ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೊವಾರೊ, ರ್ಯಾಮನ್

ವಿಕಿಸೋರ್ಸ್ದಿಂದ

ನೊವಾರೊ, ರ್ಯಾಮನ್ 1899-1968. ಹಾಲಿವುಡ್ ಚಿತ್ರ ನಟ. ಮೆಕ್ಸಿಕೊ ರಾಷ್ಟ್ರದ ಡೂರಾಂಗೊದವ. ರ್ಯಾಮನ್ ಸಮಾನಿಯೆಗೋಸ್ ಎಂಬುದು ಮೊದಲ ಹೆಸರು. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಂದು ಸ್ವಲ್ಪ ಕಾಲ ಬೇರೆ ಬೇರೆ ಕಡೆಯಲ್ಲಿ ಅನುಭವ ಪಡೆದು ಅನಂತರ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ. ಲಾಸ್ ಅಂಜಲೀಸಿನಲ್ಲಿ ಹಲವು ಚಿತ್ರಗಳಲ್ಲಿ ಎಕ್ಸ್ ಟ್ರಾ ನಟನಾಗಿ ಸಣ್ಣಪುಟ್ಟ ಪಾತ್ರಾಭಿನಯ ಮಾಡಿದ. ದಿ ಲಿಟಲ್ ಅಮೆರಿಕನ್ (1917), ದಿ ಗೋಟ್ (1918), ದಿ ರುಬಾಯಿತ್ ಆಫ್ ಉಮರ್ ಖಯ್ಯಾಮ್ (1922)-ಇವು ಈತನ ಮೊದಲ ಚಿತ್ರಗಳಲ್ಲಿ ಕೆಲವು. ಮೂಕಿ ಯುಗದ ಪ್ರಸಿದ್ಧ ನಿರ್ದೇಶಕನಾದ ರೆಕ್ಸ್ ಇಂಗಾಮ್ 1922ರಲ್ಲಿ ಇವನ ಪ್ರತಿಭೆಯನ್ನು ಗುರುತಿಸಿ ತನ್ನ ದಿ ಪ್ರಿಸನರ್ ಆಫ್ ಜೆಂಡಾ (1922) ಮೂಕ ಚಿತ್ರಕ್ಕೆ ನಾಯಕ ನಟನನ್ನಾಗಿ ಆರಿಸಿದ. ಅನಂತರ ಈತ ಖ್ಯಾತ ಎಂಜಿಎಂ ಸಂಸ್ಥೆಯ ಅನೇಕ ಚಿತ್ರಗಳಲ್ಲಿ ನಾಯಕನಾಗಿ ವಿಜೃಂಭಿಸಿದ. 1930ರಲ್ಲಿ ಲ ಸೆವಿಲ್ಲಾನ ಎಂಬ ಚಿತ್ರವನ್ನು ನಿರ್ದೇಶಿದ. ತಾನು ನಟಿಸಿದ ಅನೇಕ ಅಮೆರಿಕನ್ ಚಿತ್ರಗಳ ಸ್ಟ್ಯಾನಿಷ್ ಆವೃತ್ತಿಗಳ ನಿರ್ದೇಶನ ಇವನದೇ. ದೂರದರ್ಶನದಲ್ಲಿಯೂ ಅನೇಕ ಬಾರಿ ಕಾಣಿಸಿಕೊಂಡಿದ್ದಾನೆ. ಹಾಲಿವುಡ್ಡಿನ ಮೂಕಚಿತ್ರಗಳ ಕಾಲದಲ್ಲಿ ಜನಪ್ರಿಯ ನಾಯಕನಟನಾಗಿದ್ದ ಇವನ ಪ್ರಾಧಾನ್ಯ ವಾಕ್ಚಿತ್ರಗಳು ಬಂದಮೇಲೆ ಕಡಿಮೆಯಾಯಿತು. ವಾಕ್ಚಿತ್ರಗಳ ಪೋಷಕ ನಟನಾಗಿ ಖ್ಯಾತನಾದ. ಈತನ ಇತರ ಪ್ರಮುಖ ಚಿತ್ರಗಳೆಂದರೆ ಸ್ಕಾರ್‍ಮೂಷ್ (1922), ಮಿಡ್‍ಶಿಪ್‍ಮನ್ (1925), ಬೆನ್‍ಹರ್ (1927), ದಿ ಸ್ಟುಡೆಂಟ್ ಪ್ರಿನ್ಸ್ (1927), ದಿ ಪೇಗನ್ (1929), ಡೆವಿಲ್ ಮೆ ಕೇರ್(1930), ಡೇ ಬ್ರೇಕ್(1931), ಸನ್ ಆಫ್ ಇಂಡಿಯ (1931), ಮಾತಾಹರಿ (1932),ದಿ ಬಾರ್ಬೀರಿಯನ (1933), ದಿ ಕ್ಯಾಟ್ ಆ್ಯಂಡ್ ದಿ ಫಿಡ್ಲ್ (1934), ಲಾಫಿಂಗ್ ಬಾಯ್ (1934), ದಿ ಷೇಕ್ ಸ್ಟೆಪ್ಸ್ ಔಟ್ (1937), ದಿ ಡೆಸ್‍ಪರೇಟ್ ಅಡ್ವೆಂಚರ್ (1938), ದಿ ವರ್ ಸ್ಟ್ರೇಂಜರ್ಸ್ (1948), ದಿ ಬಿಗ್ ಸ್ಟೀಲ್ (1949), ಕ್ರೈಸಿಸ್ (1950), ಹೆಲರ್ ಇನ್ ಪಿಂಕ್ ಟೈಟ್ಸ್ (1960). (ಎಸ್.ಎಸ್.ಎಂ.ಯು.)