ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೋರಡ್ರೀನಲಿನ್

ವಿಕಿಸೋರ್ಸ್ದಿಂದ

ನೋರಡ್ರೀನಲಿನ್ ಇದೇ ಹೆಸರಿನ ಅಥವಾ ನೋರೆಡೀನ್‍ಫ್ರೆನ್ ಆಡ್ರೀನಿಲ್ ಎಂಬ ಹೆಸರಿನ ನಿರ್ನಾಳ ಗ್ರಂಥಿಯ ತಿರುಳಿನಿಂದ ಅಡ್ರೀನಲ್ ಜೊತೆಗೆ ಸ್ರಾವವಾಗುವ ಹಾರ್ಮೋನ್. ಆಡ್ರೀನಲ್ ಮೆಡ್ಯುಲಗ್ರಂಥಿ ಅಡ್ರೀನಲಿನ ಹಾರ್ಮೋನ್ ಒಂದನ್ನೇ ಸ್ರವಿಸುವುದೆಂದು ಮೊದಲು ನಂಬಲಾಗಿತ್ತು. 1946ರಲ್ಲಿ ಫಾನ್ ಆಯ್ಲರ್ ಎಂಬ ವಿಜ್ಞಾನಿ ಅಡ್ರೀನಲ್ ತಿರುಳಿನ ಸ್ರಾವ ನಿಜಕ್ಕೂ ಎರಡು ರಾಸಾಯನಿಕಗಳ ಮಿಶ್ರಣವೆಂದು ತೋರಿಸಿಕೊಟ್ಟ. ಅಡ್ರೀನಲಿನ್ ಮತ್ತು ನೋರಡ್ರೀನಲಿನ್ನಿಗೂ ಇರುವ ವ್ಯತ್ಯಾಸ ಕೇವಲ ಒಂದು CH3 ತಂಡ:

ಚಿತ್ರ-1

ಅಡ್ರೀನಲಿನ್ ನೋರಡ್ರೆನಲಿನ್ ಮಾನವನ ಅಡ್ರೀನಲ್ ಮೆಡ್ಯುಲ ಗ್ರಂಥಿ ಸ್ರಾವದಲ್ಲಿ ಶೇಕಡ 10 ರಿಂದ 30ರವರೆಗೆ ನೋರಡ್ರೀನಲಿನ್ ಇರುತ್ತದೆ. ಪ್ರಾಣಿಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು. ತಿಮಿಂಗಲದಲ್ಲಿ ಶೇಕಡ 90 ರಿಂದ 100ವರೆಗೆ ಇರುತ್ತದೆ. ಅಡ್ರೀನಲ್ ಗ್ರಂಥಿಯಲ್ಲಿ ಟೈರೋಸಿನ್ ಎಂಬ ಅಮೈನೋ ಆಮ್ಲದಿಂದ ಈ ಹಾರ್ಮೋನಿನ ಉತ್ಪತ್ತಿ ಆಗುವುದೆಂದು ತೋರಿಸಲಾಗಿದೆ. ಇದರ ಕಣಕ್ಕೆ ಒಂದು CH3 ತಂಡ ಲಗತ್ತಾಗಿ ಅಡ್ರೀನಲ್ ಆಗುತ್ತದೆ. ಈ ಎರಡೂ ದೇಹದಲ್ಲಿ ತಾತ್ಕಾಲಿಕ ಕ್ರಿಯೆಯುಳ್ಳಂಥವು. ಕ್ರಿಯೆ ಮುಗಿದ ಕೂಡಲೆ ಇವೆರಡೂ ಉತ್ಕರ್ಷಣ ಮುಂತಾದ ಕ್ರಮಗಳಿಂದ D-3 ಮಿಥೈಲ್ 4 ಹೆಡಾಕ್ಸಿಮ್ಯಾಂಡೆಲಿಕ್ ಆಮ್ಲವಾಗಿ ಪರಿವರ್ತನೆಗೊಂಡು ಕ್ರಿಯಾಸಾಮಥ್ರ್ಯವನ್ನು ಕಳೆದುಕೊಂಡು ಮೂತ್ರದ ಮೂಲಕ ವಿಸರ್ಜಿತವಾಗುತ್ತವೆ. ಜೈವಿಕಕ್ರಿಯೆಗಳ ಮೇಲೆ ನೋರಡ್ರೀನಲಿನ್ ಪರಿಣಾಮ ಅಡ್ರೀನಲಿನ್ನಂಥದನ್ನೇ ಕೆಲಮಟ್ಟಿಗೆ ಹೋಲುತ್ತದೆ. ಆದರೆ ತದ್ವಿರುದ್ಧವಾಗಿ ಅದು ರಕ್ತದ ಶರ್ಕರ ಮತ್ತು ಆಕ್ಸಿಜನ್ ಬಳಕೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ರಕ್ತದ ಒತ್ತಡವನ್ನು ಹೆಚ್ಚಿಸಿದರೂ ಹೃದಯದ ಕೆಲಸವನ್ನು ಹೆಚ್ಚಿಸುವುದಿಲ್ಲ. ಶ್ವಾಸಕೋಶದ ಮಾಂಸಖಂಡಗಳನ್ನು ಸಡಿಲಗೊಳಿಸುವುದಿಲ್ಲ. (ಪೈ.ಎಸ್.ಎಲ್.) (ಪರಿಷ್ಕರಣೆ: ಹೆಚ್.ಆರ್.ಆರ್)