ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯಿಕ ಪುನರ್ವಿಲೋಕನ

ವಿಕಿಸೋರ್ಸ್ದಿಂದ

ನ್ಯಾಯಿಕ ಪುನರ್ವಿಲೋಕನ - ಸರ್ಕಾರದ ವಿಧಾಯಕ (ಲೆಜಿಸ್ಲೆಟಿವ್), ಕಾರ್ಯನಿರ್ವಾಹಕ (ಎಕ್ಸಿಕ್ಯೂಟಿವ್) ಹಾಗೂ ಆಡಳಿತಾತ್ಮಕ (ಅಡ್ಮಿನಿಸ್ಟ್ರೇಟಿವ್) ಅಂಗಗಳ ಕಾರ್ಯಗಳನ್ನು ಪರಿಶೀಲಿಸಿ, ಅಂಥ ಕಾರ್ಯಗಳು ರಾಷ್ಟ್ರ ಸಂವಿಧಾನದ ಉಪಬಂಧಗಳಿಗೆ ಅನುಗುಣವಾಗಿರುವಂತೆ ನಿಶ್ಚಿತಗೊಳಿಸಲು ಒಂದು ದೇಶದ ನ್ಯಾಯಾಲಯಗಳು ಚಲಾಯಿಸಿದ ಅಧಿಕಾರ (ಜುಡಿಷಲ್ ರಿವ್ಯೂ). ಲಿಖಿತ ಸಂವಿಧಾನದ ಅನ್ವಯ ಈ ಅಧಿಕಾರ ನೇರವಾಗಿ ಇಲ್ಲವೆ ಪರ್ಯಾಯವಾಗಿ ಪ್ರಾಪ್ತವಾಗಿದ್ದರೆ ಮಾತ್ರ ನ್ಯಾಯಾಲಯಗಳು ಇದನ್ನು ಚಲಾಯಿಸಬಹುದು. ಹಿಂದೆ ಮಾಡಲಾದ ನಿರ್ಣಯವನ್ನು ನ್ಯಾಯಾಲಯ ಪುನಃ ಪರಿಶೀಲಿಸುವುದಕ್ಕೂ ಸರ್ಕಾರದ ವಿಧಾಯಕ. ಕಾರ್ಯನಿರ್ವಾಹಕ ಹಾಗೂ ಆಡಳಿತಾತ್ಮಕ ಕ್ರಮಗಳ ಸಿಂಧುತ್ವವನ್ನು ಪರಿಶೀಲಿಸುವುದಕ್ಕೂ ಇದು ಅನ್ವಯವಾಗುತ್ತದೆ.

ವಿವಿಧ ದೇಶಗಳಲ್ಲಿ : ತನ್ನ ಹಿಂದಿನ ನಿರ್ಣಯವನ್ನು ಪುನಃ ಪರಿಶೀಲಿಸುವ ನ್ಯಾಯಾಲಯದ ಅಧಿಕಾರ ವಿಶಿಷ್ಟವಾದ್ದೇನಲ್ಲ. ಎಲ್ಲದೆ ದೇಶಗಳಲ್ಲಿಯ ನ್ಯಾಯಾಲಯಗಳಿಗೆ ತಮ್ಮ ಹಿಂದಿನ ತೀರ್ಪನ್ನು ಪರಿಶೀಲಿಸುವ ಅಧಿಕಾರ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಭಾರತದ ನ್ಯಾಯಾಲಯಗಳಿಗೂ ಇಂಥ ಅಧಿಕಾರವುಂಟು. ಭಾರತದ ಸಂವಿಧಾನದ 137ನೆಯ ಅನುಚ್ಛೇದದ ಅನ್ವಯ ಸರ್ವೋಚ್ಚ ನ್ಯಾಯಾಲಯ ತನ್ನ ಹಿಂದಿನ ನಿರ್ಣಯ ಅಥವಾ ಆದೇಶಗಳನ್ನು ಪರಿಶೀಲಿಸಬಹುದು. ದಿವಾಣೀ ಮತ್ತು ದಂಡಪ್ರಕ್ರಿಯಾ ಸಂಹಿತೆಗಳಲ್ಲಿಯೂ ಹಿಂದಿನ ನಿರ್ಣಯದ ಪರಿಶೀಲನೆಗೆ ಅವಕಾಶವಿದೆ. ಸರ್ಕಾರದ ವಿಧಾಯಕ, ಕಾರ್ಯನಿರ್ವಾಹಕ ಮತ್ತು ಪ್ರಶಾಸಕ ಕ್ರಮಗಳ ಸಿಂಧುತ್ವವನ್ನು ನಿರ್ಣಯಿಸುವ ನ್ಯಾಯಾಲಯದ ಅಧಿಕಾರ ಮಹತ್ತ್ವದ್ದು. ಗುರುತರವಾದ್ದು. ರಾಜಕೀಯ ಹಾಗೂ ಸಾಮಾಜಿಕ ಕಾರಣಗಳಿಲ್ಲದೆ ನ್ಯಾಯ ತತ್ತ್ವಗಳ ಪಾಲನೆಗಾಗಿ ಹಿಂದಿನ ನಿರ್ಣಯಗಳನ್ನು ಪುನಃ ಪರಿಶೀಲಿಸಿದ ನಿದರ್ಶನಗಳನ್ನು ಪುರಾತನ ಕಾಲದ ಸಾಹಿತ್ಯದಲ್ಲಿ ಕಾಣಬಹುದಾದರೂ ಅಧುನಿಕ ನ್ಯಾಯ ವ್ಯವಸ್ಥೆಯಲ್ಲಿ ಈ ಬಗ್ಗೆ ಇರುವ ಖಚಿತತೆ ಹಿಂದೆ ಇರಲಿಲ್ಲ.

ನ್ಯಾಯಿಕ ಪುನರ್ವಿಲೋಕನಾಧಿಕಾರದ ಪ್ರಯೋಗ ಎಲ್ಲ ದೇಶಗಳಲ್ಲೂ ಒಂದೇ ಬಗೆಯಾಗಿಲ್ಲ. ಸೋವಿಯೆತ್ ದೇಶ, ಚೀನ ಮುಂತಾದ ಕಮ್ಯೂನಿಸ್ಟ್ ದೇಶಗಳ ನ್ಯಾಯಾಲಯಗಳಿಗೆ ಈ ಅಧಿಕಾರ ಇರುವುದಿಲ್ಲ. ಸೈನಿಕ ಅಥವಾ ಆ ಮಾದರಿಯ ಆಡಳಿತ ಹೊಂದಿರುವ ದೇಶಗಳ ನ್ಯಾಯಾಲಯಗಳ ಅಧಿಕಾರವ್ಯಾಪ್ತಿ ಇನ್ನೂ ಸಂಕುಚಿತ ಸ್ವರೂಪದ್ದಾಗಿರುತ್ತದೆ. ಪ್ರಜಾಪ್ರಭುತ್ವ ಇರುವ ರಾಷ್ಟ್ರಗಳಲ್ಲೂ ಈ ಅಧಿಕಾರ ಏಕಸ್ವರೂಪದ್ದಾಗಿಲ್ಲ. ಫ್ರಾನ್ಸಿನ ನ್ಯಾಯಾಂಗಕ್ಕೆ ಈ ಅಧಿಕಾರ ಇರುವುದಿಲ್ಲ. ಬ್ರಿಟನ್ನಿನಲ್ಲಿ ಸಂಸತ್ತು ಅಂಗೀಕರಿಸಿದ ಯಾವುದೇ ಕಾನೂನಿನ ಸಿಂಧುತ್ವವನ್ನು ಪರಿಶೀಲಿಸುವ ಅಧಿಕಾರ ಯಾವ ನ್ಯಾಯಾಲಯಕ್ಕೂ ಇರುವುದಿಲ್ಲ. ಪ್ರಪಂಚದ ಕೆಲವೇ ದೇಶಗಳಲ್ಲಿ-ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಆಸ್ಟ್ರೇಲಿಯ, ಕೆನಡ ಮತ್ತು ಭಾರತದಲ್ಲಿ-ನ್ಯಾಯಾಲಯಗಳಿಗೆ ಈ ಅಧಿಕಾರವನ್ನು ವಹಿಸಿಕೊಡಲಾಗಿದೆ. ಈ ದೇಶಗಳಲ್ಲಿ ನ್ಯಾಯಾಂಗಕ್ಕೆ ಪ್ರಾಧಾನ್ಯ ದೊರಕಿದೆ. ಈ ದೇಶಗಳಲ್ಲಿರುವ ನ್ಯಾಯಪಾರಮ್ಯದ ಪ್ರಮುಖ ಲಕ್ಷಣಗಳ ಪೈಕಿ ನ್ಯಾಯಾಂಗಕ್ಕಿರುವ ನ್ಯಾಯಿಕ ಪುನರ್ವಿಲೋಕನಾಧಿಕಾರವೂ ಒಂದು.

ಬ್ರಿಟನ್ನಿನಲ್ಲಿ ವಿಧಾನಾಂಗ ಪ್ರಧಾನವಾದ್ದು. ಅಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗಗಳಿಗಿಂತ ಸಂಸತ್ತು ಹೆಚ್ಚು ಶಕ್ತವಾಗಿದೆ. ರಾಷ್ಟ್ರದ ಕಾರ್ಯಾಂಗ, ವಿಧಾನಾಂಗ ಮತ್ತು ನ್ಯಾಯಾಂಗಗಳ ಕಾರ್ಯ ಮತ್ತು ಅಧಿಕಾರಗಳ ವ್ಯಾಪ್ತಿಯ ನಿರ್ದಿಷ್ಟತೆ ಲಿಖಿತ ಸಂವಿಧಾನದ ಮೂಲಲಕ್ಷಣವಾಗಿದೆ. ಬ್ರಿಟನ್ನಿನಲ್ಲಿ ಲಿಖಿತ ಸಂವಿಧಾನ ಇಲ್ಲದಿರುವುದು ಅಲ್ಲಿಯ ವಿಧಾನಾಂಗದ ಪರಮಾಧಿಕಾರಕ್ಕೆ ಕಾರಣವೆನ್ನಬಹುದು. ಅಲ್ಲಿಯ ಸಂಸತ್ತು ನ್ಯಾಯಾಂಗದ ನಿರ್ಣಯವನ್ನು ರದ್ದುಗೊಳಿಸುವ ಅಧಿಕಾರ ಹೊಂದಿರುತ್ತದೆ. ಆದರೂ ಅಲ್ಲಿಯ ನ್ಯಾಯಾಲಯಗಳು ಕಾರ್ಯಾಂಗ ಮತ್ತು ಅಧಿಕಾರಿಗಳು ಹೊರಡಿಸಿದ ಆಜ್ಞೆಗಳ ಮತ್ತು ಆಡಳಿತ ಸ್ವರೂಪದ ನಿಯಮಗಳ ಸಿಂಧುತ್ವವನ್ನು ಕುರಿತು ನಿರ್ಣಯ ಕೊಡಬಹುದು.

ನ್ಯಾಯಿಕ ಪುನರ್ವಿಲೋಕನಾಧಿಕಾರದ ಇತಿಹಾಸದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಫೆಡರಲ್ ಮತ್ತು ರಾಜ್ಯ ಉಚ್ಚ ನ್ಯಾಯಾಲಯಗಳು ಕೊಟ್ಟಿರುವ ತೀರ್ಪುಗಳು ಬಹಳ ಮುಖ್ಯವಾಗಿವೆ. ಈ ದಿಶೆಯಲ್ಲಿ 1803ರಲ್ಲಿ ಮಾರ್ಬರಿ ವಿ. ಮ್ಯಾಡಿಸನ್ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಜಾನ್ ಮಾರ್ಷಲ್ ನೀಡಿದ ನಿರ್ಣಯ ಮುಖ್ಯ ಘಟ್ಟವೆನ್ನಬಹುದು. ಅಲ್ಲಿಯ ಕಾಂಗ್ರೆಸ್ ಮಾಡಿದ ಶಾಸನವನ್ನು ಅಮಾನ್ಯ ಮಾಡುವ ಅಧಿಕಾರವನ್ನು ಅವರು ಒತ್ತಿ ಹೇಳಿದರು. ಕಾರ್ಯಾಂಗ ಮತ್ತು ನ್ಯಾಯಾಂಗಗಳ ಚಕಮಕಿ ಅಧ್ಯಕ್ಷ ರೂಸ್‍ವೆಲ್ಟರ ಕಾಲದಲ್ಲಿ ಅಧಿಕವಾಯಿತು. ಟ್ರೂಮನರು ಅಮೆರಿಕದ ಅಧ್ಯಕ್ಷರಾಗಿದ್ದಾಗ 1952ರ ಉಕ್ಕಿನ ಕೈಗಾರಿಕೆಯ ಅಭಿಗ್ರಹಣದ ಪ್ರಕರಣದಲ್ಲಿ ನ್ಯಾಯಿಕ ಪುನರ್ವಿಲೋಕನದ ಅಧಿಕಾರ ವ್ಯಾಪ್ತಿಯನ್ನು ಕುರಿತಂತೆ ಒಮ್ಮತವಿತ್ತು. 1954ರಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ವರ್ಣಭೇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೋರಿಸಿದ ತನ್ನ ನ್ಯಾಯಿಕ ಪುನರ್ವಿಲೋಕನಾಧಿಕಾರದ ಪ್ರಜ್ಞೆಯಿಂದ ನ್ಯಾಯಾಂಗಕ್ಕೂ ರಾಷ್ಟ್ರಕ್ಕೂ ಘನತೆ ಉಂಟಾಗಿದೆಯೆನ್ನಲಾಗಿದೆ.

ಆಸ್ಟ್ರೇಲಿಯದ ಕೇಂದ್ರಿಯ ಮತ್ತು ಪ್ರಾಂತೀಯ ವಿಧಾನಾಂಗಗಳ ಯಾವುದೇ ಕಾನೂನನ್ನು ಮತ್ತು ಕಾರ್ಯಾಂಗದ ಯಾವುದೇ ಕ್ರಮವನ್ನು, ಅವು ಸಂವಿಧಾನಕ್ಕೆ ವಿರೋಧವಾಗಿದ್ದರೆ, ಅಮಾನ್ಯವೆಂದು ಅಲ್ಲಿಯ ಉಚ್ಚ ನ್ಯಾಯಾಲಯ ಘೋಷಿಷಬಹುದಾಗಿದೆ. ಕೆನಡದ ಸರ್ವೋಚ್ಚ ನ್ಯಾಯಾಲಯವೂ ಈ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಪಶ್ಚಿಮ ಜರ್ಮನಿಯ ಸಂವೈಧಾನಿಕ ನ್ಯಾಯಾಲಯಕ್ಕೆ ಈ ಅಧಿಕಾರವಿದೆ. ಅಲ್ಲಿ 1961ರಲ್ಲಿ ಅಡೆನಾವರರ ಸರ್ಕಾರದ ಕೆಲವು ಯಾದೃಚ್ಛಿಕ ಕ್ರಮಗಳನ್ನು ಖಂಡಿಸುವಾಗ ಅಮೆರಿಕದ ನ್ಯಾಯಿಕ ಮೌಲ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಯಿತು. ಇಟಲಿಯಲ್ಲಿ ಕಾನೂನಿನ ಸಿಂದುತ್ವವನ್ನು ಕುರಿತು ಅಧಿಕಾರ ಚಲಾಯಿಸಲು ಸಂವೈಧಾನಿಕ ನ್ಯಾಯಾಲಯವನ್ನು ಅಸ್ತಿತ್ವಕ್ಕೆ ತರಲಾಗಿದೆ. 1946ರ ಹೊಸ ಸಂವಿಧಾನದ 81ನೆಯ ಪರಿಚ್ಛೇದದನ್ವಯ ಜಪಾನಿನ ಸರ್ವೋಚ್ಚ ನ್ಯಾಯಾಲಯಕ್ಕೆ ಈ ಅಧಿಕಾರ ಪ್ರಾಪ್ತವಾಗಿದೆ. ಸ್ವಿಟ್‍ಜóರ್‍ಲೆಂಡಿನಲ್ಲಿ ಫೆಡರಲ್ ಕಾನೂನುಗಳನ್ನು ಸದಾ ಸಿಂಧುವೆಂದು ಗ್ರಹಿಸಲಾಗುವುದು. ಆದರೆ ಕ್ಯಾಂಟಿನ್ ಕಾನೂನುಗಳು ಫೆಡರಲ್ ಸಂವಿಧಾನಕ್ಕೆ ಹಾಗೂ ಕಾನೂನುಗಳಿಗೆ ವಿರೋಧವಾಗಿದ್ದರೆ ಅಂಥ ಕಾನೂನುಗಳನ್ನು ನ್ಯಾಯಾಲಯಗಳು ಅನೂರ್ಜಿತವೆಂದು ಸಾರಬಹುದು.

ಭಾರತದಲ್ಲಿ: ನ್ಯಾಯಿಕ ಪುನರ್ವಿಲೋಕನದ ಅಧಿಕಾರವನ್ನು ಚಲಾಯಿಸುವ ನ್ಯಾಯಾಂಗ ವ್ಯವಸ್ಥೆಯುಳ್ಳ ಅಗ್ರಗಾಮಿ ದೇಶಗಳಲ್ಲಿ ಭಾರತವೂ ಒಂದಾಗಿದೆ. ಭಾರತ ಸಂವಿಧಾನದ ಸ್ವರೂಪ. ಕೇಂದ್ರ ಹಾಗೂ ರಾಜ್ಯಗಳ ವಿಧಾನ ಮಂಡಲಗಳ ಕಾನೂನು ರಚನಾಧಿಕಾರದ ಸೃಷ್ಟಿ ವಿಭಜನೆ, ವಿಧಾನಾಂಗ ಮತ್ತು ಕಾರ್ಯಾಂಗಗಳ ಕಾರ್ಯಕ್ಷೇತ್ರದ ನಿರ್ದಿಷ್ಟ ವ್ಯಾಪ್ತಿ ಮತ್ತು ನ್ಯಾಯಾಂಗದ ವಿಶಿಷ್ಟ ಸ್ಥಾನ-ಇವು ನ್ಯಾಯಿಕ ಪುನರ್ವಿಲೋಕನಾಧಿಕಾರದ ಪ್ರಯೋಗಕ್ಕೆ ಅವಕಾಶ ಕಲ್ಪಿಸಿಕೊಟ್ಟಿವೆ. ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳು ಈ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಸಂಸತ್ತು ಮತ್ತು ರಾಜ್ಯಗಳ ವಿಧಾನ ಮಂಡಲಗಳು ಅಂಗೀಕರಿಸಿದೆ ಕಾನೂನುಗಳ ಹಾಗೂ ಕಾರ್ಯಾಂಗದ ಆಜ್ಞೆಯ ಮತ್ತು ಇತರ ಕ್ರಮಗಳ ಸಿಂಧುತ್ವವನ್ನು ವಿವೇಚಿಸುವ ಮತ್ತು ಅವು ಸಂವಿದಾನಕ್ಕೆ ವಿರೋಧ ಅಥವಾ ವ್ಯತಿರಿಕ್ತವಾಗಿವೆಯೇ ಎಂದು ನಿರ್ಣಯ ಕೊಡುವ ಈ ನ್ಯಾಯಾಲಯಗಳ ಅಧಿಕಾರವ್ಯಾಪ್ತಿಯ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ಸಂವಿಧಾನಕ್ಕೆ ಮಾಡಲಾದ ತಿದ್ದುಪಡಿಗಳು, ಕೆಲವೊಂದು ರೀತಿಯ ವಿವಾದಗಳನ್ನು ನ್ಯಾಯಾಂಗದ ವಿಚಾರಣಾಧಿಕಾರದ ವ್ಯಾಪ್ತಿಗೆ ಒಳಪಡದಂತೆ ಘೋಷಿಸುವ ಕಾನೂನುಗಳು ಅಥವಾ ಸಂವಿಧಾನದ ತಿದ್ದುಪಡಿಗಳು, ಕೆಲವು ರೀತಿಯ ಕಾನೂನುಗಳ ಸಿಂಧುತ್ವದ ಸಂಬಂಧದಲ್ಲಿ ನ್ಯಾಯಾಂಗಕ್ಕೆ ಪರಿಶೀಲನಾಧಿಕಾರದ ಅವಕಾಶವಿಲ್ಲದರುವಂತೆ ಸಂವಿಧಾನದ ತಿದ್ದುಪಡಿಗಳು, ಮುಂತಾದವಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನ್ಯಾಯಿಕ ಪುನರ್ವಿಲೋಕನಾಧಿಕಾರವನ್ನು ಚಲಾಯಿಸಬಹುದೆ, ಇಲ್ಲವೆ ಎಂಬುದರ ಬಗ್ಗೆ ಈಚೆಗೆ ವಾದ ಬೆಳೆದಿದೆ.

ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಬಗ್ಗೆ ಸಂಸತ್ತಿನ ಪರಮಾಧಿಕಾರದ ಬಗ್ಗೆ ಏಕಾಭಿಪ್ರಾಯವಿಲ್ಲ. ಸಂಸತ್ತು ಇಂಗ್ಲೆಂಡಿನ ವಿಧಾನಾಂಗದಂತೆ ಪರಮಾಧಿಕಾರ ಹೊಂದಿದ್ದು ಸಂವಿಧಾನ ಸಭೆಗೆ ಇರುವ ಎಲ್ಲ ಅಧಿಕಾರಗಳನ್ನು ಹೊಂದಿರುವುದೆಂದೂ ಸಂವಿಧಾನವನ್ನು-ತಿದ್ದುಪಡಿಗೆ ಸಂಬಂಧಿಸಿದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು-ಹೇಗೆ ಬೇಕಾದರೂ ಮಾರ್ಪಾಟು ಮಾಡಬಹುದೆಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಸಂವಿಧಾನದ ಮೂಲರಚನೆಯನ್ನು ಬದಲಾಯಿಸುವ ಅಧಿಕಾರ ಮಾತ್ರ ಸಂಸತ್ತಿಗಿಲ್ಲವೆಂಬ ಅಭಿಪ್ರಾಯ ಪ್ರಬಲವಾಗಿದೆ. ಸಂವಿಧಾಯೀ ಸ್ವರೂಪದ ಪರಮಾಧಿಕಾರ ಸಂಸತ್ತಿಗಿಲ್ಲವೆ ಎಂಬುದು ಭಾರತೀಯ ಸಂವೈಧಾನಿಕ ವಿಧಿಯ ಪಂಡಿತರ ಮತ್ತು ಶ್ರೇಷ್ಠ ನ್ಯಾಯಾಲಯದ ಪರಿಶೀಲನೆಯ ವಿಷಯವಾಗಿದೆ. ಸಂಸತ್ತಿಗೆ ಸಂವಿಧಾಯೀ ಪರಮಾಧಿಕಾರ ಇದೆ ಎಂದಾದರೆ ಅಂಥ ಅಧಿಕಾರದನ್ವಯ ಸಂವಿಧಾನಕ್ಕೆ ಮಾಡಲಾಗುವ ತಿದ್ದುಪಡಿಗಳು ಮತ್ತು ತದನ್ವಯ ಮಾಡಲಾಗುವ ಕಾನೂನುಗಳು ಸದಾ ಸಿಂಧುವೆಂದು ಗ್ರಹಿಸಬೇಕು ಮತ್ತು ಅವು ಪರಮೋಚ್ಚ ನ್ಯಾಯಾಲಯದ ನ್ಯಾಯಿಕ ಪುನರ್ವಿಲೋಕನಾಧಿಕಾರದ ವ್ಯಾಪ್ತಿಗೊಳಪಡುವುದಿಲ್ಲ.

ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ನ್ಯಾಯ ಪುನರ್ವಿಲೋಕನದ ತಮ್ಮ ಅಧಿಕಾರವನ್ನು ಚಲಾಯಿಸುತ್ತ ಬಂದಿವೆ ಮತ್ತು ಆ ಕಾರಣದಿಂದಾಗಿ ನ್ಯಾಯಿಕ ಪುನರ್ವಿಲೋಕನಾಧಿಕಾರವನ್ನು ಕುರಿತ ನ್ಯಾಯ ಪರಂಪರೆ ಬೆಳೆದುಕೊಂಡು ಬಂದಿದೆ. ಅನೇಕ ಪ್ರಕರಣಗಳಲ್ಲಿ ನ್ಯಾಯಾಂಗ ತನ್ನ ನ್ಯಾಯಿಕ ಪುನರ್ವಿಲೋಕನದ ಅಧಿಕಾರವನ್ನು ಪ್ರಯೋಗಿಸಿರುವ ವಿಧಾನ ಇತರ ರಾಷ್ಟ್ರಗಳ ನ್ಯಾಯಾಲಯಗಳಿಗೆ ಮಾರ್ಗದರ್ಶಕವಾಗಿದೆ. (ಎಲ್.ಎಸ್.ಜೆ.)