ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯ ತತ್ತ್ವ

ವಿಕಿಸೋರ್ಸ್ದಿಂದ

ನ್ಯಾಯ ತತ್ತ್ವ - ಕಾನೂನಿನ ಹುಟ್ಟು, ಬೆಳವಣಿಗೆ, ವ್ಯಾಪ್ತಿ, ಸ್ವರೂಪ, ಉದ್ದೇಶ, ವಿಧಾನ, ಇತಿಮಿತಿಗಳು, ಕಾನೂನಿಗೂ ನ್ಯಾಯನೀತಿಗಳಿಗೂ ಇರುವ ಸಂಬಂಧ, ಐತಿಹಾಸಿಕವಾಗಿ ಕಾನೂನು ಬದಲಾವಣೆಗೊಂಡು ಬೆಳೆಯುವ ಬಗೆ ಮುಂತಾದವನ್ನು ಕುರಿತ ಮೂಲಭೂತ ಪ್ರಶ್ನೆಗಳ ವಿವೇಚನೆ (ಜೂರಿಸ್ಪ್ರೂಡೆನ್ಸ್) ಕಾನೂನಿನ ಗ್ರಂಥಸ್ಥ ರೂಪವನ್ನಷ್ಟೇ ಲಕ್ಷ್ಯಕ್ಕೆ ತೆಗೆದುಕೊಂಡರೆ ಅದು ಕೇವಲ ನಿಯಮಗಳ ಸಮುದಾಯದ ನಿರೂಪಣೆಯೆನಿಸುತ್ತದೆ. ಅದರ ಕಾರ್ಯಭಾರದ ಉದ್ದೇಶಗಳ ದೃಷ್ಟಿಯಿಂದ ನೋಡಿದಾಗ ಅದು ಸಮಾಜದ ಧಾರಣೆ ಪೋಷಣ ನಿಯಂತ್ರಣಗಳ ಅತ್ಯಂತ ಸಮರ್ಥವಾದ ಸಾಧನವೆನಿಸುತ್ತದೆ. ಅದು ವಿಶ್ವವನ್ನು ಎತ್ತಿಹಿಡಿದಿರುವ ಮಹಾಶಕ್ತಿ ಎಂದು ಸಂಸ್ಕøತದಲ್ಲಿ ಉಕ್ತಿಯಿದೆ. ಅದು ಸಮಾಜದ ಬಲವಾದ ಆಧಾರ. ಇಂಥ ವ್ಯಾಖ್ಯಾನ ಭಾರತದ ಶ್ರುತಿಸ್ಮøತಿಗಳಲ್ಲಿ ಕಂಡು ಬರುತ್ತದೆ.

ಕಾನೂನಿನ ಈ ಎರಡೂ ಮುಖಗಳೂ ಪರಸ್ಪರಾವಲಂಬಿಗಳು. ಇವು ಅವಿಚ್ಛಿನ್ನವಾಗಿ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟಿದೆ. ನಿಯಮಗಳ ನಿರೂಪಣೆಯ ಉದ್ದೇಶವಾಗಲಿ ಕಾರ್ಯವಾಗಲಿ ಶಬ್ದಾಡಂಬರವಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಬೇಕಾದ್ದನ್ನು (ಕಾರ್ಯ) ಅದೇಶಿಸಿ, ಮಾಡಬಾರದ್ದನ್ನು (ಅಕಾರ್ಯ) ಪ್ರತಿಷೇಧಿಸಿ, ಕಾರ್ಯದ ಪ್ರಯೋಜನವನ್ನೂ ಅಕಾರ್ಯದ ಅಪಾಯವನ್ನೂ (ಶಿಕ್ಷೆಗೆ ತುತ್ತಾಗುವ ಭಯ ಮೊದಲಾದವು) ತಿಳಿಸಿ, ಸಮಾಜಹಿತಕ್ಕೆ ವಿರೋಧವಾಗದಂತೆ ಸಮಾಜಜೀವಿ ತನ್ನ ಹಿತ ಸಾಧಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಅನುವಾಗಿ, ಅವನ ನಡತೆಯನ್ನು ರೂಪಿಸಲು ಚೋದಿಸಿ, ಕರ್ತವ್ಯದತ್ತ ಪ್ರೇರೇ¥ಪಣೆ ನೀಡಿ, ಸಮಾಜದ ಧಾರಣೆ, ಪೋಷಣೆ, ನಿಯಂತ್ರಣದ ಕಾರ್ಯವನ್ನು ಸಾಧಿಸುತ್ತದೆ. ಕಾನೂನಿನ ನಿಯಮಗಳ ಯೋಗ್ಯ ನಿರೂಪಣೆಯೇ ಅದರ ಆಚರಣೆಗೆ ತಳಹದಿಯಾಗಿರುತ್ತದೆ. ಆಚರಣೆ ಸಮಾಜದ ಹಿತದ ಸಾಧನೆಗೆ ತಳಹದಿ. ಈ ರೀತಿಯಾಗಿ ಕಾನೂನಿನ ಈ ಎರಡೂ ಮುಖಗಳು ಅನ್ಯೋನ್ಯವಾಗಿ ಹೊಂದಿಕೊಂಡಿದ್ದು, ಒಂದಕ್ಕೊಂದು ಪೋಷಕವಾಗಿವೆ. ಕಾನೂನಿನ ಶಾಸ್ತ್ರೀಯ ಅಭ್ಯಾಸದಲ್ಲಿ ಈ ಎರಡು ದೃಷ್ಟಿಕೋನಗಳೂ ಆವಶ್ಯಕ.

ಹೀಗೆ ಕಾನೂನಿನ ಈ ಎರಡು ಸ್ಥೂಲವಾದ ಅಂಶಗಳಲ್ಲಿ ಒಂದೊಂದನ್ನೂ ಪ್ರಧಾನವಾಗಿ ಇಟ್ಟುಕೊಂಡು ಅದನ್ನು ಅನೇಕ ಬಗೆಯ ಶಾಸ್ತ್ರೀಯ ಅಭ್ಯಾಸಗಳ ವಿಷಯವನ್ನಾಗಿ ಮಾಡಿ ವಿದ್ವಾಂಸರು ನ್ಯಾಯತತ್ತ್ವದಲ್ಲಿ ವಿವಿಧ ಶಾಖೋಪಶಾಖೆಗಳನ್ನು ರೂಪಿಸಿ ಉದ್ಗ್ರಂಥಗಳನ್ನು ರಚಿಸಿದ್ದಾರೆ. ಸಮಸ್ತ ಮಾನವ ಜಾತಿಯ ಸಮಗ್ರ ಜೀವನವನ್ನು ಕೆಲವೆಡೆಗಳಲ್ಲಿ ನಿಕಟವಾಗಿ. ಕೆಲವಡೆಯಲ್ಲಿ ಸ್ವಲ್ಪ ದೂರದಿಂದ ಸ್ಪರ್ಶಿಸುವ ಈ ಅಧ್ಯಯನಕ್ಷೇತ್ರಕ್ಕೆ ಅನೇಕ ಮುಖಗಳೂ ಅನೇಕ ದೃಷ್ಟಿಗಳೂ ಇರುವುದು ಸಹಜ. ಯಾವ-ಅಭ್ಯಾಸವೂ ಯಾವ ವಿಮರ್ಶೆಯೂ ಈ ವಿಷಯದಲ್ಲಿ ಸರ್ವವ್ಯಾಪಿತ್ವವನ್ನು ಹೊಂದುವುದು ಅಸಾಧ್ಯ. ಸಮಾಜ ವಿಕಾಸ ಹೊಂದುತ್ತ ಜಟಿಲತೆಯನ್ನೂ ವಿಶಾಲತೆಯನ್ನೂ ಹೊಂದಿದಂತೆ ಸಮಾಜ ನಿಯಂತ್ರಣದ ಪ್ರಧಾನ ಸಾಧನವಾದ ಕಾನೂನೂ ಹೆಚ್ಚು ಹೆಚ್ಚು ವ್ಯಾಪಕವೂ ಗಡಚಾದ್ದೂ ಆಗುತ್ತ ಹೋಗುತ್ತದೆ. ಈ ಲೇಖನದಲ್ಲಿ ಇಂಥ ಕೆಲವು ವಿವೇಚನ ಪದ್ಧತಿಗಳ ಸ್ಥೂಲಸ್ವರೂಪಗಳ ಹಾಗೂ ಫಲಿತಾಂಶಗಳ ಸ್ಥೂಲ ಪರಿಚಯ ಮಾಡಿಕೊಡಲು ಯತ್ನಿಸಲಾಗಿದೆ.

ಮಥನಾತ್ಮಕ ವಿವೇಚನೆ: ಇಂಗ್ಲೆಂಡಿನಲ್ಲಿ ಪೂರ್ವದಲ್ಲಿ ಬೇಕನ್ ಮೊದಲಾದ ವಿದ್ವಾಂಸರು ಇಂಗ್ಲಿಷ್ ನ್ಯಾಯದ ಮೇಲೆ ಪಾಂಡಿತ್ಯಪೂರ್ಣವಾದ ಪ್ರಮಾಣ ಗ್ರಂಥಗಳನ್ನು ಬರೆದಿದ್ದರು, ಅವು ಅದರ ಒಂದು ಭಾಗದ ಇಲ್ಲವೇ ಎಲ್ಲ ಭಾಗಗಳ ಸಂಕ್ಷಿಪ್ತವಾದ ಇಲ್ಲವೇ ವಿಸ್ತಾರವಾದ ವಿವರಣೆಯನ್ನು ಕೊಟ್ಟಿದ್ದರೂ ಅದರ ಸಮಗ್ರ ಸ್ವರೂಪ, ಗುರಿ ಮೌಲ್ಯಮಾಪನ ತತ್ತ್ವಗಳು, ಸುಧಾರಣೆಯ ಸೂಚನೆಗಳು, ಇವುಗಳ ಶಾಸ್ತ್ರೀಯ ವಿವೇಚನೆ ಜೆರಮಿ ಬೆಂಥ್ಯಮನಿಂದ (1748-1832) ಪ್ರಾರಂಭವಾಯಿತೆನ್ನಬಹುದು ಅದೇ ಪದ್ಧತಿಯ ಒಂದು ದಿಶೆಯ ವಿವೇಚನೆ ಜಾನ್ ಆಸ್ಟಿನನಲ್ಲಿ (1790-1859) ವಿಸ್ತಾರವನ್ನು ಪಡೆದು ಪಂಡಿತರಲ್ಲಿ ಪ್ರಸಾರ ಗಳಿಸಿತು. ನೀತಿ, ಶಿಷ್ಟಚಾರ, ಧಾರ್ಮಿಕ ಕಟ್ಟಳೆಗಳು ಮೊದಲಾದ, ಮನುಷ್ಯನ ನಡತೆಯನ್ನು ರೂಪಿಸುವ, ನಿಯಮ ಜಾಲಗಳಲ್ಲಿದ್ದ ಕಾನೂನಿನ ನಿಯಮಗಳನ್ನು ವಿಂಗಡಿಸಿ ಗುರುತಿಸುವಂಥ ವ್ಯಾಖ್ಯೆಯನ್ನೂ ಒಂದು ವಿಶೇಷವಾದ ತತ್ತ್ವವಿವೇಚನೆಯ ಪದ್ಧತಿಯನ್ನೂ ಆಸ್ಟಿನ್ ಅನುಸರಿಸಿದ. ಈ ಪದ್ಧತಿಯ ಮುಖ್ಯ ಲಕ್ಷಣವೆಂದರೆ ಕಾನೂನಿನ ಯಥಾರ್ಥ ಸ್ವರೂಪದ ಅಭ್ಯಾಸ. ಅಸ್ಟಿನ್ ತನ್ನ ಗ್ರಂಥದ ಕೆಲವು ಭಾಗಗಳಲ್ಲಿ ಕಾನೂನಿನ ಗುರಿಯನ್ನು ಚರ್ಚಿಸಿದ್ದರೂ ಕಾನೂನಿನ ಮೌಲ್ಯಮಾಪನೆಗೆ, ಸುಧಾರಣೆಗೆ, ಅದರ ಆದರ್ಶ ಸ್ವರೂಪವನ್ನು ಕಂಡುಹಿಡಿಯುವುದಕ್ಕೆ ಅದು ಉಪಯುಕ್ತವೆಂದು ಸೂಚಿಸಿ. ಕಾನೂನಿನ ಆದರ್ಶಸ್ವರೂಪದ ಶೋಧನೆ ತನ್ನ ಪ್ರಧಾನ ಗುರಿಯಲ್ಲವೆಂದೂ ಯಥಾರ್ಥ ಸ್ವರೂಪದ ಶಾಸ್ತ್ರೀಯ ಅಭ್ಯಾಸವೇ ತನ್ನ ಗುರಿಯೆಂದೂ ಸಾರಿದ. ಇದಕ್ಕೆ ಅನುಸಾರವಾಗಿ ಕಾನೂನಿನ ವ್ಯಾಖ್ಯೆಯನ್ನು ಕಲ್ಪಿಸಿಕೊಂಡು, ಆ ವ್ಯಾಖ್ಯೆಯ ಮೂಲಕ ಕಾನೂನನ್ನು ಅನ್ಯನಿಯಮಗಳಿಂದ ಬೇರ್ಪಡಿಸಿದ. ಅಸ್ಟಿನನ ವ್ಯಾಖ್ಯೆಯಂತೆ ಕಾನೂನು ಆಯಾ ದೇಶದಲ್ಲಿ ಆಯಾ ಕಾಲಕ್ಕೆ ಸಾರ್ವಭೌಮತ್ವವನ್ನು ಹೊಂದಿದವರ ಆದೇಶ (ಆಜ್ಞೆ) ಅಥವಾ ಅಧಿಕಾರವಾಣಿ, ಎಂದರೆ ತಮ್ಮ ಆಳ್ವಿಕೆಗೆ ಒಳಪಟ್ಟವರಿಗೆ ದಂಡೆಯ ಬೆದರಿಕೆ ನೀಡಿ ಕರ್ತವ್ಯವನ್ನು ವಿಧಿಸುವ, ಇಲ್ಲವೇ ಅಕರ್ತವ್ಯವನ್ನು ಪ್ರತಿಷೇಧಿಸುವ ಸಾರ್ವಭೌಮ ವಚನ. ಈ ಸಾರ್ವಭೌಮತ್ವ ಅಶೋಕ, ಅಕ್ಬರ್ ಮುಂತಾದವರಲ್ಲಿದ್ದಂತೆ ವ್ಯಕ್ತಿಗತವಾಗಬಹುದು; ಅಥವಾ ಭಾರತದ ಅಥವಾ ಬ್ರಿಟನ್ನಿನ ಸಂಸತ್ತಿನಂಥ ಸಂಸ್ಥೆಗೆ ಸೇರಿದ್ದಿರಬಹುದು: ಅಂಥ ಆದೇಶ ಸಾರ್ವಭೌಮನಿಂದ ನೇರವಾಗಿ ಬರಬಹುದು. ಇಲ್ಲವೇ ಅವನಿಂದ ನಿಯುಕ್ತವಾದ ನ್ಯಾಯಾಧೀಶರು, ಮಂತ್ರಿಗಳು ಮೊದಲಾದ ಅಧಿಕಾರಿಗಳ ಮುಖಾಂತರ ಬರಬಹುದು. ಈ ವ್ಯಾಖ್ಯೆಯೇ ಆಸ್ಟಿನನವಾದದ ಅಡಿಗಲ್ಲು. ಇಲ್ಲಿ ಕಾನೂನು ಒಂದು ಬಗೆಯ ಆದೇಶವೆಂಬ ವಿಷಯವನ್ನು ಪ್ರಧಾನವಾಗಿ ಇಟ್ಟುಕೊಂಡಿರುವುದರಿಂದ ಆಸ್ಟಿನನ ವ್ಯಾಖ್ಯೆಗೆ ಸೇರುವ ಕಾನೂನಿನ ವಿವೇಚನೆಯನ್ನು ಆದೇಶವಾದವೆಂದೂ ಕರೆಯುವುದುಂಟು.

ಇದಲ್ಲದೆ ಈ ಶಾಖೆಗೆ ಸೇರಿದ ನ್ಯಾಯತಜ್ಞರು ಒಂದು ವಿಶಿಷ್ಟವಾದ ವಿವೇಚನ ಪದ್ಧತಿಯ ಪುರಸ್ಕರ್ತರೂ ಅದರು. ಅದರ ವೈಶಿಷ್ಟ್ಯವೇನೆಂದರೆ, ಮೇಲೆ ಹೇಳಿದ ವ್ಯಾಖ್ಯೆಗೆ ಅನುಗುಣವಾಗಿ ಕಾನೂನಿನ ನಿಯಮಗಳನ್ನು ಗುರುತಿಸಿ, ಅಂಥ ನಿಯಮ ಸಮುದಾಯಗಳನ್ನು ವಿಶ್ಲೇಷಿಸಿ, ಮಥಿಸಿ, ಅವುಗಳ ವೈವಿಧ್ಯಮಯವಾದ ಬಾಹ್ಯ ಸ್ವರೂಪವನ್ನು ಭೇಧಿಸಿ, ಅದರಲ್ಲಿ ಅಡಕವಾಗಿರುವ ಮೂಲತತ್ತ್ವಗಳನ್ನು ಶೋಧಿಸಿ, ಸಂಗ್ರಹಿಸಿ, ಪೋಣಿಸಿ, ಸುಸಂಶ್ಲಿಷ್ಟಗೊಳಿಸಿ ಮಂಡಿಸುವುದು ಮತ್ತು ಅವುಗಳ ಅಧಾರದಿಂದ ತಾರ್ಕಿಕವಾಗಿ ಹೊರಡುವ ಅನಮಾನುಗಳನ್ನು ವಿವರಿಸುವುದು, ಹೊರದೃಷ್ಟಿಗೆ ವಿರೋಧಾಭಾಸವನ್ನುಂಟುಮಾಡುವ ನಿಯಮಗಳಲ್ಲಿ ಸಮನ್ವಯವನ್ನು ಸಾಧಿಸುವುದು-ಇವೇ ಮೊದಲಾದ ತಾರ್ಕಿಕ ಕ್ರಮದ ಕಾರ್ಯಗಳು. ಈ ತರದ ಅಭ್ಯಾಸದಲ್ಲಿ ಕಾನೂನಿನ ಮಥನ ಹಾಗೂ ತತ್ತ್ವವಿವೇಚನೆಗಳು ಪ್ರಧಾನ ಕಾರ್ಯವಾದ್ದರಿಂದ ಇದನ್ನು ಮಥನಾತ್ಮಕ ವಿವೇಚನೆ ಎಂದು ಕರೆಯಬಹುದು.

ಇಂಥ ಗ್ರಂಥಗಳಲ್ಲಿ ಕಾನೂನಿನ ವ್ಯಾಖ್ಯೆಯ ಪ್ರತಿಯೊಂದು ಅಂಶದ ವಿವರಣೆ. ಕಾನೂನಿನ ವರ್ಗೀಕರನ, ಕಾನೂನಿನಲ್ಲಿ ಬಳಸುವ ಪಾರಿಭಾಷಿಕ ಶಬ್ದಗಳ ವ್ಯಾಖ್ಯೆ ಮತ್ತು ಅದರಲ್ಲಿ ಬರುವ ಪರಿಕಲ್ಪನೆಗಳ ವಿವೇಚನೆ ಇರುತ್ತದೆ.

ಕ್ರಿಯಾತ್ಮಕ ವಿವೇಚನೆ: ಕೆಲವು ಪಂಡಿತರು ಅಸ್ಟಿನನ ವ್ಯಾಖ್ಯೆಯ ಅಧಾರದ ಮೇಲೆ ನಾಯಕತತ್ತ್ವವನ್ನು ರಚಿಸುವ ವಿಷಯದಲ್ಲಿ ಸಂಶಯ ತಳೆದು ಕೆಲವು ಆಕ್ಷೇಪಗಳನ್ನು ಎತ್ತುತ್ತಾರೆ. ಕಾನೂನು ಸರ್ವಸ್ವತಂತ್ರರಾದ ಭಿನ್ನಭಿನ್ನ ಸಾರ್ವಭೌಮರ ಸ್ವಚ್ಛಂದ ಆದೇಶಗಳ ಸಮುಚ್ಚಯವೆಂದರೆ, ಅವುಗಳೆಲ್ಲದರಲ್ಲಿ ಒಂದೇ ರೂಪದ ಮೂಲತತ್ತ್ವಗಳು ದೊರೆಯುವುದಿಲ್ಲ; ಅವುಗಳಲ್ಲಿ ಸುಸಂಶ್ಲಿಷ್ಟತೆ ಬಾರದು; ಅವೆಲ್ಲವನ್ನೂ ಪರಸ್ಪರ ವಿರೋಧವಿಲ್ಲದ ಕೆಲವೇ ಪ್ರಧಾನಸೂತ್ರಗಳ ಪರಿವಿಡಿಯಲ್ಲಿ ಹೊಂದಿಸಿ ವಿವರಿಸುವಂಥ ಶಾಸ್ತ್ರೀಯ ಮಂಡನೆ ಸಾಧ್ಯವಾಗದು. ಇವು ಇವರ ಆಕ್ಷೇಪಗಳು.

ಈ ಸಮಸ್ಯೆಯನ್ನು ಬೇರೆಬೇರೆ ಪಂಡಿತರು ಬೇರೆಬೇರೆ ರೀತಿಯಿಂದ ಬಗೆಹರಿಸಲು ಯತ್ನಿಸುತ್ತಾರೆ. ಕೆಲವರು ಎಲ್ಲ ಕಾನೂನುಗಳಿಗೂ ಸಾಮಾನ್ಯವಾದ ಸೂತ್ರಗಳನ್ನು ಕಾಣುವ ಹವ್ಯಾಸದಲ್ಲಿ ತೊಡಗದೆ. ಸರಿಯಾಗಿ ವಿಕಾಸ ಹೊಂದಿದ. ಪರಿಪಕ್ವವಾದ, ಒಂದೇ ಸಂಪ್ರದಾಯ ಸಂಸ್ಕøತಿಗಳಿಂದ ಪರಿಪೋಷಿತವಾದ ನ್ಯಾಯ ಪದ್ಧತಿಯ ನಿಯಮಗಳಲ್ಲಿರುವ ಮೂಲತತ್ತ್ವದ ಗುರಿಯೆಂದು ಸ್ಪಷ್ಟಪಡಿಸಿ ಅದನ್ನೇ ಪ್ರಧಾನವಾಗಿಟ್ಟು ವಿವೇಚನೆ ನಡೆಸಿದ್ದಾರೆ. ಸಾರ್ವಭೌಮ ಆಜ್ಞೆಯ ಸ್ವರೂಪ ಕಾನೂನಿನ ಕೇವಲ ಬಾಹ್ಯಾವರಣವೆಂದೂ ಕಾನೂನು ವಿವಾದಗಳನ್ನು ಬಗೆಹರಿಸಿ ವ್ಯವಸ್ಥೆಯನ್ನು ಸ್ಥಾಪಿಸುವ ಸಾಧನವೆಂದೂ ಇನ್ನೂ ಕೆಲವರು ವಾದಿಸುತ್ತಾರೆ. ವ್ಯಕ್ತಿಗಳ ಜೀವನದಲ್ಲಿಯ ಸಂಘರ್ಷಣೆಗಳನ್ನು ಕಡಿಮೆ ಮಾಡಿ. ಅದಷ್ಟು ಅವಿರೋಧವಾಗಿ ಹಾಗೂ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಮನುಷ್ಯನ ಆಸೆ ಅಕಾಂಕ್ಷೆಗಳನ್ನು ಪೂರೈಸುವ. ಸುಖದ ದಾರಿಯನ್ನು ಸುಗಮಗೊಳಿಸುವ ವಿಶಿಷ್ಟ ತಂತ್ರವಿದು ಎಂಬುದು ಅವರ ಭಾವನೆ. ಇಂಥ ವಿವಾದಗಳನ್ನು ಬಗೆಹರಿಸುವಲ್ಲಿ, ಜನರ ವ್ಯವಾಹರಗಳನ್ನು ಸಂಘಟಿಸುವಲ್ಲಿ, ಜೀವನದಲ್ಲಿ ಬರುವ ಹೊಸ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾನೂನು ಒಂದು ವಿಶಿಷ್ಟ ಪ್ರಕ್ರಿಯೆಯನ್ನೂ ಪರಿಭಾಷೆಯನ್ನೂ ತಂತ್ರವನ್ನೂ ಬಳಸುತ್ತಾದೆ. ಅದನ್ನೇ ಬೆಳಸುತ್ತ ಬರುತ್ತದೆ. ಬೇರೆಬೇರೆ ಸಮಸ್ಯೆಗಳಿಗೆ ಬೇರೆಬೇರೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೇರೆಬೇರೆ ಪರಿಹಾರಗಳನ್ನು ಕಾಣಬಹುದು. ಈ ಅನಂತ ಸಂಖ್ಯೆಯ ಪರಿಹಾರಗಳ ವೈವಿಧ್ಯ ನ್ಯಾಯತತ್ತ್ವದ ವಿಷಯವಲ್ಲ. ಆದರೆ ಇಂಥ ಸನ್ನಿವೇಶಗಳಲ್ಲಿ ಕಾನೂನು ಅನುಸರಿಸುವ ರೀತಿಗಳು, ಬಳಸುವ ತಂತ್ರ. ಪಾರಿಭಾಷೆ ಮೊದಲಾದವುಗಳಲ್ಲಿ ಇವರು ಏಕಸೂತ್ರತೆಯನ್ನೂ ಖಚಿತವಾದ ವ್ಯಾಪಕವಾದ ಮೂಲತತ್ತ್ವದ ವಿಷಯವೆಂದು ಅನೇಕ ಪಂಡಿತರು ಪ್ರತಿಪಾಧಿಸುತ್ತಾರೆ. ಕಾನೂನು ಎಸೆಗುವ ಕಾರ್ಯದ ರೀತಿ. ಆ ಕಾರ್ಯಕ್ಕಾಗಿ ಬಳಸುವ ತಂತ್ರ, ಪಾರಿಭಾಷಿಕ ವಾಙ್ಮಯ, ನೂತನಸಮಸ್ಯೆಗಳಿಗೆ ಪರಿಹಾರದ ಉಪಾಯಗಳು-ಇವು ಪ್ರಧಾನವಾದ್ದರಿಂದ ಇಂಥ ವಿವೇಚನೆಯನ್ನು ಕಾನೂನಿನ ಕ್ರಿಯಾತ್ಮಕ ವಿವೇಚನೆಯೆಂದು ಹೇಳಬಹುದು. ಇಲ್ಲಿ ವಿವಿಧ ದೇಶಗಳ ಕಾನೂನುಗಳ ನಿಯಮ ಸಮಜ್ಚಯಗಳಿಗಿಂತ ಕ್ರಿಯೆಯಲ್ಲಿ ಸಾದೃಶ್ಯವನ್ನು ಕಾಣಬಹುದು; ಮತ್ತು ಆ ಲಕ್ಷಣಗಳನ್ನೇ ವ್ಯವಸ್ಥಿತ ಅಭ್ಯಾಸದ ವಿಷಯಗಳನ್ನಾಗಿ ಪರಿಗಣಿಸಲಾಗಿದೆ.

ನೈತಿಕ ವಿವೇಚನೆ

ಅನ್ಯಾಯವನ್ನು ನಿವಾರಿಸಿ ನ್ಯಾಯವನ್ನು ಸ್ಥಾಪಿಸುವುದೇ ಕಾನೂನಿನ ಉದ್ದೇಶವಾದ್ದರಿಂದ ಕಾನೂನಿಗೂ ನ್ಯಾಯಕ್ಕೂ ಇರುವ ಸಂಬಂಧವನ್ನೇ ಇನ್ನು ಕೆಲವು ವಿದ್ವಾಂಸರೂ ಪ್ರಧಾನವಾದ ವಿಷಯನ್ನಾಗಿಟ್ಟುಕೊಂಡು ಅ ವಿಷಯದ ವಿವರವಾದ ಅಭ್ಯಾಸಗ್ರಂಥಗಳನ್ನು ಬರೆದಿದ್ದಾರೆ. ಈ ಗ್ರಂಥಗಳಲ್ಲಿ ನೀತಿಶಾಸ್ತ್ರದ ದಟ್ಟವಾದ ಛಾಯೆಯೂ ಕಂಡುಬರುತ್ತದೆ. ಧಾರ್ಮಿಕ ಗ್ರಂಥಗಳ ಪ್ರಭಾವವೂ ಇಲ್ಲಿ ಪ್ರಬಲವಾಗಿದೆ. ನ್ಯಾಯಾನ್ಯಾಯವಿವೇಕ ಸರ್ವರ ಅಂತಃಕರಣಕ್ಕೆ ಗೋಚರವಾಗುವ ವಿಷಯ; ಅದು ರಾಗದ್ವೇಷಗಳೇ ಮೊದಲಾದವುಗಳಿಂದ ದೂಷಿತವಾಗದ ಬುದ್ಧಿಗೆ ಸ್ಫುಟವಾಗಿ ಎಲ್ಲ ಕಾಲದಲ್ಲೂ, ಒಂದೇರೀತಿಯಾಗಿ ತೋರುವ ನಿರಂತನ ಸತ್ಯದ ಆವಿಷ್ಕರಣ; ರಾಗದ್ವೇಷಗಳಿಂದ ಕೂಡಿದಾಗ, ಪಾಪಪೂರಿತವಾದಾಗ ಈ ಸದಸದ್ವಿವೇಕ ಒಮ್ಮೊಮ್ಮೆ ಮಲಿನಗೊಂಡರೂ ಕಿಂಚಿತ್ ವಿಚಾರದಿಂದ ಇದು ಪುನಃ ಪ್ರಜ್ವಲಿಸುವ ದಿವ್ಯಜ್ಞಾದ ಕಿಡಿ ಎಂಬ ನಂಬಿಕೆ ಮೊದಮೊದಲು ಬಲವಾಗಿತ್ತು. ಆದರೆ ಐತಿಹಾಸಿಕ ಅಭ್ಯಾಸ ಈ ನಂಬಿಕೆಯನ್ನು ಸಡಿಲಗೊಳಿಸಿತು. ಸರ್ವದೇಶಗಳಲ್ಲೂ ಸರ್ವಕಾಲದಲ್ಲೂ ಮಾನ್ಯವಾದ ಶಾಶ್ವತ ಮೌಲ್ಯಗಳಾಗಲಿ ಸರ್ವರ ಹೃದಯಗಳಲ್ಲೂ ಒಂದೇ ರೀತಿಯಾಗಿ ಸ್ಫುರಿಸುವ ನ್ಯಾಯ ವಿವೇಕವಾಗಲಿ, ಭಿನ್ನ ಭಿನ್ನ ಸಂಸ್ಕøತಿಗಳಲ್ಲಿ ಭಿನ್ನ ಭಿನ್ನ ಪರಿಸರಗಳಲ್ಲಿ ಕಂಡುಬರುವುದಿಲ್ಲವೆಂಬುದು ಖಚಿತವಾಯಿತು. ಮತ್ತು ನೀತಿಶಾಸ್ತ್ರದ ತತ್ತ್ವಗಳು ಸ್ವಲ್ಪಮಟ್ಟಿಗೆ ಕಾನೂನನ್ನು ರೂಪಿಸುತ್ತವೆಯಾದರೂ ನೀತಿಶಾಸ್ತ್ರಕ್ಕೆ ಭಿನ್ನವಾಗಿ, ಕೆಲವು ಸಾರಿ ಅದಕ್ಕೆ ವಿರೋಧವಾಗಿ, ಕಾನೂನಿನ ವಚನಗಳು ಇರುತ್ತವೆ; ಇವನ್ನು ಸಾರ್ವಭೌಮಾಧಿಕಾರ ಜಾರಿಗೆ ತರುತ್ತದೆ; ಒಮ್ಮೊಮ್ಮೆ ಕಾನೂನು ಸಮಾಜದಲ್ಲಿ ಬಲಿಷ್ಠವಾದ ಮತ್ತು ಆ ಕಾರಣದಿಂದ ಆಳ್ವಿಕೆಯನ್ನು ಹಸ್ತಗತ ಮಾಡಿಕೊಂಡಿರುವ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವ ಸಾಧನವಾಗಬಹುದು; ನೀತಿಶಾಸ್ತ್ರದ ಆದರ್ಶಗಳಿಂದ ದೂರ ಸರಿಯಲೂಬಹುದು. ಹೀಗಾಗಿ ಕೆಲವರು ಕಾನೂನಿನ ಇಂಥ ತಾತ್ಕಾಲಿಕ ವಿಕೃತಿಗಳನ್ನು ಲಕ್ಷ್ಯಕ್ಕೆ ತಾರದೆ ಶಾಶ್ವತ ತತ್ತ್ವಗಳ ಮೇಲೆ ಆದರ್ಶ ನ್ಯಾಯತತ್ತ್ವವನ್ನು ರಚಿಸಲು ಹವಣಿಸಿದ್ದಾರೆ. ಅವರು ಬೇರೆಬೇರೆ ಕಾಲಗಳಲ್ಲಿ, ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಕಾನೂನುಗಳ ನಿಯಮಗಳು ಪ್ರಚಲಿತವಿರುತ್ತವೆಂಬುದರಿಂದ ಧೃತಿಗೆಡದೆ, ಮನುಷ್ಯನ ಬಾದ್ಧಿಕತೆಯನ್ನೂ ಶಾಶ್ವತವಾದ ಬೇಡಿಕೆಗಳನ್ನೂ ಆಧಾರವಾಗಿಟ್ಟುಕೊಂಡು ಅವುಗಳಿಂದ ತಾರ್ಕಿಕವಾಗಿ ಶಾಶ್ವತ ನ್ಯಾಯಸೂತ್ರಗಳನ್ನು ಹುಡುಕಲು ಹವಣಿಸಿದ್ದಾರೆ.

ಇದರಿಂದ ನ್ಯಾಯಸೂತ್ರಗಳು ಮನುಷ್ಯನ ಜನ್ಮಸಿದ್ಧವಾದ ನಿಸರ್ಗದತ್ತವಾದ ಹಕ್ಕುಗಳು ಎಂಬ ವಾದಕ್ಕೆ ಎಡೆ ಉಂಟಾಗಿದೆ. ಆದರೆ ವ್ಯಕ್ತಿಯ ಹಕ್ಕುಗಳಿಗೂ ಸಾಮಾಜಿಕ ಹೊಣೆಗಳಿಗೂ ನಡುವೆ ಘರ್ಷಣೆಗಳುಂಟಾಗುವುದರಿಂದ ಹಕ್ಕುಗಳನ್ನು ಪ್ರಸ್ತಾಪಿಸುವ ಮರು ಉಸಿರಿನಲ್ಲೇ ಅವುಗಳ ಮೇಲಿನ ನಿರ್ಬಂಧಗಳ ಮಾತನ್ನೂ ಎತ್ತುವ ಪ್ರಸಂಗ ಬರುತ್ತದೆ. ಆ ನಿರ್ಬಂಧಗಳ ವ್ಯಾಪ್ತಿ ದೇಶಕಾಲಾನುಗುಣವಾಗಿ ಕುಗ್ಗುತ್ತ ಹಿಗ್ಗುತ್ತ ಹೋಗುವುದರಿಂದ ಯಾವುದಕ್ಕೂ ಒಂದು ಮೂರ್ತವಾದ ಇಲ್ಲವೇ ಶಾಶ್ವತವಾದ ರೂಪ ಅಸಾಧ್ಯವೆಂಬುದು ಗೋಚರವಾಗುತ್ತದೆ. ಆದ್ದರಿಂದ ಸಂದಿಗ್ಧವೂ ಶಾಶ್ವತವೂ ಆದ ನಿಯಮಗಳನ್ನು ಮಂಡಿಸುವುದು ಅಶಕ್ಯವಾಗುತ್ತದೆ.

ಉದಾಹರಣೆಗೆ ಇಮಾನ್ಯುಯೆಲ್ ಕ್ಯಾಂಟನ (1724-1804) ನೈತಿಕ ಸೂತ್ರಗಳನ್ನು ತೆಗೆದುಕೊಳ್ಳಬಹುದು. ಯಾವನ ನಡತೆ ಎಲ್ಲರ ನಡತೆಯೂ ಆಗಲೆಂದು ಆಶಿಸಬಹುದೋ ಅದರಂತೆ ಪ್ರತಿಯೊಬ್ಬನೂ ನಡೆದುಕೊಳ್ಳತಕ್ಕದ್ದು-ಎಂಬುದು ಅವನ ಒಂದು ಸೂತ್ರ, ಯಾವ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಉದ್ದೇಶಗಳಿಗೆ ಅಧೀನವಲ್ಲ. ಆದರೆ ಇಂಥ ನಿಯಮಗಳು ಯಾವುದೇ ಜಟಿಲ ಪ್ರಸಂಗಗಳಲ್ಲಿ ಅಸಂದಿಗ್ಧವಾದ ಖಚಿತವಾದ ಮಾರ್ಗದರ್ಶನಕ್ಕೆ ಅಸಮರ್ಥವೆನಿಸುತ್ತವೆ. ಯಾವುದೇ ನಡತೆಯನ್ನು ಎಲ್ಲರೂ ಒಪ್ಪುವುದು ಅಸಾಧ್ಯ. ಉದ್ದೇಶಗಳು ಬಹಳ ಗಾಢವೂ ವೈವಿಧ್ಯಪೂರ್ಣವೂ ವಿರೋಧಾತ್ಮಕವೂ ಆಗಿರುವುದರಿಂದ ಯಾವುದೇ ಜೊತೆಗೆಲಸದಲ್ಲಿ ಇಬ್ಬರ ಸ್ವಚ್ಛಂದ ಒಪ್ಪಿಗೆಯನ್ನು ಸ್ಪಷ್ಟವಾಗಿ ಸಿದ್ಧಮಾಡುವುದು ಕಠಿಣ, ಕಾನೂನಿನ ಉದ್ದೇಶ ಯಾವುದೇ ವ್ಯಕ್ತಿಯ ಇಚ್ಛಾಪ್ರವೃತ್ತಿಗಳಲ್ಲಿ ಸಾಮರಸ್ಯವನ್ನು ಸಾಧಿಸುವುದು. ದೇಶಕಾಲಾನುಗುಣವಾಗಿ ಇಚ್ಛಾಪ್ರವೃತ್ತಿಗಳ ಸೆಳೆತಗಳು ಬದಲಿಸಿದಂತೆ ಸಾಮರಸ್ಯ ಸಾಧಿಸುವ ಕಾನೂನು ಸೂತ್ರಗಳು ಬದಲಾಗುತ್ತಿವೆ. ನ್ಯಾಯದ ಮೌಲ್ಯಗಳು ದೇಶಕಾಲಗಳಿಗೆ ಅನುಗುಣವಾಗಿ ಹೊಂದಿಕೊಳ್ಳುತ್ತ ಸಾಗುತ್ತವೆ.

ಪರಿಶೋಧನಾತ್ಮಕ ವಿವೇಚನೆ: ಪಂಡಿತರು ತಮ್ಮ ತತ್ತ್ವವಿವೇಚನೆಯ ಕ್ಷೇತ್ರದಿಂದ ಹೊರಬಂದು ವ್ಯಾವಹಾರಿಕ ಕ್ಷೇತ್ರದ ಸಮಸ್ಯೆಗಳು ಚರ್ಚೆ ಪ್ರಾರಂಭಿಸಿದೊಡನೆಯೇ ತಂತಮ್ಮ ಸಾಂಸ್ಕøತಿಕ ಹಿನ್ನೆಲೆಯನ್ನೂ ತಂತಮ್ಮ ಸಾಂಸ್ಕøತಿಕ ಹಿನ್ನೆಲೆಯನ್ನು ತಂತಮ್ಮ ಕಾಲಗಳ ಸಾಮಾಜಿಕ ಅವಶ್ಯಕತೆಗಳನ್ನೂ ಆ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹರಗಳನ್ನೂ ಸೂಚಿಸಿರುವುದನ್ನು ಇವುಗಳಲ್ಲಿ ಕಾಣಬಹುದೇ ಹೊರತು, ನಿಶ್ಚಿತವಾದ ಶಾಶ್ವತ ರೂಪ ಕೊಡಲು ಅವರು ಅಸಮರ್ಥರಾಗಿದ್ದಾರೆನ್ನಬಹುದು. ಕಾನೂನಿನ ಗುರಿ ಕಾಲಕಾಲಕ್ಕೆ ಅಂದಂದಿನ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಿಸುತ್ತ ಹೋಗುತ್ತದೆ. ಕಾನೂನಿನ ಗುರಿಗೆ ಸುಸಂಗ ವಾದ, ಅದರತ್ತ ಒಯ್ಯಲನುವಾಗುವ ನಿಯಮಗಳೇ ಅಂದಂದಿನ ಜನಾಂಗಕ್ಕೆ ನ್ಯಾಯವಾಗಿ ತೋರಿವೆ ಎಂದು ವಾದಿಸಲಾಗಿದೆ. ಈ ಬದಲಾವಣೆಯಲ್ಲಿ ಮೂರು ಹಂತಗಳನ್ನು ಕಾಣಬಹುದು. ಮೊದಲನೆಯ ಹಂತದಲ್ಲಿ ಕಾನೂನು ಶಾಂತಿ ಸುವ್ಯವಸ್ಥೆಯನ್ನು ಸ್ಥಾಪಿಸುತ್ತದೆ; ಪ್ರತಿಯೊಬ್ಬ ವ್ಯಕ್ತಿಗೂ ನಿಸರ್ಗ ನೀಡಿದ ಸ್ಥಾನದಲ್ಲಿ ಅವನನ್ನು ಪ್ರತಿಷ್ಠಾಪಿಸುತ್ತದೆ; ಆ ಸ್ಥಾನದಿಂದ ಅನ್ಯಸ್ಥಾನವನ್ನು ಆಕ್ರಮಿಸಿದವನನ್ನು ದಂಡನೆಯಿಂದಲೋ, ಭತ್ರ್ಸನೆಯಿಂದಲೋ ಪುನಃ ಪೂರ್ವನಿಶ್ಚಿತ ಸ್ಥಾನದಲ್ಲಿ ನೆಲೆಗೊಳಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಯುವ ಗುರಿಯನ್ನು ಸಾಧಿಸುತ್ತದೆ-ಎಂದು ಹೇಳಲಾಗಿದೆ. ಪ್ರಾಚೀನ ಗ್ರೀಕ್ ರೋಮನ್, ಇಂಗ್ಲಿಷ್ ಇತಿಹಾಸದಿಂದ ಸೋದಾಹರಣವಾಗಿ ತೋರಿಸಲಾಗಿದೆ. ಹಿಂದೂಶಾಸ್ತ್ರಗಳ ವರ್ಣಾಶ್ರಮ ಧರ್ಮ ಈ ಹಂತದ ದ್ಯೋತಕ, ವ್ಯಕ್ತಿ ತನ್ನ ಇಚ್ಛಾಪ್ರವೃತಿಯನ್ನು ಅನುಸರಿಸುವಲ್ಲಿ, ತನ್ನ ಹಿತಸಾಧನೆಯಲ್ಲಿ ಅವನಿಗೆ ಪರಮಾವಧಿ ಸ್ವಾತಂತ್ರ್ಯದ ಪರಿಸ್ಥಿತಿಯನ್ನು ಕಲ್ಪಿಸುವುದೇ ಎರಡನೆಯ ಹಂತದಲ್ಲಿ ಕಾನೂನಿನ ಗುರಿಯಾಯಿತು. ವ್ಯಕ್ತಿಸ್ವಾತಂತ್ರ್ಯ ಪರಾಕಾಷ್ಠೆಯ ಸ್ಥಿತಿ ಮುಟ್ಟಿದ 17-19ನೆಯ ಶತಮಾನಗಳ ಅವಧಿಯ ಯೂರೋಪ್ ಅಮೆರಿಕನ್ ರಾಜಕೀಯ ತತ್ತ್ವಗಳನ್ನು ಇದಕ್ಕೆ ನಿದರ್ಶನವಾಗಿ ನೀಡಲಾಗಿದೆ. ಪ್ರತಿಯೊಬ್ಬನ ಹಕ್ಕು-ಕರ್ತವ್ಯಗಳ ಮಾನದಂಡವೂ ಅವನ ಅನುಪಾಧಿಕ ಒಪ್ಪಿಗೆ ಕೇವಲ ಬಲಿಷ್ಠರ ಸ್ವತ್ತು. ಅವರ ಪ್ರವರ್ಧನೆಯಲ್ಲೂ ಆರ್ಥಿಕವಾಗಿ ದಲಿತರಾದವರ ಶೋಷಣೆಯಲ್ಲೂ ಇದು ಪರಿಣಮಿಸುತ್ತದೆ. ಬಹುಸಂಖ್ಯಾತರು ಬಲಹೀನರ ವರ್ಗಕ್ಕೆ ಸೇರಿದವರಾದ್ದರಿಂದ ಈ ತತ್ತ್ವ ಅಂಥವರ ಶೋಷಣೆಗೆ ಕಾರಣವಾಗುತ್ತದೆಂಬುದು ಸ್ಪಷ್ಟವಾಗತೊಡಗಿತು. ಇಂದಿನ ಯುಗದಲ್ಲಿ ಮಾನವ ಕುಲದ ಗರಿಷ್ಠ ಸಂತೃಪ್ತಿಯನ್ನು ಕನಿಷ್ಠ ಘರ್ಷಣೆಯಿಂದ ಸಾಧಿಸುವಂಥ ಸಮಾಜ ವ್ಯವಸ್ಥೆಯನ್ನು ರೂಪಿಸುವುದೇ ಕಾನೂನಿನ ಗುರಿ ಎಂದು ಪ್ರತಿಪಾದಿಸಲಾಗಿದೆ. ಇದು ಮೂರನೆಯ ಹಂತ.

ಇಲ್ಲಿ ಸಮಾಜದ ವ್ಯಕ್ತಿಗಳ ಆವಶ್ಯಕತೆಯನ್ನು ನಿರ್ಣಯಿಸುವುದು ಎಲ್ಲ ಜನಾಂಗಗಳಿಗೂ ಎಲ್ಲ ಪರಿಸ್ಥಿತಿಗೂ ಎಲ್ಲ ಕಾಲಕ್ಕೂ ಸಮ್ಮತವಾದ ಸ್ಥಿರಮೌಲ್ಯಗಳ ಆಧಾರದ ಮೇಲೆ ಅಲ್ಲ. ಅಂಥ ಸ್ಥಿರಮೌಲ್ಯಗಳ ಅಸ್ತಿತ್ವವನ್ನೇ ಈ ವಿಚಾರದ ಪಂಡಿತರು ಪ್ರಶ್ನಿಸುತ್ತಾರೆ. ಆಯಾ ಪರಿಸ್ಥಿತಿಯಲ್ಲಿ ಪ್ರತ್ಯಕ್ಷಾನುಭವದಿಂದ ಲಭ್ಯವಿರುವ ಸಾಧನ ಸಂಪತ್ತುಗಳ ಬಲದಿಂದ ಕಾನೂನಿನ ಕ್ರಮದ ಪರಿಣಾಮ ಕಾರಿತ್ವವನ್ನು ಸೂಕ್ಷ್ಮವಾಗಿ ಅಭ್ಯಸಿಸಿ. ಆದರ್ಶಗಳನ್ನೂ ಮೌಲ್ಯಗಳನ್ನೂ ತೂಗಿ, ತಿದ್ದಿ, ಕ್ರಮಗಳನ್ನು ಪುನಃಪುನಃ ಹೊಂದಿಸಿಕೊಳ್ಳುತ್ತ, ಅನುಭವದ ಒರೆಗಲ್ಲಿನಿಂದ ಪರೀಕ್ಷಿಸುತ್ತ, ತರ್ಕಬಲದಿಂದ ಪರಿಶೋಧಿಸುತ್ತ ಮುಂದುವರಿಯುವುದೊಂದೇ ಮಾರ್ಗ ಎಂದು ಅವರು ಪ್ರತಿಪಾದಿಸುತ್ತಾರೆ. ಇಲ್ಲಿ ಕಾನೂನಿನ ಸಮರ್ಪಕತೆಯ ವಿಷಯವನ್ನು ಪ್ರಧಾನವಾಗಿ ಗಮನಿಸುವುದರಿಂದ ಇದು ಪರಿಶೋಧನಾತ್ಮಕ ವಿವೇಚನೆಯೆನಿಸಿದೆ.

ಐತಿಹಾಸಿಕ ವಿವೇಚನೆ: ತಾರ್ಕಿಕ ವಿಧಾನಗಳಿಂದ ಸರ್ವ ಜನಾಂಗಗಳಿಗೂ ಹೊಂದುವಂಥ ನ್ಯಾಯಿಕ ಸೂತ್ರಗಳನ್ನು ಹುಡುಕುವುದು ಅಸಾಧ್ಯವೆಂಬುದು ಇನ್ನೊಂದು ವಾದ. ಕಾನೂನು ಆಯಾ ಜನಾಂಗದ ವಿಶಿಷ್ಟ ಪ್ರತಿಭೆಯ ಉನ್ಮೀಲನ. ಆಯಾ ಜನಾಂಗದ ಭಾಷೆಯನ್ನು ಹೇಗೆ ಯಾವ ವ್ಯಕ್ತಿಯೂ ನಿರ್ಮಿಸಿಲ್ಲವೋ ಹಾಗೆಯೇ ಕಾನೂನನ್ನು ಯಾರೂ ನಿರ್ಮಿಸಿಲ್ಲ, ಕಾಲಕ್ರಮದಿಂದ ಜನಾಂಗದ ಅಂತಃಸತ್ವ ಭಾಷಾರೊಪವಾಗಿ ವಿಕಸಿಸುತ್ತ ಹೋದಂತೆ ಕಾನೂನಿನ ರೂಪದೇಷೆಗಳು ಕ್ರಮಕ್ರಮವಾಗಿ ಜನರ ಮನಸ್ಸಿನಲ್ಲಿ ಮೂಡುತ್ತ ಹೋಗುತ್ತದೆ. ಆಯಾ ಜನಾಂಗದ ಅಂತಃಕರಣದಲ್ಲಿ ಹುದುಗಿರುವ ನ್ಯಾಯಬುದ್ಧಿ ನಿರಂತರವಾಗಿ ಆಯಾ ಜನಾಂಗದ ಆಚಾರವನ್ನು ರೂಪಿಸುತ್ತ ಹೋಗುತ್ತದೆ. ಆ ನ್ಯಾಯಪ್ರತಿಭೆಯ ವಿಕಾಸವೇ ಆಯಾ ಜನರ ಕಾನೂನು. ಯಾವ ವ್ಯಕ್ತಿಯಾಗಲಿ, ಯಾವ ಸಭೆಯಾಗಲಿ ಯಾವ ಸಾರ್ವಭೌಮನಾಗಲಿ ಕಾನೂನನ್ನು ನಿರ್ಮಿಸುವುದಿಲ್ಲ. ಒಬ್ಬನಾಗಲಿ ಕೆಲವರಾಗಲಿ ಇಡೀ ಸಮಾಜವನ್ನು ಅಜ್ಞಾಪಿಸುವುದು ಅಶಕ್ಯ. ಜನಾಂಗಕ್ಕೆ ಸಮಂಜಸವೆನಿಸುವ ರೀತಿಯಲ್ಲಿ ಜನಾಂಗದ ಅಂತಸ್ಥ ಪ್ರತಿಭೆಯಿಂದ ರೂಪಿಸಲ್ಪಟ್ಟ ಕೃತಿಗಳು ನಿರ್ದಿಷ್ಟ ದಿಶೆಯ ರೇಷ್ಮೆಗಳಲ್ಲಿ ಚಲಿಸುತ್ತವೆ. ಈ ಚಲನೆಯಿಂದ ಗುರುತಿಸಲಾದ ಮಾರ್ಗಗಳೇ ಜನರು ಅನುಸರಿಸುವ ಕಾನೂನುಗಳಾಗಿ ತೋರುವವು. ಇವನ್ನು ಯಾರೂ ಸೃಜಿಸುವುದಿಲ್ಲ. ಕಾನೂನಿನ ಪಂಡಿತರು, ನಿರ್ಮಾಪಕರು ಎನಿಸುವವರು ಈ ಚಲನೆಯ ಮಾರ್ಗವನ್ನು ಕಂಡು ಗುರುತಿಸುವ, ವಿವರಿಸುವ ಕೆಲಸವನ್ನು ಮಾಡುವರೇ ಹೊರತು ಅದರ ನಿರ್ಮಾಪಕರಲ್ಲ, ಕಾನೂನನ್ನು ಮಾಡುವ ಸಭೆಗಳು, ನ್ಯಾಯ ನಿರ್ಣಯಕಾರರು ಜನಾಂಗದಲ್ಲಿ ಗುಪ್ತವಾಗಿ ಹರಿಯುತ್ತಿರುವ ನ್ಯಾಯವಾಹಿನಿಯ ದ್ವಾರಗಳು. ಅಂತಃಪ್ರತಿಭೆಗೆ ವಿಸಂಗತವಾಗಿ ಯಾರಾದರೂ ಕಾನೂನನ್ನು ಮಾಡಿದರೆ ಅದು ಸಮಾಜದಿಂದ ತಿರಸ್ಕರಿಸಲ್ಪಟ್ಟು, ಜನಜೀವನದಿಂದ ದೂರವಾಗಿ ಕೇವಲ ಗ್ರಂಥಸ್ಥವಾಗಿ, ನಡತೆಯ ಮೇಲೆ ಪ್ರಭಾವ ಬೀರಲು ಅಸಮರ್ಥವಾಗಿ ಬದಿಗೊತ್ತಲ್ಪಡುತ್ತದೆ ಎಂದು ಮುಂತಾಗಿ ವಾದಿಸಲಾಗಿದೆ. ಯಾವುದೇ ಜನಾಂಗದ ಕಾನೂನಿಗೂ ಆ ಜನಾಂಗದ ಸಾಮಾಜಿಕ ಪರಿಸ್ಥಿತಿಗೂ ಇರುವ ನಿಕಟ ಸಂಬಂಧವನ್ನು ಈ ವಾದಸರಣಿ ಒತ್ತಿ ಹೇಳುತ್ತದೆ. ಜನಾಂಗದ ಒಲವು, ಅನುಭವ, ಅಭಿರುಚಿ ಮೊದಲಾದ ಗುಣವಿಶೇಷಗಳಿಂದ ಕಾನೂನು ಬಹಳವಾಗಿ ಪ್ರಭಾವಿತವಾಗುವುದಲ್ಲದೆ, ಅದು ಕೇವಲ ತಾರ್ಕಿಕ ಅನುಮಾನಗಳು ಗುಚ್ಛವಲ್ಲವೆಂಬುದನ್ನು ಸ್ಫುಟಗೊಳಿಸುತ್ತದೆ.

ಕಾನೂನು ಜನರಲ್ಲಿ ಸಾವಕಾಶವಾಗಿ ರೂಪುಗೊಳ್ಳುತ್ತ, ಪರಿಸ್ಥಿತಿಗೆ ಹೊಂದಿಕೊಳ್ಳುತ್ತ ಸ್ಥಿರವಾಗಿ, ರೂಢವಾದ ಸಂಪ್ರದಾಯ-ಎಂಬುದು ಇಲ್ಲಿ ಪ್ರಧಾನವಾದ ಭಾವನೆ. ಕಾನೂನು ಜನರ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಸಮ್ಮತಿಯ ಆಶ್ರಯ ಹೊಂದದಿದ್ದರೆ, ಅಥವಾ ಆ ಸಾಮಾಜಿಕ ಪರಿಸರಕ್ಕೆ ಹೊಂದಿಕೊಳ್ಳುವುದು ದುಸ್ತರವಾಗುವಷ್ಟು ವಿಸಂಗತವಾಗಿದ್ದರೆ, ಅದು ಚಿರಕಾಲ ಬದುಕಲಾರದು ಎಂದು ವಾದಿಸಲಾಗಿದೆ, ಕಾನೂನು ತನ್ನಿಂದ ತಾನೆ ಕಾಲಾನುಗುಣವಾಗಿ ಅಂಕುರಿಸಿ ವಿಕಸಿಸುವ ಪ್ರಕ್ರಿಯೆ ಎಂದು ಈ ವಾದ ಹೇಳುತ್ತದೆ. ಇದು ನ್ಯಾಯತತ್ತ್ವದ ಐತಿಹಾಸಿಕ ವಿವೇಚನೆ. ಉದ್ದೇಶ ಪೂರ್ವಕವಾಗಿ ಕಾನೂನನ್ನು ಸುಧಾರಿಸುವ ಪ್ರಯತ್ನವನ್ನೂ ವಿದ್ವಾಂಸರ ತಾರ್ಕಿಕ ವಿವೇಚನೆಯ ಫಲವಾಗಿ ಕಾನೂನು ವಿಸ್ತರಣ ಹೊಂದುವುದೆಂಬುದನ್ನೂ ಅನ್ಯಮದೇಶಗಳಲ್ಲಿ ಹುಟ್ಟಿ ಬೆಳೆದು ಪರಿಪಕ್ವವಾದ ಕಾನೂನು ಪದ್ಧತಿಯನ್ನು ಸಮಾಜ ಸ್ವೀಕರಿಸುವುದು ಕೇವಲ ಆಕಸ್ಮಿಕವೆಂಬುದನ್ನೂ ಈ ವಾದ ಅಲ್ಲ ಗಳೆಯುತ್ತದೆ. ಆದ್ದರಿಂದ ಆ ಮಟ್ಟಿಗೆ ಇದು ಸತ್ಯದಿಂದ ದೂರವಾಗಿದೆಯೆಂಬ ಟೀಕೆಗೆ ಗುರಿಯಾಗಿದೆ.

ಸಮಾಜ ವಿಜ್ಞಾನಾಧಾರಿತ ವಿವೇಚನೆ: ಕಾನೂನು ಸಾರ್ವಭೌಮಾಧಿಕಾರದ ಆದೇಶವಲ್ಲ; ಸಮಾಜ ತಾನಾಗಿಯೇ ರೂಪಿಸುವ ವ್ಯವಸ್ಥೆ ಎಂಬ ವಾದವನ್ನು ಇನ್ನು ಕೆಲವು ವಿದ್ವಾಂಸರು ಮಂಡಿಸಿದ್ದಾರೆ, ಸಮಾಜದಲ್ಲಿ ಪ್ರಚಲಿತವಿರುವ ನಿಯಮಗಳಲ್ಲಿ ಕಾನೂನು ಒಂದು ಭಾಗ, ಕಾನೂನಿನಂತೆಯೇ. ಕೆಲವೊಮ್ಮೆ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿ, ಇತರ ನಿಯಮಗಳು ಜನರ ನಡತೆಯನ್ನು ರೂಪಿಸುತ್ತವೆ. ಇಂಥ ಅನೇಕ ಬಗೆಯ ನಿಯಮಗಳು ಬೇರೆ ಬೇರೆ ವಲಯಗಳಲ್ಲಿ-ಉದಾಹರಣೆಗೆ ವ್ಯಾಪಾರ ವ್ಯವಹಾರಗಳಲ್ಲಿ, ಕಾರ್ಖಾನೆಗಳಲ್ಲಿ, ಕೃಷಿವಲಯಗಳಲ್ಲಿ, ಕಾರ್ಮಿಕರ ಸಂಘಗಳಲ್ಲಿ-ಸಂದರ್ಭಾನುಗುಣವಾಗಿ ಆರ್ಥಿಕ ಐತಿಹಾಸಿಕ ರಾಜಕೀಯ ಸಾಂಸ್ಕøತಿಕ ಎಳೆತಗಳ ಪರಿಣಾಮವಾಗಿ ರೂಢಿಗೆ ಬಂದು ಪ್ರಕಟವಾಗುತ್ತವೆ. ಇಂದಿನ ಸಂಪ್ರದಾಯಗಳು ಮುಂದಿನ ಕಾನೂನುಗಳು. ಆದರೆ ಅವುಗಳ ಸತ್ತ್ವದಲ್ಲಾಗಲಿ ಹುಟ್ಟಿನಲ್ಲಾಗಲಿ ಬೆಳೆವಣಿಗೆಯಲ್ಲಾಗಲಿ ವ್ಯತ್ಯಾಸವಿಲ್ಲ. ನಡತೆಯನ್ನು ರೂಪಿಸುವ ಎಲ್ಲ ನಿಯಮಗಳೂ ಒಂದೇ ಜಾತಿಯವು. ಒಂದೇ ವ್ಯವಸ್ಥೆಯ ಶಾಖೆಗಳು. ಸಮಾಜದ ಇತಿಹಾಸ, ಅನುಭವ, ಆರ್ಥಿಕ ಆವಶ್ಯಕತೆ, ಧಾರ್ಮಿಕ ನೈತಿಕ ಆದರ್ಶಗಳು, ರಾಜಕೀಯ ಪರಿಸ್ಥಿತಿಗಳು-ಇವೆಲ್ಲವುಗಳ ಬಣ್ಣ, ಸತ್ತ್ವಗಳನ್ನು ಹೀರಿಕೊಂಡು ಇವು ಹುಟ್ಟಿ ರೂಪುಗೊಳ್ಳುತ್ತವೆ. ಎಲ್ಲ ತರದ ನಿಯಮಗಳೂ ಪರಸ್ಪರ ನಿಕಟ ಸಂಪರ್ಕವುಳ್ಳವು. ಇತರ ನಿಯಮಗಳ ಜ್ಞಾನವಿಲ್ಲದೆ ಯಾವುದೇ ನಿಯಮದ ಸರಿಯಾದ ಸಂಪೂರ್ಣವಾದ ಜ್ಞಾನ ಸಾಧ್ಯವಿಲ್ಲ. ಆದ್ದರಿಂದ ಕಾನೂನನ್ನು ಆದರೆ ಜೊತೆಯ ಇತರ ಸಾಮಾಜಿಕ ನಿಯಮಗಳ ನೆರಳಿನಲ್ಲೇ ಅಭ್ಯಸಿಸಬೇಕು. ಉಳಿದವುಗಳ ಜ್ಞಾನವಿಲ್ಲದವನ ಕಾನೂನುಜ್ಞಾನ ಅಪರಿಪೂರ್ಣ ಎಂದು ಈ ವಿದ್ವಾಂಸರು ಪ್ರತಿಪಾದಿಸುತ್ತಾರೆ. ಸಮಗ್ರ ಸಾಮಾಜಿಕ ಜ್ಞಾನದ ತಳಹದಿಯ ಮೇಲೆ ಕಾನೂನಿನ ವಿವೇಚನೆ ನಡೆಯಬೇಕೆನ್ನುವ ಈ ವಾದವನ್ನು ಸಮಾಜ ವಿಜ್ಞಾನಾಧಾರಿತ ವಿವೇಚನೆ ಎಂದು ಕರೆಯಲಾಗಿದೆ.

ತರ್ಕ ಅನುಭವಗಳ ಪ್ರಶ್ನೆ: ಈ ವಾದ ಕಾನೂನಿನ ವೈಶಿಷ್ಟ್ಯವನ್ನು ಮುಸುಕುಗೊಳಿಸುತ್ತದೆ. ಪ್ರತ್ಯೇಕವಾಗಿಯೇ ಸಾಕಷ್ಟು ಜಟಿಲವಾಗಿರುವ ಕಾನೂನಿನ ಅಭ್ಯಾಸದಿಂದ ಅದಕ್ಕಿಂತ ಜಟಿಲವೂ ಅತ್ಯಂತ ವಿಶಾಲವೂ ಗಾಢವೂ ಹಲವು ವೇಳೆ ಅಸ್ಪಷ್ಟವೂ ಆದ ಸಮಾಜಶಾಸ್ತ್ರದ ಸೀಮೆಯಲ್ಲಿ ದಿಕ್ಕುತಪ್ಪುವಂತೆ ಆಗುವುದೆಂಬುದು ಈ ವಾದವನ್ನು ಕುರಿತ ಟೀಕೆಯಾಗಿದೆ. ಆದರೆ ಅಮೆರಿಕದ ಹಾಗೂ ಬ್ರಿಟನ್ನಿನ ಇಂದಿನ ಅನೇಕ ವಿದ್ವಾಂಸರು ಸಮಾಜವಿಜ್ಞಾನಗಳಿಗೂ ಕಾನೂನಿಗೂ ಇರುವ ನಿಕಟ ಸಂಬಂಧವನ್ನು ಒಪ್ಪುತ್ತಾರೆ. ಕಾನೂನಿನ ಕ್ರಿಯೆಯ ಅಭ್ಯಾಸವೆಂದರೆ ಅದರ ಆರ್ಥಿಕ, ಸಾಮಾಜಿಕ, ನೈತಿಕ ಪರಿಣಾಮಗಳ ಅಭ್ಯಾಸವಾದುದರಿಂದ ಅದು ಸಮಾಜವಿಜ್ಞಾನಗಳ ನೆರಳಿನಲ್ಲೇ ಸಾಧ್ಯವೆಂದೂ ಇವರು ಹೇಳುತ್ತಾರೆ. ಕಾನೂನಿನ ಜೀವಾಳವಾಗಿರತಕ್ಕದ್ದು ತರ್ಕವಲ್ಲ, ಅನುಭವ-ಎಂಬ ಸೂತ್ರದಿಂದ ಈ ನಿಲುವಿಗೆ ಸ್ಫೂರ್ತಿ ದೊರಕಿದೆ. ನ್ಯಾಯಲಯದ ಮೂಲಕ ಅಥವಾ ಅದರ ಹಿನ್ನೆಲೆಯಲ್ಲಿ ಕಾನೂನು ಕಾರ್ಯ ಸಾಧಿಸುವುದೆಂಬುದನ್ನು ಮುಂದಿಟ್ಟುಕೊಂಡು ಅದರ ಕ್ರಿಯಾತ್ಮಕ ಹಾಗೂ ನಿಯಮರೂಪಿ ಅಭ್ಯಾಸಗಳೆರಡನ್ನೂ ಸಮನ್ವಯಿಸಲು ಯತ್ನಿಸಲಾಗಿದೆ.

ಕಾನೂನಿನ ನಿಯಮಗಳು ನಿರ್ದಿಷ್ಟ ಸಂದರ್ಭಗಳಲ್ಲಿ ನ್ಯಾಯಾಲಯಗಳು ಏನೂ ಮಾಡುತ್ತವೆಂಬ ಭವಿಷ್ಯ ವಚನೆಗಳು ಎಂಬುದಾಗಿ ವ್ಯಾಖ್ಯೆ ನೀಡಲಾಗಿದೆ. ಕಳವು ಮಾಡಿದವನು ಶಿಕ್ಷೆಗೆ ಗುರಿಯಾಗುತ್ತಾನೆ ಎಂದರೆ, ಕಳವು ಮಾಡಿದ್ದು ನ್ಯಾಯಾಲಯದ ದೃಷ್ಟಿಯಲ್ಲಿ ಸಿದ್ಧವಾದರೆ ನ್ಯಾಯಾಲಯ ಅವನನ್ನು ಶಿಕ್ಷೆಗೆ ಗುರಿಪಡಿಸುವುದು ಎಂದು ಅರ್ಥವಾಗುತ್ತದೆ. ಕಾನೂನಿನ ನಿಯಮಗಳೆಂದರೆ ನ್ಯಾಯಾಲಯಗಳು (ಅಧಿಕಾರಿಗಳು) ನ್ಯಾಯನಿರ್ಣಯ ಮಾಡುವಾಗ ನಿರ್ದೇಶಿಸಿ ಬಳಸುವ ತತ್ತ್ವಗಳು ಎಂದು ವ್ಯಾಖ್ಯಾನ ಮಾಡಲಾಗಿದೆ. ಔಷಧಿಯೆಂದರೆ ವೈದ್ಯರು ರೋಗಿಗೆ ಏನು ಮಾಡಬಹುದೆಂಬ ಭವಿಷ್ಯವಚನ-ಎಂದು ಪ್ರತಿಪಾದಿಸುವಂತೆ ಈ ತರ್ಕ ಎಂದು ಕೆಲವರು ಇದರ ಬಗ್ಗೆ ಆಕ್ಷೇಪಿಸುತ್ತಾರೆ. ನ್ಯಾಯಾಲಯಗಳ ಪರಿಸರಕ್ಕೆ ಹೋಗದೆ ಕಾನೂನನ್ನು ಗುರುತಿಸುವುದು ಸಾಧ್ಯವಿಲ್ಲವೆ ಎಂದು ಕೇಳುತ್ತಾರೆ.

ಪರಿಶುದ್ಧ ನ್ಯಾಯತತ್ತ್ವ: ನ್ಯಾಯಾಲಯದ ಅಥವಾ ಅನ್ಯ ಶಾಸ್ತ್ರಗಳ ವಿಚಾರವನ್ನು ತರದೆ ಸ್ವತಂತ್ರವಾಗಿ ಕಾನೂನಿನ ಸ್ವರೂಪವನ್ನು ಚರ್ಚಿಸುವ ಪ್ರಯತ್ನವೂ ನಡೆದಿದೆ. ಇದನ್ನು ಪರಿಶುದ್ಧ ನ್ಯಾಯತತ್ತ್ವ ಎಂದು ಕರೆಯಲಾಗಿದೆ. ಇದನ್ನರಿಯಲು ನಿಸರ್ಗ ನಿಯಮಗಳಿಗೂ ನಡೆತೆಯ ನಿಯಮಗಳಿಗೂ ಇರುವ ಭೇದವನ್ನು ಮೊದಲು ಅರಿಯಬೇಕಾಗುತ್ತದೆ. ನಿಸರ್ಗ ನಿಯಮಗಳು ಯಾವುದೇ ಘಟನೆಯ ಯಥಾಸ್ಥಿತಿಯ ವರ್ಣನೆ. ರಸಾಯನಕ್ರಿಯೆ ಮುಂತಾದವನ್ನು ಕುರಿತಂಥವು ನಿಸರ್ಗನಿಯಮಗಳು. ಈ ರೀತಿ ನಡೆಯಬೇಕು ಎಂದು ನಿರ್ದೇಶಿಸುವಂಥವು ಘಟನೆಯ ಯಥಾಸ್ಥಿತಿಯ ವರ್ಣನೆ. ರಸಾಯನಕ್ರಿಯೆ ಮುಂತಾದವನ್ನು ಕುರಿತಂಥವು ನಿಸರ್ಗನಿಯಮಗಳು. ಈ ರೀತಿ ನಡೆಯಬೇಕು ಎಂದು ನಿರ್ದೆಶಿಸುವಂಥವು ನಡತೆಯ ನಿಯಮಗಳು. ನಡತೆಯ ನಿಯಮಗಳ ಪೈಕಿ ಕಾನೂನು ಒಂದು. ಆದರೆ ಇದನ್ನು ಸರ್ಕಾರದ ಆದೇಶ ಎಂದು ವ್ಯಾಖ್ಯೆ ಮಾಡಿ ವಿಂಗಡಿಸಲು ಸಾಧ್ಯವಿಲ್ಲ. ಆದೇಶವೆಂಬ ಮಾತಿನಲ್ಲಿ ಅದನ್ನು ಪಡೆದವನಿಗೆ ಬೆದರಿಕೆಯ ಮಾನಸಿಕ ವಿಕಾರ ಸೂಚ್ಯವಾಗುತ್ತದೆ. ಇದು ಕಾನೂನಿನ ವ್ಯಾಖ್ಯೆಯನ್ನು ಮನಶ್ಯಾಸ್ತ್ರಾವಲಂಭಿಯನ್ನಾಗಿ ಮಾಡುತ್ತದೆ. ಇದಲ್ಲದೆ ಸರ್ಕಾರ (ರಾಜ್ಯ) ಮತ್ತು ಕಾನೂನಿನ ವ್ಯವಸ್ಥೆ ಇವು ಒಂದೇ ವಸ್ತುವಿನ ಭಿನ್ನ ದಿಶೆಗಳ ನೋಟುಗಳು. ಕಾನೂನನ್ನು ನಿರ್ಮಿಸುವ, ಜಾರಿಯಲ್ಲಿ ತರುವ ಅಂಗಗಳನ್ನು ಹೊಂದಿದ ವ್ಯವಸ್ಥೆಯೇ ಸರ್ಕಾರ. ಈ ವ್ಯವಸ್ಥೆಯಲ್ಲಿ ಕಂಡುಬರುವ ನಿಯಮಾವಳಿಗಳೇ ಕಾನೂನು. ಯಾವುದೇ ಸಭೆಯನ್ನು ಸಂಸತ್ತು ಎಂದು ಪರಿಗಣಿಸುವುದು, ಕಾನೂನಿನ ಆಧಾರದ ಮೇಲೆ ವ್ಯಕ್ತಿಗಳಿಗೆ ಮಂತ್ರಿತ್ವ ಅಧ್ಯಕ್ಷತೆ ಮುಂತಾದ ಅಧಿಕಾರಗಳು ಪ್ರಾಪ್ತವಾಗುವುದು ಕಾನೂನಿನ ಕ್ರಿಯಾತ್ಮಕ ವ್ಯಾಪಾರದಿಂದ. ಒಂದು ವಾಣಿ ಅಧಿಕಾರವಾಣಿಯಾಗುವುದು ಕಾನೂನಿನ ಮೂಲಕ, ಮಾತು ಬರಹ ಆಗಿರುವಂಥದು ಅನಿಯಮವಾಗುವುದು ಕಾನೂನಿನ ಆವಿಷ್ಕರಣದಿಂದ. ಕಾನೂನು ಮತ್ತು ಸರ್ಕಾರ ಇವು ಒಂದೇ ಆದ್ದರಿಂದ ಒಂದನ್ನು ಇನ್ನೊಂದರ ಮುಖಾಂತರ ವ್ಯಾಖ್ಯಿಸುವುದು ಸಾಧ್ಯವಿಲ್ಲ.

ಕಾನೂನಿನ ಉದ್ದೇಶ ನ್ಯಾಯ ವಿತರಣೆ ಎಂದು ಆ ಮೂಲಕ ಕಾನೂನಿನ ವ್ಯಾಖ್ಯೆ ಮಾಡಲೂ ಬರುವುದಿಲ್ಲ. ಬೇರೆ ಬೇರೆ ಮೌಲ್ಯಗಳನ್ನು ಪ್ರಧಾನವಾಗಿಟ್ಟುಕೊಂಂಡತೆ ನ್ಯಾಯವೂ ಬೇರೆಬೇರೆಯಾಗುತ್ತದೆ. ಇದಕ್ಕೆ ತರ್ಕಶುದ್ಧವಾದ ನಿಶ್ಚಿತ ರೂಪವಿಲ್ಲ. ಇಂಥ ಅನಿಶ್ಚಿತ ವಸ್ತು ನಿಶ್ಚಿತ ವ್ಯಾಖ್ಯೆಯ ಆಧಾರವಾಗಲು ಸಾಧ್ಯವಿಲ್ಲ. ಮೊದಲೇ ಚರ್ಚಿಸಿದಂತೆ, ಕಾನೂನಿನಲ್ಲಿ ಅಡಕವಾಗಿರುವ ಸಾಮಗ್ರಿ ಜೀವಿತದ ಎಲ್ಲ ಛಾಯೆಗಳನ್ನೂ ಎಲ್ಲ ಶಾಸ್ತ್ರಗಳ ಅಂಶಗಳನ್ನೂ ಹೊಂದಿರುವುದರಿಂದ ಈ ಸಾಮಗ್ರಿಯ ಮೂಲಕ ಕಾನೂನನ್ನು ಖಚಿತವಾಗಿ ನಿರ್ಣಯಿಸುವಂಥ ವ್ಯಾಖ್ಯೆ ಸಾಧ್ಯವಿಲ್ಲವೆಂದು ತೋರಿಸಿಕೊಡಲಾಗಿದೆ. ಕಾನೂನಿನ ಸೂತ್ರಗಳು ತಾರ್ಕಿಕ ಸೋಪಾನಗಳಂತೆ ಒಂದು ಪ್ರಧಾನಸೂತ್ರದಿಂದ ಹಂತಹಂತವಾಗಿ ಇಳಿದು ಬರುವಂಥ ಸ್ವರೂಪಳ್ಳಂಥವು, ಪ್ರಧಾನಸೂತ್ರಕ್ಕೆ ಸುಸಂಗತವಾಗಿ ಎರಡನೆಯ ಹಂತದ ಸೂತ್ರಗಳು; ಅವಕ್ಕೆ ಸುಸಂಗತವಾಗಿ ನಾಲ್ಕನೆಯ ಹಂತದವು-ಹೀಗೆ ಇವು ಕೊನೆಯವರೆಗೂ ಸಾಗುತ್ತವೆ. ಪ್ರತಿಯೊಂದು ಹಂತದ ನಿಯಮಗಳು ಅವಕ್ಕೂ ಹಿಂದಿನ ನಿಯಮಗಳ ಬಲದಿಂದ ಸಮರ್ಥನೀಯವಾಗುತ್ತ ಹೋಗುತ್ತವೆ. ಉದಾಹರಣೆಗೆ, ಭಾರತದ ಸಂವಿಧಾನ ಪ್ರಧಾನ ಸೂತ್ರ. ಅದಕ್ಕನುಗುಣವಾಗಿ ಸಿವಿಲ್ ಪ್ರಕ್ರಿಯಾ ಸಂಹಿತೆಯ ರಚನೆ, ಅದು ನೀಡಿದ ಅಧಿಕಾರಕ್ಕೆ ಅನುಗುಣವಾಗಿ ರಾಜ್ಯದ ಉಚ್ಚ ನ್ಯಾಯಾಲಯದ ನಿಯಮಗಳ ರಚನೆ. ಅದಕ್ಕೆ ಅನುಗುಣವಾಗಿ ಒಂದು ತಾಲ್ಲೂಕಿನ ಮುನ್ಸಿಫ್ ನ್ಯಾಯಾಲಯದ ಆದೇಶ; ಅದಕ್ಕೆ ಅನುಗುಣವಾಗಿ ಬೇಲೀಫನಿಂದ ಜಪ್ತಿ-ಹೀಗೆ ಹಂತಹಂತವಾಗಿ ಪ್ರತಿ ಒಂದು ನಿಯಮವೂ ತನ್ನ ಹಿಂದಿನ ನಿಯಮಕ್ಕೆ ತಾರ್ಕಿಕವಾಗಿ ಸುಸಂಲಗ್ನಮದ, ಅನುಕ್ರಮವಾದ ಸೂತ್ರಾನುಬಂಧ. ಇಲ್ಲಿ ಕಾನೂನಿನ ನಿರ್ಮಾಣಕ್ರಿಯೆಯನ್ನೂ ನಿರ್ಮಾಣ ಸಮರ್ಥನವನ್ನೂ ಕಾನೂನೇ ನಿರ್ಣಯಿಸುವುದು. ಹೀಗೆ ಕಾನೂನು ಸ್ವಯಂ ಸ್ವಷ್ಟವಾದ್ದು; ಅದರ ಸಿಂಧುತ್ವ ಅಸಿಂಧುತ್ವಗಳು ಆದರೆ ಆಧಾರದ ಮೇಲೆಯೇ ನಿಲ್ಲುವವು. ಕಾನೂನಿನ ಸ್ವರೂಪವನ್ನು ನಿರ್ಣಯಿಸಲು ಅದಕ್ಕೆ ಬಾಹ್ಯವಾದ ಯಾವುದೇ ಶಾಸ್ತ್ರವನ್ನು ಅವಲಂಬಿಸಬೇಕಾದ್ದಿಲ್ಲ. ಅದು ಸ್ವಯಂಪೂರ್ಣ, ಅನ್ಯಶಾಸ್ತ್ರದೊಂದಿಗೆ ಮಿಶ್ರವಾದ್ದಲ್ಲ; ಅದು ಪ್ರತ್ಯೇಕ ವಿಶಿಷ್ಟ, ಪರಿಶುದ್ಧ.

ಈ ವಾದದ ತರ್ಕಶುದ್ಧಿಯನ್ನು ಒಪ್ಪಬಹುದಾದರೂ ಇದು ಕಾನೂನಿನ ಕೇವಲ ಬಾಹ್ಯರೇಷೆಗಳನ್ನು ತೋರಿಸುವುದೇ ಹೊರತು ಅದರ ವರ್ಣಮಯವಾದ ಸಂಪೂರ್ಣ ಚಿತ್ರ ಇದರಿಂದ ದೊರಕುವುದಿಲ್ಲ. ಅದನ್ನು ಪಡೆಯಲು ಇದಕ್ಕಿಂತ ವ್ಯಾಪಕವಾದ ದೃಷ್ಟಿಯನ್ನೇ ತಳೆಯಬೇಕಾಗುತ್ತದೆ. ಅದರ ನಿಜವಾದ ಸ್ವರೂಪವನ್ನು ಅರಿಯಬೇಕಾದರೆ ಸಮಾಜವಿಜ್ಞಾನಗಳ ತತ್ತ್ವಗಳ ಜ್ಞಾನವೂ ಆವಶ್ಯಕ. ಸಮಾಜ ನಿಯಂತ್ರಣದ. ಸಮಾಜದ ಆಸೆ ಆಕಾಂಕ್ಷೆಗಳನ್ನು ಪೂರೈಸುವ. ಸುವ್ಯವಸ್ಥೆಯನ್ನುಂಟುಮಾಡುವ, ವಿವಾದಗಳನ್ನು ಬಗೆಹರಿಸಿ ನ್ಯಾಯದಾನ ಮಾಡುವ ಪ್ರಕ್ರಿಯೆಯೂ ಅದರಲ್ಲಿ ಬಳಸುವ ಪಾರಿಭಾಷಿಕ ಸಂಪತ್ತಿನಜ್ಞಾನವೂ ನ್ಯಾಯತತ್ತ್ವದ ಕ್ಷೇತ್ರದಲ್ಲಿ ಬರುತ್ತದೆ.

ಕಾನೂನುಗಳ ಸಾಮಾನ್ಯಾಂಶಗಳು: ನ್ಯಾಯತತ್ತ್ವ ಯಾವುದೇ ಕಾನೂನಿನ ಚರ್ಚೆಯಾಗಿರದೆ, ಎಲ್ಲ ಕಾನೂನುಗಳಿಗೂ ಅನ್ವಯಿಸುವ ಮೂಲಭೂತ ಪ್ರಶ್ನೆಗಳ ವಿವೇಚನೆಯಾದ್ದರಿಂದ ಇವಕ್ಕೆಲ್ಲ ಸಾಮಾನ್ಯವಾದ ಮುಖ್ಯ ಅಂಶಗಳನ್ನು ಈಗ ಪರಿಶೀಲಿಸಬಹುದು.

ಕಾನೂನಿನ ಮೂಲಗಳು: ಕಾನೂನಿನಲ್ಲಿ ಅಡಕವಾಗಿರುವ ವಿಚಾರ ಸಾಮಗ್ರಿಯೂ ಅದರ ವಚನರೂಪವೂ ಎಲ್ಲಿಂದಲೂ ಬರಬಹುದು. ಅದು ಅನ್ಯಶಾಸ್ತ್ರಗಳಿಂದ ಬಂದಿರಬಹುದು. ಪಂಡಿತರ ಗ್ರಂಥಗಳಿಂದ ಬಂದಿರಬಹುದು. ಆದರೆ ಅದರ ಕಾನೂನುತನ ಮಾತ್ರ ಕಾನೂನಿಂದಲೇ, ನಿರ್ದಿಷ್ಟವಾದ ಮೂಲಸ್ಥಾನಗಳಿಂದ, ಬರಬೇಕು. ಯಾವುದೇ ನಾಣ್ಯದ ಮೂಲಧಾತು ಎಲ್ಲಿಂದಲೇ ಬರಬಹುದು. ಆದರೆ ಅದರ ನಾಣ್ಯತ್ವ ಮಾತ್ರ ಸರ್ಕಾರದ ಟಂಕಸಾಲೆಯಿಂದ ಮುದ್ರಪಡೆದು ಬಂದದ್ಧರಿಂದಲೇ ಅದಕ್ಕೆ ಪ್ರಾಪ್ತವಾಗುತ್ತದೆ. ಅಂತೆಯೇ ಯಾವುದೇ ನಿಯಮವಾಗಲಿ, ಕಾನೂನಿನಿಂದ ನಿರ್ದೇಶಿತವಾದ ದ್ವಾರಗಳ ಮೂಲಕವೇ ಕಾನೂನು ಪ್ರಪಂಚವನ್ನು ಸೇರಿ ಕಾನೂನೆಂದು ಪರಿಗಣಿತವಾಗಬೇಕಾಗುತ್ತದೆ. ಯಾವುದೇ ನಿಯಮವನ್ನು ಕಾನೂನು ಎನ್ನಬೇಕಾದರೆ ಅದರ ಮೂಲ ಅಧಿಕೃತವಾದ್ದಿರಬೇಕು. ಅಂದರೆ ಕಾನೂನನ್ನು ಸೃಷ್ಟಿಸಲು ಅದಕ್ಕೆ ಅಧಿಕಾರವಿದೆಯೆಂಬುದನ್ನು ಕಾನೂನೇ ಮನ್ನಿಸಿರಬೇಕು. ಮತ್ತು ಅದು ಉಗಮಿಸುವ ರೀತಿ ಆ ಬಗೆಯ ಉಗಮಕ್ಕೆ ಯೋಗ್ಯವಾದ್ದೆಂದು ಕಾನೂನೇ ಒಪ್ಪಿಕೊಂಡಿರಬೇಕು, ಅಂದರೆ ಅಧಿಕೃತ ರೀತಿಯಲ್ಲಿ ಬಂದದ್ದು ಮಾತ್ರ ಕಾನೂನಾಗುತ್ತದೆ. ಭಾರತದ ನ್ಯಾಯವ್ಯವಸ್ಥೆಯಲ್ಲಿ ಮುಂದಿನ ನಾಲ್ಕು ಮೂಲಗಳಲ್ಲಿ ಯಾವುದಾದರೊಂದರಿಂದ ಉಗಮಿಸಿದ್ದು ಮಾತ್ರವೇ ಕಾನೂನಿನ ಪರಿವಾರವನ್ನು ಸೇರಬಹುದು: 1 ವಿಧಿನಿರ್ಮಾಣ ಅಥವಾ ಶಾಸನ, 2 ನ್ಯಾಯ ನಿರ್ಣಯ, 3 ಸಂಪ್ರದಾಯ, 4 ಸಮ್ಮತಿ.


ವಿಧಿನಿರ್ಮಾಣ: ನಿಯಮಗಳನ್ನು ಯುಕ್ತರೀತಿಯಿಂದ ಸಾರಿ ಅವನ್ನು ಕಾನೂನಾಗಿ ಮಾಡುವುದು ವಿಧಿನಿರ್ಮಾಣ ಅಥವಾ ಶಾಸನ. ಉದಾಹರಣೆಗೆ ಸಂಸತ್ತುಯಥೋಕ್ತ ಕ್ರಮದಿಂದ ಕಂಪನಿಗಳ ಅಧಿನಿಯಮವನ್ನು ಮಾಡಬಹುದು. ಇದು ಕಾನೂನು. ಇದು ಇಂಥ ದಿನದಿಂದ ಜಾರಿಯಲ್ಲಿ ಬರುವುದು ಎಂದು ಪ್ರಕಟಪಡಿಸುವುದರಿಂದಲೇ ಕಾನೂನಾಗುತ್ತದೆ. ಈ ಕಾನೂನಿನ ಬಲದಿಂದ ಸರ್ಕಾರವೂ ಅದರಿಂದ ನಿರ್ಮಿತವಾದ ಕಂಪನಿ ಆಡಳಿತ ಸಂಸ್ಥೆಯೂ ವ್ಯವಹರಿಸುತ್ತವೆ. ಈ ಕಾನೂನು ನೀಡಿದ ಅಧಿಕಾರ ಬಲದಿಂದ ಉಚ್ಚ ನ್ಯಾಯಲಯಗಳು ಉಕ್ತಕ್ರಮದಲ್ಲಿ ನಿಯಮಾವಳಿಗಳನ್ನು ಸಾರುತ್ತವೆ. ಅವೂ ಕಾನೂನಾಗುವುದರಿಂದ ಅವನ್ನೂ ಈ ಕಾನೂನಿನ ವ್ಯಾಪ್ತಿಯಲ್ಲಿ ಸೇರಿಸಬೇಕಾಗುತ್ತದೆ. ಈ ಕಾನೂನಿನಲ್ಲಿಯ ವಾಕ್ಯಗಳ ಅಧಿಕೃತ ಅರ್ಥವನ್ನೂ ಕಾನೂನೆಂದೇ ಪರಿಗಣಿಸತಕ್ಕದ್ದು. ಆ ಅರ್ಥಕ್ಕೆ ನಿಶ್ಚಿತತೆಯನ್ನು ತಂದುಕೊಡಲು ಪ್ರತಿಯೊಂದು ಕಾನೂನು ಪದ್ಧತಿಯಲ್ಲೂ ಅರ್ಥನಿರ್ಣಯದ ವ್ಯವಸ್ಥೆ ಇರುತ್ತದೆ. ಭಾರತದಲ್ಲಿ ಕಾನೂನಿನ ಅರ್ಥನಿರ್ಣಯದ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಲಾಗಿದೆ.

ಯಾವುದೇ ಕಾನೂನಿನ ವ್ಯಾಪ್ತಿಯಲ್ಲಿ ಅದಕ್ಕೆ ಸಂಬಂಧಿಸಿದ ಅನೇಕ ಬಗೆಯ ಉಪವಿಧಿಗಳನ್ನು ಸೇರಿಸಬೇಕು. ಉದಾ: ವಿಧಾನ ಸಭೆ ಪೌರಸಭಾ ಅಧಿನಿಯಮವನ್ನೂ ವಿಧಿಗಳನ್ನೂ ಸ್ವೀಕರಿಸಿ ಅವನ್ನು ಕಾನೂನಾಗಿ ಮಾಡುತ್ತದೆ. ಆ ಕಾನೂನಿನ ಅಧಿಕಾರದಿಂದ ಮಾಡಿಕೊಳ್ಳುತ್ತದೆ. ಈ ಉಪವಿಧಿಗಳಿಂದ ಉದಿಸುವ ನಿಯಮಗಳೂ ಕಾನೂನಿನ ಭಾಗವೇ ಆಗುತ್ತದೆ.

ನ್ಯಾಯ ನಿರ್ಣಯ: ಕೆಲವು ಸಂದರ್ಭಗಳಲ್ಲಿ ವ್ಯಾಜ್ಯವೊಂದನ್ನು ನ್ಯಾಯಾಲಯ ನಿರ್ಣಯಿಸುವಾಗ ಒಂದು ತತ್ತ್ವವನ್ನು ಹಚ್ಚಿ ನಿರ್ಣಯಿಸುತ್ತದೆ. ಮುಂದೆ ಅಂಥ ವ್ಯಾಜ್ಯಗಳು ನ್ಯಾಯಾಲಯದ ಮುಂದೆ ಬಂದರೆ ಅದೇ ತತ್ತ್ವವನ್ನು ಹಚ್ಚಿ ನಿರ್ಣಯ ನೀಡುತ್ತದೆ. ಈ ವಿಷಯವನ್ನು ಅರಿತು ಜನರು ತಮ್ಮ ನಡತೆಯನ್ನು ಆ ತತ್ತ್ವಕ್ಕೆ ಅನುಗುಣವಾಗಿ ರೂಪಿಸಿಕೊಳ್ಳುತ್ತಾರೆ. ಹೀಗಾಗಿ ನ್ಯಾಯ ನಿರ್ಣಯದಲ್ಲಿ ಒಳಸಿದ ತತ್ತ್ವಗಳು ನಡತೆಯ ನಿಯಮಗಳಾಗಿ ಪರಿಣಮಿಸುತ್ತವೆ ಮತ್ತು ಅವು ಸರ್ಕಾರದ ಬಲದಿಂದ ನ್ಯಾಯಲಯಗಳ ಮುಖಾಂತರ ಜಾರಿಯಲ್ಲಿ ತರಲಾಗುವ ತತ್ತ್ವಗಳಾಗುವುದರಿಂದ ಅವು ಕಾನೂನಿನ ನಿಯಮಗಳಾಗುತ್ತವೆ. ಹೀಗೆ ನ್ಯಾಯಾಲಯಗಳೂ ಕಾನೂನಿನ ನಿಯಮಗಳ ಉಗಮಸ್ಥಾನಗಳಾಗುತ್ತವೆ. ಅದರೆ ಅಧಿನಿಯಮಗಳಿಗೂ ಇವಕ್ಕೂ ಒಂದು ಮುಖ್ಯ ಭೇದವಿದೆ. ನ್ಯಾಯಾಲಯಗಳು ವಿಧಾನಸಭೆಗಳಂತೆ ತಾವಾಗಿಯೇ ನಿಯಮಗಳ ಉಗಮಸ್ಥಾನಗಳಾಗುತ್ತವೆ. ಆದರೆ ಅಧಿನಿಯಮಗಳಿಗೂ ಇವಕ್ಕೂ ಒಂದು ಮುಖ್ಯ ಭೇದವಿದೆ. ನ್ಯಾಯಾಲಗಳು ವಿಧಾನಸಭೆಗಳಂತೆ ತಾವಾಗಿಯೇ ನಿಯಮಗಳನ್ನು ಸಾರಿ ಅವು ಜಾರಿಯಲ್ಲಿ ಬರುವಂತೆ ಮಾಡುವುದಿಲ್ಲ. ವ್ಯಾಜ್ಯ ನಿರ್ಣಯದಲ್ಲಿ ಒಂದು ತತ್ತ್ವವನ್ನು ಎತ್ತಿಹಿಡಿದು. ಆ ವ್ಯಾಜ್ಯದ ನಿರ್ಣಯದಲ್ಲಿ ಉಪಯೋಗಿಸಿ. ಜನರಿಗೆ ಅಪ್ರತ್ಯಕ್ಷವಾಗಿ ಮಾರ್ಗದರ್ಶನ ನೀಡುತ್ತವೆ. ನ್ಯಾಯಾಲಯಗಳು ಪ್ರತಿ ವಿಧಾನ ಸಭೆಗಳಂತೆ ವರ್ತಿಸುವುದಿಲ್ಲ. ತಮ್ಮ ಮುಂದಿರುವ ವ್ಯಾಜ್ಯಗಳ ನಿರ್ಣಯ ಅವುಗಳ ಕಾರ್ಯ. ಆ ಕಾರ್ಯದ ಅಂಗವಾಗಿ ನಿರ್ಣಯಕ್ಕೆ ಅವಶ್ಯವಾದ ತತ್ತ್ವವನ್ನು ಅವು ಉಪಯೋಗಿಸುತ್ತವೆ. ಸಮಾನವಾದ ವ್ಯಾಜ್ಯವನ್ನು ಸಮಾನ ತತ್ತ್ವಗಳಿಂದ ನಿರ್ಣಯಿಸುವುದು ಯೋಗ್ಯ ನ್ಯಾಯನಿರ್ಣಯದ ಪದ್ಧತಿ. ಅವು ಈ ಆವಶ್ಯಕತೆಯನ್ನು, ತತ್ತ್ವಗಳನ್ನು ಸಾರುತ್ತ ಹೋದರೆ ತಮ್ಮ ಕ್ಷೇತ್ರಗಳನ್ನು ಬಿಟ್ಟು ವಿಧಾನಸಭೆಗಳ ಕ್ಷೇತ್ರಗಳನ್ನು ಪ್ರವೇಶಿದಂತಾಗುತ್ತದೆ. ಆದ್ದರಿಂದ ನ್ಯಾಯ ನಿರ್ಣಯಕ್ಕೆ ನ್ಯಾಯಾಲಯಗಳ ಕಾನೂನು ನಿರ್ಮಾಣ ಆನುಷಂಗಿಕ, ಮತ್ತು ಅವುಗಳ ಮುಂದಿರುವ ಅಗತ್ಯಕ್ಕೆ ಸೀಮಿತ. ವಿಧಾನ ಸಭೆಗಳೂ ಉಳಿದ ಉಪವಿಧಿ ನಿರ್ಮಾಪಕ ಪ್ರಾಧಿಕರಣಗಳೂ ನಿಯಮಗಳನ್ನು ಸಾರುವ ಕ್ರಮದಿಂದ ಕಾನೂನನ್ನು ರಚಿಸಿದರೆ, ನ್ಯಾಯಾಲಯಗಳ ಕಾನೂನು ನಿರ್ಣಯದಲ್ಲಿ ಯಥೋಚಿತ ತತ್ತ್ವಗಳನ್ನು ಬಳಸುವುದರ ಮೂಲಕ ನಿಯಮಗಳನ್ನು ರೂಪಿಸಿ ಅವಕ್ಕೆ ಕಾನೂನುತನವನ್ನು ನೀಡುತ್ತವೆ. ಆದರೆ ನ್ಯಾಯ ನಿರ್ಣಯದಲ್ಲಿ ತತ್ತ್ವಗಳ ಬಗ್ಗೆ ಹೇಳಿದ ಎಲ್ಲ ವಚನಗಳೂ ಕಾನೂನು ಎನಿಸುವುದಿಲ್ಲ. ಆ ನಿರ್ಣಯಕ್ಕೆ ಆವಶ್ಯಕವಾಗಿದ್ದು ಆ ತತ್ತ್ವವನ್ನು ಆಧರಿಸದೆಯೆ ಆ ನಿರ್ಣಯವನ್ನು ತಾರ್ಕಿಕವಾಗಿ ಮುಟ್ಟಲು ಸಾಧ್ಯವಿಲ್ಲವಾಗಿದ್ದರೆ, ಆ ತತ್ತ್ವ ಆ ನಿರ್ಣಯಕ್ಕೆ ತಳಹದಿಯಾದರೆ. ಆಗ ಮಾತ್ರ ಅದು ಕಾನೂನಾಗುತ್ತದೆ, ಎಂದರೆ ಬಂಧನಕಾರಿಯಾಗುತ್ತದೆ. ಒಂದು ನಿರ್ಣಯಕ್ಕೆ ಒಂದಕ್ಕಿಂತ ಹೆಚ್ಚು ತತ್ತ್ವಗಳು ಆಧಾರವಾಗಿದ್ದರೆ ಅವೆಲ್ಲವೂ ಬಂಧನಕಾರಿಗಳು. ಆದರೆ ಎಷ್ಟಮಟ್ಟಿಗೆ ಒಂದು ತತ್ತ್ವದ ಆಧಾರದ ಆವಶ್ಯಕತೆಯಿದೆಯೋ ಅಷ್ಟರಮಟ್ಟಿಗೆ ಮಾತ್ರ ಅದು ಬಂಧನಕಾರಿ.

ಸಂಪ್ರದಾಯ: ಯಾವುದೇ ಜನಾಂಗದಲ್ಲಿ ಜನತೆಯಿಂದ ಸ್ವೀಕೃತವಾಗಿ ಬಹುಕಾಲದಿಂದ ನಡೆದುಬಂದಿರುವ, ಜನತೆಯ ವರ್ತನೆಗಳನ್ನು ರೂಪಿಸಿರುವ, ಅವರ ನ್ಯಾಯಬುದ್ಧಿಗೆ ಉಚಿತವೆಂದು ತೋರಿಬಂದಿರುವ ಸಂಪ್ರದಾಯಗಳನ್ನು ಕಾನೂನು ಮನ್ನಿಸುತ್ತದೆ. ಅವನ್ನು ಅದು ಕವಡಿ, ಅನಿಶ್ಚಯತೆಯನ್ನುಂಟುಮಾಡಿ, ಜನರ ಸಮಂಜಸವಾದ ನಿರೀಕ್ಷಣೆಗಳನ್ನು ಹುಸಿಗೊಳಿಸುವುದಿಲ್ಲ. ಭಾರತದ ಹಿಂದು ಕಾನೂನಿನಲ್ಲಿ ಸ್ಮøತಿವಚನಗಳಿಗೆ ಶಿಷ್ಟಾಚಾರ ಅಥವಾ ಸಂಪ್ರದಾಯವೊಂದು ವಿರುದ್ಧವಾಗಿದ್ದರೂ ಅದನ್ನು ಎತ್ತಿಹಿಡಿಯಲಾಗುತ್ತದೆ. ರೋಮನ್ ನ್ಯಾಯಪದ್ಧತಿಯನ್ನು ಅನುಸರಿಸುವ ಜರ್ಮನಿ ಮುಂತಾದ ದೇಶಗಳಲ್ಲಿ ಅಧಿನಿಯಮಗಳಿಗೆ ಒಂದು ಸಂಪ್ರದಾಯ ವಿರುದ್ಧವಾಗಿದ್ದರೂ ಅದನ್ನು ಎತ್ತಿಹಿಡಿಯಲಾಗುತ್ತದೆ. ಆದರೆ ಇಂಗ್ಲಿಷ್ ನ್ಯಾಯಪದ್ಧತಿಯಲ್ಲಿ ಹಾಗಲ್ಲ, ಅಧಿನಿಯಮಕ್ಕೆ ಸಂಪ್ರದಾಯ ಅವಿರೋಧವಾಗಿರಬೇಕು. ಭಾರತದಲ್ಲೂ ಅದೇ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಸ್ಮøತಿವಚನಗಳಿಗೆ ವಿರುದ್ಧವಾದ ವಿವಾಹ ಪದ್ಧತಿಗಳು, ವಾರಸು ಪದ್ಧತಿಗಳು ಜಾರಿಯಲ್ಲಿದ್ದುವು. ಅದರ ವಿವಾಹ ಮತ್ತು ವಾರಸು ಕಾನೂನುಗಳು ಅಧಿನಿಯಮಗಳ ರೂಪವನ್ನು ಪಡೆದ ಮೇಲೆ ಅವಕ್ಕೆ ವಿರೋಧವಾದ (ಅಂದರೆ ಅವು ಉಳಿಸಿಕೊಳ್ಳದಿರುವ) ಸಂಪ್ರದಾಯಗಳನ್ನು ಅನುಸರಿಸಿದರೆ ಅವು ಅಸಿಂಧು. ಅವು ಕಾನೂನೆನಿಸಿಕೊಳ್ಳಲು ಅನರ್ಹ.

ಸಂಪ್ರದಾಯವನ್ನು ಕಾನೂನು ಎನ್ನಬೇಕಾದರೆ ಅದು ಕೆಲವು ನಿಯಮಗಳಿಗೆ ಅನುಗುಣವಾಗಿರಬೇಕು. ಕಾನೂನು ಅದೂ ಬಂಧನಕಾರಿಯೆಂಬ ನಂಬುಗೆ ಅವಶ್ಯ. ಅಲ್ಲದೆ ಆ ಸಂಪ್ರದಾಯ ಹಳೆಯ ಕಾಲದಿಂದ ಬಂದು ರೂಢವಾಗಿರಬೇಕು. ಇಂಗ್ಲೆಂಡಿನಲ್ಲಿ ಸಂಪ್ರದಾಯಗಳು ಕಾನೂನಿನ ಏಕರೂಪತೆಗೆ ಭಂಗ ತರಬಾರದು ಎಂಬ ಉದ್ದೇಶದಿಂದ ಅವುಗಳ ಬೆಳವಣಿಗೆಯನ್ನು ತಡೆದು. ಅವು 1ನೆಯ ರಿಚರ್ಡ್ ದೊರೆಯ ಕಾಲದಿಂದ ಪ್ರಚಾರದಲ್ಲಿರಬೇಕೆಂಬ ನಿಯಮವನ್ನು ವಿಧಿಸಲಾಗಿದೆ. ಭಾರತದಲ್ಲಿ ಆ ನಿಯಮವಿಲ್ಲ. ಯಾರ ಸ್ಮøತಿಯಲ್ಲೂ ಅದಕ್ಕೆ ವಿರೋಧವಾದ ಆಚಾರ ಉಪಲಬ್ಧವಾಗಿರದಿದ್ದರೆ ಸಾಕು.

ಇನ್ನೊಂದು ಆವಶ್ಯಕತೆಯೆಂದರೆ, ಅದು ಅಸಮಂಜಸವಾಗಿರಬಾರದು. ಶಿಷ್ಟ ಚಾರದಿಂದ ಸಂಪ್ರದಾಯ ಬಂದದ್ದಾದರೆ ಶಿಷ್ಯರು ಅಸಮಂಜಸವಾಗಿ ಆಚರಿಸುವುದಿಲ್ಲ. ಹೀಗೆ ಅಸಮಂಜಸವಲ್ಲದದ್ದು, ಶಾಸನಕ್ಕೆ ಅವಿರೋಧವಾಗದ, ಬಂಧನಕಾರಿ ಎಂದು ಎಣಿಸಲಾದ, ಯಾವುದೇ ವೃದ್ಧನ ಸ್ಮøತಿಗೆ ಅವಿರೋಧವಾದಂಥ ಸಂಪ್ರದಾಯ ಪ್ರಚಲಿತವಿದೆಯೆಂದು ನ್ಯಾಯಾಲಯಕ್ಕೆ ಸಮಾಧಾನವಾಗುವಂತೆ ಸಿದ್ಧವಾದರೆ ಆ ಸಂಪ್ರದಾಯವನ್ನು ನ್ಯಾಯಾಲಯ ಮನ್ನಿಸಿ ಅದನ್ನು ಕಾನೂನೆಂದು ಪರಿಗಣಿಸುತ್ತದೆ.

ಸಮ್ಮತಿ: ಕರಾರು ಅಧಿನಿಯಮಕ್ಕೆ ವಿರೋಧವಾಗಿರದೆ, ಪರಸ್ಪರ ಸಮ್ಮತಿಯಿಂದ ಇಬ್ಬರು ವಚನಬದ್ಧರಾದರೆ ನ್ಯಾಯಾಲಯ ಅವರನ್ನು ಅವರ ವಚನಬದ್ಧತಿಗೆ ಅನುಗುಣವಾಗಿ ನಡೆಯುವಂತೆ ಒತ್ತಾಯಿಸುತ್ತದೆ. ಆ ಕರಾರಿಗೆ ಸಂಬಂಧಪಟ್ಟ ಮಟ್ಟಿಗೆ ಅವರು ಬದ್ಧರು. ಹೀಗೆ ತಮ್ಮ ವರ್ತನೆಯನ್ನು ಕಾನೂನಿನ ಬಂಧನದಲ್ಲಿ ಸಿಲುಕಿಸಲು ಅವರ ಸ್ವತಂತ್ರ ಸಮ್ಮತಿಯೇ ಮೂಲ. ಈ ಬಂಧನಕಾರಿ ನಿಯಮಗಳು ಅವರ ಪೂರ್ವಸಮ್ಮತಿಯಿಂದ ಹುಟ್ಟಿದ್ದು. ಅವರವರ ಮಟ್ಟಿಗೆ ಇವು ಕಾನೂನಾಗಿ ಅವರ ಕೃತಿಗಳನ್ನು ನಿರ್ದೇಶಿಸುತ್ತವೆ. ಈ ಬಂಧನಕಾರಿ ನಿಯಮಗಳ ಉಗಮವಾದ್ದರಿಂದ, ಇವು ಅವರ ವರ್ತನೆಗೆ ವಿಶೇಷ ಕಾನೂನಾಗಿ ಪರಿಣಮಿಸುವುದರಿಂದ, ಕರಾರೂ ಕಾನೂನಿನ ಒಂದು ಉಗಮಸ್ಥಾನವಾಗುತ್ತದೆ.

ಕಾನೂನಿನ ತಂತ್ರ, ಪರಿಭಾಷೆ: ಕಾನೂನು ಒಂದು ಸಮಾಜದ ವ್ಯವಸ್ಥೆಯನ್ನೂ ಸಮಾಜದ ಉದ್ಧಾರದ ಗುರಿಯನ್ನೂ ಆರಿಸಿದ ಹಿತಗಳನ್ನೂ ರಕ್ಷಿಸುವ, ಮತ್ತು ತದ್ವಿರುದ್ಧ ವರ್ತನೆಗಳನ್ನು ಪ್ರತಿಷೇಧಿಸಿ, ಪ್ರತಿಬಂಧಿಸುವ ಕಾರ್ಯವನ್ನು ಸಾಧಿಸುತ್ತದೆ. ಈ ಕಾರ್ಯದಲ್ಲಿ ಹಕ್ಕು ಮತ್ತು ಕರ್ತವ್ಯದ ಪರಿಭಾಷೆಯನ್ನು ಉಪಯೋಗಿಸುತ್ತದೆ. ಹಕ್ಕೆಂದರೆ ಕಾನೂನು ರಕ್ಷಿಸುವ ಹಿತ. ಕರ್ತವ್ಯವೆಂದರೆ ಕಾನೂನು ಒತ್ತಾಯಪಡಿಸುವ ಕೃತಿ. ಉದಾಹರಣೆಗೆ, ಒಂದು ಹೊಲವನ್ನು ಪಡೆಯಲು ನೆರೆಹೊರೆಯವರೆಲ್ಲ ಆಕಾಂಕ್ಷೆಪಡಬಹುದು. ಅವರೆಲ್ಲರ ದೃಷ್ಟಿಯಿಂದ ಆ ಹೊಲವನ್ನು ಪಡೆಯುವುದರಲ್ಲಿ ಅವರ ಹಿತವಿರುತ್ತದೆ. ಆದರೆ ಆ ಹೊಲವನ್ನು ಕೊಂಡವನಿಗೆ ಅಥವಾ ಅವನ ಮಗನಿಗೆ ಅಥವಾ ಸರ್ಕಾರ ಅದರ ಖಾತೆ ಹಾಕಿ ಕೊಟ್ಟವನಿಗೆ ಅದು ಸಿಗುವಂತೆ ಕಾನೂನು ಮಾಡುತ್ತದೆ; ಎಂದರೆ ಅವನ ಹಕ್ಕನ್ನು ಎತ್ತಿಹಿಡಿದು ಸಂರಕ್ಷಿಸುತ್ತದೆ. ಉಳಿದವರು ಅದರಲ್ಲಿ ಹಸ್ತಕ್ಷೇಪಮಾಡುವಂತೆ ಪ್ರತಿಷೇಧಿಸುತ್ತದೆ. ಅಲ್ಲಿ ಪ್ರವೇಶ ಮಾಡದಿರುವುದು, ಅದರ ಫಲವನ್ನು ಒಯ್ಯುದಿರುವುದು, ಆ ಸ್ಥಳಕ್ಕೆ ಸಂಬಂಧಿಸಿದಂತೆ ಕಿರುಕುಳ ಉಂಟಾಗದಂತೆ ನಡೆದುಕೊಳ್ಳುವುದು-ಇವು ಅದರ ಮಾಲೀಕರಲ್ಲದವರ ಕರ್ತವ್ಯ. ಅದನ್ನು ಕಾನೂನಿನ ಮಿತಿಯಲ್ಲಿ ಸ್ವಂತ ಇಚ್ಛೆಯಂತೆ ಅನುಭವಿಸುವುದು, ಪರಾಧೀನ ಮಾಡುವುದು ಆ ಮಾಲೀಕನ ಹಕ್ಕು. ಬೇಕಾದವನಿಗೆ ಬೇಕಾದಷ್ಟು ಕಿಮ್ಮತ್ತಿಗೆ ಕೊಡುವುದರಲ್ಲಿ ಆ ಮಾಲೀಕನ ಹಿತವಿರಬಹುದಾದರರೊ ಸಮಾಜದ ಹಿತದೃಷ್ಟಿಯಿಂದ ಅದನ್ನು ಬೇಸಾಯಗಾರನಿಗೇ ಕೊಡಬೇಕೆಂದು ಕಾನೂನು ನಿರ್ಬಂಧಹಾಕಬಹುದು. ಹೀಗೆ ಯಾವನ ಹಿತವನ್ನು ಎಷ್ಟರಮಟ್ಟಿಗೆ ಹೇಗೆ ರಕ್ಷಿಸಬೇಕೆಂದು ಕಾನೂನೇ ನಿರ್ಣಯಿಸಿ ಅದನ್ನು ರಕ್ಷಿಸುತ್ತದೆ.

ಹಕ್ಕಿಗೆ ಬಗ್ಗೆ ಮೇಲೆ ಮಾಡಲಾದ ವಿವೇಚನೆಯಿಂದ ಅದರಲ್ಲಿ ಐದು ಅಂಶಗಳು ಸೇರಿರುತ್ತವೆಂಬುದು ವ್ಯಕ್ತವಾಗುತ್ತದೆ: 1 ಕಾನೂನು ಯಾರ ಹಕ್ಕನ್ನು ಕಾಯುತ್ತದೆ, 2 ಯಾರ ವಿರುದ್ಧ ಕಾಯುತ್ತದೆ, 3 ಯಾವ ವಸ್ತುವಿನಲ್ಲಿ ಹಕ್ಕು ಇದೆ. 4 ಯಾವ ಕಾರಣದಿಂದ ಆ ಹಕ್ಕನ್ನು ಆ ವ್ಯಕ್ತಿಗೆ ಕೊಡಲಾಗಿದೆ ಮತ್ತು 5 ಯಾವ ಕರ್ತವ್ಯವನ್ನು ನಿರ್ದೇಶಿಸಿ ಆ ಹಕ್ಕನ್ನು ಕಾಯಲಾಗಿದೆ? ಈ ಪ್ರಶ್ನೆಗಳಿಗೆ ಉತ್ತರಗಳು ಆ ಹಕ್ಕಿನ ಪರಿಕಲ್ಪನೆಯಲ್ಲಿ ಅಡಕವಾಗಿವೆ. 1 ಅದು ಹಕ್ಕಿನ ಧಾರಕನ ಅಥವಾ ಒಡೆಯನ ಹಕ್ಕನ್ನು ಕಾಯುತ್ತದೆ; 2 ಹಕ್ಕಿಗೆ ಸಂಬಂಧಿಸಿದ ಕರ್ತವ್ಯ ಬದ್ದನ ವಿರುದ್ಧ: 3 ಹಕ್ಕಿಗೆ ಒಳಪಟ್ಟ ವಸ್ತು ಆಸ್ತಿ, ಪೇಟೆಂಟ್ ಮೊದಲಾದವು); 4 ಹಕ್ಕಿನ ಪ್ರಾಪ್ತಿಯ ಕಾರಣದಿಂದ (ಆ ಆಸ್ತಿಯನ್ನು ಕೊಂಡಿರುವುದರಿಂದ, ಅವನ ತಂದೆ ಕೊಂಡಿರುವುದರಿಂದ, ಸರ್ಕಾರ ಖಾತೆ ಹಾಕಿ ಕೊಟ್ಟಿರುವುದರಿಂದ, ಇತ್ಯಾದಿ; 5 ತತ್‍ಸಂಬಂಧವಾದ ಕರ್ತವ್ಯದ ಇತಿಮಿತಿ (ಹೀಗೆ ಮಾಡಬೇಕು. ಹೀಗೆ ಮಾಡಬಾರದು ಮುಂತಾಗಿ ಆ ಕರ್ತವ್ಯದ ವ್ಯಾಪ್ತಿ).

ಮೇಲಿನ ಚರ್ಚೆಯಲ್ಲಿ ಹಕ್ಕಿನ ಪರಿಕಲ್ಪನೆಯಲ್ಲಿ ತತ್ಸಂಬಂಧಿ ಕರ್ತವ್ಯ ಅದರ ರಕ್ಷಣೆಯ ಅಂಗವಾಗಿ ಸೂಚ್ಯವಾಗುತ್ತದೆಂದು ಹೇಳಲಾಗಿದೆ. ಇದು ಹಕ್ಕಿನ ಸಂಕುಚಿತ ಅರ್ಥ. ಆದರೆ ಕಾನೂನು ವ್ಯಕ್ತಿಗೆ ಒದಗಿಸುವ ಎಲ್ಲ ಅನುಕೂಲಗಳಿಗೂ ಇನ್ನೊಬ್ಬರ ಮೇಲೆ ಕರ್ತವ್ಯವನ್ನು ಹೇರಿಯೇತೀರುವುದಿಲ್ಲ. ಉದಾಹರಣೆಗೆ ತನ್ನ ಆಸ್ತಿಯನ್ನು ಮರಣಶಾಸನದ ಮೂಲಕ ಹೆರಿದವರಿಗೆ ಕೊಡುವ ಹಕ್ಕು ಒಬ್ಬನಿಗೆ ಇದೆ. ಅಂದರೆ ಇದರ ಮೇಲಿಂದ ಯಾರ ಮೇಲಾದರು ಏನೊಂದೂ ಕರ್ತವ್ಯವಿದೆಯೆಂಬ ಸೂಚನೆಯಾಗುವುದಿಲ್ಲ, ಆದರೆ ಒಬ್ಬನಿಗೆ ಋಣಿಯಿಂದ ಹಣ ಪಡೆಯುವ ಹಕ್ಕು ಇದೆ ಎಂದರೆ, ಋಣಿಯಾದವನು ಧನಿಗೆ ಆ ಸಾಲವನ್ನು ಮುಟ್ಟಿಸುವುದು ಆತನ ಕರ್ತವ್ಯ ಎಂಬುದು ಸೂಚ್ಯವಾಗುತ್ತದೆ, ಹೀಗೆ. 1 ಕರ್ತವ್ಯಸೂಚಕ ಹಕ್ಕುಗಳು ಮತ್ತು 2 ತದಿತರ ಹಕ್ಕುಗಳು ಎಂದು ಎರಡು ತರದ ಹಕ್ಕುಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಹಕ್ಕು ಎಂಬ ಶಬ್ದ ವ್ಯಾಪಕವಾಗಿದ್ದು ಇವನ್ನೆಲ್ಲ ಬಳಗೊಳ್ಳುತ್ತದೆ. ಒಬ್ಬ ವ್ಯಕ್ತಿಗೆ ಕಾನೂನು ಒದಗಿಸುವ ಎಲ್ಲ ಅನುಕೂಲ್ಯಗಳು ಹಕ್ಕಿನ ಈ ವ್ಯಾಪಕವಾದ (2ನೆಯ) ಅರ್ಥದಲ್ಲಿ ಇರುತ್ತವೆ. ಇವು ಮೂರು ವಿಧವಾದವು. 1 ಸ್ವಾತಂತ್ರ್ಯ(ಅನಿರ್ಬಂಧ), 2 ಸಾಮಥ್ರ್ಯ ಅಥವಾ ಅಧಿಕಾರ ಮತ್ತು 3 ಅನಧೀನತೆ (ಅಬಾಧಿತತ್ವ),

1. ಸ್ವಾತಂತ್ರ್ಯ: ಒಬ್ಬಾತ ಹೀಗೆ ಮಾಡಬೇಕು, ಹೀಗೆ ಮಾಡಬೇಕು. ಹೀಗೆ ಮಾಡಬಾರದು ಎಂಬ ಕಾನೂನಿನ ನಿರ್ಬಂಧವಿಲ್ಲ. ಇಂಥ ಪ್ರಸಂಗದಲ್ಲಿ ಒಬ್ಬಾತನಿಗೆ ಏನನ್ನು ಮಾಡಲೂ ಹಕ್ಕು ಇದೆ. ಕಛೇರಿಯ ಕೆಲಸ ಮುಗಿದ ಅನಂತರ ಅಡ್ಡಾಡಲು ಹೋಗುವ ಹಕ್ಕು ಅವನಿಗೆ ಇದೆ. ಅಥವಾ ವಿಶ್ರಾಂತಿ ಪಡೆಯುವ ಹಕ್ಕು ಇದೆ. ಆದರೆ ಆ ಹೊತ್ತಿಗೆ ಇನ್ನೊಂದು ಕೆಲಸವನ್ನು ಒಪ್ಪಿಕೊಂಡಿದ್ದರೆ ಅಲ್ಲಿಗೆ ತಾನು ಹೋಗಲೇಬೇಕೆಂಬ ನಿರ್ಬಂಧವಿರುತ್ತದೆ. ಆತ ಆ ವೇಳೆಯನ್ನು ಬೇರೆ ರೀತಿಯಲ್ಲಿ ಕಳೆಯಲು ಹಕ್ಕು ಇಲ್ಲ. ಇಲ್ಲಿ ಸ್ವಾತಂತ್ರ್ಯವೆಂದರೆ ಅತನ ಮೇಲೆ ಕರ್ತವ್ಯವಿಲ್ಲದ ಸ್ಥಿತಿ. ಆತನ ಕರ್ತವ್ಯವೆಂದರೆ ಆತನಿಗೆ ಕ್ರಿಯಾಸ್ವಾತಂತ್ರ್ಯವಿಲ್ಲದೆ ಸ್ಥಿತಿ. ಕರ್ತವ್ಯದ ವಿರುದ್ಧವಾಗಿ ನಡೆದರೆ ಅದು ಕಾನೂನಿನಂತೆ ತಪ್ಪಾಗುತ್ತದೆ. ಈ ಸ್ವಾತಂತ್ರ್ಯದ ವೈಶಿಷ್ಟ್ಯವೆಂದರೆ ಕೇವಲ ಅನಿರ್ಬಂಧ. ಯಾವುದೂ ನಿರ್ಬಂಧವಿಲ್ಲದ್ದರಿಂದ ಆತ ಹೇಗೆ ನಡೆದರು ತಪ್ಪಲ್ಲ. ಆ ಸ್ವಾತಂತ್ರ್ಯವನ್ನು ಉಪಯೋಗಿಸುವುದರಿಂದ ಆತನ ಹಕ್ಕು-ಕರ್ತವ್ಯಗಳಲ್ಲಾಗಲಿ ಇನ್ನೊಬ್ಬರ ಹಕ್ಕು-ಕರ್ತವ್ಯಗಳಲ್ಲಾಗಲಿ ಏನೂ ಹೆಚ್ಚುಕಡಿಮೆ ಆಗುವುದಿಲ್ಲ. ಆದರೆ ಸ್ವತಂತ್ರವೆಂಬಂತೆ ತೋರುವ, ಆದರೆ ಇನ್ನು ಬಲಿಷ್ಠವಾದ ಇನ್ನೊಂದು ಹಕ್ಕು ಇದೆ. ಅದು ಒಬ್ಬನ ಅಧಿಕಾರ.

ಅಧಿಕಾರ: ಇದು ಕಾನೂನು ನೀಡಿರುವ ಸಾಮಥ್ರ್ಯ, ಒಬ್ಬ ತನ್ನ ಹಕ್ಕನ್ನು ಉಪಯೋಗಿಸುವುದರಿಂದ ಆತನ ಇಲ್ಲವೇ ಹೆರವರ ಹಕ್ಕು, ಸಂಬಂಧ ಮತ್ತು ಕರ್ತವ್ಯ ಸಮುಚ್ಚಯದಲ್ಲಿ ಹೆಚ್ಚು ಅಥವಾ ಕಡಿಮೆ ಆಗುತ್ತದೆ. ಮುಸ್ಲಿಂ ಗಂಡ ಆತನ ಹೆಂಡತಿಗೆ ಮೂರು ಸಾರಿ ತಲಖ್ ಹೇಳಿ ಆಕೆಯನ್ನು ಬಿಡಲು ಅವನಿಗೆ ಹಕ್ಕು ಇರುತ್ತದೆ. ಇದು ಕೇವಲ ಸ್ವಾತಂತ್ರ್ಯವಲ್ಲ ಕಾನೂನು ನೀಡಿದ ಸಾಮಥ್ರ್ಯ. ಹೀಗೆ ಮಾಡಿದೊಡನೆಯೇ ಆ ಹೆಂಡತಿಯ ದಾಂಪತ್ಯದ ಹಕ್ಕು ಮತ್ತು ಕರ್ತವ್ಯಗಳು ನಷ್ಟವಾಗುತ್ತವೆ. ತಂದೆಗೆ ಅಪ್ರಾಪ್ತವಯಸ್ಕ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಇರಬಹುದು. ಅಂದರೆ ಅವಳನ್ನು ಮದುವೆ ಮಾಡಿಕೊಟ್ಟರೆ ತಪ್ಪಲ್ಲ ಎಂದು ಮಾತ್ರವೇ ಇದರ ಅರ್ಥವಲ್ಲ. ಅವನು ಮಾಡಿಕೊಟ್ಟರೆ ಆ ಮದುವೆ ಕಾನೂನಿನಂತೆ ಸಿಂಧುವಾಗಬಹುದು, ಅವಳಿಗೂ ಅವಳ ವರನಿಗೂ ದಾಂಪತ್ಯದ ಹಕ್ಕು ಮತ್ತು ಕರ್ತವ್ಯಗಳು ಪ್ರಾಪ್ತವಾಗುತ್ತವೆಂದು ಅದರ ಅರ್ಥ. ಕ್ಲುಪ್ತ ಅಪರಾಧ ವಿಷಯದಲ್ಲಿ ಆರೋಪಿಗೆ ಕಾರಾಗೃಹ ಶಿಕ್ಷೆಯನ್ನು ವಿಧಿಸಲು ದಂಡಾಧೀಶನಿಗೆ (ಮ್ಯಾಜಿಸ್ಟ್ರೇಟ್) ಅಧಿಕಾರವಿದೆ. ಎಂದರೆ ಆ ಅಧಿಕಾರವನ್ನು ಉಪಯೋಗಿಸುವುದರಿಂದ ಆರೋಪಿ ತನ್ನ ಚಲನವಲನ ಸ್ವಾತಂತ್ರ್ಯದ ಹಕ್ಕು ಕಳೆದುಕೊಳ್ಳುತ್ತಾನೆ; ಕಾರಾಗೃಹಾಧಿಕಾರಿಯ ಅಧೀನದಲ್ಲಿರಲು ಕರ್ತವ್ಯಬದ್ಧನಾಗುತ್ತಾನೆ. ಹೀಗೆ ಅವನ ಹಕ್ಕು-ಕರ್ತವ್ಯಗಳಲ್ಲಿ ಬದಲಾವಣೆಗಳಾಗುತ್ತವೆ. ಪ್ರತಿವಾದಿಯ ಆಸ್ತಿಯನ್ನು ಮಾರಲು ನ್ಯಾಯಾಲಯಕ್ಕೆ ಹಕ್ಕು ಇದೆ. ಎಂದರೆ ಪ್ರತಿವಾದಿಯ ಸ್ವಾಮ್ಯದ ಹಕ್ಕನ್ನು ವಜಾ ಮಾಡಿ ಹರಾಜಿನಲ್ಲಿ ಪಡೆದವನಿಗೆ ಅದನ್ನು ಕೊಡುವ ಸಾಮಥ್ರ್ಯವಿದೆ. ಇಲ್ಲ ಗಮನಿಸುವಂಥ ಇನ್ನೊಂದು ವಿಷಯವೆಂದರೆ, ಒಬ್ಬನ ಸಾಮಥ್ರ್ಯ ಇಲ್ಲವೇ ಅಧಿಕಾರವೆಂದರೆ ಇನ್ನೊಬ್ಬನಲ್ಲಿ ಅದರ ಉಪಯೋಗದಿಂದ ಉಂಟಾಗುವ ಬದಲಾವಣೆಗೆ ಅಧೀನನಾಗುವ ಸ್ಥಿತಿ ಇದೆಯೆಂಬುದನ್ನು ತೋರಿಸುತ್ತದೆ. ಒಬ್ಬನ ಅಧಿಕಾರದ ಪ್ರತಿಬಿಂಬವೆಂದರೆ ಇನ್ನೊಬ್ಬನ ಅಧೀನತೆ. ಮೇಲೆ ಹೇಳಿದ ಮುಸ್ಲಿಂ ಗಂಡನ ತಲಖ್ ಅಧಿಕಾರ, ಹಿಂದೂ ತುದೆಯ ಕನ್ಯಾದಾನದ ಅಧಿಕಾರ. ದಂಡಾ ಧೀಶನ ಶಿಕ್ಷೆ ವಿಧಿಸುವ ಅಧಿಕಾರ-ಇವಕ್ಕೆ ಸರಿಯಾಗಿ ಮುಸ್ಲಿಂ ಪತ್ನಿಯ, ಹಿಂದೂ ಪುತ್ರಿಯ, ಆರೋಪಿಯ ಅಧೀನತೆ ಇದೆ. ಅದರ ಕೆಲವು ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳು ಉಳಿದವರ ಮೇಲೆ ಪರಿಣಾಮಕಾರಿಯಾಗುವ ಅಧಿಕಾರದಿಂದ ಅಬಾಧಿತರಾಗಿರುವ ವಿಶಿಷ್ಟ ಹಕ್ಕು ಪಡೆದಿರುತ್ತಾರೆ. ಆ ವಿಶಿಷ್ಟ ಹಕ್ಕನ್ನು ಅನಧೀನತೆ ಅಥವಾ ಅಬಾಧಿತತೆ ಎಂದು ಕರೆಯಬಹುದು.

ಅನಧೀನತೆ ಅಥವಾ ಅಬಾಧಿತತೆ: ಅಪರಾಧ ಮಾಡಿದವನು ದಂಡಾಧೀಶನ ಶಿಕ್ಷೆ ವಿಧಿಸುವ ಅಧಿಕಾರಕ್ಕೆ ಅಧೀನನೂ ಸಾಲ ತೆಗೆದುಕೊಂಡವನದು ಹಣ ತೆರುವಂತೆ ನ್ಯಾಯಾಲಯದ ಅಧಿಕಾರಕ್ಕೆ ಅಧೀನನೂ ಆಗಿರುತ್ತಾರೆ. ಆದರೆ ಒಂದು ದೇಶದಲ್ಲಿರುವ ರಾಯಾಭಾರಿ. ಆದೇಶ ನೀಡುವ ಅಲ್ಲಿಯ ನ್ಯಾಯಾಲಯದ ಇಂಥ ಅಧಿಕಾರಕ್ಕೆ ಅಧೀನನಲ್ಲ. ಆದ್ದರಿಂದ ಅವನು ಅಬಾಧಿತ. ಒಬ್ಬಾತನಿಗೆ ಅಪಮಾನಕರವಾದ ರೀತಿಯಲ್ಲಿ ಇನ್ನೊಬ್ಬ ಭಾಷಣಮಾಡಿದರೆ. ಮೊದಲನೆಯವಾಗಿ ಎರಡನೆಯವನ ವಿರುದ್ಧ ಮಾನಹಾನಿಯ ಮೊಕದ್ದಮೆ ತರುವ ಅಧಿಕಾರವಿದೆ. ಆದರೆ ಸಂಸತ್ತಿನ ಸಭೆಯಲ್ಲಿ ಅದರ ಸದಸ್ಯ ಅಂಥ ಭಾಷಣಮಾಡಿದರೆ ಅವನು ಅಪಮಾನಿನತ ಈ ಅಧಿಕಾರಕ್ಕೆ ಅಧೀನನಲ್ಲ; ಅದರಿಂದ ಅಬಾಧಿತ, ಅಂತೆಯೇ ರಾಷ್ಟ್ರಪತಿ. ರಾಜ್ಯಪಾಲ ನ್ಯಾಯಾಧೀಶ ಮತ್ತು ಕೆಲವು ವಿಶಿಷ್ಟ ವ್ಯಕ್ತಿಗಳು ಸಾಧಾರಣ ವ್ಯಕ್ತಿಗಳಂತೆ ಇತರರ ಅಧಿಕಾರಕ್ಕೆ ಒಳಪಡುವುದಿಲ್ಲ. ಈ ವಿಶಿಷ್ಟ ಹಕ್ಕು ಅವರಿಗೆ ಕಾನೂನು ನೀಡಿದ ಅನುಕೂಲತೆ. ಕಾನೂನು ಅವರಿಗೆ ಅನಧೀನತೆಯನ್ನು ನೀಡುತ್ತದೆ; ಸಾಧಾರಣ ಜನರಿಗೆ ಕಾನೂನಿನಿಂದ ದೊರೆತ ಅಧಿಕಾರ ಇಲ್ಲವೇ ಸಾಮಥ್ರ್ಯವನ್ನು ಆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಮೊಟಕುಮಾಡುತ್ತದೆ. ಅಂದರೆ ಅವರ ಅಬಾಧಿಕತೆಗೆ ಅನುಗುಣವಾಗಿ ಸಾಧಾರಣ ಜನರಿಗೆ ಅಸಾಮಥ್ರ್ಯ ಉಂಟಾಗುತ್ತದೆ. (ವಿ.ಆರ್.ಬಿ.)