ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯ (ಜನಪದ)

ವಿಕಿಸೋರ್ಸ್ದಿಂದ

ನ್ಯಾಯ (ಜನಪದ) - ಜಗಳ ತೋಟಿಗಳು ನಡೆದಾಗ ವಿಚಾರಣೆ ನಡೆಸಿ ತೀರ್ಪುಕೊಡುವುದು. ಇದು ಗ್ರಾಮ ಜೀವನದ ಒಂದು ಮುಖ್ಯ ಮತ್ತು ವಿಶೇಷ ಅಂಗ. ಇದು ಅವರ ಜೀವನ ವಿಧಾನವನ್ನು ಪ್ರತಿನಿಧಿಸುವ ಒಂದು ಬಗೆಯೂ ಹೌದು. ಗ್ರಾಮಗಳಲ್ಲಿನ ಈ ನ್ಯಾಯ ಮಾಡುವ ವಿಧಾನ ಬೇರೆಲ್ಲ ಆಧುನಿಕ ನ್ಯಾಯ ವ್ಯವಸ್ಥೆಗಳ ಉಗಮಸ್ಥಾನ. ಪ್ರಾಚೀನ ಜನಪದ ಕಥೆಗಳಲ್ಲಿ ನ್ಯಾಯಕ್ಕೆ ಸಂಬಂಧಿಸಿದ ಕಥೆಗಳೇ ಇವೆ. ಯಕ್ಷಗಾನಗಳಿಗೆ ಮಾತೃಸ್ಥಾನದಲ್ಲಿ ನಿಂತಿರುವ ಕರಿಬಂಟನ ಕಾಳಗದಲ್ಲಿ ಹಳ್ಳಿಯ ಗೌಡರ ಒಂದು ಉತ್ತಮ ಮಾದರಿಯ ಪಂಚಾಯ್ತಿ ಇದೆ. ಲಾವಣಿಗಳಲ್ಲಿ ಸಹ ನ್ಯಾಯ ಮಾಡುವ ಸಂದರ್ಭಗಳು ಬರುತ್ತವೆ. ಹಳ್ಳಿಗಳಲ್ಲಿ ನ್ಯಾಯ ಮಾಡುವುದನ್ನು ಪಂಚಾತಿ (ಪಂಚಾಯ್ತಿ) ಎಂದು ಕರೆಯುವುದೂ ಉಂಟು. ಇಂಥ ನ್ಯಾಯಗಳಲ್ಲಿ ಮೂರು ಪ್ರಮುಖ ವಿಧಾನಗಳನ್ನು ಗುರುತಿಸಬಹುದು. 1 ಮನೆ ಪಂಚಾಯ್ತಿ. 2 ಊರ ಪಂಚಾಯ್ತಿ, 3 ದೊಡ್ಡ ಪಂಚಾಯ್ತಿ ಅಥವಾ ಏಳ್ಹಳ್ಳಿ ಪಂಚಾಯ್ತಿ.

ಮನೆ ಪಂಚಾಯ್ತಿ ಒಂದು ಮನೆಯವರ ಅಥವಾ ಒಂದು ಮನೆತಕ್ಕೆ ಸೇರಿದ ರಕ್ತಸಂಬಂಧಿಗಳ ಮಧ್ಯೆ ನಡೆಯುವಂಥದು. ಊರ ಯಜಮಾನನಿಗೆ ಬೇಕಾದವನೊಬ್ಬ ತಪ್ಪು ಮಾಡಿದಾಗ ಅವನನ್ನು ಮತ್ತು ಫಿರ್ಯಾದಿಯನ್ನು ಮಗನೇ ಕರೆಸಿಕೊಂಡು ತೀರ್ಮಾನ ಮಾಡುವ ನ್ಯಾಯವೂ ಇದೇ ಗುಂಪಿಗೆ ಸೇರುತ್ತದೆ. ಇಂಥ ಪಂಚಾಯ್ತಿಗಳಲ್ಲಿ ಮುಖ್ಯವಾದುವೆಂದರೆ ಹಿಸ್ಸೆ ಪಂಚಾಯ್ತಿ ಅಥವಾ ಪಾಲು ಪಂಚಾಯ್ತಿ, ಅಣ್ಣತಮ್ಮಂದಿರ ಕಲಹದ ಪಂಚಾಯ್ತಿ ಮತ್ತು ಸೊಸೆಯನ್ನು ತೌರು ಮನೆಗೆ ಕಳುಹಿಸುವ ಪಂಚಾಯ್ತಿ.

ಊರ ಪಂಚಾಯ್ತಿ ಒಂದು ಊರಿಗೆ ಸಂಬಂಧಿಸಿದ ನ್ಯಾಯಾನ್ಯಾಯಗಳನ್ನು ಕುರಿತದ್ದು. ಇವು ತಪ್ಪಿಸ್ಥರನ್ನು ಶಿಕ್ಷಿಸಲು ಅಥವಾ ಊರಿನ ಮುನ್ನಡೆಯ ಬಗ್ಗೆ ಚರ್ಚಿಸಲು ಸೇರಬಹುದು. ಇವುಗಳಲ್ಲಿ ಹಲವು ಊರಿನ ಹಬ್ಬಹರಿದಿನಗಳ ಬಗ್ಗೆ ಚರ್ಚಿಸಲು ಅವಕಾಶ ಉಂಟು. ಎಡೆ ಮಾಡುವ ಪಂಚಾಯ್ತಿ. ದೇವರು ಹೊರಡಿಸುವ ಪಂಚಾಯ್ತಿ ಗ್ರಾಮದೇವತೆಯ ಜಾತ್ರೆ ಪಂಚಾಯ್ತಿ ಖರ್ಚು ಹೊಡೆಯುವ ಪಂಚಾಯ್ತಿ. ದೇವರನ್ನು ಕರೆತರುವ ಪಂಚಾಯ್ತಿ. ಓಣಿ ಅಥವಾ ದಾರಿ ಮಾಡುವ ಪಂಚಾಯ್ತಿ, ಬಾವಿ ಸೋಸುವ ಪಂಚಾಯ್ತಿ, ಮೀನು ಹಿಡಿಯುವ ಪಂಚಾಯ್ತಿ. ಸುಂಕಿನ ದೇವತೆಗಳಿಗೆ ತಳಿಗೆ ಮಾಡುವ ಪಂಚಾಯ್ತಿ, ಊರೊಟ್ಟಿನ ಮನೆ ಪಂಚಾಯ್ತಿ. ಶೇಕ್ದಾರರು ಊರಿಗೆ ಬರುವ ಬಗ್ಗೆ ಪಂಚಾಯ್ತಿ-ಇವು ಈ ವರ್ಗದಲ್ಲಿ ಕೆಲವು ಶೇಕ್ದಾರರು ಊರಿಗೆ ಬರುವಂಥ ಪಂಚಾಯ್ತಿಗಳು ಬಹಳ ವಿಚಿತ್ರವಾಗಿರುತ್ತವೆ. ಬೆಳೆಯುವ ವಿಶೇಷ ಬೆಳೆಯಲ್ಲಿ ಸ್ವಲ್ಪ ಭಾಗವನ್ನು ಶೇಕ್ದಾರರಿಂಗಾಗಿ ತರಲು ತಿಳಿಸುತ್ತಾರೆ.

ಊರ ನ್ಯಾಯ ನಡೆಯಬೇಕಾದರೆ ಊರಿನ ಮುಖ್ಯ ನ್ಯಾಯಗಾರರು ಇರಬೇಕು. ಒಂದು ಊರಿನಲ್ಲಿ ಇಷ್ಟೇ ಜನ ನ್ಯಾಯಗಾರರಿರಬೇಕೆಂಬ ಮತ್ತು ಅವರು ಇಂಥದೇ ಜನವರ್ಗಕ್ಕೆ ಸೇರಿಸಬೇಕೆಂಬ ನಿಯಮವಿಲ್ಲ. ಅದು ಬುದ್ಧಿವಂತಿಕೆ. ಶ್ರೀಮಂತಿಕೆ ಮತ್ತು ಕೆಲವು ಸ್ಥಾನಮಾನಗಳನ್ನು ಅವಲಂಬಿಸಿರುತ್ತದೆ. ಇದರಲ್ಲಿ ವೃತ್ತಿನ್ಯಾಯಗಾರರು ಮತ್ತು ಸಾಮಾನ್ಯ ನ್ಯಾಯಗಾರರು ಎಂಬ ಎರಡು ವರ್ಗಗಳನ್ನು ಕಾಣಬಹುದು, ಮತ್ತು ಸಾಮಾನ್ಯ ನ್ಯಾಯಗಾರರು ಊರಿನ ಯಾರು ಬೇಕಾದರೂ ಆಗಿರಬಹುದು. ವೃತ್ತಿನ್ಯಾಯಗಾರರೊಂದರೆ ಊರಿನ ಪಟೇಲ, ಗುಡಿ ಗೌಡ, ಮತ್ತು ಊರಿನ ಪಾಠಶಾಲೆಯ ಉಪಾಧ್ಯಾಯರು. ಶ್ಯಾನುಭೋಗರು ನ್ಯಾಯಗಾರರಿಗಿಂತ ಹೆಚ್ಚಾಗಿ ಊರಿನ ರೆವಿನ್ಯೂ ಸಲಹೆಗಾರರು ಮತ್ತು ಊರಿಗೆ ಸಂಬಂಧಿಸಿದೆ ಹೊರೆ ವ್ಯವಹಾರಗಳನ್ನು ನೋಡಿಕೊಳ್ಳುವವರು. ಆದರೆ ಹಳ್ಳಿಯ ಪ್ರತಿಯೊಬ್ಬರ ಮೇಲೂ ಇವರ ಪ್ರಭಾವವಿರುತ್ತದೆ. ಹೀಗೆ ಪಟೇಲ ಊರಿನ ಮುಖ್ಯಾಧಿಕಾರಿಯಾಗಿ, ಗುಡಿ ಗೌಡ ಧಾರ್ಮಿಕ ಅಧಿಕಾರಿಯಾಗಿ. ಶ್ಯಾನುಭೋಗ ಹೊರಾಡಳಿತ ಅಧಿಕಾರಿಯಾಗಿ ವರ್ತಿಸುತ್ತಾರೆ. ಸಾಮಾನ್ಯವಾಗಿ ಹೆಂಗಸರು ಪಂಚಾಯ್ತಿಗಳಲ್ಲಿ ಭಾಗವಹಿಸುವುದಿಲ್ಲ. ಸ್ತ್ರೀಸಮಾನತೆ ಬಂದಿರುವುದರಿಂದ ದೈರ್ಯವಂತ ಮಹಿಳೆಯರು ಈಗ ಪಂಚಾಯ್ತಿಯಲ್ಲಿ ಭಾಗವಹಿಸುತ್ತಾರೆ. ಇತ್ತೀಚಿನ ವಿಧವೆಯರು ಮಾತ್ರ ಊರೊಟ್ಟಿನ ಕೆಲಸಗಳಲ್ಲಿ ಭಾಗವಹಿಸಬಹುದು.

ಊರ ಪಂಚಾಯ್ತಿಗಳಲ್ಲಿ ಸಹ ಒಪ್ಪೊತ್ತಿನ ಪಂಚಾಯ್ತಿ. ಹಗಲು ಪಂಚಾಯ್ತಿ, ಮತ್ತು ರಾತ್ರಿ ಪಂಚಾಯ್ತಿಗಳೆಂಬ ಒಳವಿಭಾಗಗಳಿವೆ. ಸಾಮಾನ್ಯ ತಪ್ಪುಗಳಾದ ಕಾಯಿ ಕದಿಯುವುದು. ಹಲಸಿನಹಣ್ಣು ಕದಿಯುವುದು ಮತ್ತು ಬೇರೆಯವರ ಹೊಲದಲ್ಲಿ ಹುಲ್ಲು, ಜೋಳ ಕೊಯ್ಯುವುದು-ಮೊದಲಾದ ತಪ್ಪುಗಳಿಗೆ ದಂಡ ವಿಧಿಸುವ ಸಲುವಾಗಿ ಈ ಪಂಚಾಯ್ತಿಗಳು ನಡೆಯುತ್ತವೆ. ಇವು ಬೆಳಗ್ಗೆ ಎಂಟುಗಂಟೆಗೆ ಆರಂಭವಾಗಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಅಥವಾ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಿ ರಾತ್ರಿ ಏಳು ಗಂಟೆಗೆ ಮುಗಿಯುತ್ತವೆ. ಇಲ್ಲಿಗೆ ಬರುವ ತಪ್ಪುಗಳಿಗೆ ಕೆಲವು ಊರುಗಳಲ್ಲಿ ಇಂತಿಷ್ಟೇ ದಂಡ ಎಂದು ಮೊದಲೇ ತೀರ್ಮಾನಿಸಿರುವುದರಿಂದ ಬಂದವನಿಗೆ ದಂಡ ಹೇಳಿ ಕಳಿಸುವಷ್ಟರಲ್ಲೇ ಪಂಚಾಯ್ತಿ ಮುಗಿಯುತ್ತದೆ. ದಂಡದ ಹಣ ಸುಮಾರು ಐದರಿಂದ ಹತ್ತು ರೂಪಾಯಿಗಳವರೆಗೆ ಇತ್ತು. ಈಗ ಹೆಚ್ಚಾಗಿದೆ.

ಹಗಲು ಪಂಚಾಯ್ತಿ ಒಂದು ಹಗಲು ಪೂರ್ತಿ ನಡೆಯುವಂಥದು. ಹಳ್ಳಿಗರು ಸೋಮವಾರ ತಮ್ಮ ವಾಹನವಾದ ನಂದಿಯ ವಾರವೆಂದು ವ್ಯವಸಾಯ ಮಾಡುವುದಿಲ್ಲವಾದ್ಧರಿಂದ ಈ ದಿನದಲ್ಲೇ ಬಹುಮಟ್ಟಿಗೆ ಹಗಲು ಪಂಚಾಯ್ತಿ ನಡೆಯುತ್ತದೆ. ತುರ್ತು ಸಂದರ್ಭದಲ್ಲಿ ಬೇರೆಯ ದಿನಗಳೂ ಆಗಬಹುದು. ಕೊಯ್ಲು ಮತ್ತು ದವಸಧಾನ್ಯಗಳ ಒಕ್ಕುವ ಕಾರ್ಯ ಮುಗಿದಿದ್ದರೆ ವಾರದ ಯಾವ ದಿನ ಬೇಕಾದರೂ ಪಂಚಾಯ್ತಿ ಇಡಬಹುದು. ಕದ್ದು ಕಾಯಿ ಕೆಡವಿದ, ಮನೆ ನುಗ್ಗಿದ ಮತ್ತು ಜಮೀನಿನ ಅನೇಕ ಜಗಳಗಳು ಇಲ್ಲಿಗೆ ಬರುತ್ತವೆ.

ಇರುಳು ಅಥವಾ ರಾತ್ರಿ ಪಂಚಾಯ್ತಿ ರಾತ್ರಿ ಎಂಟು ಗಂಟೆಯ ಮೇಲೆ ಆರಂಭವಾಗುತ್ತದೆ. ಎಲ್ಲರೂ ಊಟ ಮುಗಿಸಿಕೊಂಡು ಬರುತ್ತಾರೆ. ಬೇಸಾಯದ ಕಾಲದಲ್ಲಿ ಹಗಲು ಬಿಡುವಿಲ್ಲದಿರುವುದರಿಂದ ಕೆಲವರು ಬಿತ್ತನೆ ಬೀಜ ಮುಂತಾದುವಕ್ಕೆ ಬೇರೆ ಊರಿಗೆ ಹೋಗಿಬರುವ ಸಂದರ್ಭಗಳಿರುವುದರಿಂದ, ರಾತ್ರಿ ವೇಳೆ ಪ್ರಶಾಂತವಾಗಿರುವುದರಿಂದ ರಾತ್ರಿಯೇ ಉತ್ತಮವೆಂದು ಪರಿಗಣೆಸಲಾಗಿದೆ. ಊರಿನ ಮಾನ ಹೋಗುವಂಥ ದೂರುಗಳು-ಎಂದರೆ ಊರಿನ ಹೆಣ್ಣೊಂದು ಕದ್ದು ಬಸಿರಾಗಿದ್ದರೆ, ಯಾರಾದರೊಬ್ಬ ಬೇರೊಬ್ಬನ ಹೆಂಡತಿಯನ್ನು ಕೆಣಕಿದ್ದರೆ, ಊರಿನ ಮುಖ್ಯರಿಬ್ಬರಿಗೆ ಮನಸ್ತಾಪ ಬಂದಿದ್ದರೆ-ಅಂಥವು ಈ ಪಂಚಾಯ್ತಿಯ ಮುಂದೆ ಬರುತ್ತವೆ.

ಒಂದು ನ್ಯಾಯ ತಮ್ಮ ಊರಿನಲ್ಲೇ ತೀರ್ಮಾನವಾಗದಿದ್ದಾಗ ಅಥವಾ ಒಂದು ಊರಿನವನು ಇನ್ನೊಂದು ಊರಿನ ಪ್ರದೇಶದಲ್ಲಿ ಕಳ್ಳತನ ಮಾಡಿದಾಗ ಅದು ಎರಡು ಊರುಗಳಿಗೂ ಸಂಬಂಧಿಸಿದ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ತಪ್ಪು ಮಾಡಿದವ ಒಂದು ಊರಿನ ಪ್ರಮುಖರಿಗೆ ಬೇಕಾಗಿದ್ದವನಾದರೆ ಅವನನ್ನು ವಹಿಸಿಕೊಳ್ಳಬಹುದು. ಆಗ ನ್ಯಾಯ ಬಹಳ ತೊಡಕಾಗಿ ಅ ಎರಡೂ ಊರುಗಳ ಮಧ್ಯೆ ದ್ವೇಷ ಬೆಳೆಯಬಹುದು. ಇಂಥ ನ್ಯಾಯಗಳನ್ನು ದೊಡ್ಡ ಪಂಚಾಯ್ತಿ ಅಥವಾ ಏಳ್ಹಳ್ಳಿ ಪಂಚಾಯ್ತಿಗೆ ಒಪ್ಪಿಸುತ್ತಾರೆ. ಈ ಏಳು ಹಳ್ಳಿಗೂ ಒಂದು ಗುಡಿಕಟ್ಟಿಗೆ ಸೇರಿರಬಹುದು. ಅಥವಾ ಬೇರೆ ಬೇರೆ ಗುಡಿಕಟ್ಟಿಗೆ ಸೇರಿಸಬಹುದು. ಒಂದೇ ಗುಡಿ ಕಟ್ಟು ಅಥವಾ ಪಂಚಾಯ್ತಿಗೆ ಸೇರಿದ ನ್ಯಾಯಗಳಾದರೆ ಬೇಗ ತೀರ್ಮಾನವಾಗುತ್ತವೆ. ಏಳು ಹಳ್ಳಿಯ ಎಲ್ಲ ಮುಖ್ಯ ನ್ಯಾಯವಾದಿಗಳನ್ನು ತಪ್ಪಿತಸ್ಥನ ಹತ್ತಿರಕ್ಕೆ ಅಥವಾ ತಪ್ಪು ಆಗಿರುವ ಊರಿಗೆ ವೀಳ್ಯ ಕೊಟ್ಟು ಕರೆಸುತ್ತಾರೆ. ಅವರಿಗಾಗಿ ಹೆಚ್ಚು ಗಟ್ಲೆ (ಮಾಂಸದ ಊಟ) ಮಾಡಿಸಿತ್ತಾರೆ.

ನಿರ್ದಿಷ್ಟ ದಿನ ಮತ್ತು ಕಾಲದಲ್ಲಿ ಗೊತ್ತುಪಡಿಸಿದ ಗ್ರಾಮದ ಪಂಚಾಯ್ತಿ ಕಟ್ಟೆಯಲ್ಲಿ ಎಲ್ಲರೂ ಸೇರುತ್ತಾರೆ. ಪಂಚಾಯ್ತಿ ಕಟ್ಟೆ ಆ ಊರಿನ ಅರಳೀಕಟ್ಟೆಯೊ ಊರೊಟ್ಟಿನ ಮನೆಯೊ ರಾಮಮಂದಿರವೊ ಊರಮುಂದಿನ ಒಂದು ಪ್ರದೇಶವೂ ಆಗಿರುತ್ತದೆ. ಇಲ್ಲಿ. ಕುಳಿತುಕೊಳ್ಳಲು ವಿಶೇಷ ವ್ಯವಸ್ಥೆಗಳೇನೂ ಇರುವುದಿಲ್ಲ. ಅರಳೀಕಟ್ಟೆಯಾದರೆ ಅದಕ್ಕೆ ಹಾಸಿರುವ ಕಲ್ಲುಗಳ ಮೇಲೂ ಜಾಗ ಸಾಲದಿದ್ದಾಗ ತಮ್ಮ ಹೆಗಲ ಅಥವಾ ತಲೆಯ ಮೇಲಿನ ದುಪ್ಪಟಿಯನ್ನು ನೆಲದ ಮೇಲೆ ಹಾಕಿಕೊಂಡು ಕೂರುತ್ತಾರೆ. ಮುಖ್ಯ ಯಜಮಾನರು ತಾವು ಬರುವಾಗ ಹೆಗಲಮೇಲೆ ತುಂಡುಗಂಬಳಿ (ಸಾಮಾನ್ಯವಾಗಿ ಕರಿಕಂಒಳಿಯನ್ನು) ತಂದಿರುತ್ತಾರೆ. ಅದನ್ನು ಹಾಸಿಕೊಂಡು ಕೂರುತ್ತಾರೆ.

ಪಂಚಾಯ್ತಿಕಟ್ಟೆಗೆ ಸೇರುವ ಮೊದಲು, ಸೇರಲು ತಿಳಿವಳಿಕೆ ಕೊಡಲು ಸಾರುವ ವ್ಯವಸ್ಥೆ ಇದೆ. ಊರಿನ ಕುಳವಾಡಿಯಿಂದ ಇಂಥ ದಿನ ಪಂಚಾಯ್ತಿಯಿರುವುದಾಗಿಯೂ ಮನೆಗೊಂದಾಳು ಬರುವಂತೆಯೂ ಬೀದಿಬೀದಿಗಳಲ್ಲಿ ಸಾರಿಸುತ್ತಾರೆ. ಇದು ಆ ಊರಿನ ಪಟೇಲರ ಅಥವಾ ಮುಖ್ಯ ನ್ಯಾಯವಾದಿಗಳ ಆಜ್ಞೆಯಾಗಿರುತ್ತದೆ. ಕುಳವಾಡಿ ತೀರಿಕೊಂಡು ಅವನ ಮಕ್ಕಳು ಕಿರಿಯವರಾಗಿದ್ದರೆ. ವಿಧವೆಯಾದ ಅವನ ಹೆಂಡತಿಯೇ ಮನೆಮನೆಗೆ ಹೋಗಿ ವಿಷಯ ತಿಳಿಸುತ್ತಾಳೆ. ಸಾರುವುದಿಲ್ಲ. ಈ ಎರಡು ರೀತಿಯ ವ್ಯವಸ್ಥೆಗಳಲ್ಲದೆ ತಮಟೆ ಹೊಡೆಸುವ ವಿಧಾನವೂ ಇದೆ. ದೊಡ್ಡ ತಮಟೆಯೊಂದನ್ನು ಬಿಸಿಮಾಡಿ ಹತ್ತು ನಿಮಿಷಗಳ ಬಿಡುವಿನಂತೆ. ಮೂರು ಸಾರಿ ನಿರ್ದಿಷ್ಟ ಅವಧಿಯಂತೆ ಬಡಿಯಬೇಕು. ಈ ಬಡಿಯುವ ವಿಧಾನ ಸಹ ಬೇರೆ ರೀತಿಗಳಿಗಿಂತ ಭಿನ್ನವಾಗಿರುತ್ತದೆ. ಈ ಮೂರೂ ಸಂದರ್ಭಗಳಲ್ಲಿ ಭಾಗವಹಿಸುವವರು ಹರಿಜನವರ್ಗದವರು.

ಒಂದು ತಪ್ಪು ಪಂಚಾಯ್ತಿಗೆ ಬರುವುದಕ್ಕೆ ಮೊದಲು ಹಳ್ಳಿಯ ಹಲವರಿಂದ ವೈಯಕ್ತಿಕ ಮತ್ತು ಗುಂಪಿನ ವಿಮರ್ಶೆಗೆ ಒಳಗಾಗುತ್ತದೆ. ಹೀಗೆಲ್ಲ ವಿಮರ್ಶೆ ನಡೆದು ಫಿರ್ಯಾದಿ ಯಜಮಾನರಿಗೆ ದೂರುಕೊಟ್ಟ ಮೇಲೆ ಪಂಚಾಯ್ತಿ ಸೇರುವ ವ್ಯವಸ್ಥೆಯಾಗುತ್ತದೆ. ಊರ ಪಂಚಾಯ್ತಿಯಾದರೆ ಪಂಚಾಯ್ತಿ ಕಟ್ಟಗೆ ಸೇರಿದೊಡನೆಯೇ ಪ್ರತಿಯೊಂದು ಒಕ್ಕಲಿನ ಮುಖ್ಯಸ್ಥನ ಹೆಸರನ್ನು ಹಿಡಿದು ಕೂಗುತ್ತಾರೆ. ಆತ ಬಂದಿದ್ದೇನೆ ಎನ್ನಬೇಕು. ಬರದಿದ್ದರೆ ಎಂಟಾಣೆಯಿಂದ ಒಂದು ರೂಪಾಯಿವರೆಗೆ ದಂಡ ವಿಧಿಸುತ್ತಾರೆ. ಅನಂತರ ಫಿರ್ಯಾದಿ ಮತ್ತು ಅಪರಾಧಿಗಳು ಠೇವಣಿ ಹಣ ಕಟ್ಟಬಹುದು. ಈ ಮೊತ್ತ ನೂರೊಂದು ಐನೂರ ಒಂದು ಅಥವಾ ಸಾವಿರದ ಒಂದು ರೂಪಾಯಿಗಳಾಗಿರುತ್ತದೆ. ಈ ಮೊತ್ತವನ್ನು ಸಭೆ ಒಪ್ಪಿದ ಒಬ್ಬ ಮಧ್ಯಸ್ಥನಿಗೂ ಅಥವಾ ಆ ಊರಿನ ದೇವತೆಯ ಸೆರಗಿಗೊ ಕಟ್ಟಬಹುದು.

ನ್ಯಾಯ ಆರಂಭವಾಗುತ್ತದೆ. ಫಿರ್ಯಾದಿ ಮತ್ತು ಅಪರಾಧಿ ತಮ್ಮ ಭಾಗದ ನ್ಯಾಯವನ್ನು ಹೇಳಿಕೊಳ್ಳುತ್ತಾರೆ. ಈ ಇಬ್ಬರು ಹೀಗೆ ಹೇಳಿಕೊಳ್ಳುವಾಗ ಅವರ ವಕಾಲತ್ತು ವಹಿಸಿದ ಹಲವರÀು ಮಧ್ಯೆ ಮಧ್ಯೆ ಎದ್ದುನಿಂತು ರೋಷಾವೇಶದಿಂದ ತಮ್ಮ ಕಡೆಯ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಗುದ್ದಾಟಗಳೂ ಆರಂಭವಾಗಬಹುದು. ಒಬ್ಬನ ಕಡೆಗೆ ಮುಖ್ಯನ ಮತ್ತು ಹೆಚ್ಚು ಜನರ ಬೆಂಬಲ ಕಂಡುಬಂದಾಗ ನ್ಯಾಯವೂ ಆ ಕಡೆಗೆ ವಾಲುವುದುಂಟು. ಇಲ್ಲದಿದ್ದರೆ ಮಧ್ಯೆ ಮಾತಾಡುವವರನ್ನು ತಡೆದು ಸಮಾಧಾನದಿಂದಿರುವಂತೆ ಹೇಳುತ್ತಾರೆ. ಎರಡೂ ಕಡೆಯ ಸರಿ ತಪ್ಪುಗಳನ್ನು ವಿಚಾರಮಾಡಿ ಮಾನವೀಯ ದೃಷ್ಟಿಯಿಂದ ನ್ಯಾಯತೀರ್ಮಾನವಾಗುವಂತೆ ನೋಡಿಕೊಳ್ಳುತ್ತಾರೆ. ಅಪರಾಧಿ ಮತ್ತು ಫಿರ್ಯಾದಿಗಳ ಹೇಳಿಕೆಯಲ್ಲಿ ಸತ್ಯ ಹೊರಬರದಿದ್ದ ಪಕ್ಷದಲ್ಲಿ ಕೆಲವು ಪವಿತ್ರ ವಸ್ತುಗಳ ಹೆಸರಿನಲ್ಲಿ ಅವರಿಂದ ಸತ್ಯ ಮಾಡಿಸುತ್ತಾರೆ. ಅವನು ಹೇಳುವುದು ಸತ್ಯವಾದರೆ ಕೆಂಡಮುಟ್ಟಿ ಹೇಳು ಎನ್ನುತ್ತಾರೆ. ಹಾವು ಚೇಳು ಇರುವ ಗಡಿಗೆಗೆ ಕೈಯಿಡುವಂತೆ ಸೂಚಿಸುತ್ತಾರೆ. ಆತ ಸತ್ಯ ಹೇಳುತ್ತಿದ್ದರೆ ಕೆಂಡ ಸುಡುವುದಿಲ್ಲ. ಹಾವು ಚೇಳು ಕಡಿಯುವುದಿಲ್ಲವೆಂಬುದು ಜನಪದರ ನಂಬಿಕೆ. ಅಲ್ಲದೆ ಸೂರ್ಯಚಂದ್ರರ ಹೆಸರಿನಲ್ಲಿ, ಆತನ ಮಗುವಿನ ಹೆಸರಿನಲ್ಲಿ, ತುಂಬಿದ ಹರವಿಯ ಹೆಸರಿನಲ್ಲಿ, ಅರಳೀಮರ ಅಥವಾ ಗೋವಿನ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿಸುವುದುಂಟು. ಹೀಗೆ ನ್ಯಾಯ ಮಾಡುದಲ್ಲಿ ಬಂದವರೆಲ್ಲ ಸಕ್ರಿಯವಾಗಿ ಭಾಗವಹಿಸುವುದಿಲ್ಲ. ಕೆಲವರು ತೂಕಡಿಸಿಯೊ ನಿದ್ದೆಮಾಡಿಯೊ ಎದ್ದು ಹೋಗುತ್ತಾರೆ.

ಕೊನೆಯದು ತಪ್ಪು ಮಾಡಿದವನಿಗೆ ದಂಡ ವಿಧಿಸುವ ಕ್ರಮ. ದಂಡ ವಿಧಿಸುವ ಕ್ರಮಗಳು ಬಹಳ ತೊಡಕಾದವು. ದಂಡದ ರೀತಿ ಅನ್ಯಾಯವಾದುದಾದರೆ ಎರಡೂ ಪಕ್ಷಗಳ ನಡುವೆ ಹೊಡೆದಾಟಗಳಾಗಬಹುದು. ಊರಿನ ಐಕ್ಯತೆಗೆ ಭಂಗ ಬರಬಹುದು. ದಂಡ ಹೇಳಿದ ವ್ಯಕ್ತಿಯ ಬಗ್ಗೆ ದ್ವೇಷ ಬರಬಹುದು. ಆದುದರಿಂದ ದಂಡ ವಿಧಿಸುವವರು ಈಗಾಗಲೇ ಈ ವೃತ್ತಿಯಲ್ಲಿ ಪರಿಣತರಾಗಿರಬೇಕು. ವಿಧಿಸುವ ದಂಡ ಕ್ರಮಬದ್ಧವಾಗಿರಬೇಕು. ತಮ್ಮ ಗ್ರಾಮಗಳ ಪರಿಸ್ಥಿತಿಯಲ್ಲಿ ಸಾಮಾಜಿಕವಾಗಿ ಯಾವುದು ಹೆಚ್ಚು ತಪ್ಪು ಯಾವುದು ಕಡಿಮೆ ತಪ್ಪು ಎಂಬುದರ ಅರಿವು ಅವರಿಗೆ ಇರಬೇಕು. ತಪ್ಪಿತಸ್ಥನನ್ನು ಗುರುತಿಸಿದ ಮೇಲೆ ದಂಡ ಹೇಳಲು ಕೆಲವರ ಹೆಸರುಗಳನ್ನು ಸೂಚಿಸುತ್ತಾರೆ. ಅವರೆಲ್ಲ ಸೇರಿ ಪಂಚಾಯ್ತಿ ಇದ್ದ ಜಾಗದಿಂದ ಸ್ವಲ್ಪ ದೂರಕ್ಕೆ ಹೋಗಿ ಮಾತನಾಡಿಕೊಂಡು ಒಂದು ತೀರ್ಮಾನಕ್ಕೆ ಬರುತ್ತಾರೆ. ಅದನ್ನು ಸಭೆಗೆಲ್ಲ ಕೇಳುವಂತೆ ಹೇಳಲು ಒಬ್ಬನಿಗೆ ವಹಿಸುತ್ತಾರೆ. ಆದರೆ ಹೀಗೆ ಹೇಳುವ ಕಾರ್ಯಕ್ಕೆ ಹಲವರು ಒಪ್ಪಿಕೊಳ್ಳುವುದಿಲ್ಲ. ದಂಡ ಹೇಳಿದವನ ಮನೆ. ಹೆಂಡ ಕುಡಿದವನ ಮನೆ ಎಂದೂ ಉಳಿಯುವುದಿಲ್ಲ ಎನ್ನುವ ಗಾದೆಮಾತಿಗೆ ಅವರು ಹೆದರುತ್ತಾರೆ.

ಕಳ್ಳತನ ಮಾಡಿದವರನ್ನು ಮೊದಲು ಊರಿನ ಕರಿಗಲ್ಲಿಗೆ ಕಟ್ಟೆ ಹೊಡೆದು ಆಮೇಲೆ ಪಂಚಾಯ್ತಿಗೆ ತರುತ್ತಾರೆ. ಇಂಥವರಿಗೆ ಐನೂರು ರೂಪಾಯಿವರೆಗೆ ದಂಡ ವಿಧಿಸಬಹುದು. ಹೆಣ್ಣುಮಗಳನ್ನು ಕೆಡಿಸಿದವನಿಗೆ ಒಂದು ಸಾವಿರದಿಂದ ಮೂರು ಸಾವಿರದವರೆಗೆ ದಂಡ ವಿಧಿಸುತ್ತಾರೆ. ಬೇರೆಯವನ ಹೆಂಡತಿಯನ್ನು ಕೆಣಕಿದರೆ ಸಾವಿರದವರೆಗೆ ದಂಡ ವಿಧಿಸುವುದಂಟು. ತಪ್ಪು ಮಾಡಿದ ವ್ಯಕ್ತಿ ಅಂತಸ್ತಿನಲ್ಲಿ ದೊಡ್ಡವನಾದರೆ ಮೂರು ಕಾಸು ದಂಡ ವಿಧಿಸಿ. ಅವನ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದಂತೆ ಮಾಡುತ್ತಾರೆ. ದಂಡವನ್ನು ಆ ದಿನವೇ ಪಂಚಾಯ್ತಿದಾರರು ತಿಳಿಸಿದವರಿಗೆ ಕೊಡಬೇಕು. ಕೆಲವೊಮ್ಮೆ ಕೆಲವು ದಿನಗಳ ಗಡುವನ್ನೂ ಕೊಡಬಹುದು. ಈ ಹಣದಲ್ಲಿ ಪಂಚಾಯ್ತಿಗೂ ಸ್ವಲ್ಪ ತೆಗೆದುಕೊಳ್ಳುತ್ತಾರೆ.

ಎಲ್ಲವೂ ಶಾಂತವಾಗಿ ಒಳ್ಳೆಯ ರೀತಿಯಿಂದ ನಡೆದುಕೊಂಡು ಹೋಗಲಿ ಎಂಬುದು ಹಳ್ಳಿಗರ ಆಶಯ. ಆದುದರಿಂದ ಅಪರಾಧಿ ಮತ್ತು ಫಿರ್ಯಾದಿಗಳನ್ನು ಒಂದು ಮಾಡಲು ಅನೇಕ ವಿಧಾನಗಳನ್ನು ಅನುಸರಿಸುತ್ತಾರೆ. ಯಾರಿಗೂ ದಂಡ ಹಾಕದೆ ಅವರವರ ತಪ್ಪನ್ನು ಅವರಿಗೆ ಹೇಳಿ ತಿದ್ದಿಕೊಳ್ಳುವಂತೆ ಬೋಧಿಸಿ. ಇಬ್ಬರ ಕೈಯನ್ನೂ ಒಟ್ಟಿಗೆ ಸೇರಿಸಿ, ಸಭೆಯ ಹೆಸರಲ್ಲಿ ಸತ್ಯಮಾಡಿಸಿ. ಅಪರಾಧಿ ಮತ್ತು ಫಿರ್ಯಾದಿಗಳಿಂದ ತಾವಿಬ್ಬರೂ ಒಂದಾಗಿದ್ದೇವೆಂದು ಹೇಳಿಸುತ್ತಾರೆ. ಈ ಇಬ್ಬರೂ ಸೇರಿ ತಮ್ಮ ಖರ್ಚಿನಿಂದ ಆ ಊರಿನ ಗ್ರಾಮದೇವತೆಯ ಉತ್ಸವ ಮಾಡಿಸಿ ಒಂದಾಗಬಹುದು. ಧರ್ಮಸ್ಥಳದ ಮಂಜುನಾಥಸ್ವಾಮಿ ಅಥವಾ ಅಣ್ಣಪ್ಪಸ್ವಾಮಿಗೆ ಕಾಣಿಕೆ ಸಲ್ಲಿಸುವ ಮೂಲಕವೂ ಒಂದಾಗಬಹುದು.

ಈ ಯಾವುದರಿಂದಲೂ ನ್ಯಾಯ ಬಗೆಹರಿಯುವುದಿಲ್ಲವೆಂದು ತಿಳಿದುಬಂದರೆ ಮುಖ್ಯ ಮತ್ತು ವಯಸ್ಸಾದ ನ್ಯಾಯಗಾರರಿಬ್ಬರು ಮೊದಲೇ ಕೆಲವು ಉಪಾಯಗಳನ್ನು ಯೋಚಿಸಿಕೊಂಡು ಬಂದಿರುತ್ತಾರೆ. ಇಬ್ಬರೂ ಬೇರೆ ಬೇರೆ ಪಕ್ಷಗಳನ್ನು ಪ್ರತಿನಿಧಿಸಿ ನ್ಯಾಯ ಹೇಳುತ್ತಾರೆ. ಕೊನೆಯಲ್ಲಿ ತಮ್ಮ ಮಧ್ಯೆ ಕಲಹ ಹೆಚ್ಚುವಂತೆ ಮಾಡಿಕೊಂಡು ಒಬ್ಬರಿಗೊಬ್ಬರು ಗುದ್ದಾಡಲು ಪ್ರಾರಂಭಮಾಡುತ್ತಾರೆ. ಆಗ ಫಿರ್ಯಾದಿ ಮತ್ತು ಅಪರಾಧಿಗಳು ತಮಗಾಗಿ ಈ ಹಿರಿಯರನ್ನು ಗುದ್ದಾಡಿಸುವುದೇ ಎಂದು ನಾಚಿ, ತಾವು ಒಂದಾಗುವ ಭರವಸೆ ಕೊಡುವಂಥ ಅನೇಕ ಸಂದರ್ಭಗಳುಂಟು. ನ್ಯಾಯ ತೀರ್ಮಾನದಲ್ಲಿ ಇದೇ ರೀತಿಯ ಅನೇಕ ತಂತ್ರಗಳನ್ನು ಹಳ್ಳಿಯ ಹಿರಿಯರು ಬಳಸುತ್ತಾರೆ. (ಎಚ್.ಎಸ್.ಆರ್.ಜಿ.)