾಯುಗುಣ. 4.267 ಮೀಗಳಿಂದ 4.876 ಮೀ. ವರೆಗಿನ ಎತ್ತರದಲ್ಲಿ ಹಿಮಾಲಯದ ಕೆಳ ಇಳಿ ಚಾರುಗಳಲ್ಲಿ, ಅಲ್ಪೈನ್ ವಾಯುಗುಣವಿರುತ್ತದೆ. ಇದಕ್ಕಿಂತ ಎತ್ತರದ ಪ್ರದೇಶದಲ್ಲಿ ಬರ್ಫ ಬಿಂದುವಿಗಿಂತ ಕಡಿಮೆ ಉಷ್ಣತೆ ಇರುತ್ತದೆ. ಇಲ್ಲಿ ಹಿಮ ಕವಿದಿರುತ್ತದೆ. ತರಾಯ್‍ನ ಮತ್ತು ಪರ್ವತಗಳ ಪೂರ್ವ ಭಾಗದಲ್ಲಿ ತಕ್ಕಮಟ್ಟಿಗೆ ಮಳೆ ಅಗುತ್ತದೆ (1778 ಮಿಮೀ. 1,905ಮಿಮೀ.) ಪಶ್ಚಿಮದಲ್ಲಿ ಕಡಿಮೆ. 662 ಮಿಮೀ. 889ಮಿಮೀ.

ಸಸ್ಯಪ್ರಾಣಿವರ್ಗ: ವಾಯುಗುಣ ಮತ್ತು ಎತ್ತರಕ್ಕೆ ಅನುಗುಣವಾಗಿ ನೇಪಾಲದ ನೈಸರ್ಗಿಕ ಸಸ್ಯ ವ್ಯತ್ಯಾಸವಾಗುತ್ತದೆ. ತರಾಯ್ ಮತ್ತು ಚುರಿಯಾ ಬೆಟ್ಟಗಳ ಪ್ರದೇಶದಲ್ಲಿ ಪರ್ಣಪಾತಿ ಕಾಡುಗಳಿವೆ. ಇಲ್ಲಿಯ ಮರಗಳು ಮುಖ್ಯವಾಗಿ ಕಾಚು, ಬಿಂಡಿ ಮತ್ತು ಬಿಳೇ ಭೋಗಿ. ಮಹಾಭಾರತ್ ಲೇಖ್ ಶ್ರೇಣಿಯಲ್ಲಿ 1,500-3,000 ಮೀ. ನಡುವಣ ಎತ್ತರದಲ್ಲಿ ತೈಲಪರ್ನಿ, ಮಾಚಿಕಾಯಿ, ಕಾಡುಹೂವರಿಸಿ, ಪಾಪ್ಲರ್, ಅಕ್ರೋಟು ಮತ್ತು ಲಾರ್ಚ್ ಬೆಳೆಯುತ್ತವೆ. ಮಧ್ಯ ಪರ್ವತ ಪ್ರದೇಶದಲ್ಲಿ ಜನರು ಸ್ವಾಭಾವಿಕ ಸಸ್ಯವರ್ಗವನ್ನು ಬಹುತೇಕ ಕಡಿದು ಹಾಕಿದ್ದಾರೆ. ಮಹಾ ಹಿಮಾಲಯ ಶ್ರೇಣಿಯಲ್ಲಿ ಕೆಳಭಾಗದಲ್ಲಿ ಸ್ಛ್ರೂಸ್, ತಾಳೇಶಪತ್ರೆ, ತುರಾಯಿ, ಜೂನಿಪರ್, ಬೋಜಪತ್ರೆ ಮರಗಳಿವೆ. ಉನ್ನತ ಭಾಗಗಳಲ್ಲಿ ಅಲ್ಪೈನ್ ಸಸ್ಯಗಳಿವೆ. ಹಿಮರೇಖೆಯಿಂದ ಕೆಳಗೆ ಹುಲ್ಲು ಬೆಳೆದಿದೆ.

ತರಾಯ್‍ನ ಕಾಡುಗಳಲ್ಲಿ ಹುಲಿ, ಚಿರತೆ, ಕಾಡೆತ್ತು, ಕಾಡುಕೋಣ ಮತ್ತು ಜಿಂಕೆ ಇವೆ. ವಿರಳವಾಗಿ ಆನೆಗಳೂ ಇರುವುದುಂಟು. ರಾಪ್ತಿ ಕಣಿವೆಯಲ್ಲಿ ಖಡ್ಗ ಮೃಗಗಳಿವೆ. ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇವನ್ನು ರಕ್ಷಿಸಲು ನೇಪಾಲ ಸರ್ಕಾರ ಕ್ರಮ ತೆಗೆದುಕೊಂಡಿದೆ. ಮಧ್ಯ ವಲಯದಲ್ಲಿ ಕಾಡುಗಳನ್ನು ವಿಶೇಷವಾಗಿ ಕಡಿದಿರುವುದರಿಂದ ವನ್ಯಮೃಗಗಳು ಕಡಿಮೆ. ಚಿರತೆ, ಕರಡಿ, ಕಾಡುಕುರಿ ಮುಂತಾದವು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತವೆ. ಅಲ್ಟೈನ್ ವಲಯದಲ್ಲಿ ಕಸ್ತೂರಿಮೃಗ, ವಾರೈ ಆಡು ಮುಂತಾದವು ಇವೆ. ಉನ್ನತ ಪರ್ವತ ಪ್ರದೇಶದಲ್ಲಿ ಯತಿ ಎಂಬ ಹಿಮಮಾನವ ಇರುವುದಾಗಿ ಶರ್ಪ ಜನರು ನಂಬಿದ್ದಾರೆ.

ಜನಜೀವನ

ಜನ: ನೇಪಾಲದ ಮೊದಲ ನೆಲಸುಗಾರರು ಅಧಿಕ ಸಂಖ್ಯೆಯಲ್ಲಿ ಟಿಬೆಟ್ಟಿನಿಂದ ಬಂದ ಮಂಗೋಲಾಯ್ಡರು ಮತ್ತು ಉತ್ತರ ಭಾರತದಿಂದ ಬಂದ ಇಂಡೊ-ಅರ್ಯನರು. ಒಟ್ಟು ಜನಸಂಖ್ಯೆಯಲ್ಲಿ ಸೇ. 80ರಷ್ಟು ಮಂದಿ ಇಂಡೋ-ಆರ್ಯನ್ ಮೂಲದವರು. ಟಿಬೆಟೊ-ನೇಪಾಲಿ ಜನರು ಉತ್ತರ ಮತ್ತು ಪೂರ್ವದಲ್ಲಿ ಬಳಕೆಯಲ್ಲಿರುವ ಟಿಬೆಟೊ-ನೇಪಾಲಿ ಜನರು ಉತ್ತರ ಮತ್ತು ಪೂರ್ವದಲ್ಲಿ ವಾಸಿಸುತ್ತಾರೆ.

ಭಾಷೆ: ನೇಪಾಲದ ಪ್ರಮುಖ ಹಾಗೂ ಅಧಿಕೃತ ಭಾಷೆ ನೇಪಾಲಿ ಅಥವಾ ಗೊರ್ಖಾಲಿ. ತರಾಯ್ ಮತ್ತು ಮಧ್ಯ ಪರ್ವತ ಸೀಮೆಯ ಜನ ಈ ಭಾಷೆಯನ್ನಾಡುತ್ತಾರೆ. ಇದು ಇಂಡೊ-ಆರ್ಯನ್ ಭಾಷೆ. ತರಾಯ್ ಮತ್ತು ಪರ್ವತ ಪ್ರದೇಶದಲ್ಲಿ ಅನೇಕ ಉಪಭಾಷೆಗಳು ಬಳಕೆಯಲ್ಲಿವೆ. ಉತ್ತರ ಮತ್ತು ಪೂರ್ವದಲ್ಲಿ ಬಳಕೆಯಲ್ಲಿರುವ ಮಗಾರ್, ಗುರುಂಗ್‍ವಾಯ್ ಮುಂತಾದ ಭಾಷೆಗಳು ಟಿಬೆಟೊ-ಬರ್ಮನ್ ಕುಟುಂಬದವು.

ಮತ: ನೇಪಾಲದ ಜನರಲ್ಲಿ ಸೇ. 90ರಷ್ಟು ಮಂದಿ ಹಿಂದುಗಳು ಸೇ. 9ರಷ್ಟು ಜನ ಬೌದ್ಧರು, ಉಳಿದವರು ಇತರ ಮತಗಳವರು. ನೇಪಾಲದ ದೊರೆ ಹಿಂದು.

ಜನನಿಬಿಡತೆ: ನೇಪಾಲದ ಸರಾಸರಿ ಜನಸಾಂದ್ರತೆ ಚ.ಕಿ.ಮೀ. ಗೆ 169. ಉನ್ನತ ಪರ್ವತ ಪ್ರದೇಶ ಅರಣ್ಯ ಪ್ರದೇಶ ಮುಂತಾದ ಅನುತ್ಪಾದಕ ನೆಲವನ್ನು (65%) ಕಳೆದರೆ ಉಳಿದ ನೆಲದಲ್ಲಿ ಸರಾಸರಿ ಜನಸಾಂದ್ರತೆ ಚ.ಮೈ.ಗೆ 509. ಸೇ. 56ರಷ್ಟು ಜನರು ಮಧ್ಯ ಪರ್ವತ ಪ್ರದೇಶದಲ್ಲೂ ಸೇ. 42ರಷ್ಟು ಮಂದಿ ತರಾಯಾ ಪ್ರದೇಶದಲ್ಲೂ ವಾಸಿಸುತ್ತಾರೆ. ಕಾಠಮಾಂಡೂ ಕಣಿವೆಯಲ್ಲಿ ಸೇ. 5ರಷ್ಟು ಜನರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ 5ಕ್ಕಿಂತ ಕಡಿಮೆ ಜನರು ಪಟ್ಟಣಿಗರು.

ಪಟ್ಟಣಗಳು: ನೇಪಾಲದಲ್ಲಿ ದೊಡ್ಡ ನಗರಗಳಿಲ್ಲ. ರಾಜಧಾನಿ ಕಾಠ್‍ಮಂಡುವಿನ ಜನಸಂಖ್ಯೆ 4,19,073 (2000). ಭಾರತದ ಗಡಿಯಿಂದ ಸುಮಾರು 120 ಕಿಮೀ. ದೂರದಲ್ಲಿರುವ ಈ ನಗರ ವಾಣಿಜ್ಯ ಹಾಗೂ ಸಾರಿಗೆ ಕೇಂದ್ರ. 723ರಲ್ಲಿ ಇದು ಸ್ಥಾಪಿತವಾಯಿತು. ಇತರ ಪಟ್ಟಣಗಳು ಬಿರಾಟ್‍ನಗರ (44,938) ನೇಪಾಲ್‍ಗಂಜ್ (33,000) ಮತ್ತು ಬೀರ್‍ಗಂಜ್ (20,000). (ಯು.ಎಸ್.; ಎಸ್.ಎಲ್.ಕೆ.)

ಆರ್ಥಿಕತೆ

ಪ್ರಪಂಚದ ಅತಿ ಕಡಿಮೆ ಅಭಿವೃದ್ಧಿ ಹೊಂದಿದೆ ದೇಶಗಳ ಪೈಕಿ ನೇಪಾಲವೂ ಒಂದು. ಇಲ್ಲಿ ಆರ್ಥಿಕ ಅಭಿವೃದ್ಧಿಗೆ ಅವಶ್ಯವಾದ ಮೂಲಸಾಧನಗಳು ಕಡಿಮೆ. ನೆಲದಿಂದ ಅವೃತವಾದ ಈ ದೇಶದ ವಿದೇಶಿ ವ್ಯಾಪಾರ ಅನ್ಯದೇಶಗಳ ಮೂಲಕ ನಡೆಯಬೇಕಾದ್ದು ಅನಿವಾರ್ಯ. ಇದರ ಆರ್ಥಿಕ ವ್ಯವಸ್ಥೆ ಈಚೆಗೆ ಮಾತ್ರವೇ ಬದಲಾವಣೆಗೆ ಒಳಪಡುತ್ತಿದೆ.

ಕೃಷಿ: ನೇಪಾಲದ ಜನರಲ್ಲಿ ಸೇ. 90ರಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ನೇಪಾಲದ ಸ್ಥೂಲ ರಾಷ್ಟ್ರೀಯ ಉತ್ಪನ್ನದಲ್ಲಿ ಸೇ. 70ರಷ್ಟು ಬರುವುದು ಕೃಷಿಯಿಂದ. ಅದರ ನಿರ್ಯಾಂತದಿಂದ ದೊರಕುವ ವರಮಾನದಲ್ಲಿ ಐದನೆಯ ಮೂರರಷ್ಟು ಕೃಷಿಮೂಲವಾದ್ದು. ಆದರೂ ಕೃಷಿಯ ಉತ್ಪಾದಕತೆ ಬಲು ಕಡಿಮೆ. ನೇಪಾಲದಲ್ಲಿ ಸಾಗುವಳಿಗೆ ಒಳಪಟ್ಟಿರುವ ನೆಲ 50,00,000 ಎಕರೆ. ಇದರ ಸೇ. 4ರಷ್ಟಕ್ಕೆ ಮಾತ್ರ ನೀರವಾರಿ ಸೌಲಭ್ಯವಿದೆ. ವ್ಯವಸಾಯಕ್ಕೆ ಮುಖ್ಯವಾಗಿ ಮಳೆಯೇ ಆಧಾರ. ಸಾಮಾನ್ಯವಾಗಿ ಆಹಾರ ಧಾನ್ಯದಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚುವರಿಯ ಸ್ಥಿತಿ ಇದೆಯಾದರೂ ಮಳೆ ಕಡಿಮೆಯಾದ ವರ್ಷಗಳಲ್ಲಿ ಅಭಾವ ಸಂಭವಿಸುವುದುಂಟು. ತರಾಯ್ ಪ್ರದೇಶದಲ್ಲಿ ಕೃಷಿ ಉತ್ಪನ್ನವನ್ನು ಹೆಚ್ಚಿಸಲು ಸಾಧ್ಯತೆಗಳಿವೆ. ನೇಪಾಲದಲ್ಲಿ ಬೆಳೆಯುವ ಮುಖ್ಯ ಧಾನ್ಯಗಳು ಬತ್ತ ಮುಸುಕಿನ ಜೋಳ ಮತ್ತು ಗೋಧಿ.

ಅರಣ್ಯೋತ್ಪನ್ನ: ನೇಪಾಲದ ಒಟ್ಟು ವಿಸ್ತೀರ್ಣದಲ್ಲಿ ಮೂರನೆಯ ಒಂದು ಭಾಗ ಅರಣ್ಯೋವೃತ. ಇದು ಬಹುತೇಕ ಸರ್ಕಾರಿ ಒಡೆತನಕ್ಕೆ ಸೇರಿದ್ದು. ಅರಣ್ಯ ನಿರ್ವಹಣೆ ಸಮರ್ಪಕವಾಗಿಲ್ಲ. ಮರಗಳನ್ನು ಅಡ್ಡಾದಿಡ್ಡಿಯಾಗಿ ಕಡಿಯಲಾಗಿದೆ. ಅದಾಗ್ಯೂ ನೇಪಾಲದ ಸಂಪನ್ಮೂಲಗಳಲ್ಲಿ ಚೌಬೀನೆ ಮುಖ್ಯವಾದ್ದು. ಇದರಲ್ಲಿ ಬಹುಭಾಗ ಭಾರತಕ್ಕೆ ರಫ್ತಾಗುತ್ತದೆ.

ಖನಿಜ ಸಂಪತ್ತು: ನೇಪಾಲದ ಖನಿಜ ಸಂಪತ್ತು ಗಮನಾರ್ಹವಾದ್ದೇನೂ ಅಲ್ಲ. ಇದು ಹಲವಡೆಗಳಲ್ಲಿ ಹರಡಿದೆ. ಇದನ್ನು ಸರಿಯಾಗಿ ರೂಢಿಸಿಕೊಂಡಿಲ್ಲ. ದೇಶದಲ್ಲಿ ಕಲ್ಲಿದ್ದಲು, ಕಬ್ಬಿಣ ಅದುರು, ಪೈರೈಟ್ (ಗಂಧಕಾಮ್ಲ, ತಯಾರಿಕೆಗೆ ಬೇಕಾದ್ದು), ಸಣ್ಣಕಲ್ಲು ಮತ್ತು ಅಭ್ರಕ ನಿಕ್ಷೇಪಗಳಿವೆ. ಅದರೆ ಇವು ಅಧಿಕ ಪರಿಮಾಣಗಳಲ್ಲಿ ಇಲ್ಲ. ನೇಪಾಲದ ನದಿಗಳ ವಿದ್ಯುತ್ ವಿಭವ ಅಗಾಧವಾದ್ದು. ಇದನ್ನು ಅಭಿವೃದ್ಧಿ ಪಡಿಸಿ ಭಾರತಕ್ಕೆ ರಫ್ತು ಮಾಡಿದರೆ ನೇಪಾಲದ ವರಮಾನ ಗಮನಾರ್ಹವಾಗಿ ಹೆಚ್ಚುವ ಸಾಧ್ಯತೆಯಿದೆ.

ಕೈಗಾರಿಕೆ: ನೇಪಾಲದಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಬೆಳದಿಲ್ಲ. ಇವು ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿವೆ. ಕೈಗಾರಿಕೆಗಳು ಮುಖ್ಯವಾಗಿ ಸಣ್ಣವು, ಸ್ಥಳೀಯವಾದವು. ಅವು ಕೃಷಿ ಆಧಾರಿತವಾದುಥವು. ಬಿರಾಟ್‍ನಗರದಲ್ಲಿ ಸೆಣಬು ಕೈಗಾರಿಕೆಯಿದೆ. ಇದರ ಉತ್ಪನ್ನವನ್ನು ವಿಶೇಷವಾಗಿ ರಫ್ತುಮಾಡಲಾಗುತ್ತದೆ. ಬೀರ್‍ಗಂಜ್, ಭೈರವ ಮತ್ತು ನೇಪಾಲ್‍ಗಂಜಿನಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಜನಕಪುರದಲ್ಲಿ ಸಿಗರೇಟ್ ಕಾರ್ಖಾನೆ ಇದೆ. ಹಿತೌರದಲ್ಲಿ ಮರ ಕೊಯ್ಯುವ ಕಾರ್ಖಾನೆಗಳೂ ತರಾಯ್ ಪ್ರದೇಶಗಳು ಅನೇಕ ಅಕ್ಕಿ ಮತ್ತು ಎಣ್ಣೆ ಗಿರಣಿಗಳೂ ಇವೆ. ಬಿರಾಟ್‍ನಗರ, ಬೀರ್‍ಗಂಜ್-ಹಿತೌರ ಪಟ್ಟೆ, ಕಾಠಮಾಂಡೂ ಕಣಿವೆ-ಇವು ಪ್ರಮುಖ ಕೈಗಾರಿಕಾ ಪ್ರದೇಶಗಳು. ಖಾಸಗಿ ವಲಯದ ಕೈಗಾರಿಕೆಗಳೇ ಅಧಿಕ. ಆಯ್ದ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಮಾಡುವ ಕಾರ್ಯಕ್ರಮವೊಂದು 1970ರಿಂದ ಈಚೆಗೆ ಜಾರಿಗೆ ಬಂದಿದೆ.

ಪ್ರವಾಸೋದ್ಯಮ: ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ. ವಿದೇಶೀಯರ ಪ್ರವಾಸಿಗಳು ಈಗೆ ವಿಶೇಷವಾಗಿ ಕಾಠಮಾಂಡೂವಿಗೆ ಸೀಮಿತವಾಗಿವೆ. ಇಲ್ಲಿ ಮಾತ್ರ ಪ್ರವಾಸಿಗಳಿವೆ. ಅದರೆ ಪೋಖಾರ, ಎವರೆಸ್ಟ್ ಶಿಖರ ಪ್ರದೇಶ ಮತ್ತು ನಾರಾಯಣಿ ಪ್ರದೇಶದಲ್ಲೂ ಪ್ರವಾಸೋದ್ಯಮವನ್ನು ಬೆಳೆಸಬಹುದು. ನಾರಾಯಣಿ ಪ್ರದೇಶ ವನ್ಯಮೃಗ ಸಂಪತ್ತಿನಿಂದ ಕೂಡಿದೆ.

ವ್ಯಾಪಾರ: ನೇಪಾಲದ ವ್ಯಾಪಾರ ವಿಶೇಷವಾಗಿ ಭಾರತದೊಂದಿಗೆ ನಡೆಯುತ್ತಿದೆ. ಇತರ ದೇಶಗಳೊಂದಿಗೂ ವ್ಯಾಪಾರ ಬೆಳಸಲು ಪ್ರಯತ್ನಗಳಾಗುತ್ತಿವೆ. ರಾಷ್ಟ್ರೀಯ ವ್ಯಾಪಾರ ಸಂಸ್ಥೆಯೊಂದು ಸರ್ಕಾರದಿಂದ ಸ್ಥಾಪಿತವಾಗಿದೆ. ನೇಪಾಲದಿಂದ ಭಾರತಕ್ಕೆ ರಫ್ತಾಗುವ ಪದಾರ್ಥಗಳು ಅಕ್ಕಿ, ಸಾಸಿವೆ, ಕುರಿ, ಆಡು, ಚರ್ಮ ಮತ್ತು ತೊಗಲು, ತುಪ್ಪ ಮತ್ತು ಚೌಬೀನೆ. ಹತ್ತಿ ಜವಳಿ, ನೂಲು, ಉಣ್ಣೆಬಟ್ಟೆ, ಕಂಬಳಿ, ರೇಷ್ಮೆ, ಉಪ್ಪು ಸಾಂಬಾರ, ತಂಬಾಕು, ಪೆಟ್ರೋಲಿಯಂ. ರಾಸಾಯನಿಕ ಮುಂತಾದವು ಆಮದಾಗುತ್ತವೆ.

ಸಾರಿಗೆ: ನೇಪಾಲದ ಸಾರಿಗೆ ವ್ಯವಸ್ಥೆ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ಪ್ರತಿ 1,00,000 ಜನಕ್ಕೆ ಕೇವಲ 17.6ಕಿಮೀ. ಗಳಷ್ಟು ಖಾಯಂ ರಸ್ತಗಳಿವೆ. ಪ್ರತಿ 2,000 ಜನಕ್ಕೆ ಒಂದು ವಾಹನ ಇದೆ. ಕಾಲುದಾರಿಗಳೇ ಸಾರಿಗೆಯ ಮುಖ್ಯಮಾಧ್ಯಮಗಳಾಗಿವೆ. ಭಾರತದ ಗಡಿ ಪಟ್ಟಣವಾದ ರಾಕ್ಸಾಲ್‍ನಿಂದ ಕಾಠಮಾಂಡುವಿಗೆ ರಸ್ತೆಯೊಂದರ ನಿರ್ಮಿಸಿದ್ದಾರೆ. 1968ರಲ್ಲಿ ಭಾರತದ ಸುನೌಲಿಯಿಂದ ನೇಪಾಲದ ಪೋಖಾರಕ್ಕೆ 208 ಕಿಮೀ. ದೂರದ ಹೆದ್ದಾರಿಯೊಂದು ತೆರೆಯಿತು. ಕಾಠಮಂಡುವಿನಿಂದ ಪೂಖಾರಕ್ಕೆ ಒಂದು ರಸ್ತೆ ನಿರ್ಮಾಣವಾಗುತ್ತಿದೆ. ಪೂರ್ವಪಶ್ಚಿಮವಾಗಿ ರಸ್ತೆಯೊಂದನ್ನು ನಿರ್ಮಿಸಿ ದೇಶವನ್ನು ಒಗ್ಗೂಡಿಸುವ ಯೋಜನೆಗೆ ವಿದೇಶಿ ನೆರವು ದೊರಕಿದೆ. ದೇಶದಲ್ಲಿ ಒಟ್ಟು 678 ಕಿಮೀ. ಗಟ್ಟಿ ರಸ್ತೆಗಳಿವೆ. ಆಮ್ಲಖ್‍ಗಂಜಿನಿಂದ ರಾಕ್ಸಾಲ್‍ಗೂ ಜನಕಪುರದಿಂದ ಭಾರತದ ಜಯನಗರಕ್ಕೂ ನ್ಯಾರೋ ಗೇಜ್ ರೈಲುಮಾರ್ಗಗಳಿವೆ. ರಾಯಲ್ ನೇಪಾಲ್ ವಿಮಾನ ಕಾರ್ಪೊರೇಷನ್ ಮತ್ತು ಭಾರತ ವಿಮಾನ ಕಾರ್ಪೊರೇಷನ್‍ಗಳ ಸಹಯೋಗದಲ್ಲಿ ಕಾಠಮಾಂಡುವಿನಿಂದ ಪಟನಾ. ಕಲ್ಕತ್ತ, ವಾರಾಣಸಿ ಮತ್ತು ದೆಹಲಿಗೆ ವಿಮಾನಗಳು ಹಾರಾಡುತ್ತವೆ. ಆಂತರಿಕ ವಿಮಾನ ಸಾರಿಗೆಯನ್ನೂ ವಿಸ್ತರಿಲಾಗುತ್ತಿದೆ. ಆಡಳಿತ, ನ್ಯಾಯವ್ಯವಸ್ಥೆ

ಆಡಳಿತ: ನೇಪಾಲವನ್ನು ಅಲ್ಲಿಯ ದೊರೆ ಆಳುತ್ತಾರೆ. ಅವರ ನೆರವಿಗೆ ಮಂತ್ರಿಮಂಡಲವೊಂದು ಇದೆ. ನಾಲ್ಕು ಹಂತಗಳ ಪಂಚಾಯತ್ ವ್ಯವಸ್ಥೆಯನ್ನು ನಿರ್ಮಿಡಲಾಗಿದೆ. ಹಳ್ಳಿಗಳ ಮಟ್ಟದಲ್ಲಿ 3,500 ಪಂಚಾಯತಿಗಳಿವೆ. ಪ್ರತಿನಿಧಿಗಳ ಆಯ್ಕೆ ಕೈ ಎತ್ತುವುದರ ಮೂಲಕ. 75 ಜಿಲ್ಲಾ ಮತ್ತು 14 ವಲಯ ಪಂಚಾಯತಿಗಳೂ ರಾಷ್ಟ್ರೀಯ ಪಂಚಾಯತಿಯೂ ಇವೆ.

ನ್ಯಾಯಪರಿಪಲನೆ: ಪ್ರತಿ ಜಿಲ್ಲೆಗೂ ಒಂದು ಜಿಲ್ಲಾ ನ್ಯಾಯಲಯವೂ 14 ವಲಯಗಳಲ್ಲಿ 14 ವಲಯ ನ್ಯಾಯಲಯಗಳೂ ಇವೆಲ್ಲಕ್ಕಿಂತ ಮೇಲೆ ಸರ್ವೋಚ್ಚ ನ್ಯಾಯಲಯವೂ ಇವೆ.

ಆರೋಗ್ಯ: ದೇಶದಲ್ಲಿ ಸಾಕಷ್ಟು ಆಸ್ಪತ್ರೆಗಳೂ 93 ಆರೋಗ್ಯ ಚಿಕಿತ್ಸಾ ಕೇಂದ್ರಗಳೂ ಇವೆ.

ಶಿಕ್ಷಣ: 1950ರ ದಶಕದಲ್ಲಿ ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ಸೇ. 4 ರಷ್ಟು ಇತ್ತು. 1970ರ ದಶಕದ ವೇಳೆಗೆ ಇದು ಸೇ. 12ಕ್ಕೆ ಏರಿತು. ಶಿಕ್ಷಣ ಇಲಾಖಾ ನಿರ್ದೇಶಕರು ಶಾಲಾ ಶಿಕ್ಷಣದ ಹೊಣೆ ಹೊತ್ತಿದ್ದಾರೆ. ಉನ್ನತ ಶಿಕ್ಷಣ ಈಚೆಗೆ ಬೆಳೆಯುತ್ತಿದೆ. 1918ರಲ್ಲಿ ಪ್ರಥಮ ಕಾಲೇಜುಸ್ಥಾಪಿತವಾಯಿತು. ಕಾಠಮಾಂಡುವಿನಲ್ಲಿ ತ್ರಿಭುವನ ವಿಶ್ವವಿದ್ಯಾಲಯ ಸ್ಥಾಪಿತವಾದ್ದು 1939ರಲ್ಲಿ. ಕಲೆ, ವಿಜ್ಞಾನ, ವಾಣಿಜ್ಯ, ಮತ್ತು ಶಿಕ್ಷಣ ವಿಭಾಗಗಳಿವೆ.

ಪ್ರಾಕ್ತನ

ಪ್ರಾಗಿತಿಹಾಸ: ನೇಪಾಲದ ಪ್ರಾಗಿತಿಹಾಸದ ಬಗ್ಗೆ ಈ ವರೆಗೆ ಹೆಚ್ಚು ಸಂಶೋಧನೆ ನಡೆದಿಲ್ಲ. ಕೆಲವು ಸ್ಥಳದಲ್ಲಿ ಮಾತ್ರ ಕಲ್ಲಿನ ಉಪಕರಣಗಳು ಸಿಕ್ಕಿವೆ. ನವಲ್ ಪರಸಿ ಜಿಲ್ಲೆಯ ಗಂಡಕಿ ಮತ್ತು ತ್ರಿವೇಣಿ ನದಿ ದಡಗಳಲ್ಲಿ ಹಳೆಯ ಮತ್ತು ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಕಲ್ಲಿನ ಉಪಕರಣಗಳು ಸಿಕ್ಕಿವೆ. ನಾರಾಯಣಿ ನದಿ ಕಣಿವೆಯ ದಂಡಿ ಎಂಬಲ್ಲೂ ಇವು ದೊರೆತಿವೆ. ಮೆಚ್ಚು, ರಾಮೆಛೂಪ್, ಕಾಠಮಾಂಡೂ ಕಣಿವೆ ಮತ್ತು ಡಾಂಗ್ ಕಣಿವೆಗಳಲ್ಲಿ ನೂತನ ಶಿಲಾಯುಗ ಸಂಸ್ಕøತಿ ಇತ್ತೆಂಬುದು ಕಂಡುಬಂದಿದೆ. ಚುರೆ ಎಂಬ ಪ್ರದೇಶದಲ್ಲಿ ಹಳೆಯ ಶಿಲಾಯುಗ ಸಂಸ್ಕøತಿ ಇತ್ತೆಂದು ಊಹಿಸಲಾಗಿದೆ. ಇವುಗಳ ಭಗ್ನಾವಶೇಷಗಳು ನೆಲದ ಮೇಲೆ ಮಾತ್ರ ಕಂಡುಬಂದವು. ಶಿಲಾಯುಗಕ್ಕೆ ಸಂಬಂಧಪಟ್ಟಂತೆ ಈ ವರೆಗೆ ಉತ್ಪನನಗಳು ನಡೆದಿಲ್ಲ. (ಕೆ.ಕೆ.ಎಸ್.ಯು.)

ಇತಿಹಾಸ: ನೇಪಾಲ ಪ್ರದೇಶಕ್ಕೂ ಗಂಗಾ ನದಿ ಬಯಲಿಗೂ ಕನಿಷ್ಠ ಪಕ್ಷ 2,500 ವರ್ಷಗಳ ಸಂಬಂಧವಿದೆ. ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿಣಿ ಇರುವುದು ನೇಪಾಲದಲ್ಲಿ. ನೇಪಾಲದ ಮೇಲೆ ಹಿಂದು ಧರ್ಮದ ಪ್ರಭಾವವೇ ಅಲ್ಲದೆ ಬೌದ್ಧ ಧರ್ಮದ ಪ್ರಭಾವವೂ ಬಹಳ ಹಿಂದಿನಿಂದಲೂ ಇದ್ದುದಕ್ಕೆ ಆಧಾರಗಳಿವೆ. ಲುಂಬಿಣಿಯಲ್ಲಿ ಅಶೋಕನ ಶಾಸನವಿದೆ.

ನೇಪಾಲದ ರಾಜವಂಶದ ಚರಿತ್ರೆಯನ್ನು ಗುರುತಿಸುವುದು ಸಾಧ್ಯವಾಗುವುದು 4, 5ನೆಯ ಶತಮಾನಗಳಿಂದ. ಅಂತರವೂ ನಡುನಡುವೆ ಇತಿಹಾಸದ ಸೂತ್ರ ಕಡಿದು ಬೀಳುತ್ತದೆ. 4 ಅಥವಾ 5ನೆಯ ಶತಮಾನದಲ್ಲಿ ಇಲ್ಲಿ ಲಿಚ್ಛವಿಗಳ ಆಳ್ವಿಕೆ ಪ್ರಾರಂಭವಾಯಿತು. ಇದಕ್ಕೆ ಹಿಂದೆ ಸುಮಾರು 800 ವರ್ಷಗಳ ಕಾಲ ಕಿರಾತರು ಈ ಪ್ರದೇಶವನ್ನು ಆಳಿದರು. ಭಾರತೀಯ ಮೂಲದ ಪ್ರಥಮ ಹಿಂದು ದೊರೆಗಳು ಲಿಚ್ಛವಿಗಳೆನ್ನಲಾಗಿದೆ. ಇವರು ತಮ್ಮನ್ನು ಕ್ಷತ್ರಿಯರೆಂದು ಹೇಳಿಕೊಳ್ಳುತ್ತಿದ್ದರು. 500-700ರ ಅವಧಿಗೆ ಸಂಬಂಧಿಸಿದಂತೆ ಇವರನ್ನು ಕುರಿತು ಅನೇಕ ವಿವರಗಳು ದೊರಕುತ್ತವೆ. ಚೀನದೊಂದಿಗೆ ನೇಪಾಲದ ಸಂಪರ್ಕ ಬೆಳೆದದ್ದು 7ನೆಯ ಶತಮಾನದ ನಡುಗಾಲದಲ್ಲಿ. ಅದರೆ ಟಬೆಟ್ ಚೀನಗಳ ನಡುವೆ ಆಗಿಂದಾಗ್ಗೆ ಯುದ್ಧಗಳು ನಡೆಯುತ್ತಿದ್ದುದರಿಂದ ಈ ಸಂಪರ್ಕ ಕಡಿದುಬಿತ್ತು. 18ನೆಯ ಶತಮಾನದ ಅನಂತರವೇ ಇದು ಅವಿಚ್ಛಿನ್ನವಾಗಿ ಬೆಳೆದದ್ದು.

10-18ನೆಯ ಶತಮಾನಗಳಲ್ಲಿ ಮಲ್ಲವಂಶದ ದೊರೆಗಳು ಇಲ್ಲಿ ಆಳಿದರು. ಲಿಚ್ಛವಿಗಳು ಹಿಂದುಗಳಾಗಿದ್ದರೂ ಅವರು ವೈದಿಕ ಧರ್ಮವನ್ನು ಹಿಂದುಗಳಲ್ಲದವರ ಮೇಲೆ ಹೇರಿರಲಿಲ್ಲ. ಮಲ್ಲರು ಹಿಂದು ಸಾಮಾಜಿಕ ಪದ್ಧತಿಗಳನ್ನು ಜಾರಿಗೆ ತಂದರು. ಅವರ ಪೈಕಿ ಪ್ರಮುಖನಾದವನು 15ನೆಯ ಶತಮಾನದ ಆದಿಯಲ್ಲಿ ಆಳದ ಜಯಸ್ಥಿತಿ ಎಂಬ ದೊರೆ.

ಜಯಸ್ಥಿತಿಯ ಅನಂತರ ಬಂದವನು ಯಕ್ಷಮಲ್ಲ. ಈತ ಸು. 1429-ಸು. 1482ರಲ್ಲಿ ರಾಜ್ಯವಾಳಿದ. ಇವನು ರಾಜ್ಯವನ್ನು ತನ್ನ ಮೂವರು ಮಕ್ಕಳಲ್ಲಿ ಹಂಚಿದ. ಇವರ ಈ ಮೂರು ವಿಭಾಗಗಳಲ್ಲದೆ ಇನ್ನೂ ಹಲವು ರಾಜಕೀಯ ಘಟಕಗಳಿದ್ದವು. ಉತ್ತರ ಭಾರತವನ್ನು ಮುಸ್ಲಿಮರು ಆಕ್ರಮಿಸಿದಾಗ ಅಲ್ಲಿಂದ ಓಡಿಬಂದ ಅನೇಕ ಹಿಂದೂ ವಂಶಗಳವರು 16ನೆಯ ಶತಮಾನದ ವೇಳಗೆ ನೇಪಾಲದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಪ್ರದೇಶಗಳನ್ನು ಆಳುತ್ತಿದ್ದರು.

18ನೆಯ ಶತಮಾನದ ಆದಿಯಲ್ಲಿ ಈ ಪ್ರದೇಶಗಳಲ್ಲಿ ಒಂದನ್ನು ಷಾ ಮನೆತನದವರು ಆಳುತ್ತಿದ್ದರು. ಈ ದೊರೆಗಳು ಕ್ರಮೇಣ ಪ್ರಬಲರಾದರು. ಮಲ್ಲರ ಆಳ್ವಿಕೆಗೂ ಇವರಿಂದ ಅಪಾಯ ಒದಗಿತು. ಮಲ್ಲರು ಅ ವೇಳೆಗೆ ದುರ್ಬಲರಾಗಿದ್ದರು. ಪೃಥ್ವೀ ನಾರಾಯಣ ಷಾ ಎಂಬುವೆನು 1769ರಲ್ಲಿ ನೇಪಾಲ ಕಣಿವೆಯನ್ನು ಗೆದ್ದು ಕಾಠಮಾಂಡುವಿಗೆ ತನ್ನ ರಾಜಧಾನಿಯನ್ನು ಬದಲಾಯಿಸಿದೆ. ಆಧುನಿಕ ನೇಪಾಲದ ಅಸ್ಥಿಭಾರದ ರಚನೆಯಾಯಿತು. ಸ್ಥಳೀಯ ಭಿನ್ನತೆಗಳು ಕಡಿಮೆಯಾದುವು. ರಾಜಕೀಯ ಒಗ್ಗಟ್ಟು ಸಾಧಿಸಿತು. ಸ್ಥಳೀಯ ಮುಖಂಡರೊಂದಿಗೆ ಸಾಮರಸ್ಯ ಸಾಧಿಸುವುದರಲ್ಲಿ ಇವನು ಬಹಳ ಮಟ್ಟಿಗೆ ಯಶಸ್ವಿಯಾದ.

ಆದರೆ ರಾಜಮನೆತನಕ್ಕೂ ಶ್ರೀಮಂತರಿಗೂ ನಡುವೆ ಘರ್ಷಣೆಗಳು ಇದ್ದೇ ಇದ್ದುವು. 1775ರಿಂದ 1832ರ ವರೆಗಿನ ಅವಧಿಯಲ್ಲಿ ಈ ಅಧಿಕಾರವನ್ನು ತಮ್ಮ ಕೈಯಲ್ಲಿಟ್ಟುಕೊಳ್ಳಲು ಶ್ರೀಮಂತರು ತಮ್ಮತಮ್ಮಲ್ಲೇ ಸ್ಪರ್ಧಿಸುತ್ತಿದ್ದರು. ಈ ಅವಧಿಯಲ್ಲಿ ಮೂರು ಬಾರಿ ಅಪ್ರಾಪ್ತವಯಸ್ಕರು ಸಿಂಹಾಸನವನ್ನೇರಿದರು. ರಾಜ ಪಾಲಕರು ಪ್ರಭಾವ ಬೆಳಸಿಕೊಳ್ಳಲು ಯತ್ನಿಸಿದರು. 1806-37ರಲ್ಲಿ ಥಾಷಾ ಮನೆತನ ವಿಶೇಷ ಪ್ರಭಾವಶಾಲಿಯಾಯಿತು. 1846ರಲ್ಲಿ ರಾಣಾ ಮನೆತನ ಪ್ರಬಲವಾಯಿತು. ಆ ಮನೆತನದವರು ಷಾ ದೊರೆಗಳನ್ನು ಕೈಗೊಂಬೆಗಳಾಗಿ ಮಾಡಿ ತಾವೇ ಅಧಿಕಾರ ನಡೆಸಿದರು. ಅವರ ಅಧಿಕಾರ 1951ರ ವರೆಗೂ ನಡೆಯಿತು.

ನೇಪಾಲ ಆಗಿಂದಾಗ್ಗೆ ನೆರೆ ಸರ್ಕಾರಗಳೊಂದಿಗೆ ಯುದ್ಧನಿರತವಾಗಿತ್ತು. 1788-92ರಲ್ಲಿ ಚೀನ ಮತ್ತು ಟಿಬೆಟ್‍ಗಳೊಂದಿಗೂ 1809ರಲ್ಲಿ ಪಂಜಾಬಿನ ಸಿಖ್ಖರೊಂದಿಗೂ 1814-16ರಲ್ಲಿ ಬ್ರಿಟಿಷ್ ಭಾರತದೊಂದಿಗೂ 1854-56ರಲ್ಲಿ ಟಿಬೆಟಿನೊಂದಿಗೂ ಮಾಡಿದ ಯುದ್ಧಗಳಲ್ಲಿ ನೇಪಾಲದ ವಿಸ್ತರಣಶೀಲ ಪ್ರಯತ್ನಕ್ಕೆ ಪೆಟ್ಟುಬಿತ್ತು. ಅದರ ಈಗಿನ ಗಡಿಗಳು ಖಚಿತವಾದುವು.

1951ರಲ್ಲಿ ನೇಪಾಲದ ದೊರೆಯ ಅಧಿಕಾರ ಮತ್ತೆ ಸ್ಥಾಪಿತವಾಯಿತು. ರಾಣಾ ಆಡಳಿತದ ವಿರುದ್ಧ ಬೆಳೆದ ಜನಚಳವಳಿ ಇದಕ್ಕೆ ಕಾರಣ. ದೊರೆ ತ್ರಿಭುವನರು 1955ರಲ್ಲಿ ತೀರಿಕೊಂಡರು. ಮಹೇಂದ್ರರ ಅಧಿಕಾರದ ಕಾಲದಲ್ಲಿ ಸಂವಿಧಾನ ಬದ್ಧ ಆಡಳಿತವನ್ನು ಸ್ಥಾಪನೆ ಮಾಡಲು ಪ್ರಯತ್ನಗಳಾದುವು. 1959ರಲ್ಲಿ ಸಂವಿಧಾನವೊಂದು ಜಾರಿಗೆ ಬಂತು. ಅದರೆ ದೊರೆಗೂ ಸಂಪುಟಕ್ಕೂ ನಡುವೆ ವಿರಸ ಬೆಳೆದು 1962ರಲ್ಲಿ 1959ರ ಸಂವಿಧಾನ ರದ್ದಾಯಿತು. ಅದರ ಬದಲು ಜಾರಿಗೆ ರದ್ದಾಯಿತು. ಅದರ ಬದಲು ಜಾರಿಗೆ ಬಂದ ಹೊಸ ಸಂವಿಧಾನದಲ್ಲಿ ದೊರೆಯ ಪ್ರಾಧಿಕಾರ ಪುನಃ ಸ್ಥಾಪಿತವಾಯಿತು. ಮಹೇಂದ್ರರು 1972ರಲ್ಲಿ ಕಾಲವಾದರು. ಅವರ ಮಗ ಬೀರೇಂದ್ರರು ಸಿಂಹಾಸನವನ್ನೇರಿದರು. (ಎಚ್.ವಿ.ಎಸ್.ಎಂ.)

ವಾಸ್ತುಶಿಲ್ಪ, ಕಲೆ: ಪ್ರಾರಂಭದಿಂದ ನೇಪಾಲದ ಸಂಸ್ಕøತಿಗೆ ಭಾರತ ಸ್ಫೂರ್ತಿಯನ್ನು ಒದಗಿಸಿದೆ. ಮುಸ್ಲಿಮರ ದಾಳಿಯಿಂದ ಭಾರತೀಯ ಸಂಸ್ಕøತಿಯ ಪ್ರಭಾವನಿಂತುಹೋದಾಗ ಬಿಟ್ಟರೆ ಟಿಬೆಟ್‍ನಿಂದ ಸ್ಫೂರ್ತಿ ಪಡೆಯಿತು.

ಸ್ತೂಪಗಳನ್ನು ಬಿಟ್ಟರೆ ಪುರಾತನ ವಾಸ್ತುಶಿಲ್ಪ ಬೇರೆ ಯಾವುದೂ ಕಂಡು ಬರುವುದಿಲ್ಲ. ಈಗಿರುವ ಕಲ್ಲು ಕಟ್ಟಲ್ಪಟ್ಟವು. ನೇಪಾಲಿಗಳು ಸ್ತೂಪ ಕಟ್ಟುವುದನ್ನು ಭಾರತದಿಂದ ಕಲಿತುಕೊಂಡರು. ಆದರೂ ಚೈತ್ಯ ನಿರ್ಮಿಸುವುದರಲ್ಲಿ ತಮ್ಮದೆಟ್ಟಾದ ಶೈಲಿಯನ್ನು ಬಳಸಿಕೊಂಡರು. ಛತ್ರಾವಳಿಗಳು ಬಹಳ ಎತ್ತರವಾಗಿ ಕಟ್ಟಲ್ಪಟ್ಟವು. ಮಣ್ಣಿನ ದಿಣ್ಣಯ ಮೇಲೆ ಚೈತ್ಯಗಳ ಚಿತ್ರಗಳನ್ನು ಬರೆಯುತ್ತಿದ್ದರು. ಇದು ನೇಪಾಲಿ ಬೌದ್ಧರ ಒಂದು ನೂತನ ಶೈಲಿ. ಮರದಿಂದ ಕಟ್ಟಿದ ದೇವಾಲಯಗಳು ಒಂದು ಅಥವಾ ಹೆಚ್ಚು ಮಹಡಿಗಳಿಂದ ಕೂಡಿದೆ. ಇವು ಭಾರತ ವಾಸ್ತುಶಿಲ್ಪದ ಪ್ರಭಾವದ ಫಲ ಎಂದು ಹೇಳಲಾಗಿದೆ. ದೇವಾಲಯಗಳಲ್ಲಿ ಕಂಡುಬರುವ ಅಲಂಕರಣಗಳು, ಮಕರತೋರಣ, ಪೂರ್ಣ ಕಲಿಶ, ದ್ವಾರಬಂಧದ ಕಂಬತೋಳು. ಲಿಂಟೆಲ್‍ಗಳು ಮತ್ತು ಕಪೋತಗಳು, ದ್ವಾರಗಳಲ್ಲಿ ಕಂಡುಬರುವ ರೆಕ್ಕೆಯಾ ಕಾರದ ಭಾಗ ಮತ್ತು ಕಾಲ ಮಕರ ತೋರಣಗಳು ಚಾವಾ ದ್ವೀಪದಲ್ಲಿರುವ ಮಧ್ಯಯುಗದ ದೇವಾಲಯಗಳನ್ನು ಹೋಲುತ್ತವೆ. ಉತ್ತರ ಭಾರತದ ನಗರ ಶೈಲಿಯಲ್ಲಿ ಕಲ್ಲಿನಿಂದ ಮತ್ತು ಕೆಲವು ಕಡೆ ಇಟ್ಟಿಗೆಯಿಂದ ಕಟ್ಟಿದ ದೇವಾಲಯಗಳೂ ಇವೆ. ಇವು ಚಿಕ್ಕವಾದರೂ ಭಾರತದ ದೇವಾಲಯಗಳನ್ನು ಹೋಲುತ್ತವೆ. ಪತನ ಎಂಬಲ್ಲಿರುವ ರಾಧಾಕೃಷ್ಣ ದೇವಾಲಯ ಅತ್ಯಂತ ವೈಭವಪೂರಿತವಾದ್ದು. ಈ ದೇವಾಲಯದಲ್ಲಿ ನಗರ ಮತ್ತು ನೇಪಾಲಿ ಶೈಲಿಗಳ ಸಮ್ಮಿಲನವನ್ನು ಕಾಣಬಹುದು. ವಿರೂಪಾಕ್ಷನ ಪ್ರತಿಮೆ ಕ್ರಿ.ಪೂ.ದ ಶತಮಾನಗಳಿಗೆ ಸೇರಿದ್ದು. ಆ ಬಳಿಕ ಕಂಡುಬರುವ ಪ್ರತಿಮೆಗಳು ಕುಶಾಣ ಕಾಲದ ಮಥುರ ಶೈಲಿಯ ಬೋಧಿಸುತ್ವನ ಮತ್ತು ಬುದ್ಧ ಜನ್ಮದ ದೃಶ್ಯಗಳು. ಕ್ರಿ.ಶ. 5ನೆಯ ಶತಮಾನದಿಂದ 8ನೆಯ ಶತಮಾನದ ವರೆಗೆ ಕಂಡುಬರುವ ಪ್ರತಿಮೆಗಳು ನೇಪಾಲ ಕಲೆಯಲ್ಲೂ ಕಂಡುಬರುತ್ತವೆ. ಗರುಡನಾರಾಯಣ ಮತ್ತು ವಿಶ್ವರೂಪ ಎಂಬ ಎರಡು ಪ್ರತಿಮೆಗಳು ನೇಪಾಲಕ್ಕೆ ದೇಶಿಯವಾದವು. ಹಾಡಿಗಾಂವ್‍ನಲ್ಲಿರುವ, 6 ತಲೆಗಳಿಂದ ಕೂಡಿದ ಗರುಡನ ಮೇಲೆ ಕೂತಿರುವ ಹರಿಹರ, ಮತ್ತು ಚಾಂಗುನಲ್ಲಿರುವ 7ತಲೆಗಳ ತ್ರೈಲೋಕ್ಯಮೋಹನ ಇವೂ ನೇಪಾಲಕ್ಕೆ ವಿಶಿಷ್ಟವಾದವು. ಬೌದ್ಧ ತಂತ್ರಪಂಥಕ್ಕೆ ಸಂಬಂಧಪಟ್ಟ ಬಹುತೇಕ ಪ್ರತಿಮೆಗಳು ಕಂಚಿನಿಂದ ಮಾಡಲ್ಪಟ್ಟವು. ಆನಂತರ ವೈದಿಕ ಧರ್ಮಕ್ಕೆ ಸಂಬಂಧಿಸಿದ ಪ್ರತಿಮೆಗಳು ರೂಢಿಗೆ ಬಂದುವು. ನೇಪಾಲಿಗಳು ಕಂಚಿನ ವಿಗ್ರಹಗಳನ್ನು ಮಾಡುವುದನ್ನು ಬಂಗಾಲದ ಪಾಲರಿಂದ ತಿಳಿದುಕೊಂಡರು. ಅನಂತರ ಇದು ಟಿಬೆಟ್ ಮತ್ತು ಚೀನಕ್ಕೆ ಹರಡಿತು.

ಶಾಸನಗಳು: ನೇಪಾಲದಲ್ಲಿ ಶಾಸನಗಳು ಕ್ರಿ.ಶ.5ನೆಯ ಶತಮಾನದಿಂದಲೂ ಸಿಗುತ್ತವೆ. ಲಿಚ್ಛವಿಗಳು ಗುಪ್ತಕಾಲದ ತಾಮ್ರಪತ್ರಗಳ ಮಾದರಿಯಲ್ಲಿ ಶಾಸನಗಳನ್ನು ಬರೆಸಿದರು. ಇವು ಸಾಮಾನ್ಯವಾಗಿ ಸತ್ತವರ ಸ್ಮರಣೆ ಮತ್ತು ರಾಜರು ಮಾಡಿದ ಭೂದಾನವನ್ನು ತಿಳಿಸುತ್ತವೆ. ಇವುಗಳ ಲಿಪಿ ಗುಪ್ತರ ಕಾಲದ ಶೈಲಿಯನ್ನು ಹೋಲುತ್ತದೆ. ಅನಂತರ ಇದು ಕ್ರಮೇಣ ಪರಿವರ್ತನೆಗೊಳ್ಳತೊಡಗಿತು. 12 ಅಥವಾ 13ನೆಯ ಶತಮಾನದ ಬಳಿಕ ಇದು ಬೇರೆಯಾಯಿತು. ಇದನ್ನು ನೆವಾರಿ ಅಥವಾ ರಂಜನ ಲಿಪಿ ಎಂದು ಹೇಳುತ್ತಾರೆ. ನೇಪಾಲದ ರಂಜನ ಲಿಪಿಯನ್ನು ಟಿಬೆಟ್ ದೇಶ ಪವಿತ್ರ ಲಿಪಿ ಎಂದು ಸ್ವೀಕರಿಸಿತು.

ನಾಣ್ಯಗಳು: ಲಿಚ್ಛವಿ ವಂಶದ ದೊರೆ ಮಾನದೇವನ ಕಾಲದಲ್ಲಿ ನಾಣ್ಯಗಳು ಚಲಾವಣೆಗೆ ಬಂದುವು. ಇವುಗಳಲ್ಲಿ ಕಂಡುಬರುವ ಕೆಲವು ಅಲಂಕಾರಣಗಳು ಗುಪ್ತರ ನಾಣ್ಯಗಳಲ್ಲಿ ಕಂಡುಬರುತ್ತವೆ. ಚಿಹ್ನೆಗಳು ಧರ್ಮದ ಮಹತ್ವವನ್ನು ತೋರಿಸುತ್ತವೆ. ನಾಣ್ಯಗಳಲ್ಲಿ ಎರಡು ವಿಧ: 170 ಗ್ರೇನ್‍ಗಳ ಭಾರವಾದ ನಾಣ್ಯ ಮತ್ತು 144 ಗ್ರೇನ್‍ಗಳ ಚಿಕ್ಕ ನಾಣ್ಯ. ಇವೆರಡಲ್ಲದೆ ಬೇರೆಯವು 16ನೆಯ ಶತಮಾನದ ಅನಂತರ ಮಾತ್ರ ಪ್ರಚಾರಕ್ಕೆ ಬಂದುವು. ಇವು ಮಲ್ಲ ವಂಶದ ದೊರೆಗಳ ನಾಣ್ಯಗಳು. ಮಲ್ಲರ ನಾಣ್ಯಗಳಲ್ಲಿ ತಂತ್ರ, ಮಂಥದ ಮಹತ್ವವನ್ನು ತೋರಿಸುವ ಚಿಹ್ನೆಗಳಿವೆ. ಇವುಗಳಲ್ಲಿ ಅನೇಕ ಮೌಲ್ಯಗಳ ನಾಣ್ಯಗಳಿವೆ. ಅತಿ ಮುಖ್ಯವಾದ ನಾಣ್ಯವೆಂದರೆ ಮೊಹರ್ ಒಂದು ಮೊಹರ್ ನಾಣ್ಯ ಮೊಗಲರ ಕಾಲದ ಅರ್ಧ ರೂಪಾಯಿಗೆ ಸಮಾನ. ಮಲ್ಲರ ನಾಣ್ಯಗಳಲ್ಲಿ ಮೊಗಲರ ಪ್ರಭಾವ ಅವುಗಳ ಅಲಂಕರಣ ಮತ್ತು ತಂತ್ರಗಳಲ್ಲಿ ಕಂಡುಬರುತ್ತದೆ. ಅರಬ್ಬಿ ಮತ್ತು ಪಾರಸಿ ಭಾಷೆಗಳಲ್ಲಿ ಬರಹಗಳಿವೆ. ಟಿಬೆಟ್ಟಿನಲ್ಲೂ ಮಲ್ಲರ ಮೊಹರುಗಳು ಚಲಾವಣೆಯಲ್ಲಿದ್ದವು. ಟಿಬೆಟ್ ದೇಶಕ್ಕಾಗಿ ನೇಪಾಲ ನಾಣ್ಯಗಳನ್ನು ತಯಾರಿಸುತ್ತಿತ್ತು. ಟಿಬೆಟ್ ಅದಕ್ಕೆ ಬದಲು ಬೆಳ್ಳಿಯನ್ನು ನೇಪಾಲಕ್ಕೆ ಕೊಡುತ್ತಿತ್ತು. ಅಲ್ಲಾ-ಉದ್-ದೀನ್ ಖಿಲ್ಜಿಯ ಕೆಲವು ನಾಣ್ಯಗಳು ನೇಪಾಲದಲ್ಲಿ ದೊರೆತಿವೆ. ನೇಪಾಲದ ಈಗಿನ ನಾಣ್ಯ ನೇಪಾಲಿ ರೂಪಾಯಿ. ಇದನ್ನು 100 ಪೈಸೆಗಳಾಗಿ ವಿಂಗಡಿಸಲಾಗಿದೆ. (ಕೆ.ಕೆ.ಎಸ್.ಯು.)