ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೋವಳಿಸಿಕೆ

ವಿಕಿಸೋರ್ಸ್ದಿಂದ

ನೋವಳಿಸಿಕೆ- ನೋವನ್ನು ಮದ್ದು ಮತ್ತಿತರ ವಿಧಾನಗಳಿಂದ ಅಳಿಸುವಿಕೆ ಇಲ್ಲವೆ ಹೋಗಲಾಡಿಸುವಿಕೆ (ಅನಾಲ್ಜಿಸಿಯ). ಅರಿವಳಿಕೆಗೂ (ಅನೀಸ್ತೇಸಿಯ) ಇದಕ್ಕೂ ಇರುವ ವ್ಯತ್ಯಾಸವನ್ನು ಮುಖ್ಯವಾಗಿ ಗಮನಿಸಬೇಕು. ಅರಿವಳಿಕೆಯಲ್ಲಿ ಮುಟ್ಟುವುದರ, ನೋವಿನ, ಕಾವಿನ, ಒತ್ತಡದ್ದೇ, ಮುಂತಾದ ಅರಿವುಗಳೆಲ್ಲ ಅಳಿದಿರುತ್ತವೆ, ನೋವಳಿಸಿಕೆಯಲ್ಲಿ ನೋವಿನ ಅರಿವು ಮಾತ್ರ ಇಲ್ಲವಾಗುವುದು, ರೋಗಿಗಳ ಚಿಕೆತ್ಸೆಯಲ್ಲಿ ನೋವಳಿಸಿಕೆಯ ಪಾತ್ರ ಮುಖ್ಯವಾದದ್ದು. ಏಕೆಂದರೆ ರೋಗಿಗಳು ಬಲುಮಟ್ಟಿಗೆ ವೈದ್ಯರಿಂದ ಚಿಕಿತ್ಸೆಯನ್ನು ಕೋರುವುದು ನೋವನ್ನು ಕಳೆದುಕೊಳ್ಳುದಕ್ಕಾಗಿಯೇ. ಇದನ್ನು ನೋವಳಿಕೆಗಳಿಂದ (ಅನಾಲ್ಚೆಸಿಕ್ಸ್) ಸಾಧಿಸಬಹುದು. ಸಾಮಾನ್ಯವಾಗಿ ರೋಗಿಯ ಎಚ್ಚರ ತಪ್ಪಿಸದೆಯೇ ಈ ಮದ್ದುಗಳು ನೋವು ಕಳೆಯುತ್ತವೆ. ನೋವಳಿಕದಿಂದ ನೋವಿನ ಕಾರಣ ವಾಸಿಯಾಗದೆಯೇ ನೋವಿನ ಅರಿವು ಶಮನವಾಗಿ ನೋವನ್ನು ತಡೆದುಕೊಳ್ಳುವ ಮಟ್ಟಕ್ಕಿಳಿಯುವುದು. ಸಾಮಾನ್ಯ ಬಳಕೆಯಲ್ಲಿರುವ ಆಸ್ಪಿರಿನ್, ಫಿನಸೆಟಿನ್, ಪ್ಯಾರಸಿಟಮಾಲ್ ಇವು ಉದಾಹರಣೆಗಳು. ವೈದ್ಯರ ಚೀಟಿ ಇಲ್ಲದೆಯೇ ಕೊಂಡು ಬಳಸುವಂಥವು. ಇವು ಎಷ್ಟೇ ನಿರಪಾಯಕಾರಿಗಳೆನಿಸಿದ್ದರೂ ಕೆಲವರಿಗೆ ಅದರಲ್ಲೂ ಮಕ್ಕಳಿಗೆ ತುಂಬ ಅಪಾಯಕಾರ. ತೀವ್ರ ನೋವುಗಳನ್ನು ಹೋಗಲಾಡಿಸುವ ಪ್ರಬಲವಾದ ನೋವಳಿಕಗಳಲ್ಲಿ ಮಾರ್ಫಿನ್, ಪೆತಿಡೀನ್ ಮುಂತಾದವಿವೆ, ಇವನ್ನು ವೈದ್ಯನೇ ನಿರ್ಧರಿಸಿ ಕೊಡಬೇಕಾಗುವುದು. ಈ ಮದ್ದುಗಳು ಕೆಟ್ಟ ಚಟ ಹತ್ತಿಸುವಂಥವಾದ್ದರಿಂದ ಸೇವನೆಯಲ್ಲಿ ಹೆಚ್ಚು ಹುಷಾರಿರಬೇಕು. ಹುಳುಕು ಹಲ್ಲಿಗೆ ಲವಂಗದೆಣ್ಣೆಯ ತೊಟ್ಟು ಹಾಕುವುದೂ ನೋವಳಿಸಿಕೆಯೇ. ಮದ್ದುಗಳೇ ಅಲ್ಲದೆ ಸರಳ ಚಿಕೆತ್ಸೆಯಿಂದಲೂ ನೋವಳಿಸಬಹುದು. ಬಿಸಿನೀರ ಚೀಲವನ್ನು ಮೇಲಿಟ್ಟಿರುವುದರಿಂದ ಸ್ನಾಯುವಿನಲ್ಲಿ ಉಳುಕಾಗಿ ನೋಯುತ್ತಿರುವುದು ಶಮನವಾಗಬಹುದು. ಸುಟ್ಟಗಾಯದ ನೋವನ್ನು ಮಂಜಿನ ಗಡ್ಡೆಯಿಂದ ಕಳೆಯಬಹುದು. (ಡಿ.ಎಸ್.ಎಸ್.)