ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಸ್ ವೀಕ್

ವಿಕಿಸೋರ್ಸ್ದಿಂದ

ನ್ಯೂಸ್ ವೀಕ್ ಅಮೆರಿಕದ ವಾಷಿಂಗ್‍ಟನ್ ಪೋಸ್ಟ್ ಸಂಸ್ಥೆಯಿಂದ ನ್ಯೂಯಾರ್ಕ್‍ನಿಂದ ಪ್ರಕಟವಾಗುವ ಇಂಗ್ಲಿಷ್ ಭಾಷೆಯ ಅಂತರರಾಷ್ಟ್ರೀಯ ವಾರಪತ್ರಿಕೆ. ಅಮೆರಿಕ ಹಾಗೂ ಯೂರೋಪ್, ಏಷ್ಯ-ಹೀಗೆ ಎರಡು ಆವೃತ್ತಿಗಳಿವೆ. ಪತ್ರಿಕೆಯನ್ನು ನಡೆಸಲು ಕಾರ್ಯನಿರ್ವಾಹಕ ಸಂಪಾದಕ, ಸಹಾಯಕ ಕಾರ್ಯನಿರ್ವಾಹಕ ಸಂಪಾದಕ, ಪ್ರಾದೇಶಿಕ ಸಂಪಾದಕ, ಲೇಖನಗಳ ಸಂಪಾದಕ, ವಾರ್ತಾಸಂಪಾದಕ, ಅನೇಕ ಉಪಸಂಪಾದಕರು, ಸಹಾಯಕ ಸಂಪಾದಕರು, ಪತ್ರಿಕೆಯ ಡಿಜೈನ್ ಡೈರೆಕ್ಟರ್, ಕಲಾವಿಭಾಗದ ನಿರ್ದೇಶಕ, ಫೋಟೋ ವಿಭಾಗಾಧಿಕಾರಿಗಳು ಮೊದಲಾದವರಿಂದ ಕೂಡಿದ ಬೃಹತ್ ಸಿಬ್ಬಂದಿವರ್ಗವಿದೆ. ಪ್ರಪಂಚದ ಪ್ರಮುಖ ಸ್ಥಳಗಳಲ್ಲಿ ಇದಕ್ಕೆ ಪ್ರತಿನಿಧಿಗಳೂ ವರದಿಗಾರರೂ ಇದ್ದಾರೆ.

ನ್ಯೂಸ್ ವೀಕ್ ವಾರಪತ್ರಿಕೆ ರಾಜಕೀಯ, ಸಾಮಾಜಿಕ, ಆರ್ಥಿಕ ಮೊದಲಾದ ವಿಷಯಗಳಿಗೂ ಲಲಿತಕಲೆಗಳಿಗೂ ಮೀಸಲಾದ ನಿಯತಕಾಲಿಕ. ಅಮೆರಿಕದ ವಾರ್ತೆ, ವಿಶೇಷ ವರದಿ, ಏಷ್ಯ ಸಮಾಚಾರ, ಅಂತರರಾಷ್ಟ್ರೀಯ ವಿಚಾರಗಳು, ಪತ್ರಿಕೋದ್ಯಮ, ಯೂರೋಪ್ ವಾರ್ತೆ, ವಿಜ್ಞಾನ, ಧರ್ಮ, ಶಿಕ್ಷಣ, ವೈದ್ಯಕೀಯ, ವ್ಯಾಪಾರ ಮತ್ತು ವಾಣಿಜ್ಯ, ಜೀವನ ಮತ್ತು ಮನೋರಂಜನೆ-ಇವು ಪತ್ರಿಕೆಯ ಪ್ರಧಾನ ವಿಭಾಗಗಳು. ಕಲಾಭಾಗದಲ್ಲಿ ಸಂಗೀತ, ನಾಟಕ, ಚಲನಚಿತ್ರ, ಗ್ರಂಥಪ್ರಕಟಣೆ ಮೊದಲಾದ ವಿಷಯಗಳಿವೆ. ಸಾಮಾನ್ಯವಾಗಿ ಪತ್ರಿಕೆಯ ಸಂಪಾದಕವರ್ಗದಿಂದ ಎರಡು ವೈಚಾರಿಕ ವಿಶೇಷ ಲೇಖನಗಳಿರುತ್ತವೆ. ಹಲವು ಕಿರುಭಾಗಗಳೂ ಇವೆ. ಅನೇಕ ಛಾಯಾಚಿತ್ರಗಳಿಂದಲೂ ವರ್ಣರಂಜಿತ ಜಾಹೀರಾತುಗಳಿಂದಲೂ ಕೂಡಿದ ಈ ಪತ್ರಿಕೆ ತೆಳು ಹಾಳೆಗಳ ಮೇಲೆ ಅಂದವಾಗಿ ಮುದ್ರಿತವಾಗುತ್ತದೆ.

ಈ ಪತ್ರಿಕೆ ಆರಂಭವಾದದ್ದು 1933ರಲ್ಲಿ ಸಂಸ್ಥಾಪಕರು `ಟೈಮ್ ಪತ್ರಿಕೆಯ ವಿದೇಶಾಂಗ ವಿಭಾಗದ ಸುದ್ದಿಗಾರರಾಗಿದ್ದ ಥಾಮಸ್ ಜೆ ಸಿ ಮಾರ್ಟಿನ್ `ಟೈಮ್ ಪತ್ರಿಕೆಯದೆ ಸ್ಫೂರ್ತಿ; ಅದರದೇ ಛಾಯೆ, ಆದರೆ ಎರಡನೇ ಮಹಾಯುದ್ಧದ ನಂತರ ಪತ್ರಿಕೆ ಲವಲವಿಜೆಯಿಂದ ಕೂಡಿತು. ವಾಷಿಂಗ್‍ಟನ್‍ಪೋಸ್ಟ್ ಫಿಲಿಪ್ ಗ್ರಹಾಂ ಅವರ ನೇತೃತ್ವದಲ್ಲಿ ಅದರ ಬರಹಗಳು ವಸ್ತುನಿಷ್ಠೆ ಹಾಗೂ ವಿಶ್ವಾಸಾರ್ಹವಾದವು. ಬರವಣಿಗೆಯ ಶೈಲಿಯಲ್ಲೂ ಕೂಡ ಹೆಚ್ಚು ಲವಲವಿಕೆ ಮಾಡಿತು. (ವಿ.ಜಿ.ಕೆ.)