ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಪಟ

ವಿಕಿಸೋರ್ಸ್ದಿಂದ

ನ್ಯಾಪಟ ಪ್ರಾಚೀನ ಈಜಿಪ್ಟಿನಲ್ಲಿ ನೈಲ್ ನದೀ ಕಣಿವೆಯಲ್ಲಿ ನೂಬಿಯದಲ್ಲಿದ್ದ ಕುಷ್ ರಾಜ್ಯದ ರಾಜಧಾನಿ (ಕ್ರಿ. ಪೂ. ಸು 750-590). ನೈಲ್ ನದಿಯ ನಾಲ್ಕನೆಯ ಜಲಪಾತದ ಕೆಳಗಡೆಯಲ್ಲಿ, ಆ ನದಿಯ ಮೇಲೆ, ಈಗಿನ ಸೂಡಾನ್ ಗಣರಾಜ್ಯದ ಉತ್ತರ ಪ್ರಾಂತ್ಯದಲ್ಲಿ ಇತ್ತು.

ನ್ಯಾಪಟ ಒಂದು ಪಟ್ಟಣವಾಗಿರಲಿಲ್ಲ. ಇದು ವಿಶಾಲ ಪ್ರದೇಶದಲ್ಲಿ ಹರಡಿತ್ತು. ಇದು ಈಜಿಪ್ಟಿನ ಪ್ರಭಾವಕ್ಕೊಳಗಾಗಿತ್ತು. ಇಲ್ಲಿಯ ಬಾರ್ಕಾಲ್ ಬೆಟ್ಟ ಈಜಿಪ್ಟಿನ ಹೊಸ ರಾಜಪ್ರಭುತ್ವದ (ಕ್ರಿ. ಪೂ. 1567-1320) ಕಾಲದಲ್ಲೇ ಒಂದು ಪವಿತ್ರ ಸ್ಥಳವಾಗಿತ್ತು; ಆಮಾನ್ ದೇವತೆಯ ಆವಾಸಸ್ಥಾನವೆಂದು ಪರಿಗಣಿತವಾಗಿತ್ತು. ಅದರ ತಪ್ಪಲಿನಲ್ಲಿ ದೇವಾಲಯಗಳ ಅವಶೇಷಗಳಿವೆ. ಕ್ರಿ. ಪೂ. 1504-1450ರಲ್ಲಿ ಆಳುತ್ತಿದ್ದ 3ನೆಯ ತೂಟ್‍ಮೋಸೆಯ ಸ್ಮಾರಕಸ್ತಂಭದಲ್ಲಿ ಉಲ್ಲೇಖಿಸಲಾಗಿರುವ ಕೋಟೆ ಇಲ್ಲಿ ಪತ್ತೆಯಾಗಿದೆ. ಏಷ್ಯನ್ ಸೆರೆಯಾಳ್ಳೊಬನನ್ನು ಇಲ್ಲಿಯ ಗೋಡೆಗೆ ನೇಣು ಹಾಕಬೇಕೆಂದು 2ನೆಯ ಆಮೆನ್ ಹೋಟೆಪ್ (ಆಳ್ವಿಕೆ ಕ್ರಿ. ಪೂ. 1450-1425) ಆಜ್ಞೆ ಮಾಡಿದ್ದ.

ಕ್ರಿ. ಪೂ. 1ನೆಯ ಸಹಸ್ರಮಾನದ ವೇಳೆಗೆ ಈಜಿಪ್ಟ್ ಕ್ಷೀಣದಶೆಗೆ ಬಂದಿತ್ತು. ಕೆಳ ಈಜಿಪ್ಟು ಸ್ವರಕ್ಷಣೆಗಾಗಿ ಲಿಬಿಯಾದ ಕೂಲಿ. ಸೈನಿಕರನ್ನು ನೇಮಿಸಿಕೊಂಡು ಬದುಕಬೇಕಾದ ಪರಿಸ್ಥಿತಿ ಬಂದಿತ್ತು. ತೀಬ್ಸ್‍ನಲ್ಲಿದ್ದ ಆಮಾನ್ ದೇವತೆಯ ಪೂಜಾರಿಗಳ ಒಂದು ಗುಂಪು ತಾನಾಗಿಯೇ ದೇಶತ್ಯಾಗಮಾಡಿ ನ್ಯಾಪಟಕ್ಕೆ ಬಂದು ನೆಲಸಿ, ಕುಷ್ ದೊರೆಗಳನ್ನು ಈಜಿಪ್ಟೀಕರಣಗೊಳಿಸಿತೆಂದೂ, ಹೀನದಶೆಯಲ್ಲಿದ್ದ ಈಜಿಪ್ಟನ್ನು ಗೆಲ್ಲಲು ಅವರಿಗೆ ಸ್ಫೂರ್ತಿ ನೀಡಿತೆಂದೂ ಹೇಳಲಾಗಿದೆ. ಈ ಕಾಲದಲ್ಲಿ (ಕ್ರಿ. ಪೂ. 750ರಿಂದ) ಪ್ರಾಚೀನ ಜಗತ್ತಿಗೆ ನ್ಯಾಪಟವೇ ರಾಜಧಾನಿಯಾಯಿತು. ದೊರೆಗಳನ್ನು ಪಿರಮಿಡಗಳಲ್ಲಿ ಸಮಾಧಿ ಮಾಡುವ ಪದ್ಧತಿ ಕುಷ್‍ಗೂ ಬಂತು. ಕ್ರಿ. ಪೂ. 689-664ರಲ್ಲಿ ಆಳಿದ ಈಜಿಪ್ಟಿಯನ್ ದೊರೆ ಟಹಾರ್ಕನ ಪಿರಮಿಡ್ ಕುಷ್ ಪ್ರದೇಶದಲ್ಲಿದೆ. ನ್ಯಾಪಟದಲ್ಲೂ ಇತರ ಎಡೆಗಳಲ್ಲೂ ಇವನು ಈಜಿಪ್ಟ್ ಶೈಲಿಯ ಅನೇಕ ದೇವಾಲಯಗಳನ್ನು ನಿರ್ಮಿಸಿದ. ಸಿರಿಯನರು ಇವನನ್ನು ಸೋಲಿಸಿ ಈಜಿಪ್ಟಿನಿಂದ ಓಡಿಸಿದರು.

ಟಹಾರ್ಕನ ಪರಾಭವದ ಅನಂತರ ಸ್ವಲ್ಪ ಕಾಲ ಕುಷ್ ದೊರೆಗಳು ಈಜಿಪ್ಟ್‍ನ್ನು ಮತ್ತೆ ಗೆಲ್ಲಲು ಯೋಚಿಸಿದರು. ಆದರೆ ಅವರ ಯೋಜನೆಗಳು ಫಲಿಸಲಿಲ್ಲ. 26ನೆಯ ವಂಶದ ದೊರೆಗಳು ಗ್ರೀಸ್ ಮತ್ತು ಕ್ಯಾರಿಯದ (ಏಷ್ಯ ಮೈನರಿನ ನೈಋತ್ಯದಲ್ಲಿದ್ದ ಪ್ರಾಚೀನ ವಿಭಾಗ) ಕೂಲಿ ಸಿಪಾಯಿಗಳ ನೆರವಿನಿಂದ ನ್ಯಾಪಟವನ್ನು ಕ್ರಿ. ಪೂ. 590ರಲ್ಲಿ ಸದೆಬಡಿದರು. ಕುಷ್‍ನ ರಾಜಧಾನಿಯನ್ನು ನ್ಯಾಪಟದಿಂದ ವರ್ಗಾಯಿಸಲಾಯಿತು. ಅನಂತರವೂ ಅದು ರಾಜ್ಯದ ಧಾರ್ಮಿಕ ಕೇಂದ್ರವಾಗಿತ್ತು. ರಾಜ ಮನೆತನದವರನ್ನು ಅಲ್ಲಿ ಸಮಾಧಿ ಮಾಡಲಾಗುತ್ತಿತ್ತು. (ಡಿ.ಎಸ್.ಜೆ.)