ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾನ್ಕೀನ್

ವಿಕಿಸೋರ್ಸ್ದಿಂದ

ನ್ಯಾನ್‍ಕೀನ್ - ಚೀನದೇಶದ ನ್ಯಾನ್‍ಕಿಂಗ್ ಎಂಬ ಪುರಾತನ ಪಟ್ಟಣದಲ್ಲಿ ಪ್ರಾದೇಶಿಕವಾಗಿ ಬೆಳೆಯುವ ಹಳದಿ ಛಾಯೆಯುಳ್ಳ ಹತ್ತಿಯಿಂದ ಹಾಸು ಮತ್ತು ಹೊಕ್ಕುಗಳನ್ನು ತಯಾರಿಸಿ ಮಾಡಿದ ಬಟ್ಟೆ. ಮೊದಲು ಇದನ್ನು ಕೈಮಗ್ಗಗಳಲ್ಲಿ 46-56 ಸೆಂಮೀ ಪನ್ನದ ಸಾದಾ ನೇಯ್ಗೆಯಲ್ಲಿ ತಯಾರಿಸಲಾಯಿತು. ಆದರೆ ಲಂಕಾಷೈರ್ ನ್ಯಾನ್‍ಕೀನನ್ನು ಸಾದಾ ಹತ್ತಿಯಿಂದ ಮೂರೆಳೆಗಳ ಟ್ವಿಲ್ ನೇಯ್ಗೆಯಿಂದ ತಯಾರಿಸಿ ಹಳದೀ ಬಣ್ಣ ಹಾಕುತ್ತಾರೆ. ಇದರ ಉಪಯೋಗ ಹೆಚ್ಚಾಗಿ ಜೇಬುಗಳಿಗೆ ಮತ್ತು ಕಾರ್‍ಸೆಟ್‍ಗಳಿಗೆ ಇದೆ. ಈ ಬಟ್ಟೆ 79 ಸೆಂಮೀ ಅಗಲವಿದ್ದು ಅಂಗುಲಕ್ಕೆ 92 ಹಾಸಿನ ಎಳೆ ಮತ್ತು ಅಂಗುಲಕ್ಕೆ 72 ಹೊಕ್ಕಿನ ಎಳೆಗಳಿಂದ ತಯಾರಿಸಲ್ಪಟ್ಟಿರುತ್ತದೆ. ನೂಲಿನ ನಂಬರು-ಹಾಸು 30. ಹೊಕ್ಕು 30. ಆದರೆ ಲಂಕಾಷೈರ್ ನ್ಯಾನ್‍ಕೀನ್ ಬಟ್ಟೆ ಚೀನಾ ನ್ಯಾನ್‍ಕೀನ್ ಬಟ್ಟೆಗಿಂತ ಬಣ್ಣದಲ್ಲಿ ಕಡಿಮೆ ದರ್ಜೆಯದು.

ನ್ಯಾನ್‍ಕೀನ್ ಬಟ್ಟೆಯನ್ನು ಬಣ್ಣ ಮಾಡಿಯಾಗಲಿ ಮುದ್ರಿಸಿಯಾಗಲಿ ಉಪಯೋಗಿಸುತ್ತಾರೆ. ಇದಕ್ಕೆ ಹೆಚ್ಚು ಬಾಳ್ವಿಕೆ ಇದೆ. ಬಣ್ಣ ಕೆಂಪು. ಘರ್ಷಣ ನಿರೋಧ ಗುಣ ಉಂಟು. ಸುಕ್ಕು ಸುಕ್ಕಾಗದಂತೆ ಇದರಿಂದ ಉಡುಪನ್ನು ತಯಾರಿಸಬಹುದು. ಲಘು ಭಾರವಾದ ಈ ಬಟ್ಟೆ ಬಹುತೇಕ ಬೇಸಿಗೆಯಲ್ಲಿ ಉಪಯೋಗಿಸಲು ಆದರ್ಶ ಪ್ರಾಯವಾಗಿದೆ. (ಕೆ.ಬಿ.ಸಿ.)