ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಷನಲ್ ಜೀಯೊಗ್ರಾಫಿಕ್

ವಿಕಿಸೋರ್ಸ್ ಇಂದ
Jump to navigation Jump to search

ನ್ಯಾಷನಲ್ ಜೀಯೊಗ್ರಾಫಿಕ್

1888ರಲ್ಲಿ ಅಮೆರಿಕದ ನ್ಯಾಷನಲ್ ಜೀಯೊಗ್ರಾಫಿಕ್ ಸೊಸೈಟಿಯಿಂದ ವಾಷಿಂಗ್ಟನ್ ಡಿ.ಸಿ. ನಗರದಲ್ಲಿ ಆರಂಭವಾದ ಮಾಸಪತ್ರಿಕೆ. ಆ ಸಂಘ ಯಾವುದೇ ಲಾಭದಾಯಕ ಉದ್ದೇಶವನ್ನೂ ಹೊಂದಿಲ್ಲ. ಭೌಗೋಳಿಕ ಸಂಗತಿಗಳ ಅನ್ವೇಷಣೆಯನ್ನು ಪ್ರೋತ್ಸಾಹಿಸುವುದು ಅದರ ಉದ್ದೇಶ. ಇದಕ್ಕಾಗಿಯೇ ಈ ಮಾಸಿಕವನ್ನು ಅದು ತನ್ನ ಕಾರ್ಯಾಲಯದಿಂದ ಹೊರಡಿಸಿತು. ಭೂಮಿ, ಸಮುದ್ರ ಹಾಗೂ ಆಕಾಶ ಇವುಗಳ ಬಗ್ಗೆ ಇನ್ನೂ ಮಾನವ ಜನಾಂಗಕ್ಕೆ ಗೊತ್ತಿರದ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಸಚಿತ್ರ ಲೇಖನಗಳನ್ನು ನ್ಯಾಷನಲ್ ಜೀಯೋಗ್ರಾಫಿಕ್ ಪತ್ರಿಕೆ ಪ್ರಕಟಿಸುತ್ತದೆ. ಇದಕ್ಕಾಗಿ ಸಂಶೋಧನ ಕಾರ್ಯಕ್ಕೆ ಅಪಾರ ಧನಸಹಾಯವನ್ನು ಸೊಸೈಟಿ ನೀಡುತ್ತದೆ. ಒಳ್ಳೆಯ ಲೇಖನ ಹಾಗೂ ಬಣ್ಣದ ಚಿತ್ರಗಳ ಪ್ರಕಟಣೆ ಹಾಗೂ ವಿನ್ಯಾಸದ ದೃಷ್ಟಿಯಿಂದ ಈ ಪತ್ರಿಕೆ ಜಗತ್‍ಪ್ರಸಿದ್ಧವಾಗಿ ಪ್ರಶಂಸೆಗೆ ಪಾತ್ರವಾಗಿದೆ. ಇದರಲ್ಲಿ ಪ್ರಕಟವಾಗುವ ಲೇಖನ ಹಾಗೂ ಚಿತ್ರಗಳಿಗೆ ಹೆಚ್ಚಿನ ಸಂಭಾವನೆ ಕೊಡಲಾಗುತ್ತದೆ. ಪ್ರಕಟವಾಗುವ ಸಾಮಗ್ರಿಯ ಗುಣಮಟ್ಟವೂ ಅದೇ ರೀತಿಯಲ್ಲಿ ಇರಬೇಕೆಂಬುದನ್ನು ಸಂಪಾದಕ ವರ್ಗ ನಿರೀಕ್ಷಿಸುತ್ತದೆ.

ನ್ಯಾಷನಲ್ ಜೀಯೊಗ್ರಾಫಿಕ್ ಸೊಸೈಟಿ ಪತ್ರಿಕೆ ಪ್ರಕಟಣೆಯ ಜೊತೆಗೆ ಟೆಲಿವಿಷನ್ ಹಾಗೂ ಚಲನಚಿತ್ರ ಕಾರ್ಯಕ್ರಮಗಳನ್ನು ತಯಾರಿಸುತ್ತದೆ. ಈ ಸಂಸ್ಥೆಯ ದೂರದರ್ಶನ ವಾಹಿನಿ ಅತ್ಯಂತ ಜನಪ್ರಿಯ ಪ್ರಯೋಜತಕ ಸಂಶೋಧನೆಗಳ ಕುರಿತಂತೆ ಪುಸ್ತಕಗಳನ್ನು, ಭೂಪಟಗಳನ್ನು ಪ್ರಕಟಿಸುತ್ತಿದೆ. ನ್ಯಾಷನಲ್ ಜಿಯೊಗ್ರಾಫಿಕ್ ಮಾಸಪತ್ರಿಕೆ ಸೊಸ್ಶೆಟಿಯ ಸದಸ್ಯರಿಗೆ ಉಚಿತವಾಗಿ ಲಭ್ಯ. ಬಿಡಿ ಸಂಚಿಕೆಗಳೂ ಮಾರುಕಟ್ಟೆಯಲ್ಲಿ ಲಭ್ಯ. ಇಂಗ್ಲಿಷ್ ಭಾಷಾ ಆವೃತ್ತಿ ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಜನಪ್ರಿಯ. ಜಪಾನ್, ಬ್ರಿಟನ್, ಅಮೆರಿಕ, ಗ್ರೀಸ್, ಇಟಲಿ, ಇಸ್ರೇಲ್ ದೇಶಗಳಲ್ಲಿ ಓದುಗರಿಗಾಗಿ ಆಯಾ ದೇಶ ಭಾಷೆಗಳಲ್ಲಿ ಕೂಡ ಪ್ರಕಟವಾಗುತ್ತಿದೆ. ಸಂಸ್ಥೆಯ ಕೇಂದ್ರ ಕಾರ್ಯಾಲಯ ಅಮೆರಿಕದ ವಾಷಿಂಗ್‍ಟನ್ನಿನಲ್ಲಿದೆ. (ಜಿ.ಟಿ.ಎಚ್.ಇ.)