ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೌಕಾ ವಾಸ್ತುಶಿಲ್ಪ

ವಿಕಿಸೋರ್ಸ್ದಿಂದ

ನೌಕಾ ವಾಸ್ತುಶಿಲ್ಪ- ನೀರಿನಲ್ಲಿ ಕ್ರಿಯೋದ್ಯುಕ್ತವಾಗಿರುವ ಪ್ಲವನ ರಚನೆಗಳ (ಬೋಯಂಟ್ ಸ್ಟ್ರಕ್ಬರ್ಸ್) ಭೌತ ವೈಲಕ್ಷಣ್ಯಗಳನ್ನು ಕುರಿತ ವಿಜ್ಞಾನ (ನೇವಲ್ ಆರ್ಕಿಟೆಕ್ಚರ್). ಅವುಗಳ ಉದ್ದಿಷ್ಟ ಸೇವೆಯನ್ನು ಗಮನಿಸಿ ಈ ರಚನೆಗಳನ್ನು ಹಡಗು, ದೋಣಿ, ಮಂಜಿ, ಜಲಾಂತರ್ಗಾಮಿ, ಹರಿಗೋಲು, ತೆಪ್ಪ ಇತ್ಯಾದಿಯಾಗಿ ವರ್ಗೀಕರಿಸಲಾಗಿದೆ. ಇತರ ವಿಜ್ಞಾನ ವಿಭಾಗಗಳೊಡನೆ ಹೋಲಿಸುವಾಗ ನೌಕಾ ವಾಸ್ತುಶಿಲ್ಪದ ಪ್ರಗತಿ ಏನೂ ಸಾಲದು. ನಿಷ್ಕøಷ್ಟ ಗಣಿತ ಸಂಸ್ಕಾರಕ್ಕೆ ಈ ವಿಷಯವನ್ನು ಅಳವಡಿಸಲಾಗದಿರುವುದೇ ಇದರ ಕಾರಣ. ಹೀಗಾಗಿ ಇದನ್ನು ವೈಜ್ಞಾನಿಕ ಅಡಿಪಾಯ ಇರುವ ಕಲೆ ಎಂಬುದಾಗಿ ಹೇಳುವುದುಂಟು. ನೌಕಾವಾಸ್ತು ಶಿಲ್ಪದ ಹೆಚ್ಚಿನ ಜ್ಞಾನ ಗತಯುಗಗಳ ಪ್ರತ್ಯಕ್ಷಾನುಭವದ ಸಂಚಯನ. ಈ ಜ್ಞಾನವನ್ನು ಪ್ರಧಾನತಃ ಕಲೆಯಾಗಿ, ಅಂದರೆ ಸಮಸ್ಯೆಗಳನ್ನು ಪರಿಹರಿಸಲು ಅನುಭವಜನ್ಯ ವಿಧಾನಗಳಿಗೆ ಶರಣುಹೋಗುವುದರ ಮೂಲಕ ಬಳಸಲಾಗುವುದೇ ವಿನಾ ವಿಜ್ಞಾನವಾಗಿ, ಅಂದರೆ ಸಮಸ್ಯೆಗಳಿಗೆ ಕಾರಣವಾದ ವಿವಿಧ ಬಲಗಳನ್ನು ನಿಷ್ಕøಷ್ಟವಾಗಿ ಅಳೆದು ಯುಕ್ತ ಪರಿಹಾರಗಳನ್ನು ಸೂಚಿಸುವುದರ ಮೂಲಕ ಅಲ್ಲ.

ನೌಕಾ ವಾಸ್ತು ಶಿಲ್ಪದಲ್ಲಿ ಸಾಮಾನ್ಯವಾಗಿ ಸಕಲ ವಿಧವಾದ ಹಡಗುಗಳ ಅಲೇಖ್ಯ ಹಾಗೂ ಕಟ್ಟೋಣವನ್ನು ಕುರಿತು ಅಭ್ಯಸಿಸಲಾಗುವುದು. ಇವು ನಾಗರಿಕ, ಸರಕು, ಮಿಲಿಟರಿ ಮುಂತಾದ ವಿಶಿಷ್ಟ ಬಗೆಗಳನ್ನು ಒಳಗೊಂಡಿರುವುವು. ಹಡಗನ್ನು ಅಖಂಡವಾದ ಒಂದು ಘಟಕವಾಗಿ ಇಲ್ಲಿ ಪರಿಗಣಿಸಲಾಗುವುದು. ಅಂದರೆ ಅದರ ಗಾತ್ರ, ರೂಪ, ಚಾಲನಸಾಮಥ್ರ್ಯ ತ್ರಾಣ ಮೊದಲಾದವುಗಳ ಕಡೆ ಲಕ್ಷ್ಯವೇ ವಿನಾ ಬಿಡಿಭಾಗಗಳ ಕಡೆಗೆ ಅಲ್ಲ. ಸರಕು ಹಾಗೂ ಜನರ ಸುರಕ್ಷಣೆ ಮತ್ತು ನಿರ್ವಹಣೆಯಲ್ಲಿ ಮಿತವ್ಯಯ ಕೂಡ ನೌಕಾವಾಸ್ತು ಶಿಲ್ಪದಲ್ಲಿ ಸೇರುವುವು. ಈ ವಿಧ ಪ್ರಾಚಲಗಳು ನಿಷ್ಕøಷ್ಟ ಗಣಿತಮಾಪನಗಳಿಗೆ ಅಳವಡಿಸದಿರುವುದರಿಂದ ನೌಕಾವಾಸ್ತುಶಿಲ್ಪ ವಿಜ್ಞಾನದ ಒಂದು ವಿಭಾಗವಾಗಿ ಬೆಳೆದಿಲ್ಲ. ಹೀಗಾಗಿ ನೌಕಾವಾಸ್ತುಶಿಲ್ಪ ವೈಜ್ಞಾನಿಕ ಮನೋವೃತ್ತಿಯ ಕಲಾವಿದನಾಗಿರಬೇಕಾದದ್ದು ಅನಿವಾರ್ಯವಾಗಿದೆ.