ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಕ್ಯಾಸ್ಲ್

ವಿಕಿಸೋರ್ಸ್ದಿಂದ

ನ್ಯೂ ಕ್ಯಾಸ್‍ಲ್ - ಈ ಹೆಸರಿನ ಹಲವು ನಗರಗಳಿವೆ

1 ಅಮೆರಿಕ ಸಂಯುಕ್ತ ಸಂಸ್ಥಾನಗಳ ಇಂಡಿಯಾನ ರಾಜ್ಯದ ಪೂರ್ವಭಾಗದಲ್ಲಿ ಹೆನ್ರಿ ಕೌಂಟಿಯಲ್ಲಿರುವ ನಗರ, ಅದರ ಆಡಳಿತ ಕೇಂದ್ರ. ಬ್ಲೂ ನದಿಯ ದಡದ ಮೇಲೆ ಇಂಡಿಯಾನಪಲಿಸ್‍ಗೆ ಈಶಾನ್ಯದಲ್ಲಿ ಸುಮಾರು 224 ಕಿಮೀ. ದೂರದಲ್ಲಿ (ಉ.ಅ. 39º55 ಪೂ.ರೇ. 85º22) ಇದೆ. ಜನಸಂಖ್ಯೆ 21,215 (1970).; ಇದನ್ನು 1819ರಲ್ಲಿ ಸ್ಥಾಪಿಸಲಾಯಿತು. 1839ರಲ್ಲಿ ಇದಕ್ಕೆ ನಗರ ಮಾನ್ಯತೆ ದೊರಕಿತು. 1900ರಿಂದ ಮುಂದಿನ ಹತ್ತು ವರ್ಷಗಳಲ್ಲಿ ಇಲ್ಲಿ ಹಲವು ಕೈಗಾರಿಕೆಗಳು ಸ್ಥಾಪಿತವಾದವು. ಪಿಯಾನೊ ವ್ಯಾಪಾರೋದ್ದೇಶದಿಂದ ಇಲ್ಲಿ ವ್ಯಾಪಕವಾಗಿ ಗುಲಾಬಿ ಬೆಳಸಲಾರಂಭವಾಯಿತು. ಆದ್ದರಿಂದ ಅದು ಗುಲಾಬಿಯ ನಗರ ಎಂದು ಪ್ರಸಿದ್ಧವಾಯಿತು. ಇಲ್ಲಿ ಆಟೊಮೊಬೈಲ್ ಬಿಡಿ ಭಾಗಗಳು, ಉಕ್ಕಿನ ಪದಾರ್ಥಗಳೂ ಪಿಯಾನೋ ಮುಂತಾದವು ತಯಾರಾಗುತ್ತವೆ.

2 ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೆನ್ಸಿಲ್ವೇನಿಯ ರಾಜ್ಯದ ಪಶ್ಚಿಮ ಭಾಗದಲ್ಲಿ ಲಾರೆನ್ಸ್ ಕೌಂಟಿಯಲ್ಲಿ ಉ.ಅ. 41º00 ಮತ್ತು ಪೂ.ರೇ. 80º20 ಮೇಲೆ, ಪಿಟ್ಸ್‍ಬರ್ಗ್‍ಗೆ ಉತ್ತರ ವಾಯುವ್ಯದಲ್ಲಿ 64 ಕಿ.ಮೀ. ದೂರದಲ್ಲಿ ಒಹೈಯೋದ ಯಂಗ್ಸ್‍ಟನ್‍ನ ಆಗ್ನೇಯಕ್ಕೆ 32 ಕಿ.ಮೀ. ದೂರದಲ್ಲಿ ಈ ಹೆಸರಿನ ಒಂದು ನಗರ ಇದೆ. ಲಾರೆನ್ಸ್ ಕೌಂಟಿಯ ಜನಸಂಖ್ಯೆ 38,559 (1970). ಇದನ್ನು ಷೆನಾಂಗೋ, ಮಹೋನಿಂಗ್ ಮತ್ತು ಬೀವರ್ ನದಿಗಳ ಸಂಗಮಸ್ಥಳದಲ್ಲಿ ಆಲಿಫಾನಿ ಪರ್ವತದ ತಪ್ಪಲಿನಲ್ಲಿ ನಿರ್ಮಿಸಲಾಗಿದೆ. ಇದು ಮೊದಲು ಡೆಲವೇರ್ ಇಂಡಿಯಾನರ ಹಳ್ಳಿಯಾಗಿತ್ತು. ಸುಮಾರು 1798ರಲ್ಲಿ ಜಾನ್ ಸ್ಟುವರ್ಟ್ ಇಲ್ಲಿ ಬಿಳಿಯರ ವಸತಿ ನಿರ್ಮಿಸಿ, ಕಬ್ಬಿಣದ ಕುಲುಮೆಯೊಂದನ್ನು ಸ್ಥಾಪಿಸಿ ಇಂಗ್ಲೆಂಡಿನ ಕೈಗಾರಿಕಾ ಕೇಂದ್ರವಾದ ನ್ಯೂ ಕ್ಯಾಸ್‍ಲ್ ಅಪಾನ್ ಟೈನ್ ನೆನಪಾಗಿ ಇದಕ್ಕೆ ನ್ಯೂ ಕ್ಯಾಸೆಲ್ ಎಂದು ಹೆಸರಿಟ್ಟ. ನ್ಯೂ ಕ್ಯಾಸ್‍ಲ್ 1828ರಲ್ಲಿ ಬರೋ ಆಯಿತು. 1869ರಲ್ಲಿ ಇದಕ್ಕೆ ನಗರದ ಸ್ಥಾನಮಾನ ದೊರಕಿದುವು. ಕೈಗಾರಿಕೆಯ ದೃಷ್ಟಿಯಿಂದ ಪ್ರಮುಖ ಸ್ಥಳದಲ್ಲಿದೆ. ಇಲ್ಲಿ ಕಲ್ಲಿದ್ದಲು, ಸುಣ್ಣಕಲ್ಲು, ಜೇಡಿಮಣ್ಣು ಮತ್ತು ಕಬ್ಬಿಣದ ಅದುರು ಸಿಗುತ್ತವೆ. ಇಲ್ಲಿ ಪಿಂಗಾಣಿ ಸಾಮಾನು, ಉಕ್ಕು, ಮಣ್ಣಿನ ಪಾತ್ರೆ, ರಾಸಾಯನಿಕ, ಸಿಮೆಂಟು, ಇಟ್ಟಿಗೆ, ಹಿತ್ತಾಳೆ, ತಾಮ್ರ ಸರಕು ಮತ್ತು ರೋಲಿಂಗ್ ಮಿಲ್ ಯಂತ್ರಗಳು ತಯಾರಾಗುತ್ತವೆ. ಇಲ್ಲಿಗೆ ಸಮೀಪದಲ್ಲಿ ಮೊರೇನ್ ರಾಜ್ಯವನವೂ ಮನೋರಂಜನೆಯ ಪ್ರದೇಶವೂ ಇದೆ.

3 ಅಮೆರಿಕ ಸಂಯುಕ್ತ ಸಂಸ್ಥಾನಗಳ ಡೆಲವೇರ್ ರಾಜ್ಯದ ಉತ್ತರ ಭಾಗದಲ್ಲಿ ಡೆಲವೇರ್ ನದಿಯ ದಂಡೆಯ ಮೇಲೆ (ಉ.ಅ. 39º40, ಪೂ.ರೇ. 75º34) ಈ ಹೆಸರಿನ ಒಂದು ನಗರ ಇದೆ. ಇದು ಕ್ಯಾಸ್‍ಲ್ ಕೌಂಟಿಯ ಆಡಳಿತ ಕೇಂದ್ರ. ಜನಸಂಖ್ಯೆ 4,814 (1970). ಇಲ್ಲಿ 1651ರಲ್ಲಿ ವಸತಿ ಸ್ಥಾಪಿತವಾಯಿತು. ಡಚ್ಚರ ವಸಾಹತಾಗಿದ್ದ ಇದನ್ನು 1654ರಲ್ಲಿ ಸ್ವೀಡನ್ನಿನವರು ವಶಪಡಿಸಿಕೊಂಡಿದ್ದರು. 1655ರಲ್ಲಿ ಡಚ್ಚರು ಇದನ್ನು ಮತ್ತೆ ಗೆದ್ದುಕೊಂಡರು. ಇದು ದಕ್ಷಿಣ ಡೆಲವೇರ್ ಪ್ರದೇಶದ ರಾಜಧಾನಿಯಾಯಿತು. ಅನಂತರ ಬ್ರಿಟಿಷರು ಇದನ್ನು ವಶಪಡಿಸಿಕೊಂಡು, ನ್ಯೂ ಕ್ಯಾಸ್‍ಲ್‍ನ ಅರ್ಲ್ ಆಗಿದ್ದ ವಿಲಿಯಂ ಕ್ಯಾವೆಂಡಿಷನ ಹೆಸರಿನ ಮೇಲೆ ಇದನ್ನು ನ್ಯೂ ಕ್ಯಾಸೆಲ್ ಎಂದು ಕರೆದರು (1664). 1704ರಿಂದ 1776ರವರೆಗೆ ಇದು ಡೆಲವೇರ್‍ನ ಕೌಂಟಿಗಳ ಮುಖ್ಯಪಟ್ಟಣವಾಗಿತ್ತು. 1776ರ ಸೆಪ್ಟೆಂಬರ್ 21ರಂದು ಕೌಂಟಿಗಳ ಪ್ರತಿನಿಧಿಗಳು ಇಲ್ಲಿ ಸಭೆ ಸೇರಿ ಡೆಲವೇರ್ ರಾಜ್ಯವನ್ನು ಸ್ಥಾಪಿಸಿದರು. ಸ್ವಲ್ಪ ಕಾಲ ಇದು ಆ ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿಯ ಇಮಾನ್ಯುಯೆಲ್ ಚರ್ಚು ಐತಿಹಾಸಿಕ ಪ್ರಾಮುಖ್ಯ ಪಡೆದಿದೆ. ಸುಮಾರು 1730ರಲ್ಲಿ ಪ್ರಾರಂಭವಾದ ಆಮ್‍ಸ್ಟೆಲ್ ಹೌಸ್ ಮ್ಯೂಸಿಯಂ, ಓಲ್ಡ್ ಡಚ್ ಹೌಸ್, ಗ್ರೀನ್ ಚೌಕ ಇವು ಪ್ರೇಕ್ಷಣೀಯ. ಇಲ್ಲಿಯ ಪ್ರಮುಖ ಕೈಗಾರಿಕೆಗಳು ರೇಯಾನ್, ಉಕ್ಕು, ಪಾದರಕ್ಷೆ, ಬಣ್ಣ ಮತ್ತು ಔಷಧಿ. 1875ರಲ್ಲಿ ಇದು ನಗರವಾಯಿತು.

4 ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸಿನಲ್ಲಿ ಈ ಹೆಸರಿನ ಒಂದು ನಗರವಿದೆ. ಇದೊಂದು ಬಂದರು. ದಕ್ಷಿಣ ತೀರದಲ್ಲಿ ಹಂಟರ್ ನದಿಯ ಮುಖದಲ್ಲಿ (ದ.ಅ.32º55 ಪೂ.ರೇ. 151º45), ಸಿಡ್ನಿಗೆ ಉತ್ತರ ಈಶಾನ್ಯದಲ್ಲಿ 166 ಕಿಮೀ. ದೂರದಲ್ಲಿರುವ ಎತ್ತರವಾದ ಬೆಟ್ಟದ ಬುಡದಲ್ಲಿ ಕಟ್ಟಲಾಗಿರುವ ಈ ನಗರದ ಜನಸಂಖ್ಯೆ 1,45,718 (1971). ಇಲ್ಲಿಯ ಸರಾಸರಿ ವಾರ್ಷಿಕ ಉಷ್ಣತೆ 22ºಅ-12ºಅ. ಸರಾಸರಿ ವಾರ್ಷಿಕ ಮಳೆ 1,133 ಮಿ.ಮೀ. ದೊಡ್ಡ ಹಾಗೂ ಫಲವತ್ತಾದ ಹಿನ್ನಾಡು, ವಿಪುಲವಾದ ಇಂಧನ, ಜಲಸಂಪತ್ತು ಹಾಗೂ ಕಚ್ಚಾ ಸಾಮಗ್ರಿಗಳು ಇರುವುದರಿಂದ ಈ ನಗರದಲ್ಲಿ ಅನೇಕ ಕೈಗಾರಿಕೆಗಳು ಸ್ಥಾಪಿತವಾಗಿದೆ. ಇದು ದಕ್ಷಿಣಾರ್ಧಗೋಳದ ಅತ್ಯಂತ ಪ್ರಮುಖ ಕೈಗಾರಿಕಾ ಕೇಂದ್ರವಾಯಿತು.

ಈ ನಗರ 1801ರಲ್ಲಿ ಅಪರಾಧಿಗಳನ್ನಿಡುವ ವಸಾಹತಾಗಿ ಪ್ರಾರಂಭವಾಯಿತು. ನ್ಯೂ ಕ್ಯಾಸೆಲ್-ಸೆಸ್‍ನಾಕ್ ಪ್ರದೇಶದಲ್ಲಿ ವರ್ಷಕ್ಕೆ 1,00,000 ಟನ್ನುಗಳಿಗೂ ಹೆಚ್ಚು ಕಲ್ಲಿದ್ದಲನ್ನು ತೆಗೆಯಲಾಗುತ್ತಿದೆ. ಇದು ಆಸ್ಟ್ರೇಲಿಯದ ಒಟ್ಟು ಉತ್ಪನ್ನದ ಸೇ. 46ಕ್ಕಿಂತಲೂ ಹೆಚ್ಚಾಗಿದೆ. 1915ರಲ್ಲಿ ಬ್ರೋಕನ್‍ಹಿಲ್ ಪ್ರೊಪ್ರೈಟರಿ ಕಂಪೆನಿಯಿಂದ ಸ್ಥಾಪಿತವಾದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಅಗಾಧವಾಗಿ ಅಭಿವೃದ್ಧಿ ಹೊಂದಿದೆ. 1960ರಲ್ಲಿ ನ್ಯೂಕ್ಯಾಸಾಲ್ ಬಳಿ ರೇಯಾನ್ ನೂಲು ಮತ್ತು ಹಗ್ಗಗಳನ್ನು ತಯಾರಿಸುವ ಕಾರ್ಖಾನೆಗಳು ಪ್ರಾರಂಭವಾದವು. ಲೋಹ ತಯಾರಿಕೆ, ಹಡಗು ನಿರ್ಮಾಣ, ಜವಳಿ ಇವು ಇಲ್ಲಿಯ ಕೆಲವು ಪ್ರಮುಖ ಕೈಗಾರಿಕೆಗಳು. ನಾರ್ತ್ ಹಾರ್ಬರ್, ಬೇಸಿನ್ ಮತ್ತು ಪೋರ್ಟ್ ವರಾಟಾ ರೇವುಗಳ ಬಂದರು ಸೌಲಭ್ಯ ತೃಪ್ತಿಕರವಾಗಿದೆ. ಇಲ್ಲಿ ಸರಕುಗಳನ್ನು ಹಡುಗುಗಳಿಗೆ ತುಂಬಲು ಮತ್ತು ಇಳಿಸಲು ಆಧುನಿಕ ವ್ಯವಸ್ಥೆಯಿದೆ. ಇಲ್ಲಿ ತೇಲುವ ಹಡುಗಕಟ್ಟೆಯೂ ಉಂಟು. 366 ಮೀ. ಅಗಲದ ರೇವನ್ನು ಪ್ರವೇಶಿಸಲು 152 ಮೀ. ಅಗಲ ಮತ್ತು 11 ಮೀ. ಆಳದ (ಇಳಿತದ ಸಮಯದಲ್ಲಿ) ಕಾಲುವೆಯಿದೆ. ನ್ಯೂ ಕ್ಯಾಸೆಲ್‍ನಿಂದ ರಫ್ತಾಗುವ ಪ್ರಮುಖ ಪದಾರ್ಥಗಳು ಕಲ್ಲಿದ್ದಲು, ಟಾರು, ಮಾಂಸ, ಬೆಣ್ಣೆ, ಮೊಟ್ಟೆ, ಮರ ಕಬ್ಬಿಣ, ಉಕ್ಕಿನ ಕಂಬಿಗಳು ಮತ್ತು ತಗಡುಗಳು, ಗೊಬ್ಬರ ಮುಂತಾದವು. ನ್ಯೂ ಕ್ಯಾಸ್‍ಲ್ ವಿಶ್ವವಿದ್ಯಾಲಯ 1965ರಲ್ಲಿ ಸ್ಥಾಪಿತವಾಯಿತು. ಇಲ್ಲಿ 1859ರಲ್ಲಿ ಪೌರಸಭೆ ಸ್ಥಾಪಿತವಾಯಿತು. 1885ರಲ್ಲಿ ಇದು ನಗರವಾಯಿತು.

5 ಉತ್ತರ ಐರ್ಲೆಂಡಿನ ಡೌನ್ ಕೌಂಟಿಯಲ್ಲಿರುವ ನ್ಯೂ ಕ್ಯಾಸ್‍ಲ್ ಡನ್‍ಡ್ರಮ್ ಕೊಲ್ಲಿಯ ದಡದ ಮೇಲೆ ಮೋರ್ನ್ ಪರ್ವತದ ಅತ್ಯುನ್ನತ ಶಿಖರವಾದ ಸ್ಲೀವ್ ಡಾನರ್ಡ್‍ನ ಬುಡದಲ್ಲಿ ಈ ಹೆಸರಿನ ಒಂದು ಪಟ್ಟಣವಿದೆ. ಜನಸಂಖ್ಯೆ 4,619 (1971). ಇದು ಸಮುದ್ರತೀರದ ವಿಹಾರಸ್ಥಳ, ಪ್ರವಾಸಿಕೇಂದ್ರ. ಇಲ್ಲಿಂದ ಪರ್ವತಪ್ರದೇಶಕ್ಕೆ ಜನರು ಪರಿಶೋಧನ ಪ್ರವಾಸ ಮಾಡುತ್ತಾರೆ. ಇಲ್ಲಿಯ ಗಾಲ್ಫ್ ಮೈದಾನ ಪ್ರಸಿದ್ಧವಾದ್ದು. ಇಲ್ಲಿಗೆ 3.2 ಕಿ.ಮೀ. ದೂರದಲ್ಲಿ 1,200 ಎಕರೆ ವಿಸ್ತೀರ್ಣವುಳ್ಳ ಸರ್ಕಾರಿ ವನ (ಟಾಲಿಮೋರ್ ಫಾರೆಸ್ಟ್ ಪಾರ್ಕ್) ಇದೆ. ಇದರಲ್ಲಿ 135 ಜಾತಿಯ ಮರಗಳುಂಟು. ಈ ಪಟ್ಟಣಕ್ಕೆ ನ್ಯೂ ಕ್ಯಾಸ್‍ಲ್ ಎಂಬ ಹೆಸರು ಬರಲು ಕಾರಣವಾದ ನ್ಯೂ ಮೆಗನಿಸ್ ದುರ್ಗ ಭದ್ರ ಕೇಂದ್ರವಾಗಿತ್ತು. ಇದನ್ನು 1588ರಲ್ಲಿ ಕಟ್ಟಲಾಯಿತು.

6 ಕೆನಡಾದ ನ್ಯೂ ಒ್ರನ್ಸ್‍ವಿಕ್‍ನ ನಾರ್ತಂಬರ್ಲೆಂಡ್ ಕೌಂಟಿಯಲ್ಲೂ ದಕ್ಷಿಣ ಆಫ್ರಿಕದ ಪಶ್ಚಿಮ ನಟಾಲ್ ಪ್ರಾಂತ್ಯದಲ್ಲೂ ಅಮೆರಿಕ ಸಂಯುಕ್ತ ಸಂಸ್ಥಾನಗಳ ವೈಯೊಮಿಂಗ್ ರಾಜ್ಯದ ವೆಸ್ಟನ್ ಕೌಂಟಿಯಲ್ಲೂ ಈ ಹೆಸರಿನ ಪಟ್ಟಣಗಳಿವೆ. (ಜೆ.ಎಸ್.ಎಸ್.)