ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಫೌಂಡ್ಲೆಂಡ್

ವಿಕಿಸೋರ್ಸ್ದಿಂದ

ನ್ಯೂಫೌಂಡ್‍ಲೆಂಡ್ - ಕೆನಡದ ಒಂದು ಪ್ರಾಂತ್ಯ; ಅದೇ ಹೆಸರಿನ ದ್ವೀಪವನ್ನೂ ಮುಖ್ಯಭೂ ಭಾಗವಾದ ಲ್ಯಾಬ್ರಡಾರನ್ನೂ ಒಳಗೊಂಡಿದೆ. ನೂಫೌಂಡ್‍ಲೆಂಡ್ ದ್ವೀಪ ಉ.ಅ.46(36'-51(39' ಮತ್ತು ಪ.ರೇ 52(36'-59(24' ಮಧ್ಯೆಯೂ ಲ್ಯಾಬ್ರಡಾರ್ ಉ.ಅ.51(22'-60(30' ಮತ್ತು ಪ,ರೇ.58(30'-67(25' ನಡುವೆಯೂ ಇವೆ. ನ್ಯೂಫೌಂಡ್‍ಲೆಂಡ್ ದ್ವೀಪ ಹೆಚ್ಚುಕಡಿಮೆ ತ್ರಿಕೋನಾಕಾರವಾಗಿದೆ. ಅದರ ಉತ್ತರದಲ್ಲಿ ಬಾಲ್ಡ್, ಆಗ್ನೇಯದಲ್ಲಿ, ರೇಸ್, ನೈಋತ್ಯದಲ್ಲಿ ರೇ ಮತ್ತು ಪೂರ್ವ ತೀರದಲ್ಲಿ ಫ್ರೀಲ್ಸ್ ಭೂಶಿರಗಳು ಇವೆ. ಲ್ಯಾಬ್ರಡಾರ್ ಭಾಗ ದಕ್ಷಿಣದಲ್ಲಿ ಲಾನ್ಸ್ ಎಕ್ಲೇರ್‍ನಿಂದ ಹಿಡಿದು ಉತ್ತರದಲ್ಲಿ ಚಿಡ್ಲೀ ಭೂಶಿರದ ವರೆಗೆ ವ್ಯಾಪಿಸಿದೆ. ಪ್ರಾಂತ್ಯದ ವಿಸ್ತೀರ್ಣದಲ್ಲಿ ಮುಕ್ಕಾಲು ಭಾಗವನ್ನು ಲ್ಯಾಬ್ರಡಾರ್ ಆವರಿಸಿದೆ. ಕೊಲ್ಲಿ ಖಾರಿಗಳಿಂದ ಕೂಡಿ, ಸಮುದ್ರದ ಅಲೆಗಳ ಬಡಿತಕ್ಕೊಳಗಾದ ಈ ಪ್ರಾಂತ್ಯದ ಕರಾವಳಿಯ ಉದ್ದ ಸುಮಾರು 16,000 ಕಿಮೀ.ಗಿಂತ ಹೆಚ್ಚು. ಪ್ರಾಂತ್ಯದ ಒಟ್ಟು ವಿಸ್ತೀರ್ಣ 3,83,300 ಚ.ಕಿಮೀ ನ್ಯೂಫೌಂಡ್‍ಲೆಂಡ್ ದ್ವೀಪದ ವಿಸ್ತೀರ್ಣ 1,12,300 ಚ.ಕಿಮೀ ಪ್ರಾಂತ್ಯದ ಜನಸಂಖ್ಯೆ 5.22.104 (1971). ಆಡಳಿತ ಕೇಂದ್ರ ಸೆಂಟ್ ಜಾನ್ಸ್.

ಮೇಲ್ಮೈ ಲಕ್ಷಣ : ನ್ಯೂಫೌಂಡ್‍ಲೆಂಡ್ ದ್ವೀಪ ಬಹುಮಟ್ಟಿಗೆ ಸಮತಲ ಭೂಮಿ. ಪಶ್ಚಿಮದಲ್ಲಿ ಭೂಮಿ ಸಮುದ್ರಮಟ್ಟದಿಂದ ಹಠಾತ್ತನೆ ಎದ್ದು ಲಾಂಗ್ ರೇಂಜ್ ಪರ್ವತ ಶಿಖರದಲ್ಲಿ 814 ಮೀ. ಗರಿಷ್ಠ ಎತ್ತರ ಮುಟ್ಟುತ್ತದೆ. ಇಲ್ಲಿಂದ ಭೂಮಿ ಈಶಾನ್ಯದ ಕಡೆಗೆ ಇಳಿಯುತ್ತ ಸಾಗುತ್ತದೆ. ಮೈದಾನ ಅಲೆಯಲೆಯಾಗಿದೆ. ಅಲ್ಲಿ ಸಾವಿರಾರು ಸರೋವರಗಳೂ ಕೊಳಗಳೂ ಇವೆ. ಸಮುದ್ರ ತೀರ ಬೆಟ್ಟಗುಡ್ಡಗಳಿಂದಲೂ ಕಂದಕಗಳಿಂದಲೂ ಹಳ್ಳತಿಟ್ಟುಗಳಿಂದಲೂ ಕೂಡಿದೆ. ಸಮುದ್ರದಂಚಿನಲ್ಲಿ ಹಲವು ದ್ವೀಪಗಳಿವೆ.

ನ್ಯೂಫೌಂಡ್‍ಲೆಂಡ್ ದ್ವೀಪದ ಮೂರನೆಯ ಒಂದರಷ್ಟು ಭಾಗ ಜಲಾವೃತವಾಗಿದೆ. ಸರೋವರಗಳಲ್ಲಿ ಅತ್ಯಂತ ದೊಡ್ಡದು ಗ್ರ್ಯಾಂಡ್ ಲೇಕ್ (512 ಚ.ಕಿಮೀ) ಇತರ ದೊಡ್ಡ ಸರೋವರಗಳು ಗ್ರ್ಯಾಂಡ್‍ರೆಡ್ ಇಂಡಿಯನ್ ಮತ್ತು ಗ್ಯಾಂಡರ್, ಹಲವು ನದಿಗಳು ಈಶಾನ್ಯದ ಕಡೆ ಹರಿಯುತ್ತವೆ. ಮುಖ್ಯ ನದಿಗಳು ಟೆರ ನೋವ, ಗ್ರ್ಯಾಂಡ್, ಎಕ್ಸ್‍ಪ್ಲಾಯಿಟ್ಸ್ ಮತ್ತು ಗ್ರ್ಯಾಂಡರ್.

ಲ್ಯಾಬ್ರಡಾರ್ ಜಿಲ್ಲೆಯ ಪಶ್ಚಿಮ ಮತ್ತು ದಕ್ಷಿಣಗಳಲ್ಲಿ ಕ್ವಿಬೆಕ್ ಪ್ರಾಂತ್ಯವೂ ಪೂರ್ವ ಮತ್ತು ಉತ್ತರಭಾಗಗಳಲ್ಲಿ ಅಟ್ಲಾಂಟಿಕ್ ಸಾಗರವೂ ಇವೆ. ಇಲ್ಲಿ ಅತ್ಯಂತ ಪ್ರಾಚೀನ ಶಿಲೆಗಳಿವೆ. ಉತ್ತರದ ತುದಿಯಲ್ಲಿರುವ ಟಾರ್ನ್‍ಗ್ಯಾಟ್ ಪರ್ವತಶ್ರೇಣಿ ಸಮುದ್ರಮಟ್ಟಕ್ಕೆ 1,524 ಮೀ. ಎತ್ತರಕ್ಕಿದೆ. ಪೂರ್ವಭಾಗದಲ್ಲಿ ಸಮುದ್ರತೀರ ಬಹು ಡೊಂಕು. ಹಲವಾರು ಹಿಮ ನದಿಗಳು ಹರಿಯುವಾಗ ಕರಗಿ ರಭಸದಿಂದ ಸಮುದ್ರಕ್ಕೆ ಬೀಳುತ್ತವೆ. ನ್ಯೂಫೌಂಡ್‍ಲೆಂಡ್ ದ್ವೀಪದಲ್ಲಿರುವಂತೆ ಇಲ್ಲಿಯೂ ಅನೇಕ ಸರೋವರಗಳಿವೆ.

ವಾಯುಗುಣ : ನ್ಯೂಫೌಂಡ್‍ಲೆಂಡ್‍ನಲ್ಲಿ ಚಳಿಗಾಲದಲ್ಲಿ ಮಂಜು ಮುಸುಕಿದರೂ ಚಳಿ ಬಹಳ ತೀವ್ರವಾಗಿರುವುದಿಲ್ಲ. ಬೇಸಗೆ ಹಿತಕರ, ಜುಲೈ ಮಾಧ್ಯ ಉಷ್ಣತೆ ದಕ್ಷಿಣ ತೀರದಲ್ಲಿ 150 ಸೆ. ಉತ್ತರ ಲ್ಯಾಬ್ರಡಾರ್‍ನಲ್ಲಿ 4.40 ಸೆ. ದಕ್ಷಿಣದ ಒಳನಾಡಿನಲ್ಲಿ ಜುಲೈ ಮಾಧ್ಯ ಉಷ್ಣತೆ 160 ಸೆ.ಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಜನವರಿಯ ಮಾಧ್ಯ ಉಷ್ಣತೆ ನ್ಯೂಫೌಂಡ್‍ಲೆಂಡಿನ ದಕ್ಷಿಣ ಭಾಗದಲ್ಲಿ -6.70 ಸೆ. ಗಿಂತ ಮೇಲಿರುತ್ತದೆ. ಲ್ಯಾಬ್ರಡಾರ್ ತೀರದ ದಕ್ಷಿಣ ಭಾಗದಲ್ಲಿ-12.20 ಸೆ. ಉತ್ತರದಲ್ಲಿ -17.80ಸೆ. ಲ್ಯಾಬ್ರಡಾರಿನ ಪಶ್ಚಿಮ ಒಳನಾಡಿನಲ್ಲಿ-260 ಸೆ.ಇರುತ್ತದೆ. ಇಲ್ಲಿ -400ಸೆ ವರೆಗೂ ಉಷ್ಣತೆ ಇಳಿಯುವುದುಂಟು. ನ್ಯೂಫೌಂಡ್‍ಲೆಂಡ್‍ನ ದ್ವೀಪದ ದಕ್ಷಿಣ ಭಾಗದಲ್ಲಿ ವಾರ್ಷಿಕ ಅವಪಾತ 1,397 ಮಿಮೀ. ಚಿಡ್ಲೀ ಭೂಶಿರದ ಬಳಿ 432 ಮಿಮೀ. ಉತ್ತರ ಭಾಗದಲ್ಲಿ ವಾರ್ಷಿಕ ಅವಪಾತದಲ್ಲಿ ಅರ್ಧದಷ್ಟೂ ದಕ್ಷಿಣದಲ್ಲಿ ಸುಮಾರು ಐದನೆಯ ಒಂದರಷ್ಟೂ ಹಿಮರೂಪದಲ್ಲಿ ಬೀಳುತ್ತವೆ.

ಕೆನಡ ಮತ್ತು ಅಮೆರಿಕದ ಅಟ್ಲಾಂಟಿಕ್ ಸಾಗರ ತೀರದತ್ತ ಸಾಗುವ ಚಂಡಮಾರುತಗಳು ನ್ಯೂಫೌಂಡ್‍ಲೆಂಡ್ ದ್ವೀಪದ ವಾಯುಗುಣದ ಮೇಲೆ ತೀವ್ರ ಪ್ರಭಾವ ಬೀರುತ್ತವೆ. ಚಂಡಮಾರುತಗಳು ಬೀಸುವ ಮೊದಲು ಈಶಾನ್ಯ ಮತ್ತು ಪೂರ್ವ ಮಾರುತಗಳು ಲ್ಯಾಬ್ರಡಾರಿನ ಶೀತಲ ಸಮುದ್ರ ಪ್ರವಾಹಗಳ ಮೇಲೆ ಬೀಸಿ ಬೇಸಗೆಯಲ್ಲಿ ತಂಪು ಹವಾಮಾನವನ್ನು ತಂದು, ವಸಂತಕಾಲದ ಆಗಮನವನ್ನು ಮುಂತಳ್ಳುತ್ತವೆ. ದ್ವೀಪದ ದಕ್ಷಿಣದಲ್ಲಿ ಲ್ಯಾಬ್ರಡಾರ್ ಸಮುದ್ರ ಪ್ರವಾಹದತಣ್ಣಗಿನ ಗಾಳಿ ಗಲ್ಫ ಉಷ್ಣೋದಕ ಪ್ರವಾಹದ ಮೇಲಣ ಬೆಚ್ಚನೆಯ ಗಾಳಿಯೊಂದಿಗೆ ಮಿಲನಗೊಂಡು ಆಗಾಗ್ಗೆ ದಟ್ಟವಾದ ಮಂಜನ್ನುಂಟುಮಾಡುವುದುಂಟು.

ಸಸ್ಯ ಪ್ರಾಣಿವರ್ಗ : ಉತ್ತರ ಲ್ಯಾಬ್ರಡಾರಿನ ಟಂಡ್ರ ಪ್ರದೇಶ. ಒಳನಾಡಿನ ಎತ್ತರ ಪ್ರದೇಶದ ಬಂಜರು ನೆಲ, ಹಾಗೂ ಕೆಲವು ತೀರ ಭಾಗಗಳು ವಿನಾ ಉಳಿದ ಕಡೆಗಳಲ್ಲಿ ಶಂಕುಪರ್ಣಿ ಮರಗಳ ಅರಣ್ಯಗಳಿವೆ. ನದಿಗಳು ಹರಿಯುವ ಕಡೆ ಮರಗಳು ಹೆಚ್ಚು ದಟ್ಟವಾಗಿವೆ.

ವನ್ಯಮೃಗಗಳಲ್ಲಿ ಮುಖ್ಯವಾದವು ಕಡವೆ, ಕಾರಿಬೂ, ಕಪ್ಪು ಕರಡಿ, ಧ್ರುವ ಪ್ರದೇಶದ ಕರಡಿ ಮತ್ತು ಸೀಲ್, ಲ್ಯಾಬ್ರಡಾರಿನ ಅರಣ್ಯಗಳಲ್ಲಿ ಹಾಗೂ ಟಂಡ್ರಗಳಲ್ಲಿ ಸಣ್ಣ ತುಪ್ಪಳು ಪ್ರಾಣಿಗಳಿವೆ. ಕಡಲ ಕರೆಯಲ್ಲಿ ಹಾಗೂ ತೀರದ್ವೀಪಗಳಲ್ಲಿ ಕಡಲಹಕ್ಕಿಗಳಿವೆ. ಕೆಲವು ಬಗೆಯ ಬಾತುಗಳು ಹಾಗೂ ದಡದ ಹಕ್ಕಿಗಳು ಕೆಲವು ಋತುಗಳಲ್ಲಿ ಇಲ್ಲಿಗೆ ವಲಸೆ ಬರುತ್ತವೆ. ಇಲ್ಲಿ ಡೇಗೆಗಳೂ ಹದ್ದುಗಳೂ ಉಂಟು.

ಜನ : ನ್ಯೂಫೌಂಡ್‍ಲೆಂಡಿನ ಜನಸಂಖ್ಯೆಯಲ್ಲಿ ಸೆ.95ರಷ್ಟು ಮಂದಿ ಬ್ರಿಟಿಷ್ ಮೂಲದವರು. ಫ್ರೆಂಚ್ ಮತ್ತು ಚ್ಯಾನೆಲ್ ದ್ವೀಪದ ಮೂಲದವರು ಸೇ.4 ರಷ್ಟು ಇದ್ದಾರೆ. ಸ್ಥಳೀಯ ರೆಡ್ ಇಂಡಿಯನ್ ಮತ್ತು ಎಸ್ಕಿಮೋ ಬುಡಕಟ್ಟಿನವರು ಕೇವಲ ಸೇ.0.3 ರೋಮನ್ ಕ್ಯಾತೊಲಿಕ್, ಇಂಗ್ಲೆಂಡಿನ ಪ್ರಾಟೆಸ್ಟಂಟ್ ಮತ್ತು ಕೆನಡದ ಯುನೈಟೆಡ್ ಚರ್ಚ್ ಮತಗಳು ರೂಢಿಯಲ್ಲಿದೆ. 20ನೆಯ ಶತಮಾನದ ಪ್ರಾರಂಭದಿಂದ ಇಲ್ಲಿಯ ಜನರು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೂ ಕೆನಡದ ಇತರ ಪ್ರಾಂತ್ಯಗಳಿಗೂ ವಲಸೆ ಹೋಗುತ್ತಿರುವುದರಿಂದ ಇಲ್ಲಿ ಜನಸಾಂದ್ರತೆ ಹೆಚ್ಚಾಗಿಲ್ಲ. 1971ರಲ್ಲಿ ಕಡಲ ಕರೆಯಲ್ಲಿ 1,300 ಗ್ರಾಮಗಳಿದ್ದುವು. ಜನರು ಪಟ್ಟಣಗಳಲ್ಲಿ ಹೆಚ್ಚಾಗಿ ವಾಸಿಸುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ನ್ಯೂಫೌಂಡ್‍ಲೆಂಡಿನ ರಾಜಧಾನಿ ಸೇಂಟ್ ಜಾನ್ಸಿನ ಜನಸಂಖ್ಯೆ 86,290 (1971). ಈ ನಗರಪ್ರದೇಶದ ಒಟ್ಟು ಜನಸಂಖ್ಯೆ 1,29,304. ಇತರ ಪ್ರಮುಖ ಪಟ್ಟಣಗಳು ಇವು; ಕಾರ್ನರ್ ಬ್ರೂಕ್ (25,929), ಸ್ಪೀಫನ್‍ವಿಲ್ (7,723), ಗ್ಯ್ರಾಂಡರ್ (7,748), ಗ್ರಾಂಡ್‍ಫಾಲ್ಸ್ (7,677),ವಿಂಡ್ಸರ್ (6,644), ಚಾನೆಲ್-ಫೋರ್ಟ್-ಓಕ್ಸ್-ಬಾಸ್ಕ್ವೆಸ್ (5,942), ಕಾರ್ಬೊನೀರ್ (4,732), ಬೊನಡಿಸ್ಟ(4,215), ಲ್ಯಾಬ್ರಡಾರ್ ನಗರ (7,622), ಮೇರೀಸ್ ಟೌನ್ (4,960) ಮತ್ತು ಹ್ಯಾಪಿವ್ಯಾಲಿ(4,937).

ಇತಿಹಾಸ : ನ್ಯೂಫೌಂಡ್‍ಲೆಂಡ್ ದ್ವೀಪವನ್ನು ವೆನಿಸ್ ನಗರದ ನಾವಿಕ ಜಾನ್ ಕ್ಯಾಬಟ್ 1497ರ ಜೂನ್ 24ರಲ್ಲಿ ಕಂಡ, 16ನೆಯ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ಪೋರ್ಚುಗಲ್ ದೇಶಗಳ ಮೀನುಗಾರರು ಬೇಸಗೆಯ ಕಾಲದಲ್ಲಿ ಈ ದ್ವೀಪದ ತೀರಗಳಲ್ಲಿ ಮೀನು ಹಿಡಿಯು ತಂತಮ್ಮಲ್ಲೆ ಸ್ಪರ್ಧೆ ನಡೆಸಿದರು. 1583ರಲ್ಲಿ ಇಂಗ್ಲೆಂಡಿನ ಸರ್ಕಾರದ ಪರವಾಗಿ ಹಂಫ್ರಿ ಗಿಲ್ಬರ್ಟ್ ಈ ದ್ವೀಪವನ್ನು ಆಕ್ರಮಿಸಿ ಸೇಂಟ್ ಜಾನ್ಸ್ ಬಳಿ ಮೊದಲ ವಸಾಹತನ್ನು ಸ್ಥಾಪಿಸಿದ. ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳಲು ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳ ನಡುವೆ 1600 ಹೊತ್ತಿಗೆ ಸ್ಪರ್ಧೆಯುಂಟಾಯಿತು. ಕಾಡ್ ಮೀನು ಹಿಡಿಯುವ ಹೊರತು ಇತರ ಉದ್ದೇಶಗಳಿಂದ ಇಲ್ಲಿ ಜನ ನೆಲೆಸಬಾರದೆಂಬ ಆಜ್ಞೆಯನ್ನು 1699ರಲ್ಲಿ ಇಂಗ್ಲೆಂಡಿನ ಸರ್ಕಾರ ಹೊರಡಿಸಿತು. ನಾವಿಕರಿಗೆ ತರಬೇತು ನೀಡಲು ಇಂಗ್ಲೆಂಡಿಗೆ ನ್ಯೂಫೌಂಡ್‍ಲೆಂಡ್ ತೀರ ಆಗ ಬಹಳ ಅನುಕೂಲವಾಗಿತ್ತು. ಆದರೆ 1662ರಲ್ಲೇ ದ್ವೀಪದ ಆಗ್ನೇಯ ತೀರದಲ್ಲಿ ಪ್ಲಸೆಂಷಿಯ ಪಟ್ಟಣವನ್ನು ಸ್ಥಾಪಿಸಿಕೊಂಡಿದ್ದ ಫ್ರೆಂಚರು 1708ರ ಹೊತ್ತಿಗೆ ಇಂಗ್ಲಿಷರ ಎಲ್ಲ ನೆಲೆಗಳನ್ನೂ ನಾಶ ಮಾಡಿದರು. 1713 ಮತ್ತು 1783ರಲ್ಲಿ ಅವರ ನಡುವೆ ಎರಡು ಕೌಲುಗಳಾದವು. ಮೊದಲನೆಯದು ಯೂಟ್ರಿಕ್ಟ್ ಕೌಲು, 1783ರ ಕೌಲಿನಲ್ಲಿ ಫ್ರೆಂಚ್ ಮೀನುಗಾರರಿಗೆ ನ್ಯೂಫೌಂಡ್‍ಲೆಂಡಿನ ಉತ್ತರ ಮತ್ತು ಪಶ್ಚಿಮ ತೀರಗಳಲ್ಲಿ ಮೀನು ಹಿಡಿಯುವ ಹಕ್ಕನ್ನು ನೀಡಲಾಯಿತು.

17 ಮತ್ತು 18ನೆಯ ಶತಮಾನಗಳಲ್ಲಿ ಇಲ್ಲಿ ಜನಸಂಖ್ಯೆ ಹೆಚ್ಚಿತು. ಆ ಕಾಲದಲ್ಲಿ ಕ್ರಮಬದ್ಧವಾದ ಕಾನೂನುಗಳು ಯಾವುವೂ ಇಲ್ಲದೆ, ಮೀನುಹಿಡಿಯುವ ಹಡಗುಗಳ ಕ್ಯಾಪ್ಟನ್‍ಗಳ ನ್ಯಾಯವೇ ಅಂತಿಮವಾಗಿತ್ತು. 1824ರಲ್ಲಿ ಇಂಗ್ಲೆಂಡ್ ಸರ್ಕಾರ ನ್ಯೂಫೌಂಡ್‍ಲೆಂಡ್‍ಗೆ ಒಬ್ಬ ಗವರ್ನರನ್ನು ನೇಮಿಸಿತು. 1832ರಲ್ಲಿ ಚುನಾವಣೆಗಳು ನಡೆದುವು. ವಿಧಾನ ಸಭೆ ಸ್ಥಾಪಿತವಾಯಿತು. 1855ರಲ್ಲಿ ದ್ವೀಪಕ್ಕೆ ಜವಾಬ್ದಾರಿ ಸರ್ಕಾರ ದೊರಕಿತು. ನ್ಯೂಫೌಂಡ್‍ಲೆಂಡ್ ಕೆನಡ ಒಕ್ಕೂಟಕ್ಕೆ ಸೇರುವ ಬಗ್ಗೆ 1864-1869ರಲ್ಲಿ ಸಂಧಾನಗಳು ನಡೆದುವು. ಒಕ್ಕೂಟಕ್ಕೆ ಸೇರುವುದಕ್ಕೆ ಜನಾಭಿಪ್ರಾಯ ವಿರುದ್ಧವಾಗಿತ್ತು. ಎಡ್ವರ್ಡ್ ಮಾರಿಸನ್ 1907ರಲ್ಲಿ ಜನತಾ ಪಕ್ಷವನ್ನೂ, ವಿಲಿಯಂ ಕೋಕರ್ 1908ರಲ್ಲಿ ಮೀನುಗಾರರ ರಕ್ಷಣಾ ಸಂಘವನ್ನೂ ಸ್ಥಾಪಿಸಿದರು. ಒಂದನೆಯ ಮಹಾಯುದ್ಧದ ಕಾಲದಲ್ಲಿ (1914-18) ಇವರು ಒಟ್ಟುಗೂಡಿ ರಕ್ಷಣಾಕಾರ್ಯಗಳನ್ನು ಕೈಗೊಂಡರು.

150 ವರ್ಷಗಳ ಕಾಲ ಅನಿರ್ದಿಷ್ಟ ಭೌಗೋಳಿಕ ಘಟಕವಾಗಿದ್ದ ಲ್ಯಾಬ್ರಡಾರ್ ಪ್ರದೇಶ ಯಾವ ರಾಷ್ಟ್ರಕ್ಕೆ ಸೇರಿದ್ದೆಂಬ ಬಗ್ಗೆ ಪ್ರಮುಖ ರಾಷ್ಟ್ರಗಳು ವಾದಿಸಹತ್ತಿದುವು. 1825ರಲ್ಲಿ ಬ್ರಿಟಿಷ್ ನ್ಯಾಯಮಂಡಲಿಯೊಂದು ಲ್ಯಾಬ್ರಡಾರ್‍ಗೆ ಸಂಬಂಧಪಟ್ಟಂತೆ ಅಟ್ಲಾಂಟಿಕ್ ಭಾಗದ ಜಲದ ಮೇಲಣ ಅಧಿಕಾರವನ್ನು ನ್ಯೂಫೌಂಡ್‍ಲೆಂಡ್‍ಗೆ ವಹಿಸಿತು. ಆದಾಗ್ಯೂ 1927ರ ವರೆಗೆ ಲ್ಯಾಬ್ರಡಾರಿನ ಮುಖ್ಯ ಭೂಭಾಗದ ಗಡಿ ಹಾಗೂ ಆಡಳಿತದ ಬಗ್ಗೆ ಯಾವ ತೀರ್ಮಾನವೂ ಆಗಿರಲಿಲ್ಲ. ಆ ವರ್ಷ ನ್ಯೂಫೌಂಡ್‍ಲೆಂಡ್ ಪ್ರಾಂತ್ಯಕ್ಕೆ ಮುಖ್ಯ ಭೂ-ಭಾಗವನ್ನು ಸೇರಿಸಲಾಯಿತು.

1929ರ ತರುವಾಯದ ಆರ್ಥಿಕ ಮುಗ್ಗಟ್ಟು, ಯುದ್ಧ ವೆಚ್ಚ, ತೆರಿಗೆಗಳು. ಒಳನಾಡಿನ ರೈಲುಮಾರ್ಗ ನಿರ್ಮಾಣ ವೆಚ್ಚ ಈ ಕಾರಣಗಳಿಂದ ನ್ಯೂಫೌಂಡ್‍ಲೆಂಡ್‍ನ ಆರ್ಥಿಕತೆ ಹದಗೆಟ್ಟಿತು. ಬ್ರಿಟಿಷ್ ಸರ್ಕಾರ 1933ರಲ್ಲಿ ನೇಮಿಸಿದ ರಾಯಲ್ ಕಮಿಷನ್, ನ್ಯೂಫೌಂಡ್‍ಲೆಂಡಿನ ಜವಾಬ್ದಾರಿ ಸರ್ಕಾರದ ಅಧಿಕಾರವನ್ನು ಹಂಗಾಮಿಯಾಗಿ ಹಿಂದೆಗೆದುಕೊಂಡು ಬ್ರಿಟಿಷ್ ಸರ್ಕಾರಕ್ಕೆ ಅಧೀನವಾದ ಕಮಿಷನ್ ಆಡಳಿತವನ್ನು ಸ್ಥಾಪಿಸಬಹುದೆಂದು ಸಲಹೆಮಾಡಿತು. ಕಮಿಷನ್ ಸರ್ಕಾರ 1934ರಲ್ಲಿ ಪ್ರಾರಂಭವಾಗಿ ಆರ್ಥಿಕ ಪರಿಸ್ಥಿತಿಯನ್ನು ಬಹುಮಟ್ಟಿಗೆ ಸ್ಥಿರಗೊಳಿಸಿತು.

1941ರಲ್ಲಿ ನ್ಯೂಫೌಂಡ್‍ಲೆಂಡಿನ ಮೂರು ಸ್ಥಳಗಳಲ್ಲಿ ಅಮೆರಿಕದ ನೌಕಾ ಮತ್ತು ಸೈನಿಕ ನೆಲೆಗಳ ಸ್ಥಾಪನೆಯಾಯಿತು. ಎರಡನೆಯ ಮಹಯುದ್ಧದ ತರುವಾಯ ಇಲ್ಲಿಯ ಸರ್ಕಾರದ ರೂಪುರೇಖೆಗಳನ್ನು ನಿರ್ಧರಿಸಲು ರಾಷ್ಟ್ರೀಯ ಸಭೆಯೊಂದು ಸಾರ್ವತ್ರಿಕ ಮತದಾನದಿಂದ ನೇಮಕಗೊಂಡಿತು. ಈ ಸಭೆ ಸಂವಿಧಾನ ರಚನೆಯ ವಿನಾ ಮತ್ತೇನನ್ನೂ ಮಾಡಲಿಲ್ಲ.

ನ್ಯೂಫೌಂಡ್‍ಲೆಂಡ್ ಕೆನಡಕ್ಕೆ ಸೇರುವ ವಿಷಯವನ್ನು ಬ್ರಿಟಿಷ್ ಸರ್ಕಾರ ಪ್ರಜೆಗಳ ತೀರ್ಮಾನಕ್ಕೆ ಬಿಟ್ಟಿತು. 1949ರ ಮಾರ್ಚ್ 31ರಂದು ನ್ಯೂಫೌಂಡ್‍ಲೆಂಡ್ ತನಗೆ ಸೇರಿದ ಲ್ಯಾಬ್ರಡಾರಿನೊಂದಿಗೆ ಒಕ್ಕೂಟದ ಪ್ರಾಂತ್ಯವಾಗಿ ವಿಲೀನಗೊಂಡಿತು.

ಆಡಳಿತ : ನ್ಯೂಫೌಂಡ್‍ಲೆಂಡ್ ಕೆನಡ ಒಕ್ಕೂಟದ 10 ಪ್ರಾಂತ್ಯಗಳಲ್ಲಿ ಒಂದು 1962ರಲ್ಲಿ ಈ ಪ್ರಾಂತ್ಯವನ್ನು 41 ಚುನಾವಣಾ ಜಿಲ್ಲೆಗಳಾಗಿ ವಿಂಗಡಿಸಲಾಯಿತು. 1965ರಲ್ಲಿ ವಯಸ್ಕರ ಮತದಾನ ಪದ್ಧತಿ ಜಾರಿಗೆ ಬಂತು. ಪ್ರಾಂತ್ಯದ ಪ್ರಧಾನ ಅಧಿಕಾರಿ ಲೆಫ್ಟೆನಂಟ್ ಗವರ್ನರ್ ಕೆನಡ ಒಕ್ಕೂಟ ಸರ್ಕಾರದಿಂದ ನೇಮಕಗೊಳ್ಳುತ್ತಾನೆ. ಮುಖ್ಯಮಂತ್ರಿಗೆ ಪ್ರೀಮಿಯರ್ ಎಂಬ ಹೆಸರು. ಆತನಿಗೆ ನೇರವಾಗಿ ಮಂತ್ರಿಮಂಡಲವಿರುತ್ತದೆ. ಪ್ರಾಂತ್ಯದ ಏಕಸದನ ವಿಧಾನ ಸಭೆಯಲ್ಲಿ 42 ಸದಸ್ಯರಿರುತ್ತಾರೆ. ಸಭೆಯ ಅವಧಿ 5 ವರ್ಷ. ಪ್ರಾಂತ್ಯಕ್ಕೆ ಕೆನಡದ ಸೆನೆಟ್‍ನಲ್ಲಿ 6 ಮಂದಿ, ಸಾಮಾನ್ಯ ಸಭೆಯಲ್ಲಿ 7 ಮಂದಿ ಸದಸ್ಯರ ಪ್ರಾತಿನಿಧ್ಯವಿದೆ.

ನ್ಯೂಫೌಂಡ್‍ಲೆಂಡಿನ ಮೊದಲ ಪೌರ ಸಭೆ ಸ್ಥಾಪಿತವಾದ್ದು ಸೇಂಟ್ ಜಾನ್ಸ್ ಪಟ್ಟಣದಲ್ಲಿ. 1960ರ ಹೊತ್ತಿಗೆ ಎಲ್ಲ ಪಟ್ಟಣಗಳಲ್ಲೂ ಪೌರಸಭೆಗಳಿದ್ದುವು.

ನ್ಯೂಫೌಂಡ್‍ಲೆಂಡ್ ಪ್ರಾಂತ್ಯದ ಉನ್ನತ ನ್ಯಾಯಾಲಯ ಸೇಂಟ್ ಜಾನ್ಸ್ ನಲ್ಲಿದೆ. ಈ ನ್ಯಾಯಾಲಯದಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶ ಮತ್ತು ಆತನಿಗೆ ಸಹಾಯಕರಾಗಿ 3 ನ್ಯಾಯಾಧೀಶರು ಇರುತ್ತಾರೆ. ಅವರು ವಾರ್ಷಿಕವಾಗಿ ಇತರ ಕಡೆಗಳಲ್ಲೂ ಸಂಚರಿಸಿ ಮೊಕದ್ದಮೆಗಳನ್ನು ವಿಚಾರಿಸಿ ತೀರ್ಪು ನೀಡುತ್ತಾರೆ. ಈ ಜಿಲ್ಲೆಗಳಲ್ಲಿ ದಂಡಾಧಿಕಾರಿಯ ನ್ಯಾಯಾಲಯಗಳಿವೆ.

ಶಿಕ್ಷಣ : ವಸಾಹತುಕಾಲದಿಂದ ಇಲ್ಲಿ ಚರ್ಚಿನ ಪಾದ್ರಿಗಳಿಂದ ಶಿಕ್ಷಣ ನಡೆಯುತ್ತ ಬಂದಿತ್ತು. 1969ರಲ್ಲಿ ಶಿಕ್ಷಣ ಇಲಾಖೆ ಪುನರ್ರಚಿತವಾಯಿತು. ವೃತ್ತಿ, ತಾಂತ್ರಿಕ ಹಾಗೂ ವಾಣಿಜ್ಯ ಶಿಕ್ಷಣವನ್ನು ನೀಡಲಾಗುತ್ತಿದೆ. 1973-74ರಲ್ಲಿದ್ದ ಶಾಲೆಗಳ ಸಂಖ್ಯೆ 694. ಸೇಂಟ್ ಜಾನ್ಸ್ ನಗರದಲ್ಲಿರುವ ಮೆಮೋರಿಯಲ್ ವಿಶ್ವವಿದ್ಯಾಲಯವನ್ನು 1940ರಲ್ಲಿ ಸ್ಥಾಪಿಸಲಾಯಿತು.

ಆರ್ಥಿಕತೆ : ನ್ಯೂಫೌಂಡ್‍ಲೆಂಡಿನ ಸಂಪನ್ಮೂಲಗಳು ಅರಣ್ಯ, ಮತ್ಸ್ಯ ಮತ್ತು ಖನಿಜಗಳು. ಕಾಗದ ತಯಾರಿಕೆಗೆ ಬೇಡಿಕೆ ಹೆಚ್ಚಾದಮೇಲೆ ಅರಣ್ಯಗಳ ರಕ್ಷಣೆಗೆ ಹೆಚ್ಚು ಗಮನ ನೀಡಿ, ಕಾಗದ ತಯಾರಿಕೆಗೆ ಬೇಕಾಗುವ ತಿಳ್ಳಿಗೆ ಅನುಕೂಲವಾದ ಮರಗಳನ್ನು ಬೆಳೆಸಲಾಗುತ್ತಿದೆ. ಕಬ್ಬಿಣದ ಅದುರಿನ ಗಣಿಗಳಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿದೆ. ಪಶ್ಚಿಮ ಲ್ಯಾಬ್ರ್ರಡಾರ್‍ನಲ್ಲಿ ಅಪಾರ ಕಬ್ಬಿಣ ಅದುರು ನಿಕ್ಷೇಪಗಳಿವೆ. ಇತರ ಖನಿಜಗಳು ತಾಮ್ರ, ತವರ, ಆಸ್ಬೆಸ್ಟಾಸ್, ಬೆಳ್ಳಿ ಮತ್ತು ಚಿನ್ನ . ಮೀನುಗಾರಿಕೆ ನ್ಯೂಫೌಂಡ್‍ಲೆಂಡಿನ ಪ್ರಧಾನ ಕಸುಬು. ಈ ಬಗ್ಗೆ ತಾಂತ್ರಿಕ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಕಾಡ್ ಮೀನು ವಿಶೇಷವಾಗಿ ದೊರೆಯುತ್ತದೆ. 1973ರಲ್ಲಿ 9 000 ಮಂದಿ ಮೀನುಗಾರರಿದ್ದರು.

ಸಾರಿಗೆ ಸಂಪರ್ಕ : 19ನೆಯ ಶತಮಾನದ ಕೊನೆಯವರೆಗೆ ನಾವೆಗಳ ಮೂಲಕವೇ ನ್ಯೂಫೌಂಡ್‍ಲೆಂಡಿನ ತೀರ ಪಟ್ಟಣಗಳ ನಡುವೆ ಸಂಪರ್ಕವಿತ್ತು. ತರುವಾಯ ಸೇಂಟ್ ಜಾನ್ಸ್‍ನಿಂದ ಚಾನೆಲ್-ಫೋರ್ಟೋಬಾಸ್ಕ್ ರೇವಿನವರೆಗೆ ನ್ಯಾರೋಗೇಜ್ ರೈಲುಮಾರ್ಗವನ್ನು ಹಾಕಲಾಯಿತು. ಈ ಮಾರ್ಗ ಒಳನಾಡಿಗೂ ಕೆಲವು ತೀರಪಟ್ಟಣಗಳಿಗೂ ಸಂಪರ್ಕ ಕಲ್ಪಿಸಿದೆ. ಅನಂತರ ಒಳನಾಡಿನ ಇನ್ನೂ ಕೆಲವು ಭಾಗಗಳಲ್ಲೂ ರೈಲ್ವೆ ಅಭಿವೃದ್ಧಿಯಾಯಿತು. 1970ರಲ್ಲಿ 1736 ಕಿಮೀ ರೈಲುಮಾರ್ಗಗಳಿದ್ದುವು. ಇದರಲ್ಲಿ ಕೆನಡಾ ರಾಷ್ಟ್ರೀಯ ರೈಲುಮಾರ್ಗ 1126 ಕಿಮೀ, ಕ್ವಿಬೆಕ್ ಉತ್ತರ ತೀರ ಮತ್ತು ಲ್ಯಾಬ್ರಡಾರ್ ರೈಲುಮಾರ್ಗ 571 ಕಿಮೀ, ಗ್ರ್ಯಾಂಡ್ ಫಾಲ್ಸ್ ಕೇಂದ್ರ ರೈಲುಮಾರ್ಗ 42 ಕಿಮೀ ಇವೆ. ಸಾಮಾನ್ಯವಾಗಿ ರೈಲುಮಾರ್ಗಗಳ ಪಕ್ಕದಲ್ಲಿ ರಸ್ತೆಗಳಿವೆ. ನ್ಯೂಫೌಂಡ್‍ಲೆಂಡ್ ದ್ವೀಪಕ್ಕೂ ಕೆನಡಾದ ಭೂ ಭಾಗಕ್ಕೂ ನಡುವೆ ಸಂಪರ್ಕ ಕಲ್ಪಿಸಲು ಚಾನೆಲ್-ಫೋರ್ಟೋಬಾಸ್ಕ್ ಹಾಗೂ ಸೇಂಟ್ ಜಾನ್ಸ್‍ಗೂ ನೋವಾಸ್ಕೋಷಿಯಾಕ್ಕೂ ನಡುವೆ ರೈಲ್ವೆ, ಮೋಟಾರ್ ಹಾಗೂ ದೋಣಿ ಸಂಚಾರವಿದೆ. ಚಳಿಗಾಲದಲ್ಲಿ ಲ್ಯಾಬ್ರಡಾರಿನ ವಿವಿಧ ಸ್ಥಳಗಳ ನಡುವೆ ಸಂಪರ್ಕ ಕಲ್ಪಿಸಲು ವಿಮಾನ ಹಾರಾಟ ಬಹಳ ಮುಖ್ಯವೆನಿಸಿದೆ. ಲ್ಯಾಬ್ರಡಾರಿನ ಪಶ್ಚಿಮದ ನಗರಗಳಿಂದ ಕ್ವಿಬೆಕ್‍ಗೆ ರೈಲು ಮಾರ್ಗ ಉಂಟು. (ವಿ.ಜಿ.ಕೆ.)