ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯ ಶಿಕ್ಷಣ

ವಿಕಿಸೋರ್ಸ್ದಿಂದ

ನ್ಯಾಯ ಶಿಕ್ಷಣ - ನ್ಯಾಯ ವೃತ್ತಿಗೆ ಅಗತ್ಯವಾದ ಶಿಕ್ಷಣ. ಇದು ಇತರ ಶಿಕ್ಷಣಕ್ಕಿಂತ ಮೂಲತಃ ಬೇರೆಯಲ್ಲ. ನ್ಯಾಯ ಶಿಕ್ಷಣದ ಬೇರು ಗತಕಾಲದಲ್ಲಿ ಹುದುಗಿದೆ. ಪ್ರಚಲಿತ ನ್ಯಾಯ ಶಿಕ್ಷಣ ವ್ಯವಸ್ಥೆ ಯಾರೊಬ್ಬರಿಂದಲೋ ಒಂದೇ ದಿನದಲ್ಲಿ ಆದದ್ದಲ್ಲ; ಅನೇಕ ವಿದ್ವಾಂಸರ, ನ್ಯಾಯಶಾಸ್ತ್ರವಿದರ ಸತತ ಪ್ರಯತ್ನ, ಅಭ್ಯಾಸ ಅನುಭವಗಳಿಂದ ರೂಪುಗೊಂಡಿದ್ದು.

ಈ ವರೆಗೆ ದೊರೆತಿರುವ ಇತಿಹಾಸದ ಆಧಾರದಿಂದ ಹೇಳುವುದಾದರೆ ಎರಡು ಸಾವಿರ ವರ್ಷಗಳ ಹಿಂದೆ ಪುಂಬೇಡಿತ ಎಂಬಲಿದ್ದ ನ್ಯಾಯ ಶಾಲೆಯೇ ಪ್ರಪಂಚದ ಮೊಟ್ಟಮೊದಲನೆಯ ನ್ಯಾಯ ಶಾಲೆ. ಅದರ ಕೇಂದ್ರ ಬೇಬಿಲೋನಿಯದಲ್ಲಿತ್ತು. ಈ ಕೇಂದ್ರದಲ್ಲಿ ನದಿ ದಂಡೆಯಲ್ಲಿದ್ದ ವಿಶಾಲವಾದ ಮರದ ಕೆಳಗೆ ಗುರುವಿನ ಸುತ್ತಲೂ ವಿದ್ಯಾರ್ಥಿಗಳು ಕುಳಿತು ಪಾಠ ಪ್ರವಚನಗಳನ್ನು ಕೇಳಿ, ಕಲಿತು ಪಂಡಿತರಾಗುತ್ತಿದ್ದರು. ಅದು ಜಗತ್ತಿನ ಒಂದು ಆದರ್ಶ ಕಾನೂನು ಬೋಧನ ಕೇಂದ್ರವಾಗಿತ್ತೆಂದು ಹೇಳಲಾಗಿದೆ.

ನ್ಯಾಯ ಶಿಕ್ಷಣ ಶಾಲೆಗಳಲ್ಲಿ ಸಾಮಾಜಿಕ ನ್ಯಾಯಶಾಲೆ ಮುಖ್ಯ ಶಾಖೆ. ಅದರ ಪ್ರಮುಖ ಅಧ್ವರ್ಯ, ಡೀನ್‍ರೇ ಸೋಪಾಂಡ್. ಸಾಮಾಜಿಕ ಮೌಲ್ಯದ ಗುರಿಗೆ ಕಾನೂನು ಮಾರ್ಗದರ್ಶಿ ಅಥವಾ ಸೂಚಿಯಾಗಿರಬೇಕು. ನ್ಯಾಯಶಾಸ್ತ್ರದ ಬೆಳವಣಿಗೆಗೆ ಜೆರೆಮಿ ಬೆಂತಮ್ ಸಲ್ಲಿಸಿದ ಕಾಣಿಕೆ ಅಮೋಘವಾದುದು. ಬಹು ಜನರಿಗೆ ಸಮ್ಮತವಾಗುವಂತಿರುವ ಅವನ ತತ್ತ್ವ ಪ್ರಪಂಚದ ಎಲ್ಲೆಡೆಯೂ ಮಾನ್ಯತೆ ಪಡೆದಿದೆ.

1950ರಲ್ಲಿ ಭಾರತ ರಾಷ್ಟ್ರ ಪ್ರಜಾಪ್ರಭುತ್ವವನ್ನು ಸ್ಥಾಪಿಸಿಕೊಂಡಿತು. ಈಗ ನಮ್ಮನ್ನಾಳುವ ಸರ್ಕಾರ ಆಗಿಂದಾಗ್ಗೆ ಹೊರಡಿಸಿದ ವಿಧಿಗಳ ಮೂಲಕ ಆಡಳಿತ ನಡೆಸುತ್ತಿದೆ. ಈಗ ನ್ಯಾಯ ಶಿಕ್ಷಣ ಹಿಂದೆಂದೂ ಇಲ್ಲದ ಮಾನ್ಯತೆಯನ್ನೂ ಮಹತ್ತ್ವವನ್ನೂ ಪಡೆದಿದೆ. ಸ್ವಾತಂತ್ರ್ಯ ಪೂರ್ವದ ಸಮಾಜದಲ್ಲಿ ನ್ಯಾಯ ಶಿಕ್ಷಣದ ವ್ಯವಸ್ಥೆ ತೀರಾ ಅಸಮರ್ಪಕವಾಗಿತ್ತು. ಸ್ವಾತಂತ್ರ್ಯಾನಂತರ ಸಂಭದ್ರ ಆಡಳಿತಕ್ಕೆ ಹಲವಾರು ವಿಧಿಗಳು ಹುಟ್ಟಿಕೊಂಡ ಕಾರಣ ಅದರ ಅನುಷ್ಠಾನಕ್ಕೂ ಅರ್ಥಕಲ್ಪನೆಗೂ ನ್ಯಾಯಶಾಸ್ತ್ರಜ್ಞರ ಅಗತ್ಯ ಹೆಚ್ಚಿತು. ಸ್ವಾತಂತ್ರ್ಯಪೂರ್ವದಲ್ಲಿ ಸರ್ಕಾರಕ್ಕೆ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಎಷ್ಟು ಬೇಕೋ ಅಷ್ಟು ಮಾತ್ರ ವಿಧಿಗಳ ಆವಶ್ಯಕತೆಯಿದ್ದರೆ ಸಾತಂತ್ರ್ಯಾನಂತರ ಹೊಸತಾಗಿ ಹುಟ್ಟಿಕೊಂಡ ಹಲವಾರು ಸಮಸ್ಯೆಗಳ ಪರಿಹಾರಕ್ಕೂ ಆಡಳಿತ ವ್ಯವಸ್ಥೆಗೂ ಅನೇಕ ಹೊಸ ಹೊಸ ವಿಧಿಗಳು ಅಗತ್ಯವೆನಿಸಿವೆ. ಹಿಂಸಾಕೃತ್ಯಗಳನ್ನು ತಡೆದಿಕ್ಕಲು ವ್ಯಾಜ್ಯ ವಗೈರೆಯನ್ನು ತೊಡೆದು ಹಾಕಲು ಮಾನವೀಯ ಹಕ್ಕು ಬಾಧ್ಯತೆಗಳನ್ನು ಕಾಪಾಡಲು ಹೊಸ ಹೊಸ ವಿಧಿಗಳ ಉಗಮ ಅವತ್ಯವಾಯಿತು. ಒಂದಾನೊಂದು ಕಾಲದಲ್ಲಿ ಪೋಲಿಸು ರಾಜ್ಯವೆನಿಸಿದ್ದ ಭಾರತ ಸ್ವಾತಂತ್ರ್ಯಾಸಂತರದಲ್ಲಿ ಕ್ಷೇಮಾಭ್ಯುದಯ ರಾಷ್ಟ್ರವಾಗಿ ಪರಿಣಮಿಸಿತು. ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ರಾಜಿಕ ಹಕ್ಕುಗಳ ರಕ್ಷಣೆ ಆಳರಸರ ಆದ್ಯ ಕರ್ತವ್ಯವಾಗಿದೆ. ನ್ಯಾಯ ವೃತ್ತಿಯನ್ನು ಕೈಗೊಳ್ಳಲು ಬೇಕಾದ ಶಿಕ್ಷಣವನ್ನು ಕೊಡುವ ವಿಶ್ವವಿದ್ಯಾಲಯಗಳು ನಾಗರಿಕರು ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರಗಳಾಗಿವೆ. ಇಂಥ ಪೌರಪ್ರಭುತ್ವದ ಪೌರರು ಕೆಲವು ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗುವುದರಿಂದ ನ್ಯಾಯ ಶಿಕ್ಷಣ ಪ್ರತಿಯೊಬ್ಬ ನಾಗರಿಕನಿಗೂ ಬೇಕೆನಿಸುತ್ತದೆ.

ಉದ್ದೇಶ : 1 ನ್ಯಾಯ ಕಲಾಪದ ವಿದಾರ್ಥಿಗಳಿಗೆ ತರಬೇತಿ ನೀಡುವುದು ಮತ್ತು 2 ಕಾನೂನು ತಜ್ಞರಿಂದ ಸರ್ಕಾರಕ್ಕೂ ನಾಗರಿಕರಿಗೂ ಸರಿಯಾದ ತಿಳಿವಳಿಕೆ ಒದಗಿಸುವುದು ನ್ಯಾಯ ಶಿಕ್ಷಣದ ಮೂಲ ಉದ್ದೇಶ. 1974ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ನೇಮಿಸಿದ ಸಮಿತಿಯ ಹೇಳಿಕೆಯಂತೆ 1 ಪರಿಪೂರ್ಣತೆ ಪಡೆದ ಕಾನೂನು ತಜ್ಞರನ್ನು ತಯಾರು ಮಾಡುವುದು, 2 ಕಾನೂನಿನ, ವಿಧಿಗಳ ಹಿಂದೆ ಅಡಕವಾಗಿರುವ ಕಾನೂನಿನ ಸಾಮಾಜಿಕ ಮೌಲ್ಯವನ್ನು ತಿಳಿಸಿ ಹೇಳುವುದೂ, 3 ಅಂಥವರಿಂದ ಬೆಳೆಯುತ್ತಿರುವ ಸಮಾಜಕ್ಕೆ ಸುಧಾರಿತ ಕಾನೂನನ್ನು ಒದಗಿಸಲು ಶ್ರಮಿಸುವುದೂ, 4 ಕಾನೂನಿನ ಅಡಿಗಲ್ಲಿನ ಮೇಲೆ ಸುಭದ್ರ ಪ್ರಜಾಪ್ರಭುತ್ವವನ್ನು ಕಟ್ಟುವುದೂ_ಇವು ಕಾನೂನು ಶಿಕ್ಷಣ ಅಥವಾ ನ್ಯಾಯ ಶಿಕ್ಷಣದ ಉದ್ದೇಶಗಳಾಗಿವೆ.

ನ್ಯಾಯ ಶಿಕ್ಷಣದ ಸಾಧನ : ಆಯಾಯ ದೇಶದ ಸ್ಥಿತಿಗತಿ, ಧೋರಣೆ, ಸಂವಿಧಾನ ಅಲ್ಲಿ ರೂಪಿತಗೊಳಿಸಿರುವ ಕಾನೂನುಗಳು ಮತ್ತು ಅದರ ಗುರಿ, ಇವೆಲ್ಲ ನ್ಯಾಯ ಶಿಕ್ಷಣದ ಸಾಧನಗಳಾಗಿವೆ. ಉಚ್ಚ ನ್ಯಾಯಾಲಯದ ತೀರ್ಪುಗಳೂ ಬಹಳಷ್ಟು ಮಟ್ಟಿಗೆ ನ್ಯಾಯಶಿಕ್ಷಣದ ಸಾಧನಗಳಾಗಿ ಪರಿಣಮಿಸುತ್ತವೆ. ಇಂಥ ತೀರ್ಪುಗಳು ಬೆಳೆಯುತ್ತಿರುವ ಸಮಾಜದಲ್ಲಿರುವ ಅಡ್ಡಿ ಆತಂಕ ಕುಂದುಕೊರತೆಗಳನ್ನು ಎತ್ತಿತೋರಿಸಿ ಅವುಗಳ ಪರಿಹಾರೋಪಾಯಗಳನ್ನು ಸೂಚಿಸುತ್ತವೆ; ಅವು ನ್ಯಾಯ ಶಿಕ್ಷಣದ ಬೆಳೆವಣಿಗೆಗೆ ಅತ್ಯುತ್ತಮ ಸಾಧನಗಳಾಗಿ ಪರಿಣಮಿಸುತ್ತವೆ.

ವ್ಯಾಸಂಗ ಕ್ರಮಗಳು : ನ್ಯಾಯಶಾಸ್ತ್ರದ ಬೋಧನೆಯಲ್ಲಿ ಐದು ಪ್ರಮುಖ ವ್ಯಾಸಂಗ ವಿಧಾನಗಳಿವೆ. 1 ನೇರ ಉಪನ್ಯಾಸ ವಿಧಾನ : ಪ್ರಪಂಚದ ಕಾನೂನು ಬೋದನ ಕ್ರಮಗಳಲ್ಲಿ ಇದು ಪ್ರಸಿದ್ದವಾದುದು. ಭಾರತವೂ ಸೇರಿದಂತೆ ಪ್ರಪಂಚದ ಅನೇಕ ದೇಶಗಳಲ್ಲಿ ಇದು ಪ್ರಸಿದ್ಧವಾದುದು. ಭಾರತವೂ ಸೇರಿದಂತೆ ಪ್ರಪಂಚದ ಅನೇಕ ದೇಶಗಳಲ್ಲಿ ಈ ವಿದಾನ ಬಳಕೆಯಲ್ಲಿದೆ. ಈ ಕ್ರಮದಲ್ಲಿ ಶಿಕ್ಷಕರು ಸರಿಯಾದ ರೀತಿಯಲ್ಲಿ ಕಾನೂನಿನ ವಿಶ್ಲೇಷಣೆ ನಡೆಸುತ್ತಾರೆ. ಈ ಪದ್ಧತಿ ಪ್ರಕಾರ ಸಂಬಂಧ ಪಟ್ಟ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ ಬೇಕಾಗಿಲ್ಲ. ಕೇವಲ ಶಿಕ್ಷಕನಿಂದಲೇ ಕಲಿಸಲ್ಪಡುವುದರಿಂದ ವಿದ್ಯಾರ್ಥಿಗಳು ಶಿಕ್ಷಕ ಹೇಳಿಕೊಟ್ಟಷ್ಟನ್ನೇ ಕಲಿತುಕೊಳ್ಳಲು ಸಹಾಯವಾಗುತ್ತದೆ. ಉಪನ್ಯಾಸದ ಕೊನೆಗೆ ವಿಷಯದ ಪೂರ್ವ ಚಿತ್ರವನ್ನು ವಿದ್ಯಾರ್ಥಿಯ ಮನಃಪಟಲದಲ್ಲಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ. ಆದರೆ (1) ಎಲ್ಲ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗದಿರುವುದು; (2)ಹೇಳಿದ್ದನ್ನೇ ಪುನಃ ಪುನಃ ಹೇಳುವ ಅಭ್ಯಾಸ ಶಿಕ್ಷರಲ್ಲಿ ಬಂದು ಹೊಸದನ್ನು ತಿಳಿದು ಕೊಂಡು ಅದನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಸಾಧ್ಯವಾಗದಿರುವುದು-ಈ ವಿಧಾನದ ಮುಖ್ಯ ಲೋಪದೋಷಗಳೆನಿಸುತ್ತವೆ.

2 ಅಧ್ಯಯನ ವಿಧಾನ : ಇದರಲ್ಲಿ ವಿದ್ಯಾರ್ಥಿ ಸಂಬಂಧಪಟ್ಟ ವಿಷಯದ ಮೇಲೆ ಪ್ರಬಂಧವನ್ನು ಬರೆಯಬೇಕಾಗುತ್ತದೆ; ಶಿಕ್ಷಕನ ಸರಿಯಾದ ಮಾರ್ಗದರ್ಶನವೂ ವಿದ್ಯಾರ್ಥಿಗೆ ಸಿಗುತ್ತದೆ. ಆದರೆ ಇಂಥ ಶಿಕ್ಷಣಕ್ಕೆ ಹೆಚ್ಚು ಸಮಯ ತಗಲುತ್ತದೆ. ವ್ಯಾಸಂಗಕ್ಕೆ ಬಹಳಷ್ಟು ಕಾಲವನ್ನೇ ವಿನಿಯೋಗಿಸಬೇಕಾಗುತ್ತದೆ; ವಿಷಯದ ಜ್ಞಾನ ಸಾಕಷ್ಟು ಬಂದರೂ ಓದಿ ಗ್ರಹಿಸುವುದರಿಂದ ಬರುವಷ್ಟು ಪರಿಪೂರ್ಣ ಜ್ಞಾನಸಿಗದು. ಅದಲ್ಲದೆ ತರಗತಿಯಲ್ಲಿ ತುಂಬ ವಿದ್ಯಾರ್ಥಿಗಳಿದ್ದರೆ ಈ ಪದ್ದತಿಯಿಂದ ಏನೇನೂ ಅನುಕೂಲವಾಗಲಾರದು. ಈ ಪದ್ದತಿ ಸಣ್ಣ ತರಗತಿಗಳಲ್ಲಿ ಮಾತ್ರ ಉತ್ತಮ ಫಲಿತಾಂಶವನ್ನು ಕೊಡಬಲ್ಲದು.

3 ಚಿಕ್ಕ ಸಮಸ್ಯೆ ವರ್ಗ (ಕೇಂಬ್ರಿಜ್ ವಿಧಾನ) : ಈ ವಿಧಾನಕ್ಕೆ ಬಹಳಷ್ಟು ಹಣದ ಖರ್ಚು ತಗಲುತ್ತದೆ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಈ ವಿಧಾನ ಅಷ್ಟು ಸೂಕ್ತವೆನಿಸಲಾರದು. ದೇಶದ ಸಂಪತ್ತಿನ ದೃಷ್ಟಿಯಿಂದ ಅದರ ಅನುಸರಣೆ ಅಸಾಧುವೆನಿಸುವುದು. ವಿಷಯಗಳನ್ನು ಸಣ್ಣಪುಟ್ಟ ವರ್ಗಗಳನ್ನಾಗಿ ವಿಂಗಡಿಸಿ ಕೊಂಡು ಬೋಧಿಸುವುದು ಈ ಕ್ರಮದ ವೈಶಿಷ್ಟ್ಯ.

4 ಜರ್ಮನ್ ಸೆಮಿನಾರ್ ವಿಧಾನ : ಈ ವಿಧಾನವನ್ನು ವಿನೋಗ್ರೇಡೆಫ್ ಎಂಬಾತ ಇಂಗ್ಲೆಂಡಿನ ಆಕ್ಸ್‍ಫರ್ಡಿನಲ್ಲಿ ಬಳಕೆಗೆ ತಂದ. ಇದು ಶಿಕ್ಷಕ ಹಾಗೂ ವಿದ್ಯಾರ್ಥಿ ಒಟ್ಟಿಗೆ ಕ್ಲಿಷ್ಟತರವಾದ ಸಮಸ್ಯೆಗಳನ್ನು ಬಗೆಹರಿಸುವ ವಿಧಾನ. ಈ ಪದ್ಧತಿಯಿಂದ ಹೊಸ ಹೊಸ ವಿಚಾರಗಳು ಹೊರಬರಲು ಸಾಧ್ಯವಾಗುತ್ತದೆ. ಆದರೆ ಇದರಿಂದ ವಿದ್ಯಾರ್ಥಿಗೆ ಅನುಕೂಲವಾಗುವುದು ಕಡಿಮೆ; ಬೋಧಿಸುವ ಶಿಕ್ಷಕನ ಜ್ಞಾನ ಹೆಚ್ಚಾಗುತ್ತ ಹೋಗುವುದರಿಂದ ಆತ ಉತ್ತಮ ಗ್ರಂಥಗಳನ್ನು ರಚಿಸಿಕೊಡಬಲ್ಲ.

5 ಚರ್ಚಾವಿಧಾನ : ಹಾರ್‍ವರ್ಡ್ ನ್ಯಾಯ ಶಿಕ್ಷಣ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಲ್ಯಾಂಗ್‍ಡೆಲ್ ಈ ಪದ್ದತಿಯ ಜನಕ. ಈ ವಿಧಾನದಂತೆ ಪ್ರತಿಯೊಬ್ಬ ವಿದ್ಯಾರ್ಥಿಯ ಮತ್ತು ಶಿಕ್ಷಕನ ಕೈಯಲ್ಲಿ ಆ ದಿನದ ಚರ್ಚಿಯ ವಿಷಯದ ಸೂಚಿಯೊಂದು ಇರುತ್ತದೆ. ಇದನ್ನು ಚರ್ಚಾ ಸಮಯಕ್ಕೆ ಮೊದಲೇ ಕೊಡಲಾಗುತ್ತದೆ. ಚರ್ಚಾಸಮಯದಲ್ಲಿ ಶಿಕ್ಷಕ ವಿಷಯದ ವಿಂಗಡನೆ ಮಾಡಿ ಮಂಡಿಸುತ್ತಾನೆ; ಚರ್ಚೆ ಪ್ರಾರಂಭವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಚರ್ಚೆಯಲ್ಲಿ ಭಾಗವಹಿಸಬೇಕಾಗುತ್ತದೆ. ವಿಷಯದ ನಾನಾ ಮುಖಗಳ ಬಗ್ಗೆ ಚರ್ಚೆ ಬಿರುಸಾಗಿಯೇ ನಡೆಯುತ್ತದೆ. ಇಂಥ ಚರ್ಚೆಗಳಿಂದ ವಿದ್ಯಾರ್ಥಿಯ ಶಂಕೆ ದೂರಾಗುತ್ತದೆ; ಅಂಜಿಕೆ ಮಾಯವಾಗುತ್ತದೆ; ಪ್ರತಿಭೆ ಕುದುರುತ್ತದೆ; ವಿಷಯದ ಆಳವಾದ ಜ್ಞಾನ ಮೂಡಿ ಬರುತ್ತದೆ. ಇಲ್ಲಿ ವಿದ್ಯಾರ್ಥಿಯ ಸುಪ್ತಚೇತನವನ್ನು ಜಾಗೃತಗೊಳಿಸುವಲ್ಲಿ ಶಿಕ್ಷಕ ಮಹತ್ತರ ಪಾತ್ರವಹಿಸುತ್ತಾನೆ. ವಿದ್ಯಾರ್ಥಿ ವಿಷಯದ ಬಗ್ಗೆ ಪರಿಪೂರ್ಣತೆ ಪಡೆಯಲು ಮುಂದೆ ಜೀವನರಂಗದಲ್ಲಿ ಚೆನ್ನಾಗಿ ವ್ಯವಹರಿಸಲು ಈ ವಿಧಾನ ತುಂಬಾ ಅನುವು ಮಾಡಿಕೊಡುತ್ತದೆ.

ಆಧುನಿಕ ಪ್ರವೃತ್ತಿಗಳು : ಪ್ರಜಾಧಿಪತ್ಯದ ತಿರುಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ನ್ಯಾಯಶಿಕ್ಷಣ ಪಡೆದವರಿಗೆ ಮಾತ್ರ ಸಾಧ್ಯ. ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕನ್ನು ಸ್ಥಾಪಿಸಿಕೊಳ್ಳುವಲ್ಲಿ ನ್ಯಾಯಶಾಸ್ತ್ರದ ಅಭ್ಯಾಸ ಬಹಳ ಉಪಯೋಗಕ್ಕೆ ಬರುತ್ತದೆ. ಕೆಲವೊಂದು ಕಾನೂನುಗಳನ್ನು ಕಂಠಪಾಠ ಮಾಡುವುದು ನ್ಯಾಯಶಿಕ್ಷಣದ ಉದ್ದೇಶವಲ್ಲ. ಎದುರಿಗೆ ಇರುವ ಸಮಸ್ಯೆಗೆ ಕಾನೂನು ಏನು ಹೇಳುತ್ತದೆ ಎಂದು ಹುಡುಕಿ ತೆಗೆಯುವುದು ಉತ್ತಮ ವಕೀಲನ ಕೆಲಸ.

ಜನರ ಹಿತಾಸಕ್ತಿಯೆ ಪರಮೋದ್ದೇಶವಾಗಿರುವ ಭಾರತದಲ್ಲಿ ಸರ್ಕಾರ ನಾಗರಿಕರ ಕಾರ್ಯಾಚರಣೆಗಳನ್ನು ಹಿಡಿತದಲ್ಲಿಡಬೇಕಾಗುತ್ತದೆ; ಅವರ ಹಕ್ಕುಬಾಧ್ಯತೆಗಳನ್ನು ಕಾಪಾಡಬೇಕಾಗುತ್ತದೆ. ಅವರ ಆಸ್ತಿಪಾಸ್ತಿಗಳನ್ನು ಕೆಲವೊಂದು ವೇಳೆ ಸಾರ್ವಜನಿಕ ಹಿತೋದ್ದೇಶಗಳಿಗಾಗಿ ಸರ್ಕಾರ ವಶಪಡಿಸಿಕೊಳ್ಳಬೇಕಾಗುತ್ತದೆ. ಇವೆಲ್ಲ ಕೆಲಸಗಳು ಕಾನೂನುರೀತ್ಯ ರಚನೆಗೊಂಡ ವಿಧಿಗಳಿಂದ ಮಾತ್ರ ಸಾಧ್ಯ. ಸರಿಯಾದ ಕಾನೂನು ರಚನೆ ಅದನ್ನು ಸರಿಯಾಗಿ ಅಭ್ಯಾಸ ಮಾಡದವರಿಂದ ಮಾತ್ರ ಸಾಧ್ಯ. ವಿಧಿಗಳ ಉಲ್ಲಂಘನೆ ಶಿಕ್ಷಾರ್ಹವಾಗುತ್ತದೆ. ಆದ್ದರಿಂದ ಕಾನೂನಿನ ಅಜ್ಞಾನ ಯಾರಿಗೂ ರಕ್ಷಣೆಯನ್ನೀಯದು.

ಇತ್ತೀಚೆಗಿನ ದಿನಗಳಲ್ಲಿ ವಿಜ್ಞಾನ ಮತ್ತು ತಾಂತ್ರಿಕ ಜ್ಞಾನ ಸಮಾಜದ ಮೇಲೆ ಹೆಚ್ಚಿನ ವರ್ಚಸ್ಸನ್ನು ಬೀರುತ್ತಿವೆ. ಆದ್ದರಿಂದ ನಾಗರಿಕನ ಹಿತಕ್ಕೆ, ರಕ್ಷಣೆಗೆ ನ್ಯಾಯಶಿಕ್ಷಣ ಅಗತ್ಯ. ಸಮಾಜ ಬೆಳೆಯುತ್ತ ಹೋದಂತೆ ತೊಡಕುಗಳು ಹೆಚ್ಚುತ್ತ ಹೋಗುತ್ತವೆ; ಅವನ್ನು ನಿವಾರಿಸಿಕೊಳ್ಳಲು ವಿಧಿಗಳು ಸೃಷ್ಟಿಯಾಗಲೇ ಬೇಕು. ಹಾಗೆ ವಿಧಿ, ನಿಯಮಗಳ ಸೃಷ್ಟಿಯಾದ ಮೇಲೆ ಅವುಗಳಿಂದ ಉದ್ಭೂತವಾಗುವ ಹಕ್ಕುಬಾಧ್ಯತೆಗಳನ್ನು ದೊರಕಿಸಿಕೊಳ್ಳಲು ನ್ಯಾಯಶಿಕ್ಷಣ ಪಡೆದು ಪರಿಣತರಾದವರ ನೆರವು ಅತ್ಯಗತ್ಯ.

ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಮಾಡಲೆಳಸುವವರಿಗೂ ಸರ್ಕಾರದ ನಾನಾ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೂ ನ್ಯಾಯ ಶಿಕ್ಷಣವನ್ನು ಇತರರಿಗೆ ಬೋಧಿಸುವ ವೃತ್ತಿಯನ್ನು ಕೈಗೊಳ್ಳುವವರಿಗೂ ನ್ಯಾಯಶಿಕ್ಷಣದ ಅಗತ್ಯವಿದೆ. ಗಣಿ, ಕಾರ್ಖಾನೆ, ಯಂತ್ರಾಗಾರಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬನಿಗೂ ಸೇವಕನಿಂದ ಹಿಡಿದು ರಾಜನವರೆಗೂ ನ್ಯಾಯಶಿಕ್ಷಣದ ಅಗತ್ಯವಿದೆ. ರಾಜಕೀಯ ಪಟುವೆನಿಸಿದವನಿಗೂ ನ್ಯಾಯಶಿಕ್ಷಣವಿರಬೇಕಾಗುತ್ತದೆ.

ಗಣರಾಜ್ಯದಲ್ಲಿ ವಿಧಿಗಳು ವ್ಯಕ್ತಿಯ ಹಿತಾಸಕ್ತಿಗಳನ್ನು ಸಂರಕ್ಷಿಸುತ್ತವೆ. ಅಂಥ ಒಂದೊಂದು ವ್ಯಕ್ತಿ ಸಮಾಜದ ಒಂದೊಂದು ಘಟಕ; ಒಂದೊಂದು ಘಟಕದ ಏಳಿಗೆಯಾಯಿತೆಂದರೆ ಸಮಗ್ರ ಸಮಾಜದ ಏಳಿಗೆಯಾಗುತ್ತದೆ. ಇದೆಲ್ಲಕ್ಕೂ ನ್ಯಾಯ ಶಾಸ್ತ್ರದ ಅಭ್ಯಾಸ ಅಗತ್ಯ. (ಎಸ್.ಎಸ್.ಎಂ.ಯು.)