ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಮೆಕ್ಸಿಕೋ

ವಿಕಿಸೋರ್ಸ್ದಿಂದ

ನ್ಯೂ ಮೆಕ್ಸಿಕೋ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ನೈಋತ್ಯ ರಾಜ್ಯ. ಉತ್ತರಕ್ಕೆ ಕಾಲರ್ಯಾಡೋ, ಪೂರ್ವಕ್ಕೆ ಓಕ್ಲಹೋಮ ಮತ್ತು ಟೆಕ್ಸಸ್ ರಾಜ್ಯಗಳೂ ದಕ್ಷಿಣಕ್ಕೆ ಟೆಕ್ಸಸ್ ರಾಜ್ಯ ಮತ್ತು ಮೆಕ್ಸಿಕೋ ದೇಶವೂ ಪಶ್ಚಿಮಕ್ಕೆ ಆರಿeóÉೂೀನ ರಾಜ್ಯವೂ ಇವೆ. ಉ.ಅ.310 20'-370 ಮತ್ತು ಪ.ರೇ 1030-1090 ನಡುವೆ ಹಬ್ಬಿರುವ ಈ ರಾಜ್ಯದ ವಿಸ್ತೀರ್ಣ 3,15,115 ಚ.ಕಿಮೀ. ನೈಋತ್ಯದಲ್ಲಿರುವ ಬಾಣಲೆ ಹಿಡಿಯಂಥ ಭಾಗವನ್ನು ಬಿಟ್ಟರೆ ಇದು ಆಯಾಕಾರವಾಗಿದೆ. ಜನಸಂಖ್ಯೆ 10,16,000(1970). ರಾಜಧಾನಿ ಸಾಂತ ಫೇ.

ಮೇಲ್ಮೈಲಕ್ಷಣ: ನ್ಯೂ ಮೆಕ್ಸಿಕೋ ರಾಜ್ಯದಲ್ಲಿ ಚಪ್ಪಟೆಯಾದ ನೆಲವೂ ಏರುತಗ್ಗಾದ ಪರ್ವತಮಯವಾದ ಪ್ರದೇಶವೂ ಇವೆ. ಕೆಲವು ಭಾಗಗಳಲ್ಲಿ ತೈಲಪುರ್ನಿ ಕಾಡು, ಸಮೃದ್ಧ ಹುಲ್ಲುಗಾವಲು, ಮತ್ತು ಮೀನು ತುಂಬಿರುವ ಪರ್ವತ ತೊರೆಗಳು ಇದ್ದರೆ, ಇನ್ನು ಕೆಲವು ಭಾಗಗಳಲ್ಲಿ ನೀರೇ ಇಲ್ಲದೆ, ಪಾಪಾಸುಕಳ್ಳಿ ಸಹ ಬೆಳೆಯುವುದು ಕಷ್ಟ. ರಾಜ್ಯದ ಪೂರ್ವದ ಮೂರನೆಯ ಒಂದು ಭಾಗ ಮಹಾ ಮೈದಾನದ ವಿಸ್ತರಣವಾಗಿದೆ. ಮಧ್ಯದ ಮೂರನೆಯ ಒಂದು ಭಾಗ ಉತ್ತರದಕ್ಷಿಣವಾಗಿ ಹಬ್ಬಿರುವ ರಾಕಿ ಪರ್ವತದ ಮುಂದುವರಿದ ಭಾಗವಾಗಿದೆ. ಪಶ್ಚಿಮದ ಮೂರನೆಯ ಒಂದು ಭಾಗ ಎತ್ತರವಾದ ಪ್ರಸ್ಥಭೂಮಿ. ಇಲ್ಲಿ ಎತ್ತರವಾದ ಶ್ರೇಣಿಗಳೂ ನಡುವೆ ಕಣಿವೆಗಳೂ ಇವೆ. ಇದು ಅನೇಕ ಚಿಕ್ಕ ಶ್ರೇಣಿಗಳನ್ನೂ ಬಯಲುಗಳನ್ನೂ ಒಳಗೊಂಡಿದೆ. ರಾಜ್ಯದ ಸೇ.85ರಷ್ಟು ಪ್ರದೇಶ 1200 ಮೀಗಳಿಗೂ ಹೆಚ್ಚು ಎತ್ತರವಾಗಿದೆ. ಸರಾಸರಿ ಎತ್ತರ ವಾಯವ್ಯದಲ್ಲಿ 1,500 ಮೀ 2,500 ಮೀ. ಆಗ್ನೇಯದಲ್ಲಿ 1,200 ಮೀಗಳಿಗೂ ಕಡಿಮೆ. ರಾಜ್ಯದ ಉತ್ತರದಲ್ಲಿ ಮಧ್ಯದಲ್ಲಿರುವ ರಾಕೀ ಪರ್ವತಶ್ರೇಣಿಯಾದ ಸ್ಯಾಂಗ್ರೀಡ ಕ್ರಿಸ್ಟೋದಲ್ಲಿರುವ ಹ್ವೀಲರ್ (4,011ಮೀ) ಮತ್ತು ಟ್ರೂಚಸ್ (3,993 ಮೀ) ಅತ್ಯುನ್ನತ ಶಿಖರಗಳು. ಶ್ರೇಣಿಗಳ ಮಧ್ಯದಲ್ಲಿರುವ ಅಸಂಖ್ಯ ಕಂದರಗಳು ಕೃಷಿಗೂ ದನಗಳ ಮೇವಿಗೂ ಉಪಯುಕ್ತವಾಗಿದೆ.

ನ್ಯೂ ಮೆಕ್ಸಿಕೋದ ಮುಖ್ಯ ನದಿಗಳ ಪೈಕಿ ರೀಯೊ ಗ್ರ್ಯಾಂಡ್ ಕಾಲರ್ಯಾಡೋದಲ್ಲಿ ಉಗಮಿಸುತ್ತದೆ. ಇದು ರಾಜ್ಯವನ್ನು ಸಮಭಾಗಿಸುತ್ತದೆ. ಇದು ಮೆಕ್ಸಿಕೋ ಕೊಲ್ಲಿಯನ್ನು ಸೇರುತ್ತದೆ. ರಾಜ್ಯದ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿರುವ ನದಿ ಇದು. ಇದರ ಪೂರ್ವಕ್ಕೆ ಸಮಾಂತರದಲ್ಲಿ ಹರಿಯುವ ನದಿ ಪೆಂಕಸ್. ಇನ್ನೊಂದು ನದಿ ಕನೇಡಿಯನ್, ಇದು ಸ್ಯಾಂಗ್ರೀಡ ಕ್ರಿಸ್ಟೋದಲ್ಲಿ ಹುಟ್ಟಿ ಪೂರ್ವದತ್ತ ಶುಷ್ಕ ಬಯಲಿನಲ್ಲಿ ಹರಿಯುತ್ತದೆ. ಸ್ಯಾನ್ ವಾನ್ ಮತ್ತು ಹೀಲ ನದಿಗಳು ಜಲವಿಭಾಗ ರೇಖೆಯ ಪಶ್ಚಿಮದ ಕಡೆಯಲ್ಲಿ ವಾಯವ್ಯ ಮತ್ತು ನೈಋತ್ಯ ಭಾಗಗಳಲ್ಲಿ ಹರಿಯುತ್ತವೆ. ಹೀಲ ನದಿಯನ್ನು ಬಿಟ್ಟು ಉಳಿದವಕ್ಕೆ ನ್ಯೂ ಮೆಕ್ಸಿಕೋದಲ್ಲಿ ಕಟ್ಟೆಗಳನ್ನು ನಿರ್ಮಿಸಿ ಅವುಗಳ ನೀರನ್ನು ವ್ಯವಸಾಯಕ್ಕೆ ಬಳಸಲಾಗುತ್ತಿದೆ. ಜಲಾಶಯಗಳು ವಿಹಾರಸ್ಥಾನಗಳಾಗಿವೆ. ಈ ಕಟ್ಟೆಗಳು ಪ್ರವಾಹನಿಯಂತ್ರಣಕ್ಕೆ ಸಹಾಯಕವಾಗಿವೆ.

ವಾಯುಗುಣ: ರಾಜ್ಯದ ವಾರ್ಷಿಕ ಮಾಧ್ಯ ಉಷ್ಣತೆ 120 ಸೆ. ಗರಿಷ್ಠ ಮತ್ತು ಕನಿಷ್ಠ ಉಷ್ಣತೆಗಳು ಅನುಕ್ರಮವಾಗಿ 430 ಸೆ. ಮತ್ತು-20 ಸೆ. ನೆಲದ ಎತ್ತರಕ್ಕೆ ಅನುಗುಣವಾಗಿ ಉಷ್ಣತೆಯಲ್ಲಿ ವ್ಯತ್ಯಾಸ ಅಧಿಕ. ರಾತ್ರಿಯ ಉಷ್ಣತೆ ಹಗಲಿನದಕ್ಕಿಂತ ಬಹಳ ಕಡಿಮೆ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 380 ಮಿಮೀ. ಎತ್ತರ ಹೆಚ್ಚಿದಂತೆ ಹೆಚ್ಚು ಮಳೆ ಬೀಳುತ್ತದೆ. ಉನ್ನತ ಪರ್ವತಶ್ರೇಣಿಪ್ರದೇಶದಲ್ಲಿ ಸುಮಾರು 1,000 ಮಿಮೀ ಮತ್ತು ತಗ್ಗಿನ ನೆಲದಲ್ಲಿ 200-250ಮಿಮೀ ಮಳೆಯಾಗುತ್ತದೆ. ಸಾಮಾನ್ಯವಾಗಿ ಅತಿ ಹೆಚ್ಚು ಮಳೆ ಬೀಳುವುದು ರಾಜ್ಯದ ಪೂರ್ವದ ಕಡೆಯಲ್ಲಿ.

ಸಸ್ಯಗಳು: ರಾಜ್ಯದಲ್ಲಿ ಆರು ಸಸ್ಯವಲಯಗಳಿವೆ. ರೀಯೊ ಗ್ರ್ಯಾಂಡ್ ಮತ್ತು ಪೇಕಸ್ ನದಿಗಳ ದಕ್ಷಿಣ ಪ್ರದೇಶ ಮತ್ತು ಸೋನೋರನ್ ಕೆಳವಲಯ ಸಾಮಾನ್ಯವಾಗಿ 1,400 ಮೀಗಳಿಗಿಂತ ಕಡಿಮೆ ಎತ್ತರವಾಗಿದೆ. ಸುಮಾರು 52,000 ಚ.ಕಿಮೀ ವಿಸ್ತಾರವಾಗಿರುವ ಈ ಬಯಲು ಹುಲ್ಲುನೆಲ, ವ್ಯವಸಾಯ ಭೂಮಿ. ಇಲ್ಲಿ ನೀರಾವರಿ ಸೌಲಭ್ಯವುಂಟು. ಮೇಲಣ ಸೋನೋರನ್ ಪ್ರದೇಶ ಇಡೀ ರಾಜ್ಯದ ಮುಕ್ಕಾಲು ಭಾಗವನ್ನಾವರಿಸಿದೆ. 1,400 ಮೀಗಳಿಗಿಂತ ಎತ್ತರವಾಗಿರುವ ಈ ಪ್ರದೇಶ ಪ್ರೇರಿ ನೆಲ. ಇಲ್ಲಿ ಕುಳ್ಳಾದ ಪೈನ್ ಮತ್ತು ಜೂನಿಪರ್ ಬೆಳೆಯುತ್ತದೆ. ಇದಕ್ಕಿಂತ ಮೇಲಿನ ವಲಯದಲ್ಲಿ ಪಾಂಡೆರೋಸ ಪೈನ್ ಸಾಮಾನ್ಯ. ಇದು ಸುಮಾರು 49,000 ಚ.ಕಿಮೀ ವಿಸ್ತಾರವಾಗಿದೆ. ಕನೇಡಿಯನ್ ನದಿ ವಲಯದ ಸುಮಾರು 10,000 ಚ.ಕಿಮೀ ಪ್ರದೇಶ 3,000 ಮೀ-3,500 ಮೀ ಎತ್ತರವಾಗಿದೆ. ಇಲ್ಲಿ ನೀಲಿ ಸ್ಟ್ರೂಸ್ ಮತ್ತು ಡೊಗ್ಲಾಸ್ ಫರ್ ಬೆಳೆಯುತ್ತವೆ. ಇದಕ್ಕಿಂತ ಎತ್ತರವಾದ ಪ್ರದೇಶ ಬಲು ಕಿರಿದು. ಇಲ್ಲಿ ಹಡ್ಸನ್ ಮತ್ತು ಆರ್ಕ್‍ಟಿಕ್ ವಲಯ ಪ್ರರೂಪಿ ಸಸ್ಯವಿದೆ.

ಪ್ರಾಣಿವರ್ಗ: ಎತ್ತರ ಹಾಗೂ ಸಸ್ಯವೈವಿಧ್ಯದಿಂದಾಗಿ ಪ್ರಾಣಿವರ್ಗದಲ್ಲೂ ವೈವಿಧ್ಯವಿದೆ. ಹಲವಾರು ವನ್ಯಮೃಗಗಳು ಇಲ್ಲಿ ನಾಗರಿಕತೆಗೆ ಬಲಿಯಾಗದೆ ಉಳಿದುಕೊಂಡು ಬಂದಿವೆ. ಚಿಗರೆ, ಜಿಂಕೆ, ಕಡವೆ, ಕಡ್ಡುಕರಡಿ, ಮೊಲ ಮತ್ತು ಇಣಚಿ ಇವು ವನ್ಯಮೃಗಗಳು. ಸ್ಕಂಕ್, ರ್ಯಾಕೂನ್ ಬೂದುಬಣ್ಣದ ನರಿ, ಬೀವರ್ ಮತ್ತು ಕಸ್ತೂರಿ ಇಲಿ ಇವೂ ಇವೆ. ನದಿಗಳಲ್ಲಿ ಮೀನುಗಳುಂಟು. ಇಲ್ಲಿ ಹಲವು ಬಗೆಯ ಹಕ್ಕಿಗಳಿವೆ. ಗ್ರೌಸ್, ಕ್ವೇಲ್, ಪಾರಿವಾಳ, ಕಪೋತ, ಹೆಬ್ಬಾತು ಇವು ಕೆಲವು. ಉತ್ತರ ಆಫ್ರಿಕದಿಂದ ತಂದ ಬಾರ್ಬರಿ ಕುರಿಯನ್ನು ಪರ್ವತ ಪ್ರದೇಶದಲ್ಲಿ ಬೆಳೆಸಲಾಗಿದೆ. ಬುಡುಬುಡುಕೆ ಹಾವು ಮತ್ತು ಕರಿಜೇಡ ಇಲ್ಲಿಯ ಭಯಂಕರ ವಿಷಜಂತುಗಳು.

ಜನ: ರಾಜ್ಯದ ನಿವಾಸಿಗಳು ಮುಖ್ಯವಾಗಿ ಆಂಗ್ಲೋಗಳು ಆಂಗ್ಲೋ ಅಮೆರಿಕನರು ಮತ್ತು ಸ್ಪ್ಯಾನಿಷ್ ಅಮೆರಿಕನರು ಅಥವಾ ಇಂಡಿಯನರು. ನೀಗ್ರೋಗಳು ಮತ್ತು ಪ್ರಾಚ್ಯರು ಕಡಿಮೆ. ಸ್ಪ್ಯಾನಿಷ್ ಮತ್ತು ಇಂಡಿಯನ್ನರ ಮಿಶ್ರಸಂತತಿಯವರನ್ನು ಹಿಸ್ಪಾನೋ ಅಥವಾ ಸ್ಪ್ಯಾನಿಷ್ ಅಮೆರಿಕನ್ ಎಂದು ಕರೆಯುತ್ತಾರೆ. 1940ರವರೆಗೂ ಇವರು ಬಹುಸಂಖ್ಯಾತರಾಗಿದ್ದರು. ಆದರೆ 1940ರ ವೇಳೆಗೆ ಇವರು ಅಲ್ಪಸಂಖ್ಯಾತರಾಗಿದ್ದರು. ದ್ವಿತೀಯ ಮಹಾಯುದ್ಧದ ಅನಂತರ ಆಂಗ್ಲೋಗಳು ಅಧಿಕಸಂಖ್ಯೆಯಲ್ಲಿ ರಾಜ್ಯವನ್ನು ಪ್ರವೇಶಿಸಿದರು. ಚಿಕ್ಕಪುಟ್ಟ ಕೃಷಿ ಗ್ರಾಮಗಳಲ್ಲಿದ್ದ ಕ್ಯಾಲಿಫೋರ್ನಿಯಕ್ಕೂ ವಲಸೆ ಹೋಗತೊಡಗಿದರು. ಹಳ್ಳಿಗಳು ಪಾಳುಬಿದ್ದುವು. ಇಂಡಿಯನರ ಸಂಖ್ಯೆ 1940ರಲ್ಲಿ 34,510 ಇದ್ದದ್ದು 1970ರ ವೇಳೆಗೆ 73,000ಕ್ಕೆ ಏರಿತು. ಯೂಟ್, ಜಿಕಾರಿಲ್ಲಾ ಮತ್ತು ಮೆಸ್ಕೇಲರ್ಸ್ ಪ್ರದೇಶಗಳು ಅಪಾಚಿಗಳಿಗಾಗಿ ಮೀಸಲಾಗಿವೆ. ತಮ್ಮ ಅಸಮರ್ಪಕ ಸ್ಥಿತಿಯ ಬಗ್ಗೆ ಇಂಡಿಯನರಲ್ಲಿ ಈಚೆಗೆ ಅಸಮಾಧಾನ ಅಧಿಕವಾಗಿದೆ. ಅವರು ತಮ್ಮ ಮೀಸಲು ಸ್ಥಳಗಳನ್ನು ಬಿಟ್ಟು ನಗರಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ.

ಆರ್ಥಿಕತೆ: ಇತರ ರಾಜ್ಯಗಳೊಂದಿಗೆ ಹೋಲಿಸಿದರೆ ನ್ಯೂ ಮೆಕ್ಸಿಕೋ ಬಡರಾಜ್ಯ. ತಲಾ ವರಮಾನದ ದೃಷ್ಟಿಯಿಂದ ಈ ರಾಜ್ಯದ ಸ್ಥಾನ 1970ರಲ್ಲಿ 44ನೆಯದಾಗಿತ್ತು. 1960ರ ದಶಕದಲ್ಲಿ ನ್ಯೂ ಮೆಕ್ಸಿಕೋದ ಜನರ ಸರಾಸರಿ ವರಮಾನ ರಾಷ್ಟ್ರೀಯ ಸರಾಸರಿಯ ಸೇ.85ರಿಂದ ಸೇ.79ಕ್ಕೆ ಇಳಿಯಿತು. ಅದರ ಆರ್ಥಿಕತೆ ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆಯನ್ನು ಹೋಲುತ್ತದೆ. ಅದು ಮುಖ್ಯವಾಗಿ ಕಚ್ಚಾ ಸಾಮಗ್ರಿಗಳನ್ನು ರಫ್ತು ಮಾಡುವ ರಾಜ್ಯವಾಗಿದೆ. ಅದರ ಸಾಮಗ್ರಿಗಳ ಬೇಡಿಕೆಗಳಲ್ಲಿ ತೀವ್ರ ಏರಿಳಿತಗಳಾಗುತ್ತಿರುತ್ತವೆ.

ಕೃಷಿ: ಕೃಷಿಯ ಸ್ಥೂಲ ವರಮಾನ 1970ರಲ್ಲಿ ರಾಜ್ಯದ ವರಮಾನದ ಸೇ. 7 ರಷ್ಟು ಇತ್ತು. ಸ್ಪೇನ್ ಮತ್ತು ಮೆಕ್ಸಿಕೋಗಳ ಅಧೀನದಲ್ಲಿದ್ದಾಗ ಈ ಪ್ರದೇಶ ಸ್ವಯಂಪೂರ್ಣವಾಗಿತ್ತು. ರೀಯೊ ಗ್ರಾಂಡ್ ನದಿಯ ನೆರೆಬಯಲಿನಲ್ಲಿ ಹುರುಳಿ, ಮೆಕ್ಕೆಜೋಳ, ಹತ್ತಿ ಮತ್ತು ಕುಂಬಳಕಾಯಿ ಉತ್ಪಾದಿಸುತ್ತಿತ್ತು. ಶುಷ್ಕಪ್ರದೇಶದಲ್ಲಿ ಕುರಿಸಾಕಣೆ ಪ್ರಧಾನವಾಗಿತ್ತು. ಆಂಗ್ಲೋಗಳು ಟೆಕ್ಸಾಸ್‍ನಿಂದ ದನಕರುಗಳನ್ನು ತಂದು ಪೋಷಿಸತೊಡಗಿದರು. ಈಗ ಕೃಷಿ ಉತ್ಪನ್ನಗಳಿಂದ ಬರುವ ವರಮಾನದಲ್ಲಿ ಅರ್ಧಕ್ಕಿಂತ ಹೆಚ್ಚು ಬರುವುದು ಮಾಂಸದಿಂದ. ಹತ್ತಿ ಮುಖ್ಯ ನಗದು ಬೆಳೆ. ಒಣಹುಲ್ಲು ಎರಡನೆಯದು. ರಾಜ್ಯದ ಪೂರ್ವಭಾಗದ ಜಮೀನಿನಲ್ಲಿ ಗೋದಿ ಮತ್ತು ಜೋಳ ಬೆಳೆಯುತ್ತದೆ. ಒಟ್ಟು 4,52,000 ಹೆಕ್ಟೇರ್ ನೆಲ ಸಾಗುವಳಿಗೆ ಒಳಪಟ್ಟಿದೆ. ಇದರಲ್ಲಿ ಅರ್ಧ ಭಾಗಕ್ಕೆ ನೀರಾವರಿ ಸೌಲಭ್ಯವುಂಟು.

ಗಣಿಗಾರಿಕೆ: 19ನೆಯ ಶತಮಾನದಲ್ಲಿ ಪ್ರಾರಂಭವಾದ ಬಂಗಾರ ಮತ್ತು ಬೆಳ್ಳಿಗಳ ಉತ್ಪಾದನೆ 1915ರಲ್ಲಿ ಶಿಖರವನ್ನು ಮುಟ್ಟಿ ಅಲ್ಲಿಂದೀಚೆಗೆ ಇಳಿದಿದೆ. ತಾಮ್ರದ ಉತ್ಪಾದನೆ ಈಗಲೂ ಗಮನಾರ್ಹವಾಗಿದೆ. ಕಲ್ಲಿದ್ದಲಿನ ಉತ್ಪಾದನೆ 1960ರ ದಶಕದಲ್ಲಿ ಬೆಳೆಯಿತು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೊಟಾಷ್ ಉತ್ಪಾದನೆಯಲ್ಲಿ ಸೇ.85ರಷ್ಟು ಈ ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ. 1950ರಲ್ಲಿ ಇಲ್ಲಿ ಯುರೇನಿಯಮ್ ನಿಕ್ಷೇಪಗಳು ಪತ್ತೆಯಾದುವು. ಈಗ ಅದರ ಉತ್ಪಾದನೆಯಲ್ಲಿ ಈ ರಾಜ್ಯ ಮುಂದಾಗಿದೆ. ಕಬ್ಬಿಣ, ಸೀಸ, ಸತುವು, ಮ್ಯಾಂಗನೀಸ್ ಮತ್ತು ಮಾಲಿಬ್ಡಿನಮ್ ಇಲ್ಲಿ ಇತರ ಖನಿಜಗಳು. ತೈಲ ಮತ್ತು ಅನಿಲಗಳ ಉತ್ಪನ್ನದ ವರಮಾನ ಈ ರಾಜ್ಯದ ಎಲ್ಲ ಖನಿಜಗಳ ಉತ್ಪನ್ನದ ವರಮಾನದ ಸೇ.65ರಷ್ಟಿದೆ. ಮುಖ್ಯವಾಗಿ ರಾಜ್ಯದ ಆಗ್ನೇಯ ಮೂಲೆಯಲ್ಲೂ ವಾಯವ್ಯದಲ್ಲಿ ಸ್ಯಾನ್ ವಾನ್ ನದಿಯ ಜಲಾನಯನ ಪ್ರದೇಶದಲ್ಲೂ ಇವು ದೊರಕುತ್ತವೆ.

ಕೈಗಾರಿಕೆ: ಮೊದಮೊದಲು ಅನುಭೋಗ ವಸ್ತುಗಳ ತಯಾರಿಕೆಗೆ ಇಲ್ಲಿಯ ಕೈಗಾರಿಕೆಗಳು ಸೀಮಿತವಾಗಿದ್ದುವು. ಎರಡನೆಯ ಮಹಾಯುದ್ಧದ ಅನಂತರ ಇಲ್ಲಿ ಕೈಗಾರಿಕೆಗಳು ವೇಗವಾಗಿ ಬೆಳೆದಿವೆ. ಕೈಗಾರಿಕೆಯ ಉತ್ಪನ್ನದ ಮೌಲ್ಯ ರಾಜ್ಯದ ಎಲ್ಲ ಉತ್ಪನ್ನಗಳ ಮೌಲ್ಯದ ಸೇ.7ರಷ್ಟಿದೆ. ಆಹಾರ ಪರಿಷ್ಕರಣ, ಪೆಟ್ರೋಲಿಯಮ್, ಲೋಹ. ಕಟ್ಟಡ ಸಾಮಗ್ರಿ, ಇವು ಮುಖ್ಯ ಕೈಗಾರಿಕೆಗಳು. ಲಾಸ್ ಆಲಮೋಸ್‍ನ ವೈಜ್ಞಾನಿಕ ಪ್ರಯೋಗ ಶಾಲೆಯಲ್ಲಿ ಪರಮಾಣುಶಕ್ತಿಯನ್ನು ಕುರಿತ ಸಂಶೋಧನೆ ನಡೆಯುತ್ತಿದೆ. ಇದರಿಂದಾಗಿ ಯುದ್ಧೋಪಕರಣ ಇಲೆಕ್ಟ್ರಾನಿಕ್ಸ್ ಮತ್ತು ಸೂಕ್ಷ್ಮ ಸಲಕರಣೆಗಳ ಕೈಗಾರಿಕೆಗಳು ಬೆಳೆದಿವೆ.

ಪ್ರವಾಸೋದ್ಯಮ : ನ್ಯೂ ಮೆಕ್ಸಿಕೋ ರಾಜ್ಯದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಕಾಲ್ರ್ಸ್‍ಬಾಡ್ ಗವಿಗಳು ಮುಖ್ಯ ಆಕರ್ಷಣೆ. ಇವು ಸುಣ್ಣಕಲ್ಲಿನ ಬೃಹತ್ ಕುಹರಗಳು. ಇವು 411 ಮೀ ಆಳವಾಗಿವೆ. ರಾಜನ ಅರಮನೆ ಎಂದು ಕರೆಯಲಾಗುವ ಅತಿ ದೊಡ್ಡ ಗವಿಯ ಉದ್ದ 1220 ಮೀ; ಅದರ ಗರಿಷ್ಠ ಅಗಲ 191 ಮೀ. ಇಂಡಿಯನ್ ಮತ್ತು ಹಿಸ್ಟಾನೋ ಬುಡಕಟ್ಟುಗಳ ಆಚಾರ ಸಂಸ್ಕøತಿಗಳು, ರಾಜ್ಯ ಮತ್ತು ರಾಷ್ಟ್ರೀಯ ಉದ್ಯಾನಗಳು, ಐತಿಹಾಸಿದ ಸ್ಥಳಗಳು, ಬೇಟೆ, ಮೀನು ಹಿಡಿಯುವುದು, ಮತ್ತು ಸ್ಕೀಯಿಂಗ್ ಮುಂತಾದವು ಪ್ರವಾಸಿಗಳನ್ನು ಆಕರ್ಷಿಸುತ್ತವೆ.

ಸಾರಿಗೆ: 1880ರಲ್ಲಿ ಆಲ್ಬುಕರ್ಕ್ ಮತ್ತು ಸಾಂತ ಪೇ ವರೆಗೂ ರೈಲುಮಾರ್ಗಗಳನ್ನು ವಿಸ್ತರಿಸಿದಾಗ ನ್ಯೂ ಮೆಕ್ಸಿಕೋ ರಾಜ್ಯದ ಪ್ರತ್ಯೇಕತೆ ಕೊನೆಗೊಂಡಿತು. ಇಂದು ರೈಲ್ವೆಯ ಜಾಲವೇ ರಾಜ್ಯದಲ್ಲಿದ್ದು ಅದರ ಅಖಂಡತೆ ಸಾಧಿಸಿದೆ. ಜನಪೂರಿತ ನಗರಗಳನ್ನು ಕೂಡಿಸುವ ರಸ್ತೆಗಳಿವೆ. ಸಂಯುಕ್ತ ಸಂಸ್ಥಾನಗಳ ಅಂತರರಾಜ್ಯ ರಸ್ತೆಗಳು ಮೂರು ಇವೆ. ಪರ್ವತ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸ್ವಲ್ಪ ಹಿಂದೆ ಬಿದ್ದಿದೆಯಾದರೂ ರಾಜ್ಯಕ್ಕೆ ಸಾಕಷ್ಟು ರಸ್ತೆಗಳಿವೆ. ದೂರದ ಸ್ಥಳಗಳಿಗೆ ವಿಮಾನ ಸೌಕರ್ಯವುಂಟು.

ಆಡಳಿತ : ಗವರ್ನರ್ 2 ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾನೆ. ಇನ್ನೂ 2 ಅವಧಿಗಳಿಗೆ ಸ್ಪರ್ಧಿಸಲು ಅವನಿಗೆ ಅರ್ಹತೆಯುಂಟು. ದ್ವಿಸದನ ವಿಧಾನ ಮಂಡಲವುಂಟು. ಸೆನೆಟ್‍ನಲ್ಲಿ 42 ಸದಸ್ಯರು ಇರುತ್ತಾರೆ. ಇವರ ಸದಸ್ಯತ್ವದ ಅವಧಿ 4 ವರ್ಷ. ಪ್ರತಿನಿಧಿ ಸಭೆಯಲ್ಲಿ 70 ಸದಸ್ಯರು ಇರುತ್ತಾರೆ. ಇವರ ಸದಸ್ಯತ್ವದ ಅವಧಿ 2 ವರ್ಷ. ಈ ಸಭೆಗಳು ವರ್ಷದಲ್ಲಿ 60 ದಿನಗಳ ಅಧಿವೇಶನ ನಡೆಸುತ್ತವೆ. ನ್ಯಾಯಾಂಗದಲ್ಲಿ ಎಲ್ಲಕ್ಕೂ ಮೇಲೆ ಸರ್ವೋಚ್ಛ ನ್ಯಾಯಾಲಯವಿದೆ. ಅದರಲ್ಲಿ 8 ವರ್ಷಗಳ ಅವಧಿಗೆ ಆಯ್ಕೆಯಾದ 5 ನ್ಯಾಯಾಧೀಶರಿರುತ್ತಾರೆ. 11 ನ್ಯಾಯಿಕ ಜಿಲ್ಲೆಗಳ ನ್ಯಾಯಾಧೀಶರು 6 ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ. ರಾಜ್ಯದಲ್ಲಿ 32 ಕೌಂಟಿಗಳಿವೆ. ಪ್ರತಿ ಕೌಂಟಿಗೂ ಮೂವರಂತೆ ಕಮಿಷನರುಗಳಿರುತ್ತಾರೆ. ಇವರ ಅಧಿಕಾರಾವಧಿ 2 ವರ್ಷ.

ಶಿಕ್ಷಣ : ನ್ಯೂ ಮೆಕ್ಸಿಕೋ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜ್ಯವಾದಾಗಿನಿಂದ ಬಹಳ ಶೈಕ್ಷಣಿಕ ಸುಧಾರಣೆಯಾಗಿದೆ. 1970ರಲ್ಲಿ ಪ್ರತಿ ವಿದ್ಯಾರ್ಥಿಗೆ 200 ಡಾಲರುಗಳಿಗೂ ಹೆಚ್ಚು ಹಣವನ್ನು ಸರ್ಕಾರ ಖರ್ಚು ಮಾಡುತ್ತಿತ್ತು. ಆದರೆ ಅಧಿಕವಾಗಿ ಸುಧಾರಣೆ ಆಗಿರುವುದು ನಗರಪ್ರದೇಶಗಳಲ್ಲಿ ಮಾತ್ರ. ಗ್ರಾಮ ಪ್ರದೇಶಗಳು ಮತ್ತು ಚಿಕ್ಕ ಪಟ್ಟಣಗಳಲ್ಲಿ ಶಾಲೆಗಳ ಮಟ್ಟ ಉತ್ತಮವಾಗಿಲ್ಲ. ಈ ಪ್ರದೇಶಗಳಲ್ಲಿ ಅಧಿಕಸಂಖ್ಯೆಯಲ್ಲಿ ವಾಸಿಸುವ ಹಿಸ್ಟಾನೋ ಮಕ್ಕಳಿಗೆ ದೊರೆಯುವ ಶಿಕ್ಷಣ ಕೆಳಗಿನ ಮಟ್ಟದ್ದು. ಉಚ್ಚಶಿಕ್ಷಣ ಸಂಸ್ಥೆಗಳ ಪೈಕಿ ಪ್ರಮುಖವಾದ್ದು 1888ರಲ್ಲಿ ಆಲ್ಬುಕರ್ಕ್‍ನಲ್ಲಿ ಸ್ಥಾಪಿತವಾದ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯ. ರಾಜ್ಯದ ಬೆಂಬಲ ಪಡೆದ ಇತರ ಸಂಸ್ಥೆಗಳಿವು. ಯೂನಿವರ್ಸಿಟಿ ಪಾರ್ಕ್‍ನಲ್ಲಿರುವ ನ್ಯೂ ಮೆಕ್ಸಿಕೋ ಸ್ಟೇಟ್ ವಿಶ್ವವಿದ್ಯಾಲಯ (1889), ಪೋರ್ಟಾಲಿಸ್‍ನ ಈಸ್ಟರ್ನ್ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯ (1924) ಲಾಸ್ ವೇಗಸ್‍ನ ನ್ಯೂ ಮೆಕ್ಸಿಕೋ ಹೈಲ್ಯಾಂಡ್ಸ್ ವಿಶ್ವವಿದ್ಯಾಲಯ (1893), ಸಿಲ್ವರ್ ಸಿಟಿಯ ವೆಸ್ಟರ್ನ್ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯ, ಮತ್ತು ಸಕಾರೋದಲ್ಲಿರುವ ನ್ಯೂ ಮೆಕ್ಸಿಕೋ ಇನ್‍ಸ್ಟಿಟ್ಯೂಟ್ ಆಫ್ ಮೈನಿಂಗ್ ಅಂಡ್ ಟೆಕ್ನಾಲಜಿ (1889). 1909ರಲ್ಲಿ ಎಲ್ ರೀಟೋದಲ್ಲಿ ಸ್ಟ್ಯಾನಿಷ್ ಭಾಷೆಯನ್ನಾಡುವ ಶಿಕ್ಷಕರ ತರಬೇತಿಗಾಗಿ ನಾರ್ದರ್ನ್‍ನ್ಯೂ ಮೆಕ್ಸಿಕೋ ಸ್ಟೇಟ್ ಶಾಲೆ ಸ್ಥಾಪಿತವಾಯಿತು. ರಾಜ್ಯದಲ್ಲಿ ಅನೇಕ ಖಾಸಗಿ ಕಾಲೇಜುಗಳೂ ಇವೆ.

ಸಾಂಸ್ಕøತಿಕ ಜೀವನ : ಇಂಡಿಯನ್, ಸ್ಟ್ಯಾನಿಷ್ ಮತ್ತು ಆಂಗ್ಲೋ ಪರಂಪರೆಗಳ ಸಮನ್ವಯವನ್ನು ಇಲ್ಲಿಯ ಸಾಹಿತ್ಯ ಹಾಗೂ ಕಲೆಯಲ್ಲಿ ಕಾಣಬಹುದು. 19ನೆಯ ಶತಮಾನದಲ್ಲಿ ಗೋಪಾಲಕರ ಮತ್ತು ಗಣಿಗಾರರ ನಡುವಣ ಘರ್ಷಣೆಗಳು ಪ್ರಮುಖ ಸಾಂಸ್ಕøತಿಕ ವಿಷಯಗಳಾಗಿವೆ. ಇಲ್ಲಿಯ ಸುಂದರ ನೈಸರ್ಗಿಕ ದೃಶ್ಯ ಮತ್ತು ಜನಜೀವನ ವೈವಿಧ್ಯಗಳು ಕಲಾವಿದರನ್ನು ಆಕರ್ಷಿಸಿವೆ. ಟಾಲ್ಬುಕರ್ಕ್ ಇವು ಈಗ ಕಲಾವಿದರ ನೆಲೆಗಳು. ಉಚ್ಛಶಿಕ್ಷಣ ಸಂಸ್ಥೆಗಳಲ್ಲಿ ಕಲೆ, ಸಂಗೀತ, ಮತ್ತು ನೃತ್ಯ ವಿಭಾಗಗಳೂ ಗ್ರಂಥಾಲಯಗಳೂ ಸಂಸ್ಕøತಿ ಕಲೆಗಳ ಪ್ರಸಾರ ಮಾಡುತ್ತಿವೆ. 1956ರಲ್ಲಿ ಸಂಘಟಿಸಲಾದ ಸಾಂತ ಫೇ ಒಪೆರ ಯಶಸ್ವಿಯಾಗಿದೆ.

ಸ್ಥಳೀಯ ಇಂಡಿಯನರು ಸುಂದರವಾದ ಮಣ್ಣಿನ ಪಾತ್ರೆಗಳನ್ನು ಮಾಡುತ್ತಾರೆ. ಪ್ರತಿ ಗ್ರಾಮಕ್ಕೂ ಅದರ ನಿವಾಸಿಗಳ ಕೆಲಸವನ್ನು ಗುರುತಿಸುವ ವಿನ್ಯಾಸಗಳಿವೆ ನವಾಹೋ ಕಂಬಳಿಗಳು ಜಗತ್ಪ್ರಸಿದ್ಧವಾದವು. ಅನೇಕ ಇಂಡಿಯನರು ಗುಂಡಿ, ಮಣಿ, ಪಿನ್ನು, ಉಂಗುರ, ಹಾರ, ಕಿವಿಯುಂಗುರ ಮತ್ತು ನಡುಪಟ್ಟಿಗಳನ್ನು ಮಾಡಿ ಪ್ರವಾಸಿಗಳಿಗೆ ಮಾರಾಟ ಮಾಡುತ್ತಾರೆ.

ಇತಿಹಾಸ: ಬಿಳಿಯ ಪರಿಶೋಧಕರು ಇಲ್ಲಿಗೆ ಬರುವುದಕ್ಕೆ ಕನಿಷ್ಠ 10,000 ವರ್ಷಗಳಿಗೂ ಹಿಂದಿನಿಂದಲೇ ಇಲ್ಲಿ ಅನೇಕ ಇಂಡಿಯನ್ ಸಂಸ್ಕøತಿಗಳ ಜನರಿದ್ದರು. ಕೃಷಿ ಮತ್ತು ಬೇಟೆಗಳಿಂದ ಇವರು ಜೀವನ ನಡೆಸುತ್ತಿದ್ದರು. 15ನೆಯ ಶತಮಾನದಲ್ಲಿ ಉತ್ತರದಿಂದ ನಾವಾಜೋ ಮತ್ತು ಅಪ್ಯಾಚೆ ಅಲೆಮಾರಿಗಳು ಇಲ್ಲಿಗೆ ಬಂದರು. ಇಲ್ಲಿ ಏಳು ಸುವರ್ಣ ನಗರಗಳಿವೆಯೆಂಬುದಾಗಿ ಹೇಳಲಾಗಿತ್ತು. 1540ರಲ್ಲಿ ಇಲ್ಲಿಗೆ ಸ್ಟ್ಯಾನಿಷರು ಚಿನ್ನದ ಆಸೆಯಿಂದ ಬಂದರೂ ಇವರ ಆಸೆ ಫಲಿಸಲಿಲ್ಲ. ಇವರು ಮೆಕ್ಸಿಕೋಗೆ ಹಿಂದಿರುಗಿದರು. 1595ರಲ್ಲಿ ವಾನ್ ಡ ಅನೇಲ್ ಇಲ್ಲಿ ಮೊಟ್ಟ ಮೊದಲಿಗೆ ಬಿಳಿಯರ ವಸತಿ ಸ್ಥಾಪಿಸಿದ. ಸಾಂತ ಫೇ 1610ರಲ್ಲಿ ನಿರ್ಮಿತವಾಯಿತು. 17ನೆಯ ಶತಮಾನದಲ್ಲಿ ಪ್ಯೂಬ್ಲೋ ಇಂಡಿಯನರಲ್ಲಿ ಕ್ರೈಸ್ತಮತ ಪ್ರಚಾರ ಆರಂಭವಾಯಿತು, 1680ರಲ್ಲಿ ಇಂಡಿಯನರು ದಂಗೆಯೆದ್ದು ಸ್ಟ್ಯಾನಿಷರನ್ನು ಓಡಿಸಿದರು. ಆದರೆ 1690ರ ದಶಕದಲ್ಲಿ ಸ್ಟ್ಯಾನಿಷರು ಈ ಪ್ರದೇಶವನ್ನು ತಿರುಗಿ ಗೆದ್ದುಕೊಂಡರು. ಈ ಮಧ್ಯೆ ವಿವಿಧ ಜನಾಂಗಗಳ ನಡುವೆ ಆಗಾಗ್ಗೆ ಕಲಹಗಳೂ ಘರ್ಷಣೆಯಿಲ್ಲದಾಗ ವ್ಯಾಪಾರವೂ ನಡೆಯುತ್ತಲೇ ಇದ್ದುವು. ಹೊಸದಾಗಿ ಸ್ಥಾಪನೆಯಾದ ಮೆಕ್ಸಿಕೋ ಪ್ರಜಾಪ್ರಭುತ್ವದಲ್ಲಿ ನ್ಯೂ ಮೆಕ್ಸಿಕೋ ಸೇರಿತು (1821). 1846ರಲ್ಲಿ ಆರಂಭವಾದ ಮೆಕ್ಸಿಕನ್ ಯುದ್ಧದಲ್ಲಿ ಜನರಲ್ ಸ್ಟೀಫನ್ ಕರ್ನಿಯ ನೇತೃತ್ವದಲ್ಲಿ ಅಮೆರಿಕದ ಸೈನ್ಯ ನ್ಯೂ ಮೆಕ್ಸಿಕೋವನ್ನು ಗೆದ್ದುಕೊಂಡಿತು. 1850ರಲ್ಲಿ ನ್ಯೂ ಮೆಕ್ಸಿಕೋ ಪ್ರದೇಶವನ್ನು ರಚಿಸಲಾಯಿತು. 1851ರಲ್ಲಿ ಮೊದಲನೆಯ ಗವರ್ನರ್ ಅಧಿಕಾರವಹಿಸಿಕೊಂಡ. 1868ರಲ್ಲಿ ನಾವಾಜೊ ಬುಡಕಟ್ಟಿನ ಜನರನ್ನು ಹತ್ತಿಕ್ಕಿ ಅವರನ್ನು ಮೀಸಲು ಪ್ರದೇಶಕ್ಕೆ ಸಾಗಿಸಲಾಯಿತು. ಅಪ್ಯಾಚೆಗಳು 1886ರ ವರೆಗೂ ಹೋರಾಟ ನಡೆಸುತ್ತಲೇ ಇದ್ದರು. 1880ರಲ್ಲಿ ಈ ರಾಜ್ಯಕ್ಕೆ ರೈಲುಮಾರ್ಗಗಳು ವಿಸ್ತರಿಸಿದುವು. ಮುಂದಿನ ಕಾಲು ಶತಮಾನದಲ್ಲಿ ದನ ಮತ್ತು ಕುರಿ ಸಾಕಣೆ, ಕೈಗಾರಿಕೆಗಳು ಮತ್ತು ಗಣಿಗಾರಿಕೆ ಅಭಿವೃದ್ಧಿ ಹೊಂದಿದುವು. ನೀರಾವರಿ ವ್ಯವಸ್ಥೆಗಳನ್ನು ನಿರ್ಮಿಸಲಾಯಿತು. 1912ರ ಜನವರಿ 6 ರಂದು ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯವಾಯಿತು. (ಜಿ.ಕೆ.ಯು.)